ಪುಸ್ತಕ-ನೋಟ

ಪುಸ್ತಕ :- ತಲ್ಲಣ ಮತ್ತು ಇತರ ಕಥೆಗಳು

Share Button

ಪುಸ್ತಕ :- ತಲ್ಲಣ ಮತ್ತು ಇತರ ಕಥೆಗಳು
ಲೇಖಕರು :- ಬಿ. ಆರ್. ನಾಗರತ್ನ
ಪ್ರಕಾಶಕರು :- ಜಾಗೃತಿ ಪ್ರಿಂಟರ್ಸ್
ಬೆಲೆ :- 200/-

“ತಲ್ಲಣ” ಈ ಕಥಾಸಂಕಲನದ ಪುಟ ತೆರೆಡೊಡನೆ ಮೊದಲು ಕಣ್ಣಿಗೆ ಬಿದ್ದದ್ದು “ಭಾವಚಿತ್ರದೊಡನೆ ಅರ್ಪಣೆ ಹೇಮಾಮಾಲಾ. ಬಿ ಅವರಿಗೆ” ಅನ್ನುವ ಸಾಲುಗಳು. ಆವಾಗಲೇ ಮನದಲ್ಲಿಒಂದು ಪುಳಕ. ಹೇಮಮಾಲಾ ಅವರು ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯ ಸಂಪಾದಕಿ. ಪತ್ರಿಕೆಗೆ ಬರಹಗಳನ್ನು ಆಹ್ವಾನಿಸುತ್ತಾ ಹಲವಾರು ಉದಯೋನ್ಮುಖ ಬರಹಗಾರರಿಗೆ ಬರೆಯಲು ಪ್ರೋತ್ಸಾಹ ಧೈರ್ಯ ತುಂಬಿದ, ತುಂಬುತ್ತಿರುವ ನಿಸ್ವಾರ್ಥ ಸಾಹಿತ್ಯ ಪ್ರೇಮಿ. ಬರಹಗಳಲ್ಲಿರುವ ತಪ್ಪುಗಳನ್ನು ನಯವಾಗಿ ತಿದ್ದಿ ಮಾರ್ಗದರ್ಶನ ನೀಡುವ ಇವರ ಪರಿ ಬಹಳ ಅನುರೂಪವಾದದ್ದು. ಲೇಖಕಿ ನಾಗರತ್ನಅವರು ತಮ್ಮ ಕಥೆಗಳನ್ನು ಸರಿಯಾದ ವ್ಯಕ್ತಿಗೆಯೇ ಅರ್ಪಿಸಿದ್ದಾರೆ.

ಮುಂದೆ ಕಥೆಗಳ ಕುರಿತು ಹೇಮಮಾಲಾ ಅವರು ಬಹಳ ಸೊಗಸಾದ ಮುನ್ನುಡಿಯನ್ನೇ ಬರೆದಿದ್ದಾರೆ. ಶ್ರೀಮತಿ ಬಿ. ಆರ್ ನಾಗರತ್ನ ಅವರ ಪರಿಚಯವೂ ನಮಗಿಲ್ಲಿ ಕಾಣಸಿಗುತ್ತದೆ. ನಾಗರತ್ನ ಅವರು ಎಂತಹ ಅದ್ಭುತ ಬರಹಗಾರ್ತಿ, ಎಷ್ಟು ಲೇಖನ, ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ, ಇವರಿಗೆ ಎಷ್ಟು ಪ್ರಶಸ್ತಿಗಳು ಲಭಿಸಿವೆ ಅನ್ನುವುದರ ಚಿತ್ರಣವೂ ಇಲ್ಲಿ ಸಿಗುತ್ತದೆ. ಇದನ್ನೆಲ್ಲಾ ನೋಡುವಾಗ ಇಷ್ಟೆಲ್ಲಾ ಅದ್ಭುತವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗಿಕೊಂಡಿರುವ ನಾಗರತ್ನ ಅವರು ಎಲ್ಲೋ ಒಂದು ಕಡೆ ಸ್ವಲ್ಪ ತೆರೆಮರೆಯಲ್ಲೇ ಉಳಿದುಬಿಟ್ಟರು ಅನ್ನುವ ವಿಚಾರವೂ ಗೋಚರವಾಗುತ್ತದೆ. ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ ಇವರ ಬರಹಗಳು ಬರಲು ಪ್ರಾರಂಭ ಆದಾಗಿನಿಂದ ಇವರ ಪರಿಚಯ ಆಗುತ್ತಿದೆ, ಜನ ಗುರುತಿಸುತ್ತಿದ್ದಾರೆ ಅನ್ನುವುದು ನನ್ನ ಅನಿಸಿಕೆ. ನನಗೂ ಇವರ ಪರಿಚಯ ಆದದ್ದು ‘ಸುರಹೊನ್ನೆ’ಯ ಮೂಲಕವೇ.

ಜಗತ್ತು ಮುಖವಾಡಗಳ ಸಂತೆ. ಇಲ್ಲಿ ಅಸಲಿ ಮುಖಗಳು ಬೆಳಕಿಗೆ ಬರುವ ಮೊದಲೇ ಅದೆಷ್ಟೋ ಅನಾಹುತಗಳು ಸಂಭವಿಸಿರುತ್ತದೆ. ಇಂತಹ ಅವಘಡಗಳು ಸಂಭವಿಸುವುದು ಬಾಳಸಂಗಾತಿಯ ಆಯ್ಕೆಯ ಪ್ರಕ್ರಿಯೆಯಲ್ಲಿ ಹೆಚ್ಚು. ಇಲ್ಲಿ ಪರಸ್ಪರರ ನಿಜವಾದ ಗುಣವನ್ನು ಅರಿಯುವುದು ಬಹಳ ಕಷ್ಟ. ಒಂದು ಹಂತದವರೆಗೆ ಇಲ್ಲಿ ಒಳ್ಳೆಯತನದ ನಾಟಕವೇ ನಡೆಯುತ್ತಿರುತ್ತದೆ. ಮದುವೆ ಎಂಬ ಬಂಧ. ಬೆಸೆದು ಮೂರು ಗಂಟು ಬಿಗಿದ ಮೇಲೆ, ಹೊಸ ಬಾಳ ಹೊಸ್ತಿಲಲ್ಲಿ, ಸ್ವಲ್ಪ ದೂರ ಕ್ರಮಿಸಿದ ಮೇಲೆ ಇಲ್ಲಿ ನಿಜವಾದ ನಡತೆ, ಮುಖವಾಡಗಳ ಅನಾವರಣ ಶುರು. ಎಲ್ಲರ ಬದುಕಲ್ಲು ಹೀಗಿರುತ್ತದೆ ಅಂತ ಅಲ್ಲ. ಆದರೆ ಜಗತ್ತಿನ ಹೆಚ್ಚಿನ ಮದುವೆಗಳು ಮುರಿದು ಬೀಳುತ್ತಿರುವುದೇ ಇಂತಹ ನಡತೆ, ಪರಿಸ್ಥಿತಿಯಿಂದಾಗಿ. ಇಲ್ಲಿ ಕಥಾನಾಯಕಿ ತಾನು ಮದುವೆಯಾಗಲಿರುವ ಹುಡುಗನ ಅಸಲಿ ಬಣ್ಣ ಬಯಲಾಗ
ತೊಡಗಿದಾಗ ಮೊದಲೇ ಎಚ್ಚೆತ್ತು ತೆಗೆದುಕೊಳ್ಳುವ ದೃಢ ನಿರ್ಧಾರ ಶ್ಲಾಘನೀಯ ಹಾಗೂ ನಿಜ ಬದುಕಿಗೆ ಮಾದರಿ. ಇಷ್ಟಪಟ್ಟವನ ಕೆಟ್ಟ ನಡತೆಗಳನ್ನೆಲ್ಲ ಬೆಂಬಲಿಸದೆ ಸಮಯಕ್ಕೆ ಸರಿಯಾದ ಗಟ್ಟಿ, ಪಕ್ಕ ನಿರ್ಧಾರ ತೆಗೆದುಕೊಳ್ಳುವ ಹೆಣ್ಣೊಬ್ಬಳ ಕಥೆ- ‘ಆಪತ್ತಿಗೆ ಒದಗಿ ಬಂದ ನೆಂಟ’. ಇಲ್ಲಿ ನೆಂಟ ಎಂದರೆ ಹಿಂದೊಮ್ಮೆ ಎಲ್ಲರನ್ನು ಅಲುಗಾಡಿಸಿದ ಕರೋನ ಮಹಾಮಾರಿ. ಆ ಪರಿಸ್ಥಿತಿ ಇಲ್ಲಿ ನಾಯಕಿಯ ಬದುಕನ್ನು ಹೇಗೆ ಬದಲಾಯಿಸುತ್ತದೆ, ಕಾಪಾಡುತ್ತದೆ ಅನ್ನುವುದನ್ನು ಲೇಖಕಿ ಸೊಗಸಾಗಿ ಕಥೆಯಾಗಿ ಹೆಣೆದಿದ್ದಾರೆ.

“ಪರಕಾಯ”- ಏನೂ ತೊಂದರೆ ಇಲ್ಲದಿದ್ದರೂ ಮಾನಸಿಕ ವ್ಯಾಧಿಗೆ ಒಳಪಟ್ಟವರಂತೆ ನಟಿಸುವ, ಮನೆಯವರನ್ನೆಲ್ಲಾ ಗೋಳು ಹೊಯ್ಸುವ ಹೆಣ್ಣೊಬ್ಬಳ ಕಥೆ. ಮನಸೆಂಬುದು ಬಹಳ ಸೂಕ್ಷ್ಮ. ಈ ವಿಶಾಲ
ಜಗತ್ತಿನಲ್ಲಿ ಅದರ ಆರೋಗ್ಯ ಹದಗೆಡಲು ಸಿಗುವ ಕಾರಣಗಳು ಹಲವಾರು. ಬಹಳ ಮಂದಿ ಈ ಸಮಸ್ಯೆಗೆ ವಾಮಾಚಾರ, ಭೂತ ಪ್ರೇತ ಓಡಿಸುವ ಮಂತ್ರವಾದಿಗಳಂತಹ ಅಡ್ಡ ದಾರಿಯ ಪರಿಹಾರಗಳತ್ತ ಮುಖ ಮಾಡುತ್ತಾರೆ. ಇಂತಹ ಮಾನಸಿಕ ಸಮಸ್ಯೆಗೆ ಬೇಕಾಗಿರುವುದು ಸಾಂತ್ವನ ಹೇಳುವ, ಸಮಸ್ಯೆಯನ್ನು ಆಲಿಸುವ, ಸತ್ಯವನ್ನು ನಯವಾಗಿ ತಿಳಿ ಹೇಳುವ ಮನೋವೈದ್ಯರ ಮೂಲಕ ಚಿಕಿತ್ಸೆ. ಮನೋ ರೋಗಿಯಂತೆ ನಟಿಸುವ ಹೆಣ್ಣೊಬ್ಬಳ ಸಮಸ್ಯೆಯನ್ನು ಅವರ ಮನೆಯವರು ಹೇಗೆ ಸರಿಪಡಿಸಿದರು ಎನ್ನುವ ಕಥೆ.

” ಬದುಕಿನ ನೆಲೆ”- ಬದುಕಿನ ಮೈದಾನದಲ್ಲಿ ಸಂಪಾದನೆ, ಹೊಟ್ಟೆ ಪಾಡು ಎಂಬ ಕುದುರೆಯ ಹಿಂದಿನ ನಿರಂತರ ಓಟದಲ್ಲಿ ಮನುಷ್ಯನಿಗೆ ಬೇರೆ ಯಾವುದರೆಡೆಗೂ ಗಮನವಿರುವುದಿಲ್ಲ. ಹೆತ್ತವರು ಈ ಹಂತದಲ್ಲೇ ತಮ್ಮ ಮಕ್ಕಳನ್ನು, ಅವರ ಬೆಳವಣಿಗೆಯನ್ನು ನಿರ್ಲಕ್ಷಿಸುವುದು. ಪರಿಣಾಮ ಮಾದಕ ವ್ಯಸನ ದಂತಹ ದುರಂತದಲ್ಲಿ ಕೊನೆಗೊಳ್ಳುವ ಅವರ ಬದುಕು. ಒಂದು ಸಂಸಾರದಲ್ಲಿ ಗಂಡ -ಹೆಂಡತಿ ಇಬ್ಬರೂ ದುಡಿಯುವವರೇ ಆದಾಗ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ ಅನ್ನುವ ಚಿತ್ರಣವಿದೆ ಈ ಕಥೆಯಲ್ಲಿ. ಜೊತೆಗೆ ಹೆತ್ತವರಲ್ಲಿ ಇಬ್ಬರಲ್ಲಿ ಒಬ್ಬರು ಸ್ವಲ್ಪಮಟ್ಟಿಗೆ ತ್ಯಾಗ ಮಾಡಿ ಹೇಗೆ ಸುಂದರ ಬದುಕನ್ನು ರೂಪಿಸಬಹುದು ಅನ್ನುವ ಅದ್ಭುತ ಸಂದೇಶವಿದೆ.

“ಹೊಂಗಿರಣ”- ಸುಖಮಯವಾಗಿ ಸಾಗುತ್ತಿರುವ ಬದುಕಿನಲ್ಲಿ ಕೆಲವೊಮ್ಮೆ ಕಷ್ಟಗಳ ಕಾರ್ಮೋಡ ಕವಿದು ಕತ್ತಲಾಗುವುದು ವಿಧಿ ಲಿಖಿತ ನಿಯಮ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಬಾರಿ ಎಲ್ಲಾ ದಾರಿಗಳು ಮುಚ್ಚಿ ಖಿನ್ನತೆಯತ್ತ ಮನಸು ಜಾರುವುದು ಸಹಜ. ಆದರೆ ಇಂತಹ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಎಲ್ಲವನ್ನು ಎದುರಿಸುತ್ತಾ ಸಾಗಿದಾಗ ಒಂದು ಬೆಳಕಿನ ಎಳೆ ಕಂಡೆ ಕಾಣುತ್ತದೆ. ನಮ್ಮ ತಪ್ಪಿಲ್ಲದಿದ್ದರೂ ಹಣೆಬರಹವೆಂಬ ವಿಧಿ ಲಿಖಿತ ನಿಯಮದ ಮುಂದೆ ಎಲ್ಲರೂ ಶರಣಾಗಲೇಬೇಕು. ಇಂಥ ಹೋದೆ ಸೋತು ಗೆದ್ದವರ ಒಂದು ಸುಂದರ ಕಥೆ ಹೊಂಗಿರಣ.

“ಬೇಡದ ಆಪತ್ತು”- ಈ ಕಥೆಯ ಆರಂಭದಲ್ಲಿ ಮೊಮ್ಮಗಳು ಕಾಲೇಜಿನಿಂದ ಬರುತ್ತಲೇ ತನ್ನ ಅಜ್ಜಿಯನ್ನು ಕೂಗುತ್ತಾ ಬರುವ ದೃಶ್ಯ ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಕಾಣಸಿಗುವಂತದ್ದು. ಹಿರಿಯರನ್ನು ದೂರ ಮಾಡಿಕೊಂಡು ಕುಟುಂಬವನ್ನು ಗಂಡ ಮಕ್ಕಳೆನ್ನುವ ಸೀಮಿತ ರೇಖೆಯೊಳಗೆ ಇಡುತ್ತಿರುವ ಕಾಲದಲ್ಲೂ ಹಿರಿಜೀವಗಳು ಜೊತೆ ಇರುವ ಕುಟುಂಬಗಳು ಇವೆ. ತಮ್ಮ ಅನುಭವಗಳ ಬಲದಿಂದ ಮನೆಯಲ್ಲಿ ಬೆಳೆಯುತ್ತಿರುವ ಮುಗ್ಧ ಮನಸ್ಸುಗಳನ್ನು ತಿದ್ದಿ, ಸರಿದಾರಿ ತೋರಲು ಪ್ರತಿ ಕುಟುಂಬದಲ್ಲೂ ಇಂತಹ ಹಿರಿಯರಿರಬೇಕು. ಬೆಳೆಯುವ ಮಕ್ಕಳಿಗೆ ಇವರಿಂದ ಸಿಗುವ ಮಾರ್ಗದರ್ಶನಕ್ಕಿಂತ ಮಿಗಿಲಾದದ್ದು ಬೇರೆಲ್ಲಿಂದದಲೂ ಸಿಗಲಾರದು. ಒಂದು ತಪ್ಪು ತಿಳುವಳಿಕೆ ಹೇಗೆ ಬದುಕು ಪೂರ್ತಿ ಪಾಠವಾಗಿ ಉಳಿದು ನಮ್ಮ ಮುಂದಿನ ಪೀಳಿಗೆಗೂ ಮತ್ತೆ ಅಂತಹ ತಪ್ಪು ಪುನರಾವರ್ತನೆ ಆಗದ ಹಾಗೆ ಪಾಠವಾಗುತ್ತದೆ ಅನ್ನುವ ಸುಂದರ ಸಂದೇಶವು ಈ ಕಥೆಯಲ್ಲಿ ಕಾಣಿಸುತ್ತದೆ.

“ಕರುಳಿನ ಕುಡಿ”- ಅಮ್ಮ ಯಾವತ್ತೂ ತ್ಯಾಗದ ಪ್ರತೀಕ. ತಾನು ಹೆತ್ತ ಕರುಳ ಬಳ್ಳಿಗೋಸ್ಕರ ಜೀವ, ಜೀವನದ ಜೊತೆಗೆ ತನ್ನ ಸ್ವಂತ ಸುಖವನ್ನು ಮುಡುಪಾಗಿ ಇಡುವವಳು. ಅವಳು ಮಗುವನ್ನು ಬೆಳೆಸುವ ಪ್ರಕ್ರಿಯೆಯಲ್ಲಿ ಒಂಟಿಯಾಗಿ ಇದ್ದರಂತೂ ಎಲ್ಲಿಲ್ಲದ ಧೈರ್ಯವನ್ನು ಒಗ್ಗೂಡಿಸಿಕೊಂಡು ತನ್ನ ಮಗುವಿನ ರಕ್ಷಣೆಗೆ ನಿಂತು ಬಿಡುತ್ತಾಳೆ. ಮಗು ನ್ಯೂನ್ಯತೆಗಳನ್ನು ಹೊಂದಿದ್ದರು ಕೂಡ ಆಶಾಭಾವ ಹೊತ್ತು ಅದರ ಸೇವೆಗೆ ಟೊಂಕ ಕಟ್ಟಿ ನಿಲ್ಲುತ್ತಾಳೆ. ಅದಕ್ಕಾಗಿಯೇ ಅಮ್ಮನನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುವುದು. ಇದಕ್ಕೆ ಹೊರತಾಗಿಯೂ ಕೆಲವು ತಾಯಂದಿರು ಇರುತ್ತಾರೆ. ಹೆತ್ತ ಮಕ್ಕಳು ಸರಿಯಾದ ಸಾಮರ್ಥ್ಯ ಹೊಂದಿರದೆ ಇದ್ದಲ್ಲಿ, ನ್ಯೂನ್ಯತೆಗಳಿದ್ದಲ್ಲಿ ಅಂತಹ ಮಕ್ಕಳನ್ನು ಬೀದಿಪಾಲು ಮಾಡುವ ಹೆತ್ತವರು ಇದ್ದಾರೆ. ಇವೆಲ್ಲವನ್ನ ಉಲ್ಲೇಖಿಸಿ ಹೆಣೆಯಲ್ಪಟ್ಟ ಕಥೆ. ಬದುಕಿನ ವಾಸ್ತವದ ಪ್ರತಿಬಿಂಬ.

“ತಲ್ಲಣ”- ಬದುಕಿನಲ್ಲಿ ಬಂದು ಅಪ್ಪಳಿಸುವ ಆಘಾತ, ಕಷ್ಟ, ನೋವಿನ ಅಲೆಗಳು ನೂರಾರು. ಈ ಹೊಡೆತಗಳು ಮಾಡುವ ಗಾಯ ಬಹಳ ಆಳ. ಸರಿಯಾದ ಸಮಯಕ್ಕೆ ಸರಿಯಾದ ಸಾಂತ್ವನದ ಚಿಕಿತ್ಸೆ, ಮದ್ದು ಅಥವಾ ಸಂದರ್ಭಕ್ಕನುಗುಣವಾಗಿ ತೆಗೆದುಕೊಳ್ಳುವ ನಿರ್ಧಾರ, ಪರಿಹಾರಗಳು ಈ ನೋವನ್ನು ದೂರ ಮಾಡಿ ಬದುಕನ್ನು ಸಹನೀಯವಾಗಿಸುತ್ತವೆ. ನೋವಲ್ಲಿ ಕಳೆದುಹೋಗದೆ, ಸೂಕ್ತ ಪರಿಹಾರ ಹುಡುಕಿ ಬಾಳನ್ನು ಬಾಳಲು ಪಣತೊಡುವ ದಂಪತಿಗಳಿಬ್ಬರ ಕಥೆ -ತಲ್ಲಣ.

“ಬೇಗುದಿ”- ಬೆಳೆಯುವ ಪುಟ್ಟ ಮಕ್ಕಳ ಮನಸ್ಸು ಬಹಳ ಮುಗ್ಧ. ಆ ಮನಸ್ಸುಗಳು ಅರಳುವ ಹೂವುಗಳಂತೆ ಸೂಕ್ಷ್ಮ. ಆ ಮನಸ್ಸಿಗೆ ಹೇಗೆ ಆಘಾತವಾದರೂ ಅದು ಛಿದ್ರವಾಗುತ್ತದೆ. ಬೆಳೆಯುವ ಈ ಹಂತದಲ್ಲಿ ಪ್ರೀತಿ, ಕಾಳಜಿ, ಹೆಜ್ಜೆ ಹೆಜ್ಜೆಗೂ ಅವರ ಮೇಲೆ, ಅವರ ನಡತೆಯ ಮೇಲೆ ಗಮನ ಇರಬೇಕಾದದ್ದು ಬಹಳ ಮುಖ್ಯ. ಕೆಲವೊಂದು ಪರಿಸ್ಥಿತಿಗಳು ಹೇಗೆ ಬರುತ್ತವೆ ಎಂದರೆ ಈ ಪುಟಾಣಿ ಮನಸ್ಸುಗಳು ಹಂತ ಹಂತವಾಗಿ ಒಡೆದು ಚೂರಾಗುತ್ತಾ ಸಾಗುವುದು ದೊಡ್ಡವರ ಗಮನಕ್ಕೆ ಬರುವುದೇ ಇಲ್ಲ. ಕಾರಣ ದೊಡ್ಡವರು ತಮ್ಮ ತಮ್ಮ ಜವಾಬ್ದಾರಿಗಳಲ್ಲಿ ವ್ಯಸ್ತರಾಗಿರುವುದು. ಜವಾಬ್ದಾರಿಗಳ ಜೊತೆಗೆ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಕಡೆಗೂ ಗಮನ ಕೊಡದಿದ್ದಲ್ಲಿ ಮುಂದೆ ಆ ಮುಗ್ಧತನವನ್ನು ಕಳೆದುಕೊಂಡು ಮಕ್ಕಳ ನಡತೆ ಬದಲಾಗಿ ಅದನ್ನೇ ಅಭ್ಯಾಸ ಮಾಡಿಕೊಂಡಾಗ ಪಶ್ಚಾತಾಪ ಪಡುವ ಸರದಿ ಹೆತ್ತವರದ್ದಾಗುತ್ತದೆ. ಹಾಗಾಗಿ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಅವರ ಮೇಲೆ ಪೂರ್ತಿ ಗಮನ ಇರಬೇಕು. ಇಲ್ಲದಿದ್ದಲ್ಲಿ ದುಷ್ಪರಿಣಾಮಗಳನ್ನು ಎದುರಿಸಲು ಸಿದ್ದರಾಗಬೇಕು ಅನ್ನುವುದನ್ನು ಸಾರುವ ಕಥೆ. ಬೆಳೆಯುವ ಹಂತದಲ್ಲಿ ಪುಟಾಣಿ ಮಕ್ಕಳ ಮೇಲೆ ಗಮನ ಇಲ್ಲದೆ ಇರುವುದು ಇವತ್ತಿನ ಬಹಳಷ್ಟು ಕುಟುಂಬಗಳಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯ. ಪರಿಣಾಮ ಆ ಚೂರಾಗುವ ಮನಸ್ಸುಗಳು. ಮೊದಲೇ ಎಚ್ಚೆತ್ತುಕೊಂಡಲ್ಲಿ ಉತ್ತಮ ರತ್ನಗಳನ್ನೇ ನಾವು ರೂಪಿಸಬಹುದು.

“ಕೂರ್ಮ”- ಮಾನಸಿಕ ಖಿನ್ನತೆ ಎಷ್ಟು ಗಾಡವಾಗಿರುತ್ತದೆ ಎಂದರೆ ಅದು ಬದುಕಿನ ಪಯಣವನ್ನೇ ಅರ್ಧದಲ್ಲೇ ಮುಗಿಸಿಕೊಳ್ಳುವ ದುರಂತವನ್ನು ಸೃಷ್ಟಿಸುವಷ್ಟು. ಕುಟುಂಬದಲ್ಲಿ ನಡೆಯುವ ಆತ್ಮಹತ್ಯೆಯಂತಹ ಅವಘಡಗಳು ಆ ಮನೆಯ ಉಳಿದ ಸದಸ್ಯರ ಮೇಲು ಭಯಾನಕ ದುಷ್ಪರಿಣಾಮ ಬೀರುತ್ತವೆ. ಸಾಂತ್ವನ, ಬೆಂಬಲ, ಭರವಸೆ, ಪ್ರೋತ್ಸಾಹ ತುಂಬುವಿಕೆಗಳೇ ಈ ಕಾಯಿಲೆಗೆ ಮದ್ದು. ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ದೊರೆತಲ್ಲಿ ಖಿನ್ನತೆಯಿಂದ ಬಳಲುವವರು ಸುಧಾರಿಸಿಕೊಳ್ಳುತ್ತಾರೆ. ಇಲ್ಲದೆ ಹೋದಲ್ಲಿ ಅವರ ಬದುಕು ಇನ್ನೊಂದು ದುರಂತದಲ್ಲಿ ಕೊನೆಗೊಳ್ಳುವ ಸಾಧ್ಯತೆಗಳಿರುತ್ತವೆ ಅನ್ನುವುದನ್ನು ಹೇಳುತ್ತದೆ ಈ ಕಥೆ.

“ಹಂಗು”- ಬದುಕು ಎಂತೆಂತಹ ಅನಿವಾರ್ಯತೆಗಳನ್ನು ಸೃಷ್ಟಿಸುತ್ತದೆ ಎಂದರೆ ಕೆಲವರು ಇನ್ನೊಬ್ಬರ ಅಡಿಯಾಳುಗಳಾಗಿಯೇ ಜೀವನವನ್ನು ಸವೆಸಿ ಬಿಡುತ್ತಾರೆ. ಇನ್ನೊಬ್ಬರ ಅಸಹಾಯಕತೆಯನ್ನು ದಾಳವಾಗಿಸಿಕೊಂಡು ಅವರನ್ನು ತಮ್ಮ ಅನುಕೂಲಕ್ಕೆ ತಕ್ಕಹಾಗೆ ಬಳಸಿಕೊಳ್ಳುವ ಮಂದಿ ಬಹಳ ಸಿಗುತ್ತಾರೆ ಈ ಸ್ವಾರ್ಥ ತುಂಬಿದ ಸಮಾಜದಲ್ಲಿ. ಇನ್ನೊಬ್ಬರನ್ನು ಅವಲಂಬಿಸಲು ಆರಂಭವಾದಾಗ ಇಂತಹ ಪರಿಸ್ಥಿತಿ ಬರುವುದು ವಿಚಿತ್ರವೇನಲ್ಲ ಸಹಜವೇ. ಇಂತಹ ಕಡೆ ವ್ಯಕ್ತಿ ಗೌರವ, ಆದರಗಳಿಗೆ ಜಾಗವಿಲ್ಲ. ಅಸಹಾಯಕರನ್ನು ಜೀತದಾಳುಗಳಂತೆ ದುಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವವರಷ್ಟೇ ಸಿಗುತ್ತಾರೆ ಇಲ್ಲಿ. ಇಂತಹ ಪರಿಸ್ಥಿತಿಗಳನ್ನು ನೋಡಿ, ಅನುಭವಿಸಿ ಬೆಳೆದ ಕಥಾನಾಯಕ ಮಾವ ಜೊತೆಗೆ ವ್ಯವಹಾರ ಮಾಡೋಣ ಎಂದು ಕರೆದಾಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಅಂತ ಕಥೆ ಓದಿಯೇ ತಿಳಿಯಬೇಕು.

“ಮೂಕ ಶಂಕೆ”- ಬೆಳೆಯುವ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಪೋಷಕರು ಅವರನ್ನು ಎಷ್ಟು ದೊಡ್ಡವರಾದರೂ ಇನ್ನೂ ಚಿಕ್ಕವರು ಅನ್ನುವ ರೀತಿಯಲ್ಲೇ ನೋಡುತ್ತಿರುತ್ತಾರೆ. ಆದರೆ ಅವರು ಸುತ್ತಲೂ ನಡೆಯುವ ವಿದ್ಯಾಮಾನಗಳು, ಮನೆಯ ಸದಸ್ಯರ ನಡುವಿನ ಹೊಂದಾಣಿಕೆ, ಅನುಬಂಧ ಯಾವ ರೀತಿ ಇದೆ ಅನ್ನುವುದನ್ನು ಗಮನಿಸುತ್ತಾ ಇರುತ್ತಾರೆ. ಮನೆಯ ಸದಸ್ಯರ ನಡುವೆ ನಡೆಯುವ ಕೆಲವು ಅಹಿತಕರ ಘಟನೆಗಳು ಈ ಬೆಳೆಯುವ ಸಿರಿಗಳನ್ನು ಅರಳುವ ಹಂತದಲ್ಲೇ ಮಾನಸಿಕವಾಗಿ ಕುಗ್ಗಿಸಿ ಚಿವುಟಿ ಹಾಕುತ್ತವೆ. ಪರಿಣಾಮ ಮಾನಸಿಕವಾಗಿ ಜರ್ಜರಿಯಲ್ಪಡುವ ಎಳೆಯರು. ಅಮ್ಮನನ್ನು ಕಾಪಾಡಿಕೊಳ್ಳಲು ಕಾವಲಾಗುವ ಪಣತೊಟ್ಟು ಖಿನ್ನತೆ ಅನುಭವಿಸುವ ಪುಟ್ಟ ಹುಡುಗಿ ಒಬ್ಬಳ ಹೃದಯಸ್ಪರ್ಶಿ ಕಥೆ.

“ಸಂಧಿಗ್ಧ”- ಮೊದಲನೇ ಮದುವೆ, ಸಂಬಂಧವನ್ನು ಮುಚ್ಚಿಟ್ಟು ಇನ್ನೊಂದು ಮದುವೆ ಆಗುವಂತಹ ಉದಾಹರಣೆಗಳು ಈ ಸಮಾಜದಲ್ಲಿ ಬಹಳಷ್ಟು ಸಿಗುತ್ತವೆ. ಇಂತಹ ಸಂಬಂಧಗಳು ಬಹಳ ದಿನ ಒಳ್ಳೆಯ ರೀತಿಯಲ್ಲಿ ಜೀವನ ನಡೆಸುವುದು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿ ಹುಟ್ಟಿಕೊಳ್ಳುವ ದ್ವೇಷದ ಭಾವನೆ, ವಂಚನೆ ಮಾಡಿದರೆಂಬ ಭಾವ, ಜಗಳ, ಕಿತ್ತಾಟ, ಕದನಗಳಿಂದ ನೆಮ್ಮದಿ ಅನ್ನುವುದೇ ಇರುವುದಿಲ್ಲ. ಆದರೆ ಈ ಕಥೆಯಲ್ಲಿ ಕಾಣಿಸಿಗುವ ತಿರುವು ವಿಭಿನ್ನವಾಗಿದೆ.

“ನಿರಾಳ”- ಈ ಪ್ರಪಂಚದಲ್ಲಿ ದೇವರ ಸಮನಾಗಿ ಪೂಜಿಸುವ, ಗೌರವಿಸುವ, ಆರಾಧಿಸುವ ಒಂದು ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಇತ್ತೀಚಿನ ದಿನಗಳಲ್ಲಿ ಆ ವೃತ್ತಿ ಹಾಗೂ ಬದುಕನ್ನು ತಿದ್ದಿ ತೀಡಿ ಅರಿವಿನ ಬೆಳಕನ್ನು ಬೆಳಗುವ ಗುರುವನ್ನು ಕೀಳಾಗಿ ಕಾಣುತ್ತಿರುವುದು ವಿಷಾದನೀಯ. ಸರಕಾರಕ್ಕೂ ಶಿಕ್ಷಕರ ಕಷ್ಟ ಕಾರ್ಪಣ್ಯದ ಗೊಡವೆ ಇಲ್ಲದಿರುವುದು ನೋವಿನ ಸಂಗತಿ. ವಿದ್ಯಾರ್ಥಿಗಳಂತೂ ತಮಗಿತ್ತ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಕಾಡುತ್ತಿರುವುದು ದುರಂತವೇ ಸರಿ. ಪರಿಣಾಮ ಪುಂಡ ಪೋಕರಿಗಳಿಂದ ಆವೃತ ಸಮಾಜದ ನಿರ್ಮಾಣ. ಎಲ್ಲಿಯವರೆಗೆ ಮಕ್ಕಳಿಗೆ ಕೆಟ್ಟ ಕೆಲಸಗಳಿಗೆ ಅವರ ಹೆತ್ತವರ ಬೆಂಬಲವಿರುತ್ತದೋ ಅಲ್ಲಿಯವರೆಗೆ ಆ ಮಗು/ ಮಕ್ಕಳು ಉತ್ತಮ ವ್ಯಕ್ತಿಯಾಗಲು, ಪ್ರಜೆಯಾಗಲು ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳ ಪರ ಕಾನೂನು ಇರುವುದರಿಂದಲೇ ಗುರು ಅನ್ನಿಸಿಕೊಂಡವರು ತಮ್ಮ ಕೆಲಸ, ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸದೆ ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದುಬಿಡುವುದು. ಇದರಿಂದಾಗಿ ಸಮಾಜದಲ್ಲಿಅಯೋಗ್ಯರು ತುಂಬಿಕೊಳ್ಳುತ್ತಿರುವುದು. ತಿದ್ದಿ ತೀಡಿ ಬೆಳೆಯಲ್ಪಟ್ಟ ಮಕ್ಕಳು ಯಾವಾಗಲೂ ಉನ್ನತ ಸ್ಥಾನದಲ್ಲಿ ಇರುತ್ತಾರೆ. ಇಂತಹ ಮಕ್ಕಳು ಒಬ್ಬ ಗುರುವಿನ ನಿಜವಾದ ಹೆಮ್ಮೆ.

ಇತ್ತೀಚಿನ ದಿನಗಳಲ್ಲಂತೂ ಶಿಕ್ಷಕರು ಭಯದಲ್ಲೇ ಬದುಕುವಂತಾಗಿದೆ. ಇದು ಬದಲಾಗಿ ಒಂದು ಉತ್ತಮ ಸಮಾಜದ ನಿರ್ಮಾಣವಾಗಬೇಕಾಗಿರುವುದು ಇವತ್ತಿನ ಬಹಳ ಮುಖ್ಯ ಅಗತ್ಯ. ಹದಿಹರೆಯದ ಸೂಕ್ಷ್ಮ ಮನಸುಗಳನ್ನು ನಾಜೂಕಾಗಿ ನಿಭಾಯಿಸಬೇಕಾಗಿದೆ, ತಟ್ಟಬೇಕಾಗಿದೆ.
” ಎಲ್ಲಿಗೆ ಪಯಣ”-
” ಜಗ ವಿಸ್ಮಯಗಳ ತಾಣ
ಇಲ್ಲಿ ಎಲ್ಲಿಗೆ ಪಯಣ?
ಇಂದು ಇಲ್ಲಾದರೆ ನಾಳೆ ಮತ್ತೊಂದೆಡೆ ನಿಲ್ದಾಣ,
ಜೊತೆಗಿರಬೇಕು ಸದಾ ಭರವಸೆಯ ಹೊಂಗಿರಣ”.

ಮಕ್ಕಳ ಏಳಿಗೆಗಾಗಿ ಹೆತ್ತವರು ಅದರಲ್ಲೂ ಕುಟುಂಬದ ಯಜಮಾನ, ತಂದೆಯಾದವನು ಎಂತಹ ತ್ಯಾಗಕ್ಕೂ ತಯಾರಾಗಿರುತ್ತಾನೆ. ಮಕ್ಕಳ ಅಭಿವೃದ್ಧಿಯ ಸಲುವಾಗಿ ಸ್ವಂತ ಸುಖವನ್ನು ತ್ಯಜಿಸಿ ದುಡಿಮೆಯಲ್ಲಿ ತೊಡಗಿಕೊಂಡಿರುತ್ತಾನೆ. ಆಸ್ತಿ, ಹಣ, ಒಡವೆ ಎಲ್ಲವನ್ನು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಅಡವಿಡಲೂ ಹಿಂದೆ ಮುಂದೆ ನೋಡುವುದಿಲ್ಲ. ಹೆತ್ತವರ ಈ ತ್ಯಾಗವನ್ನು ಅರ್ಥ ಮಾಡಿಕೊಂಡು ವೃದ್ಧಾಪ್ಯದಲ್ಲಿ ಅವರ ಮನಸ್ಸನ್ನು ಅರಿತು ಸಾಗುವ ಮಕ್ಕಳು ಬಹಳ ಅಪರೂಪ. ಯಾಕೆಂದರೆ ಅಂತಹ ಹಂತವಾಗಿ ಹೆತ್ತವರು ಹಾಗೂ ಬೆಳೆದ ಮಕ್ಕಳ ನಡುವೆ ಒಂದು ಅಂತರ ಸೃಷ್ಟಿಯಾಗಿರುತ್ತದೆ. ಅದನ್ನು ದಾಟಿ ಸ್ಪಂದಿಸುವುದು ಬಹಳ ಮಂದಿಯ ಕೈಯಲ್ಲಿ ಆಗದ ವಿಚಾರ. ಆದರೆ ತಮಗಾಗಿ ಹೆತ್ತವರು ಮಾಡಿದ ತ್ಯಾಗವನ್ನು ಅರಿತಿರುವ ಮಕ್ಕಳು ಇವೆಲ್ಲವನ್ನು ಮೀರಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ. ಮಕ್ಕಳ ಅಭಿವೃದ್ಧಿಗೆ ಹೆತ್ತವರ ತ್ಯಾಗ, ಹೆತ್ತವರ ಕಷ್ಟ ಅರಿತ ಮಕ್ಕಳು ಕೈಗೊಳ್ಳುವ ನಿರ್ಧಾರಗಳ ಮೇಲೆ ಆಧಾರಿತ ಸುಂದರ ಕಥೆ- ಎಲ್ಲಿಗೆ ಪಯಣ.

14 ಸುಂದರವಾದ ಕಥೆಗಳನ್ನು ಒಳಗೊಂಡ ಸಂಕಲನ “ತಲ್ಲಣ”. ಹೆಸರಿಗೆ ತಕ್ಕಂತೆ ಇಲ್ಲಿ ನಮ್ಮ ಬದುಕಿನಲ್ಲಿ ಕಾಣಸಿಗುವ ಹಲವಾರು ತಲ್ಲಣಗಳು ಕಥೆಯ ರೂಪವನ್ನು ಪಡೆದಿವೆ. ಒಂದೊಂದು ಕಥೆಯು ನಮ್ಮ ಬದುಕೇನೋ ಅನ್ನುವಷ್ಟು ಆಪ್ತ. ಯಾವ ಕಥೆಯೂ ಬೇಸರ ತರಿಸದು. ಕುತೂಹಲ ಮೂಡಿಸುತ್ತಾ ಸಾಗುವ ಬರಹದ ಶೈಲಿ. ಹಲವಾರು ಪ್ರಶಸ್ತಿಗಳನ್ನು ತಮ್ಮ ಬರಹಕ್ಕೆ ಪಡೆದಿರುವ ನಾಗರತ್ನ ಅವರು ಆಕಾಶವಾಣಿಯಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. “ಕಾಲಗರ್ಭ” ಇವರು ಬರೆದಿರುವ ‘ಸುರಹೊನ್ನ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಇವರ ಇನ್ನೊಂದು ಸುಂದರ ಕಾದಂಬರಿ. ಇವರ ಎಲ್ಲಾ ಬರಹಗಳಲ್ಲೂ ನಮ್ಮ ಸಹಜ ಬದುಕು ಅನಾವರಣಗೊಂಡಿದೆ. ಸಹಜತೆ ಇದ್ದಾಗಲೇ ಕಥೆಯಾದರೂ ಆಪ್ತ ಬಾವ ಮೂಡಿಸುವುದು. ನಾಗರತ್ನ ಮೇಡಂ ಇನ್ನಷ್ಟು ಸುಂದರ ಕೃತಿಗಳು, ಬರಹಗಳು ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮಿಂದ ಸಿಗಲಿ ಅನ್ನುವ ಹಾರೈಕೆಗಳೊಂದಿಗೆ.

-ನಯನ ಬಜಕೂಡ್ಲು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *