(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ದಿನ 11
ಬೆಳಗಿನ ಕಾರ್ಯಕ್ರಮಗಳ ನಂತರ ಆ ದಿನ ನಮ್ಮ ಭೇಟಿ ಗ್ರಿ೦ಡಲ್ ವಾಲ್ ಟರ್ಮಿನಲ್ ನಲ್ಲಿರುವ ಯುರೋಪ್ ನ ಮುಕುಟವೆಂದೇ ಹೆಸರಾದ ಟಾಪ್ ಆಫ್ ಯುರೋಪ್,ಜು೦ಗ್ಫ್ರಾ ಜುಕ್ (Jungfraujoch). ಜೂರಿಚ್ ನಗರದಿಂದ 150 ಕಿಲೋ ಮೀಟರ್ ದೂರ. ಸಮುದ್ರ ಮಟ್ಟದಿಂದ 3454 ಮೀಟರ್ ಎತ್ತರದಲ್ಲಿ 22 ಕಿ ಮಿ ಹರಡಿಕೊಂಡಿರುವ ಹಿಮದ ಹಾಸಿಗೆ. ವರ್ಷದ 365 ದಿನವೂ ಪ್ರವಾಸಿಗರಿಗೆ ತೆರೆದಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ.
ವಿವಿಧ ಋತುಗಳಲ್ಲಿ ವಿವಿಧ ಮನರಂಜನೆಗೆ ಅವಕಾಶ ಇದೆ. ಗ್ರಿ೦ಡೆಲ್ವಾಲ್ಡ್ ಟರ್ಮಿನಲ್ ನಿಂದ ಕೇಬಲ್ ಕಾರ್ ನಲ್ಲಿ ಹದಿನೈದು ನಿಮಿಷ ಪ್ರಯಾಣಿಸಿ ಐಗರ್ ಸ್ಟೇಷನ್ ತಲುಪುತ್ತೇವೆ. ಅಲ್ಲಿಂದ ರೈಲಿನಲ್ಲಿ 45 ನಿಮಿಷಗಳ ಕಾಲ 9:30 ಕಿ.ಮೀ ಸುರಂಗ ಮಾರ್ಗದಲ್ಲಿ ಚಲಿಸಿ, ಜು೦ಗ್ಫ್ರಾ ರೈಲು ನಿಲ್ದಾಣ ತಲುಪುತ್ತೇವೆ. ಅಲ್ಲಿ೦ದ ಲಿಫ್ಟ್ ನಲ್ಲಿ 3500 ಮೀಟರ್ ಎತ್ತರದವರೆಗೂ ತಲುಪಿದರೆ, ನಮ್ಮೆದುರು ತೆರೆದುಕೊಳ್ಳುವುದೇ ಸ್ಫಿ೦ಕ್ಸ್ಟೆರೆಸ್. ಕಣ್ಣಿಗೆ ಕಾಣುವವರೆಗೂ ಹಿಮ. 22 ಕಿ ಮಿ ನ ಹಿಮದ ಹಾಸಿಗೆ. ಎಲ್ಲಾ ರೀತಿಯ ಹಿಮ ಕ್ರೀಡಾ ಚಟುವಟಿಕೆಗಳಿಗೆ ಅವಕಾಶವಿದೆ. ಅಲ್ಲಿ೦ದ ಧ್ವನಿ ಮತ್ತು ಬೆಳಕಿನ ಆಲ್ಪೈನ್ ಸೆನ್ಸೇಷನ್, ಐಸ್ ಪ್ಯಾಲೇಸ್, (ಹಿಮ ಮಹಲ್,) , ಸಂಶೋಧನಾ ಕೇಂದ್ರ ಇವೆಲ್ಲವುಗಳನ್ನು ಕಣ್ತುಂಬಿಕೊಂಡು, ಫೋಟೋ ವಿಡಿಯೋಗಳನ್ನು ತುಂಬಿಸಿಕೊಂಡು ಬಂದ ಮಾರ್ಗದಲ್ಲೇ ಲಿಫ್ಟ್, ರೈಲು ಮತ್ತು ಕೇಬಲ್ ಕಾರು ಗಳ ಮುಖಾಂತರ ಕೆಳಗೆ ಗ್ರಿ೦ಡೆಲ್ವಾಲ್ಡ್ ಬಂದಾಗ ಸಂಜೆಯಾಗಿತ್ತು.
1896 ರಲ್ಲಿ ಪ್ರಾರಂಭವಾದ ರೈಲ್ವೇ ಕಾಮಗಾರಿ 1912ರಲ್ಲಿ ಸಾರ್ವಜನಿಕರಿಗೆ ಮುಕ್ತವಾಯಿತು. ಈ ವೇಳೆಯಲ್ಲಿ ನೂರಾರು ಜನ ತಮ್ಮ ಪ್ರಾಣ ಕಳೆದುಕೊ೦ಡಿರುವುದನ್ನು ಕೇಳಿ ಸೌ೦ದರ್ಯದ ಹಿ೦ದಿರುವ ಕ್ರೌರ್ಯತೆಯ ನೆನೆದು ಭಯವಾಯಿತು.
ಭಾಗ – 7
ಲಿಟ್ಲ್ – ಲಿಚೆನ್ಸ್ಟೀನ್ (Liechtenstein)
ದಿನ 12
ಬೆಳಗಿನ ಕಾರ್ಯಕ್ರಮಗಳ ನಂತರ ನಮ್ಮ ಪ್ರಯಾಣ ಆಸ್ಟ್ರಿಯಾ -ಸ್ವಿಟ್ಜರ್ಲ್ಯಾಂಡ್ ದೇಶಗಳ ಮಧ್ಯೆ ಇರುವ ಪುಟಾಣಿ ಸ್ವತಂತ್ರ ಸಾಮ್ರಾಜ್ಯ ಲಿಚೆನ್ಸ್ಟೀನ್ ರಾಜಧಾನಿ ವಾಡೂಜ್ ಗೆ (Vaduz). ಪ್ರಪಂಚದಲ್ಲಿ 6ನೇ ಅತಿ ಚಿಕ್ಕ ದೇಶ / ರಾಜ್ಯ. ಆದರೆ ಪ್ರಪ೦ಚದಲ್ಲೇ ಎರಡನೇ ಅತಿ ಶ್ರೀಮ೦ತ ದೇಶ. ತಟಸ್ಥ ನೀತಿ. ಸೈನ್ಯವನ್ನೇ ಹೊ೦ದಿರದ ದೇಶ. ಸುತ್ತಲೂ ಕರಾವಳಿಯೇ ಇರದ ದೇಶಗಳಿ೦ದ ಸುತ್ತುವರೆದಿದೆ. ಜೂರಿಚ್ ನಗರದಿ೦ದ ಸುಮಾರು 100 ಕಿ ಮಿ ದೂರದಲ್ಲಿದೆ. ಇದರ ವಿಸ್ತೀರ್ಣ ಸುಮಾರು 160 ಚದರ ಕಿಲೋಮೀಟರ್, ಜನ ಸಂಖ್ಯೆ 40000. ಅತಿ ಉದ್ದನೆಯ ರಸ್ತೆ 25 ಕಿ ಮಿ. ಜರ್ಮನ್ ಭಾಷೆ ಮಾತನಾಡುವ ಇವರು ವ೦ಶ ಪಾರ೦ಪರ್ಯ ವಾಗಿ ಬ೦ದ ರಾಜನ ಆಡಳಿತಕ್ಕೆ ಒಳ ಪಟ್ಟಿದ್ದಾರೆ. ಅವನ ಅರಮನೆ ಗುಡ್ಡದ ಬಂಡೆಯ ಮೇಲಿದೆ. ಅದೊಂದು ಪ್ರೇಕ್ಷಣೀಯ ಸ್ಥಳ. ಇದೊಂದು ಯೂರೋಪ್ ನ್ ಅತ್ಯ೦ತ ಸು೦ದರ ಸ್ವಚ್ಚ ಹಳ್ಳಿ ಎನ್ನಬಹುದು. ಇಲ್ಲಿರುವುದು ಗಿಡ, ಮರ, ಉದ್ಯಾನವನ, ಆಕರ್ಷಕ ಕಟ್ಟಡಗಳು, ಸ್ಟೇಡಿಯಂ, ಸ್ಕೂಲು, ಆಸ್ಪತ್ರೆ . ಎಲ್ಲಾ ಸ್ವಚ್ಛ ಸುಂದರ.
ನಮ್ಮ ಬಸ್ ನಿಂತ ಸ್ಥಳದಿಂದ ನಗರದ ಕೇಂದ್ರ ಭಾಗಕ್ಕೆ ನಡೆದು ಒಂದು ಉದ್ಯಾನವನದ ಮುಖಾಂತರ ಹಾದು ಹೋಗುವಾಗ, ನಮ್ಮ ದೇಶದ ಬಾಲಿವುಡ್ ನ ಶ್ರೇಷ್ಠ ನಿರ್ದೇಶಕ ಯಶ್ ಚೋಪ್ರಾ ರವರ ಕಂಚಿನ ಪ್ರತಿಮೆ ಜೊತೆಗೆ ಮೂವಿ ಕ್ಯಾಮೆರಾ ಮತ್ತು ಅವರ ಐಕಾನಿಕ್ ಟೋಪಿ ನೋಡಿ ನಮಗೆ ಆಶ್ಚರ್ಯವಾಯಿತು. ಆಗ ನಮ್ಮ ಗೈಡ್ ಈ ಸುಂದರ ತಾಣದಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣ ಮಾಡಿ ಈ ಪ್ರದೇಶವನ್ನು ಜಗತ್ತಿಗೆ ಪರಿಚಯಿಸಿ ಯುರೋಪ್ ನಲ್ಲಿ ಇದೊಂದು ಪ್ರವಾಸಿ ತಾಣವಾಗಿ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರಣರಾಗಿದ್ದರಿಂದ, ಅವರ ನೆನಪಿಗೆ, ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ತಿಳಿಸಿದರು.
ಆಗ ಅವರ ಬಗ್ಗೆ ನಮಗೂ ಹೆಮ್ಮೆ ಎನಿಸಿ ಆ ಪ್ರತಿಮೆಯ ಜೊತೆ ಫೋಟೋಗಳನ್ನು ತೆಗೆದುಕೊಂಡು, ಅಲ್ಲಿಂದ ನಗರದ ಕೇಂದ್ರ ಭಾಗಕ್ಕೆ ಬ೦ದೆವು. ಅಲ್ಲಿ ಕೆಲವು ಕೆಫೆ, ರೆಸ್ಟೋರೆ೦ಟ್ ಗಳಿದ್ದವು. ಜೊತೆಗೆ ನಮ್ಮ ಬೆಂಗಳೂರಿನಲ್ಲಿ 80 ರ ದಶಕದಲ್ಲಿ ಇದ್ದಂತಹ ರಸ್ತೆ ರೈಲು ಮಾದರಿಯ, ಕಬ್ಬನ್ ಪಾರ್ಕ್ ನ ಪುಟಾಣಿ ರೈಲು ತರಹದ, ಒಂದೆರಡು ವಾಹನಗಳಿದ್ದವು. ನಿಗದಿತ ಟಿಕೆಟುಗಳನ್ನು ಪಡೆದು ನಮ್ಮ ಗೈಡ್ ನಮ್ಮನ್ನೆಲ್ಲಾ ಅದರಲ್ಲಿ ಕೂರಿಸಿ ನಗರ ಪ್ರದಕ್ಷಿಣೆಗೆ ಕಳುಹಿಸಿದರು. ಸುಮಾರು 40 ನಿಮಿಷಗಳಲ್ಲಿ ನಗರದ ವಿವಿಧ ಭಾಗಗಳು ಬೀದಿಗಳು ಕಟ್ಟಡಗಳು, ರಸ್ತೆಗಳು, ಸ್ಕೂಲ್, ಹಾಸ್ಪಿಟಲ್, ಸ್ಟೇಡಿಯಂ ಇತರೆ ಕಚೇರಿಗಳನ್ನು ವೀಕ್ಷಿಸಿದೆವು ಅಲ್ಲಿಂದ ಮಧ್ಯಾಹ್ನದ ಊಟಕ್ಕೆ ಭಾರತೀಯ ರೆಸ್ಟೋರೆಂಟ್ ಗೆ ಹೋಗಿ ಮಧ್ಯಾಹ್ನದ ಊಟ ಮುಗಿಸಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44784
–ಟಿ.ವಿ.ಬಿ.ರಾಜನ್ , ಬೆಂಗಳೂರು



