ಲಹರಿ

ಮತ್ತೆ ಬೆಸೆದ ಬಾಂಧವ್ಯ

Share Button

ಅದೊಂದು ಪುಟ್ಟ ಘಟನೆ. ಹಾಗೆ ನೋಡಿದ್ರೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ ಅದರಲ್ಲಿ. ಆದರೂ ಬಹಳಷ್ಟು ಇದೆ ಆ ಘಟನೆಯೊಳಗೆ. ಮನಸುಗಳು ಬೆಸೆದ ಅನುಬಂಧದ ಪರಿ, ಬಾಲ್ಯದ ಒಡನಾಟದ ವಾತ್ಸಲ್ಯದ ಝರಿ, ಮರೆತಿದ್ದ ಮಮತೆ ಹೇಗೆ ಅರಳಿತು ಮತ್ತೆ ಚಿಗುರಿ ಎಲ್ಲವೂ ಇದೆ ಏನೂ ಅಲ್ಲದ ಒಂದು ಸಣ್ಣ ಘಟನೆಯೊಳಗೆ. ಅವಳು ಆಪ್ತೆ ಅನ್ನುವುದೇ ಎಲ್ಲೋ ಮನಸಿನ ಮೂಲೆಯೊಳಗೆ ಮರೆಯಾಗಿತ್ತು.

ಒಂದು ಮನೆ, ಅಲ್ಲೊಂದು ಸಮಾರಂಭ. ಅದಕ್ಕೆ ಅವಳು ಬಂದಿದ್ದಳು. ಸ್ವೀಟ್ ಪ್ಯಾಕ್ ಹಿಡ್ಕೊಂಡ್ ಯಾರನ್ನೋ ಹುಡುಕುತ್ತ ಹೊರಟವಳ ಮುಂದೆ ಅಚಾನಕ್ ಆಗಿ ನಾನು ಬಂದಾಗ ಆ ಕಣ್ಗಳಲ್ಲಿ ಮಿಂಚಿನಂತೆ ಮೊದಲು ಸುಳಿದಾಡಿದ್ದು ವಾತ್ಸಲ್ಯ ಭರಿತ ಪ್ರೀತಿ. ಬೇರೆಲ್ಲ ಮರೆತಂತೆ ಅವಳು ತಂದಿದ್ದ ಎರಡು ಸ್ವೀಟ್ ಡಬ್ಬದಲ್ಲಿ ಒಂದನ್ನು ನನ್ನ ಕೈಗಿತ್ತು “ತಗೋ ನಿನಗೋಸ್ಕರನೇ ಇದನ್ನು ತಗೊಂಡು ಬಂದೆ, ನೀನು ಸಿಗಬಹುದು ಅನ್ನುವ ಕಲ್ಪನೆ ಇರಲಿಲ್ಲ ಹಾಗಾಗಿ ಹೆಚ್ಚಿಗೆ ಏನೂ ತರಲಾಗಲಿಲ್ಲ” ಅಂದಳು. ನನಗೋ ಇಷ್ಟವಾಗಿದ್ದು ಆ ಸ್ವೀಟ್ ಗಿಂತ ನನಗೋಸ್ಕರ ಅವಳಲ್ಲಿದ್ದ ಆ ಆತ್ಮೀಯ ಭಾವ, ತಂಗಿ ಅನ್ನುವ ವಾತ್ಸಲ್ಯ, “ಇವಳಿಗೆ ಕೊಡಬೇಕು” ಅಂತ ಅವಳಲ್ಲಿ ಮೂಡಿದ ಭಾವ. ಈ ಒಂದು ಘಟನೆ ಸಂಬಂಧಗಳನ್ನು ಬೆಸೆದ ರೀತಿ ಅದ್ಭುತ. ನಾವೆಲ್ಲಾ ಒಂದಲ್ಲ ಒಂದು ರೀತಿ ಏನೇ ಇದ್ದರೂ, ಎಷ್ಟೇ ಇದ್ದರೂ ಅತೃಪ್ತರು. ಯಾರಿಂದ, ಏನು, ಎಷ್ಟು ಸಿಗುತ್ತದೆ ಅನ್ನುವುದನ್ನು ಹುಡುಕುತ್ತಲೇ ಬದುಕನ್ನು ಕಳೆದು ಬಿಡುತ್ತೇವೆ. ಹೀಗಾಗಿಯೇ ಸದಾ ನೆಮ್ಮದಿಗೋಸ್ಕರ ಪರದಾಟ. ಆದರೆ ನನ್ನ ಮನಸು
ಆ ಆಪ್ತಳು ಕೊಟ್ಟ ಸಿಹಿ ತಿಂಡಿಯ ಡಬ್ಬದ ಮೇಲೆ ಇರಲಿಲ್ಲ, ಅದರ ಹಿಂದೆ ಇದ್ದ ಸುಂದರ ವಾತ್ಸಲ್ಯ ಭಾವದ ಮೇಲೆ ಇತ್ತು, ಹಾಗಾಗಿ ಇಷ್ಟು ಪುಟ್ಟ ವಿಚಾರವೂ ಬಹಳ ಮಹತ್ವಪೂರ್ಣವಾಗಿನನ್ನ ನೆನಪಿನಲ್ಲಿ ಜಾಗ ಪಡೆಯಿತು.

ಈ ಪ್ರಪಂಚದಲ್ಲಿ ಇವತ್ತು ಎಲ್ಲವನ್ನು ಹಣ ಕೊಟ್ಟು ಪಡೆಯಬಹುದು ಆದರೆ ಬಾಂಧವ್ಯವನ್ನು ಅಲ್ಲ. ಬದುಕಿನಲ್ಲಿ ಒಂದು ಹಂತ ದಾಟಿ ಆದ ಮೇಲೆ ನಮ್ಮವರ ಪ್ರೀತಿಗಾಗಿ ಹಾತೊರೆಯುತ್ತದೆ ಮನಸು, ಆದರೆ ಅಷ್ಟರಲ್ಲಾಗಲೇ ಇಲ್ಲಿನ ಜೀವನ ನಿರ್ವಹಣೆಯ ಓಟದಲ್ಲಿ ಎಲ್ಲವೂ ನಮ್ಮಿಂದ ದೂರವಾಗಿರುತ್ತದೆ, ಕೆಲವೊಮ್ಮೆ ಅದೃಷ್ಟದಿಂದ ಕೆಲವೊಂದು ಸಂಬಂಧಗಳು ಮರಳಿ ಸಿಗುವುದುಂಟು, ಅಂತಹ ಅವಕಾಶ ದೊರೆತಾಗ ಅದನ್ನು ಸ್ವೀಕರಿಸುವುದರಲ್ಲೇ ಸುಂದರ ಬದುಕಿನ ಸಾರ ಅಡಗಿದೆ. ಇಲ್ಲವಾದಲ್ಲಿ ಉಳಿದಂತೆ ಬದುಕು ನಿಲುಗಡೆ ಇಲ್ಲದ ನಿರಂತರ ಪಯಣ. ನಿಲ್ದಾಣ ಎಲ್ಲಿ, ಯಾವುದೆಂದೇ ಗೊತ್ತಿರುವುದಿಲ್ಲ. ನಮ್ಮನ್ನು ನಾವೇ ಮರೆತಂತೆ ಸಾಗುತ್ತಿರುತ್ತೇವೆ. ಇಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಕಾರಣವಾಗುವ ಸಂಗತಿಗಳು ಹಲವಾರು. ಮೊದಲನೆಯದಾಗಿ ದೃಷ್ಟಿಕೋನ, ನಾವು ಎಲ್ಲವನ್ನು ಇನ್ನೊಬ್ಬರ ಹೇಳಿಕೆಯ ಮೇರೆಗೆ, ಇನ್ನೊಬ್ಬರ ಅಭಿಪ್ರಾಯಕ್ಕೆ ಅನುಗುಣವಾಗಿ ನೋಡುವುದೇ ಹೆಚ್ಚು, ಹಾಗಾಗಿ ಸಂಬಂಧಗಳ ನಡುವೆ ಬಿರುಕು, ದೂರ ಉಂಟಾಗುತ್ತಲೇ ಇರುತ್ತದೆ.

ನನಗೆ ಏನು ಅನುಭವ ಆಗಿದೆ ಅನ್ನುವುದು ಮುಖ್ಯವಾದಾಗ ನಾವು ಸಂಬಂಧಗಳನ್ನು ಉಳಿಸಿಕೊಳ್ಳುವುದು ಹಾಗೂ ಕಳೆದುಕೊಳ್ಳುವುದರ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರ ಹೊರತಾಗಿಯೂ ಮೋಸವಾದರೆ ಅದನ್ನೂ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ನಾವು ಸೋಲುವುದಿಲ್ಲ, ಮನಸು ಒಡೆಯುವುದಿಲ್ಲ, ಬದಲಾಗಿ ಇನ್ನೂ ಹೆಚ್ಚಿನ ಪ್ರಬುದ್ಧತೆ ಬರುತ್ತದೆ ನಮ್ಮಲ್ಲಿ.

ನಯನ ಬಜಕೂಡ್ಲು

15 Comments on “ಮತ್ತೆ ಬೆಸೆದ ಬಾಂಧವ್ಯ

  1. ಮತ್ತೆ ಬೆಸೆದಬಾಂಧವ್ಯದ ಸೂಕ್ಷ್ಮ ಅವಲೋಕನ… ಸ್ವಲ್ಪ ವಿಸ್ತಾರವಾಗಿ ದ್ದರೆ…ಚೆಂದಿತ್ತು… ಇದು ನನ್ನ ಅವಲೋಕನ ಮೇಡಂ

    1. ಧನ್ಯವಾದಗಳು ಮೇಡಂ. ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ಮುಂದಿನ ಬಾರಿ ಇನ್ನಷ್ಟು ವಿಸ್ತಾರವಾಗಿ ಬರೆಯುವ ಪ್ರಯತ್ನ ಮಾಡುವೆ.

  2. ಬಾಂಧವ್ಯ ಬೆಸೆಯಲು ಮನಸ್ಸು ಬೇಕು…ಚಂದದ ಪುಟ್ಟ ಬರಹ

  3. ಬಾಂಧವ್ಯದ ಬೆಸುಗೆಯ ಲೇಖನ ಇಷ್ಟು ಬೇಗ ಮುಗಿದೇ ಹೋಯಿತಲ್ಲ ಎಂಬ ಬೇಸರ
    ಇಂತಹ ಮಧುರ ಬಾಂಧವ್ಯ ಲಭಿಸುವುದು ಅಪರೂಪದ ಸಂಗತಿ ಎನ್ನುತ್ತಲೇ ಲೇಖಕಿಯು ಈ ಬರಹಕ್ಕೆ ಪೂರ್ಣ ವಿರಾಮ ಇಟ್ಟರೇನೋ

    1. ಹ್ಹ… ಹ್ಹ.. ಹ್ಹ.. ನಿಜ ಮೇಡಂ ನಿಮ್ಮ ಮಾತು. ಬಾಂಧವ್ಯ ಬೆಸೆದ ಖುಷಿಯಲ್ಲಿ ಮನಸಿನಲ್ಲಿ ಮೂಡಿದ ಭಾವನೆ ಅಷ್ಟೇ ಹೊರ ಬಂತು. ಸ್ವಲ್ಪ ನಿಧಾನವಾಗಿ ಇನ್ನಷ್ಟು ವಿಚಾರಗಳನ್ನು ಬರೆಯಬಹುದಿತ್ತೇನೋ. ಮುಂದೆ ಪ್ರಯತ್ನಿಸುವೆ. ಧನ್ಯವಾದಗಳು ಮೇಡಂ.

  4. ಚಿಕ್ಕ ಚೊಕ್ಕ ಬರಹ. ಕೆಲವು ಸಲ ಸಣ್ಣ ಸಣ್ಣ ವಿಷಯಗಳು
    ಮನಸ್ಸಿಗೆ ಮುದ ನೀಡುತ್ತವೆ. ಚೆನ್ನಾಗಿ ದೆ

    1. ಹೃತ್ಪೂರ್ವಕ ಧನ್ಯವಾದಗಳು ಮೇಡಂ. ನಿಮ್ಮ ಈ ಪ್ರೋತ್ಸಾಹ ತುಂಬುವ ಮಾತುಗಳು ಬಹಳ ಪ್ರೇರಣೆ ನೀಡುತ್ತದೆ. ಸೌಭಾಗ್ಯವೇ ಸರಿ ನಿಮ್ಮಿಂದ prot

  5. ಹೃತ್ಪೂರ್ವಕ ಧನ್ಯವಾದಗಳು ಮೇಡಂ. ನಿಮ್ಮ ಈ ಪ್ರೋತ್ಸಾಹ ತುಂಬುವ ಮಾತುಗಳು ಬಹಳ ಪ್ರೇರಣೆ ನೀಡುತ್ತದೆ. ಸೌಭಾಗ್ಯವೇ ಸರಿ ನಿಮ್ಮಿಂದ ಪ್ರೋತ್ಸಾಹ, ಪ್ರೇರಣೆ ಲಭಿಸುತ್ತಿರುವುದು.

  6. ಬಾಂಧವ್ಯದ ಕುರಿತಾದ ಸುಂದರ ಹಾಗೂ ಕಳಕಳಿಯ ವ್ಯಾಖ್ಯಾನ ಸಣ್ಣ ಘಟನೆಯೊಂದರಲ್ಲಿ ಸುಪ್ತವಾಗಿ ಕುಳಿತಿದೆ.

  7. ಬಾಂಧವ್ಯದ ಪುಟ್ಟ ಪುಟ್ಟ ಬೆಸುಗೆಗಳೇ ಬಾಳಿಗೆ ಅರ್ಥ ತುಂಬುತ್ತವೆ. ಕಿರಿದಾದರೂ ಹಿರಿದರ್ಥವನ್ನು ನೀಡಿದ ಅಪರೂಪದ ತಮ್ಮ ಲೇಖನಕ್ಕೆ ಧನ್ಯವಾದಗಳು ನಯನಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *