ಅಂಕುಶ

Share Button

 

Nagesha MN

ಕೋಪವೆಂಬುದನರ್ಥ ಸಾಧನ ಎಂಬುದು ಬಲ್ಲವರ ಮಾತು. ಅದರ ತಾತ್ಪರ್ಯ, ವ್ಯಾಪ್ತಿ, ಸಾಧಕ-ಬಾಧಕಗಳು ಪಂಡಿತರಿಂದ ಪಾಮರರತನಕ ಎಲ್ಲರೂ ಬಲ್ಲಂತದ್ದೆ. ಆದರೆ ಆಳಿಂದ ಅರಸನತನಕ ಯಾರ ಪರಿಗಣನೆಯಳತೆಯಲ್ಲೆ ನೋಡಲಿ – ‘ಆಡುವುದು ಸುಲಭ ಆಚರಣೆ ಮಾಡುವುದು ಕಷ್ಟ’ ಎನ್ನುವುದಕ್ಕೊಂದು ಸಾಮಾನ್ಯ ಉದಾಹರಣೆ ಬೇಕೆಂದಿದ್ದರೆ ಅದು ಕೋಪದ ಹತೋಟಿ. ಕೋಪ ನಿಯಂತ್ರಣದ ಸಾಧ್ಯತೆಯ ಬಗ್ಗೆ ಎಲ್ಲರಿಗೂ ಅವರವರದೆ ಆದ ನಿಲುವು, ಮಾನದಂಡಗಳಿದ್ದರೂ, ಎಲ್ಲರೂ ಒಪ್ಪುವ ಒಂದು ಮಾತೆಂದರೆ ಅದರ ನಿಯಂತ್ರಣದ ಕಷ್ಟ ಸಾಧ್ಯತೆ.

ವಿಚಿತ್ರವೆಂದರೆ ಯಾರೂ ಕೋಪವನ್ನು ನಿಯಂತ್ರಿಸಬಾರದೆಂದು ಹೇಳುವುದಿಲ್ಲ, ಇಚ್ಚಿಸುವುದೂ ಇಲ್ಲ. ‘ ನನಗೆ ಕೋಪ ಬಂದರೆ, ಚೆನ್ನಾಗಿರುವುದಿಲ್ಲ ನೋಡು’ ಅಂತಲೊ, ‘ಕೋಪ ಬಂದರೆ ನಾನು ಮನುಷ್ಯನೆ ಅಲ್ಲಾ’ ಅಂತಲೊ, ‘ನನ್ನ ರೇಗಿಸಬೇಡ ಸುಮ್ಮನಿರು’ ಎಂದಾಗಿಯೊ ಎಚ್ಚರಿಕೆ ಕೊಡುತ್ತಲೆ ಇರುತ್ತಾರೆ – ಆಸ್ಪೋಟಕ್ಕೆ ಮುನ್ನದ ಮುನ್ನುಡಿಯೆಂಬಂತೆ. ವಾಸ್ತವದಲ್ಲಿ ಎಲ್ಲರೂ ಆ ಮಾತಾಡಿದರು, ಆಡಿದವರ ಕೋಪಾಸ್ಪೋಟದ ಮಿತಿ ಆ ಮಾತೆ, ಅಥವಾ ಅದಕ್ಕಿಂತ ಹೆಚ್ಚಿನದೆ ಎನ್ನುವುದರ ಅಂದಾಜಿಲ್ಲದ ಕಾರಣ ಅಲ್ಲಿಗೆ ನಿಲ್ಲಿಸದೆ ಸಹನೆಯ ಮಿತಿ ಇನ್ನು ಇದೆಯೇನೊ ಎನ್ನುವಂತೆ ಪರೀಕ್ಷಿಸಿ ನೋಡಲು ಮುಂದಾಗುವುದರಿಂದ, ನೂರಕ್ಕೆ ಎಂಭತ್ತು ಭಾಗ ಸ್ಪೋಟದಲ್ಲಿ ಪರ್ಯಾವಸಾನವಾಗುವುದೆ ಹೆಚ್ಚು.

anger

ಅದೇ ರೀತಿಯಲ್ಲಿ ಕೋಪದ ತಾಪ ಪ್ರತಾಪ ಮುಗಿದಾದ ಮೇಲೆ, ಆ ಕೋಪಗೊಂಡವರ ಸಿಟ್ಟೆಲ್ಲ ಆವಿಯಾಗಿ , ಧುಮುಗುಟ್ಟುವ ಖೇದ, ಬೇಸರ, ಚಡಪಡಿಕೆಗಳು ಮಾತ್ರ ಉಳಿದಾಗ – ‘ಯಾಕಾದರು ಸಿಟ್ಟಾದೆನೊ? ಯಾಕೆ ಎಗರಾಡಿದೆನೊ?’ ಎಂದು ತಮ್ಮನ್ನು ತಾವೆ ಶಪಿಸಿಕೊಳ್ಳುವವರು ಬಹುತೇಕ ಮಂದಿ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕೆಂದು ಚಡಪಡಿಸುತ್ತಲೆ ಶಪಥ ಮಾಡಿಕೊಳ್ಳುವುದು, ಅದರ ರೂಪುರೇಷೆಗಳನ್ನು ನಿರ್ಧರಿಸುವುದು, ‘ಕೋಪ ಬಂದಾಗ ಒಂದರಿಂದ ಹತ್ತರತನಕ ಎಣಿಸಬೇಕು’ ಎಂದಂದುಕೊಳ್ಳುವುದು – ಎಲ್ಲವೂ ನಡೆಯುತ್ತದೆ, ಮುಂದಿನ ಬಾರಿ ಕೋಪಗೊಂಡು ಮತ್ತೊಂದು ಆಸ್ಪೋಟನೆಯಲ್ಲಿ ಪರ್ಯಾವಸಾನವಾಗುವತನಕ. ಆ ನಂತರ ಯಥಾರೀತಿ ಅದೇ ಚಕ್ರದ ಪುನರಾವರ್ತನೆ. ಕೊನೆಗೆ ಜಯಿಸಲಾಗದ ಅದರ ಸಾಮರ್ಥ್ಯಕ್ಕೆ ತಲೆಬಾಗುತ್ತ ಆ ಹೊತ್ತಿನ ಸನ್ನಿವೇಶದಮಲಿನಲಿ ಆದಂತಾಗಲಿ ಎಂದು ಶರಣಾಗುವವರೆ ಎಲ್ಲ.

ಹಾಗೆ ಕೋಪಕ್ಕೆ ಅಂಕುಶವಿಡಬೇಕೆಂದು ಶತಗತಾಯ ಹೋರಾಡಿ ಕೊನೆಗೂ ಗೆಲ್ಲಲಾಗದೆ ಶರಣಾದವರು, ತಮ್ಮ ಹೋರಾಟ ಮತ್ತದರ ಸೋಲನ್ನು ಕವನವಾಗಿಸಿದ್ದರ ಒಂದು ಬಗೆ ನಮೂನೆ ಈ ಕೆಳಗಿನ ಕವಿತೆ 🙂

ಅಂಕುಶವಿಡಬೇಕೆಂದು
ಧುಮುಗುಟ್ಟಿದೆ ಗುಣುಗುಣುಗಿ
ಜುಮುಕಿಯ ಸದ್ದಾಗೆಂದರೆ
ರಣಹದ್ದಿನ ದನಿ ಬಿಡಿಸಿತ್ತ ||

ಹೋಗಲಿ ಹಾಳಾಗಲಿ
ಕಾಲ್ಗೆಜ್ಜೆಯ ಗಿಲಕಿಯಾಗಿರೆಯಾ?
ಶುರು ನೂಪುರದಂತೆ ಗಲಿಗಲಿರು
ಮುಗಿದಾಗ ತಾಂಡವ ತೇರು ! ||

ಬೇಡಿದೆ ದೈನ್ಯದೆ ಬೇಸತ್ತು
ಜಣಜಣ ಕಂಕಣದಾ ಬಳೆಯಾಗು;
ಗಾನ ಉಲಿದಿತ್ತೆ ಕನಲಿ ಒಡೆದಲ್ಲೆ
ಪುಡಿಯಾಗಿ ಚುಚ್ಚೊ ಸೊಕ್ಕಾಯ್ದು ||

ಮಲಗೆದೆಯ ಮೇಲಿನ ಹಾರ
ಕಾಸಿನ ಸರದ ವ್ಯವಹಾರ
ಮುಚ್ಚಿಯೂ ಒಳಗ ಫಳಫಳದೆ
ಸಂಯಮವ ನಟಿಸಲೂ ಬಿಡದೆ ||

ಬಚ್ಚಿಟ್ಟುಬಿಡಲುದರದೊಳಗೆ
ಕಟ್ಟಿ ಬಂಗಾರ ಡಾಬು ಕೆಳೆಗೆ
ಒಳಗನೊತ್ತೊತ್ತಿ ಕಕ್ಕಿಸಿತೊ ಕೊರಮ
ಕೋಪವನರ್ಥ ಸಾಧನ ಕೊರಗ ||

 

– ನಾಗೇಶ್, ಮೈಸೂರು

2 Responses

  1. Niharika says:

    ನಿಜ..ಕೋಪವೆಂಬುದನರ್ಥ ಸಾಧನ…ಬರಹ ಸೂಪರ್.

    • ನಿಹಾರಿಕಾರವರೆ, ಪ್ರತಿಕ್ರಿಯೆಗೆ ಧನ್ಯವಾದಗಳು

      ಕಷ್ಟ ಪಡದೆಯೂ ಸುಲಭದಲ್ಲಿ ಆಗಮಿಸಬಲ್ಲ ಕೆಲವೇ ಅನಿಷ್ಠ ಸಂಪತ್ತುಗಳಲ್ಲಿ ಈ ಹಾಳು ಕೋಪವೂ ಒಂದಂತೆ – ಅನರ್ಥ ಮಾಡಿಸಲೆಂದೆ ದಾಪುಗಾಲಿಕ್ಕಿ ಬರುವ ದಲ್ಲಾಳಿ !

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: