ಸಾಸಿವೆ ತಂದವಳು- ಭಾರತಿ.ಬಿ.ವಿ.
ಪೌರಾಣಿಕ ಪಾತ್ರಗಳಾದ ‘ಸಾವಿತ್ರಿ-ಸತ್ಯವಾನ’ ಕತೆಯಲ್ಲಿ ಸಾವಿತ್ರಿಯು ತನ್ನ ವಾಕ್ಚಾತುರ್ಯ ಮತ್ತು ಭಕ್ತಿಯಿಂದ ಯಮನನ್ನೇ ಗೆದ್ದು ಬಂದವಳು ಎಂದು ಶ್ಲಾಘಿಸಲಾಗುತ್ತದೆ. ಈಗಿನ ಕಾಲದಲ್ಲಿಯೂ ಹೀಗೆ ‘ಯಮನನ್ನು ಗೆದ್ದು ಬಂದವರ’ ಬಗ್ಗೆ ಕೆಲವೊಮ್ಮೆ ಕೇಳಿರುತ್ತೇವೆ/ಓದಿರುತ್ತೇವೆ.
ಸಣ್ಣಪುಟ್ಟ ಕಾಯಿಲೆಗಳು ಬಂದರೂ ಎದುರಿಸಲಾಗದೆ ತಾವೂ ನಿರಾಶಾವಾದಿಗಳಾಗಿ, ಮನೆಮಂದಿಗೆಲ್ಲಾ ಕಿರಿಕಿರಿ ಹುಟ್ಟಿಸುವವರು ಬಹಳಷ್ಟು ಮಂದಿ ಇರುತ್ತಾರೆ. ಆದರೆ, ಗಂಭೀರವಾದ ಕಾಯಿಲೆ ಬಂದಾಗಲೂ ತನಗೆ ಏನೂ ಆಗಲಿಲ್ಲ ಎಂಬಂತೆ, ಪುಟಿದೇಳುವ ಜೀವನೋತ್ಸಾಹದಿಂದ, ಸಾವೇ ಕದ ತಟ್ಟಿದರೂ ದಿವ್ಯ ನಿರ್ಲಕ್ಷ್ಯ ತೋರಿಸಿ,ಗೆದ್ದು ಬಂದ ಮಹಿಳೆ ಶ್ರೀಮತಿ ಭಾರತಿ.ಬಿ.ವಿ.
ಅವರು ಬರೆದ ‘ಸಾಸಿವೆ ತಂದವಳು’ ಪುಸ್ತಕವನ್ನು ಈಗ ತಾನೇ ಓದಿ ಮುಗಿಸಿದೆ. ತನಗೆ ಕ್ಯಾನ್ಸರ್ ಇದೆಯೆಂದು ಗೊತ್ತಾಗಿದಾಗಿನಿಂದ, ಅದನ್ನು ಜಯಿಸಿ ಬಂದ ವರೆಗಿನ ಸಾಹಸಗಾಥೆ ಇದರಲ್ಲಿದೆ.
ಭಾರತಿ ಅವರು ತನ್ನ ಬಗ್ಗೆ “ಪ್ರತಿ ಕಾರ್ಮೋಡದ ಸುತ್ತಲೂ ಒಂದು ಬೆಳ್ಳಿ ಗೆರೆ ಹುಡುಕುವಂಥ ಆಶಾವಾದಿ ನಾನು” ಎಂದು ಹೇಳಿಕೊಂಡಿದ್ದಾರೆ. ( ಪುಟ 59). ಇದು ಆಪ್ಪಟ ನಿಜ ಎಂದು ಅವರ ಬರವಣಿಗೆಯ ಶೈಲಿಯಲ್ಲಿ ಗೊತ್ತಾಗುತ್ತದೆ. ಶಾರೀರಿಕ ನೋವು ಮತ್ತು ಮಾನಸಿಕ ಹಿಂಸೆಗಳ ತೊಳಲಾಟವಿದ್ದರೂ ಅವರ ಹಾಸ್ಯಪ್ರವೃತ್ತಿ ಕೃತಿಯುದ್ದಕ್ಕೂ ದು:ಖದಲ್ಲಿಯೂ ನಗುವಿನ ಸಿಂಚನ ಕೊಟ್ಟಿದೆ.
ನಮಗೆ ಹತ್ತಿರದ ಸಂಬಂಧಿ ಅಥವಾ ಪರಿಚಯಸ್ಥರು ಗಂಭೀರವಾದ ಅಸೌಖ್ಯತೆಗೆ ತುತ್ತಾಗಿದ್ದಾಗ ಅವರನ್ನು ಮನೆಯಲ್ಲೋ, ಆಸ್ಪತ್ರೆಯಲ್ಲೋ ಭೇಟಿ ಮಾಡಿ, ಕನಿಷ್ಟ ಸೌಜನ್ಯಯುತವಾಗಿ ಮಾತನಾಡಿಸಿ, ನಮ್ಮಿಂದ ಏನಾದರೂ ಸಹಾಯ ಬೇಕೆ, ಎಂದು ಕೇಳಿ ಬರುವುದು ಉತ್ತಮ ನಡವಳಿಕೆ. ಹೀಗೆ ಅವರನ್ನು ಭೇಟಿಯಾದಾಗ ನಮ್ಮ ಅಚಾತುರ್ಯದ ಮಾತು ಅಥವಾ ನಡವಳಿಕೆಗಳಿಂದ ನಮಗೆ ಅರಿವಾಗದೆಯೇ ಸಂಬಂಧಿತ ವ್ಯಕ್ತಿಗಳಿಗೆ ಬೇಸರವಾಗುವ ಸಾಧ್ಯತೆಗಳಿವೆ. (ಪುಟ 67)
ಒಟ್ಟಾರೆಯಾಗಿ, ಯಾವುದೇ ಕಾಯಿಲೆಯಿಂದ ಬಸವಳಿಯುವವರಿಗೆ ಆತ್ಮವಿಶ್ವಾಸ ತುಂಬಲು ಮತ್ತು ಎಲ್ಲಾ ಇತರರಿಗೆ, ಕಾಯಿಲೆ ಇರುವವರ ಬಗ್ಗೆ ಹೇಗೆ ಸಂವೇದನಾಶೀಲರಾಗಿ ವರ್ತಿಸಬೇಕು ಎಂಬುದರ ಬಗ್ಗೆ ‘ಸಾಸಿವೆ ತಂದವಳು’ ಪುಸ್ತಕವು ಮಾರ್ಗದರ್ಶಿಯಂತಿದೆ.
ತನ್ನ ಮತ್ತು ಕ್ಯಾನ್ಸರ್ ಜತೆಗಿನ ಹೋರಾಟದಲ್ಲಿ ಗೆದ್ದು ಬಂದು, ಈ ಹೋರಾಟದ ಕ್ಷಣಗಳನ್ನು ಸ್ಫೂರ್ತಿದಾಯಕವಾಗಿ ನಿರೂಪಿಸಿ ಓದುಗರಿಗೆ ತಲಪಿಸಿದ ಲೇಖಕಿಯವರಿಗೆ ಅಭಿನಂದನೆಗಳು.
– ಹೇಮಮಾಲಾ. ಬಿ
ನಾನೂ ಈ ಪುಸ್ತಕವನ್ನು ಇದೇ ವಾರ ಓದಿ ಮುಗಿಸಿದ್ದೆ. ಅವರ ಹೆತ್ತವರ ಮತ್ತು ಪತಿಯ, ಮಗನ ಮನಸ್ಥೈರ್ಯಕ್ಕೆ (ಅವರದು ಕೂಡಾ) ಮೆಚ್ಚಿದ್ದೆ. ಉತ್ತಮ ಕೃತಿ.
ನಾನೂ ಈ ಪುಸ್ತಕವನ್ನು ಓದಿದ್ದೇನೆ,ನೇಮಿಚಂದ್ರರ ಬರಹಗಳಂತೆ ಆಪ್ತವಾಗಿದೆ
ಕಿಮೊಥೆರಪಿಯಿಂದಾಗಿ ಕೂದಲು ಮುದ್ದೆಮುದ್ದೆಯಾಗಿ ಉದುರುವಾಗಿನ ಸಂಕಟ ಓದುವಾಗ ತುಂಬಾ ಫೀಲ್ ಆಯ್ತು. ಇಂಥಹ ಪುಸ್ತಕ ಪರಿಚಯ ಸುರಹೊನ್ನೆ ಮೂಲಕ ಓದುಗರಿಗೆ ಸಿಕ್ಕಿದರೆ ಉತ್ತಮ .
ಇದು ಇವತ್ತು ಕಣ್ಣಿಗೆ ಬಿತ್ತು!
ಥ್ಯಾಂಕ್ಸ್ ಹೇಮಾ
ಧನ್ಯವಾದಗಳು 🙂