ಪೌರಾಣಿಕ ಕತೆ

ಕಾವ್ಯ ಭಾಗವತ 98 : ಕೃಷ್ಣ ರುಕ್ಮಿಣಿ ಪ್ರೇಮ ಕಲಹ

Share Button

ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ – 10
ಕೃಷ್ಣ ರುಕ್ಮಿಣಿ ಪ್ರೇಮ ಕಲಹ

ಕೃಷ್ಣ ತನ್ನ ಶಯನ ಗೃಹದಲಿ
ಮಂಚದ ಮೇಲೆ ಕುಳಿತು ವಿನೋದದಿಂದಿರೆ
ಪಟ್ಟ ಮಹಿಷಿ ರುಕ್ಮಿಣಿದೇವಿ
ಚಾಮರದಿ ಸ್ವಾಮಿಗೆ ಗಾಳಿ ಬೀಸುತಿರೆ
ನರಾವತಾರದಿಂದ ಮೈವೆತ್ತು ಬಂದ
ಸಾಕ್ಷಾತ್‌ ಮಹಾಲಕ್ಷ್ಮಿದೇವಿಯ ತೆರದಿ
ಕಂಗೊಳಿಸುತ್ತಿರ್ಪ ದೇವಿಯ ಕಂಡು
ವಿನೋದದಿ ರುಕ್ಮಿಣಿಯ ಸಂಬೋಧಿಸಿ
ಮಹಾಪರಾಕ್ರಮಿಯೂ ಪ್ರಖ್ಯಾತನೂ
ರೂಪ ಕುಲ ಪದವಿಗಳಿಂದ
ನಿನ್ನ ಪಿತೃವಂಶಕೆ ಸರಿಸಮಾನೂ ಆಗಿದ್ದ
ಶಿಶುಪಾಲನ ಬಿಟ್ಟು ರಾಜ್ಯಕೋಶಗಳಿಲ್ಲದ
ಎಲ್ಲರಿಗೆ ಭಯಪಟ್ಟು ಸಮುದ್ರ ಮಧ್ಯದ
ದ್ವೀಪದಲಿ ಅವಿತಿರಿವ ಗೊಲ್ಲನ ವರಿಸಿ
ಕುಲ ರೂಪ ಗುಣ ಐಶ್ವರ್ಯ ಪದವಿ
ಯಾವುದರಲ್ಲೂ ಸಮಾನನಲ್ಲದ
ನನ್ನ ಕೈ ಹಿಡಿದ ನಿನಗೆ ಯಾವ ಸುಖವುಂಟು?
ನನ್ನ ಪ್ರೀತಿಸುತ್ತಿರುವವರು ಕಡುಬಡವರು
ಸರ್ವತ್ಯಾಗ ಮಾಡಿದ ಕೆಲ ಭಿಕ್ಷುಗಳು ಮಾತ್ರ ಮೆಚ್ಚಿಹ
ನಾವು ಮನೆ ಬಾಗಿಲು ಧನ ಪದವಿಗಳೆಂಬ
ಮೋಹವಾಗಲೀ ಅಭಿಮಾನವಾಗಲೀ ಇಲ್ಲದೆ
ನಮ್ಮ ಅನುಭವದಿ ನಾವೇ ತೃಪ್ತರಾಗಿಹೆವು
ಹೀಗೆ ಲೋಕವ್ಯಾಪಾರ ವಿಷಯದಿ
ಉದಾಸೀನನಾಗಿಹ ನನ್ನಿಂದ
ನಿನಗಾವ ಸುಖ, ಈಗಲೂ
ನಿನಗೆ ಅನುರೂಪನಾದ ರಾಜಶ್ರೇಷ್ಠನೊಬ್ಬನನು
ವರಿಸಿ ಸುಖದಿಂದಿರು ಎಂಬ
ತನ್ನ ಪ್ರಾಣೇಶನ ನುಡಿಕೇಳಿ
ಕಮಲಲೋಚನೆಯೂ ಮೃದುಹೃದಯಳೂ
ಆದ ಸಾಧ್ವಿ ರುಕ್ಮಿಣಿ ಮಾತನಾಡಲು
ಬಾಯಿ ಬಾರದಂತಾಗಿ
ಸೃತಿ ತಪ್ಪಿದಂತಾಗಿ ಕೆಳಗೆ ಬಿದ್ದಳು

ಅದ ನೋಡಿ ಕೃಷ್ಣ ಅವಳನ್ನೆತ್ತಿ
ಬೆನ್ನುತಟ್ಟಿ ಕಣ್ಣೀರ ವಸ್ತ್ರದಿಂ ಒರೆಸುತ
ಆಲಂಗಿಸುತ ತಾನು ಕೇವಲ
ಹಾಸ್ಯಕ್ಕಾಗಿ ನುಡಿದ ಮಾತುಗಳಿಗೇ
ಇಷ್ಟರಮಟ್ಟಿಗೆ ದುಃಖಿಸಿ ಕಂಗೆಟ್ಟವಳ
ಉಚಿತವಾಕ್ಯದಿ ಸಮಾಧಾನ ಪಡಿಸಲೆತ್ನಿಸುತ

ರುಕ್ಮಿಣೀ, ನಾನು ವಿನೋದಕ್ಕಾಗಿ ನುಡಿದ ಮಾತಿಗೆ ಕೋಪಿಸಿ
ಮಹಾಬುದ್ಧಿಶಾಲಿಯಾದ ನೀನು ಈ ಮಾತುಗಳು ಕೇವಲ
ಪ್ರಣಯ ಸಂಭಾಷಣೆಯೆಂದರಿಯದಾದೆಯಾ?

ನಿನಗೆ ಪ್ರಣಯ ಸಂಬಂಧ ಮುನಿಸಾದರೆ
ಹೇಗೆ ಕಾಣುವೆಯೆಂಬ ಚಪಲಕೆ ಒಳಗಾಗಿ
ಇಂತಹ ಮಾತುಗಳನಾಡಿದೆ
ನಿನ್ನ ವಿಷಯದಿ ನನಗೆ ಪ್ರಿತಿಯಿಲ್ಲವೆಂದು ತಿಳಿದೆಯಾ?
ಗೃಹಸ್ಥ ಧರ್ಮದಿ ಗಂಡಹೆಂಡಿರು ಹೀಗೆ
ಪ್ರಣಯ ಕಲಹದಲಿ ಕಾಲಕಳೆಯುವುದೂ
ಸುಖಮಯವಲ್ಲವೇ?
ಎಂದು ನುಡಿದು ರುಕ್ಮಿಣಿಯ
ಅಪ್ಪಿ ಆದರಿಸಿದನು

ಕೃಷ್ಣನ ಮಾತಿಂದ ಲೇಶಮಾತ್ರ ಧೈರ್ಯಹೊಂದಿ
ಲಜ್ಜೆಯಲಿ ರುಕ್ಮಿಣಿ ನುಡಿದಳು
ಕೃಷ್ಣಾ, ಶಾಡ್ಗುಣ್ಯ ಪರಿಪೂರ್ಣನೂ
ತ್ರಿಲೋಕಾಧಿಪತಿಯೂ ಬ್ರಹ್ಮೇಂದ್ರಾದಿ ವಂದ್ಯನೂ
ಆದ ನೀನೆಲ್ಲಿ, ಪ್ರಕೃತಿ ಗುಣಗಳಿಗೂ ನಿನ್ನ ಸಂಕಲ್ಪಕೆ
ಬದ್ಧಳಾದ ಪರತಂತ್ರಳಾದ ನಾನೆಲ್ಲಿ?
ಕುತ್ಸಿತರೂ ಕ್ಷತ್ರಿಯಾಧಮರೂ
ಆದ ರಾಜರುಗಳು ನಿನಗೆ ಸಮರೇ?
ನೀನು ಕಡುಬಡವರಿಗೆ ಅಸಹಾಯಕರಿಗೆ
ಆಧಾರವಾಗಿರುವುದು
ನಿನ್ನ ದೊಡ್ಡಸ್ಥಿಕೆಯ ಕುರುಹಲ್ಲವೇ,
ಚಾತುರ್ವಿಧ ಪುರುಷಾರ್ಥ ಸ್ವರೂಪನೂ
ಪೂರ್ಣಕಾಯನೂ ಆದ ನಿನಗೆ ಪ್ರಾಪಂಚಿಕ
ತುಚ್ಛ ಪದಾರ್ಥಗಳಿಂದಾಗಬೇಕಾದುದೇನಿದೆ?
ಹಿಂದೆ, ಈ ಜನ್ಮದಲಿ ನಿನ್ನ ಪಾದಸೇವೆ ಲಭಿಸದಿದ್ದರೆ
ನೂರು ಜನ್ಮವಾದರೂ ಎತ್ತಿ ನಿನ್ನ ಸೇವೆಯ
ದೊರಕಿಸಿಕೊಳ್ಳುವೆನೆಂದು
ನಾನು ಬರೆದ ಮಾತು ನೀನು ಮರೆತೆಯಾ?

ಕಾಮಾಂಧ ಚಿತ್ತ ವೃತ್ತಿಯಿಂದ ಹೊಸ ಹೊಸ ಪುರುಷರ
ಬಯಸುವ ನಾಡಾಡಿ ಹೆಂಗಸರ ವಿಷಯದಲಿ
ಹೇಳುವ ಮಾತ ನನ್ನ ವಿಷಯದಿ ನೀನು ನುಡಿಯಬಹುದೆ
ಎಂಬ ರುಕ್ಮಿಣಿಯ ಮಾತಿಗೆ ಕೃಷ್ಣ

ರುಕ್ಮಿಣೀ ನಿನ್ನ ಬಾಯಿಂದ ಇಂತಹ
ಪ್ರಿಯವಾಕ್ಯಗಳ ಕೇಳಬೇಕೆಂದೇ
ನಾ ಪರಿಹಾಸದಿ ಮಾತನಾಡಿದೆ
ಎಂದು ನುಡಿದು
ಅನುಪಮ ಗೃಹಸ್ಥ ಧರ್ಮದಿ
ಲೋಕಕೆ ಮಾದರಿಯಾದನು

ಕೃಷ್ಣ, ಕೇವಲ ರುಕ್ಮಿಣಿ ಪಾತ್ರವಲ್ಲ
ತನ್ನ ಮಿಕ್ಕೆಲ್ಲ ಪತ್ನಿಯರೊಂದಿಗೂ
ಇಂತಹ ಗೃಹಸ್ಥ ಧರ್ಮದಿ ನಡೆಯುತ್ತಿದ್ದನು
ಎಲ್ಲರಿಗೂ ಪುತ್ರ ಪೌತ್ರಿಯರು ಜನಿಸಿದರು
ಕೃಷ್ಣ ಪುತ್ರ ಪೌತ್ರ ಪರಿವಾರವು
ಅಸಂಖ್ಯವಾಯಿತು

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :
 https://surahonne.com/?p=45260

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *