ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 5
ಗೋವರ್ಧನೋದ್ಧಾರ
ವರ್ಷಾಧಿ ದೇವತೆ ದೇವೇಂದ್ರನ ಪ್ರೀತ್ಯರ್ಥ
ಗೋಪಾಲಕರೆಲ್ಲ ಪ್ರತಿ ಸಂವತ್ಸರದಿ
ಆಚರಿಪ ಮಹೋತ್ಸವದ ತಯಾರಿಯಲ್ಲಿರೆ
ಪರ್ಜನ್ಯ ದೇವತೆ ಕರುಣಿಸಿದ ಮಳೆಯ
ಕಾರಣದಿಂ ತಮ್ಮೆಲ್ಲ ಉದರ ನಿರ್ವಾಹವು ನಡೆದಿರೆ
ಕ್ರಮವಾಗಿ ನಡೆಯುತಿರ್ಪ ಉತ್ಸವದ ಬದಲಿಗೆ
ನಿಜಾರ್ಥದಲಿ ಸಮಸ್ತ ಜೀವಿಗಳ
ಉತ್ಪತ್ತಿ ಸ್ಥಿತಿ ಲಯಾದಿಗಳಿಗೆಲ್ಲ ಕಾರಣ ಕರ್ಮವಾದರೂ
ಎಲ್ಲವ ಯೋಚಿಸುವ ಪರಮಾತ್ಮನೂ
ಕರ್ಮಾನುಸಾರಿಯಾದುದರಿಂದ
ಇಂದ್ರನ ಬದಲಿಗೆ ವ್ಯಕ್ತಿಗೆ ಸಾಧನಗಳನ್ನೊದಗಿಸುವ
ವಸ್ತುವೇ ಪೂಜಾರ್ಹವು
ಗೊಲ್ಲರಿಗೆ ಪಶುಗಳೇ ಜೀವನವು
ಪಶುಗಳಿಗೆಲ್ಲ ಹುಲ್ಲು ನೀರುಗಳನ್ನಿತ್ತು
ಕಾಯುವುದು ಗೋವರ್ಧನ ಪರ್ವತವು
ಇಂದ್ರನ ಪೂಜೆಗೆ ಸಿದ್ಧವಾಗಿರ್ಪ ಪದಾರ್ಥಗಳೆಲ್ಲವ ಬ್ರಾಹ್ಮಣರಿಗೆ
ಮಂದೆಗಳನ್ನು ಕಾಯುವ ನಾಯಿ ಸೇವಕ ಚಂಡಾಲ ಸಮೂಹಕೆ
ಹೊಟ್ಟೆಭರ್ತಿ ಉಣಿಸಿ ಪರ್ವತವ ಸುತ್ತಿ ಪ್ರದಕ್ಷಿಣೆ ಮಾಡಿ
ನಮಸ್ಕರಿಸುವುದು ವಿಹಿತ ಎಂಬ
ಕೃಷ್ಣನ ಮಾತಿಗೊಪ್ಪಿ ಸಂಭ್ರಮಿಸದರು ಗೋಪಾಲಕರು
ತನಗೆ ಸಲ್ಲಬೇಕಾದ ಪೂಜೆಯ ಸಲ್ಲಿಸದ ಗೋಪಾಲಕರ ನಡೆಗೆ
ಕ್ಷುದ್ರನಾದ ದೇವೇಂದ್ರ ಪ್ರಳಯಕಾಲದಿ ಲೋಕನಾಶಕೆ
ನಿಯಮಿತವಾಗಿರ್ಪ ಮೇಘ ಸಮೂಹವ ಕರೆದು
ಗೋಕುಲದ ಮೇಲೆ ಮಹಾವೃಷ್ಠಿಯ
ಸುರಿಸಲಾಜ್ಞಾಪಿಸಿದನು
ಇಂದ್ರನಾಜ್ಞೆಯಂತೆ ಮಹಾವೇಗದಿ ಗುಡುಗು ಮಿಂಚು
ಸಿಡಿಲುಗಳಿಂದೊಡಗೂಡಿ ಮಹಾವೃಷ್ಟಿ ಸುರಿದು
ವ್ರಜಭೂಮಿಯನ್ನೆಲ್ಲ ಜಲಮಯವಾಗಿಸೆ
ಪ್ರಳಯ ಕಾಲದ ವರ್ಷದಲಿ ಸಾಯುತಿರ್ಪ
ಗೋಕುಲವಾಸಿಗಳ ರಕ್ಷಿಸಲು ಕೃಷ್ಣ
ತನ್ನ ಅಚಿಂತ್ಯ ಮಹಿಮೆಯಲಿ
ಗೋವರ್ಧನ ಪರ್ವತವ ಒಂದೇ ಬೆರಳಲಿ
ಬಾಲಕರು ಕೊಡೆಯ ಹಿಡಿದಂತೆ ಎತ್ತಿ ಹಿಡಿದು
ಎಲ್ಲರೂ ಅದರಡಿ ಸುರಕ್ಷಿತವಾಗಿರೆ
ಏಳು ದಿನಗಳ ಕಾಲ ಗೋವರ್ಧನ ಪರ್ವತವ
ಎತ್ತಿ ಹಿಡಿದ ಶ್ರೀಕೃಷ್ಣ ಮಹಿಮೆ
ಕಂಡ ದೇವೇಂದ್ರ ನಾಚಿಕೊಂಡು
ಮೇಘಗಳ ಹಿಂದಕೆ ಕರೆದು ಮಳೆ ನಿಲ್ಲಿಸೆ
ಕೃಷ್ಣ
ಲೀಲಾಜಾಲದಿ ಬೆಟ್ಟವ ಸ್ವಸ್ಥಾನದಲ್ಲಿರಿಸಿದ
ಅದ್ಭುತ ಮಹಿಮೆಯ ಕಂಡ ಗೋಪಾಲಕರೊಡನೆ
ಆಕಾಶದಲ್ಲಿರ್ಪ ದೇವ ಗಂಧರ್ವ ಸಿದ್ಧ ಚಾರಣಾದಿಗಳೂ
ಕೃಷ್ಣನ ಶಿರ ಮುಡಿಯ ಮೇಲೆ
ಪುಷ್ಪವರ್ಷವ ಸುರಿಸಿ ಆನಂದಿಸಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44712

-ಎಂ. ಆರ್. ಆನಂದ, ಮೈಸೂರು

