ಬೊಗಸೆಬಿಂಬ

ಹಸಿವೆಂಬ ವ್ಯಾಧಿ ; ಆಹಾರವೆಂಬ ಅವುಷಧ

Share Button

ಹಿಂದೂ ಧರ್ಮದ ಪುನರುಜ್ಜೀವಕರಾದ ಅದ್ವೈತದ ರೂವಾರಿ ಆದಿ ಶಂಕರಾಚಾರ್ಯರು ರಚಿಸಿದ ನೂರಾರು ಕೃತಿರತ್ನಗಳ ಪೈಕಿ ‘ಸಾಧನ ಪಂಚಕಂ’ ಸಹ ಒಂದು. ಕೇವಲ ಐದು ಶ್ಲೋಕಗಳಿರುವ ಪುಟ್ಟ ಕೃತಿಯಿದು. ಆದರೆ ಆ ಐದೂ ಶ್ಲೋಕಗಳೂ ಹಲವು ತೆರನಾದ ಉಪದೇಶಗಳನ್ನು ಒಳಗೊಂಡಿದ್ದು, ಆಧ್ಯಾತ್ಮಿಕ ಸಾಧನೆಗೆ ಮಾರ್ಗಸೂಚಿಯಾಗಿದೆ. ತಲಾ ನಾಲ್ಕು ಸಾಲುಗಳ ಐದು ಶ್ಲೋಕಗಳು ಅಂದರೆ ಒಟ್ಟು ಇಪ್ಪತ್ತು ಸಾಲುಗಳ ಈ ಕೃತಿಯಲ್ಲಿ ನನ್ನ ಗಮನ ಸೆಳೆದದ್ದು ನಾಲ್ಕನೆಯ ಶ್ಲೋಕದ ವಿಹಿತಾರ್ಥ. ಇದರ ಮೊದಲ ಶ್ಲೋಕವು ಅಧ್ಯಯನ ಮತ್ತು ಧರ್ಮಾಚರಣೆಗಳನ್ನು ಕುರಿತಂತಿದೆ. ನಮ್ಮೆಲ್ಲ ಕೆಲಸ ಕಾರ್ಯಗಳು ಈಶ್ವರನಿಗೆ ಸಮರ್ಪಿತ ಎಂಬ ಭಾವದಲ್ಲಿ ಬದುಕಬೇಕೆಂಬುದಿದರ ಆಶಯ. ಅಂದರೆ ಜೀವನವನ್ನು ಶಾಸ್ತ್ರಾಧಾರಿತವಾಗಿ ನಡೆಸಬೇಕೆಂಬುದು ಆಚಾರ್ಯರ ಅಭೀಪ್ಸೆ. ಎರಡನೆಯ ಶ್ಲೋಕವು ವೈರಾಗ್ಯ ಮತ್ತು ಸಂಯಮಗಳನ್ನು ಬೋಧಿಸುವುದು. ಭೋಗಾಸಕ್ತಿಯನ್ನು ಕಡಮೆ ಮಾಡಿಕೊಳ್ಳುತ್ತಾ, ಸತ್ಸಂಗವನ್ನು ಹೊಂದಬೇಕು. ಅರಿಷಡುವರ್ಗಗಳನ್ನು ತ್ಯಜಿಸಬೇಕೆಂದು ಸಹ ಹೇಳುವುದು. ಮೂರನೆಯ ಶ್ಲೋಕವು ಮನಸ್ಸಿನ ಶುದ್ಧಿಯತ್ತ ಗಮನ ಕೊಟ್ಟಿದೆ. ಶ್ರವಣ ಅಂದರೆ ಕೇಳುವುದು, ಮನನ ಅಂದರೆ ಆಲೋಚನೆಯ ಮೂಲಕ ಪದೇ ಪದೇ ಮನದಟ್ಟು ಮಾಡಿಕೊಳ್ಳುವುದು ಮತ್ತು ನಿಧಿಧ್ಯಾಸನ ಅಂದರೆ ಧ್ಯಾನಮಾರ್ಗದ ಮೂಲಕ ಧರಿಸುವುದು. ಇದರಿಂದಲೇ ಮನಸ್ಸು ಶುದ್ಧವಾಗುವುದಲ್ಲದೇ ಜ್ಞಾನಿಯಾಗಲು ಸಹಕಾರಿ. ಆಚಾರ್ಯರ ಪ್ರಕಾರ ಜ್ಞಾನವು ಕೇಳುವುದರಿಂದ ಮಾತ್ರವಲ್ಲ, ಆಂತರಿಕ ಅನುಭವದಿಂದಲೂ ಸಿದ್ಧಿಸುವುದು. ನಾಲ್ಕನೆಯ ಶ್ಲೋಕವು ಆತ್ಮವಿಚಾರವನ್ನು ಕುರಿತದ್ದು. ನಾನಾರು?  ದೇಹ ನಾನಲ್ಲ, ಮನಸ್ಸು ಸಹ ನಾನಲ್ಲ, ನಾನು ಆತ್ಮವೂ ಅಲ್ಲ! ನಾನು ಎಂಬುದು ಪರಮಾತ್ಮದ ಒಂದಂಶ ಎಂಬುದನ್ನು ಸ್ಪಷ್ಟಪಡಿಸುವುದು. ಐದನೆಯ ಶ್ಲೋಕವು ಸ್ಥಿತಪ್ರಜ್ಞ ಸ್ಥಿತಿಯನ್ನು ಬೋಧಿಸುವುದು. ಮನಸು ಶಾಂತಗೊಳ್ಳುವುದರಿಂದ ದ್ವಂದ್ವಗಳಿಂದ ಮುಕ್ತವಾದ ಸ್ಥಿತಿ ಏರ್ಪಡುವುದು. ಆಗ ಅದು ಬ್ರಹ್ಮದಲ್ಲಿ ಸ್ಥಿರವಾಗುವುದು ಎನ್ನುತ್ತದೆ. ಈ ಸಾಧನಾ ಪಂಚಕಂ ಕೃತಿಯು ಮೂರು ಹಂತಗಳನ್ನು ಹೇಳುವುದು: ಶುದ್ಧಿ (Preparation), ಸಾಧನೆ (Practice) ಮತ್ತು ಪರಮಾನುಭವ (Realization). ಆತ್ಮಜ್ಞಾನ ಸಂಪಾದಿಸಲೂ ಬ್ರಹ್ಮ ಸಾಕ್ಷಾತ್ಕರಕ್ಕೂ ಇದುವೇ ಸಾಧನ ಎಂಬುದನ್ನು ಈ ಪುಟ್ಟ ಕೃತಿ ಪ್ರತಿಪಾದಿಸುವುದು. ಇದನ್ನು ಉಪದೇಶ ಪಂಚಕಂ ಎಂದೂ ಕರೆಯುವರು. ಸಂನ್ಯಾಸ ಜೀವನದ ನಿಯಮಗಳನ್ನು ಹೇಳುವುದು ಇದರ ಉದ್ದೇಶ.

ಈ ಕೃತಿಯಲ್ಲಿ ನನಗೆ ಬಹಳ ಮುಖ್ಯವೆನಿಸಿದ ಭಾಗವೆಂದರೆ, ನಾಲ್ಕನೇ ಶ್ಲೋಕದಲ್ಲಿ ಬರುವ ಮೊದಲ ಸಾಲು! ‘ಕ್ಷುದ್ವ್ಯಾಧಿಶ್ಚ ಚಿಕಿತ್ಸತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ’ (ಕ್ಷುಧೆ ಅಂದರೆ ಹಸಿವೆಯನ್ನು ಒಂದು ವ್ಯಾಧಿಯೆಂದು ತಿಳಿಯಬೇಕು; ಪ್ರತಿದಿನ ಭಿಕ್ಷೆಯಿಂದ ದೊರಕುವ ಅನ್ನವನ್ನು ಔಷಧದಂತೆ ಮಿತವಾಗಿ ಸೇವಿಸಬೇಕು.) ಈ ಸಾಲು ನನಗೆ ಅತ್ಯಂತ ಪ್ರಿಯವೆನಿಸಿದ್ದು ಏಕೆಂದರೆ, ನಂನಮ್ಮ ಆಹಾರದ ಭೋಗಲಾಲಸೆಯ ಕೇಂದ್ರಕ್ಕೆ ಇದು ಲಗ್ಗೆಯಿಡುತ್ತದೆ. ಮೂಲತಃ ಶಂಕರರು ಸಂನ್ಯಾಸ ಜೀವನಕ್ಕೆ ಅನ್ವಯಿಸಿ ಹೇಳುವ ಈ ಮಾತನ್ನು ಕಡು ಲೌಕಿಕ ಜೀವನಕ್ಕೂ ಅನ್ವಯಿಸಿಕೊಂಡರೆ, ಒಂದಷ್ಟು ಚಿಂತನೀಯ ಸಂಗತಿಗಳನ್ನು ಒಟ್ಟು ಮಾಡಬಹುದು. ಸಾಧನಾ ಪಂಚಕಂ ಕೃತಿಯಲ್ಲಿ ಬರುವ ಈ ಹೇಳಿಕೆಯನ್ನು ಹಲವರು ಇನ್ನಷ್ಟು ವಿಸ್ತರಿಸಿ, ‘ಹಸಿವನ್ನು ರೋಗವೆಂದು ತಿಳಿ; ಆಹಾರವನ್ನು ಔಷಧವೆಂದು ತಿಳಿ. ಕಾಯಿಲೆಗೆ ಎಷ್ಟು ಬೇಕೋ ಅಷ್ಟೇ ಪ್ರಮಾಣದ ಔಷಧವನ್ನು ಬಳಸು’ ಎಂದು ವ್ಯಾಖ್ಯಾನಿಸುತ್ತಾರೆ. ಅರೆ! ಆಹಾರವನ್ನು ನಾವು ವೈಭವೀಕರಿಸುವ ಹಂತದಲ್ಲಿ ಹೀಗೂ ವಿಚಾರ ಮಾಡಬಹುದಾಗಿದೆಯಲ್ಲ ಎಂಬುದು ಗೊತ್ತಾಗಿ ಅಚ್ಚರಿಯಾಗುತ್ತದೆ. ನಾವೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಆಹಾರವನ್ನು ಅಗತ್ಯಕಿಂತ ಹೆಚ್ಚು ಸೇವಿಸುವವರೇ. ನಾಲಗೆಗೆ ಮಹತ್ವ ಕೊಟ್ಟ ಸಂಸ್ಕೃತಿಯಲ್ಲಿ ರುಚಿಯು ಸಂಸ್ಕಾರದ ಲಕ್ಷಣವೂ ಆಗಿ ಹೋಯಿತು. ರುಚಿರುಚಿಯಾದ ಬಗೆಬಗೆಯ ಭಕ್ಷ್ಯ  ಭೋಜ್ಯಗಳನ್ನು ಸೇವಿಸಿ ಜೀವ ಜೀವನವನ್ನು ಕೃತಾರ್ಥಗೊಳಿಸುವುದೇ ಬಹು ದೊಡ್ಡ ಸಾಧನೆ ಎಂದಂದುಕೊಂಡ ಹೊತ್ತಲ್ಲಿ ಶಂಕರರ ಮಾತು ಎಚ್ಚರಿಕೆಯ ಗಂಟೆ! ಇಂದ್ರಿಯಗಳ ಸೆಳೆತವನ್ನು ನಿಯಂತ್ರಿಸಿ, ಆಸೆಗಳನ್ನು ಕಡಮೆ ಮಾಡಿಕೊಂಡು, ಜೀವನವನ್ನು ಸರಳಗೊಳಿಸುವ ಇಂಥ ಉಪದೇಶವು ‘ಬಾಳಲು ತಿನ್ನು ; ತಿನ್ನಲು ಬಾಳಬೇಡ’ ಎಂಬ ಜ್ಞಾನೋದಯಕ್ಕೆ ಕಾರಣವಾಗುವುದು. ಮಿತಾಹಾರದ ಬಗ್ಗೆ ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಉಲ್ಲೇಖಗಳಿವೆಯಾದರೂ ಅದುವರೆಗೆ ‘ಹಸಿವನ್ನು ರೋಗವೆಂದು ಯಾರೂ ಭಾವಿಸಿಯೇ ಇರಲಿಲ್ಲ ಮತ್ತು ಆಹಾರವನ್ನು ಆ ರೋಗದ ಮದ್ದೆಂಬ ರೀತಿಯಲ್ಲಿ ಪರಿಭಾವಿಸಿಯೇ ಇರಲಿಲ್ಲ!’ ಹೀಗೆ ಪರಿಭಾವಿಸುವುದರಿಂದ ಏನಾಗಬಹುದು? ಎಂಬುದೇ ಈ ಬರೆಹದ ಆಶಯ.

ನಮ್ಮ ಬದುಕಿನ ಅಗತ್ಯಗಳಲ್ಲಿ ಆಹಾರವೂ ಒಂದು. ‘ರೋಟಿ, ಕಪಡಾ ಔರ್ ಮಕಾನ್’ ಎಂಬುದು ಜನಪ್ರಿಯ ಮಾತು. ಮೊದ ಮೊದಲಿಗೆ ಹಸಿವನ್ನು ನೀಗಿಸಿಕೊಳ್ಳಲು ತಿನ್ನುತ್ತಿದ್ದ ಮಾನವನು ನಾಗರಿಕನಾಗಿ, ರುಚಿಸಂಸ್ಕೃತಿಯ ಮೊರೆ ಹೊಕ್ಕ ಮೇಲೆ ಆಹಾರದ ಖದರೇ ಬದಲಾಯಿತು. ಇಂದು ‘ಫುಡ್ ಇಂಡಸ್ಟ್ರಿ’ಯು ಅತಿ ಪ್ರಬಲವಾದ ಲಾಭಕೋರ ಉದ್ಯಮವಾಗಿ ಪರಿವರ್ತಿತವಾಗಿದೆ. ಸಮಾಜೋ ಆರ್ಥಿಕ ನೆಲೆಯಿಂದ ವಿಚಾರಿಸಿದಾಗ ಅದೆಷ್ಟೋ ವಾಸ್ತವಾಂಶಗಳು ಮನವರಿಕೆಯಾಗುತ್ತವೆ. ಗೃಹ, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೋದ್ಯಮವಾಗಿ ಇದು ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳವನ್ನು ಹೊಂದಿದೆ. ಅಷ್ಟೇ ಪ್ರಮಾಣದ ಉದ್ಯೋಗವನ್ನೂ ಸೃಷ್ಟಿ ಮಾಡಿಕೊಟ್ಟಿದೆ. ಸಂಸ್ಕೃತಿಯ, ಸಂಸ್ಕಾರದ ಮತ್ತು ಸತ್ಕಾರದ ಭಾಗಗಳಾಗಿ ನಾವಿದನ್ನು ನೋಡಬಹುದಾಗಿದೆ. ‘ಅಡುಗೆ ಕೆಲಸ’ ಎಂಬುದೀಗ ಕೀಳರಿಮೆಯ ಉದ್ಯೋಗವಾಗಿ ಉಳಿದಿಲ್ಲ! ಎಲ್ಲ ಬಗೆಯ ಸಭೆ-ಸಮಾರಂಭಗಳು ಕೇಟರಿಂಗ್ ಅನ್ನೇ ನಂಬಿಕೊಂಡು ನಡೆಯುತ್ತವೆ. ದೊಡ್ಡಡುಗೆ, ಚಿಕ್ಕಡುಗೆ ಎಂಬ ವ್ಯತ್ಯಾಸವಿಲ್ಲದೇ ಮತ್ತು ಪುಟ್ಟ ಹೊಟೆಲು, ದೊಡ್ಡ ಹೊಟೆಲು ಎಂಬ ಭೇದವಿಲ್ಲದೇ ವಹಿವಾಟು ಸಾಗುತ್ತಿದೆ. ನಾವೆಲ್ಲರೂ ಮನೆಯಲ್ಲಿ ಅಡುಗೆ ಮಾಡಿಕೊಂಡರೂ ಅಷ್ಟೊಂದು ಹೊಟೆಲುಗಳಲ್ಲಿ ಬಗೆಬಗೆಯ ಖಾದ್ಯಗಳೂ ತಿನ್ನುವ ಆಹಾರ ಪದಾರ್ಥಗಳೂ ತಯಾರಾಗಿ ಖರ್ಚಾಗುತ್ತವೆ ಎಂಬುದೇ ವಿಸ್ಮಯ. ಅಷ್ಟು ಬಗೆಯ ಹೊಟೆಲುಗಳು ಇದ್ದರೂ ಅವುಗಳ ಎರಡರಷ್ಟು ‘ಫಾಸ್ಟ್‌ಫುಡ್’ ಎಂಬ ಹಾದಿಬದಿಯ ಚಿಕ್ಕಪುಟ್ಟ ಟಿಫಾನಿಸ್‌ಗಳಲ್ಲಿ ಸಹ ಆಹಾರ ಬಿಕರಿಯಾಗುತ್ತದೆ. ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಮನುಷ್ಯರಿರಲಿ, ಪಶುಪಕ್ಷಿಗಳು ಕೂಡ ಅಲೆದಾಡುತ್ತವೆ, ಹಾಗಾಗಿ ಹಸಿವು ಮಾನವನಿಗೆ ವರವೂ ಹೌದಾಗಿದೆ; ಶಾಪವೂ ಆಗಿದೆ. ಅಂದರೆ ಆಹಾರವನ್ನು ನಿಯಂತ್ರಣವಿಲ್ಲದೇ ಬಳಸಿದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವುಂಟಾಗಿ ಶರೀರವು ರೋಗಗಳ ಬೀಡಾಗುವುದರಲ್ಲಿ ಸಂಶಯವಿಲ್ಲ. ವೈದ್ಯಕೀಯದ ಪ್ರಕಾರ ಔಷಧ ಎಷ್ಟು ಮುಖ್ಯವೋ ಸೇವಿಸುವ ಆಹಾರವೂ ಅಷ್ಟೇ ಪ್ರಮುಖ. ನಮ್ಮ ಪೂರ್ವಜರು ಆಯುರ್ವೇದದ ಮೂಲಕ ಸೇವಿಸುವ ಆಹಾರದಲ್ಲೇ ಔಷಧೀಯ ಗುಣಗಳಿರುವಂತೆ ನೋಡಿಕೊಂಡಿದ್ದರು. ಔಷಧವನ್ನು ಆಹಾರ ಮಾಡಿಕೊಳ್ಳದೇ ಆಹಾರವನ್ನೇ ಅವುಷಧವನ್ನಾಗಿಸಿಕೊಳ್ಳಬೇಕೆಂದು ತಿಳಿವಳಿಕೆ ಹೇಳುತ್ತಿದ್ದರು. ದುರಂತವೆಂದರೆ ಇಂದು ಹಲವು ನಮೂನೆಯ ನೂತನ ಕಾಯಿಲೆಗಳು ಅಡರಿಕೊಂಡು, ಔಷಧವನ್ನೇ ಆಹಾರವನ್ನಾಗಿಸಿಕೊಂಡ ಹಲವರು ಅತ್ತ ಬದುಕಿರಲೂ ಆಗದೇ ಇತ್ತ ಸಾಯಲೂ ಆಗದೇ ಪರಿತಾಪ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆದಿ ಶಂಕರಾಚಾರ್ಯರ ಉಪದೇಶವನ್ನು ನೆನಪಿಸಿಕೊಳ್ಳಬೇಕು.

ಸಾಮಾನ್ಯವಾಗಿ ನಾವು ರೋಗ ಬಂದಾಗ ಮಾತ್ರ ಔಷಧವನ್ನು ತೆಗೆದುಕೊಳ್ಳುತ್ತೇವೆ. ಔಷಧವನ್ನು ಮಿತವಾಗಿ, ಅಗತ್ಯವಿದ್ದಷ್ಟೇ ಸೇವಿಸುತ್ತೇವೆ. ಆದರೆ ಆಹಾರದ ವಿಷಯದಲ್ಲಿ ನಾವು ಇದೇ ನಿಯಮವನ್ನು ಪಾಲಿಸುತ್ತೇವೆಯೇ? ಬಹುಮಟ್ಟಿಗೆ ಇಲ್ಲ. ರುಚಿ, ಆಸೆ, ಅಭ್ಯಾಸ – ಇವುಗಳ ಪ್ರೇರಣೆಯಿಂದ ನಾವು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತೇವೆ. ಇದರಿಂದ ದೇಹದಲ್ಲಿ ಅಸ್ವಸ್ಥತೆ, ಅಲಸ್ಯ, ಹಾಗೂ ಹಲವು ರೋಗಗಳು ಹುಟ್ಟುತ್ತವೆ. ‘ಹಸಿವೇ ರೋಗ’ ಎಂದು ಹೇಳುವುದರ ಅರ್ಥ, ದೇಹದ ಒಂದು ಸ್ವಾಭಾವಿಕ ಅಗತ್ಯವನ್ನು ಸೂಚಿಸುವುದು. ಹಸಿವು ಬಂದಾಗ ದೇಹವು ಆಹಾರವನ್ನು ಯಾಚಿಸುತ್ತದೆ. ಆ ಅಗತ್ಯವನ್ನು ಪೂರೈಸಲು ಆಹಾರವನ್ನು ಔಷಧದಂತೆ ಸ್ವಲ್ಪ ಮಾತ್ರವೇ ಬಳಸಬೇಕು. ಅಂದರೆ, ಹಸಿವನ್ನು ತಣಿಸುವಷ್ಟರ ಮಟ್ಟಿಗೆ ಮಾತ್ರ ಆಹಾರ ಸೇವಿಸಬೇಕು. ರುಚಿಗಾಗಿ, ಮನೋರಂಜನೆಗಾಗಿ ಅಥವಾ ಅತ್ಯಾಸೆ-ಚಪಲಕ್ಕಾಗಿ ಆಹಾರ ಸೇವಿಸುವುದು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಹಾಳುಮಾಡುತ್ತದೆ. ಈ ತತ್ತ್ವವು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರ ಸೀಮಿತವಲ್ಲ. ಇದು ಮನಸ್ಸಿನ ನಿಯಂತ್ರಣಕ್ಕೂ ಸಂಬಂಧಿಸಿದೆ. ಆಹಾರದಲ್ಲಿ ಮಿತಿಯುಳ್ಳವನಿಗೆ ಇಂದ್ರಿಯನಿಗ್ರಹವು ಸಹಜವಾಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸುವುದು ಆಧ್ಯಾತ್ಮಿಕ ಸಾಧನೆಗೆ ಪ್ರಮುಖ ಹೆಜ್ಜೆ. ಆದ್ದರಿಂದಲೇ ಮಿತಾಹಾರವನ್ನು ಯೋಗಶಾಸ್ತ್ರದಲ್ಲಿಯೂ ತತ್ತ್ವಶಾಸ್ತ್ರದಲ್ಲಿಯೂ ಪ್ರಸ್ತಾಪಿಸಲಾಗಿದೆ. ಇಂದಿನ ಕಾಲದಲ್ಲಿ ಈ ಉಪದೇಶದ ಪ್ರಾಮುಖ್ಯ ಇನ್ನಷ್ಟು ಹೆಚ್ಚಾಗಿದೆ. ಕುರುಕು ತಿಂಡಿ, ಅತಿಯಾದ ಸಕ್ಕರೆ ಮತ್ತು ಕೊಬ್ಬಿನ ಆಹಾರ, ನಿಯಮವಿಲ್ಲದ ಆಹಾರ ಪದ್ಧತಿ – ಇವು ನಮ್ಮ ಆರೋಗ್ಯವನ್ನು ಹಾಳುಮಾಡುತ್ತಿವೆ. ಡಯಾಬಿಟಿಸ್, ಹೃದಯ ಸಂಬಂಧೀ ರೋಗಗಳು, ಒಬೆಸಿಟಿ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿರುವುದು ಇದಕ್ಕೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ‘ಆಹಾರ ಔಷಧ’ ಎಂಬ ದೃಷ್ಟಿಕೋನವು ಮಹತ್ವಪೂರ್ಣವಾದುದು.

ಕ್ಷುಧಾ (ಹಸಿವು) ಅನ್ನು ವ್ಯಾಧಿ (ರೋಗ) ಎಂದು ವರ್ಣಿಸುವುದು ಒಂದು ರೂಪಕಾತ್ಮಕ ನಿರೂಪಣೆ. ಇದು ದೇಹದ ಅವಲಂಬಿತ್ವವನ್ನು ಸೂಚಿಸುತ್ತದೆ. ದೇಹವು ನಿತ್ಯವೂ ಆಹಾರವನ್ನು ಬೇಡುತ್ತದೆ; ಈ ಅವಲಂಬಿತ್ವವೇ ಒಂದು ರೀತಿಯ ಅಸ್ವಾತಂತ್ರ‍್ಯ. ಆದ್ದರಿಂದ, ಹಸಿವು ಒಂದು ಸ್ವಾಭಾವಿಕ ಜೈವಿಕ ಪ್ರಕ್ರಿಯೆಯಾಗಿದ್ದರೂ, ಅದನ್ನು ‘ವ್ಯಾಧಿ’ ಎಂದು ನೋಡುವುದರಿಂದ ವ್ಯಕ್ತಿ ತನ್ನ ಆಸಕ್ತಿಯನ್ನು ನಿಯಂತ್ರಿಸಲು ಪ್ರೇರಿತನಾಗುವನು. ಇದಕ್ಕೆ ವಿರುದ್ಧವಾಗಿ ‘ಭಿಕ್ಷೌಷಧಂ’ ಎಂಬ ಪದವು ಆಹಾರವನ್ನು ಔಷಧಕ್ಕೆ ಹೋಲಿಸುತ್ತದೆ. ಔಷಧವನ್ನು ಮಿತವಾಗಿ, ಅಗತ್ಯವಿದ್ದಷ್ಟೇ ಸೇವಿಸುವಂತೆ, ಆಹಾರವೂ ಕೇವಲ ದೇಹಧಾರಣೆಗೆ ಬೇಕಾದಷ್ಟೇ ಸೇವಿಸಬೇಕೆಂಬ ಸಂದೇಶವನ್ನು ನೀಡುವುದು. ಭಿಕ್ಷೆ ಎಂಬ ಪದದಲ್ಲಿ ಅಡಕವಾಗಿರುವ ಹಿತಮಿತ, ಉಳಿದದ್ದು, ಮಿಕ್ಕಿದ್ದು, ದಾನಧರ್ಮ ಎಂಬೆಲ್ಲ ಭಾವಗಳು ಮಿಳಿತವಾಗಿರುವುದನ್ನು ಗಮನಿಸಬೇಕು.

ಈ ತತ್ತ್ವವು ಯೋಗ ಮತ್ತು ಗೀತೆಯ ಉಪದೇಶಗಳಿಗೂ ಹೊಂದಿಕೊಳ್ಳುತ್ತದೆ. ಭಗವದ್ಗೀತೆಯ ಧ್ಯಾನಯೋಗ ಎಂಬ ಆರನೆಯ ಅಧ್ಯಾಯದಲ್ಲಿ  (6. 16-17) ಬರುವ ಶ್ಲೋಕಗಳು ಹೀಗಿವೆ: ‘ನಾತ್ಯಶ್ನತಸ್ತು ಯೋಗೋಸ್ತಿ ನ ಚೈಕಾಂತಮನಶ್ನತಃ ; ನ ಚಾತಿಸ್ವಪ್ನಶೀಲಸ್ಯ ಜಾಗ್ರತೋ ನೈವ ಚಾರ್ಜುನ’ ಮತ್ತು ‘ಯುಕ್ತಾಹಾರವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು; ಯುಕ್ತ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ’ (ಎಲೈ ಅರ್ಜುನ, ಮಿತಿಮೀರಿ ತಿನ್ನುವವನಿಗೆ ಯೋಗವಿಲ್ಲ, ಏನೂ ತಿನ್ನದೇ ಇರುವವನಿಗೂ ಇಲ್ಲ! ಅತಿಯಾಗಿ ನಿದ್ರೆ ಮಾಡುವವನಿಗೂ ಮತ್ತು ಎಚ್ಚರವಾಗಿಯೇ ಇರುವವನಿಗೂ ಇಲ್ಲವೇ ಇಲ್ಲ. ಆಹಾರ ವಿಹಾರಗಳಲ್ಲಿ, ಕರ್ಮಗಳಲ್ಲಿ ಮತ್ತು ನಿದ್ರೆ ಎಚ್ಚರಗಳಲ್ಲಿ ಮಿತವಾಗಿರುವವನಿಗೆ ಯೋಗವು ದುಃಖನಾಶಕ) ಅಂದರೆ ಅತಿಯಾಗಿ ತಿನ್ನುವುದಾಗಲೀ ವಿಪರೀತ ಉಪವಾಸ ಮಾಡುವುದಾಗಲೀ ಎರಡೂ ಯೋಗಕ್ಕೆ ಅಡ್ಡಿ ಎನ್ನುವನು ಗೀತಾಚಾರ್ಯ. ಅದೇ ರೀತಿ ಆಯುರ್ವೇದದಲ್ಲಿಯೂ ‘ಮಾತ್ರಾಶೀತೀಯ’ ಎಂಬ ತತ್ತ್ವವು ನಿರೂಪಿತವಾಗಿದೆ. ಅಂದರೆ, ಆಹಾರವನ್ನು ಮಿತಿಯಲ್ಲಿ ಸೇವಿಸುವುದು ಆರೋಗ್ಯದ ಮೂಲ ಎಂದು ಹೇಳಲಾಗಿದೆ. ಅತಿಯಾದ ಆಹಾರ ಸೇವನೆಯು ‘ಅಮ’ (ಅಪಕ್ವ ಅಹಾರ ರಸ) ಉತ್ಪತ್ತಿಗೆ ಕಾರಣವಾಗಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ‘ಮಾತ್ರಾಶೀ ಸ್ಯಾತ್; ಹಿತಾಶೀ ಸ್ಯಾತ್’ ಎಂಬ ಮಾತು ಚರಕ ಸಂಹಿತೆಯಲ್ಲಿ ಬರುತ್ತದೆ. ಅತಿಭುಕ್ತತೆಯ ಅಪಾಯವನ್ನು ಇದು ಸೂಚಿಸುತ್ತದೆ. ವೈದ್ಯ ಚರಕರ ಪ್ರಕಾರ, ಅತಿಯಾಗಿ ತಿನ್ನುವುದು ರೋಗಕಾರಣ. ಉದರದಲ್ಲಿ ಮೂರು ಭಾಗ. ಒಂದು ಭಾಗ ನೀರು, ಒಂದು ಭಾಗ ಆಹಾರ ಮತ್ತು ಒಂದು ಭಾಗ ಖಾಲಿ ಇರುವಂತೆ ನೋಡಿಕೊಳ್ಳಬೇಕು ಅಂದರೆ, ಹೊಟ್ಟೆ ತುಂಬಿ ಗಂಟಲಿನ ತನಕ ತಿನ್ನುವುದಲ್ಲ; ಇನ್ನೂ ಒಂದೆರಡು ತುತ್ತು ಬೇಕೆನಿಸುವಾಗಲೇ ತಿನ್ನುವುದನ್ನು ನಿಲ್ಲಿಸಬೇಕು. ಈ ದೃಷ್ಟಿಯಿಂದ ನೋಡಿದಾಗ ಆಹಾರ ಔಷಧ ಎಂಬ ಕಲ್ಪನೆ ಕೇವಲ ದಾರ್ಶನಿಕವಲ್ಲ, ವೈದ್ಯಕೀಯ ಸತ್ಯವೂ ಆಗಿದೆ. ಮಿತಾಹಾರವು ಇಂದ್ರಿಯನಿಗ್ರಹದ ಮೂಲಶಕ್ತಿ. ರಸನೇಂದ್ರಿಯವನ್ನು ನಿಯಂತ್ರಿಸಲು ಸಾಧ್ಯವಾದರೆ, ಇತರ ಇಂದ್ರಿಯಗಳ ಮೇಲಿನ ಹತೋಟಿ ಸುಲಭ. ಆದ್ದರಿಂದಲೇ ಸಾಧನ ಮಾರ್ಗದಲ್ಲಿ ಆಹಾರ ನಿಯಮಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಇದು ಮನಸ್ಸಿನ ಶುದ್ಧಿಗೆ ದಾರಿ ಮಾಡಿಕೊಡುತ್ತದೆ; ಶುದ್ಧ ಮನಸ್ಸು ಜ್ಞಾನಕ್ಕೆ ಅನಿವಾರ್ಯ. ಅತಿಯಾದ ಆಹಾರ ಸೇವನೆ, ಸಂಸ್ಕರಿತ ಆಹಾರ ಪದಾರ್ಥಗಳು, ಅನಿಯಮಿತ ಆಹಾರ ಪದ್ಧತಿ – ಇವು ಮಾನವನ ಆರೋಗ್ಯವನ್ನು ಹಾಳುಮಾಡುತ್ತಿರುವುದು ಸ್ಪಷ್ಟ. ಉಪನಿಷತ್ತಿನ ದೃಷ್ಟಿಯಿಂದಲೂ ಆಹಾರಕ್ಕೆ ಮಹತ್ವವಿದೆ. ತೈತ್ತಿರೀಯ ಉಪನಿಷತ್ತಿನಲ್ಲಿ ‘ಅನ್ನಂ ಬ್ರಹ್ಮೇತಿ ವ್ಯಜಾನಾತ್’ ಎಂದು ಹೇಳಿ, ಅನ್ನವನ್ನು ಬ್ರಹ್ಮಸ್ವರೂಪವಾಗಿ ಪರಿಗಣಿಸಲಾಗಿದೆ. ಅನ್ನದಿಂದಲೇ ಜನಿಸಿ, ಜೀವಿಸಿ, ಕೊನೆಗೆ ತಾನೇ ಇನ್ನೊಂದಕ್ಕೆ ಅನ್ನವಾಗಿ ಹೋಗುವ ಅನ್ನಚಕ್ರ (ಆಹಾರ ಸರಪಣಿ)ಯನ್ನು ಹಲವು ಉಪನಿಷತ್ತುಗಳು ವಿಚಾರಿಸಿವೆ. ಆದ್ದರಿಂದಲೇ ಅನ್ನಕ್ಕೆ ಅಂದರೆ ಆಹಾರಕ್ಕೆ ನಮ್ಮ ಸಂಸ್ಕೃತಿ-ಪರಂಪರೆಯಲ್ಲಿ ಆದ್ಯಗಮನ. ಆಧುನಿಕ ಭಗವದ್ಗೀತೆಯೆಂದೇ ಹೆಸರಾದ ಡಿ ವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗದಲ್ಲೂ ಮಾಸ್ತಿಯವರ ಹಲವು ಪ್ರಬಂಧಗಳಲ್ಲೂ ಶಿವರಾಮ ಕಾರಂತರ ‘ಜೀವನ ಮತ್ತು ಆಹಾರ’ ಎಂಬ ಲೇಖನಗಳಲ್ಲೂ ಮಿತಾಹಾರದ ಮಹತ್ವವನ್ನು ಮನಗಾಣಿಸಲಾಗಿದೆ. ‘ಅನ್ನದೇವರ ಮುಂದೆ ಇನ್ನು ದೇವರು ಉಂಟೆ?’ ಎಂದೇ ಸರ್ವಜ್ಞಕವಿಯು ಪ್ರಶ್ನಿಸುತ್ತಾನೆ. ಅನ್ನವೇ ಪ್ರಾಣ ಎನ್ನುವ ಈತನು ಸಹ ಮಿತಾಹಾರವನ್ನು ಎತ್ತಿ ಹಿಡಿಯುತ್ತಾನೆ. ‘ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ, ಬಿಸಿ ಬೇಡ, ತಂಗುಳಣಬೇಡ, ವೈದ್ಯರ ಬೆಸಸಲೇಬೇಡ’ ಎನ್ನುವನು. ‘ನಾಲಗೆಯ ಕಟ್ಟಿದವ ಕಾಲನಿಗೆ ದೂರನಿಹ, ನಾಲಗೆಯ ರುಚಿಯ ಮೇಲಾಡುತಿರಲವನ ಕಾಲ ಹತ್ತಿರವು ಸರ್ವಜ್ಞ’ ಇಲ್ಲಿ ಕಾಲ ಎಂದರೆ ಯಮ ಎಂದು ತಿಳಿಯಬೇಕು.

ಆದರೆ ನಾವು ಮಾಡುವುದೇನು? ಆಹಾರದ ರುಚಿಗೆ ಮಾರು ಹೋಗುತ್ತೇವೆ. ತುಂಬ ಚೆನ್ನಾಗಿ ಮತ್ತು ರಸಭರಿತವಾಗಿ ಅಡುಗೆ ಮಾಡುವವರನ್ನು ಹೊಗಳುತ್ತೇವೆ. ‘ತಿನ್ನುವ ತನಕ ಮತ್ತು ತಿಂದ ಮೇಲೆ ಸಂನ್ಯಾಸ; ತಿನ್ನುವಾಗ ಸಂಸಾರಿ’ ಆಗಿರುತ್ತೇವೆ! ಮುಖ್ಯವಾಗಿ ನಾಲಗೆಯು ನಮ್ಮನ್ನಾಳುವಾಗ ನಾವದರ ಬೆರಗು ಮತ್ತು ಮಾಯೆಗೆ ವಶವಾಗುತ್ತೇವೆ. ನಮಗಿಷ್ಟವಾದುದನ್ನು ಸೇವಿಸುವಾಗ ರುಚಿಗ್ರಹಣ ಗ್ರಂಥಿಗಳು ಇನ್ನಷ್ಟು ಮತ್ತಷ್ಟು ಆಕ್ಟಿವೇಟಾಗಿ ‘ತಿನ್ನುವುದನ್ನು ನಿಲ್ಲಿಸಲು ಆಗುವುದೇ ಇಲ್ಲ’ವೆಂಬ ಸೂಚನೆಯನ್ನು ಕೊಡುತ್ತವೆ. ಎಲ್ಲ ಇಂದ್ರಿಯಗಳ ಅನುಭವವೂ ಕೇವಲ ಭ್ರಮೆ; ಅದು ಮಾಯೆಯ ಆಟ ಎಂದವರು ಶಂಕರಾಚಾರ್ಯರು. ಪಂಚೇಂದ್ರಿಯಗಳು ನಮಗೆ ಮೋಸ ಮಾಡುತ್ತವೆ, ನಾವದಕ್ಕೆ ತುತ್ತಾಗುತ್ತೇವೆ. ಪಂಚೇಂದ್ರಿಯಗಳು ನಾನಲ್ಲ; ನಾನು ಬೇರೆ; ಅವು ಬೇರೆ! ಎಂಬುದೇ ಆಧ್ಯಾತ್ಮಿಕ ಸತ್ಯ. ಹೀಗಾಗಿ ಕೇವಲ ಸಂನ್ಯಾಸ ಜೀವನಕ್ಕೆ ಮತ್ತು ಬ್ರಹ್ಮಾನುಭವಕ್ಕೆ ಮಿತಾಹಾರವನ್ನು ಹೇಳಿದ ಶಂಕರರ ಮಾತನ್ನು ಇದೀಗ ನಮ್ಮ ಲೌಕಿಕ ಜೀವನಕ್ಕೂ ಅನ್ವಯಿಸಿಕೊಳ್ಳುವ ಸಂದರ್ಭ ಬಂದಿದೆ. ಒಂದೆಡೆ ಅತಿಭೋಗ; ಇನ್ನೊಂದೆಡೆ ಹಸಿವು ನೀಗಲು ಅನ್ನದ ಕೊರತೆ. ತಿಂದು ತಿಂದು ರೋಗದಿಂದ ನರಳುವವರು ಒಂದೆಡೆ; ತುತ್ತು ಅನ್ನಕಾಗಿ ಅಂಡಲೆಯುವ ಜನ ಇನ್ನೊಂದೆಡೆ. ಬಾಯಿರುಚಿಗೆ ಮರುಳಾಗಿ ಹಸಿವಿಲ್ಲದಿದ್ದರೂ ತಿಂದು ಹಣ, ಸಮಯ ಮತ್ತು ಆರೋಗ್ಯಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ನಮ್ಮ ಇದೇ ಆಹಾರವ್ಯಸನವನ್ನು ಬಂಡವಾಳ ಮಾಡಿಕೊಂಡು ‘ಅನ್ನ’ವನ್ನು ಮಾರಿ ಜೀವನ ಕಂಡುಕೊಂಡಿವೆ ಫುಡ್ ಕಾರ್ಖಾನೆಗಳು. ‘ಹೊಟ್ಟೆಯು ಕಸದ ತೊಟ್ಟಿಯಲ್ಲ; ಬೇಡದ ಕಸವನ್ನು ತುಂಬಲು’ ಎಂಬ ಪರಿಜ್ಞಾನ ನಮ್ಮಲ್ಲಿ ಹಲವರಿಗಿಲ್ಲ. ಸಂಬಂಧ ಹಾಳಾಗುತ್ತದೆಂದೂ ಬೇಸರ ಮಾಡಿಕೊಳ್ಳುತ್ತಾರೆಂದೂ ಬಲವಂತಕ್ಕೆ ಮತ್ತು ದಾಕ್ಷಿಣ್ಯಕ್ಕೆ ತಿಂದು ಹೊಟ್ಟೆ ಕೆಡಿಸಿಕೊಳ್ಳುತ್ತೇವೆ. ಸಭೆ ಸಮಾರಂಭಗಳ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ತಯಾರಿಸಿ, ಬಡಿಸಿ, ಎಲೆಯಲ್ಲಿ ಚೆಲ್ಲಿಸಿ, ಧನ್ಯರಾದೆವೆಂದುಕೊಳ್ಳುತ್ತೇವೆ. ವಿಶಾಲಾರ್ಥದಲ್ಲಿ ನೋಡಿದರೆ, ಚಿನ್ನಕಿಂತಲೂ ಅನ್ನ ಮುಖ್ಯ ಮತ್ತು ಪ್ರಧಾನ. ಒಂದೊಂದು ಅಗುಳಿನ ಮೇಲೂ ಸೇವಿಸುವವರ ಹೆಸರು ಬರೆದಿರುತ್ತದೆಂದು ನಮ್ಮ ಪೂರ್ವಿಕರು ಹೇಳುತ್ತಿದ್ದುದರ ಔಚಿತ್ಯವನ್ನು ಮರೆತು, ದಂದ್ರಾಳಿಗರಾಗಿದ್ದೇವೆ. ಉನ್ನತ ಆಲೋಚನೆಯನ್ನೂ ಸರಳ ಜೀವನವನ್ನೂ ಅಳವಡಿಸಿಕೊಳ್ಳುವುದನ್ನು ಮರೆತು, ಅದಕ್ಕೆ ಬದಲಾಗಿ, ಸಿರಿವಂತ ಜೀವನಕ್ಕೆ ಮನಸೋತು, ಕಳಪೆ ಚಿಂತನೆಗೆ ಹೆಸರುವಾಸಿಯಾಗಿದ್ದೇವೆ. ‘ತಿಂದು ಬದುಕಬೇಕಾದದ್ದು ಪ್ರಾಣಿಧರ್ಮ; ತಿಳಿದು ಬದುಕಬೇಕಾದದ್ದು ಮನುಷ್ಯಧರ್ಮ’ ಎಂಬ ಕವಿಬೇಂದ್ರೆಯವರ ಮಾತನ್ನು ಮರೆತು ಬಿಟ್ಟಿದ್ದೇವೆ. ಒಂದು ಹಂತ ಕಳೆದು, ಪಕ್ವತೆಯನ್ನು ಹೊಂದುವ ಮೊದಲ ಮೆಟ್ಟಿಲೇ ಮಿತಾಹಾರ; ವಯಸಾದ ಮೇಲೆ ಎಷ್ಟು ಕಡಮೆ ತಿನ್ನುತ್ತೇವೆಯೋ ಅಷ್ಟೂ ಆರೋಗ್ಯ ಎಂಬ ವಿವೇಕವು ತಿನ್ನುವಾಗ ನೆನಪಾಗದೇ ಅಸಹಾಯಕರಾಗಿದ್ದೇವೆ. ಎಷ್ಟು ತಿಂದರೂ ಎಷ್ಟು ಕುಡಿದರೂ ಎಷ್ಟು ಮಾತಾಡಿದರೂ ಎಷ್ಟು ಜಗಳವಾಡಿದರೂ ಅದೇನೂ ಮುಗಿಯದ ಕಥೆ ಮತ್ತು ವ್ಯಥೆ ಎಂಬುದೇ ಪ್ರಬುದ್ಧತೆ! ಸರಳ ಜೀವನದ ಸೂತ್ರವೇ ಮಿತಾಹಾರ. ಇದನ್ನೇ ಆದಿಶಂಕರರು ರೂಪಕದ ಭಾಷೆಯಲ್ಲಿ ನಮಗೆ ಉಣಬಡಿಸಿದ್ದಾರೆ: ‘ಹಸಿವನ್ನು ರೋಗವೆಂದೂ ಆಹಾರವನ್ನು ಆ ರೋಗಕ್ಕೆ ತೆಗೆದುಕೊಳ್ಳುವ ಮದ್ದೆಂದೂ ತಿಳಿ; ಅದರಂತೆ ಬದುಕು. ರುಚಿರುಚಿಯಾದುದನ್ನು ತಿಂದಾಗಿದೆ; ಇನ್ನು ಸಾಕು!’ ಎಂಬುದೇ ಅದು. ಆಹಾರದ ಮಿತಬಳಕೆಯಿಂದ ನಮ್ಮ ಅರ್ಧ ಕಾಯಿಲೆ ವಾಸಿಯಾಗುತ್ತದೆಂಬುದರಲ್ಲಿ ಸಂಶಯವೇ ಇಲ್ಲ.

ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *