ಪ್ರವಾಸ

ಚೆಲುವಿನ ತಾಣ ಮಲೆನಾಡುಅಗಸ್ತ್ಯರ ತಪೋಭೂಮಿ ಹರಿಹರಪುರ

Share Button

ನಾವು ಶೃಂಗೇರಿಗೆ ಭೇಟಿ ನೀಡಿದಾಗಲೆಲ್ಲಾ ಮಾರ್ಗಮಧ್ಯದಲ್ಲೇ ಸಿಗುವ ಹರಿಹರಪುರಕ್ಕೆ ಹಲವಾರು ವರ್ಷಗಳಿಂದ ತಪ್ಪದೇ ಭೇಟಿ ನೀಡುತ್ತಿದ್ದೆವು. ಆಗೆಲ್ಲಾ ದೇಗುಲದ ಮುಂದೆಯೇ ಕಾರು ನಿಲ್ಲಿಸಿ, ತುಂಗಾನದಿಯಲ್ಲಿ ಕೈ ಕಾಲು ಮುಖ ತೊಳೆದು, ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಮಾಡುತ್ತಿದ್ದೆವು. ಆದರೆ ದೇಗುಲದ ಜೀರ್ಣೋದ್ದಾರವಾದ ಬಳಿಕ ದೇಗುಲದ ಸಂಪೂರ್ಣ ಚಿತ್ರವೇ ಬದಲಾಗಿದೆ. ದೇಗುಲದ ಭವ್ಯವಾದ ರಾಜಗೋಪುರ, ಬೃಹತ್ತಾದ ಆಂಜನೇಯ ಮೂರ್ತಿ, ದೇಗುಲದೊಳಗೆ ವಿಸ್ತಾರವಾದ ಬಯಲು, ತಂಗಾಳಿಗೆ ತೂಗಾಡುತ್ತಿರುವ ಗಿಡಮರಗಳು, ಯಾಗಶಾಲೆ, ಸುಂದರವಾದ ಶಿಲ್ಪಕಲೆಯಿಂದ ಕಂಗೊಳಿಸುತ್ತಿರುವ ದೇಗುಲ ಹಾಗೆಯೇ ಒಂದು ಸುಸಜ್ಜಿತವಾದ ವಾಹನ ನಿಲುಗಡೆ, ಸೇವೆ ಮಾಡಲು ಬರುವ ಭಕ್ತರಿಗೆ ವಸತಿಗೃಹ, ಪ್ರಸಾದ ಮಂದಿರ, ಇಡೀ ದೇಗುಲವನ್ನು ವೀಕ್ಷಿಸಲು ಕಾಮಧೇನು ವಿಮಾನ ಇತ್ಯಾದಿ ಯಾತ್ರಾರ್ಥಿಗಳ ಮನ ಸೆಳೆಯುತ್ತವೆ.

ವಿಂಧ್ಯನ ಗರ್ವಭಂಗ ಮಾಡಲೆಂದು ಉತ್ತರದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಅಗಸ್ತ್ಯ ಮಹರ್ಷಿಗಳ ತಪೋಭೂಮಿ ಹರಿಹರಪುರ. ಇವರ ತಪಸ್ಸಿಗೆ ಒಲಿದ ಮಹಾದೇವನು ಲಕ್ಷ್ಮಿನರಸಿಂಹಸ್ವಾಮಿ ಅವತಾರದಲ್ಲಿ ದರ್ಶನವನ್ನು ನೀಡಿದ ಎಂಬ ಐತಿಹ್ಯವಿದೆ. ದಕ್ಷಪ್ರಜಾಪತಿಯು ಯಾಗ ಮಾಡಿದಾಗ, ಅವನ ಪೂಜೆಗೆ ಒಲಿದ ಮಹಾದೇವನು ಸ್ವಯಂಭು ಸೋಮೇಶ್ವರ ಲಿಂಗದ ರೂಪದಲ್ಲಿ ಪ್ರತ್ಯಕ್ಷನಾದ ಪುಣ್ಯಕ್ಷೇತ್ರ ಹರಿಹರಪುರ. ಲೋಕ ಸಂಚಾರ ಮಾಡುತ್ತಾ ಈ ಕ್ಷೇತ್ರಕ್ಕೆ ಆಗಮಿಸಿದ ಆದಿಗುರು ಶಂಕರರು ಶ್ರೀಚಕ್ರವನ್ನು ಸ್ಥಾಪಿಸಿದ ಪವಿತ್ರಕ್ಷೇತ್ರ ಹರಿಹರಪುರ. ಹಾಗಾಗಿ ಹರಿಹರಪುರವು ಅಗಸ್ತ್ಯರ ತಪೋಭೂಮಿಯಾಗಿದ್ದು, ದಕ್ಷನ ಯಾಗಭೂಮಿಯೂ ಆಗಿದ್ದು ಶಂಕರರ ಜ್ಞಾನಭೂಮಿಯೂ ಆಗಿರುವುದು ಈ ಕ್ಷೇತ್ರದ ವಿಶೇಷ. ಈ ಕ್ಷೇತ್ರವನ್ನು ಪಾವನಗೊಳಿಸಲು ತುಂಗೆಯು ಉತ್ತರಾಭಿಮುಖಯಾಗಿ ಹರಿಯುವುದು ಇನ್ನೊಂದು ವಿಶೇಷ. ಉತ್ತರಮುಖಿಯಾಗಿ ಹರಿಯುವ ನದಿಗಳ ದಡವು ಸಿದ್ದಪುರುಷರ, ಮಹರ್ಷಿಗಳ ಹಾಗೂ ಆಚಾರ್ಯರ ತಾಣವಾಗುವುದೆಂದು ಪುರಾಣಗಳು ಉಲ್ಲೇಖಿಸುತ್ತವೆ.

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಧಾರ್ಮಿಕ ಕ್ಷೇತ್ರ ಹರಿಹರಪುರ. ಶೃಂಗೇರಿಯಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ ಶ್ರೀಕ್ಷೇತ್ರವು ಹರಿ ಮತ್ತು ಹರನ ದೇಗುಲಗಳನ್ನೊಳಗೊಂಡಿರುವುದರಿಂದ ಹರಿಹರಪುರವೇಂಬ ಹೆಸರು ಬಂದಿದೆ. ಶಂಕರರು ಸ್ಥಾಪಿಸಿದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಮತ್ತು ಶ್ರೀ ಶಾರದಾ ಪರಮೇಶ್ವರಿ ಸನ್ನಿಧಿಗಳೂ ಇಲ್ಲಿ ಭಕ್ತರಿಗೆ ಆರಾಧ್ಯ ದೈವವಾಗಿವೆ. ದೇಗುಲದ ಮುಖ್ಯ ದ್ವಾರವು ಭವ್ಯವಾಗಿದ್ದು, ತಮಿಳುನಾಡಿನ ಬೃಹತ್ ದೇಗುಲಗಳನ್ನು ನೆನಪಿಸುತ್ತದೆ. ಮಠದ ಆವರಣದಲ್ಲಿರುವ ಇಷ್ಟಸಿದ್ಧಿ ಭಕ್ತ ಆಂಜನೇಯ ಸ್ವಾಮಿಯ ಬೃಹತ್ ವಿಗ್ರಹವು ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುತ್ತದೆ. ವಾಯುವ್ಯ ದಿಕ್ಕಿನೆಡೆ ಮುಖ ಮಾಡಿರುವ ಆಂಜನೇಯಸ್ವಾಮಿಯ ಸುತ್ತ ನಾಲ್ಕಾರು ಜನರು ಹನುಮಾನ್ ಚಾಲೀಸನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕುತ್ತಿದ್ದರು. ಮುಂದೆ ವಿಸ್ತಾರವಾದ ಬಯಲಿದ್ದು ಹಲವು ಬಗೆಯ ಮರ ಗಿಡಗಳನ್ನು ನೆಟ್ಟಿದ್ದರು. ರಂಗು ರಂಗಿನ ಹೂಗೊಂಚಲುಗಳನ್ನು ಹೊತ್ತು ಪರಿಮಳ ಬೀರುತ್ತಿದ್ದ ಗಿಡ ಬಳ್ಳಿಗಳು ಮನಸ್ಸಿಗೆ ಮುದ ನೀಡುತ್ತಿದ್ದವು. ಈ ದೇಗುಲಕ್ಕೆ ಎರಡು ಮಹಾದ್ವಾರಗಳಿದ್ದು, ಒಂದು ದ್ವಾರ ಪೂರ್ವ ದಿಕ್ಕಿನೆಡೆ ಮುಖ ಮಾಡಿದ್ದರೆ ಇನ್ನೊಂದು ಪಶ್ಚಿಮದೆಡೆ. ತುಂಗಾ ನದಿಯ ತಟದತ್ತ ಮುಖ ಮಾಡಿರುವ ಪೂರ್ವದ್ವಾರದ ಹೊಸ್ತಿಲಲ್ಲಿ ಶಾರದಾ ಪರಮೇಶ್ವರಿಯ ವಾಹನವಾದ ಎರಡು ದೊಡ್ಡ ದೊಡ್ಡ ಸಿಂಹಗಳು ನಮಗೆ ಸ್ವಾಗತ ಕೋರುತ್ತಾ ಕುಳಿತಿವೆ. ದೇಗುಲದೊಳಗೆ ಸಾಲು ಸಾಲು ಕೆತ್ತನೆ ಮಾಡಿದ್ದ ಕಂಬಗಳಿದ್ದು ದೇವಾನು ದೇವತೆಗಳ ವಿಗ್ರಹಗಳನ್ನು ಹೊತ್ತು ನಿಂತಿವೆ. ಮುಂದೆ ಎರಡು ಗರ್ಭಗುಡಿಗಳಿದ್ದು ಪಶ್ಚಿಮದಿಕ್ಕಿಗೆ ಮುಖ ಮಾಡಿರುವ ಸಾಲಂಕೃತವಾದ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ ವಿಗ್ರಹವಿದೆ. ನಾವು ಭಕ್ತಿಯಿಂದ ಮಂಗಳಾರತಿಯನ್ನು ಕಣ್ಣಿಗೊತ್ತಿಕೊಂಡು, ತೀರ್ಥ ಪ್ರಸಾದವನ್ನು ಸೇವಿಸಿ, ಸ್ವಾಮಿಯ ಕೆಳಗಿನ ಅಂತಸ್ತಿನಲ್ಲಿದ್ದ ಶ್ರೀ ಯಂತ್ರರಾಜ ವಜ್ರಸ್ತಂಭ ಸನ್ನಿಧಿ ನೋಡಲು ಹೊರಟೆವು. ಈ ಯಂತ್ರಸ್ತಂಭದ ಸುತ್ತಲೂ ದಶಾವತಾರದ ಚಿತ್ರಗಳು ಕಂಗೊಳಿಸುತ್ತಿದ್ದವು. ನಾವು ಒಂದೊಂದೇ ಚಿತ್ರವನ್ನು ನೋಡುತ್ತಾ ಅದರಡಿ ಬರೆಯಲಾಗಿದ್ದ ಹೆಸರುಗಳನ್ನು ಓದುತ್ತಾ ಪ್ರದಕ್ಷಿಣೆ ಹಾಕಿದೆವು – ಮತ್ಸ್ಯಾವತಾರ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಹಾಗೂ ಕಲಿ ಅವತಾರಗಳ ಮಧ್ಯೆ ಸಪ್ತ ಮಂಡಲಗಳ ಮೇಲೆ ನಿಂತಿತ್ತು ಮಹಾಯಂತ್ರ ಸ್ತಂಭ. ಈ ಸ್ತಂಭದ ನೆತ್ತಿಯ ಮೇಲಿನ ಬಿಂದುವಿನ ಮೇಲೆ ಲಕ್ಷ್ಮಿನರಸಿಂಹಸ್ವಾಮಿಯ ವಿಗ್ರಹ ರಾರಾಜಿಸುತ್ತಿತ್ತು.

ಜೀರ್ಣೋದ್ದಾರವಾದ ಪುರಾತನ ದೇಗುಲದ ಸುಂದರವಾದ ವಾಸ್ತು ಶಿಲ್ಪವನ್ನು ಕಾಣುತ್ತಾ, ಸಿದ್ದಪುರುಷರಾದ ಆದಿಗುರು ಶಂಕರರ ಮಹಿಮೆಗೆ ತಲೆದೂಗುತ್ತಾ ಯಾಗಶಾಲೆಗೆ ನಡೆದೆವು. ದಕ್ಷಬ್ರಹ್ಮನು ಯಾಗ ಮಾಡಿದ ಕ್ಷೇತ್ರದಲ್ಲಿ ಇಂದು ವೇದ ಪಠಣ ಮಾಡುತ್ತಾ ವಿಪ್ರರು ಯಾಗ ಮಾಡುತ್ತಿದ್ದರು. ಸಾಲಿಗ್ರಾಮದ ರೂಪದಲ್ಲಿ ಅವತರಿಸಿದ ಪರಶಿವನನ್ನು ಭಕ್ತಿಯಿಂದ ಪೂಜಿಸುತ್ತಾ ನಿಂತಿದ್ದರು ಭಕ್ತರು. ಈ ಶಾರದಾಪೀಠದ ಪ್ರಥಮ ಗುರುಗಳಾದ ಶ್ರೀ ಕೃಷ್ಣಯೋಗೇಂದ್ರರು ಆದಿಗುರು ಶಂಕರರಿಂದ ದೀಕ್ಷೆ ಪಡೆದವರು.

ಹರಿಹರಪುರದಿಂದ ಕೇವಲ ಎಂಟು ಕಿ.ಮೀ ದೂರದಲ್ಲಿರುವ ಶಕಟಾಪುರಕ್ಕೆ ಹೋಗಿ ಬನ್ನಿ ಎಂದು ನಮ್ಮ ಸ್ನೇಹಿತರಾದ ತುಳಸೀರಾಂ ಅವರು ಹೇಳಿದ್ದ ನೆನಪಾಗಿ ನಮ್ಮ ಕಾರನ್ನು ಶಕಟಾಪುರದತ್ತ ತಿರುಗಿಸಿದೆವು. ಗೂಗಲಣ್ಣ ಇದ್ದ ಮೇಲೆ ಇನ್ನೇನು? ಅವನು ತೋರಿದ ಹಾದಿಯಲ್ಲಿ ಸಾಗಿದೆವು. ಹಾಗೆಯೇ ಶಕಟಾಪುರದ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆಯನ್ನೂ ಗೂಗಲಣ್ಣ ಹೇಳುತ್ತಾ ಹೋದನು. ಈಗಂತೂ ಏ,ಐ, ಇರುವುದರಿಂದ ಎಲ್ಲಾ ವಿಷಯಗಳೂ ಸಂಕ್ಷಿಪ್ತವಾಗಿ ಮೊಬೈಲಿನಲ್ಲಿ ಪ್ರತಿಧ್ವನಿಸುವುವು – ‘ಈ ದೇಗುಲದ ಸಂಕೀರ್ಣವು ಪ್ರಶಾಂತವಾದ ತುಂಗಾನದಿಯ ದಡದಲ್ಲಿದೆ. ಸನಾತನ ಧರ್ಮದ ಪ್ರಚಾರಕ್ಕಾಗಿ ಶಂಕರರು ಭರತವರ್ಷದ ನಾಲ್ಕು ದಿಕ್ಕುಗಳಲ್ಲಿಯೂ ಮಹಾಸಂಸ್ಥಾನಗಳನ್ನು ಸ್ಥಾಪಿಸುತ್ತಾರೆ. ಉತ್ತರದಲ್ಲಿ ಬದರಿಕಾಶ್ರಮದಲ್ಲಿ ಜ್ಯೋತಿರ್ಮಠವನ್ನು ಸ್ಥಾಪಿಸಿ ತೋಟಕಾಚಾರ್ಯರನ್ನು ಪೀಠಾಧಿಪತಿಯಾಗಿ ಮಾಡುತ್ತಾರೆ. ಹದಿನಾಲ್ಕನೆಯ ಶತಮಾನದಲ್ಲಿ ಪರಕೀಯರ ಆಕ್ರಮಣಗಳು ಹೆಚ್ಚಾದಾಗ ಬದರಿಕಾಶ್ರಮದ ಯತಿಗಳಾದ ಸತ್ಯತೀರ್ಥ ಮಹಾಮುನಿಗಳು ಶಾಂತಿಯನ್ನು ಅರಸುತ್ತಾ ದಕ್ಷಿಣದೆಡೆಗೆ ಆಗಮಿಸುವರು. ತುಂಗಾನದಿಯ ತಟದಲ್ಲಿದ್ದ ಈ ಪ್ರಶಾಂತವಾದ ಗ್ರಾಮ ಬಂಡೀಗಢದಲ್ಲಿ ನೆಲಸಲು ನಿಶ್ಚಯಿಸುವರು. ಆಗ ದಕ್ಷಿಣದಲ್ಲಿ ಆಳ್ವಿಕೆ ಮಾಡುತ್ತಿದ್ದ ವಿಜಯನಗರದ ಅರಸರು ಮಠವನ್ನು ಸ್ಥಾಪಿಸಲು ನೆರವಾಗುತ್ತಾರೆ ಹಾಗೂ ಸಾಕಷ್ಟು ಜಮೀನನ್ನು ಮಠಕ್ಕೆ ಉಂಬಳಿಯನ್ನಾಗಿ ನೀಡುತ್ತಾರೆ.’

ಹಾಗಿದ್ದಲ್ಲಿ ಶಕಟಾಪುರ ಎಂಬ ಹೆಸರು ಬಂದಿದ್ದಾರೂ ಹೇಗೆ? ಹಿಂದೆ ಶಕಟ ಮಹರ್ಷಿಗಳು ಇಲ್ಲಿ ದೀರ್ಘಕಾಲ ತಪಸ್ಸು ಮಾಡಿ ಮೋಕ್ಷ ಪಡೆದ ಪುಣ್ಯಕ್ಷೇತ್ರ ಇದು. ಹಾಗಾಗಿ ಶಕಟಾಪುರವೆಂಬ ಹೆಸರು ಬಂದಿದೆ. ಈ ದೇಗುಲದ ಮಹಾದ್ವಾರವು ಭವ್ಯವಾಗಿದ್ದು ಯಾತ್ರಿಗಳ ಮನ ಸೆಳೆಯುವಂತಿದೆ. ದೇಗುಲದ ಒಳಭಾಗದಲ್ಲಿ ವಿಶಾಲವಾದ ಬಯಲು ಇದ್ದು ಹಸಿರಿನಿಂದ ಕಂಗೊಳಿಸುತ್ತಿದೆ. ಬಲಭಾಗದಲ್ಲಿ ಬೃಹತ್ ಗಣಪತಿಯ ವಿಗ್ರಹ ಹಾಗೂ ಎಡಭಾಗದಲ್ಲಿ ಕಾರ್ತಿಕೇಯನ ವಿಗ್ರಹವಿದೆ. ಈ ವಿಗ್ರಹಗಳ ಕೆಳಭಾಗದಲ್ಲಿ ಶಂಕರರು ತಮ್ಮ ಶಿಷ್ಯರೊಡನೆ ಕುಳಿತಿರುವ ಮೂರ್ತಿಗಳೂ ಇವೆ. ಸುಂದರವಾದ ಕೆತ್ತನೆಗಳಿಂದ ಕೂಡಿದ ದೇಗುಲಗಳು ಇದ್ದು ಬದರಿಯಿಂದ ಆಚಾರ್ಯರು ತಮ್ಮ ಕೈಲಿ ಹಿಡಿದು ತಂದ ಲಕ್ಷ್ಮಿನರಸಿಂಹಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದಾರೆ. ಜೊತೆಯಲ್ಲಿ ಸಂತಾನವೇಣುಗೋಪಾಲಸ್ವಾಮಿಯ ದೇಗುಲ ಹಾಗೂ ವಿದ್ಯಾ ರಾಜರಾಜೇಶ್ವರಿಯ ದೇಗುಲಗಳೂ ಇವೆ. ವೇಣುಗೋಪಾಲಸ್ವಾಮಿಯ ವಿಗ್ರಹವು ಅತ್ಯಂತ ಆಕರ್ಷಕವಾಗಿದ್ದು ಒಂದು ಕೈಲಿ ಕೊಳಲು ಹಾಗೂ ಮತ್ತೊಂದು ಕೈಲಿ ಬೆಣ್ಣೆಯನ್ನು ಹಿಡಿದ ಕೃಷ್ಣವ ವಿಗ್ರಹ. ಹಲವು ಭಕ್ತರು ಸಂತಾನಪ್ರಾಪ್ತಿಗಾಗಿ ಇಲಿಗೆ ಬಂದು ಸ್ವಾಮಿಗೆ ಸೇವೆ ಸಲ್ಲಿಸುವರು. ದೇಗುಲದ ಪಕ್ಕದಲ್ಲಿ ಜ್ಯೋತಿರ್ಮಠದ ಮಹಾಸಂಸ್ಥಾನವೂ ಇದ್ದು ಇದನ್ನು ‘ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನ – ಶಕಟಪುರಂ ವಿದ್ಯಾಪೀಠಂ’ ಎಂದು ಕರೆಯಲಾಗುತ್ತದೆ.

ಶಕಟಪುರಂ ವಿದ್ಯಾಪೀಠಂ

ಯಾತ್ರಿಗಳು ಬಂದಾಗ ತಂಗಲು ಅತಿಥಿಗೃಹ ಇದ್ದು, ಅನ್ನಪೂರ್ಣ ಎಂಬ ಪ್ರಸಾದ ನಿಲಯವೂ ಇದೆ. ಮಠದಲ್ಲಿ ವೇದಪಾಠಶಾಲೆ, ಯಾಗಶಾಲೆ ಹಾಗೂ ಗೋಶಾಲೆಗಳೂ ಇವೆ. ದಕ್ಷಿಣದಲ್ಲಿರುವ ದೇಗುಲಗಳ ಭವ್ಯವಾದ ರಾಜಗೋಪುರಗಳು ಹಾಗೂ ದೇಗುಲದ ಒಳಭಾಗದಲ್ಲಿರುವ ಕಂಬಗಳ ಮೇಲಿನ ಕೆತ್ತನೆಗಳೂ ಅಂದಿನ ಶಿಲ್ಪಿಗಳ ಕಲಾನೈಪುಣ್ಯತೆಯನ್ನು ಬಿಂಬಿಸುತ್ತವೆ. ಅಂದು ದೇಗುಲಗಳು ಕೇವಲ ಪೂಜಾಸ್ಥಾನವಾಗಿರದೆ, ವಿದ್ಯಾರ್ಥಿಗಳಿಗೆ ವೇದೋಪನಿಷತ್ತುಗಳನ್ನು ಕಲಿಸುವ ಪಾಠಶಾಲೆಯೂ ಆಗಿತ್ತು. ವಿಶೇಷ ದಿನಗಳಲ್ಲಿ ಸಂಗೀತ, ನೃತ್ಯವನ್ನು ಪ್ರದರ್ಶಿಸುವ ಕಲಾಮಂದಿರವೂ ಆಗಿತ್ತು. ಹಬ್ಬ ಹರಿದಿನಗಳಲ್ಲಿ ಹೋಮ, ಯಜ್ಞಗಳನ್ನು ಮಾಡುವ ಯಾಗಭೂಮಿಯೂ ಆಗಿತ್ತು. ಹಿಂದಿನ ದಿನಗಳಲ್ಲಿ ದೇಗುಲಗಳಿಗೆ ವಿಶೇಷ ಪ್ರಾಮುಖ್ಯತೆ ಇತ್ತು. ಹಾಗಾಗಿ ಅಂದಿನ ದೊರೆಗಳು ದೇಗುಲಗಳ ನಿರ್ವಹಣೆಗೆಂದೇ ಸಾಕಷ್ಟು ಹೊಲಗದ್ದೆಗಳನ್ನೂ, ಧನ ಕನಕಗಳನ್ನೂ ಉಂಬಳಿಯನ್ನಾಗಿ ನೀಡುತ್ತಿದ್ದರು. ದೇಗುಲಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆಲ್ಲಾ ಶಾಂತಿ ನೆಮ್ಮದಿ ನೀಡುವ ತಾಣಗಳು ಮರಳಿ ಹಿಂದಿನ ರಾಜವೈಭವ ಪಡೆಯಲಿ ಎಂದು ಪ್ರಾರ್ಥಿಸುತ್ತಾ ಮನೆಗೆ ಹಿಂತಿರುಗಿದೆವು.

ಡಾ.ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *