ಪರಾಗ

ಕಾಲದ ಯಾನದಲ್ಲಿ

Share Button

“ಅಮ್ಮ…. ನಾಳಿದ್ದು, ಅಂದ್ರೆ ಶನಿವಾರ ನಾವು ಬೆಂಗಳೂರಿಗೆ ಹೊರಟಿದ್ದೀವಿ.”
ಮಗ ಚಿರಂತನ್ ಹೇಳಿದಾಗ ಅಡಿಗೆ ಮನೆಯಲ್ಲಿ ಏನೋ ಕೆಲಸದಲ್ಲಿದ್ದ ಆರತಿ ಪಕ್ಕನೆ ತಿರುಗಿ ನೋಡಿದಳು.
“ಏನೆಂದೆ?”
“ನಾವು ನಾಳಿದ್ದು ಬೆಂಗಳೂರಿಗೆ ಹೊರಟಿದ್ದೀವಿ ಅಮ್ಮ.”
“ಹೌದೇನೋ ಚಿರು… ನೀವಿಬ್ರು ಇನ್ನೊಂದು ವಾರ ಇದ್ದಿದ್ರೆ ಚೆನ್ನಾಗಿತ್ತು.”
“ಆಗೊಲ್ಲಮ್ಮ… ಬೇಜಾರು ಮಾಡ್ಕೋಬೇಡ. ಸೋಮವಾರದಿಂದ ಮನಸ್ವಿ ಡ್ಯೂಟಿಗೆ ಹೋಗ್ಲೇಬೇಕು.”
“ಹೌದಾ? ಪರವಾಗಿಲ್ಲ ಬಿಡು. ನಾಳಿದ್ದೇ ಹೊರಟರಾಯ್ತು. ಪುಡಿ ಗಿಡಿ ಎಲ್ಲಾ ನೀವು ಹನಿಮೂನ್‌ಗೆ ಹೋಗಿದ್ದಾಗಲೇ ರೆಡಿ ಮಾಡಿಟ್ಟಿದ್ದೀನಿ. ನನ್ನ ಬಟ್ಟೆಗಳನ್ನ ಪ್ಯಾಕ್ ಮಾಡ್ಕೋಬೇಕು ಅಷ್ಟೇ.”
“ನೀನೂ ಬರ‍್ತೀಯೇನಮ್ಮ?”
“ಹೂಂ ಕಣೋ… ಇದೀಗ ಮದ್ವೆ ಆಗಿದೆ. ಹೊಸ ಸಂಸಾರ. ಮನಸ್ವಿಗೂ ಏನೂ ಅನುಭವ ಇಲ್ಲ. ನೀನಂತೂ ಈ ಕಡೆ ಕಡ್ಡಿ ಆ ಕಡೆ ಎತ್ತಿಡೋಲ್ಲ. ಪಾಪ ನಿನ್ ಹೆಂಡ್ತಿಗೆ ತೊಂದ್ರೆ ಆಗೋಲ್ವ… ಅದಕ್ಕೇ ನಾನು ಬಂದು ಸ್ವಲ್ಪ ದಿವಸ ಇದ್ದು ಅಡಿಗೆ ಮನೆ ರೆಡಿ ಮಾಡ್ಕೊಟ್ಟು ವಾಪಸ್ ಬರ‍್ತೀನಿ.”
“ಹೌದಾ?”
“ಹೂಂ”
ಚಿರಂತನ್ ಏನೂ ಮಾತಾಡದೇ ಹೊರಟು ಹೋದ.

“ತಾವಿಬ್ರೇ ಹೋಗ್ಬೇಕು’ ಅನ್ಕೊಂಡಿದ್ನೇನೋ ಚಿರು… ಅನಿಸಿತ್ತು ಅಲ್ಲೇ ನಿಂತಿದ್ದ ದಯಾನಂದ ಅವರಿಗೆ. ಆದರೆ ಅವರು ಬಾಯಿಬಿಟ್ಟು ಹೆಂಡತಿಗೆ ಏನು ಹೇಳಲಿಲ್ಲ. ಮಗನ ಮನೆಗೆ ಹೋಗಿ ಅವರ ಮನೆ ಸೆಟ್ ಮಾಡೋ ಹುಮ್ಮಸ್ಸಿನಲ್ಲಿದ್ದ ಆರತಿಗೂ ಅವನ ಮನಸ್ಸು ಅರ್ಥವಾಗಲಿಲ್ಲ.
“ಜೋಪಾನವಾಗಿರಿ, ಊಟ ತಿಂಡಿ ಸಮಯಕ್ಕೆ ಸರಿಯಾಗಿ ಮಾಡಿ. ಆಗಾಗ ಫೋನ್ ಮಾಡ್ತಾ ಇರಿ. ನಾನು ಆದಷ್ಟು ಬೇಗ ಬಂದು ಬಿಡ್ತೀನಿ….” ಅಂತ ಹೇಳುತ್ತಲೇ ಕಾರು ಹತ್ತಿದಳು ಆರತಿ.
ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕಿನ ಮನೆಯೊಂದರ ಮುಂದೆ ಅವರುಗಳು ಕಾರಿನಿಂದ ಇಳಿದಾಗ ಮಧ್ಯಾಹ್ನ ಹನ್ನೆರಡರ ಸಮಯವಾಗಿತ್ತು.

ಮನಸ್ವಿಯ ಸ್ನೇಹಿತೆ ಮತ್ತು ಅವಳ ಗಂಡ ಎರಡು ವರ್ಷದ ಮಟ್ಟಿಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರಿಂದ ಆ ಮನೆಯನ್ನು ಮನಸ್ವಿಗೆ ಬಾಡಿಗೆಗೆ ಕೊಟ್ಟಿದ್ದಳು. ಮನೆ ವಿಶಾಲವಾಗಿತ್ತು. ಕಾರ್ ಗ್ಯಾರೇಜು, ಮನೆ ಮುಂದೆ ಹೂವಿನ ಗಿಡಗಳು…. ಎಲ್ಲಾ ಚೆನ್ನಾಗಿತ್ತು. ಆರತಿಗಂತೂ ಖುಷಿಯಾಯ್ತು.
ಮಾರನೆಯ ದಿವಸ ಬೆಳಗಿನ ತಿಂಡಿಗೆ ದೋಸೆ, ಪಲ್ಯ, ಚಟ್ನಿ ಮಾಡಿದ ಆರತಿ ಮಗ ಸೊಸೆಯನ್ನು ಕರೆದು ಕೊಟ್ಟಳು. ಡೈನಿಂಗ್ ಟೇಬಲ್ ಮುಂದೆ ಕೂತು ಹರಟುತ್ತಾ ಅವರುಗಳು ತಿಂಡಿ ತಿಂದು ಮುಗಿಸಿದಾಗ ಆರತಿಗೆ ಸಮಾಧಾನವಾಯಿತು.

ಮಧ್ಯಾಹ್ನಕ್ಕೆ ಬಿಸಿ ಬೇಳೆ ಬಾತ್ ಮಾಡಿಟ್ಟ ಆರತಿ ಅಡಿಗೆ ಮನೆ ಕಡೆಗೆ ಗಮನ ಹರಿಸಿದಳು. ಅಲ್ಲಿ ಹೆಚ್ಚಿಗೆ ಸಾಮಾನುಗಳೇನು ಇರಲಿಲ್ಲ. ಇಬ್ಬರೂ ಕೆಲಸಕ್ಕೆ ಹೋಗ್ತಾ ಇದ್ದದ್ದರಿಂದ ಹೆಚ್ಚಿನ ಅಡಿಗೆ ಮಾಡ್ತಾ ಇರಲಿಲ್ಲವೇನೋ ಅಂದುಕೊಂಡ ಆರತಿ ಅಲ್ಲಿದ್ದ ಪಾತ್ರೆ, ಡಬ್ಬಗಳನ್ನು ಎರಡು ರಟ್ಟಿನ ಬಾಕ್ಸ್ಗಳಲ್ಲಿ ಹಾಕಿ ತೆಗೆದಿಟ್ಟು ತಾನು ತಂದಿದ್ದ ಪಾತ್ರೆಗಳನ್ನು, ಡಬ್ಬಿಗಳನ್ನ ಅಚ್ಚುಕಟ್ಟಾಗಿ ಜೋಡಿಸಿದಳು. ಆಮೇಲೆ ಬಿಸಿಬಿಸಿ ಮಸಾಲ ಟೀ ಮಾಡಿ ಮಗ ಸೊಸೆಯನ್ನು ಕರೆದುಕೊಟ್ಟು ತಾನೂ ತೆಗೆದುಕೊಂಡಳು.
“ಅತ್ತೆ…. ನಾನು ನಂಗೆ ಬೇಕಾದ ಹಾಗೆ ಅಡಿಗೆ ಮನೇಲಿ ಎಲ್ಲಾ ಥಿಂಕ್ಸ್ ಜೋಡಿಸ್ಕೊತಾ ಇದ್ದೆ. ನೀವ್ಯಾಕೆ ತೊಂದ್ರೆ ತಗೊಂಡ್ರಿ?”
ಮನಸ್ವಿಯ ಮಾತು ಕೇಳಿ ಆರತಿ ನಕ್ಕು ಬಿಟ್ಟಳು.
ಮಗನ ಮನೇಲಿ ಕೆಲಸ ಮಾಡೋಕೆ ನಂಗೇನು ತೊಂದ್ರೆ ಮನಸ್ವಿ? ನಾನು ಬಂದಿರೋದೇ ನಿಮಗೆ ಸಹಾಯವಾಗಲಿ ಅಂತ. ಇಲ್ಲಿರೋ ಡಬ್ಬಿಗಳೆಲ್ಲಾ ಟ್ರಾನ್ಸ್ಪರೆಂಟ್ ಡಬ್ಬಿಗಳು… ನೀನು ಯಾವುದನ್ನೂ ಹುಡುಕಬೇಕಾಗಿಲ್ಲ. ಪುಡಿಗಳ ಡಬ್ಬಿಗಳಿಗೆ ಹೆಸರು ಬರೆದ ಸ್ಟಿಕ್ಕರ್ ಅಂಟಿಸಿಬಿಟ್ಟಿದ್ದೇನಿ.
ಮನಸ್ವಿ ಮಾತು ಮುಂದುವರೆಸಲಿಲ್ಲ.

ಸಂಜೆ ಸುಮಾರು ನಾಲ್ಕು ಗಂಟೆಯ ಸಮಯದ ಹೊತ್ತಿಗೆ ಕಾಲಿಂಗ್ ಬೆಲ್ ಸದ್ದಾಯ್ತು. ಆರತಿ ಹೋಗಿ ಬಾಗಿಲು ತೆಗೆದಳು.
“ಮನಸ್ವಿ ಮೇಡಂ ಇದ್ದಾರ?”
“ಇದ್ದಾಳೆ, ಬಾಮ್ಮ ಕರೀತೀನಿ.”
ಅಷ್ಟರಲ್ಲಿ ಮನಸ್ವಿಯೇ ರೂಮಿನಿಂದ ಹೊರಗೆ ಬಂದಳು.
“ಅಕ್ಕಾ ನನ್ನ ಹೆಸರು ತಾರಾ ಅಂತ. ನಿಮ್ಮ ಚಿಕ್ಕಮ್ಮ ನನ್ನನ್ನ ಕಳಿಸಿದ್ದಾರೆ. ಮನೆ ಕೆಲಸಕ್ಕೆ ಯಾರಾದ್ರೂ ಅರ್ಜೆಂಟಾಗಿ ಬೇಕು ಅಂತ ನೀವು ಅವರ ಹತ್ರ ಹೇಳಿದ್ರಂತೆ. ಅದ್ಕೇ ಕೇಳ್ಕೊಂಡು ಹೋಗೋಣ ಅಂತ ಬಂದೆ.”
“ಹೌದು ಚಿಕ್ಕಮ್ಮ ಈಗ ತಾನೇ ಫೋನ್ ಮಾಡಿ ತಾರನ್ನ ಕಳ್ಸಿದೀನಿ ಮಾತಾಡು ಅಂತ ಹೇಳಿದ್ರು.”
“ಆಯ್ತು ಅಕ್ಕ, ಮನೆ ಕಸ ಗುಡಿಸೋದು, ವರೆಸೋದು, ಪಾತ್ರೆ ತೊಳೆಯೋದು ಎಲ್ಲಾ ಕೆಲಸ ಮಾಡಿಕೊಡ್ತೀನಿ. ನಿಮ್ಮನೇಲಿ ವಾಷಿಂಗ್ ಮಷೀನ್ ಇದೇ ತಾನೆ?”
“ಹೂಂ ಇದೆ.”
“ಸರಿ ಹಾಗಾದ್ರೆ. ನೀವು ಬಟ್ಟೆ ವಾಷಿಂಗ್ ಮಷೀನ್‌ಗೆ ಹಾಕಿ ವಾಷ್ ಮಾಡಿರಿ. ನಾನು ಬಂದು ಬಟ್ಟೆ ಹೊರಗೆ ತೆಗೆದು ಬಿಸಿಲಿಗೆ ಹಾಕ್ತೀನಿ.”
“ಸರಿ ಹಾಗಾದ್ರೆ. ನೀನು ಬೆಳಿಗ್ಗೆ ಬೇಗ ಬಂದು ಬಾಗಿಲ ಮುಂದೆ ನೀರು ಹಾಕಿ ಕ್ಲೀನ್ ಮಾಡಿ ರಂಗೋಲಿ ಹಾಕ್ಬೇಕು.”
“ನಾನೇ ರಂಗೋಲಿ ಹಾಕ್ಬೇಕಾ?”
“ಹೂಂ.”
“ಆಯ್ತಕ್ಕ. ಸಂಬಳ ಐದು ಸಾವಿರ ಕೊಟ್ಬಿಡಿ. ಎಲ್ಲಾ ಕೆಲ್ಸ ಮಾಡ್ಕೊಂಡು ಹೋಗ್ತೀನಿ. ನಿಮ್ಮ ಚಿಕ್ಕಮ್ಮನ ಮನೇಲಿ ಮೂರು ವರ್ಷದಿಂದ ನಿಯತ್ತಾಗಿ ಮಾಡ್ಕೊಂಡು ಹೋಗ್ತಿದೀನಿ.”
“ಓಕೆ. ನಾಳೆ ಬೆಳಿಗ್ಗೆ ಬೇಗ ಬಂದುಬಿಡು. ನಾನು ಡ್ಯೂಟಿಗೆ ಹೋಗ್ಬೇಕು.”
“ಸರಿ ಅಕ್ಕ ಆದಷ್ಟು ಬೇಗ ಬರ‍್ತೀನಿ.”
ತಾರ ಆರತಿಯ ಕಡೆಗೆ ಮತ್ತೆ ಮತ್ತೆ ನೋಡುತ್ತಾ ಹೊರಟು ಹೋದಳು.

ಮಾರನೆಯ ದಿವಸ ಬೆಳಿಗ್ಗೆ ಬೇಗ ಎದ್ದು ಉಪ್ಪಿಟ್ಟು ಮಾಡಿದಳು ಆರತಿ. ಮನಸ್ವಿ ಡ್ಯೂಟಿಗೆ ಹೊರಟ ಅರ್ಧ ಗಂಟೆಯ ಮೇಲೆ ಚಿರಂತನ್ ಕೂಡ ಹೊರಟು ಬಿಟ್ಟ.
“ಅಮ್ಮಾ… ನಾವುಗಳು ಮಧ್ಯಾಹ್ನದ ಊಟಕ್ಕೆ ಬರೋಲ್ಲ…. ನಿಂಗೊತ್ತಿದೆಯಲ್ಲ, ನಿಂಗೇನು ಬೇಕೋ ಅದನ್ನ ಮಾಡ್ಕೋ.”
“ರಾತ್ರಿಗೆ ಚಪಾತಿ ಸಾಗು ಮಾಡ್ಲ?”
“ಹೂಂ.”
ಮಗನೂ ಹೊರಟು ಹೋದ ಮೇಲೆ ಮನೆ ಖಾಲಿ ಖಾಲಿ ಅನಿಸಿತು ಆರತಿಗೆ. ನಿಧಾನವಾಗಿ ಪೂಜೆ ಮುಗಿಸಿ ಉಪ್ಪಿಟ್ಟು ಬಿಸಿ ಮಾಡಿದಳು. ತಾರ ಬೆಳಿಗ್ಗೆ ಬೇಗ ಬಂದು ಎಲ್ಲಾ ಕೆಲಸ ಮುಗಿಸಿ ಹೊರಟು ಹೋಗಿದ್ದರಿಂದ ಏನೇನೂ ಕೆಲಸವಿರಲಿಲ್ಲ. ಉಪ್ಪಿಟ್ಟು ತಿಂದು ಟೀ ಮಾಡಿಕೊಂಡು ಕುಡಿದು ಊರಿಂದ ತಂದಿದ್ದ ಪುಸ್ತಕ ತೆಗೆದು ಪುಟ ಮಗುಚಿದಳು. ಸ್ವಲ್ಪ ಹೊತ್ತಿಗೇ ಅದೂ ಬೇಸರವಾಗಿ ಬೆಂಗಳೂರಿನಲ್ಲೇ ಇದ್ದ ಆತ್ಮೀಯ ಗೆಳತಿ ವನಿತನಿಗೆ ಫೋನ್ ಮಾಡಿದಳು.

“ಹಲೋ… ವನಿತಾ…”
“ಓಹ್… ಆರತಿ… ಹೇಗಿದ್ದೀಯ?”
“ಚೆನ್ನಾಗಿದೀನಿ ಕಣೇ, ನಾನೀಗ ಬೆಂಗಳೂರಿಗೆ ಬಂದಿದ್ದೀನಿ?”
“ಹೌದಾ?”
“ಹೂಂ, ಮೊನ್ನೆ ಬಂದೆ.”
“ಓ… ಮಗನ ಮನೆ ಸೆಟ್ ಮಾಡ್ಕೊಡೊಕೆ ಬಂದ್ಯಾ?”
“ಹೂಂ.”
“ನಿನ್ನ ಮಗನ ಮನೆ ಎಲ್ಲಿ?”
“ಜಯನಗರದ ನಾಲ್ಕನೇ ಬ್ಲಾಕಿನಲ್ಲಿ”
“ಓ…ಹೌದಾ?”
“ನನ್ನ ಸೊಸೆ ಮನಸ್ವಿಯ ಸ್ನೇಹಿತೆ ಮನೆ ಸದ್ಯಕ್ಕೆ ಖಾಲಿ ಇದೆ. ಈಗ ಅಲ್ಲಿಗೇ ಬಂದಿದ್ದೀವಿ. ಅವರುಗಳು ಇನ್ನೆರಡು ವರ್ಷವಾದ ಮೇಲೆ ಆಸ್ಟ್ರೇಲಿಯಾದಿಂದ ವಾಪಸ್ಸು ಬರ‍್ತಾರೆ. ಅಲ್ಲಿಯವರೆಗೆ ಯೋಚನೆಯಿಲ್ಲ ಆಮೇಲೆ ನೋಡೋಣ.”
“ಒಳ್ಳೆಯದಾಯ್ತು ಬಿಡು.”

“ಅದರ‍್ಲಿ, ನೀನು ಹೇಗಿದ್ದೀಯ? ಬೆಂಗಳೂರು ಇಷ್ಟ ಆಯ್ತ. ನೀನು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡ್ಯಾ ವನಿತಾ?”
“ನಂಗೆ ಹೊಂದಿಕೆಯಾಗುತ್ತೋ… ಬಿಡುತ್ತೋ… ಅಂತ ಕೇಳರ‍್ಯಾರು ಆರತಿ? ನಾನು ಇಲ್ಲಿರ‍್ಲೇಬೇಕು, ಇದೀನಿ ಅಷ್ಟೇ.”
“ಯಾಕೆ ಹೀಗೆ ಹೇಳ್ತಾ ಇದೀಯ ವನಿತಾ? ಬೆಂಗಳೂರು ನಿಂಗೆ ಇಷ್ಟ ಆಗ್ತಿಲ್ವಾ?”
“ಏನು ಹೇಳ್ಬೇಕೋ ಗೊತ್ತಾಗ್ತಾ ಇಲ್ಲ ಆರತಿ. ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೀತಾ ಇದೀನಿ. ಮನೆಗೆ ಯಾರೂ ಬರೋಲ್ಲ. ಇರೋರು ಮಾತೇ ಆಡೊಲ್ಲ, ನಂಗೆ ಬೇಕಾದ ಕಡೆ ಹೋಗೋಕೆ ಗೊತ್ತಾಗೋದೂ ಇಲ್ಲ. ಅದೇನೋ ಹೇಳ್ತಾರಲ್ಲ ಹಾಗೆ ಮಗಳನ್ನ ಅಳಿಯಂಗೆ ಕೊಟ್ಟು ಮಗನನ್ನ ಸೊಸೆಗೆ ಕೊಟ್ಟು ಒಂಟಿಯಾಗಿ ಕೂತಿದ್ದೀನಿ ಕಣೆ ಆರತಿ. ಮೊದಲಿನಿಂದಲೂ ಒಂಟಿ ಬದುಕಿಗೇ ಅಂಟಿಕೊಂಡಿರೋಳು ತಾನೆ ನಾನು?”
“ಕೋಲಾರದಲ್ಲಿ ನಿನ್ನ ಸ್ವಂತ ಮನೆ ಇತ್ತಲ್ಲ ಅದೇನಾಯ್ತು?”
“ಬಾಡಿಗೆಗೆ ಕೊಟ್ಟಿದ್ದಾನೆ ಮಗ.”
“ಹೌದಾ?”
“ಹೂಂ, ನೀನೊಬ್ಳೇ ಇಲ್ಲಿ ಯಾಕರ‍್ಬೇಕು. ಬೆಂಗಳೂರಿಗೆ ಬಂದು ನಮ್ಮ ಜೊತೇಲಿರು. ವಯಸ್ಸಾದ ಮೇಲೆ ಒಬ್ಳೇ ಇರೋದು ಸೇಫ್ ಅಲ್ಲ ಅಂತ ಹೇಳಿ ಆ ಮನೆ ಬಾಡಿಗೆಗೆ ಕೊಟ್ಟು ಇಲ್ಲಿಗೆ ಕರ‍್ಕೊಂಡು ಬಂದ. ಅಲ್ಲೇ ಇದ್ದಿದ್ರೆ ಪಕ್ಕದಲ್ಲಿದ್ದ ದೇವಸ್ಥಾನಕ್ಕೋ…. ಪಾರ್ಕಿಗೂ ಹೋಗ್ತಿದ್ದೆ. ಅಕ್ಕಪಕ್ಕದವರು ಆಗಾಗ ಬಂದು ಮಾತಾಡಿಸ್ತಾ ಇದ್ರು.”
“ಅದೇನೋ ನಿಜ.”
“ಹೂಂ, ಮಗ ಸೊಸೆ ಹೇಳಿದ್ದಕ್ಕೆಲ್ಲಾ ಒಪ್ಕೋಬಾರದಿತ್ತು… ನನ್ನ ಸ್ವಂತ ನಿರ್ಧಾರ ತಗೋಬೇಕಾಗಿತ್ತು ಅನಿಸುತ್ತೆ ಒಂದೊಂದು ಸಾರಿ. ಸ್ನಾನ, ಊಟ ಎಲ್ಲಾ ಅವರು ಹೇಳಿದಂತೆಯೇ ನಡೀಬೇಕು. ಈ ಕಡ್ಡಾಯದ ಟೈಮ್ ಟೇಬಲ್ ಬದುಕು ನಮ್ಮಂತಹವರಿಗೆ ಸೂಟ್ ಆಗೋಲ್ಲ ಕಣೆ.”
“ಬೇಜಾರು ಮಾಡ್ಕೋಬೇಡ ವನಿತಾ, ನಿಮ್ಮನೆ ಲೊಕೇಶನ್ ಕಳ್ಸು ಸಾಧ್ಯವಾದರೆ ಬಂದು ಮೀಟ್ ಮಾಡ್ತೀನಿ.”
“ನೀನು ನೆಕ್ಸ್ಟ್ ಟೈಮ್ ಬಂದಾಗ ಮೀಟ್ ಮಾಡೋಣ ಕಣೆ ಆರತಿ, ಈ ಸಲ ಬೇಡ ಪ್ಲೀಸ್…”
“ಈ ಸಲ ಯಾಕೆ ಬೇಡ?”
“ನಿನ್ನೆ ನನ್ನ ಬೀಗಿತ್ತಿ ಬಂದಿದ್ದಾರೆ, ಈವತ್ತು ಬೆಳಿಗ್ಗೆ ಅವರ ತಂಗಿ ಬಂದ್ರು. ಅವರುಗಳು ಎಷ್ಟು ದಿವಸ ಇರ‍್ತಾರೋ ಗೊತ್ತಿಲ್ಲ. ನೀನು ಈ ಸಮಯದಲ್ಲಿ ಬಂದ್ರೆ ಪರ್ಸನಲ್ ಆಗಿ ಏನೂ ಮಾತಾಡೋಕೆ ಆಗೋಲ್ಲ. ನಂಗೆ ತೃಪ್ತಿಯೂ ಸಿಗೋಲ್ಲ ಅಲ್ವಾ?”
“ಸರಿ ಬಿಡು ನೆಕ್ಸ್ಟ್ ಟೈಮ್ ಇಲ್ಲಿಗೆ ಬಂದಾಗ ನಿನ್ನ ಮೀಟ್ ಮಾಡ್ತೀನಿ. ನೀನೇ ಬಂದು ಇಲ್ಲಿ ಒಂದೆರಡು ದಿವಸ ಇರಬಹುದು.”
ವನಿತಾ ನಕ್ಕಳು.
“ಓಕೆ ವನಿತಾ, ಟೇಕ್ ಕೇರ್…”
ಫೋನ್ ಕಟ್ ಮಾಡಿದ ಆರತಿಗೆ ನಿರಾಸೆಯಾಯಿತು.

ವನಿತನಿಗೆ ಮೊದಲಿನಿಂದಲೂ ಹೊರಗೆ ತಿರುಗಾಡೋದು ಅಂದ್ರೆ ತುಂಬಾ ಇಷ್ಟ. ಈ ಮನೇಲೇ ಒಬ್ಬಳೇ ಮೌನವಾಗಿ ಕೂರೋದು ಅವಳಿಗೆ ಎಷ್ಟು ಹಿಂಸೆಯಾಗಿರಬಹುದು ಪಾಪ…. ಮಕ್ಕಳು ಚಿಕ್ಕವರಾಗಿದ್ದಾಗ ಅನಿವಾರ‍್ಯವಾಗಿ ಗಂಡನಿಗೆ ಡೈವೋರ್ಸ್ ಕೊಟ್ಟು ತವರು ಮನೆ ಸೇರಬೇಕಾಯ್ತು. ಆಮೇಲೆ ಅಣ್ಣನ ಸಹಾಯದಿಂದ ಕೋಲಾರದಲ್ಲೇ ಪುಟ್ಟದಾದ ಸ್ವಂತ ಮನೆ ಮಾಡಿಕೊಂಡು ಮಕ್ಕಳ ಜೊತೆ ಒಂದಿಷ್ಟು ದಿನ ಅಲ್ಲಿ ನೆಮ್ಮದಿಯಾಗಿದ್ಲು. ಆಮೇಲೆ ಮಕ್ಕಳ ವಿದ್ಯಾಭ್ಯಾಸ… ಮದುವೆ… ಅಂತ ಒದ್ದಾಡಿದ್ದಾಯ್ತು…. ‘ನನ್ನ ಮಕ್ಕಳು ದೊಡ್ಡವರಾರಾಗುವವರೆಗೆ ನಂಗೆ ಕಷ್ಟ ಕಣೆ, ಆಮೇಲೆ ನೋಡು ನಾನು ಮಹಾರಾಣಿಯ ಹಾಗರ‍್ತೀನಿ’ ಅನ್ನುತ್ತಿದ್ದ ವನಿತಾ ಈಗಲೂ ಸುಖವಾಗೇನಿಲ್ಲ. ಭಗವಂತ ಅವಳನ್ನು ಒಂಟಿ ಬದುಕಿಗೇ ಅಂಟಿಸಿಬಿಟ್ಟಿದ್ದಾನೆ. ಕಷ್ಟಪಟ್ಟು ಕಟ್ಟಿಸಿದ ಮನೆಯಲ್ಲೂ ವಾಸಿಸುವ ಯೋಗವಿಲ್ಲ. ಆರೋಗ್ಯ, ನೆಮ್ಮದಿಯ ಜೊತೆಗೆ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳುವ ಕಾಲನ ಕ್ರೂರ ಪ್ರಭಾವದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನಿಸಿ ಆರತಿಯ ಕಣ್ಣು ತುಂಬಿ ಬಂತು.

ಸಂಜೆ ಟೀ ಕುಡಿದು ಹೊರಗೆ ಬಂದು ಗೇಟಿನ ಬಳಿ ನಿಂತಾಗ ಪಕ್ಕದ ಮನೆಯ ವೈಶಾಲಿಯ ಪರಿಚಯವಾಯಿತು. ಆರತಿ ಅವರನ್ನು ಒಳಗೆ ಕರೆದಳು. ಊರಿನಿಂದ ತಂದಿದ್ದ ಚಕ್ಕುಲಿ, ಹುರಿಗಾಳು ಕೊಟ್ಟು ಮಾತಾಡ್ತಾ ಇದ್ದಾಗ ಮನಸ್ವಿ ಹೊರಗಿನಿಂದ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಬಂದು ರೂಮಿಗೆ ಹೊರಟು ಹೋದಳು. ಹತ್ತು ನಿಮಿಷವಾದ ಮೇಲೆ ರೂಮಿನಿಂದ ಆಚೆಗೆ ಬಂದ ಸೊಸೆಗೆ ಹೊಸ ಸ್ನೇಹಿತೆಯನ್ನು ಪರಿಚಯಿಸಿದಳು. “ಮನಸ್ವಿ… ಇವರು ವೈಶಾಲಿ ಅಂತ. ಪಕ್ಕದ ಮನೆಯಲ್ಲಿದ್ದಾರೆ….”
“ನಮಸ್ತೆ ಆಂಟಿ….” ಅನ್ನುತ್ತಾ ಮತ್ತೆ ಹೊರೆಗೆ ಹೊರಟು ಹೋದವಳನ್ನು ಕಂಡು ಕಸಿವಿಸಿಯಾಯ್ತು ಆರತಿಗೆ.
ವೈಶಾಲಿ ಮನೆಗೆ ಹೊರಟು ಹೋದ ಸ್ವಲ್ಪ ಹೊತ್ತಿಗೇ ಮನೆಗೆ ಬಂದಳು ಮನಸ್ವಿ.
“ಅವರು ನಿಮ್ಮ ಪಕ್ಕದಲ್ಲೇ ಇದ್ದಾರೆ ಕಣಮ್ಮ ಮನಸ್ವಿ, ನೀನು ಅವರ ಜೊತೆ ಒಂದೆರಡು ಮಾತಾಡಬಹುದಿತ್ತು ಅಲ್ವಾ….” ಅಂದಳು ಆರತಿ ತಡೆಯಲಾರದೇ…
“ಅಯ್ಯೋ… ವಯಸ್ಸಾದವರ ಹತ್ರ ನಾನು ಏನು ಮಾತಾಡೋದು ಬಿಡಿ ಅತ್ತೆ…”
ಅನ್ನುತ್ತಾ ಟಿವಿ ರಿಮೋಟ್ ಕೈಗೆತ್ತಿಕೊಂಡಳು ಮನಸ್ವಿ.
ಅವಳಿಗೆ ಟೀ ಮಾಡಲು ಅಡಿಗೆ ಮನೆಗೆ ಹೋದಳು ಆರತಿ.

ಮಾರನೆಯ ದಿವಸ ಆಫೀಸಿನಿಂದ ಮನೆಗೆ ಬಂದ ಚಿರಂತನ್
“ಅಮ್ಮಾ… ಮನಸ್ವಿಯ ಚಿಕ್ಕಪ್ಪ ಫೋನ್ ಮಾಡಿದ್ರು. ರಾತ್ರಿ ಊಟಕ್ಕೆ ಇನ್‌ವೈಟ್ ಮಾಡಿದ್ದಾರೆ. ನಿಂಗೂ ಖಂಡಿತ ಬರೋಕೆ ಹೇಳಿದ್ದಾರೆ.”
“ಹೌದಾ ಚಿರು?”
“ಹೂಂ, ನೀನು ಬರ‍್ತೀಯ ತಾನೆ?”
“ಬರ‍್ತೀನಪ್ಪ.”
“ಸರಿಯಮ್ಮ ಹಾಗಾದ್ರೆ… ರೆಡಿಯಾಗಿಬಿಡು.”
ರಾತ್ರಿ ಏಳು ಗಂಟೆಗೆ ಮನಸ್ವಿಯ ಚಿಕ್ಕಮ್ಮ ರೇಣುಕನ ಮನೆ ತಲುಪಿದರು. ಇವರುಗಳು ಒಳಗೆ ಹೋಗುತ್ತಿದ್ದ ಹಾಗೇ ಅವರ ಮಗಳು ದೀಪ್ತಿ ಬಂದು ಮನಸ್ವಿಯ ಕೈ ಹಿಡಿದು ತನ್ನ ರೂಮಿಗೆ ಕರೆದುಕೊಂಡು ಹೋದಳು.
“ಬನ್ನಿ ಆರತಿ, ಕೂತ್ಕೊಳ್ಳಿ. ನೀವು ಬಂದದ್ದು ತುಂಬಾ ಸಂತೋಷವಾಯ್ತು. ನಮ್ಮ ದೀಪ್ತಿ ನನ್ನ ಹಾಗೇ ಮಾತುಗಾತಿ. ಆದ್ರೆ ಮನಸ್ವಿ ಕಡಿಮೆ. ಅವಳು ಅವಳಮ್ಮನ ಹಾಗೇ. ಈಗ ದೀಪ್ತಿಯ ರೂಮಿಗೆ ಹೋಗಿ ನೋಡಿ ಬೇಕಾದ್ರೆ…. ದೀಪ್ತಿ ವಟವಟ ಅಂತ ಮಾತಾಡ್ತಾ ರ‍್ತಾಳೆ. ಮನಸ್ವಿ ಮಾತ್ರ ಅವಳ ಮುಂದೆ ಮೌನ ಗೌರಮ್ಮನ ತರ ಕೂತರ‍್ತಾಳೆ.”
ರೇಣುಕನ ಮಾತು ಕೇಳಿ ಆರತಿಗೆ ನಗು ಬಂತು.
ಉಪಚಾರದ ನಡುವೆ ಮಾಡಿದ ಊಟ ತುಂಬಾ ರುಚಿಯಾಗಿತ್ತು.
“ಅಡಿಗೆ ಎಲ್ಲಾ ತುಂಬಾ ಚೆನ್ನಾಗಿದೆ. ಪರೋಟ ಅಂತೂ ನನಗೆ ತುಂಬಾ ಇಷ್ಟ ಆಯ್ತು ರೇಣುಕಾ” ಅಂದಳು ಆರತಿ.
“ಥ್ಯಾಂಕ್ಸ್ ಆರತಿ, ನೀವು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರಂತೆ. ನಮ್ಮಕ್ಕ ಹೇಳ್ತಾ ಇದ್ಲು. ನೀವು ಮಾಡೋದನ್ನೆಲ್ಲಾ ನಮ್ಮ ಮನಸ್ವಿಗೂ ಕಲಿಸಿಬಿಡಿ. ನಮ್ಮಕ್ಕ ಮಗಳಿಗೇನೂ ಹೇಳ್ಕೊಟ್ಟಿಲ್ಲ….”
ರೇಣುಕನ ಮಾತು ಕೇಳಿ ಆರತಿಗೆ ಸಂತೋಷವಾದ್ರೂ ಮನಸ್ವಿ ‘ಅತ್ತೆ… ಅಡಿಗೆ ರುಚಿಯಾಗಿದೆ’ ಅಂತ ಒಂದಿವಸವಾದ್ರೂ ಹೇಳಿದ್ರೆ ಚೆನ್ನಾಗಿರ‍್ತಿತ್ತು….’ ಅಂದುಕೊಂಡಳು ಮನಸ್ಸಿನಲ್ಲಿ.

ಆ ರಾತ್ರಿ ಮಲಗಿಕೊಂಡಾಗ ಮದುವೆಯಾಗಿ ಇಷ್ಟು ದಿವಸ ಕಳೀತು… ಆದ್ರೂ ಮನಸ್ವಿ ನನ್ನ ಜೊತೆ ಒಂದೇ ಒಂದು ದಿವಸವೂ ಮನಸ್ಸು ಬಿಚ್ಚಿ ಮಾತಾಡಲಿಲ್ಲ…. ಅನಿಸಿದಾಗ ಆರತಿಯ ಮನಸ್ಸಿಗೆ ನೋವಾಯಿತು. ನಂಗೆ ಮಗಳೂ ಅವಳೇ… ಸೊಸೆಯೂ ಅವಳೇ ಅಂತ ನಾನೊಂದು ಕೊಂಡಿದ್ದೀನಿ. ಆದ್ರೆ ನನ್ನ ಮನಸ್ಸು ಅವಳಿಗೆ ಹೇಗೆ ತಾನೇ ಅರ್ಥವಾಗುತ್ತೆ….? ಇರ‍್ಲಿ, ಅವಳು ಮಾತು ಕಡಿಮೆ ಅಂತ ಅವಳ ಚಿಕ್ಕಮ್ಮನೇ ಹೇಳಿದ್ದಾರಲ್ಲ…. ಅದೇನೇ ಆಗ್ಲಿ ಮನಸ್ವಿ ನಾನೇ ಮೆಚ್ಚಿ ಆರಿಸಿದ ಹುಡುಗಿ, ಒಬ್ಬೊಬ್ಬರ ಸ್ವಭಾವ ಒಂದೊಂದು ತರಹ. ಅದೂ ಅಲ್ದೇ ಅವಳು ಈಗಿನ ಕಾಲದ ಹುಡುಗಿ. ಎಷ್ಟಾದ್ರೂ ಅವಳು ನನ್ನ ಪ್ರೀತಿಯ ಮಗನ ಹೆಂಡತಿ. ಅವಳ ಸ್ವಭಾವ ಹೇಗೆ ಇದ್ರೂ ನಾನೇ ಹೊಂದಿಕೊಂಡ್ರೆ ಆಯ್ತು ಒಟ್ಟಿನಲ್ಲಿ ಮಗ ಸೊಸೆ ಚೆನ್ನಾಗಿದ್ರೆ ಅಷ್ಟೇ ಸಾಕು…. ತನ್ನನ್ನು ತಾನೇ ಸಮಾಧಾನ ಮಾಡಿಕೊಂಡ ಆರತಿ ನಿಧಾನವಾಗಿ ನಿದ್ದೆಗೆ ಜಾರಿದಳು.

“ಚಿರು… ನಾಳೆ ಬೆಳಿಗ್ಗೆ ನಾನು ಮೈಸೂರಿಗೆ ಹೊರಡ್ತೀನಪ್ಪ.”
ಬೆಳಗಿನ ಕಾಫಿ ಸಮಯದಲ್ಲಿ ಮಗನಿಗೆ ಹೇಳಿದಳು ಆರತಿ.
“ಇಷ್ಟು ಬೇಗ…?”
“ಬೇಗ ಏನಪ್ಪ… ನಾನು ಬಂದು ಹದಿನೈದು ದಿನಗಳಾಯ್ತುಲ್ಲ. ಅಲ್ಲಿ ನಿಮ್ಮಪ್ಪಂಗೂ ತೊಂದ್ರೆ ಆಗುತ್ತೆ ಅಲ್ವಾ?”
“ಸರಿ, ನಾನೇ ಬಂದು ನಿನ್ನ ಬಿಟ್ಟು ಬರ‍್ತೀನಿ.”
“ಬೇಡ ಚಿರು…”
“ಯಾಕಮ್ಮ….?”
“ನಾಳೆ ನಾಳಿದ್ದು ನಿಮ್ಮಿಬ್ಬರಿಗೂ ರಜ ಇರುತ್ತೆ. ನಿಮ್ಮ ಪರ್ಸನಲ್ ಕೆಲಸ ಎಷ್ಟೋ ಇರುತ್ತೆ. ನೀನು ಕ್ಯಾಬ್ ಬುಕ್ ಮಾಡು, ನಾನೊಬ್ಳೇ ಹೋಗ್ತೀನಿ.”
“ಸರಿ ಅಮ್ಮ.”


ಆರತಿ ಮನೆಗೆ ಬಂದಾಗ ದಯಾನಂದ್ ಮನೆಯಲ್ಲಿ ಇದ್ರು. ಅವರೇ ಅಡುಗೆಯನ್ನೂ ಮಾಡಿಟ್ಟಿದ್ರು.
ಆ ರಾತ್ರಿ ತನ್ನ ರೂಮಿನ ಹಾಸಿಗೆಯ ಮೇಲೆ ಮಲಗಿದ ಆರತಿಗೆ ಅದೊಂದು ಬಗೆಯ ಸಮಾಧಾನ. ಮನಸ್ಸು ಹಿಂದಿನ ದಿನಗಳಿಗೆ ಜಾರಿತು……

ಡಿಗ್ರಿ ಮುಗಿದ ಒಂದು ವರ್ಷಕ್ಕೆ ಹುಬ್ಬಳ್ಳಿಯ ಬ್ಯಾಂಕ್ ಒಂದರಲ್ಲಿ ಕೆಲಸದಲ್ಲಿದ್ದ ದಯಾನಂದನ ಜೊತೆ ತನ್ನ ಮದುವೆ ನಡೆದಿತ್ತು. ವಿದ್ಯಾನಗರದಲ್ಲಿ ಮನೆ ಮಾಡಿದ್ದ ದಯಾನಂದ. ನಾವಿಬ್ರೂ ಹುಬ್ಬಳ್ಳಿಗೆ ಹೊರಟಾಗ ಅತ್ತೆ ವಸುಂಧರಾ ಕೂಡ ನಮ್ಮ ಜೊತೆ ಬಂದಿದ್ರು…. ರೈಲು ಪ್ರಯಾಣ… ಒಂಥರಾ ಚೆನ್ನಾಗಿತ್ತು. ಹೊಸ ಊರು ಹೊಸ ಬದುಕು…. ಎಲ್ಲಾ ಚೆನ್ನವೇ. ಪಕ್ಕದಲ್ಲೇ ಇದ್ದ ಮನೆ ಓನರ್ ತುಂಬಾ ಒಳ್ಳೆಯವರು. ಈವತ್ತು ಅತ್ತೆಯಾಗಿರುವ ನಾನು ಅಂದು ಸೊಸೆಯಾಗಿದ್ದೆ. ಆಗ್ಲೂ ಹೀಗೇ ಪಕ್ಕದ ಮನೆಯಲ್ಲಿ ಕೆಲಸ ಮಾಡ್ತಾ ಇದ್ದ ಹೆಂಗಸು ನಮ್ಮನೆ ಕೆಲಸಕ್ಕೆ ಬಂದಿದ್ಲು. ಆಗ ಮನೆ ಕೆಲಸಗಳ ಬಗ್ಗೆ ಸಂಬಳದ ಬಗ್ಗೆ ನಾನೊಬ್ಬಳೇ ನಿರ್ಧಾರ ತೆಗೆದುಕೊಂಡಿದ್ದೆ. ಅತ್ತೆಯನ್ನು ಏನೂ ಕೇಳಿರಲಿಲ್ಲ. ಅವರೂ ಏನೂ ಹೇಳಿರಲಿಲ್ಲ. ಪಕ್ಕದಲ್ಲಿದ್ದ ಚಂದ್ರಶೇಖರ ದೇಸಾಯಿ ಅವರ ಹೆಂಡತಿ ಆಗಾಗ ನಮ್ಮನೆಗೆ ಬರ‍್ತಿದ್ರು. ಅತ್ತೆ ಜೊತೆ ಮಾತಾಡ್ತಾ ಕೂತಿರ‍್ತಿದ್ರು. ಆದ್ರೆ ನಾನೆಂದೂ ಅವರ ಜೊತೆ ಕೂತಿರ‍್ತಾ ಇರ‍್ಲಿಲ್ಲ. ಆದ್ರೆ ಆ ಬೀದಿಯ ಕೊನೆಯಲ್ಲಿದ್ದ ರಶ್ಮಿ ಮನೆಗೆ ಆಗಾಗ ಹೋಗ್ತಿದ್ದೆ. ಆದ್ರೆ ಅವಳಿಗೆ ತುಂಬಾ ಜಂಬ, ಅಹಂಕಾರ ಅನ್ನೋದು ಗೊತ್ತಾದ ಮೇಲೆ ಅಲ್ಲಿಗೂ ಹೋಗೋದು ಬಿಟ್ಟೆ. ಅತ್ತೆ ತುಂಬಾ ಚೆನ್ನಾಗಿ ಆಡಿಗೆ ಮಾಡ್ತಿದ್ರು. ಅವರು ಮಾಡ್ತಿದ್ದ ತಿಳಿಸಾರು, ಗೊಜ್ಜಿನ ರುಚಿಯನ್ನಂತೂ ಮರೆಯೋಕೆ ಸಾಧ್ಯವೇ ಇಲ್ಲ. ಅವರಿಗೆ ಅಡಿಗೆ ಮಾಡೋದ್ರಲ್ಲಿ ತುಂಬಾ ಆಸಕ್ತಿ. ಪಕ್ಕದ ಮನೆಯವರ ಹತ್ರ ಜೋಳದ ರೊಟ್ಟಿ ಮಾಡೋದನ್ನ ಕಲಿತು ತಾವು ಮಾಡ್ತಿದ್ರು. ಅವರು ಕೆಲವು ಪದಾರ್ಥಗಳನ್ನ ಮಾಡುವಾಗ ನಂಗೂ ವಿವರಿಸ್ತಾ ಇದ್ರು… ಎಷ್ಟೋ ಟಿಪ್ಸ್ ಕೊಡ್ತಾ ಇದ್ರು. ದಯಾನಂದ ಅಮ್ಮನ ಕೈ ರುಚಿಯನ್ನು ಹೊಗಳಿ ಹೊಗಳಿ ಊಟ ಮಾಡ್ತಿದ್ರು. ನಾನು ಮಾತ್ರ ತುಟಿ ಬಿಚ್ತಾ ಇರ‍್ಲಿಲ್ಲ. ನಿಜ ಹೇಳ್ಬೇಕು ಅಂದ್ರೆ ಅವರು ಮಾಡ್ತಿದ್ದ ಎಷ್ಟೋ ಪದಾರ್ಥಗಳು ನಂಗೂ ಇಷ್ಟವಾಗ್ತಿತ್ತು. ನಾನು ಆವತ್ತು ಅದನ್ನ ಬಾಯಿ ಬಿಟ್ಟು ಹೇಳಿದ್ರೆ ಎಷ್ಟು ಚೆನ್ನಾಗಿತ್ತು. ಅತ್ತೆಗೆ ಎಷ್ಟು ಖುಷಿಯಾಗಿರ‍್ತಿತ್ತು ಪಾಪ… ಎಲ್ಲಾ ಈಗ ಅರ್ಥವಾಗ್ತಿದೆ.

ಯಾರನ್ನೂ ತುಂಬಾ ಹಚ್ಚಿಕೊಳ್ಳುವ ಸ್ವಭಾವ ನನ್ನದಲ್ಲ ಹೀಗಾಗಿ ಆಗ ಅತ್ತೆಯನ್ನೂ ಹಚ್ಚಿಕೊಂಡಿರಲಿಲ್ಲ. ಆದ್ರೆ ಯಾವತ್ತೂ ಅವರ ಮೇಲೆ ಕೋಪ ಮಾಡಿಕೊಂಡಿರಲಿಲ್ಲ…. ಅಸಡ್ಡೆಯನ್ನೂ ತೋರಿಸಿರಲಿಲ್ಲ. ಕೆಲವು ದಿವಸಗಳು ನಮ್ಮ ಜೊತೆ ಇದ್ದು ಅಲ್ಲಿಗೆ ಹೊರಟು ಹೋಗಿದ್ದ ಅತ್ತೆ ಮತ್ತೆ ಚಿರಂತನ್ ಚಿಕ್ಕವನಾಗಿದ್ದಾಗ ಬಂದದ್ದು ನನಗೆ ಎಷ್ಟೋ ಸಹಾಯವಾಗಿತ್ತು. ಆಮೇಲೂ ಎಷ್ಟೋ ಸಾರಿ ನಮ್ಮನೆಗೆ ಬಂದಿದ್ರು. ಆಗೆಲ್ಲಾ ನಾನೇ ಅಡಿಗೆ ಮಾಡುತ್ತಿದ್ದೆ. ಅತ್ತೆ ಮನಃಪೂರ್ವಕವಾಗಿ ಅದನ್ನು ಮೆಚ್ಚಿ ಹೊಗಳುತ್ತಿದ್ದರು. ಅದು ಅವರ ದೊಡ್ಡ ಗುಣ….

ದಿನಗಳು ಉರುಳಿದ್ದವು…. ಚಿರಂತನ್ ದೊಡ್ಡವನಾಗುವವರೆಗೆ ತುಮಕೂರು, ಕೋಲಾರ, ಮತ್ತೆ ಹುಬ್ಬಳ್ಳಿ, ಬೆಂಗಳೂರು ಅಂತ ಸುತ್ತಾಡಿ ಈಗ ಮೈಸೂರು ಸೇರಿದ್ದಾಗಿದೆ. ದಯಾನಂದನಿಗೆ ಇನ್ನೆರಡು ವರ್ಷ ಸರ್ವೀಸಿದೆ. ಅತ್ತೆ, ಮಾವ ಮೈಸೂರಿನ ಹತ್ತಿರವಿರುವ ಹಳ್ಳಿಯಲ್ಲಿ ವಿಶಾಲವಾದ ಮನೆಯೊಳಗೆ ಆರಾಮವಾಗಿದ್ದಾರೆ. ಮಾವನಿಗೆ ಎಂಬತ್ತೈದು ವರ್ಷ, ಅತ್ತೆಗೆ ಎಂಬತ್ತು ವರ್ಷ. ಇಬ್ಬರೂ ಆರೋಗ್ಯವಾಗಿದ್ದಾರೆ. ಅತ್ತೆ ಹೆಸರಿಗೆ ತಕ್ಕ ಹಾಗೇ ಸಹನಾಮಯಿ. ಅತ್ತೆ ಅಂದ್ರೆ ದೇವರ ಸಮಾನ ಅಂತಾರೆ. ಆದ್ರೆ ನಾನು ಯಾವತ್ತೂ ಅವರ ಜೊತೆ ಮನಸ್ಸು ಬಿಚ್ಚಿ ಮಾತಾಡಲಿಲ್ಲ, ಭಾವನೆಗಳನ್ನು ಹಂಚಿಕೊಳ್ಳಲೇ ಇಲ್ಲ….
ಆವತ್ತು ಅತ್ತೆ ಇದ್ದ ಸ್ಥಾನದಲ್ಲಿ ಈಗ ನಾನಿದ್ದೀನಿ. ಕಾಲಚಕ್ರ ಉರುಳಿದ ಹಾಗೇ ಬದುಕಿನಲ್ಲಿ ಸ್ಥಾನಗಳು ಬದಲಾಗುವುದು ಸಹಜ. ಎಲ್ಲರೂ ಇದನ್ನು ಒಪ್ಪಿ ಸ್ವೀಕರಿಸಬೇಕು ಅಷ್ಟೇ….
ಆರತಿಗೆ ನಿದ್ದೆ ಹತ್ತಿದಾಗ ಮಧ್ಯರಾತ್ರಿಯಾಗಿತ್ತು.

ಬೆಳಿಗ್ಗೆ ಅವಳು ಏಳುವಷ್ಟರಲ್ಲಿ ಅಡಿಗೆ ಮನೆಯಲ್ಲಿ ಕಾಫಿ ಡಿಕಾಕ್ಷನ್ ರೆಡಿಯಾಗಿತ್ತು. ದಯಾನಂದ್ ಪೇಪರ್ ಹಿಡಿದು ಕುಳಿತಿದ್ದರು. ಅವರ ಮುಂದೆ ಹೋಗಿ ನಿಂತ ಆರತಿ “ರೀ… ನಾಲ್ಕು ದಿವಸ ರಜ ಹಾಕಿ. ಹಳ್ಳಿಗೆ ಹೋಗಿ ಅತ್ತೆ ಮಾವನ ಜೊತೆ ಇದ್ದು ಬರೋಣ. ಅವರು ಒಪ್ಪಿದರೆ ಸ್ವಲ್ಪ ದಿನದ ಮಟ್ಟಿಗೆ ಕರ‍್ಕೊಂಡು ಬರೋಣ” ಅಂದಳು.
“ಓ… ಹೊಸದಾಗಿ ಅತ್ತೆ ಅನ್ನೋ ಪ್ರಮೋಶನ್ ಸಿಕ್ಕಿದರ ಪರಿಣಾಮ ಇದು…” ಅಂದುಕೊಂಡ ದಯಾನಂದ ಮೆಲುವಾಗಿ ನಕ್ಕು ತಲೆ ಆಡಿಸಿದರು.
ಆರತಿ ಕಾಫಿ ತರಲು ಅಡುಗೆ ಮನೆಗೆ ಹೋದಳು.

ಸವಿತಾ ಪ್ರಭಾಕರ್, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *