ಪ್ರವಾಸ

ಮಲೇಷ್ಯಾದ ಚೆಂದದ ಅಂದದ ಪ್ರಕೃತಿಯ ನೋಡಿಲ್ಲಿ : ಹೆಜ್ಜೆ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಲೇಷ್ಯಾಕ್ಕೆ ಬಂದ ಮೇಲೆ ಬಟು ಗುಹೆಗಳಲ್ಲಿ ಇರುವ ನಮ್ಮ ಮುರುಗನ್ ಸ್ವಾಮಿಯ ದೇಗುಲ ನೋಡದಿದ್ದರೆ ಹೇಗೆ? – ದೂರದಿಂದಲೇ 140 ಅಡಿ ಎತ್ತರದ ಮುರುಗನ್ ಸ್ವಾಮಿಯ ಪ್ರತಿಮೆ ಕಾಣುತ್ತಿತ್ತು. ಇದೊಂದು ದಾರ್ಮಿಕ, ಪ್ರಾಕೃತಿಕ ಹಾಗೂ ವಾಸ್ತುಶಿಲ್ಪದ ಅದ್ಭುತ ಸಂಗಮ. ಬಟು ಗುಹೆಗಳು ನಾನ್ನೂರು ಮಿಲಿಯನ್ ವರ್ಷಗಳ ಹಿಂದಿನಿಂದ ರಚಿತವಾದ ಸುಣ್ಣದ ಕಲ್ಲಿನ ಗುಹೆಗಳು. ಗುಹೆಯೊಳಗೆ ಪ್ರಕೃತಿಯೆಂಬ ಶಿಲ್ಪಿಯ ಕೈಚಳಕ ಎಲ್ಲರ ಮನ ಸೆಳೆದಿತ್ತು. ಗುಹೆಯ ಮುಂದೆ ಎಲ್ಲರನ್ನೂ ಹರಸುತ್ತಾ ನಿಂತಿರುವ ಮುರುಗನ್ ಸ್ವಾಮಿಯ ವಿಗ್ರಹಕ್ಕೆ ಸುಮಾರು ಮುನ್ನೂರು ಲೀಟರ್ ಚಿನ್ನದ ಬಣ್ಣವನ್ನು ಲೇಪಿಸಿದ್ದರು. ರವಿಯು ತನ್ನ ಕಿರಣಗಳಿಂದ ಈ ಹೊಂಬಣ್ಣದ ಮೂರ್ತಿಯನ್ನು ಅಲಂಕರಿಸಿದ್ದ. ಇಲ್ಲಿ ಐದು ಗುಹೆಗಳಿದ್ದು, ಗುಹೆಗಳ ಮೇಲ್ಭಾಗದಲ್ಲಿ ಬೆಳಕು ತೂರಿ ಬರಲು ನೈಸರ್ಗಿಕ ಬೆಳಕಿನ ಕಿಂಡಿಗಳೂ ಇದ್ದವು. ಮುರುಗನ್ ದೇಗುಲವನ್ನು ತಲುಪಲು ರಂಗು ರಂಗಿನ ಕಾಮನ ಬಿಲ್ಲಿನ ಬಣ್ಣಗಳನ್ನು ಹೊದ್ದ 270 ಮೆಟ್ಟಿಲುಗಳೂ ಇದ್ದವು. ಭಕ್ತರು ಮುರುಗನ್ ಸ್ವಾಮಿಯ ಪ್ರಾರ್ಥನೆ ಮಾಡುತ್ತಾ ಮೆಟ್ಟಿಲುಗಳನ್ನು ಏರಿದರೆ, ಪ್ರವಾಸಿಗರು ಸುತ್ತಮುತ್ತಲಿದ್ದ ಪಾರಿವಾಳಗಳನ್ನೂ ಹಾಗೂ ಅಲ್ಲಿಂದಿಲ್ಲಿಗೆ ಛಂಗನೆ ಹಾರುತ್ತಿದ್ದ ಮಂಗಗಳನ್ನು ಗಮನಿಸುತ್ತಾ ಪಾವಟಿಗೆಗಳನ್ನು ಏರುತ್ತಿದ್ದರು. ಹಾ, ಈ ದೇಗುಲಕ್ಕೆ ಭೇಟಿ ನೀಡುವವರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂಬ ಆದೇಶವೂ ಇದ್ದು, ಮಹಿಳೆಯರು ತಮ್ಮ ಕಾಲುಗಳನ್ನು ಹಾಗೂ ತೋಳುಗಳನ್ನು ಮುಚ್ಚುವಂತಹ ಉಡುಪನ್ನು ಧರಿಸಬೇಕೆಂಬ ನಿಯಮವೂ ಇದೆ.

ದೂರದೂರಿನಿಂದ ಮಲೇಷ್ಯಾಕ್ಕೆ ಆಗಮಿಸಿದ ತಮಿಳರು ತಮ್ಮ ಆರಾಧ್ಯ ದೈವವಾದ ಮುರುಗನ್‌ಗೆ ಈ ದೇಗುಲವನ್ನು ನಿರ್ಮಿಸಿದರು. ಯುದ್ಧದ ಅಧಿಪತಿಯಾದ ಮುರುಗನ್ ಶೌರ್ಯ, ಜ್ಞಾನ ಮತ್ತು ಸೌಂದರ್ಯದ ಸಾಕಾರ ಮೂರ್ತಿಯೆಂದು ಭಕ್ತರು ನಂಬುತ್ತಾರೆ. ಶಿವ ಮತ್ತು ಪಾರ್ವತಿಯ ಪುತ್ರನಾದ ಮುರುಗನ್‌ನ ಪೌರಾಣಿಕ ಕಥೆ ಕೇಳೋಣ ಬನ್ನಿ – ತಾರಕಾಸುರ ಎಂಬ ಅಸುರನು ಬ್ರಹ್ಮನಿಂದ ಒಂದು ವರವನ್ನು ಪಡೆದಿದ್ದನು, ‘ಶಿವನ ಪುತ್ರನಿಂದ ಮಾತ್ರ ನನ್ನ ಸಾವು ಸಂಭವಿಸಲಿ’ ಎಂದು. ಆಗ ಶಿವನು ತಪೋಮಗ್ನನಾಗಿದ್ದನು ಹಾಗೂ ಅವನಿಗೆ ಮಕ್ಕಳಿರಲಿಲ್ಲ. ಬ್ರಹ್ಮನಿಂದ ಪಡೆದ ವರದಿಂದ ತಾರಕಾಸುರನು ಗರ್ವದಿಂದ ಆರ್ಭಟಿಸುತ್ತಾ ದೇವತೆಗಳಿಗೆ ಕಿರುಕುಳ ನೀಡುತ್ತಿದ್ದನು. ಈ ರಕ್ಕಸನ ಕಾಟವನ್ನು ತಪ್ಪಿಸಲು ಶಿವನ ತೇಜಸ್ಸಿನಿಂದ ಆರು ಕಿಡಿಗಳು ಹೊರಹೊಮ್ಮಿದವು. ಅಗ್ನಿದೇವನು ಆ ಕಿಡಿಗಳನ್ನು ಗಂಗೆಗೆ ತಲುಪಿಸಿದನು, ಗಂಗೆಯು ಆ ಕಿಡಿಗಳನ್ನು ‘ಶರವಣ’ ಎಂಬ ಕೊಳದಲ್ಲಿ ಇರಿಸುತ್ತಾಳೆ. ಅಲ್ಲಿ ಆ ಆರು ಕಿಡಿಗಳು ಆರು ಸುಂದರ ಮಕ್ಕಳಾಗಿ ರೂಪುಗೊಳ್ಳುತ್ತವೆ. ಅವರನ್ನು ಆರು ಮಂದಿ ಕೃತ್ತಿಕೆಯರು ಸಲಹುವುದರಿಂದ ‘ಕಾರ್ತಿಕೇಯ’ ಎಂಬ ನಾಮಧೇಯ ಬಂದಿದೆ. ನಂತರದಲ್ಲಿ ಪಾರ್ವತಿಯು ಎಲ್ಲಾ ಮಕ್ಕಳನ್ನೂ ಅಪ್ಪಿಕೊಂಡಾಗ ಆರು ಮಕ್ಕಳೂ ಸೇರಿ ಒಂದೇ ಮಗುವಾಗುವುದು. ಇವನೇ ಷಣ್ಮುಖ ಅಂದರೆ ಆರು ಮುಖವುಳ್ಳವನು. ಮುಂದೆ ಬೆಳೆದು ದೊಡ್ಡವನಾದ ಮುರುಗನ್ ದೇವತೆಗಳ ಸೈನ್ಯಕ್ಕೆ ಸೇನಾಧಿಪತಿಯಾಗುವನು. ಮಾತೆ ಪಾರ್ವತಿಯು ಅವನಿಗೆ ‘ವೇಲ್’ ಎಂಬ ಶೂಲವನ್ನು ದಯಪಾಲಿಸುತ್ತಾಳೆ. ಮುರುಗನು ಅಸುರರ ಮೇಲೆ ದಾಳಿ ಮಾಡುತ್ತಾ ತಾರಕಾಸುರನನ್ನು ಸಂಹರಿಸುತ್ತಾನೆ. ಇವನಿಂದ ತಪ್ಪಿಸಿಕೊಳ್ಳಲು, ಶೂರಪದ್ಮನೆಂಬ ಅಸುರನು ಒಂದು ಮಾವಿನ ಮರವಾಗಿ ರೂಪಾಂತರವಾಗುವನು. ಮುರುಗನ್ ತನ್ನ ವೇಲ್‌ ನಿಂದ ಈ ಮರವನ್ನು ಸೀಳುತ್ತಾನೆ. ಆಗ ಮಾವಿನ ಮರದ ಒಂದು ಭಾಗ ಮುರುಗನ ವಾಹನವಾದ ನವಿಲಾದರೆ, ಮತ್ತೊಂದು ಭಾಗ ಮುರುಗನ ಧ್ವಜದ ಲಾಂಛನವಾದ ಕೋಳಿಯಾಗಿ ಮಾರ್ಪಾಡಾಗುತ್ತದೆ. ಮುರುಗನ ಆರು ಮುಖಗಳು – ಪಂಚಭೂತಗಳು ಮತ್ತು ಆತ್ಮವನ್ನು ಪ್ರತಿನಿಧಿಸುತ್ತವೆ. ಅವನ ವಾಹನವಾದ ನವಿಲು – ಅಹಂಕಾರವನ್ನು ಮೆಟ್ಟಿ ನಿಲ್ಲುವ ಸಂಕೇತವಾಗುತ್ತದೆ. ಅವನ ಆಯುಧವಾದ ‘ವೇಲ್’ ಜ್ಞಾನದ ಸಂಕೇತವಾಗಿ ನಿಲ್ಲುವುದು.

ಬಟು ಗುಹೆಗಳೆಂಬ ನೈಸರ್ಗಿಕ ದೇಗುಲಗಳ ಮಧ್ಯೆ ರಾರಾಜಿಸುತ್ತಿದೆ ಮುರುಗನ್ ದೇಗುಲ. ಸುಬ್ರಮಣ್ಯ ದೇಗುಲದ ಸುತ್ತ ಹಲವು ಹಿಂದೂ ದೇವತೆಗಳ ಗುಡಿಗಳೂ ಇದ್ದು, ಎಲ್ಲೆಲ್ಲಿಯೂ ನವಿಲುಗಳು ತಮ್ಮ ರೆಕ್ಕೆ ಬಿಚ್ಚಿ ನಿಂತಿರುವ ಅಪರೂಪದ ದೃಶ್ಯವನ್ನು ಕಾಣಬಹುದು. ಒಂದು ಗುಹೆಯಲ್ಲಿ ರಾಮಾಯಣದ ಕಥೆಯನ್ನು ಸುಂದರವಾದ ಪ್ರತಿಮೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಈ ಸುಣ್ಣದ ಕಲ್ಲಿನ ಗುಹೆಗಳು ಅಪರೂಪದ ಪ್ರಾಣಿಗಳು ಹಾಗೂ ಕೀಟಗಳ ವಾಸಸ್ಥಾನವೂ ಆಗಿರುವುದು ಮತ್ತೊಂದು ವಿಶೇಷ. ಪುರಾತನ ಕಾಲದಲ್ಲಿ ಬಹುಶಃ ಬುಡಕಟ್ಟು ಜನಾಂಗದವರು ತಮ್ಮ ಬದುಕನ್ನು ಇಲ್ಲಿ ಕಟ್ಟಿಕೊಂಡಿರಬಹುದು. 1870 ರಲ್ಲಿ ಚೀನೀಯರು ತಾವು ಬೆಳೆಯುತ್ತಿದ್ದ ಬೆಳೆಗಳಿಗೆ ಗೊಬ್ಬರವಾಗಿ ಬಳಸಲು ಬಾವಲಿಗಳ ಪಿಷ್ಠವನ್ನು ಹುಡುಕುತ್ತಾ ಇಲ್ಲಿಗೆ ಬರುತ್ತಾರೆ. ಮುಂದೆ ಪಾಶ್ಚಿಮಾತ್ಯ ವಸಾಹತುಶಾಹಿಗಳ ಆಕ್ರಮಣಕ್ಕೆ ತುತ್ತಾದ ಮಲೇಷ್ಯಾ ಅವರ ವಸಾಹತುವಾಗಿ ಉಳಿಯುತ್ತದೆ. ವಿಲಿಯಂ ಹಾರ್ನಾಡ್ ಎಂಬ ಅಮೆರಿಕಾದ ವಿಜ್ಞಾನಿ ಈ ಅಪರೂಪದ ಗುಹೆಗಳನ್ನು ಪತ್ತೆ ಮಾಡುವನು. ನಂತರದಲ್ಲಿ ವ್ಯಾಪಾರಕ್ಕಾಗಿ ಈ ನಾಡಿಗೆ ಆಗಮಿಸಿದ ‘ತಂಬುಸ್ವಾಮಿ ಪಿಳೈ’ ಎಂಬ ವ್ಯಾಪಾರಿ ಮುರುಗನ್ ದೇಗುಲವನ್ನು ನಿರ್ಮಿಸುತ್ತಾನೆ.

ನಾವು ಬಿಸಿಲಿನ ಬೇಗೆಯನ್ನು ತಪ್ಪಿಸಲು ಮುಂಜಾನೆ ಏಳಕ್ಕೇ ಈ ದೇಗುಲವನ್ನು ತಲುಪಿದೆವು. ಬಣ್ಣ ಬಣ್ಣದ ಮೆಟ್ಟಿಲುಗಳು ಮುಂದೆ ನಿಂತು ಫೋಟೋಗಳನ್ನು ಕ್ಲಿಕ್ಕಿಸಿದೆವು. ಮೆಟ್ಟಿಲುಗಳನ್ನು ಏರುವಾಗ ತುಸು ಆಯಾಸವಾದರೂ, ಮುರುಗನ್ ದೇಗುಲವನ್ನು ಕಾಣುವ ಹಂಬಲ ನಮ್ಮಲ್ಲಿ ಹೊಸ ಹುರುಪನ್ನು ಮೂಡಿಸಿತ್ತು. ಮೆಟ್ಟಿಲು ಹತ್ತುವಾಗ ನನ್ನ ಕೈಲಿದ್ದ ಬಾಳೆಹಣ್ಣನ್ನು ಕಿತ್ತುಕೊಂಡು ಹೋದ ಹನುಮಂತರಾಯ. ಕಪಿಯು ಬಾಳೆಹಣ್ಣಿನ ಸಿಪ್ಪೆ ಸುಲಿದು ಹಣ್ಣನ್ನು ತಿನ್ನುವುದನ್ನು ಕಂಡು ಅಚ್ಚರಿಯಾಗಿತ್ತು. ಪ್ರಕೃತಿ ನಿರ್ಮಿತ ಬಟು ಗುಹೆಗಳು ತಮ್ಮ ಚಿತ್ರ ವಿಚಿತ್ರ ಆಕಾರಗಳಿಂದ ಹಲವು ಕಥೆಗಳನ್ನು ಹೇಳುತ್ತಿದ್ದರೆ, ಮಾನವ ನಿರ್ಮಿತ ದೇಗುಲಗಳು ಹಿಂದೂ ಧಾರ್ಮಿಕ ಸಂಗತಿಗಳನ್ನು ಪ್ರಚುರ ಪಡಿಸುತ್ತಿದ್ದವು. ದೇಗುಲಗಳಲ್ಲಿ ಹಲವು ಬಗೆಯ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದ ಪುರೋಹಿತ ವರ್ಗ ಒಂದೆಡೆಯಾದರೆ, ಕತ್ತಲ ಗುಹೆಗಳಲ್ಲಿ ಅಪರೂಪದ ಕೀಟಗಳು, ಬಾವಲಿಗಳು ತಮ್ಮ ಭಾಷೆಯಲ್ಲಿ ಬಟು ಗುಹೆಯ ಕಥೆಯನ್ನು ಹೇಳುತ್ತಿದ್ದವು. ಮಹಾ ಮಂಗಳಾರತಿ ಮಾಡುತ್ತಿದ್ದರು ಪುರೋಹಿತರು, ಘಂಟಾನಾದ ಗುಹೆಯಲ್ಲಿ ಪ್ರತಿಧ್ವನಿಸಿ ಬೇರೆಯೇ ಲೋಕಕ್ಕೆ ನಮ್ಮನ್ನು ಕರೆದೊಯ್ದಿತ್ತು. ಅವರು ನೀಡಿದ ಹುಳಿಯನ್ನದ ಪ್ರಸಾದವನ್ನು ಸೇವಿಸುತ್ತಾ ಸ್ವಲ್ಪ ಕಾಲ ದೇಗುಲದ ಮುಂಭಾಗದಲ್ಲಿ ಕುಳಿತೆವು. ಆಗ ಅಲ್ಲಿಗೆ ಭಕ್ತರ ಗುಂಪೊಂದು ಮೆರವಣಿಗೆಯಲ್ಲಿ ಬಂತು, ಕೆಲವರು ಬಾಯಿಗೆ ಶೂಲವನ್ನು ಚುಚ್ಚಿಕೊಂಡಿದ್ದರು, ಮತ್ತೆ ಕೆಲವರು ಕಾವಡಿಯನ್ನು ಹೊತ್ತು ತಂದಿದ್ದರು. ಸಾಮಾನ್ಯವಾಗಿ ಜನವರಿ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿಯ ತಿಂಗಳ ಆದಿಯಲ್ಲಿ ಜರುಗುವ ‘ಥೈಪುಸಂ’ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಕಾವಡಿ ಹೊತ್ತು ತರುವ ಕ್ರಮವಿದೆ.

(ಮುಂದುವರೆಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=45216

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *