ದಶಮ ಸ್ಕಂದ – ಪೂರ್ವಾರ್ಧ – ಅಧ್ಯಾಯ – 5
ಕೃಷ್ಣ ಗೋಪಿಯರ ರಾಸಕ್ರೀಡೆ
ಶರದ್ ಋತುವಿನಲಿ ಗೋಪಿಯರೊಡನೆ
ರಮಿಸುವೆನೆಂದು ಕೃಷ್ಣ
ತಾ ನೀಡಿದ ವಾಗ್ಧಾನವ ಪೂರೈಸಲಿಚ್ಛಿಸಿ
ಅಂತರಿಕ್ಷದಲಿ ಚಂದ್ರನ ಪೂರ್ಣ ಪ್ರಕಾಶ
ಮೋಡದ ಮುಸುಕುಗಳಿಲ್ಲದೆ ಬೆಳಗುತಿರೆ
ಕೃಷ ಪರಮೋಲ್ಲಾಸದಿಂ ಕೊಳಲ ನುಡಿಸೆ
ವ್ರಜದ ಗೋಪಿಯರೆಲ್ಲ
ತಮ್ಮೆಲ್ಲರ ರಮಿಸಲು ಕೃಷ್ಣ ಬಂದಿಹನೆಂದು
ಸಡಗರದಿ
ತಮ್ಮೆಲ್ಲ ಕಾಯಕಗಳ ತೊರೆದು
ವೇಣುನಾದದೆಡೆಗೆ ಹೊರಟ ಪರಿ
ಅದ್ಭುತ ಅವರ್ಣನೀಯ
ಹಸುವ ಕೆಚ್ಚಲಿನಿಂದ ಹಾಲು ಕರೆಯುತ್ತಿರುವವರು
ಒಲೆಯ ಮೇಲೆ ಅಡುಗೆ ಪದಾರ್ಥವ ಬೇಯಲಿಟ್ಟವರು
ಮಕ್ಕಳಿಗೆ ಮೊಲೆಯೂಡುತ್ತಿದ್ದವರು
ಬಚ್ಚಲಲ್ಲಿಳಿದು ಮೈತೊಳೆಯುತ್ತಿದ್ದವರು
ಗಂಡಂದಿರೂ ಮಕ್ಕಳೂ ಬಂಧುಗಳೂ ಸೋದರರೂ
ಎಷ್ಟು ಬಗೆಯಲಿ ತಡೆದರೂ ಕೇಳದೆ
ಪ್ರೇಮೋನ್ಮಾದಪರವಶರಾಗಿ ಮೈಮೇಲಿನ
ವಸ್ತ್ರಾಭರಣಗಳು ಅಸ್ತವ್ಯಸ್ತವಾಗಿರುವುದರ
ಕಡೆಗೂ ಲೆಕ್ಕಿಸದೆ ಹೊರಟು
ಕೃಷ್ಣನ ಬಳಿಗೆ ಬಂದು ಸೇರಿದರು
ಶ್ರೀಕೃಷ್ಣ ಪರಬ್ರಹ್ಮನೆಂದರಿಯದವರು
ಕೇವಲ ಅಧಿಕಾಧಿಕ ಸ್ನೇಹದಲಿ
ಗುಂಪುಕಟ್ಟಿ ನಿಂತ ಗೋಪಾಂಗನೆಯರ
ಸ್ವಾಗತಿಸಿದಾ ಕೃಷ್ಣ ಗೋಪಿಯರಿಗೆ
ಗೃಹಿಣಿಯರು ತನ್ನ ಪ್ರೀತಿಸುವ
ಉಪಾಸಿಸುವ ಈ ಮಾರ್ಗ ಸರಿಯಲ್ಲವೆಂದು
ಭಕ್ತಿಭಾವವ ಬೆಳೆಸಿಕೊಂಡು ತಮ್ಮಲ್ಲೆ
ತೃಪ್ತರಾಗಬೇಕಲ್ಲದೆ ಮನೆಯಲ್ಲಿದ್ದುಕೊಂಡೇ
ಭಕ್ತಿ ಶ್ರದ್ಧೆಗಳ ಪ್ರಕಟಿಸುತ್ತಾ ಸ್ವಗೃಹಗಳಿಗೆ
ತೆರಳಬೇಕೆಂದ ಕೃಷ್ಣ ನುಡಿಗೆ
ನೊಂದ ಗೋಪಿಕೆಯರು
ಕೃಷ್ಣ ಸನ್ನಿಧಿಯ ಬಿಟ್ಟು ಅತಿತ್ತ
ನಾವು ಹೋಗಲಾರೆವು
ನಿನ್ನ ಸುಂದರ ವದನವ ಕಪೋಲಗಳ
ಅಮೃತ ರಸ ತೊಟ್ಟಿಕ್ಕಿಸುತ್ತಿರುವ ತುಟಿಗಳ
ನಿನ್ನ ಪ್ರಸನ್ನ ದೃಷ್ಟಿಯ ಮೀರಿ
ನಾವು ತೆರಳಲಾರೆವು
ನಿಷ್ಕರುಣೆಯಲಿ ನಮ್ಮ ಹೋಗಿರೆನ್ನಬೇಡೆಂದು
ಲಜ್ಜೆಯ ಎಲ್ಲೆಯ ಮೀರಿ ಯಾಚಿಸಿದ ಗೋಪಿಯರ
ದೈನ್ಯೋಕ್ತಿಗಳಿಗೆ ಕನಿಕರಿಸಿ ಅವರೊಡನೆ ಬೆರೆತು
ಸಂಚರಿಸತೊಡಗಿದನು
ತನ್ನ ಸುತ್ತಲೂ ಗೋಪನಾರಿಯರು
ನಕ್ಷತ್ರಗಳಂತಿರಲು ಅವರ ಮಧ್ಯದಲಿ ಬೆಳಗುತಿರ್ಪ
ಪೂರ್ಣಚಂದ್ರನ ತೆರೆದಿ ಮನೋಹರವೇಣುಗಾನದಿ
ಯಮುನೆಯ ತೀರದ ಮರಳುದಿಣ್ಣೆಯಲಿ
ಗೋಪಿಕೆಯರೊಡನೆ ಸರಸಸಲ್ಲಾಪದಿ
ಅವರೆಲ್ಲರೊಡನೆ ರಮಿಸುತ್ತಿರೆ
ಪುಳಕದಿಂ ಕೃಷ್ಣ ತಮಗೆ ಒಲಿದು
ವಶವಾಗಿಹನೆಂಬ ಭಾವದಿ ಬೀಗುತಿರೆ
ಕೃಷ್ಣ ಕ್ಷಣ ಮಾತ್ರದಿ ಅಂತಃರ್ಧಾನವಾಗೆ
ಗಜರಾಜನನ್ನಗಲಿನ ಹೆಣ್ಣಾನೆಗಳಂತೆ
ಗಾಬರಿಯಲಿ ದಿಕ್ಕು ತೋರದಂತಾದರು
ಹೀಗೆ ವಿರಹ ವ್ಯಥೆಯಿಂದ ಕಾಡಿನಲ್ಲೆಲ್ಲ
ಸುತ್ತಾಡಿ ಬಸವಳಿಯುತ್ತಿರ್ಪ
ಗೋಪಿಕೆಯರ ಮೇಲೆ ಕನಿಕರಿಸಿ ಕೃಷ್ಣ
ಪೀತಾಂಬರಧಾರಿಯಾಗಿ
ಮನೋಹರ ವನಮಾಲಿಕೆಯಲಿ
ತನ್ನ ಮೋಹನಾಕಾರದಿ
ಗೋಪಿಕೆಯರ ಮಧ್ಯೆ ಪ್ರತ್ಯಕ್ಷನಾಗೆ
ಎಲ್ಲರೂ
ಕಳೆದುಕೊಂಡ ನಿಧಿಯು ದೊರೆತಂತೆ
ಮನೋಹರ ಮೂರ್ತಿಯ ಕಣ್ದಣಿಯೆ ನೋಡುತ್ತಾ
ಅವನ ಹಸ್ತಗಳ ಪಿಡಿಯುತ್ತಾ
ಪಾದಗಳ ಬಾಚಿ ತಬ್ಬುತ್ತಾ
ವೇಣುಗಾನನಿರತ ಕೃಷ್ಣನೊಡನೆ
ವನದಲೆಲ್ಲಾ ವಿಹರಿಸಿ ದಣಿವಾಗೆ
ಯಮುನಾ ನದಿಯ ನಿರ್ಮಲ ಜಲದಿ
ಜಲಕ್ರೀಡೆಯಲಿ ತಾಪಶಾಂತಿ ಹೊಂದಿ
ಸುಖಿಸುತ್ತಿರೆ
ಅಂತರಿಕ್ಷದಲಿ ವಿಮಾನದಲಿ ಕುಳಿತ
ದೇವತೆಗಳೂ ದೇವನಾರಿಯರೂ
ಪರಮಪುರುಷನ ಮಾನುಷಲೀಲಾ
ವಿನೋದವ ಆಹ್ಲಾದಿಸಿ ಸುಖಿಸಿದರು
ಪರಸ್ತ್ರೀ ದರ್ಶನ ಸ್ಪರ್ಶನ ದೋಷಾವಹವಾದುದೆಂದು
ತಿಳಿದೂ ಕೃಷ್ಣ ಗೋಪಿಕೆಯರೊಡನೆ
ವಿಹರಿಸುವುದು ಕರ್ಮವಶರಲ್ಲದವರು
ಸ್ವೇಚ್ಛೆಯಿಂದ ಜನ್ಮವೆತ್ತಿದವರು
ಲೋಕನಿಷಿದ್ಧ ಕಾರ್ಯವಾಚರಿಸಿದಂತೆ
ಕಂಡರೂ ಅವರು ಸರ್ವವಿಧದಲಿ ನಿರ್ಲಿಪ್ತರು
ಕರ್ಮಬಂಧವ ಮೀರಿರುವ
ಲೋಕೋದ್ಧಾರಕ ಶಿವನು ಹಾಲಾಹಲವ ಕುಡಿದಂತೆ
ಕೃಷ್ಣನೂ ಕರ್ಮಶೇಷವಿಲ್ಲದೆ
ಎಲ್ಲ ಭಾವಗಳಿಂದಲೂ ನಿರ್ಲಿಪ್ತನು
ಗೋಪಸ್ತ್ರೀಯರ ಪತಿಗಳಾಗಲೀ
ಪುತ್ರರಾಗಲೀ ಮನೆಸೇರಿದವರ ನೋಡಿ
ಕುಪಿತರಾಗದೆ ತಮ್ಮ ಬಳಿ
ಮನೆಯಲ್ಲೇ ಇದ್ದರೆಂಬಂತೆ ಭಾವಿಸಿ
ಸಮಾಧಾನಿಗಳಾಗಿದ್ದರು
(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=44745

-ಎಂ. ಆರ್. ಆನಂದ, ಮೈಸೂರು

