ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ –5
ಬ್ರಾಹ್ಮಣ ಸ್ತ್ರೀ ಹರಿಭಕ್ತಿ
ಗೋಪಾಲರೊಡಗೂಡಿ ಗೋವುಗಳ ಮೇಯಿಸುತ
ಬಹುದೂರ ಸುಡು ಬಿಸಿಲಲಿ
ನಡೆದ ಬಲರಾಮ ಕೃಷ್ಣರಿಗೆ
ಕೊಡೆ ಹಿಡಿದು ನೆರಳ ಕೊಟ್ಟಂತೆ
ತಮ್ಮ ತಂಪಾದ ನೆರಳಲ್ಲಿ
ಆವರಿಸುತಿರ್ಪ ವೃಕ್ಷಗಳ ನೋಡೆ
ಕೃಷ್ಣ ನುಡಿದ ಮಾತುಗಳೆಷ್ಟು ಸತ್ಯ
ಮಂಜು ಮಳೆ ಗಾಳಿ ಬಿಸಿಲುಗಳ ಬಾಧೆ
ಸಹಿಸಿ ಬಳಿ ಬಂದವರಿಗೆ
ಚಿಗುರು ಎಲೆ ಹೂವು ಹಣ್ಣು ನೆರಳು
ಬೇರು ನಾರು ತೊಗಟೆ ಕೊಂಬೆ
ಸುವಾಸನೆ ಅಂಟು ಕಟ್ಟಿಗೆಯೆಲ್ಲವ
ಪರರ ಉಪಕಾರಕೆ ಸಮರ್ಪಿಪ
ವೃಕ್ಷಗಳ ನೋಡಿ ಮನುಜ
ತನ್ನ ಪ್ರಾಣ ಧನ ಬುದ್ಧಿ ಶಕ್ತಿ
ಮನಸ್ಸುಗಳಿಂದ ಪರರಿಗೆ ಉಪಕಾರ
ಮಾಡಿದರೆ ಮಾತ್ರ ಜನ್ಮ ಸಾರ್ಥಕ
ಬಹುದೂರದ ಪ್ರಯಾಣದಿಂ
ದಣಿದು ಬಸವಳಿದ ಗೋಪಾಲಕರ
ಹಸಿವು ಬಾಯಾರಿಕೆ ನೀಗಲು
ಬ್ರಾಹ್ಮಣರು ಸ್ವರ್ಗಕಾಮಿಗಳಾಗಿ ನಡೆಸುತ್ತಿರ್ಪ
ಅಂಗೀರಸ ಯಾಗಶಾಲೆಯಲಿ
ಕೃಷ್ಣ ಬಲರಾಮರ ಕೋರಿಕೆಯಂತೆ
ಹಸಿವಿನಿಂದ ಪೀಡಿತರಾದ ಗೋಪುಕರಿಗೆ
ಆಹಾರ ನೀಡಿರೆಂಬ ಮಾತ ಕೇಳಿಯೂ ಕೇಳದಂತೆ
ಇದ್ದ ಬ್ರಾಹ್ಮಣರು ತಮ್ಮ ಅಹಂಕಾರ
ಮಮಕಾರಗಳಿಂದ ಮೆರೆಯುತ್ತ
ಸಮಸ್ತ ಯಜ್ಞಗಳಿಗೂ ಫಲಸ್ವರೂಪಿ
ಬ್ರಹ್ಮವಸ್ತು ಶ್ರೀಕೃಷ್ಣನೆಂದರಿಯದೆ
ಅಜ್ಞಾನಿಗಳಾದರು
ವಿಷಯ ತಿಳಿದ ಕೃಷ್ಣ ಆ ಬ್ರಾಹ್ಮಣರಿಗೆ ತಿಳಿಯದಂತೆ
ಬ್ರಾಹ್ಮಣ ಸ್ತ್ರೀಯರ ಬಳಿಗೈದು
ಕೃಷ್ಣ ಗೋಪಾಲಕರೊಂದಿಗೆ
ಎಲ್ಲರೂ ಅನ್ನಾರ್ಥಿಯಾಗಿರ್ಪರು
ಎಂದರುಹೆ
ಪರಮ ಸಂಭ್ರಮದಿ
ಚತುರ್ವಿಧ ಭೋಜ್ಯ ಪದಾರ್ಥಗಳೊಂದಿಗೆ
ಕೃಷ್ಣ ಬಲರಾಮರಿದ್ದೆಡೆಗೆ ಬಂದರು
ಶ್ರೀಕೃಷ್ಣನಾಮ ಕಿವಿಗೆ ಬಿದ್ದೊಡನೆ
ಎಲ್ಲ ಮರೆತು ಬಂದ ಹೆಂಗಳೆಯರ
ತಡೆಯಲಾರದಾದರು ಪುರುಷರು
ತಮ್ಮೆಡೆಗೆ ಬಂದ ಸ್ತ್ರೀ ಸಮೂಹವ ಸ್ವಾಗತಿಸಿ
ಭಕ್ತಿಯು ಫಲೋದ್ಧೇಶರಹಿತವಾಗಿರುವಾಗಲೇ
ಭಗವದ್ಧಪ್ರಿಯಕರ ಎನಿಸುವುದು ಎಂದರುಹಿ
ಸ್ತ್ರೀಯರ ಮನವೊಲಿಸಿ ಯಾಗಶಾಲೆಗೆ
ಕಳುಹಿಸಿದ ಶ್ರೀಕೃಷ್ಣ
ಯಜ್ಞಕಾರ್ಯದಲಿ ತೊಡಗಿದ ಬ್ರಾಹ್ಮಣರು
ಸಾಕ್ಷಾತ್ ಭಗವಂತನೇ ಕ್ರಷ್ಣನಾಗವತರಿಸಿದ
ವಿಚಾರ ಸ್ಮರಣೆಗೆ ಬಂದೊಡನೆಯೆ
ಅವನಿಚ್ಛೆಯ ಉಪೇಕ್ಷಿಸಿದ
ಅಜ್ಞತೆಗೆ ಪರಿತಪಿಸಿ
ತಮಗಿಂತಲೂ ನಿರ್ಮಲ ಭಕ್ತಿಯಿರಿಸಿದ
ತಮ್ಮ ಸ್ತ್ರೀಯರೇ ಯೋಗ್ಯರೆಂದೆನಿಸಿ
ತಮ್ಮೆಲ್ಲ ಅಪರಾಧಗಳ ಮನ್ನಿಸಲು
ಕೃಷ್ಣನ ಪ್ರಾರ್ಥಿಸಿದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44634

-ಎಂ. ಆರ್. ಆನಂದ, ಮೈಸೂರು


ಕಾವ್ಯಭಾಗವತ ಸುಂದರವಾಗಿ ಮೂಡಿ ಬರುತ್ತಿದೆ ಸಾರ್ ಪ್ರಣಾಮಗಳು..
Nice
ಅಹಂಕಾರಿ ಬ್ರಾಹ್ಮಣರಿಗೆ ಅವರ ಮಡದಿಯರ ಮೂಲಕವೇ ಬುದ್ಧಿ ಕಲಿಸಿದ ಕೃಷ್ಣ ಪರಮಾತ್ಮನ ಮಹಿಮೆ ಅಪಾರ!! ಚಂದದ ಕಾವ್ಯ ಭಾಗವತ ಖುಷಿ ಕೊಟ್ಟಿತು.