ಲಹರಿ

ಬದಲಾಗುತ್ತಿರುವ ಜೀವನಶೈಲಿ

Share Button

ನಮ್ಮ ದಿನನಿತ್ಯದ ಬದುಕು, ದೈನಂದಿನ ಚಟುವಟಿಕೆಗಳ ವಿಧಾನವೇ ಜೀವನಶೈಲಿ. ನಮ್ಮ ನಿತ್ಯ ಅಭ್ಯಾಸಗಳು, ಆಹಾರ ಪದ್ಧತಿ, ಸಂಪ್ರದಾಯ, ವಿಧಿ-ವಿಧಾನಗಳು, ಸಾಮಾಜಿಕ ನಂಟು ಇತ್ಯಾದಿ ಅಂಶಗಳನ್ನು ಜೀವನಶೈಲಿಯು ಒಳಗೊಂಡಿವೆ. ನಮ್ಮ ಆರೋಗ್ಯ, ಮುಖ್ಯವಾಗಿ ಮಾನಸಿಕ, ದೈಹಿಕ ಮತ್ತು ಬೌದ್ಧಿಕ ಆರೋಗ್ಯವನ್ನು ನಮ್ಮ ಜೀವನಶೈಲಿ ನಿರ್ಧರಿಸುತ್ತದೆ. ಉತ್ತಮ, ಆರೋಗ್ಯಕರ ಜೀವನಶೈಲಿಯು ಸ್ವಸ್ಥತೆಯನ್ನು ನೀಡುವುದರೊಂದಿಗೆ ಗುಣಮಟ್ಟದ ಬದುಕನ್ನು ನಡೆಸಲು ಪ್ರೇರೇಪಿಸಿತ್ತದೆ. ಜಗತ್ತು ಬದಲಾದಂತೆ ಜನ ಜೀವನವೂ ಬದಲಾಗಿದೆ. ನನ್ನ ಬದುಕಿನಲ್ಲೂ ಜೀವನಶೈಲಿಯೆಂಬುದು ಪ್ರತಿಯೊಂದೂ ಹಂತದಲ್ಲಿ ಬದಲಾಗುತ್ತಾ ಹೊಸ ಹೊಸ ರೂಪ ಪಡೆದುಕೊಂಡದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ.

ಹಲವು ವರ್ಷಗಳ ಹಿಂದಿನ ಕತೆ. ಸರಳವಾದ ಜೀವನಕ್ಕೆ ಒತ್ತು ಕೊಡುವ ಕಾಲ. ಆಗೆಲ್ಲಾ ನಾವು ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ನಿಯಮಿತವಾಗಿ ಸಮತೋಲನ ಆಹಾರ ಸೇವಿಸುತ್ತಿದ್ದೆವು. ಯಾವುದೇ ರೀತಿಯ ರಾಸಾಯನಿಕ, ಕೀಟನಾಶಕ ಅಥವಾ ಕೃತಕ ಗೊಬ್ಬರ ಹಾಕದ ನೈಸರ್ಗಿಕವಾದ ತರಕಾರಿಯನ್ನೇ ಸೇವಿಸುತ್ತಿದ್ದೆವು. ನಮ್ಮ ಮನೆಯ ಸಮೀಪದಲ್ಲಿ ತಾಜಾ ಮೀನು ದೊರಕುವ ಜಪ್ಪು ಮಾರ್ಕೆಟ್ ಇತ್ತು. ಆರೋಗ್ಯವೂ ಉತ್ತಮವಾಗಿತ್ತು. ರೋಗ ನಿರೋಧಕ ಶಕ್ತಿಯೂ ಹೆಚ್ಚಿತ್ತು. ನೈಸರ್ಗಿಕವಾಗಿ ಬೆಳೆದ ಪೌಷ್ಟಿಕಾಂಶಗಳಿರುವ ಸಾವಯವ ಹಣ್ಣು ಹಂಪಲು ದೊರೆಯುತ್ತಿತ್ತು. ನಮ್ಮ ಮನೆಯ ಆವರಣದಲ್ಲಿ ಚಿಕ್ಕು, ಪೇರಳೆ, ಬಿಂಬುಳಿ, ಬೋಂಬೆ ನೆಲ್ಲಿಕಾಯಿ, ನೆಕ್ಕರೆ ಮಾವು, ಸೀತಾಫಲ, ಚಕ್ಕೋತ, ಪಪ್ಪಾಯ, ಅನನಾಸು ಮತ್ತು ದೊಡ್ಡ ನಿಂಬೆ ಮರಗಳಿದ್ದವು. ನೆರೆಯ ಮನೆಯಲ್ಲಿ ಒಂದು ಹಲಸೂ ಇತ್ತು. ನಮಗೆ ಬೇಕಾದ ಹಣ್ಣನ್ನು ನಾವೇ ಕೀಳುತ್ತಿದ್ದೆವು. ಮನೆಯಲ್ಲೇ ತಯಾರಿಸಿದ ರುಚಿಯಾದ ತಿಂಡಿ ನಮಗೆ ಬರ್ಗರ್, ಪಿಝಾದ ಸ್ವಾದ ಕೊಡುತ್ತಿತ್ತು. ಮನೆಯ ಪಕ್ಕದಲ್ಲೇ ಮೇಸ್ತ್ರ ಹೋಟೇಲ್ ಇತ್ತು. ಅಲ್ಲಿ ಬನ್ಸ್, ಪೋಡಿ, ಅಂಬಡೆ, ಶೀರಾ, ನೀರುಳ್ಳಿ ಬಜ್ಜಿ, ಗಟ್ಟಿ ಬಜೆ, ಸಜ್ಜಿಗೆ ಅವಲಕ್ಕಿ ಹಲವು ಬಗೆಯ ತಿಂಡಿಗಳು ಸಿಗುತ್ತಿತ್ತು. ಮನೆಯಲ್ಲಿ ತಿಂಡಿ ಮಾಡದ ದಿವಸ ಅಲ್ಲಿಂದ ತರುವುದು ವಾಡಿಕೆ. ನನಗೆ ಪೂರಿ ಬಾಜಿ ತುಂಬಾ ಇಷ್ಟವಾದ ತಿಂಡಿ. ಅಮ್ಮ ಎರಡನೇ ಶನಿವಾರ ಅಥವಾ ಭಾನುವಾರ ಮಾಡಿಕೊಡುತ್ತಿದ್ದರು. ಹೆತ್ತವರು ತಿಂಗಳ ಸಂಬಳದ ಮೊದಲನೇ ದಿನ ಬೇಕರಿ ತಿಂಡಿಗಳನ್ನು ತರುತ್ತಿದ್ದರು. ಅದರಲ್ಲಿ ನಮ್ಮ ಇಷ್ಟದ ತಿನಸು ಪ್ರಾಣಿಗಳ ಬಿಸ್ಕಟ್. ವಿವಿಧ ರೀತಿಯ, ಆಕಾರದ ಪ್ರಾಣಿಗಳ ಬಿಸ್ಕ್ಟ್ ನನ್ನ 68 ಅಚ್ಚುಮೆಚ್ಚಿನದಾಗಿತ್ತು. ಅದನ್ನು ಜೋಡಿಸಿ ಆಟವಾಡುತ್ತಿದ್ದೆವು. ಹುಟ್ಟುಹಬ್ಬದಂದು ಕೇಕ್ ಕತ್ತರಿಸಿದ ನೆನಪಿಲ್ಲ. ಆದರೆ ಎಲ್ಲರ ಹುಟ್ಟುಹಬ್ಬದಂದು ಪಾಯಸದ ಊಟವಂತೂ ತಪ್ಪುತ್ತಿರಲಿಲ್ಲ.

ಆದರೂ ತುಂಬಾ ಖುಷಿಯಲ್ಲೇ ಜೀವನ ಸಾಗುತ್ತಿತ್ತು. ಯಾವುದೇ ವಿಷಯಕ್ಕೆ ಅಸಮಾಧಾನ, ಬೇಡಿಕೆಯಾಗಲೀ ಇರಲಿಲ್ಲ. ಇದ್ದದ್ದರಲ್ಲಿ ತೃಪ್ತಿ ಪಡುವ ಕಾಲ. ನಾಲ್ಕಾಣೆ, ಎಂಟಾಣೆ ಇದ್ದರೆ, ಪಕ್ಕದ ಗೂಡಂಗಡಿಗೆ ಓಡಿ ನಮಗೆ ಬೇಕಾದ ತಿಂಡಿಗಳನ್ನು ಕೊಂಡುಕೊಳ್ಳುತ್ತಿದ್ದೆವು. ತಂದೆ-ತಾಯಿ ಇಬ್ಬರೂ ಸಿನೆಮಾ ಪ್ರಿಯರಾದ ಕಾರಣ ವಾರಾಂತ್ಯಕ್ಕೆ ಸಿನೆಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಸ್ವಾತಂತ್ರ್ಯ ದಿನ, ಪ್ರಜಾಪ್ರಭುತ್ವ ದಿನಗಳಂದು, ಪುರಭವನಕ್ಕೆ ಕಾರ್ಯಕ್ರಮ ನೋಡಲು ಎಲ್ಲರೂ ಹೋಗುತ್ತಿದ್ದೆವು. ನಮಗೆ ಬೇಕಾದ ಕತೆ ಪುಸ್ತಕಗಳನ್ನು ತರಿಸಿಕೊಡುತ್ತಿದ್ದರು. ಸಮಯಕ್ಕೆ ಸರಿಯಾಗಿ ಮಲಗಿ, ತಕ್ಕ ಸಮಯಕ್ಕೆ ಏಳುವುದು ಕ್ರಮಬದ್ಧವಾದ ಮಧ್ಯಮ ವರ್ಗದ ಜೀವನಶೈಲಿ ನಮ್ಮದಾಗಿತ್ತು. ಎಳವೆಯಿಂದಲೇ ಈ ಅಭ್ಯಾಸಗಳು ನನ್ನ ಹೈಸ್ಕೂಲ್‌ವರೆಗೆ ಹೀಗೆ ಇತ್ತು. ನನ್ನ ಸಣ್ಣ ತಂಗಿ ಹುಟ್ಟಿದ ಬಳಿಕ ಸ್ವಲ್ಪ ಬದಲಾವಣೆಗಳಾದವು. ತಂದೆ ತಾಯಿಯವರಿಬ್ಬರಿಗೂ ವೃತ್ತಿಯಲ್ಲಿ ಭಡ್ತಿ ದೊರಕಿತ್ತು. ಆರ್ಥಿಕವಾಗಿಯೂ ಸುಧಾರಿಕೆಯಾಗಿ ಜೀವನಶೈಲಿಯೂ ತಕ್ಕ ಮಟ್ಟಿಗೆ ಬದಲಾವಣೆಯಾಯಿತು. ನಾವು ವಾರಕೊಮ್ಮೆ ಮೋಹಿನಿ ವಿಲಾಸ, ವುಡ್‌ಸೈಡ್, ತಾಜ್‌ಮಹಲ್, ಶ್ರೀ ಕೃಷ್ಣ ಭವನ ಮುಂತಾದ ಹೋಟೆಲ್‌ಗಳಿಗೆ ಹೋಗುತ್ತಿದ್ದೆವು. ಬೇಸಗೆ ರಜೆಯಲ್ಲಿ ಕುಟುಂಬ ಸಮೇತ ಪ್ರವಾಸ ಹೋಗುವುದು ಖಾಯಂ ಆಗಿತ್ತು. ನನಗೆ ನೌಕರಿ ಸಿಕ್ಕ ಬಳಿಕ ನನಗೆ ಬೇಕಾದ ವಸ್ತುಗಳನ್ನು ನಾನೇ ಕೊಂಡುಕೊಳ್ಳುತ್ತಿದ್ದೆ. ನಂತರ ಮದುವೆ, ಮಕ್ಕಳು, ಜವಾಬ್ದಾರಿ, ಉದ್ಯೋಗ, ಭವಿಷ್ಯ ಹೀಗೆ ಹಂತ ಹಂತವಾಗಿ ಜೀವನಶೈಲಿಯಲ್ಲಿ ಬದಲಾವಣೆಗಳು ಆಗುತ್ತಲೇ ಇತ್ತು.

ಕಾಲ ಕ್ರಮೇಣ ನಾವು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡ ಮೇಲೆ ಜೀವನಶೈಲಿಯಲ್ಲಿ ಅಗಾಧ ಬದಲಾವಣೆಗಳಾಯಿತು. ಬಾಡಿಗೆ ಮನೆಯಿಂದ ಸ್ವಂತ ಮನೆಗೆ, ಕಾರ್ ಕೊಳ್ಳುವಿಕೆ, ಸಾಮಾನ್ಯ ಹೋಟೆಲ್‌ನಿಂದ ಪಂಚತಾರ ಹೋಟೆಲ್, ಬಸ್ಸು, ರೈಲುಯಾನದಿಂದ ವಿಮಾನಯಾನ ಹೀಗೆ ಜೀವನ ಮಟ್ಟ ಸುಧಾರಿಕೆಯಾಗಿತ್ತು. ಪಾಶ್ಚಿಮಾತ್ಯರ ಸಂಸ್ಕೃತಿಯ ಪ್ರಭಾವದಿಂದಾಗಿ ಆಹಾರ ಪದ್ಧತಿಯಲ್ಲಿ ಕೊಂಚ ವ್ಯತ್ಯಾಸವಾಯಿತು. ಜಂಕ್ ಫುಡ್, ಫಾಸ್ಟ್ ಫುಡ್, ಶೀತಲಿಕರಿಸಿದ ಆಹಾರಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಬಿಟ್ಟವು. ಇಂದಿನ ವೇಗದ ಬದುಕಿನಲ್ಲಿ ಸಮಯದ ಕೊರತೆಯಿಂದಲೂ ನಾನು ಈ ರೀತಿಯ ಜೀವನ ಕ್ರಮಕ್ಕೆ ಒಗ್ಗಿಕೊಂಡಿದ್ದೆ. ಕ್ಷಣ ಮಾತ್ರದಲ್ಲಿ ಮನೆಗೆ ಡೆಲಿವರಿ ಆಗುವ ಸ್ವಿಗಿ, ಝೊಮ್ಯಾಟೋ, ಆಪ್‌ಗಳ ಮೂಲಕ ಆಹಾರ ತರಿಸುವುದು ಸಾಮಾನ್ಯವಾಗಿತ್ತು. ಕೆ.ಎಫ್.ಸಿ., ಡೊಮಿನೋಸ್‌ಗೆ ಹೋಗುವುದು ರೂಢಿಯಾಗಿತ್ತು. ಬಗೆ ಬಗೆಯ ಚೀಸ್ ಸ್ಯಾಂಡ್‌ವಿಚ್ ನನ್ನ ಬೆಳಗ್ಗಿನ ಉಪಹಾರವಾಗಿತ್ತು. ನಾಲಗೆಗೆ ರುಚಿ ಹೆಚ್ಚಿಸಿಕೊಂಡೊಡನೆ ಈ ಆಹಾರದ ಅಡ್ಡ ಪರಿಣಾಮ ಗೋಚರಿಸಿತು.

ಒಂದು ದಿನ ಬ್ಲಡ್ ಚೆಕ್ ಅಪ್‌ಗೆಂದು ಹೋದಾಗ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಂಡು ಬಂತು. ಶಿಸ್ತುಬದ್ಧವಲ್ಲದ ಆಹಾರ ಪದ್ಧತಿ, ತಾಜಾತನವಲ್ಲದ ಆಹಾರ, ಸಮತೋಲನ ಆಹಾರದ ಕೊರತೆಯಿಂದಾಗಿ ನನ್ನ ಆರೋಗ್ಯ ಏರುಪೇರಾಗಿತ್ತು. ಕೂಡಲೇ ಡಾಕ್ಟರ ಬಳಿ ಹೋದಾಗ ಡಯಟ್ ಪ್ಲಾನ್‌ನ ದೊಡ್ಡ ಪಟ್ಟಿಯನ್ನೇ ಮುಂದಿಟ್ಟರು. ತಕ್ಷಣ ಜಾಗೃತಳಾದೆ. ಬೆಳಗ್ಗೆ ಬೇಗನೆ ಎದ್ದು ನಡಿಗೆ ಕ್ರಮಬದ್ಧವಾಗಿ ಪಾಲಿಸಿದೆ. ರಾತ್ರಿ ತಡವಾದರೂ ಮರುದಿನಕ್ಕೆ ಬೇಕಾದ ತರಕಾರಿಗಳನ್ನು ಮೊದಲೇ ಕತ್ತರಿಸಿ, ಆದಷ್ಟು ತಿಂಡಿ, ಪದಾರ್ಥಗಳನ್ನು ಮನೆಯಲ್ಲೇ ತಯಾರಿಸಲು ತೊಡಗಿದೆ. ಜಂಕ್ ಫುಡ್ ಸಂಪೂರ್ಣವಾಗಿ ನಿಲ್ಲಿಸಿದೆ. ಮುಖ್ಯವಾಗಿ ಹೆಚ್ಚು ಕೊಬ್ಬು, ಎಣ್ಣೆ ಹೆಚ್ಚಿರುವ ಆಹಾರಗಳನ್ನು ತ್ಯಜಿಸಿದೆ. ಹುರಿದ ಮೀನು, ಕೋಳಿ ಸೇವನೆ ಕಡಿಮೆ ಮಾಡಿದೆ. ಹೊರಗಿನ ಆಹಾರಕ್ಕೆ ಅನಿವಾರ್ಯವಾದಾಗ ಮಾತ್ರ ಮೊರೆ ಹೋದೆ. ಶಿಸ್ತುಬದ್ಧ ಜೀವನಶೈಲಿ ಹಾಗೂ ವೈದ್ಯರ ಮಾರ್ಗದರ್ಶನದಿಂದ ಕೊಲೆಸ್ಟ್ರಾಲ್ ಅಂಶ ನಿಯಂತ್ರಿಸಲು ಸಮರ್ಥಳಾದೆ.

ನಿವೃತ್ತಿಯ ಬಳಿಕ ಜೀವನ ಕ್ರಮ ಬದಲಾಯಿಸಿಕೊಂಡೆ. ಬೆಳಗ್ಗೆ ಎದ್ದು ಜೀರಾ ನೀರು, ಬಿಸಿ ನೀರು ಕುಡಿಯುವುದು, ಸ್ವಲ್ಪ ಪ್ರಾಣಾಯಾಮ, ನಡಿಗೆ, ಸಮಯಕ್ಕೆ ತಕ್ಕಂತೆ ಹಿತಮಿತ ಸಾತ್ವಿಕ ಆಹಾರ, ಸಂಜೆ ಧ್ಯಾನ ಇವೆಲ್ಲಾ ಜೀವನದ ಒಂದು ಭಾಗವೇ ಆಗಿದೆ. ಈಗಂತೂ ಯೂ ಟ್ಯೂಬ್‌ನಲ್ಲಿ ಹಲವಾರು ಡಯೆಟ್ ಪ್ಲಾನ್, ಆರೋಗ್ಯಕರ ಬದುಕಿಗೆ ಸೂತ್ರಗಳು, ಆಹಾರ ಪದ್ಧತಿ ಬಗ್ಗೆ ಸಾವಿರಾರು ವಿಡೀಯೊಗಳು ಲಭ್ಯವಿದೆ. ಆದರೆ ನನ್ನ ಪ್ರಕಾರ ಇವುಗಳು ಸರಿಯಾದ ಮಾಹಿತಿ ಆಗಿರದೆ, ಉತ್ಪ್ರೇಕ್ಷೆಯಾಗಿರುತ್ತದೆ. ಕೆಲವೊಂದು ಉತ್ತಮ ಚಾನಲ್‌ಗಳು ನಿಖರ ಮಾಹಿತಿಯನ್ನು ಒದಗಿಸಿದರೂ ಅಂತಿಮವಾಗಿ ವೈದ್ಯರ ಸಲಹೆಯೊಂದಿಗೆ ಸಮತೋಲನದ ಆಹಾರದ ಬಳಕೆಯಿಂದಾಗಿ ಉತ್ತಮ ಜೀವನಶೈಲಿಯನ್ನು ನಡೆಸಲು ಸಾಧ್ಯ.

ಪ್ರತಿಯೊಬ್ಬರ ಬದುಕಿನಲ್ಲೂ ಜೀವನಶೈಲಿ ಬದಲಾಗುವುದು ಸಹಜ. ಬಾಲ್ಯದ ಬದುಕಿನ ಆ ಸರಳ ಸುಂದರ ಕ್ಷಣಗಳು ಯಾವತ್ತೂ ಮರಳಿ ಬಾರದು. ತಂತ್ರಜ್ಞಾನ ಆಧಾರಿತ ಆಧುನಿಕ ಬದುಕು ಜೀವನವನ್ನು ಸುಲಭಗೊಳಿಸಿದರೂ ಆರೋಗ್ಯದ ದೃಷ್ಟಿಯಿಂದ ಅಪಾಯದ ಅಂಚಿನೆಡೆ ತಳ್ಳಿದೆ. ಆದ್ದರಿಂದ ಉತ್ತಮ ಗುಣಮಟ್ಟದ ಶಿಸ್ತಿನ ಜೀವನಶೈಲಿ ಮಾತ್ರವೇ ಬದುಕನ್ನು ಶ್ರೀಮಂತಗೊಳಿಸಲು ಸಾಧ್ಯ. ನಿತ್ಯ ಜೀವನದಲ್ಲಿ ಸಣ್ಣಪುಟ್ಟ ಮಾರ್ಪಾಡುಗಳು ಆದಾಗಲೇ ನಮ್ಮ ಜೀವನಶೈಲಿಯೂ ಸುಧಾರಿಸುತ್ತದೆ. ಶಿಸ್ತಿನ ಜೀವನ ಶೈಲಿ ಮಾತ್ರವೇ ಬದುಕನ್ನು ಸಮೃದ್ಧಗೊಳಿಸಬಲ್ಲುದು ಎಂದು ನಾನು ಅರಿತಿದ್ದೇನೆ.

ಶೈಲಾರಾಣಿ ಬಿ, ಮಂಗಳೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *