ಪ್ರವಾಸ

ಮೋಜು ಮಸ್ತಿಯ ಕೇಂದ್ರ ‘ಗೆಂಟಿಂಗ್ ಹೈಲ್ಯಾಂಡ್.’ ಮಲೇಷ್ಯಾ – ಹೆಜ್ಜೆ 8

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಲೇಷ್ಯಾದ ‘ಲಾಸ್ ವೆಗಾಸ್’ ಎಂದೇ ಹೆಸರಾಗಿರುವ ಮೋಜು ಮಸ್ತಿಯ ಕೇಂದ್ರ ‘ಗೆಂಟಿಂಗ್ ಹೈಲ್ಯಾಂಡ್.’ ಇದು ಸಮುದ್ರ ಮಟ್ಟದಿಂದ ಸುಮಾರು 1,800 ಮೀಟರ್ ಎತ್ತರದಲ್ಲಿದ್ದು ಪ್ರವಾಸಿಗರ ಅಚ್ಚುಮೆಚ್ಚಿನ ಗಿರಿಧಾಮವಾಗಿದೆ. ಇಂದು ಕಾಂಕ್ರೀಟ್ ಜಂಗಲ್‌ಗಳಾಗಿರುವ ನಗರಗಳಿಂದ ಬಿಡುಗಡೆ ಬೇಕೇ – ಹಾಗಿದ್ದಲ್ಲಿ ಬನ್ನಿ ಈ ಹಚ್ಚ ಹಸಿರಿನ ಮಧ್ಯೆ ಇರುವ ಗೆಂಟಿಗ್ ಹೈಲ್ಯಾಂಡಿಗೆ. ಬೇಸಿಗೆಯ ಬಿರುಬಿಸಿಲಿಗೆ ಕಂಗಾಲಾಗಿದ್ದೀರಾ – ಹಾಗಿದ್ದಲ್ಲಿ ಬನ್ನಿ ಈ ತಂಪು ತಂಪಾದ ಹವಾಮಾನ ಇರುವ ಈ ತಾಣಕ್ಕೆ. ಪ್ರಶಾಂತವಾದ ಬೌದ್ಧ ಮಂದಿರಕ್ಕೆ ಭೇಟಿ ನೀಡಬೇಕೇ – ಹಾಗಿದ್ದಲ್ಲಿ ಬನ್ನಿ ಚಿನ್ ಸ್ವೀ ಗುಹಾ ದೇಗುಲಕ್ಕೆ, ದೇವತೆಗಳ ಹಾಗೆ ಮೋಡಗಳ ಮೇಲೆ ವಿಹರಿಸಬೇಕೇ – ಬನ್ನಿ ಇಲ್ಲಿ ನಿರ್ಮಿಸಲಾಗಿರುವ ‘ಫಸ್ಟ್ ವರ್ಲ್ಡ್ ಹೋಟೆಲ್‌ಗೆ.’ ಈ ಬಹುಮಹಡಿ ಕಟ್ಟಡದಲ್ಲಿರುವಾಗ ಆಗಸದಲ್ಲಿ ತೇಲುವ ಮೋಡಗಳಿಗಿಂತ ಮೇಲೇರಬಹುದು. ಜೂಜಾಡಬೇಕೇ, ಬನ್ನಿ ಇಲ್ಲಿಗೆ ಹಲವು ಬಗೆಯ ಕ್ಯಾಸಿನೋಗಳು ಇವೆ. ಪೋಲೀಸರು ಬಂಧಿಸುವರೆಂಬ ಭಯ ಬೇಡ. ಇದು ಕಾನೂನಿನ ರಕ್ಷೆಯಲ್ಲಿರುವ ಕ್ಯಾಸಿನೋ. ಶಾಪಿಂಗ್ ಮಾಡುವ ಹುಚ್ಚು ಇದೆಯೇ – ವಿಶ್ವದ ಎಲ್ಲಾ ಪ್ರಮುಖ ಬ್ರಾಂಡ್‌ಗಳ ವಸ್ತುಗಳೂ ಇಲ್ಲಿ ಲಭ್ಯ. ನೀವು ತಿಂಡಿಪೋತರೇ – ಹಾಗಿದ್ದಲ್ಲಿ ಬನ್ನಿ ಬಗೆಬಗೆಯ ರುಚಿರುಚಿಯಾದ ಭಕ್ಷ್ಯಗಳು ಇಲ್ಲಿ ಲಭ್ಯ. ಸಾಹಸಮಯಕ್ರೀಡೆಗಳು ಬೇಕೇ – ಹಾಗಿದ್ದಲ್ಲಿ ಬನ್ನಿ, ಹಲವು ಬಗೆಯ ಕ್ರೀಡೆಗಳು ನಿಮಗಾಗಿ ಎದುರು ನೋಡುತ್ತಿವೆ. ಒಳಾಂಗಣ ಕ್ರೀಡೆಗಳ ಜೊತೆ ಜೊತೆಗೇ ಹೊರಾಂಗಣ ಕ್ರೀಡೆಗಳು ಪ್ರವಾಸಿಗರಿಗಾಗಿ ಸಿದ್ದವಾಗಿವೆ.

ಹೀಗಿದೆ ಎಲ್ಲಾ ಅಭಿರುಚಿಯುಳ್ಳವರನ್ನೂ ಕೈಬೀಸಿ ಕರೆಯುತ್ತಿರುವ ಗೆಂಟಿಗ್ ಹೈಲ್ಯಾಂಡ್. ಈ ಸ್ಥಳದ ಸ್ಥಾಪಕ ಮಹಾಶಯ ಯಾರು ಅಂತೀರಾ – ಇವರೇ ‘ಲಿಮ್ ಗೋ ಟೋಂಗ್’ ಮೊದಲಿಗೆ ಅವರು ಈ ಯೋಜನೆಯನ್ನು ಸರ್ಕಾರದ ಮುಂದಿಟ್ಟಾಗ ಅವರೆಲ್ಲಾ ಇವನೊಬ್ಬ ಶತಮೂರ್ಖ ಎಂದು ಲೇವಡಿ ಮಾಡಿದ್ದರು. ಸುಮಾರು ಆರು ಸಾವಿರ ಅಡಿಗಳ ಮೇಲಿರುವ ಈ ಕಡಿದಾದ ಬೆಟ್ಟಗುಡ್ಡಗಳ ಮೇಲೆ ಒಂದು ಮನರಂಜನಾ ಕೇಂದ್ರವನ್ನು ನಿರ್ಮಿಸಲು ಸಾಧ್ಯವೇ? ಇಷ್ಟು ಹಣ ಎಲ್ಲಿಂದ ತರುವುದು? ಇಷ್ಟು ದೂರ ಯಾರು ಬಂದಾರು? ಇದು ಖಂಡಿತವಾಗಿ ನಷ್ಟ ತರುವ ಯೋಜನೆ, ಎಂಬೆಲ್ಲಾ ಅನುಮಾನಗಳು ಎಲ್ಲರಲ್ಲಿ ಸಹಜವಾಗಿ ಮೂಡಿದ್ದವು. ಆದರೆ ಕನಸುಗಾರನಾಗಿದ್ದ ಲಿಮ್ ತನ್ನ ಯೋಜನೆಯನ್ನು ಕಾರ್ಯಗೊತಗೊಳಿಸಲು ಧೃಢ ಸಂಕಲ್ಪಮಾಡಿದ್ದ. ಹಂತ ಹಂತವಾಗಿ ಈ ಕಟ್ಟಡಗಳನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುವುದು.

ಕೌಲಾಲಂಪುರ್‌ನಿಂದ ಕೇವಲ ಒಂದು ಕಿ,ಮೀ ದೂರದಲ್ಲಿರುವ ಗೆಂಟಿಂಗ್ ಹೈಲ್ಯಾಂಡ್ ತಲುಪಲು ‘ಅವಾನಾ ಸ್ಕೈವೇ’ ಎಂಬ ಕೇಬಲ್ ಕಾರ್ ಪ್ರವಾಸಿಗರನ್ನು ಕೊಂಡೊಯ್ಯಲು ಸಿದ್ದ. ನಾವು ನಮ್ಮ ಪ್ರವಾಸಿ ತಂಡದೊಂದಿಗೆ ಈ ಸ್ಥಳವನ್ನು ನೋಡಲು ನಮ್ಮ ಪ್ರವಾಸಿ ತಂಡದ ಮ್ಯಾನೇಜರ್‌ನೊಂದಿಗೆ ಉತ್ಸುಕರಾಗಿ ಹೊರಟೆವು. ಅವರು ನಮಗಾಗಿ ಆನ್‌ಲೈನ್‌ನಲ್ಲಿ ಕೊಂಡ ಟಿಕೆಟ್ ತೋರಿಸಿ ಕೇಬಲ್ ಕಾರ್ ಹತ್ತಿ ಕುಳಿತೆವು. ಸುತ್ತಲೂ ಗಾಜು ಹಾಕಿದ್ದ ಈ ಕಾರ್‌ನಲ್ಲಿ ಪಯಣಿಸುವಾಗ ಕಂಡ ಹಚ್ಚ ಹಸಿರು ಗಿಡ ಮರಗಳನ್ನು ಹೊದ್ದ ಬೆಟ್ಟಗುಡ್ಡಗಳು ನಮಗೆ ಮೋಡಿ ಹಾಕಿದ್ದವು. ಮೇಲೆರುತ್ತಾ ಇದ್ದಹಾಗೆ ನಗರಗಳು, ಅಲ್ಲಿ ಓಡಾಡುತ್ತಿದ್ದ ಜನರು, ಅವರ ವಾಹನಗಳು ಪುಟ್ಟ ಪುಟ್ಟದಾಗುತ್ತಿದ್ದವು. ಅರ್ಧ ದಾರಿಯಲ್ಲಿ ಕೇಬಲ್ ಕಾರಿನಿಂದ ಇಳಿದು ಚಿನ್ ಸ್ವೀ ಗುಹಾ ದೇಗುಲವನ್ನು ನೋಡಲು ಹೊರಟೆವು. ಅಬ್ಬಾ ಎಂತಹ ಪ್ರಶಾಂತವಾಧ ಸ್ಥಳ. ಈ ದೇಗುಲವನ್ನು ನಿರ್ಮಿಸಿದ್ದು ‘ಲಿಮ್’. ಸಮುದ್ರ ಮಟ್ಟದಿಂದ ಸುಮಾರು 4,600 ಅಡಿ ಎತ್ತರದಲ್ಲಿ 28 ಎಕರೆ ವಿಸ್ತೀರ್ಣ ಹೊಂದಿರುವ ಈ ಗುಹಾ ದೇವಾಲಯದ ಮುಂದೆ ನಿಂತು ಭಕ್ತಿಭಾವದಿಂದ ತಲೆಬಾಗಿದೆವು. ಕಡಿದಾದ ಬೆಟ್ಟದ ಮೇಲೆ ಆಧುನಿಕ ಯಂತ್ರಗಳ ಸಹಾಯವಿಲ್ಲದೆ ಕೈಗಳಿಂದಲೇ ಇದನ್ನು ನಿರ್ಮಿಸಲು ಸುಮಾರು ಹದಿನೆಂಟು ವರ್ಷಗಳೇ ಬೇಕಾಯಿತಂತೆ. ಇಲ್ಲಿರುವ ಒಂಭತ್ತು ಅಂತಸ್ತಿನ ಪಗೋಡ ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ. ಈ ಪಗೋಡದಲ್ಲಿ ಸಾವಿರಾರು ‘ಆಶೀರ್ವಾದದ ದೀಪಗಳು’ ಭಕ್ತರ ಸಂಕಷ್ಟಗಳನ್ನು ಪರಿಹರಿಸಲೆಂದೇ ಉರಿಯುತ್ತಿವೆಯಂತೆ. ಪಗೋಡದ ಮೇಲೇರಿದರೆ ಸುತ್ತಮುತ್ತಲಿನ ಪರ್ವತಗಳ ರಮ್ಯವಾದ ನೋಟ ಕಾಣಬಹುದು. ಈ ಪಗೋಡಾದ ಮುಂದೆ ಹದಿನೈದು ಮೀಟರ್ ಎತ್ತರದ ಧ್ಯಾನಸ್ಥನಾಗಿ ಕುಳಿತಿರುವ ಬೃಹತ್ ಬುದ್ದನ ಮೂರ್ತಿ ಇದೆ. ಸತ್ಯ ಅಹಿಂಸೆಯನ್ನು ಜಗತ್ತಿಗೆ ಬೋಧಿಸಿದ ಬುದ್ಧನ ಮೂರ್ತಿಗೆ ಶಿರಬಾಗಿ ವಂದಿಸಿದೆವು. ಹಾಗೆಯೇ ಮತ್ತೊಂದು ಮೂರ್ತಿಯೂ ಅಲ್ಲಿದ್ದು, ಅದು ದಯೆಯ ದೇವತೆಯಾದ ‘ಗುವಾನ್ ಯಿನ್’ನ ಪ್ರತಿಮೆಯೆಂದು ತಿಳಿದು ಬಂತು. ಇಂದು ಅಸೂಯೆ, ದ್ವೇಷ, ಹಿಂಸೆಯ ಮಧ್ಯೆ ಬದುಕುತ್ತಿರುವ ನಮಗೆಲ್ಲಾ ದಾರಿ ತೋರು ಗುರುವೇ ಎಂದು ಪ್ರಾರ್ಥಿಸಿ ಮುಂದೆ ಹೋದೆವು. ಮುಂದೆ ಇದ್ದ ಫಲಕ ನಮಗೆ ಗಾಬರಿ ಹುಟ್ಟಿಸಿತ್ತು – ಅದೇ ನರಕದ ಹತ್ತು ಹಂತಗಳು. ಮರಣದ ನಂತರ ಮಾನವನ ಪಾಪ ಪುಣ್ಯದ ಲೆಕ್ಕ ಇಡುವ ಚಿತ್ರಗುಪ್ತ, ಅವನಿಗೆ ನಿಗದಿಯಾದ ಶಿಕ್ಷೆಗಳು ನಮ್ಮಲ್ಲಿ ಭಯ ಹುಟ್ಟಿಸುವಂತಿದ್ದವು. ಈ ಹತ್ತು ಹಂತಗಳನ್ನು ದಾಟಿದ ಮೇಲೆ ಪರಿಶುದ್ಧನಾದ ಮಾನವನ ಮುಂದೆ ಇತ್ತು ಬೆಳಕಿನ ಹಾದಿ ಅಂದರೆ ಮೋಕ್ಷದ ಹಾದಿಯನ್ನು ತೋರುವ ಹಾದಿ. ಅಲ್ಲಿದ್ದ ಗುಹೆಯಲ್ಲಿ ಕಪ್ಪು ಶಿಲೆಯಿಂದ ನಿರ್ಮಿಸಲಾದ ‘ಚಿನ್ ಸ್ವೀ’ ವಿಗ್ರಹವನ್ನು ನೋಡಲು ಮರೆಯದಿರಿ. ಚೈನಾದಿಂದ ಬಂದ ಈ ಸಂತನಿಗೆ ಹಲವು ಸಿದ್ದಿಗಳು ಲಭಿಸಿದ್ದವು ಎಂಬ ನಂಬಿಕೆ ಇದೆ. ಅವರಿಗೆ ದುಷ್ಟಶಕ್ತಿಗಳನ್ನು ನಾಶ ಮಾಡುವ ಹಾಗೂ ಮಳೆ ಬರಿಸುವ ಸಿದ್ದಿಗಳು ಕರಗತವಾಗಿದ್ದವು. ಹಾಗಾಗಿ ಬೌದ್ದರು ಇಲ್ಲಿಗೆ ಬಂದು ತಮ್ಮ ಸಂಕಷ್ಟಗಳನ್ನು ಪರಿಹರಿಸು ತಂದೆ ಎಂದು ಬೇಡುತ್ತಾರೆ.

ಬೌದ್ದ ದೇಗುಲವನ್ನು ನೋಡಿದವರು ಮತ್ತೆ ಅವಾನಾ ಸ್ಕೈವೇ ಕೇಬಲ್ ಕಾರನ್ನು ಹತ್ತಿ ಗೆಂಟಿಂಗ್ ಹೈಲ್ಯಾಂಡಿನ ಮನರಂಜನಾ ಕೇಂದ್ರವಾದ ಕ್ಯಾಸಿನೋಗಳು, ಮಾಲ್‌ಗಳು ಮತ್ತು ರೆಸಾರ್ಟ್ಗಳನ್ನು ಕಣ್ತುಂಬಿಕೊಳ್ಳಲು ಹೊರಟೆವು. ಸರ್ಕಾರವೇ ಪ್ರೋತ್ಸಾಹಿಸುತ್ತಿರುವ ಈ ಜೂಜುಅಡ್ಡೆ ನನ್ನಲ್ಲಿ ಕುತೂಹಲ ಮೂಡಿಸಿತ್ತು. ಹಲವು ಸರ್ಕಾರಗಳು ‘ಸಿಗರೇಟ್ ಸೇದುವುದು ಅಪಾಯಕಾರಿ’ ಎಂದು ಹೇಳುತ್ತಲೇ ಸಿನೆಮಾ ತಾರೆಯರು ಸಿಗರೇಟ್ ಸೇದುವುದನ್ನು ಆಕರ್ಷಕವಾಗಿ ತೋರಿಸುವ ದೃಶ್ಯಗಳನ್ನು ನೋಡಿದ್ದೀರಾ ಅಲ್ಲವೇ? ಸಾರಾಯಿ ಕುಡಿಯುವುದು ಬದುಕನ್ನೇ ನಾಶಪಡಿಸುವುದು ಎಂದು ಘೋಷಿಸುತ್ತಲೇ ಸಿನೆಮಾ ಹೀರೋಗಳು ಆಲ್ಕೊಹಾಲ್ ಕುಡಿಯುವ ದೃಶ್ಯಗಳನ್ನು ತೋರಿಸುವುದನ್ನೂ ಕಂಡಿದ್ದೇವೆ ಅಲ್ಲವೇ? ಇನ್ನು ಆನ್‌ಲೈನ್ ಜೂಜಾಟ ಜನರನ್ನು ಬೀದಿಗೆ ತಂದು ನಿಲ್ಲಿಸುವುದು ಎಂದು ಗೊತ್ತಿದ್ದರೂ ಕ್ರಿಕೆಟ್ ಹೀರೋಗಳು ಮನಸೆಳೆಯುವ ಜಾಹೀರಾತುಗಳನ್ನು ಕೊಡುವುದನ್ನು ನೋಡಿದ್ದೇವೆ ಅಲ್ಲವೇ? ಹಾಗಿದ್ದಲ್ಲಿ ಸರ್ಕಾರಕ್ಕೆ ಬೇಕಾಗಿರುವುದು ಏನು? ಹಣ. ಹಣ ಮತ್ತು ಹಣ ಅಷ್ಟೇ.

ಗೆಂಟಿಗ್ ಹೈಲ್ಯಾಂಡಿಗೆ ಬರುವವರ ಜನ ಸಂಖ್ಯೆ ಎಷ್ಟು ಗೊತ್ತೆ? ಸುಮಾರು ಮೂವತ್ತು ಮಿಲಿಯನ್ ಜನರು ದೇಶ ವಿದೇಶಗಳಿಂದ ಜೂಜಾಡಲು ಇಲ್ಲಿಗೆ ಬರುತ್ತಾರೆ ಎಂದರೆ ನಂಬುವಿರಾ? ಕೇಬಲ್ ಕಾರಿನಿಂದ ಇಳಿದವರು ಅಲ್ಲಿದ್ದ ಝಗಮಗಿಸುವ ಹೊಟೇಲ್, ರೆಸಾರ್ಟ್, ಹಾಗೂ ಮಾಲ್‌ಗಳನ್ನು ಕಂಡು ದಿಗ್ಭ್ರಮೆಗೊಂಡೆವು. ಎಲ್ಲಾ ಕಂಪೆನಿಯ ಬಟ್ಟೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳು ಮುಂತಾದ ವಸ್ತುಗಳು ಇಲ್ಲಿ ಲಭ್ಯ, ಅದೂ ಐವತ್ತು ಅರವತ್ತು ಪರ್‌ಸೆಂಟ್ ರಿಯಾಯತಿ ದರದಲ್ಲಿ. ನಾವು ಎಲ್ಲವನ್ನೂ ವಿಂಡೋ ಶಾಪಿಂಗ್ ಮಾಡುತ್ತಾ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಪ್ರಖ್ಯಾತ ಹೊಟೇಲ್ ನೋಡಲು ಹೊರಟೆವು. ಆ ಹೊಟೇಲ್‌ನ ಹೆಸರು ‘ಫಸ್ಟ್ ವರ್ಲ್ಡ್ ಹೊಟೇಲ್’. ಈ ಹೊಟೇಲ್‌ನಲ್ಲಿ ಎರಡು ಎತ್ತರವಾದ ಗೋಪುರಗಳಿದ್ದು ಹಳದಿ, ನೀಲಿ, ಹಸಿರು ಬಣ್ಣಗಳಿಂದ ಅಲಂಕೃತವಾಗಿದೆ. ಇಲ್ಲಿ 7,351 ಕೊಠಡಿಗಳು ಇದ್ದು, ಸದಾ ಪ್ರವಾಸಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಪ್ರವಾಸಿಗರು ಇಲ್ಲಿ ತಿಂಗಳುಗಳ ಮೊದಲೇ ಕೊಠಡಿಗಳನ್ನು ಕಾದಿರಿಸುತ್ತಾರೆ. ಇಲ್ಲಿ ಒಳಾಂಗಣ ಥೀಮ್ ಪಾರ್ಕ್ ಇದೆ ಹಾಗೆಯೇ ಹೊರಾಂಗಣ ಥೀಮ್ ಪಾರ್ಕ್ ಸಹ ಇದ್ದು ಹತ್ತು ಹಲವು ಬಗೆಯ ಸವಾರಿಗಳು ಇವೆ. ರೋಲರ್ ಕೋಸ್ಟರ್‌ಗಳು, ಕುದುರೆ ಸವಾರಿ, ರಂಕಲ್ ರಾಟೆ ಇನ್ನೂ ಬಗೆ ಬಗೆಯ ಸಾಹಸಮಯ ಕ್ರೀಡೆಗಳು ಇವೆ. ನಾವು ಹದಿಹರೆಯದವರ ಹುಚ್ಚು ಸಾಹಸಗಳನ್ನು ನೋಡುತ್ತಾ ಕ್ಯಾಸಿನೋಗಳ ಬಳಿ ಬಂದು ನಿಂತೆವು. ನಮ್ಮ ಮ್ಯಾನೇಜರ್ ಒಂದು ಗೇಮ್ ಮುಂದೆ ಕುಳಿತು ‘ಐದು ರಿಂಗಿಟ್’ ಹಾಕಿದರು, ಅದು ಕ್ಷಣಾರ್ಧದಲ್ಲಿ ಹತ್ತು, ಇಪ್ಪತ್ತು, ನಲವತ್ತು ರಿಂಗಿಂಟ್ ಆಗಿ ಹೆಚ್ಚಾಗುತ್ತಾ ಹೋಯಿತು. ನೂರು ರಿಂಗಿಟ್ ಆದಾಗ ನಾವು ಒಕ್ಕೊರಲಿನಿಂದ ‘ಸಾಕು, ನಿಲ್ಲಿಸಿ ಹೆಬ್ಬಾರ್’ ಎಂದು ಕೂಗಿದೆವು. ಅವರು ಆಟ ನಿಲ್ಲಿಸಿ, ಇಪ್ಪತ್ತು ಪಟ್ಟು ಹೆಚ್ಚಾದ ಹಣವನ್ನು ತೆಗೆದುಕೊಂಡು ಬಂದರು. ಆ ಕ್ಯಾಸಿನೋ ಮೂಲೆಯೊಂದರಲ್ಲಿ ಹೆಣ್ಣು ಮಗಳೊಬ್ಬಳು ಚಿಂತಾಕ್ರಾಂತಳಾಗಿ ತಲೆ ಬಗ್ಗಿಸಿ ಕುಳಿತಿದ್ದಳು. ನಾನು ಮೆಲ್ಲನೆ ಅವಳ ಬಳಿ ಹೋಗಿ ನಿಂತೆ, ಅವಳು ನನ್ನ ಕೈ ಹಿಡಿದು, ‘ನನ್ನ ಬಳಿ ಇದ್ದ ಎಲ್ಲಾ ಹಣವನ್ನು ಜೂಜಾಡಿ ಸೋತೆ. ಈಗ ಹೊಟೇಲ್‌ನ ಬಾಡಿಗೆ ಕಟ್ಟಲೂ ನನ್ನ ಬಳಿ ಹಣವಿಲ್ಲ’ ಎಂದು ಗೋಳಾಡಿದಳು. ನಾನು ಈ ಮಾತುಗಳನ್ನು ಕೇಳಿ ದಂಗಾಗಿ ನಿಂತೆ. ಇವರು ಶ್ರೀಮಂತರು, ಜೂಜಾಡುವುದೇ ಇವರ ಹವ್ಯಾಸ, ಇಂತಹ ದುಶ್ಚಟಗಳಿಗೆ ತುತ್ತಾಗಿ ತಮ್ಮ ಬಾಳನ್ನೇ ಹಾಳು ಮಾಡಿಕೊಳ್ಳುತ್ತಾರೆ. ಗೆಂಟಿಂಗ್ ಹೈಲ್ಯಾಂಡ್‌ನ ಕರಾಳ ಮುಖವನ್ನು ಕಂಡು ಗಾಬರಿಯಾದೆವು. ಗೆಂಟಿಂಗ್ ಹೈಲ್ಯಾಂಡಿನ ಥಳುಕು ಬಳುಕಿಗೆ ಬೆರಗಾದೆವು, ಒಂದೆಡೆ ಐದು ರಿಂಗಿಟ್ ಹಾಕಿ ಕೆಲವೇ ನಿಮಿಷಗಳಲ್ಲಿ ನೂರು ರಿಂಗಿಟ್‌ಗಳನ್ನು ಗೆದ್ದ ಹೆಬ್ಬಾರ್ ರವರು, ಮತ್ತೊಂದೆಡೆ ಸಾವಿರಾರು ರಿಂಗಿಟ್‌ಗಳನ್ನು ಕಳೆದುಕೊಂಡು ಗೋಳಿಡುತ್ತಿದ್ದ ವಿದೇಶಿ ಮಹಿಳೆ.

ಈ ಮನರಂಜನಾ ಕೇಂದ್ರವಾದ ಗೆಂಟಿಂಗ್ ಹೈಲ್ಯಾಂಡ್ ತನ್ನ ವಿಶ್ವರೂಪವನ್ನು ನಮ್ಮ ಮುಂದೆ ಪ್ರದರ್ಶಿಸಿತ್ತು. ರಮಣೀಯವಾದ ಪ್ರಕೃತಿಯ ಮಧ್ಯೆ ಎದ್ದು ನಿಂತ ಈ ಮೋಜಿನ ಪ್ರವಾಸಿ ತಾಣದಲ್ಲಿ ಬೌದ್ದ ದೇಗುಲವೂ ಇತ್ತು, ಹದಿಹರೆಯದವರಿಗಾಗಿ ಸಾಹಸಮಯ ಕ್ರೀಡೆಗಳೂ ಇದ್ದವು. ಜೊತೆಗೇ ಜೂಜಾಡಲು ಕ್ಯಾಸಿನೋಗಳೂ ಇದ್ದವು. ಆ ನನಗೆ ನೆನಪಾಗಿದ್ದು, ‘ಎಂತಾ ಮರುಳಯ್ಯಾ ಇದು ಎಂತಾ ಮರುಳೋ’ ಎಂಬ ಸಿನೆಮಾ ಗೀತೆಯ ಸಾಲುಗಳು.

ಮುಂದಿನ ನಮ್ಮ ಪಯಣ ಮಲೇಷ್ಯಾದ ಆಡಳಿತಾತ್ಮಕ ರಾಜಧಾನಿ ‘ಪುತ್ರಜಯ’ದ ಕಡೆಗೆ. ಹಲವಾರು ವರ್ಷ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮಲೇಷ್ಯಾ ಅಗಸ್ಟ್ 31, 1957 ರಲ್ಲಿ ಸ್ವಾತಂತ್ರ್ಯ ಪಡೆಯಿತು. ಅಂದು ಕೌಲಾಲಂಪರ್‌ನ ಹೃದಯಭಾಗದಲ್ಲಿರುವ ಮರ್ಡೇಕಾ ಸ್ಕ್ವೇರ್ ನಲ್ಲಿ ನೂರು ಅಡಿ ಎತ್ತರವಿರುವ ಧ್ವಜ ಸ್ತಂಭದ ಮೇಲೆ ಧ್ವಜವನ್ನು ಹಾರಿಸಲಾಯಿತು. ಕೌಲಾಲಂಪರ್‌ನಲ್ಲಿ ಜನದಟ್ಟಣೆ ಹೆಚ್ಚಾದಾಗ ಸರ್ಕಾರಿ ಕಛೇರಿಗಳನ್ನು ಪುತ್ರಜಯಕ್ಕೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಕೌಲಾಲಂಪರ್‌ನಿಂದ ಸುಮಾರು 25 ಕಿ,ಮೀ ದೂರದಲ್ಲಿದ್ದ ರಬ್ಬರ್ ಮತ್ತು ತಾಳೆಮರದ ಪ್ಲಾಂಟೇಷನ್ ಆಗಿದ್ದ ಪುತ್ರಜಯ ಸೂಕ್ತವಾದ ಸ್ಥಳ ಎಂದು ಆಯ್ಕೆ ಮಾಡಲಾಯಿತು. ಈ ನಗರವನ್ನು ಪಾರಂಪರಿಕ ಶೈಲಿಯ ಜೊತೆಜೊತೆಗೇ ಆಧುನಿಕ ಸೌಲಭ್ಯಗಳನ್ನೂ ಗಮನದಲ್ಲಿಟ್ಟುಕೊಂಡೇ ಕಟ್ಟಲಾಗಿದೆ. ಒಂದು ದೊಡ್ಡದಾದ ಸರೋವರವನ್ನು ಕಟ್ಟಿ ಅದರ ಸುತ್ತಲೂ ಸುಂದರವಾದ ಮಸೀದಿ, ಪ್ರಧಾನ ಮಂತ್ರಿಗಳ ಕಛೇರಿ, ವವಾಸನ್ ಸೇತುವೆ, ಉದ್ಯಾನವನ ಹಾಗೂ ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸರೋವರದಲ್ಲಿ ದೋಣಿ ವಿಹಾರದ ಸೌಲಭ್ಯವೂ ಇದೆ.

ಈ ಸರ್ಕಾರಿ ಕಛೇರಿಗಳ ಮಧ್ಯೆ ಇದ್ದ ಬಯಲಿನಲ್ಲಿ ‘ಐ ಲವ್ ಪುತ್ರಜಯ’ ಎಂಬ ಫಲಕ ಇತ್ತು. ಅದರ ಮುಂದೆ ನಿಂತು ನಮ್ಮ ಪ್ರವಾಸಿ ತಂಡದ ಫೋಟೋ ಕ್ಲಿಕ್ಕಿಸಲಾಯಿತು. ಈ ಉದ್ಯಾನ ನಗರಿಯಲ್ಲಿ ನಿರ್ಮಾಣವಾದ ನಗರದ ಅಂದ ಚೆಂದಕ್ಕೆ ಮಾರು ಹೋಗದವರಾರು? ಸರೋವರದ ಒಂದು ಕಡೆ ಗುಲಾಬಿ ವರ್ಣದ ಗ್ರಾನೈಟ್ ಕಲ್ಲುಗಳಿಂದ ಇಸ್ಲಾಮಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಾಣವಾದ ಆಕರ್ಷಕ ‘ಪುತ್ರ ಮಸೀದಿ’ ಇದ್ದರೆ ಅದರ ಪಕ್ಕದಲ್ಲಿಯೇ ಭವ್ಯವಾಧ ಹಸಿರು ವರ್ಣದ ಗುಮ್ಮಟವುಳ್ಳ ಪ್ರಧಾನಿ ಮಂತ್ರಿಗಳ ಕಛೇರಿಯೂ ಇದೆ. ನಾವು ಮಸೀದಿಯ ಒಳಗೆ ಹೋಗಲು ಸಿದ್ದರಾದೆವು. ಆಗ ನಮ್ಮ ಗೈಡ್ ನಮಗೆಲ್ಲಾ ಮಸೀದಿಯ ಹೊರಭಾಗದ ಕೊಠಡಿಯಲ್ಲಿದ್ದ ಬುರ್ಖಾ ಧರಿಸಲು ಸೂಚಿಸಿದಳು. ಒಂದು ಕ್ಷಣ ತಬ್ಬಿಬ್ಬಾಯಿತು, ಇರಲಿ ಇಸ್ಲಾಂ ಧರ್ಮದ ರೀತಿ ರಿವಾಜುಗಳನ್ನು ಪಾಲನೆ ಮಾಡಲು, ನಾವೆಲ್ಲಾ ಬುರ್ಖಾ ಧರಿಸಿ ಮಸೀದಿಯೊಳಗೆ ಹೋದೆವು. ಅಂದು ಶುಕ್ರವಾರವಾಗಿದ್ದುದರಿಂದ ಹೆಚ್ಚು ಜನ ನಮಾಜು ಮಾಡಲು ಸೇರಿದ್ದರು. ನಾವೆಲ್ಲಾ ‘ದೇವನೊಬ್ಬ ನಾಮ ಹಲವು’ ಎಂಬ ನುಡಿಗಟ್ಟನ್ನು ನೆನಪಿಸಿಕೊಳ್ಳುತ್ತಾ ಹೊರನಡೆದೆವು. ದೂರದಿಂದ ನೋಡಿದರೆ ಈ ಮಸೀದಿಯು ಸರೋವರದ ನೀರಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ.

ಪುತ್ರ ಮಸೀದಿ

ಪುತ್ರ ಪಕ್ಕದಲ್ಲಿಯೇ ಇದ್ದ ‘ಪೆರ್ಡಾನ ಪುತ್ರ’ ವೀಕ್ಷಿಸಲು ಹೊರಟೆವು. ಆದರೆ ಈ ಭವ್ಯವಾಧ ಪ್ರಧಾನ ಮಂತ್ರಿಗಳ ಕಛೇರಿ ಪ್ರವೇಶಿಸಲು ನಮಗೆ ಅನುಮತಿ ಇರಲಿಲ್ಲ. ಈ ಕಟ್ಟಡವನ್ನು ಮಲಯ್ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮುಂದೆ ಇದ್ದ ಮಾನವ ನಿರ್ಮಿತ ‘ಪುತ್ರಜಯ’ ಸರೋವರದಲ್ಲಿ ಒಂದು ಸುತ್ತು ದೋಣಿವಿಹಾರ ನಡೆಸಿದಾಗ ಉತ್ಸಾಹ ಉಲ್ಲಾಸ ಮೂಡಿತ್ತು. ಈ ಸರೋವರದ ಸುತ್ತ ಇದ್ದ ಆಧುನಿಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣವಾದ ಬಹು ಮಹಡಿ ಕಟ್ಟಡಗಳನ್ನು ನೋಡುತ್ತಾ ಸಾಗಿದೆವು. ಈ ಕೆರೆಯ ಮೇಲಿದ್ದ ‘ಸೇರಿ ವವಾಸನ್ ಸೇತುವೆ’ ಯನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ ಎನ್ನಬಹುದು. ಈ ಸರೋವರದ ಬಳಿಯಿದ್ದ ‘ಪುತ್ರಜಯ ಬಟಾನಿಕಲ್ ಗಾರ್ಡನ್’ ನೋಡಲು ಹೋದೆವು. ಅತ್ಯಂತ ದೊಡ್ಡ ಉದ್ಯಾನವನವಾದ ಇಲ್ಲಿ ವೈವಿಧ್ಯಮಯ ಗಿಡ ಮರಗಳನ್ನು ನೆಟ್ಟಿದ್ದಾರೆ. ಈ ನಗರದಲ್ಲಿ ಕಂಡು ಬರುವ ಸ್ವಚ್ಛತೆ, ಅಗಲವಾದ ರಸ್ತೆಗಳು, ಮರಗಿಡಗಳನ್ನು ನೋಡುತ್ತಾ ಸಾಗಿದಾಗ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನ ನೆನಪಾಯಿತು. ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಉದ್ಯೋಗ ನಗರಿಯಾಗಿರುವುದರಿಂದ ಜನಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿರುವ ನಮ್ಮ ಆಡಳಿತ ಕಛೇರಿಗಳನ್ನೂ ಬೇರೆಡೆಗೆ ವರ್ಗಾಯಿಸಿದರೆ ಜನರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಬಹುದು ಅಲ್ಲವೇ?

ಮಲೇಷ್ಯಾ ದೇಶವು ಭಾರತೀಯರಿಗೆ ಅತ್ಯಂತ ಆಪ್ತವಾದ ಮತ್ತು ಸ್ಮರಣೀಯವಾದ ಅನುಭವವನ್ನು ನೀಡುತ್ತದೆ. ಆಧುನಿಕ ನಗರ ಜೀವನ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯದ ಸಮಾಗಮವನ್ನು ಇಲ್ಲಿ ಕಾಣಬಹದು. ಗಗನಚುಂಬಿ ಗೋಪುರಗಳನ್ನು ನೋಡುವುದೇ ಒಂದು ಅದ್ಭುತ ಅನುಭವ, ಆಡಳಿತಾತ್ಮಕ ರಾಜಧಾನಿಯಾದ ಪುತ್ರಜಯ ನಗರದ ವಿನ್ಯಾಸ, ಸುಂದರವಾದ ಸೇತುವೆಗಳು, ಗುಲಾಬಿ ಬಣ್ಣದ ಪುತ್ರ ಮಸೀದಿ ವಾಸ್ತು ಶಿಲ್ಪಕ್ಕೆ ಹೆಸರಾಗಿದೆ. ಸುಣ್ಣದ ಕಲ್ಲಿನ ಗುಹೆಗಳಾದ ಬಟು ಗುಹೆಗಳ ಮುಂದೆ ಎದ್ದು ನಿಂತಿರುವ ಮುರುಗನ್ ಪ್ರತಿಮೆ ಮೈಮನದಲ್ಲಿ ಭಕ್ತಿಯ ತರಂಗಗಳನ್ನು ಮೂಡಿಸುವುದು. ಗೆಂಟಿಂಗ್ ಹೈಲ್ಯಾಂಡಿನಲ್ಲಿರುವ ಥೀಮ್ ಪಾರ್ಕ್ ಗಳು, ಕ್ಯಾಸಿನೋಗಳು ಮತ್ತು ತಂಪಾದ ವಾತಾವರಣ ಮನಸ್ಸಿಗೆ ಮುದ ನೀಡುತ್ತವೆ.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45256

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *