(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಎಲ್ಲರೂ ಕೈ, ಕಾಲು ತೊಳೆದು ತಿಂಡಿ ತಿಂದು, ಕೃಷ್ಣ ಮಾಡಿಕೊಟ್ಟ ಹಾರ್ಲಿಕ್ಸ್ ಕುಡಿದರು.
“ಅಮ್ಮಾ ನಾನು ಇಲ್ಲೇ ಮಲಗ್ತೀನಿ” ಎಂದಳು ಮಲ್ಲಿ.
“ಆರ್.ಜಿ. ನೀನು ಇದ್ದುಬಿಡು.”
“ಬೇಡ. ಮನೆದೂರವೇನಿಲ್ಲ. ಅಲ್ಲಿಗೆ ಹೋಗ್ತೀನಿ.”
“ನಿಮ್ಮ ಮನೆ ಎಲ್ಲಿದೆ?”
“ರಾಗಿಣಿ ಮನೆ ಹತ್ರ……..”
“ವರು ನೀನು ಇವರ ಮನೆ ನೋಡಿದ್ದೀಯಾ?”
“ಇವರು ಕರೆದರೆ ತಾನೆ ನಾವು ನೋಡಲು ಸಾಧ್ಯ?”
“ಒಂದು ದಿನ ಕರ‍್ಕೊಂಡು ಹೋಗ್ತೀನಿ……….”
“ಆಗ ನಾನೂ ಬರ‍್ತೀನಿ………”
“ಮೊದಲು ನೀನು ಹೋಗಿ ಕ್ಲೀನ್ ಮಾಡಿದ ಮೇಲೆ ಅವರು ನಮ್ಮನ್ನು ಕರೆಯೋದು. ಇವರು ಮನೆ ಹೇಗಿಟ್ಟುಕೊಂಡಿರುತ್ತಾರೆ ಗೊತ್ತಿಲ್ಲವಾ?” ವರು ರೇಗಿಸಿದಳು.
“ನೀವು ಹೇಳ್ತಿರೋದು 100% ಕರೆಕ್ಟ್. ಕೆಲಸದವಳು ಇದ್ದಾಳೆ. ಕಸಗುಡಿಸಿ ಒರೆಸೋದಷ್ಟೇ ಅವಳ ಕೆಲಸ. ಕಾಟಾಚಾರಕ್ಕೆ ಮಾಡ್ತಾಳೆ. ಅಮ್ಮ ಬರೋವಾಗ ನಮ್ಮನೆ ದೇವೀರಮ್ಮ ಅವಳ ಗಂಡನ್ನ ಕರ‍್ಕೊಂಡು ಬಂದು ಧೂಳು ತೆಗೆಸ್ತಾರೆ. ಅಲ್ಲಿಂದ ಬರುವಾಗ ನನ್ನ ಬಟ್ಟೆ ಒಗೆಸಿ ಐರನ್ ಮಾಡಿಸಿ ಬರ‍್ತಾರೆ. ಒಗೆಯುವ ಬಟ್ಟೆ ತೊಗೊಂಡು ಹೋಗ್ತಾರೆ.”
“ಅಮ್ಮ ಆಗಾಗ್ಗೆ ಬರ‍್ತಿರ‍್ತಾರಾ?”
“ಇಲ್ಲ ಆಂಟಿ. ಬೆಂಗಳೂರಿಗೆ ತಿಂಗಳಿಗೊಂದು ಸಲವಾದರೂ ರ‍್ತಾರೆ. ಆಗ ಒಗೆಯುವ ಬಟ್ಟೆ ಮೂಟೆಕಟ್ಟಿ ತೆಗೆದುಕೊಂಡು ಹೋಗಿ ಕೊಡ್ತೀನಿ. ಇಲ್ಲಿಗೆ ಎರಡು ಸಲ ಬಂದಿರಬಹುದು ಅಷ್ಟೆ.”
ಆರ್.ಜಿ. ಹೊರಟ. ಎಲ್ಲರೂ ಮಲಗಿದರು.
ಒಂದು ತಿಂಗಳು ಕಳೆಯಿತು. ಬಕುಳಾ ಇದ್ದಾಗಲೂ ಬಂದು ಮಾತಾಡುವುದನ್ನು ಆರ್.ಜಿ. ಅಭ್ಯಾಸ ಮಾಡಿಕೊಂಡ. ಬಕುಳಾ ಕೂಡ ಅವನ ಜೊತೆ ಮೈ ಛಳಿ ಬಿಟ್ಟು ಮಾತನಾಡಲಾರಂಭಿಸಿದ್ದಳು.
ಒಂದು ಶನಿವಾರ ರಾವ್ ಅಂಗಡಿಗೆ ಹೋಗಲು ಸಿದ್ಧರಾಗುತ್ತಿದ್ದಾಗ ರಘುಪತಿಗಳ ಫೋನ್ ಬಂತು.
“ನಮ್ಮ ಎರಡನೆ ಅಣ್ಣ, ಅತ್ತಿಗೆ, ನನ್ನ ಹೆಂಡತಿ ಇವತ್ತು ಬರ‍್ತಿದ್ದಾರೆ. ನಾಳೆ ನಿಮ್ಮನೆಗೆ ಬರಬಹುದಾ?”
“ಖಂಡಿತಾ ಬನ್ನಿ…… ತಿಂಡಿ ಹೊತ್ತಿಗೇ ಬನ್ನಿ.”
“ಇಲ್ಲ ಊಟ, ತಿಂಡಿ ಹಚ್ಚಿಕೊಳ್ಳಬೇಡಿ. ಕಾಫಿ ಸಾಕು. ಬೆಳಿಗ್ಗೆ ಒಂಭತ್ತುವರೆಗೆ ಬರ‍್ತೀವಿ.”
“ಖಂಡಿತಾ ಬನ್ನಿ. ಲೊಕೇಷನ್ ಕಳಿಸಲಾ?”
“ಬೇಡ. ನಮ್ಮ ಡ್ರೈವರ್‌ಗೆ ನಿಮ್ಮ ಮನೆ ಗೊತ್ತು.”
ಶೋಭಾ, ಶಕುಂತಲಾ ಮನೆ ಧೂಳು ತೆಗೆದರು. ಶರು ಮನೆ ಕ್ಲೀನ್ ಮಾಡಲು ಸಂಭ್ರಮದಿಂದ ಓಡಾಡಿದಳು. ದೇವಿಕಾ, ಜಾನಕಿ ಅವರನ್ನೆಲ್ಲಾ ನೋಡಲು ಕುತೂಹಲದಿಂದ ಕಾದಿದ್ದರು.
ಒಂಭತ್ತುವರೆಯ ಹೊತ್ತಿಗೆ ರಘುಪತಿ, ಅವರ ಹೆಂಡತಿ, ರಘುಪತಿ ಅಣ್ಣ ಕೇಶವಯ್ಯ, ಶಾರದಾ ಬಂದರು.
ರಾವ್ ಅವರನ್ನು ಸ್ವಾಗತಿಸಿ ಮನೆಯವರ ಪರಿಚಯ ಮಾಡಿಕೊಟ್ಟರು.
“ನಿಮ್ಮ ಕುಟುಂಬ ನೋಡಿ ತುಂಬಾ ಖುಷಿಯಾಯಿತು. ನಾವು ಒಂದು ಮುಖ್ಯವಾದ ವಿಚಾರ ಮಾತನಾಡಲು ಬಂದಿದ್ದೇವೆ.”
“ಮುಖ್ಯವಾದ ವಿಚಾರಾನಾ?”
“ಹೌದು. ನಿಮಗೆ ನಮ್ಮ ಕುಟುಂಬದವರ ಪರಿಚಯ ಆಗಿದೆ. ನನ್ನ ಮಕ್ಕಳು ಕೀರ್ತಿ, ಧರ್ಮ ಇಬ್ಬರನ್ನೂ ನೀವು ನೋಡಿದ್ದೀರ.”
“ಹೌದು.”
“ನಮ್ಮ ಕೀರ್ತಿ ನಿಮ್ಮ ಎರಡನೇ ಮಗಳು ಶರೂನ್ನ ಇಷ್ಟಪಟ್ಟಿದ್ದಾನೆ. ಗೋತ್ರಗಳು ಕೂಡುತ್ತವೆ. ಜಾತಕಗಳಲ್ಲಿ ನಮಗೆ ನಂಬಿಕೆಯಿಲ್ಲ. ಮದುವೆ ಬೇಗ ಆಗಬೇಕು.
“ನಾನು ಮಗಳನ್ನು ಕೇಳಬೇಕು…..”
“ನಿಮ್ಮ ಮಗಳು ಒಪ್ಪಿದ್ದಾಳೆ. ಆದರೆ ನಾವು ಅವಳಿಗೆ ಕೆಲವು ವಿಚಾರಗಳನ್ನು ತಿಳಿಸಬೇಕು.”
ರಾವ್ ‘ಶರೂ’ ಎಂದು ಕೂಗಿದರು.
ಅವಳು ಬಂದು ಅವರ ಕಾಲುಗಳಿಗೆ ನಮಸ್ಕಾರ ಮಾಡಿ ಅವರೆದುರು ನಿಂತಾಗ ರಾವ್ ಆಶ್ಚರ್ಯದಿಂದ ಹುಬ್ಬೇರಿಸಿದರು.
“ನಮ್ಮ ಕೀರ್ತಿ ನಿನಗೆ ಒಪ್ಪಿಗೆಯೇನಮ್ಮಾ?”
“ಹೌದು ಮಾವ.”
“ಕೂತ್ಕೋಮ್ಮ. ನಾನು ಕೆಲವು ವಿಚಾರ ಹೇಳಬೇಕು. ನಿಮ್ಮನೆಯವರೆಲ್ಲಾ ಇದ್ದರೆ ಒಳ್ಳೆಯದು.”
“ಎಲ್ಲರೂ ಬಂದು ಸೇರಿದರು.”
“ನಮ್ಮದು ಕೂಡು ಕುಟುಂಬ. ನಮ್ಮ ಕುಟುಂಬ ಒಗ್ಗಟ್ಟಿಗೆ ಫೇಮಸ್. ನಮ್ಮ ನಡುವೆ ಇದುವರೆಗೂ ಯಾವ ವಿಚಾರಕ್ಕೂ ಜಗಳ ಬಂದಿಲ್ಲ. ನಮ್ಮಣ್ಣನ ಹೆಸರಿನಲ್ಲಿ ಭೂಮಿ ಇರಬಹುದು. ನನ್ನ ಹೆಸರಲ್ಲಿ ಡೈರಿ ಇರಬಹುದು. ಆದರೆ ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ರಘುಪತಿ ಇಂದ. ಅವನು ಸರ್ಕಾರಿ ಕೆಲಸ ಮಾಡ್ತಾ ಇದ್ದಿದ್ದರಿಂದ ಸುಲಭವಾಗಿ ಸಾಲ ತೆಗೆದುಕೊಡ್ತಿದ್ದ. ನಾವು ಇಂದು ತುಂಬಾ ಶ್ರೀಮಂತರು. ಆದರೆ ಗಂಜಿ ಕುಡಿದುಕೊಂಡು, ಒಂದು ಹೊತ್ತು ಪುರಿ ತಿಂದುಕೊಂಡು ಬರಿ ನೆಲದ ಮೇಲೆ ಮಲಗಿದ್ದನ್ನು ನಾವು ಮರೆತಿಲ್ಲ. ಆ ಒಗ್ಗಟ್ಟು ನೀನು ಕಾಪಾಡಬೇಕು. ನೀನು ತುಂಬು ಕುಟುಂಬದಲ್ಲಿ ಬೆಳೆದಿರುವುದರಿಂದಲೇ ನಾವು ಒಪ್ಪಿರುವುದು.”
“ನಮ್ಮ ಶರು ಜಗಳಗಂಟಿಯಲ್ಲ. ತುಂಬಾ ಒಳ್ಳೆಯ ಹುಡುಗಿ” ದೇವಕಿ ಹೇಳಿದರು.
“ನಮ್ಮ ಕೀರ್ತಿ ಗ್ರಾಜುಯೇಟ್. ನಿನಗಿಂತ ಎಂಟು ವರ್ಷ ದೊಡ್ಡವನು. ನೀನು ಮನಃಪೂರ್ವಕವಾಗಿ ಒಪ್ಪಿಕೊಂಡರೆ ಮಾತ್ರ ಈ ಮದುವೆ ನಡೆಯುತ್ತೆ. ಈಗ ನಿನ್ನ ಕಣ್ಣಿಗೆ ನಮ್ಮ ಹಳ್ಳಿ ತುಂಬಾ ಚೆನ್ನಾಗಿ ಕಾಣ್ತಿರಬಹುದು. ಆದರೆ ಆಮೇಲೆ ಬೇಜಾರಾಗಬಹುದು.
“ಹಾಗೇನಿಲ್ಲ ಮಾವ. ನಾನು ಹೊಂದಿಕೊಳ್ತೇನೆ” ಶರು ಹೇಳಿದಳು.
“ನೀನು ಬೆಂಗಳೂರಿನಲ್ಲಿ ಬೆಳೆದಿರುವಳು. ನೀನು ನಮ್ಮ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಬೇಕು. ಬೆಂಗಳೂರು ಮರೆಯಬೇಕು. ನಾವು ಯಾವ ಕಾರಣಕ್ಕೂ ಪಟ್ಟಣದಲ್ಲಿ ಸೆಟ್ಲ್ ಆಗಲ್ಲ…….”
“ನಾನು ನಿಮ್ಮ ಕಂಡಿಷನ್ಸ್ಗೆ ಒಪ್ಪಿದ್ದೇನೆ ಮಾವ……….” ಎಂದಳು ಶರು.
“ಸ್ವಾಮಿ ನೀವೇನಂತೀರಾ?”
“ನಮಗೆ ನಿಮ್ಮ ಕುಟುಂಬದ ಮೇಲೆ ಗೌರವವಿದೆ. ನಿಮ್ಮ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಇದೆ. ಆದರೆ ಶರು ದುಡುಕಿ ನಿರ್ಧಾರ ತೆಗೆದುಕೊಂಡು ಮುಂದೆ ಏನಾದರೂ ತೊಂದರೆಯಾದರೆ ಅನ್ನುವ ಭಯ.”
ಅಷ್ಟರಲ್ಲಿ ಶಕುಂತಲಾ ಕಾಫಿ ತಂದರು.
“ನೋಡಿ ನೀವಾಗಿ ಬಂದು ಹೆಣ್ಣು ಕೇಳ್ತಿದ್ದೀರ. ನಾವು ಒಪ್ಪಿದ್ದೇವೆ. ಶರು ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳಿ. ಅವಳನ್ನು ನಿಮ್ಮ ಮನೆಗೆ ಹೊಂದಿಕೊಂಡು ಬಾಳುವಂತೆ ಮಾಡುವ ಜವಾಬ್ಧಾರಿ ನಿಮ್ಮದು.”
“ಹಾಗಾದರೆ ನಿಮಗೆಲ್ಲರಿಗೂ ಒಪ್ಪಿಗೆಯಾಗಿದೆಯಾ?”
“ಸಂತೋಷವಾಗಿ ಒಪ್ಪಿದ್ದೇವೆ.”
“ಮುಂದಿನ ವಾರ ಒಂದು ಸಣ್ಣ ಹಾಲ್‌ನಲ್ಲಿ ಲಗ್ನಪತ್ರಿಕೆ ಮಾಡಿಕೊಡಿ. ನಮ್ಮ ಕಡೆಯಿಂದ 20 ಜನ ಬರ‍್ತೀವಿ. ಮದುವೆ ನಮ್ಮ ಊರಿನಲ್ಲೇ ನಡೆಯಬೇಕು. ಖರ್ಚೂ ನಮ್ಮದೆ. ನಾವು ವರದಕ್ಷಿಣೆ, ವರೋಪಚಾರ ಏನೂ ತೆಗೆದುಕೊಳ್ಳುವುದಿಲ್ಲ. ಹುಡುಗಿಗೆ ನೀವು ಇಂತಹದ್ದು ಕೊಡೀಂತ ಕೇಳುವುದಿಲ್ಲ. ನೀವು ತುಳಸೀದಳ ಇಟ್ಟು ಧಾರೆಯೆರದರೂ ಒಪ್ಪಿಕೊಳ್ತೇವೆ.
ಅವರ ನೇರವಾದ ಮಾತುಗಳು, ಅವರ ಸರಳತೆ ಎಲ್ಲರಿಗೂ ಇಷ್ಟವಾಯಿತು.
ಅವರೆಲ್ಲಾ ಹೋದ ನಂತರ ಸಾಯಂಕಾಲ ದೇವಕಿ, ಶಿವಶಂಕರ, ಸುಧಾಕರ ಅಣ್ಣನ ಬಳಿ ಬಂದರು.
“ಅಣ್ಣ, ನಿನ್ನ ಹತ್ತಿರ ಮಾತನಾಡಬೇಕಿತ್ತು.”
“ಹೇಳಿ ಏನು ವಿಷಯ?”
“ರಘುಪತಿಯವರ ಅಣ್ಣಂದಿರನ್ನು ನೋಡಿದ ಮೇಲೆ ನಮಗೇ ನಮ್ಮ ಬಗ್ಗೆ ನಾಚಿಕೆಯಾಗ್ತಿದೆ.”
“ಏನಪ್ಪಾ ಹಾಗಂದ್ರೆ?”
“ನಿನ್ನ ಒಳ್ಳೆಯತನವನ್ನು ನಾವು ದುರುಪಯೋಗ ಮಾಡಿಕೊಂಡೆವು ಅನ್ನಿಸ್ತಿದೆ. ವಾರುಣಿ ನಮ್ಮನ್ನು ಬೈತಾ ಇದ್ದಿದ್ರಲ್ಲಿ ತಪ್ಪಿಲ್ಲ. ನಾವು ಅದಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ನಾವು ಮೂವರೂ ಸೇರಿ ಲಗ್ನಪತ್ರಿಕೆ ಕಾರ್ಯ ನಡೆಸಿಕೊಡ್ತೇವೆ. ಛತ್ರದ ಖರ್ಚು, ಊಟದ ಖರ್ಚು, ಹುಡುಗನಿಗೆ ಕೊಡಬೇಕಾದ ಉಂಗುರ, ಬಟ್ಟೆ ಖರ್ಚು ನಾವು ವಹಿಸಿಕೊಳ್ತೇವೆ. ಅದಕ್ಕೆ ಅವಕಾಶ ಮಾಡಿಕೊಡು.”
ರಾವ್ ಮಾತನಾಡದೆ ಕೈ ಮುಗಿದರು. ಶಕುಂತಲಾ-ಶೋಭಾಳನ್ನು ಅಪ್ಪಿಕೊಂಡು ಅತ್ತರು.
“ಮೊದಲು ಪುರೋಹಿತರ ಮನೆಗೆ ಹೋಗಿ ಒಂದು ಒಳ್ಳೆಯ ದಿನ ನಿಶ್ಚಯಿಸಿಕೊಂಡು ಬನ್ನಿ.”
“ಹೌದಣ್ಣ ಆದಷ್ಟು ಭಾನುವಾರ ಇಡಪ್ಪ. ನಮಗೂ ಓಡಾಡಲು ಅನುಕೂಲ” ಎಂದಳು ದೇವಕಿ.
“ಮೊದಲು ವರೂಗೆ ಈ ವಿಷಯ ತಿಳಿಸಿ” ಶಕುಂತಲಾ ಹೇಳಿದರು.
“ಫೋನ್ ಮಾಡ್ತೀನಿ. ಈ ವಿಷಯ ಅವಳಿಗೆ ಈಗಾಗಲೇ ಗೊತ್ತಿರುತ್ತದೆ. ಆರ್.ಜಿ. ಹೇಳರ‍್ತಾನೆ” ಎಂದರು ಶ್ರೀನಿವಾಸರಾವ್.
ವಾರುಣಿಗೆ ಆರ್.ಜಿ. ವಿಷಯ ತಿಳಿಸಿದ್ದ. ವರು ಏನೂ ಮಾತಾಡಿರಲಿಲ್ಲ. ತಂಗಿ ಇತ್ತೀಚೆಗೆ ಸ್ವಾರ್ಥಿಯಂತೆ ವರ್ತಿಸುವುದು ಅವಳಿಗೆ ಗೊತ್ತಿತ್ತು. ಅವಳು ನಿಜವಾಗಿ ಹಳ್ಳಿಯ ಜೀವನಕ್ಕೆ ಹೊಂದಿಕೊಳ್ಳುತ್ತಾಳಾ?” ಎಂಬ ಪ್ರಶ್ನೆ ಕಾಡಿತು.
“ನಿನ್ನ ತಂಗಿ ತುಂಬಾ ಸ್ವಾರ್ಥಿ ವರು” ಎಂದರು ಚಂದ್ರಾವತಿ.
“ಅವಳು ಮದುವೆಯಾಗದೆ ಮನೆಯಲ್ಲಿ ಉಳಿದಿದ್ದಿದ್ರೆ ನಮ್ಮ ತಂದೆ-ತಾಯಿಗೆ ದೊಡ್ಡ ತಲೆನೋವಾಗಿರುತ್ತಿದ್ದಳು. ಅವಳಿಗೆ ಮುಂದೆ ಓದಲು ಇಷ್ಟವಿಲ್ಲ, ಕೆಲಸಕ್ಕೆ ಸೇರುವುದಕ್ಕೂ ಇಷ್ಟವಿಲ್ಲ. ಅವಳು ಯಾರು ಯಾರನ್ನೋ ಮದುವೆಯಾಗುವುದರ ಬದಲು ಒಳ್ಳೆಯ ಕುಟುಂಬ ಸೇರ‍್ತಿದ್ದಾಳೆ. ಅದಕ್ಕೆ ಸಂತೋಷವಾಗ್ತಿದೆ.”
“ಶರು ಅವರ ಮನೆಗೆ ಹೊಂದಿಕೊಳ್ತಾಳಾ?”
“ನನ್ನನ್ನೂ ಆ ಪ್ರಶ್ನೆ ಕಾಡಿತು. ಆದರೆ ಆ ಕುಟುಂಬಕ್ಕೆ ಹೊಂದಿಕೊಳ್ಳುವಂತೆ ಮಾಡುವ ಶಕ್ತಿ ಇದೆ ಅನ್ನಿಸಿತು………..”
“ನಿಜ. ಇಲ್ಲದಿದ್ರೆ ಅಷ್ಟು ದೊಡ್ಡ ಕುಟುಂಬ ನಿಭಾಯಿಸಲು ಆಗ್ತಿರಲಿಲ್ಲ. ಆರ್.ಜಿ.ನ್ನೇ ನೋಡು. ನೀನು ಬರಲ್ಲ ಅಂದಿದ್ದಕ್ಕೆ ಕೋಪ ಮಾಡಿಕೊಂಡು ತನ್ನ ಹಠ ಗೆಲ್ಲಿಸಿಕೊಂಡ.”
“ನೀವು ಒಗ್ಗರಣೆ ಹಾಕಿದ್ರಲ್ಲಾ? ಅದಕ್ಕೆ ಅವರು ಗೆದ್ದಿದ್ದು……”
“ಈಗೇನಾಯ್ತು? ಅವನು ಗೆದ್ದಿದ್ದರಿಂದ ನೀನು ಅವರ ಊರು ನೋಡುವ ಹಾಗೆ ಆಯ್ತು. ಒಳ್ಳೆಯ ಜನಗಳ ಪರಿಚಯ ಆಯ್ತು. ನಿನಗೆ ಲಾಭವಾಯ್ತು ತಾನೆ?”
“ನನಗೆ ಲಾಭವಾಯಿತೋ ಇಲ್ಲವೋ ತಿಳಿಯದು. ನನ್ನ ತಂಗಿಗಂತೂ ಲಾಭವಾಯ್ತು.”
“ರಜಾ ಹಾಕಿ 4 ದಿನ ಮೊದಲೇ ಎಂಗೇಜ್‌ಮೆಂಟ್‌ಗೆ ಹೋಗ್ತೀಯಾ?”
“ಇಲ್ಲ ಆಂಟಿ. ಈ ತಿಂಗಳು ಅಣ್ಣಾಮಲೈ ಯೂನಿವರ್ಸಿಟಿಯ ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳು ಬರ್ತಾ ಇದ್ದಾರೆ. ನಾನು ರಜ ಹಾಕುವಂತಿಲ್ಲ. ಭಾನುವಾರ ಎಂಗೇಜ್‌ಮೆಂಟ್ ಇದ್ರೆ ಬೆಳಿಗ್ಗೆ ಹೋಗಿ ಸಾಯಂಕಾಲ ವಾಪಸ್ಸಾಗ್ತೇನೆ.”
“ಸರಿಯಮ್ಮ………” ಎಂದರು ಚಂದ್ರಾವತಿ.
ವಾರದಲ್ಲಿ ಎಂಗೇಜ್‌ಮೆಂಟ್ ದಿನ ಗೊತ್ತಾಯಿತು.
“ವರು ….. ಭಾನುವಾರ ಎಂಗೇಜ್‌ಮೆಂಟ್….”
“ಒಳ್ಳೆಯದಾಯ್ತು. ರಜ ಹಾಕುವುದು ತಪ್ಪಿತು.”
“ನೆನ್ನೆ ಕೀರ್ತಿ ಅವನ ತಾಯಿ-ತಂದೆ ಬಂದಿದ್ರು. ಶರೂನ್ನ ಕರೆದುಕೊಂಡು ಹೋಗಿ ಮೈಸೂರು ಸಿಲ್ಕ್ ಸೀರೆ ಕೊಡಿಸಿದ್ರು. ಮದುವೆ ಸೀರೆಗಳನ್ನೂ ತೆಗೆಸಿದರು.”
“ಸೀರೆ ಆರಿಸಕ್ಕೆ ನೀನು ಹೋಗಿದ್ದೆಯಮ್ಮ?”
“ಇಲ್ಲ. ದೇವಕಿ ಹೋಗಿದ್ದಳು. ಕೀರ್ತಿ ಶರೂಗೆ ಚೆನ್ನಾಗಿರುವ ಮೊಬೈಲ್ ತೆಗೆದುಕೊಟ್ಟಿದ್ದಾರೆ. ನನಗೆ ಸೀರೆ, ನಿಮ್ಮಪ್ಪಂಗೆ ಪಂಚೆ, ಶಲ್ಯ ಎಲ್ಲಾ ತೆಗೆದಿದ್ದಾರೆ.”
“ಕೀರ್ತಿಗೆ, ಅವರ ತಾಯಿ-ತಂದೆಗೆ ಬಟ್ಟೆ ತೆಗೆಯಲ್ವಾ?”
“ನೆನ್ನೆ ನಾನು ಶೋಭಾ ಹೋಗಿ ತಂದೆವು. ದೇವಕಿ ಇಬ್ಬರಿಗೂ ಉಂಗುರ ತೆಗೆದಿದ್ದಾಳೆ. ಉಳಿದ ಖರ್ಚುಗಳನ್ನು ಶಿವಶಂಕರ, ಸುಧಾಕರ, ನಾಗರಾಜ ವಹಿಸಿಕೊಂಡಿದ್ದಾರೆ.”
“ಸರಿಯಮ್ಮ…..”
“ಎಂಗೇಜ್‌ಮೆಂಟ್‌ಗೆ ನೀಲಾನ ಫ್ಯಾಮಿಲಿ ಬರ‍್ತಿದೆ. ಅನಿಕೇತ್ ಕೂಡ ಬರ‍್ತಿದ್ದಾನೆ. ನೀನು ತಪ್ಪಿಸಿಕೊಳ್ಳದೆ ಬರಬೇಕು.”
“ಏನಮ್ಮ ಹೀಗೆ ಹೇಳ್ತಿದ್ದೀಯಾ? ನಾನು ಬರಲ್ಲಾಂತ ಹೇಳಿದ್ದೀನಾ?”
“ನೀನು ಬರದೇ ಇದ್ದರೆ ನೀಲಾ ಮನೆಯವರು ಮೈಸೂರಿಗೇ ಬಂದು ನಿನ್ನನ್ನು ಭೇಟಿ ಮಾಡ್ತಾರಂತೆ……”
“ನಾನು ಬರ‍್ತಾ ಇದ್ದೀನಮ್ಮಾ.”
“ಸಾಯಂಕಾಲ ಚಂದ್ರಾವತಿಗೆ ಫೋನ್ ಮಾಡ್ತೀನಿ.”
“ಹಾಗೇ ಮಾಡು. ಆರ್.ಜಿ. ಕರೆದಿದ್ದಾರೆ. ಬಹುಶಃ ನಾವೆಲ್ಲಾ ಒಟ್ಟಿಗೆ ಬರುತ್ತೇವೆ.”
ಶಕುಂತಲಾ ಕಾಲ್ ಕಟ್ ಮಾಡಿದರು. ನೀಲಾ ಆಂಟಿಯ ಫ್ಯಾಮಿಲಿಯವರು ಯಾಕಾದರೂ ಬರುತ್ತಾರೋ ಎನ್ನಿಸಿತು. ತಾಯಿ-ತಂದೆಗೆ ಅವರ ಬಗ್ಗೆ ಅತಿ ಪ್ರೀತಿ. ಅವರಿಗೂ ಅಷ್ಟೇ ಪ್ರೀತಿ, ಗೌರವ. ಇವರ ಪರಸ್ಪರ ಪ್ರೀತಿ, ಗೌರವ ಕಮಿಟ್ ಆಗುವಂತೆ ಮಾಡುತ್ತದೆನೋ ಅನ್ನಿಸಿತು.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :
(ಮುಂದುವರಿಯುವುದು)

–ಸಿ.ಎನ್. ಮುಕ್ತಾ, ಮೈಸೂರು

