ಹಕ್ಕಿ ಹಾರಿತು…….
ಚಿಕ್ಕ ಹಕ್ಕಿಯೊಂದು ಬಂದು
ಪಕ್ಕದಲ್ಲಿ ಕುಳಿತುಕೊಂಡು
ಬಿಕ್ಕು ನಿಲಿಸಿ ಸುಕ್ಕು ಮರೆಸಿ ನಕ್ಕು ನಗಿಸಿತು.
.
ಪುಕ್ಕ ಕಳೆದು ರೆಕ್ಕೆ ಬರಲು
ರೊಕ್ಕ ಮಿಕ್ಕು ಎಂದೆನಿಸಲು
ಕಕ್ಕುಲತೆಯ ತೆಕ್ಕೆ ತೊರೆದು ಹಕ್ಕಿ ಹಾರಿತು.
.
ಚಕ್ಕಡಿಯಲಿ ಸಾಗುತಿರಲು
ಘಕ್ಕನೇನೊ ಸಿಕ್ಕಿದಂತೆ
ಧಕ್ಕೆಯಾಗಿ ದಿಕ್ಕುತಪ್ಪಿ ಹಕ್ಕಿ ಹಾರಿತು.
.
ಸಿಕ್ಕಿದಿಷ್ಟು ಸಕ್ಕರೆಯಲಿ
ಗುಕ್ಕ ನೀಡೆ ಅಕ್ಕರೆಯಲಿ
ಠಕ್ಕು ಮಾಡಿ ಛಕ್ಕನೆಂದು ಹಕ್ಕಿ ಹಾರಿತು.
.
.
ತಿಕ್ಕಿ ತಿಕ್ಕಿ ತೊಳೆದುದೆಷ್ಟು
ತುಕ್ಕುತನವ ಕಳೆದುದೆಷ್ಟು
ದಕ್ಕಿದುದನು ಧಿಕ್ಕರಿಸಿ ಹಕ್ಕಿ ಹಾರಿತು.
.
ಢಕ್ಕೆಯಂತೆ ದುಕ್ಕ ಬಡಿಯೆ
ಹೊಕ್ಕು ಒಳಗೆ ಹೆಕ್ಕಿ ತೆಗೆದ
ತಕ್ಕನಾದ ಲೆಕ್ಕ ಮರೆತು ಹಕ್ಕಿ ಹಾರಿತು.
.
ಹಿಕ್ಕೆ ಬಳಿದ ಸಿಕ್ಕು ಕಳೆದ
ಉಕ್ಕಿ ಪ್ರೀತಿ ಇಕ್ಕಿ ಕರೆದ
ಹಕ್ಕು ತೊರೆದು ಸೊಕ್ಕಿನಿಂದ ಹಕ್ಕಿ ಹಾರಿತು.
…..
ಚಿಕ್ಕೆಯಾಗಿ ಚುಕ್ಕೆಯಾಗಿ ದೂರ ಹಾರಿತು.
– ಮೋಹಿನಿ ದಾಮ್ಲೆ (ಭಾವನಾ)
ಉತ್ತಮ ಪ್ರಾಸಬದ್ಧ ಕವನ…ಇಷ್ಟವಾಯಿತು.
ಹಕ್ಕಿಯ ಪದ ಚೊಕ್ಕದಾಗಿ ಮೂಡಿಬಂದಿದೆ…