ಪರಾಗ

ವಾಟ್ಸಾಪ್ ಕಥೆ 77 : ಸಹಪ್ರಯಾಣಿಕರು

Share Button

ಬಸ್ಸೊಂದು ಪ್ರಯಾಣಿಕರಿಂದ ತುಂಬಿತ್ತು. ಹಲವಾರು ಜನರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ನಿಂತಿದ್ದರು. ಅವರಲ್ಲಿ ಒಬ್ಬ ವೃದ್ಧೆ ತನ್ನ ಎರಡೂ ಕೈಗಳಲ್ಲಿ ಸಾಮಾನು ತುಂಬಿದ ಚೀಲಗಳನ್ನು ಹಿಡಿದು ನಿಂತುಕೊಂಡಿದ್ದಳು. ಆಕೆಯ ಚೀಲಗಳು ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಇನ್ನೊಬ್ಬ ಹೆಣ್ಣುಮಗಳಿಗೆ ಒರಗಿದಂತೆ ಒತ್ತಿಕೊಂಡಿದ್ದವು. ಆಕೆಗೆ ತನ್ನ ಕಾಲುಗಳನ್ನು ಅತ್ತಿತ್ತ ಅಲುಗಾಡಿಸಲೂ ಸಾಧ್ಯವಿಲ್ಲದೆ ತೊಂದರೆ ಪಡುವಂತಾಗಿತ್ತು.

ಇದನ್ನು ಗಮನಿಸಿದ ಮತ್ತೊಬ್ಬ ಸಹ ಪ್ರಯಾಣಿಕರು “ಅರೆ, ನೀವು ಅಷ್ಟೊಂದು ತೊಂದರೆ ಅನುಭವಿಸುತ್ತಿದ್ದೀರಿ. ಸ್ವಲ್ಪ ಚೀಲವನ್ನು ಪಕ್ಕಕ್ಕೆ ಸರಿಸಿ ಎಂದು ಆ ಹೆಂಗಸಿಗೆ ಹೇಳಬಾರದೇ?” ಎಂದರು. ಕುಳಿತಿದ್ದಾಕೆ “ಇರಲಿ ಬಿಡಿ, ನಾನು ಹಾಗೆ ಹೇಳಿದರೆ ಅವರು ಜಾಗವಿಲ್ಲದೆ ಎಲ್ಲಿ ಇಟ್ಟುಕೊಳ್ಳುವುದು? ಎಂದು ಉತ್ತರಿಸುವುದು. ಆಗ ನನ್ನ ಪರ ಮತ್ತು ವಿರೋಧವಾಗಿ ಹಲವರು ಮಾತನಾಡುವುದು. ಇದರಿಂದ ಗೌಜುಗದ್ದಲಕ್ಕೆ ಎಡೆಮಾಡಿದಂತಾಗುತ್ತದೆ ಅಷ್ಟೆ. ಅಲ್ಲದೆ ನಿಂತುಕೊಂಡಿರುವವರೂ ನನ್ನಂತೆಯೇ ವಯಸ್ಸಾದವರು. ಅವರಿಗೂ ಇಲ್ಲಿ ತೊಂದರೆಯೇ. ಆದರೂ ಹೇಗೋ ಸಹಿಸಿಕೊಂಡಿದ್ದಾರೆ. ಕೆಲವೊಮ್ಮೆ ನನಗೂ ಇಂತಹುದೇ ಪರಿಸ್ಥಿತಿ ಬರಬಹುದಲ್ಲವೇ? ಅಲ್ಲದೆ ಮುಂದಿನ ಸ್ಟಾಪಿನಲ್ಲಿ ನಾನು ಇಳಿಯುತ್ತೇನೆ. ಸ್ವಲ್ಪ ಹೊತ್ತಿನ ಪ್ರಯಾಣವಷ್ಟೇ. ಅದಕ್ಕಾಗಿ ಕೂಗಾಡುವ ಅವಶ್ಯಕತೆಯೇನಿದೆ” ಎಂದು ಹೇಗೋ ಸಾವರಿಸಿಕೊಂಡು ಪ್ರಯಾಣ ಮುಂದುವರೆಸಿದರು.

ಅದನ್ನು ಕೇಳಿದ ಸಹಪ್ರಯಾಣಿಕರು “ಹೌದಲ್ಲವೇ? ಅವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ. ಎಲ್ಲರದ್ದೂ ಸ್ವಲ್ಪ ಹೊತ್ತಿನ ಪ್ರಯಾಣವೇ. ಇಲ್ಲಿ ಯಾರು ತಾನೇ ಖಾಯಂಮ್ಮಾಗಿ ಕುಳಿತುಕೊಳ್ಳುತ್ತಾರೆ.” ಎಂದುಕೊಂಡರು. ಬದುಕೂ ಕೂಡ ಹಾಗೆಯೇ ಅಲ್ಲವೇ? ಈ ಲೋಕದಲ್ಲಿ ಎಲ್ಲರೂ ಸಹಪ್ರಯಾಣಿಕರೇ. ಎಲ್ಲರೂ ಅವರವರ ಅಂತ್ಯಕಾಲದ ಸ್ಟಾಪ್ ಬಂದಾಗ ಇಳಿದು ಹೋಗುತ್ತಿರುತ್ತಾರೆ. ಯಾರೂ ಇಲ್ಲಿಯೇ ಉಳಿಯುವುದು ಸಾಧ್ಯವಿಲ್ಲ. ಆದರೆ ಪ್ರಯಾಣಿಸುವ ಅಲ್ಪ ಕಾಲದಲ್ಲಿ ಇತರರೊಡನೆ ಎಷ್ಟು ಮಾತು, ಜಗಳ, ದ್ವೇಷ, ಹೊಡೆದಾಟ. ಇವೆಲ್ಲದರ ಆವಶ್ಯಕತೆ ಇದೆಯೇ. ಇರುವಷ್ಟು ಕಾಲ ಹೇಗೋ ಅನುಸರಿಸಿಕೊಂಡು ಹೋಗಬೇಕು. ಇದೇ ಸಹಬಾಳ್ವೆಯ ಸಾರ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *