ಪುಸ್ತಕ-ನೋಟ

ಪುಸ್ತಕ ಅವಲೋಕನ: ‘ಬೆಟ್ಟದ ಜೀವ’

Share Button

ಪುಸ್ತಕ :ಬೆಟ್ಟದ ಜೀವ
ಲೇಖಕರು :ಡಾ.ಕೆ.ಶಿವರಾಮ ಕಾರಂತ
ಬೆಲೆ : 100
ಪುಟ: 150 +vi
ಪ್ರಕಾಶನ: ಸಪ್ನಾ‌ ಬುಕ್ ಹೌಸ್

ಮೈಲುಗಟ್ಟಲೆ ದೂರ ನಡೆದು ಹೋಗುವುದೆಂದರೇನು?ರಸ್ತೆ ಟಾರು ರಸ್ತೆಗಳಿಲ್ಲದ ಕಾಡಿನ ಹಾದಿಯ ವರ್ಣನೆ ಏನು? ರಾತ್ರಿ ಹೋಗಬೇಕಾದ ಸ್ಥಳಕ್ಕೆ ಹೋಗಲು ಸಾಧ್ಯವಾಗದಿರೆ ಅಪರಿಚಿತರ ಮನೆಯಲ್ಲಿ ರಾತ್ರಿಕಳೆಯಲು ಹೋಗುವುದು?ಅಲ್ಲಿ ಅವರ ಮನೆಯ ಸದಸ್ಯರಂತೆಯೇ ಆಗಿ ೪-೫ ದಿನ ಉಳಿಯುವುದನ್ನು ಇಂದಿನ ಕಾಲದಲ್ಲಿ‌ ಊಹಿಸಲೂ ಸಾಧ್ಯವೇ?ಪಕ್ಕದ ಮನೆಗೂ ಫೋನ್ ಮಾಡಿ ಅವರ ಬಿಡುವು ಗೊತ್ತು ಮಾಡಿಕೊಂಡು ಹೋಗುವ ಇಂದಿನ ಪ್ರಪಂಚದಲ್ಲಿ,ಎಲ್ಲಿಯಾದರೂ ಹೋಗಬೇಕಾದರೆ ವಾಹನ ವ್ಯವಸ್ಥೆ, ತಂಗಲು ಹೊಟೆಲು‌ ಇಷ್ಟೆಲ್ಲ ಸೌಲಭ್ಯವಿರುವಾಗ ನಮಗೆ ಇವೆಲ್ಲ‌ ಇಲ್ಲದ‌ ಬೇರೆ ಲೋಕವಿದೆಯೇ ಎಂದು ಭಾವಿಸುವಂತೆ ‘ಬೆಟ್ಟದ ಜೀವ’ ನನ್ನನ್ನು ಸೆಳೆಯಿತು. ದೂರದ ಬೆಟ್ಟ ನುಣ್ಣಗೆ ಎಂದು ಹಾಸ್ಯಮಾಡಬೇಡಿ.

ಡಾ.ಶಿವರಾಮ ಕಾರಂತರ ‘ಬೆಟ್ಟದ ಜೀವ’ ಓದಲು ಶುರುಮಾಡಿದರೆ ಅದನ್ನು ಓದಿ ಮುಗಿಸುವವರೆಗೂ ಯಾವಾಗ ಓದಲು ಸಮಯ ಸಿಕ್ಕೀತು ಎಂಬ ಚಡಪಡಿಕೆ. ಪಂಜದ ಹಾದಿ ಹಿಡಿಯ ಹೊರಟ ಕಥಾನಾಯಕ ಗೋಪಾಲಯ್ಯನವರ(ಭಟ್ಟ) ಮನೆಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಎದ್ದು ದಾರಿಸೇರ ಬೇಕಾದವರು ಶಂಕರಮ್ಮನ ಒತ್ತಾಯಕ್ಕೆ ಮಣಿಯುವುದೇನು?ಅಮ್ಮನಂತಹ ಅವರಲ್ಲಿ ಉಪಾಹಾರ, ಊಟವೆಂದು ಅವರ ಅಡುಗೆಯನ್ನು ಚೆನ್ನಾಗಿ ಸವಿದು, ಮಲೆನಾಡಿನ ಸೌಂದರ್ಯ ಕಾಣುತ್ತಾ ಗುಡ್ಡ ಹತ್ತಿ ಇಳಿದು,ಶ್ರಮವಹಿಸಿ ಗುಡ್ಡ ಕಡಿದು,ತೋಟ ಮಾಡಿದ ಗೋಪಾಲಯ್ಯನವರ ಶ್ರಮ,ಅರವತ್ತರ ಪ್ರಾಯದಲ್ಲಿ ಅವರಲ್ಲಿರುವ ಹುಮ್ಮಸ್ಸು,ಈಗಲೂ ಮುದ್ದಣ್ಣ ಮನೋರಮೆಯಂತೆ ಮಾತಿನಲ್ಲಿ ಸರಸ ಸಲ್ಲಾಪ ಮಾಡುವ ಗಂಡ ಹೆಂಡಿರ ಮಾತುಕತೆ ಹೀಗೆ ಕಾದಂಬರಿ ನನ್ನನ್ನು ಸೆಳೆಯುತ್ತಾ ಸಾಗಿತು.

ಮಗನಂತೆ ನಾರಾಯಣನ ಕಾಳಜಿ ವಹಿಸಿ ತನಗಾಗಿ ತಾನೇ ಹೆಣ್ಣು ಹುಡುಕಿಕೊಂಡ ಸ್ಥಿತಿ ನಿನಗೆ ಬೇಡವೆಂದು ಒಳ್ಳೆಯ ಹೆಣ್ಣನ್ನು ಅವರೇ ಹುಡುಕಿ ಲಕ್ಷ್ಮೀಯನ್ನು ನಾರಾಯಣನೊಂದಿಗೆ ವಿವಾಹ ಮಾಡಿಸಿ,ಅವರಿಗಾಗಿ ಮನೆ,ಸೌಕರ್ಯ ಮಾಡಿಕೊಟ್ಟು ನಂತರ ಅವರ ಮಕ್ಕಳನ್ನು ತನ್ನ ಮೊಮ್ಮಕ್ಕಳಿಗಿಂತ ಜಾಸ್ತಿ ಪ್ರೀತಿ ಮಾಡುವ ಅಜ್ಜ ಅಜ್ಜಿಯ ಮಮತೆಯಂತೂ ಅವರ್ಣನೀಯ.

ಮಲೆನಾಡಿನ ಕಲ್ಕುಡ ದೈವ, ಭೂತಕೋಲ, ಅದಕ್ಕಾಗಿ ನೀಡಬೇಕಾದ ಬಲಿ, ಅಕ್ಕಿ, ಬೆಲ್ಲ ಇತ್ಯಾದಿಗಳ ಬಗ್ಗೆ ಹೇಳುತ್ತಾ ತಮಗೆ ನಂಬಿಕೆಯಿದೆಯೋ ಇಲ್ಲವೋ ಊರವರಿಗಾಗಿ ಹುಲಿಯಿಂದ ಪಾರಾಗಲು ನಾನು ಅಕ್ಕಿಮುಡಿಯ ವ್ಯವಸ್ಥೆ ಮಾಡುತ್ತೇನೆ,ಊರವರಿಂದ ವಂತಿಗೆಯನ್ನೂ ಕೊಡಿಸುವ ಭರವಸೆ ಭಟ್ಟರದು. ಬೆಳಗ್ಗೆ ದೇವರ ಪೂಜೆಗಾಗಿ ಮೀಯುವ ಭಟ್ಟರು ಮಧ್ಯಾಹ್ನ ಕೆಲಸದ ನಂತರ,ಮತ್ತೆ ಸಾಯಂಕಾಲವೆಂದು ಮೀಯುತ್ತಲೇ ಕೂತರೂ ಕೂತರು. ಇನ್ನು ನದಿ ಸ್ನಾನ, ಬಿಸಿನೀರಿನ‌ಸ್ನಾನ, ಹಂಡೆ ಕಾಯಿಸುವ ಕೆಲಸ, ಎಣ್ಣೆ ಸ್ನಾನ ಹೀಗೆ ಸ್ನಾನವೆಂದರೆ ಬಾಣಂತಿ ಸ್ನಾನಕ್ಕೂ ಮಿಗಿಲಾಗಿ ಅವರ ಕೈಯಿಂದ ಎಣ್ಣೆಲೇಪನ ಮಾಡಿಸಿಕೊಂಡು ಅವರ ಕೈಯಿಂದಲೇ ಮೈ ಉಜ್ಜಿಕೊಂಡು ಸ್ನಾನ ಮಾಡಿಸಿಕೊಳ್ಳುವ ಕಥಾನಾಯಕರು ಇನ್ನೊಮ್ಮೆ ಅವರ ಕೈಯಲ್ಲಿ ಸ್ನಾನ ಮಾಡಿಸಿಕೊಳ್ಳುವಷ್ಟು ತ್ರಾಣ ನನಗಿಲ್ಲವೆಂದು ಹೇಳುವ ಪರಿಯೋ.

ಇಂಗ್ಲೀಷ್ ಓದಿಸಿ ತಮ್ಮ‌ಮಗ ನಮ್ಮಿಂದ ದೂರವಾಗಿ ಓದು,ಕೆಲಸವೆಂದೆಲ್ಲ ಮುಂಬಯಿ‌ಶಹರದ ವ್ಯಾಮೋಹ ಬೆಳೆಸಿಕೊಂಡನೇ?ಯಾವ ಹೆಣ್ಣು ಹುಲಿ ಅವನನ್ನು ಹಿಡಿಯಿತೋ?! ವರ್ಷಕ್ಕೊಮ್ಮೆ, ನಾಲ್ಕು ವರ್ಷಕ್ಕೊಮ್ಮೆಯಾದರೂ ತಂದೆತಾಯಿಯನ್ನು ಕಾಣಲು ಬಾರದ ಮಗರಾಯ ಎಂತವನಿರಬೇಕು! ಅವನಿಗೆ ಅಷ್ಟು ಈ ಹಳ್ಳಿಯ ಜೀವನ ಬೇಡವಾಯಿತೇ? ಊರು,ಶಹರದ ವ್ಯಾಮೋಹ ಹಿಡಿಯಿತೇ?ಯಾಕೆ ಅವನು ಇವರಿಂದ ದೂರವಾಗಿ ಉಳಿದ ಎನ್ನುವುದು ಎಲ್ಲರ ಮನದಲ್ಲಿಯ ಪ್ರಶ್ನೆ.

ಬೇಟೆ,ಶಿಕಾರಿಯೆಂದೆಲ್ಲ ವರ್ಣಿಸುತ್ತಾ ಹುಲಿಯನ್ನು ಹಿಡಿಯಲು ಪಂಜರ ಮಾಡುವ ಕೆಲಸ, ನಂತರ ಅದನ್ನು ಹಿಡಿಯಲು ನಾಯಿಯೊಂದನ್ನು ಕಟ್ಟಿದರೆ ಸಾಕೇ? ಆಡು,ಹೋತವಿದ್ದರೆ ಬೇಗನೇ ಹಿಡಿಯಬಹುದಿತ್ತು ಎಂಬ ಭಾವ ಎಲ್ಲರಲಿ. ಪೂರ್ಣ ಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ಹುಲಿಯನ್ನು ಹಿಡಿಯುವ ಸ್ವಾರಸ್ಯಕರ ಘಟನೆಗಳನ್ನು ನಮ್ಮ ಮುಂದೆ ಇಟ್ಟಂತೆ ಈ ಕಥೆಯಲ್ಲೂ ಹುಲಿಯನ್ನು ಹಿಡಿಯುವ ಸಣ್ಣ ಸನ್ನಿವೇಶ, ಹುಲಿಯನ್ನು ಹೊಡೆಯಲು ಬಳಸುವ ಮೂರು ಕೋವಿಯ ಈಡು, ನಂತರ ಅದು ಸತ್ತಿದ್ದರೂ ಅದನ್ನು ಮುಟ್ಟಲು ಒಮ್ಮೆ ಹಿಂಜರಿಕೆ, ನಂತರ ಅದರ ಮೀಸೆಯನ್ನು ನಾಯಕ ಮುಟ್ಟುವ ಪರಿ ಹೀಗೆ ಹುಲಿ ಎದುರಾದರೆ ನಮ್ಮ ಗತಿಯೇನು ಅಲ್ಲವೇ?

ಒಬ್ಬನೇ ಗುಡ್ಡ ಹತ್ತಿ,ಅಲ್ಲಿ ಸುತ್ತಾಟ ನಡೆಸುವ ಧೈರ್ಯ ಮಾಡಿದ ನಾಯಕ,ಚಳಿಜ್ವರ ಬಂದರೂ ಮಲೇರಿಯಾದ ಗುಳಿಗೆಯನ್ನು ನುಂಗಿ,ನಂತರ ಜ್ವರ ದಿಂದ ಚೇತರಿಕೊಂಡು ಹೆದರಿ‌ಕುಳಿತರೆ ಆದೀತೆ ಎಂದು ಓಡಾಡುತ್ತಾ,ದಾರಿಯಲ್ಲಿ ಕತ್ತಿ ಹಿಡಿದು ದಾರಿಮಾಡಿಕೊಂಡು ಸಾಗುತ್ತಾ ನಂತರ ಸ್ವಲ್ಪ ದಾರಿತಪ್ಪಿದರೇನೋ‌ ಎಂಬ ಅನುಮಾನ ಬರುವಾಗ ಅವರನ್ನು ಹಿಂಬಾಲಿಸಿದ ನಾರಾಯಣ,ಮಾವನವರ ನಂತರದಲ್ಲಿ ಆಗಲಿ ಎಂದು ಒಂದು ತೋಟ ಕೊಳ್ಳಬೇಕು ಎಂದಿರುವೆ ಎಂದು ನಾಯಕರಲ್ಲಿ ಕೇಳಿದಾಗ ಮಾವನವರ ಸಲಹೆ ಪಡೆಯುವ ಎಂದಾಗ ಅವರು ತೋಟಕೊಂಡರೋ?ಅಥವಾ ಅವರಿಗೆ ‌ಏನು ವ್ಯವಸ್ಥೆಯಾಯಿತು ಎಂದೆಲ್ಲ ನೀವೊಮ್ಮೆ ಓದಿಯೇ ತಿಳಿಯಬೇಕು.

ಭಟ್ಟರ ಮನೆಯ ಹತ್ತಿರವೇ ಸಣ್ಣ ಗದ್ದೆ,ತೋಟ ಮಾಡಿಕೊಂಡು ತನ್ನ ಹೆಸರಿಗೆ ಮಾಡಿಕೊಳ್ಳಲು ಪರದಾಡುವ ದೇರಣ್ಣಗೌಡ,ಸಣ್ಣ ಪುಟ್ಟ ತರಕಾರಿ ಬೆಳೆದು ಭಟ್ಟರ ಸಹಾಯಕ್ಕೆ ಬರುವ ಬಟ್ಯ,ಹೀಗೆ ಕಥೆಯಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳಾದರೂ ಅವರ ಪಾತ್ರ ಹಿರಿಯದೇ.

ಹೀಗೆ ಬೆಟ್ಟಕ್ಕೂ ಜೀವವಿದೆ .ಬೆಟ್ಟದ ಮುಂದೆ ನಾವೊಂದು ಸಣ್ಣ ಇರುವೆಯೆಂದು ಬಣ್ಣಿಸಿದರೂ ಸಣ್ಣ ಇರುವೆಗಳಾದ ನಾವು ಬೆಟ್ಟದಂತ ಬೆಟ್ಟದ ಜೀವವನ್ನೇ ಓದಿಬಿಡುವುದರಲ್ಲಿ ಸಂಶಯವಿಲ್ಲ.

ಸಾವಿತ್ರಿ ಶ್ಯಾನುಭಾಗ, ಕುಂದಾಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *