(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸಾಯಂಕಾಲ ಅವಳು ಕಾಲೇಜ್‌ನಿಂದ ಬಂದೊಡನೆ ಚಂದ್ರಾವತಿ ಕಾಫಿ, ಹುರಿಗಾಳು ಕೊಟ್ಟು ಹೇಳಿದರು.”ನಿಮ್ಮ ತಾಯಿ-ತಂದೆ ಇಬ್ಬರೂ ಫೋನ್ ಮಾಡಿ ಎಂಗೇಜ್ಮೆಂಟ್ ಗೆ ಕರೆದರು.”
“ಬೆಳಿಗ್ಗೆ ನನಗೂ ಫೋನ್ ಮಾಡಿದ್ದರು.”
“ನಿಮ್ಮ ನೀಲಾ ಆಂಟಿ ಫ್ಯಾಮಿಲಿ ಬರುತ್ತದಂತೆ.”
“ಹುಂ. ಅಮ್ಮ ಹೇಳಿದ್ರು.”
“ನಿನಗೆ ಅವರು ಬರುವುದು ಖುಷಿ ಇಲ್ಲವಾ?”
“ಅವರು ಒಳ್ಳೆಯವರು. ನಮ್ಮ ತಾಯಿ, ತಂದೆಯ ಬಗ್ಗೆ ತುಂಬಾ ಪ್ರೀತಿ ಗೌರವಗಳಿವೆ. ಅವರು ನಮಗೋಸ್ಕರ ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ. ನನಗದು ಬೇಸರ.”
“ನೀನು ನಿನಗೆ ಸಂಬಂಧವಿಲ್ಲದ ಹಾಗೆ ಇದ್ದುಬಿಡು.”
“ಅವರ ಪ್ರೀತಿ, ವಿಶ್ವಾಸ ನಾನು ಕಮಿಟ್ ಆಗುವ ಹಾಗೆ ಮಾಡುತ್ತದೆಯೇನೋ ಅನ್ನುವ ಭಯಕಾಡ್ತಿದೆ ಆಂಟಿ.”
“ಯಾಕೆ ನಿನ್ನ ನೀಲಾ ಆಂಟಿ ಮಗನಿಗೆ ಕೊಡಬೇಕೂಂತ ಇದ್ದಾರಾ?”
“ಡೈರೆಕ್ಟಾಗಿ ಅವರು ಏನೂ ಹೇಳಿಲ್ಲ. ಆದರೆ ಅವರು ಕೇಳಿದರೆ ಖಂಡಿತಾ ಬೇಡ ಅನ್ನಲ್ಲ.”
“ನೋಡು ಮದುವೆ ಅನ್ನುವುದು ಸ್ವರ್ಗದಲ್ಲಿ ಈಗಾಗಲೇ ಆಗಿರುತ್ತದೆ. ನಿನ್ನ ಹಣೆಯಲ್ಲಿ ಅವನ ಹೆಸರನ್ನು ಆ ಬ್ರಹ್ಮ ಬರೆದಿದ್ದರೆ ಯಾರೂ ಅದನ್ನು ತಪ್ಪಿಸಕ್ಕಾಗಲ್ಲ. ಅದು ಸರಿ ಭಾನುವಾರ ಯಾವ ಸೀರೆ ಉಡ್ತೀಯಾ?”
“ಯಾವುದೋ ಒಂದು ಉಟ್ಟರಾಯಿತು ಬಿಡಿ.”
“ಹಾಗಂದ್ರೆ ಹೇಗೆ? ನೀನು ಖುಷಿಯಾಗಿಲ್ಲದಿದ್ದರೆ ಜನ ತಪ್ಪು ಭಾವಿಸ್ತಾರೆ. ನನ್ನದೊಂದು ಮೆಂಥ್ಯಕಲರ್ ಹಸಿರು ಜರಿ ಬಾರ್ಡರ್ ಇರುವ ಮೈಸೂರು ಸಿಲ್ಕ್ ಇದೆ. ಬ್ಲೌಸ್ ಕೂಡ ಮ್ಯಾಚ್ ಆಗತ್ತೆ. ನಾನು ನಿನ್ನ ವಾರ್ಡ್ರೋಬ್ ಹುಡುಕಿ ಬ್ಲೌಸ್ ತೆಗೆದಿಟ್ಟಿದ್ದೇನೆ.”
“ಆಗಲಿ ಆಂಟಿ……ಅದನ್ನೇ ಉಡ್ತೀನಿ.”
“ಎಷ್ಟು ಹೊತ್ತಿಗೆ ಹೊರಡಬೇಕು ವರು?”
“ಅಲ್ಲಿಗೇ ತಿಂಡಿಗೆ ಬನ್ನಿ ಅಂದಿದ್ದಾರೆ. 61/2ಗೆ ಬಿಡೋಣ.”
“ಸರಿ. ಆರ್.ಜಿಗೆ ಫೋನ್ ಮಾಡಿ ಹೇಳ್ತೀನಿ.”
“ಆಗಲಿ ಫೋನ್ ಮಾಡಿ” ಎಂದಳು ವರು.
ಆರ್.ಜಿ. ಒಂದು ದೊಡ್ಡ ಬಟ್ಟೆ ಗಂಟು ಹೊತ್ತುಕೊಂಡು ಒಳಗೆ ಬಂದ.
“ಆಂಟಿ ಇದನ್ನು ಇಲ್ಲೇ ಇಡ್ತೀನಿ. ನಾಳೆ ಮರೆಯದೆ ಬೆಂಗಳೂರಿಗೆ ತೊಗೊಂಡು ಹೋಗಬೇಕು.”
“ಏನಿದು?”
“ಒಗೆಯುವ ಬಟ್ಟೆ.”
ವರು ಅದನ್ನು ಒಳಗಿಟ್ಟಳು.
“ಆರ್.ಜಿ. ಇಲ್ಲೇ ಊಟ ಮಾಡ್ತೀಯ ಅಲ್ವಾ?”
“ನೀವು ಹೇಳದಿದ್ರೂ ನಾನು ಊಟ ಮಾಡಿಕೊಂಡೇ ಹೋಗೋದು.”
ಚಂದ್ರಾವತಿ ತಮ್ಮನಿಗೆ ಚಪಾತಿ, ಪಲ್ಯ, ಮೊಸರನ್ನ ಕಳಿಸಲು ಹೇಳಿ ಮಲ್ಲಿಗೂ ಫೋನ್ ಮಾಡಿ “ಹತ್ತು ನಿಮಿಷ ಬಾ” ಎಂದರು.
ಊಟವಾದ ಮೇಲೆ ಮಲ್ಲಿ ಪಾತ್ರೆಗಳನ್ನು ತೊಳೆದಿಟ್ಟಳು. ಬಟ್ಟೆ ಗಂಟು ನೋಡಿ “ಏನಿದು?” ಎಂದು ಕೇಳಿದಳು. ಆರ್.ಜಿ. ಹೇಳಿದ. ಅವಳು ಜೋರಾಗಿ ನಕ್ಕಳು ಮಾತಾಡಲಿಲ್ಲ.
“ಆಂಟಿ ನಾನು ನಾಳೆ ಬೆಳಿಗ್ಗೆ ಆರು ಗಂಟೆಗೆ ರ‍್ತೀನಿ. ಸಿದ್ಧವಾಗಿರಿ. ಗುಡ್‌ನೈಟ್.”
ಗೇಟ್‌ವರೆಗೂ ಹೋದ ಚಂದ್ರಾವತಿ ಕೇಳಿದರು “ಯಾಕೆ ಒಂದು ತರಹ ಇದ್ದೀಯಾ?”
“ಯಾಕಿಲ್ಲ ಆಂಟಿ. ಬೆಂಗಳೂರು ಓಡಾಟ ಜಾಸ್ತಿಯಾಯಿತು. ಕೀರ್ತಿ ಬೆಂಗಳೂರಲ್ಲಿದ್ದಾನೆ. ಪ್ರತಿಯೊಂದಕ್ಕೂ ಬಾ ಅಂತಾನೆ ಹೋಗಲೇಬೇಕಾಯ್ತು.”
“ನಾಳೆ ಹೋಗಿ ಬಂದ ಮೇಲೆ ರೆಸ್ಟ್ ತೊಗೋ.”
ಮರುದಿನ ವಾರುಣಿ ಸ್ನಾನ ಮಾಡಿ ಚೂಡಿದಾರ್ ಹಾಕಿಕೊಂಡಳು.
“ಯಾಕೆ ವರು?”
“ಅಲ್ಲಿಗೆ ಹೋದ ಮೇಲೆ ಸೀರೆ ಉಡ್ತೀನಿ. ಈಗಲೇ ಉಡುವುದಕ್ಕೆ ಬೇಜಾರು.”
“ಸರಿ ಹಾಗೇ ಮಾಡು. ನಿನಗೆ ಓಡಾಡುವುದಿರುತ್ತದೆ.”
ಅವರು ಒಂಭತ್ತು ಗಂಟೆಗೆಲ್ಲಾ ಛತ್ರದಲ್ಲಿದ್ದರು. ಎದುರಿಗೆ ಸಿಕ್ಕವರಿಗೆ ‘ಹಾಯ್’ ಹೇಳಿ ಎಲ್ಲರೂ ಶರು ಇದ್ದ ರೂಮು ಪ್ರವೇಶಿಸಿದರು. ಶರು ರೆಡಿಯಾಗಿ ಗೆಳತಿಯರ ಜೊತೆ ಹರಟುತ್ತಾ ಕುಳಿತಿದ್ದಳು. ಕೈ ತುಂಬಾ ಬಳೆ, ಓಲೆ, ಝುಮುಕಿ, ಬೈತಲೆಬೊಟ್ಟು ಧರಿಸಿದ್ದ ಶರು ಮುದ್ದಾಗಿ ಕಾಣುತ್ತಿದ್ದಳು. ಮುಗಿಲುಬಣ್ಣದ ದೊಡ್ಡ ಜರಿಯಂಚಿದ್ದ ಕಾಂಜೀವರಂ ಸೀರೆ ಅವಳ ಅಂದ ಹೆಚ್ಚಿಸಿತ್ತು. ಕೊರಳಲ್ಲಿ ಒಂದೆಳೆಯ ಸರವಿತ್ತು.
“ಯಾಕೆ ಶರು ನೆಕ್ಲೇಸ್ ಹಾಕಿಕೊಂಡಿಲ್ಲ ಇರು” ಎನ್ನುತ್ತಾ ಚಂದ್ರಾವತಿ ತಮ್ಮ ಕೊರಳಲ್ಲಿದ್ದ ನಾಲ್ಕೆಳೆಯ ದೊಡ್ಡ ಪದಕವಿದ್ದ ಮುತ್ತಿನಹಾರ ತೆಗೆದರು.
“ಬೇಡ ಆಂಟಿ. ನಾನು ಹಾಕಿರುವುದೆಲ್ಲಾ ನನ್ನದೇ ಒಡವೆಗಳು. ಝುಮುಕಿ ಓಲೆ, ಜಾನಕಿ ಚಿಕ್ಕಮ್ಮ ಕೊಟ್ಟಿರೋದು, ಬಳೆ ನಾಗರಾಜ ಕೊಟ್ಟಿರೋದು, ಒಂದೆಳೆಯ ಸರ ದೇವಕಿ ಚಿಕ್ಕಮ್ಮ ಕೊಟ್ಟಿರೋದು. ನಾನು ಬೇರೆಯವರ ಒಡವೆ ಹಾಕಿಕೊಂಡರೆ ಕೀರ್ತಿಗೆ ಇಷ್ಟವಾಗಲ್ಲ.”
“ಆಂಟಿ ನೀವು ಸರ ಕೊಡಬೇಡಿ. ನಾನು ಕೀರ್ತಿನ್ನ ವಿಚಾರಿಸ್ತೇನೆ.”
“ಅಯ್ಯೋ ಕೀರ್ತಿ ಹತ್ತಿರ ಯಾಕೆ ಮಾತು?”
ಅವನು ಉತ್ತರ ಕೊಡದೆ ಹೊರನಡೆದ.
“ತುಂಬಾ ಮುದ್ದಾಗಿ ಕಾಣ್ತಿದ್ದೀಯ ಶರು. ನಮ್ಮ ದೃಷ್ಟೀನೇ ತಾಕುತ್ತದೆ” ಎಂದಳು ವರು.
“ನೋಡು ಇವರೆಲ್ಲಾ ಲಗ್ನಪತ್ರಿಕೆಗೋಸ್ಕರ ನೆನ್ನೇನೇ ಬಂದರು. ನೀನು ನೆಂಟರ ತರಹ ಇವತ್ತು ಬಂದಿದ್ದೀಯ.”
“ನೀನು ಅವಳ ತರಹ ಹೈಯರ್ ಸ್ಟಡೀಸ್ ಮಾಡಿದ್ದಿದ್ರೆ ನಿನಗೆ ಅವಳ ಕಷ್ಟ ಅರ್ಥವಾಗ್ತಿತ್ತು. ನಿಮ್ಮಮ್ಮ, ಅಪ್ಪ ಅಷ್ಟು ನಯವಾಗಿ ಮಾತಾಡ್ತಾರೆ. ನೀನು ಯಾಕೆ ಇಷ್ಟು ಒರಟು?” ರೇಖಾ ಸಿಡುಕಿದಳು. ಆ ವೇಳೆಗೆ ವರು ಗುಂಪು ಹೊರನಡೆದಿತ್ತು.
ಶಕುಂತಲಾ ಅವರನ್ನೆಲ್ಲಾ ತಿಂಡಿಗೆ ಕೂಡಿಸಿ ಹೇಳಿದರು. “ತಿಂಡಿ ತಿಂದು ರೆಡಿಯಾಗಿ ಬೀಗರು ಬರುವ ಹೊತ್ತಾಯಿತು.”
ಅವಳು ರೆಡಿಯಾಗಿ ಬರುವ ವೇಳೆಗೆ ಚಂದ್ರಾವತಿ ಆರ್.ಜಿ.ಗೆ ನೀಲಾ-ಶ್ರೀಪತಿ ಕುಟುಂಬವನ್ನು ರಾವ್ ಪರಿಚಯಿಸುತ್ತಾ ಇದ್ದರು. ಅನಕೇತ್ ಕೂಡ ಬಂದಿದ್ದ. ಎಲ್ಲರೂ ಶಕುಂತಲ ಅವರನ್ನು ಕೇಳುತ್ತಿದ್ದರು. “ವರು ಬಂದಿಲ್ವಾ?”
“ಬಂದಿದ್ದಾಳೆ.”
ಅಷ್ಟರಲ್ಲಿ ವರು ಜ್ಯೂಸ್ ತಂದಳು. ಅಂಜಲಿ ಅವಳನ್ನು ಬಲಗೈನಿಂದ ಬಳಸಿದಳು.
“ನೀನೇನಾ ವರು? ಇದೇನೇ ಹೀಗಾಗಿದ್ದೀಯಾ? ನಿನ್ನ ಆ್ಯಪಲ್ ಕೆನ್ನೆಗಳು ಏನಾದವು? ಈಗಲೂ ಜಗಳವಾಡ್ತಿಯೇನೆ?”
ಅವಳು ಅವನತ್ತ ನೋಡಿದಳು.
“ಓ ಸಾರಿ ನಾನು ಯಾರು ಗೊತ್ತಾಯ್ತಾ?”
“ಓ ನೀವು ಅನಿ ಅಣ್ಣ ಅಲ್ವಾ?”
“ಕರೆಕ್ಟ್. ಈಗಲೂ ಜಗಳವಾಡಿದಾಗ ಕಚ್ಚುತ್ತಿಯೇನೆ?”
“ನೀವು ಈಗಲೂ ‘ಅಮ್ಮಾ’ ಅಂತ ಅಳ್ತರ‍್ತೀರಾ?”
“ನಾನು ಅಳೋದಾ ನೆವರ್.”
“ಅಮ್ಮ ಆಗಾಗ್ಗೆ ಹೇಳ್ತಾನೆ ಇರ‍್ತಾರೆ. ಅಮ್ಮ ನನ್ನನ್ನು ಎತ್ತಿಕೊಂಡಿದ್ರೆ ‘ನಾನು ನಿನ್ನ ಮಗ ಅವಳನ್ನು ಇಳಿಸೂಂತ’ ಅಳ್ತಿದ್ರಂತೆ.”
“ಇದು ಸರಿ ಇಲ್ಲ ವರು. ಅನಿ ಅಣ್ಣ ಅಂತೀಯ? ಮರ್ಯಾದೆ ಯಾಕೆ ಬಾ-ಹೋಗು ಅನ್ನು.”
“ಓ.ಕೆ. ಗ್ರಾಂಟೆಡ್.”
“ಹಾಗಾದ್ರೆ ನನ್ನ ಜೊತೆ ಬಂದು ಶರೂಗೊಂದು ಸೀರೆ, ಅವಳ ಭಾವೀ ಪತಿಗೊಂದು ವಾಚ್ ಅರಿಸಿಕೊಡು.”
“ಅವರಿಗೆ ಈಗ್ಯಾಕೆ ಉಡುಗೊರೆ? ಮದುವೇಲಿ ಕೊಟ್ಟರಾಯ್ತು.”
“ನೀನು ಕಾರಣ ಗೀರಣ ಕೇಳಬೇಡ ಹೊರಡು.”
“ಬನ್ನಿ ನಾನೂ ಬರ‍್ತೀನಿ. ನಮ್ಮ ಕಾರ್‌ನಲ್ಲೇ ಹೋಗೋಣ” ಆರ್.ಜಿ. ಹೇಳಿದ.
ಮೂವರೂ ಹೊರಟರು. ಅನಿಕೇತ್ ಶರೂಗೆ ಒಂದು ಪ್ರಿಂಟೆಡ್ ಸಿಲ್ಕ್ ಸೀರೆ, ಕೀರ್ತಿಗೆ ವಾಚ್ ತೆಗೆದುಕೊಂಡ.”
“ನೀನೂ ಒಂದು ಸೀರೆ ಆರಿಸು.”
“ನಾನು ಕಾರಣವಿಲ್ಲದೆ ಸೀರೆ ತೆಗೆದುಕೊಳ್ಳಲ್ಲ.”
“ಕಾರಣ ಹೇಳ್ತೀನಿ ಸೀರೆ ತೊಗೋ.”
ಅವಳು ಸೀರೆ ತೆಗೆದುಕೊಂಡಳು. ಮೂವರೂ ಕಾರು ಹತ್ತಿದರು.
“ನಮ್ಮ ತಂದೆ-ತಾಯಿಗೆ ನಿನ್ನನ್ನು ಸೊಸೆ ಮಾಡಿಕೊಳ್ಳುವ ಮನಸ್ಸಿತ್ತು. ಈ ವಿಚಾರದಲ್ಲಿ ನಿಮ್ಮ ತಾಯಿ-ತಂದೆ ಏನು ಯೋಚನೆ ಮಾಡಿದ್ದರೋ ನನಗೆ ತಿಳಿಯದು. ನಾನು ಯಾವತ್ತೂ ನಿನ್ನ ಬಗ್ಗೆ ಆ ತರಹ ಕನಸು ಕಂಡಿರಲಿಲ್ಲ. ಆದರೆ ನಮ್ಮ ತಂದೆ-ತಾಯಿಗೆ ನಿನ್ನ ಬಗ್ಗೆ ತುಂಬಾ ಪ್ರೀತಿ. ‘ಬೇಡ’ ಅಂದ್ರೆ ಅವರಿಗೆ ಬೇಸರವಾಗುತ್ತದಲ್ಲಾ ಎಂಬ ಆತಂಕವಿತ್ತು. ಒಂದು ರೀತಿಯ ಗೊಂದಲದಲ್ಲಿದ್ದೆ…….”
“ಅಫ್‌ಕೋರ್ಸ್ ನಾನೂ ಅದೇ ಗೊಂದಲದಲ್ಲಿದ್ದೆ. ಆದ್ದರಿಂದಲೇ ನಾನು ನಿಮ್ಮನ್ನು ಭೇಟಿಮಾಡಲು ಅವಾಯ್ಡ್ ಮಾಡ್ತಿದ್ದೆ.”
“ನೀನು ‘ಅನಿ ಅಣ್ಣ’ ಅಂತ ಕರೆದು, ನನ್ನ ಗೊಂದಲಕ್ಕೆ ತೆರೆ ಎಳೆದೆ. ಥ್ಯಾಂಕ್‌ಯು ವರು.”
“ನನಗೂ ಇವತ್ತು ತುಂಬಾ ಖುಷಿಯಾಗಿದೆ.”
ಅವರು ಛತ್ರಕ್ಕೆ ಬಂದಾಗ ಕಾರ್ಯಕ್ರಮ ಇನ್ನೂ ನಡೆಯುತ್ತಿತ್ತು. ಶರು ಬೇರೆ ಸೀರೆ ಉಟ್ಟು ಮೈತುಂಬಾ ಒಡವೆ ಧರಿಸಿದ್ದಳು. ಅವರಿಬ್ಬರೂ ಹಸೆಮಣೆಯಲ್ಲೇ ಇದ್ದರು. ಆರ್.ಜಿ. ಅನಿಕೇತ್‌ನನ್ನು ಕರೆದುಕೊಂಡು ಅಣ್ಣನಿಗೆ ಪರಿಚಯಿಸಿದ. ಅನಿಕೇತ್ ಅವರಿಬ್ಬರಿಗೂ ಉಡುಗೊರೆ ಕೊಟ್ಟು ಹಿಂದಿರುಗಿದ. ಪಾರ್ವತಿ ಅತ್ತೆ, ಮಗಳು, ಮಗ, ಸೊಸೆ, ತಂಗಿಯ ಜೊತೆ ಮಾತನಾಡುತ್ತಾ ಕುಳಿತಿದ್ದರು. ಪಾರ್ವತಿ ಅತ್ತೆಯ ಮುಖ ದಪ್ಪಗಾಗಿತ್ತು. ನಗುತ್ತಾ ಎಲ್ಲರಿಗೂ ಜ್ಯೂಸ್ ತಂದ ವಾರುಣಿಯನ್ನು ಹತ್ತಿರ ಕರೆದು ಕೇಳಿದರು. “ನಿಮ್ಮ ನೀಲಾ ಆಂಟಿ ಮಗ ಏನಂತಾನೆ? ಏನು ತೆಗೆದುಕೊಟ್ಟ?”
“ಶರೂಗೆ ಕೀರ್ತಿಗೆ ಉಡುಗೊರೆ ತಂದುಕೊಟ್ಟರು ಅಷ್ಟೆ.”
“ನಿನ್ನ ಯಾವಾಗ ಮದುವೆ ಆಗ್ತಾನಂತೆ?”
“ಅವನು ಬಂದು ನಿಮ್ಮ ಹತ್ತಿರ ಬಂದು ವರೂನ್ನ ಮದುವೆ ಆಗ್ತೀನೀಂತ ಹೇಳಿದ್ದಾರಾ? ನಿಮಗೆ ನಾನು ಸಾವಿರ ಸಲ ಹೇಳಿದ್ದೀನಿ. ನನಗೆ ಜವಾಬ್ದಾರಿ ಇದೆ. ಈಗಲೇ ಮದುವೆಯಾಗಲ್ಲಾಂತ. ಯಾಕೆ ಹೀಗೆ ಎಲ್ಲರೆದುರಿಗೆ ಮಾತನಾಡಿ ನಮ್ಮ ಮರ್ಯಾದೆ ಕಳೆಯುತ್ತೀರಾ?”
“ನಾನು ಈಗ ಏನು ಅನ್ನಬಾರದ್ದು ಅಂದೆ?”
“ಅದನ್ನು ನಾನು ಹೇಳ್ತೀನಿ. ವರು ನೀವು ಹೋಗಿ” ರೇಖಾ ಹೇಳಿದಳು.
ನಾಗರಾಜ ತಾಯಿಯ ಬಳಿ ಬಂದು ಕುಳಿತು ಕೇಳಿದ. “ಯಾಕಮ್ಮ ವರೂನ್ನ ರೇಗಿಸ್ತೀಯಾ? ಅವಳ ಮದುವೆ ವಿಚಾರ ಯಾಕೆ ಮಾತಾಡ್ತೀಯ?”
“ಸುಮ್ಮನಿರೋ ನೀನು ನನಗೆ ಬುದ್ಧಿ ಹೇಳಬೇಡ. ನಟೂನ್ನ ಮದುವೆಯಾಗಕ್ಕೆ ಶರು ಸಿದ್ಧವಿದ್ದಳು. ಅದನ್ನು ವರು ತಪ್ಪಿಸಿದಳು. ಈಗ ಶರೂಗೆ ತಾನೇ ನೋಡಿದ ಹುಡುಗನ ಜೊತೆ ಮದುವೆ ಮಾಡಿಸಿದಳು. ನೀಲಾ ಆಂಟಿ ತುಂಬಾ ಶ್ರೀಮಂತಳು. ಅವಳ ಮಗನನ್ನು ಬುಟ್ಟಿಗೆ ಹಾಕ್ಕೊಂಡಿದ್ದಾಳೆ.”
“ಅತ್ತೆ, ನಾನು ಕೂಗಾಡುವ ರೀತಿ ಮಾಡಬೇಡಿ. ನಿಮ್ಮ ತಮ್ಮ ನಿಮಗೆ ಫೋನ್ ಮಾಡಿ ಸುಮಿಗೆ ಕೀರ್ತಿ ತಮ್ಮನನ್ನು ವಿಚಾರಿಸಲಾಂತ ಕೇಳಲಿಲ್ಲವಾ? ಸುಮಿ “ಬೇಡ ನನಗೆ ಸಿಟಿ ಹುಡುಗ ಬೇಕು” ಅಂದಳು. ನಿಮ್ಮ ಮಗಳಿಗೆ ಹೇಗೆ ಸ್ವಂತ ಅಭಿಪ್ರಾಯವಿದೆಯೋ, ಬೇರೆಯವರ ಮನೆಯ ಹೆಣ್ಣು ಮಕ್ಕಳಿಗೂ ಸ್ವಂತ ಅಭಿಪ್ರಾಯವಿರುತ್ತದೇಂತ ನಿಮಗೆ ಯಾಕೆ ಅನ್ನಿಸಲ್ಲ?”
“ಅಮ್ಮಾ ನೀನು ಹೆಚ್ಚಿಗೆ ಮಾತಾಡಬೇಡ ನನಗಿಷ್ಟವಾಗಲ್ಲ.”
ಪಾರ್ವತಿ ಅತ್ತೆ ಸುಮ್ಮನಾದರು.
ಆರ್.ಜಿ, ವರು, ಅನಿಕೇತ್, ರೇಖಾ, ಸುಮಿ ಬಡಿಸಲು ನಿಂತರು.
ಅಂಜಲಿ “ನಿಮ್ಮ ಜೊತೆಯೇ ನಾನು ಊಟಕ್ಕೆ ಕುಳಿತುಕೊಳ್ಳುವುದು” ಎಂದಳು.
ಎಲ್ಲರ ಊಟ ಮುಗಿಯಿತು. ವರು ಅಪ್ಪ-ಅಮ್ಮ ಬಡಿಸಲು ನಿಂತಿದ್ದ ತಂಡ ನೀಲಾ ಮನೆಯವರು ಒಂದು ರೂಮ್‌ನಲ್ಲಿ ಊಟಕ್ಕೆ ಕುಳಿತರು. ವರು ಚಂದ್ರಾವತಿ ಪಕ್ಕ ಕುಳಿತಿದ್ದಳು. ಶಾರದಾ ಊಟಮಾಡಿ ಮಲಗಿಬಿಟ್ಟಿದ್ದಳು. ಅವರ ಇನ್ನೊಂದು ಪಕ್ಕ ಆರ್.ಜಿ. ಕುಳಿತಿದ್ದ ಎದುರಿನ ಸಾಲಿನಲ್ಲಿ ಕುಳಿತಿದ್ದ ಅಂಜಲಿ ಹೇಳಿದಳು.
“ನೀನು ಏನೇ ಅನ್ನು ವರು, ನೀನು ನಮಗೆ ತುಂಬಾ ನಿರಾಸೆ ಉಂಟು ಮಾಡಿದೆ.”
“ನಾನೇನು ಮಾಡಿದೆ ಅಕ್ಕಾ?”
“ನೀನು ನನ್ನ ತಮ್ಮನ ಕೈ ಹಿಡಿತೀಯ ಅಂದ್ಕೊಂಡಿದ್ದೆ. ನೀನು ಬಾಯ್ತುಂಬಾ ‘ಅನಿ ಅಣ್ಣ ಅನಿ ಅಣ್ಣ’ ಅಂತ ಹೇಳಿ ನಮ್ಮೆಲ್ಲರ ಬಾಯಿ ಮುಚ್ಚಿಸಿಬಿಟ್ಟೆ.”
“ನಾನು ನಿಮ್ಮಷ್ಟು ಸ್ವಾರ್ಥಿ ಅಲ್ಲ. ಅದಕ್ಕೆ ಹಾಗೆ ಮಾಡಿದೆ.”
ಅವಳ ಉತ್ತರ ಕೇಳಿ ಎಲ್ಲರೂ ಒಂದು ಕ್ಷಣ ದಂಗಾದರು.
“ಈ ಹುಡುಗಿ ಯಾಕೆ ಹೀಗೆ ಹೇಳ್ತಿದ್ದಾಳೆ? ನೀಲಾ, ಅಂಜಲಿಗೆ ಬೇಜಾರಾಗಲ್ವಾ?” ಎಂದುಕೊAಡರು ಶಕುಂತಲಾ.
“ನಾನು ಸ್ವಾರ್ಥೀನಾ?”
“ಹೌದು ಮತ್ತೆ? ನಿಮ್ಮ ಫ್ಯಾಮಿಲಿ ರೆಕಾರ್ಡ್ ಅನಿಅಣ್ಣ ಯಾಕೆ ಬ್ರೇಕ್ ಮಾಡಬೇಕು? ನೀವು ಮಾತ್ರ ಲವ್ ಮಾಡಿ ಮದುವೆ ಮಾಡಿಕೊಂಡ್ರಿ. ನಿಮ್ಮ ತಮ್ಮನಿಗೆ ಅಂತಹ ಅವಕಾಶ ಕೊಡಲ್ವಾ?”
ಎಲ್ಲರೂ ಜೋರಾಗಿ ನಕ್ಕರು.
“ಹಾಗೇನಿಲ್ಲಮ್ಮ. ಅವನು ಯಾವುದೇ ಜಾತಿ ಹುಡುಗೀನ್ನ ಲವ್ ಮಾಡಲಿ. ನಾವೇ ನಿಂತು ಮದುವೆ ಮಾಡಿಕೊಳ್ತೇವೆ” ಎಂದರು ನೀಲಾ.
ಅನಿಕೇತ್ “ಥ್ಯಾಂಕ್ಸ್ ವರು” ಎಂದ.
ಎಲ್ಲರೂ ಛತ್ರ ಖಾಲಿ ಮಾಡಿದರು. ಮೈಸೂರಿಗೆ ಹೊರಟಿದ್ದ ವರು ಹತ್ತಿರ ಬಂದು ಅನಿಕೇತ್ ಕೇಳಿದ “ಒಂದು ನಿಮಿಷ ರ‍್ತೀಯಾ?”
“ಏನು ಅನಿ?”
“ನೋಡು ನನ್ನ ಹುಡುಗಿ ಫೋಟೋ ಹೆಸರು ನಂದಾ. ಮಂಗಳೂರು ಹುಡುಗಿ. ನನ್ನ ಕ್ಲಾಸ್‌ಮೇಟ್.”
“ಪ್ರಪೋಸ್ ಮಾಡಿದ್ದೀಯಾ?”
“ಇಲ್ಲ. ಅವಳಿಗೆ ನಾನೆಂದರೆ ಇಷ್ಟ. ನನಗೂ ಅವಳಿಷ್ಟ. ಈಗ ಮುಂದುವರೆಯುತ್ತೇನೆ.”
“ಆಲ್ ದ ಬೆಸ್ಟ್.”
ಅವರು ಮೈಸೂರು ತಲುಪಿದಾಗ ಒಂಭತ್ತು ಗಂಟೆಯಾಗಿತ್ತು. ಮಲ್ಲಿ ಬೀಗ ತೆಗೆದು ಲೈಟ್ ಹಾಕಿದ್ದಳು.
“ನಿಮ್ಮ ತಮ್ಮ ಖಾರಾಭಾತ್ ತಂದಿಟ್ಟಿದ್ದಾರೆ. ನಾನು ಹಾಲು ಕಾಯಿಸಿದ್ದೇನೆ.”
ಎಲ್ಲರೂ ತಿಂಡಿ ತಿಂದು ಹಾರ್ಲಿಕ್ಸ್ ಕುಡಿದರು.
“ಆಂಟಿ ನಾನು ಬರ‍್ತೀನಿ.”
ಅಷ್ಟರಲ್ಲಿ ಶಕುಂತಲಾ ಕಾಲ್ ಮಾಡಿದರು.
ಅವಳು ಗೇಟ್ ಬಳಿ ಇರುವುದನ್ನು ನೋಡಿ ಚಂದ್ರಾವತಿ ಆರ್.ಜಿ.ಯನ್ನು ಕೇಳಿದರು. “ನಿನ್ನ ಒಂದು ಪ್ರಶ್ನೆ ಕೇಳಲಾ?”
“ಕೇಳಿ.”
“ನೀನು ವರೂನ್ನ ಪ್ರೀತಿಸ್ತಿದ್ದೀಯಾ?”
“ಆಂಟಿ……..”
“ಉತ್ತರ ಹೇಳು.”
“ಹೌದು ಆಂಟಿ. ನನಗೆ ಅವರು ತುಂಬಾ ಇಷ್ಟ. ನಿಮಗೆ ಹೇಗೆ ತಿಳಿಯಿತು?”
“ಅವಳು ಅನಿಕೇತ್‌ನ ಮದುವೆಯಾಗ್ತಾಳೆ ಅನ್ನುವ ಯೋಚನೆ ನಿನ್ನನ್ನು ಕಾಡ್ತಿತ್ತು. ಅವಳು ‘ಅನಿಅಣ್ಣ’ ಅಂದ ತಕ್ಷಣ ನಿನ್ನ ಮುಖ ಹೂವಿನ ಹಾಗೆ ಅರಳಿತು. ನಿನ್ನ ಮುಖದಲ್ಲಿ ನಗು ಕಾಣಿಸಿತು.”
“ನಿಜ ನನಗೆ ಅವರು ಇಷ್ಟ. ಹೇಳಲು ಧೈರ್ಯವಿಲ್ಲ. ಅವರು ನನ್ನನ್ನು ಒಪ್ಪುತ್ತಾರೆ ಅನ್ನುವ ನಿರೀಕ್ಷೆಯಲ್ಲಿ ಬದುಕುವುದು ಒಳ್ಳೆಯದು. ಅವರಿಗೆ ಇರುವ ಜವಾಬ್ಧಾರಿಗಳು ನನಗೆ ಗೊತ್ತಿದೆ…….”
“ಆದರೂ……..”
“ಇಲ್ಲ ಆಂಟಿ. ನಾನು ಕೇಳಿ ಅವರು ಇಲ್ಲಾಂತ ಹೇಳಿಬಿಟ್ಟರೆ ಆ ಆಘಾತ ತಡೆಯುವ ಶಕ್ತಿ ನನಗಿಲ್ಲ.”
“ಖಂಡಿತಾ ಒಳ್ಳೆಯದಾಗತ್ತೆ. ತಾಳ್ಮೆ ಕಳೆದುಕೊಳ್ಳಬೇಡ.”
“ಥ್ಯಾಂಕ್ಸ್ ಆಂಟಿ.”
ಅಷ್ಟರಲ್ಲಿ ಒಳಗೆ ಬಂದ ವರು ಹೇಳಿದಳು.
“ಆರ್.ಜಿ.ಯವರೇ ಮಲ್ಲಿ ನಿಮ್ಮ ಬಟ್ಟೆಗಳನ್ನು ವಾಷ್ ಮಾಡಿ ಐರನ್ ಮಾಡಿಸಿಟ್ಟಿದ್ದಾಳೆ. ತೆಗೆದುಕೊಳ್ಳಿ.”
“ಹೌದಾ? ವಂಡರ್‌ಫುಲ್.”
“ಅಷ್ಟು ಆಶ್ಚರ್ಯಬೇಡ. ಇನ್ನು ಮೇಲೆ ನೀನು ನಿಮ್ಮ ಅಮ್ಮನಿಗೆ ತೊಂದರೆ ಕೊಡಬೇಡ” ಚಂದ್ರಾವತಿ ಹೇಳಿದರು.
“ಆಗಲಿ ಆಂಟಿ. ಗುಡ್‌ನೈಟ್” ಎಂದು ಹೇಳಿ ಆರ್.ಜಿ. ಹೊರಟ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44698
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

