ಪರಾಗ

ಕಟ್ಟುಪಾಡು

Share Button

ಕೆಲವಾರು ದಿನಗಳ ಹಿಂದೆ ಚಿಕ್ಕಂದಿನಿಂದ ನೋಡಿದ್ದ, ಪ್ರೀತಿ ವಿಶ್ವಾಸ ಹೊಂದಿರುವ ಗೆಳತಿಯ ಮಗಳು ಚೇತನಾಳ ಮನೆಗೆ ಹೋಗಿದ್ದೆ. ನಾಲ್ಕು ವರುಷದ ಮಗಳು, ಗಂಡ ಹೆಂಡತಿಯರ ಚಿಕ್ಕ ಚೊಕ್ಕ ಸಂಸಾರ. ಗಂಡ ಹೆಂಡತಿ ಇಬ್ಬರೂ ಸಾಫ್ಟವೇರ್‌ ಎಂಜಿನಿಯರ್ಸ್, ಕೈ ತುಂಬಾ ದುಡಿಯುತ್ತಿದ್ದರು, ಮನೆಯಲ್ಲಿ ಎಲ್ಲಾ ಆಧುನಿಕ ಸಲಕರಣೆ ಸವಲತ್ತುಗಳಿದ್ದವು. ಮೂರು, ಅಲ್ಲಲ್ಲಾ ಎರಡೂವರೆ ಜನರ ಸಂಸಾರಕ್ಕೆ ಮೂರು ಜನ ಆಳುಕಾಳುಗಳು, – ಅಡುಗೆಗೆ ಒಬ್ಬರು, ಮನೆಯ ಕೆಲಸ ಕಾರ್ಯಗಳಿಗೆ ಒಬ್ಬರು, ಮಾಂಟಸರಿ ಶಾಲೆಯಿಂದ ಹಿಂದಿರುಗುವ ಮಗುವಿನ ಲಾಲನೆ ಪಾಲನೆಗೊಬ್ಬ ಕೇರ್‌ ಟೇಕರ್‌ – ಮತ್ತದೇ ಎರಡೂವರೆ ಜನರ ಸಂಸಾರಕ್ಕೆ ಎರಡು ಕಾರುಗಳು ಎರಡು ಟೂ ವೀಲರ್‌ ಗಳು, ಹೀಗೆ ಎಲ್ಲಾ ಸೌಕರ್ಯಗಳಿದ್ದವು.
ʼ ಬನ್ನಿ, ಬನ್ನಿ ʼ ಎಂದು ಕರೆಯುತ್ತಿದ್ದ ಚೇತನಾಳ ಮನೆಗೆ ಹೋಗಿದ್ದಾಯಿತು. ನನಗಾಗಿ ಅಂದು ವರ್ಕ್‌ ಫ್ರಂ ಹೋಂ ಅನುಕೂಲವನ್ನು ಉಪಯೋಗಿಸಿಕೊಂಡು ಜಾಸ್ತಿ ಮೀಟಿಂಗುಗಳು ಇಲ್ಲದಂತೆ ನೋಡಿಕೊಂಡಿದ್ದಳು.

ಹೋದ ಕೂಡಲೇ – ಏನು ಕುಡಿಯುತ್ತೀರಾ ಆಂಟಿ, ಕಾಫಿ, ಟೀ, ಹಾಲು, ಜ್ಯೂಸ್‌, ಮಜ್ಜಿಗೆ . . ಕೇಳಿದಳು ಚೇತನಾ.
ಏನು ಚೇತನಾ, ನನಗಾಗಿ ಎಲ್ಲ ರೆಡಿ ಮಾಡಿದ್ದೀಯಾ ? – ನಾನು ಆಶ್ಚರ್ಯದಿಂದ ಕೇಳಿದೆ.

ಹುಂ ಆಂಟಿ, ಆಪ್‌ ನಲ್ಲಿ ಎಲ್ಲ ಹುಡುಕಿ ಇಟ್ಟುಕೊಂಡಿದ್ದೀನಿ, ನೀವು ಯಾವುದು ಹೇಳುತ್ತೀರೋ ಅದನ್ನು ಆರ್ಡರ್‌ ಮಾಡುತ್ತೀನಿ
ಒಂದು ಕ್ಷಣ ಪಿಚ್‌ ಅನ್ನಿಸಿದರೂ ಸುಮ್ಮನಾದೆ. ಊಟಕ್ಕೂ ಅಷ್ಟೇ, ನನ್ನಿಷ್ಟದ ಊಟವನ್ನು ಕೇಳಿ ಅದರೊಂದಿಗೆ ಅವಳಿಗೆ, ನನಗೆ ನೀಡಬೇಕೆನಿಸಿದ್ದ ಒಂದೆರಡು ಖಾದ್ಯಗಳನ್ನು ಆರ್ಡರ್‌ ಮಾಡಿದಳು.

ಮಾತುಕತೆಗಳು, ಹಿಂದಿನ, ಬಾಲ್ಯದ ನೆನಪುಗಳು, ಅವಳ ಪುಟ್ಟ ಮಗಳೊಂದಿಗೆ ಆಟಪಾಠಗಳು ಎಲ್ಲಾ ಆಯಿತು, ಮಧ್ಯೆ ಮಧ್ಯೆ ʼಕ್ಷಮಿಸಿ ಆಂಟಿʼ ಎನ್ನುತ್ತಾ ಒಳಗೆ ಕಂಪ್ಯೂಟರ್‌ ಹತ್ತಿರ ಹೋಗಿ ಕೆಲಸ ಮಾಡಿ ಬರುತ್ತಿದ್ದಳು.
ಸಂಜೆಯಾಗುತ್ತಾ ಬಂತು. ಮನೆಗೆ ಹೊರಡುತ್ತೇನೆಂದೆ.
ಇರಿ ಆಂಟಿ, ಕೊನೇಪಕ್ಷ ಸಂಜೆಯದೊಂದು ಕಾಫಿಯನ್ನಾದರೂ ನಾನು ನಿಮಗಾಗಿ ಮಾಡಿ ತರುತ್ತೇನೆ, ಬಾಲ್ಕನಿಯಲ್ಲಿ ಕುಳಿತು ಕುಡಿಯೋಣ – ಎನ್ನುತ್ತಾ ಒಳ ಹೋದಳು.

ನಾನು ಬಾಲ್ಕನಿಯಲ್ಲಿ ಕುಳಿತು ಕಾಫಿಗಾಗಿ ಕಾಯುತ್ತಿದ್ದೆ. ಅಲ್ಲಿ ನಾಲ್ಕೆಂಟು ಕುಂಡಗಳು ಇದ್ದವು. ಕುಂಡಗಳಲ್ಲಿ ಬಗೆಬಗೆಯ ಗಿಡಗಳು ನಳನಳಿಸುತ್ತಿದ್ದವು. ಅದರ ಮಧ್ಯೆ ಸೊಂಪಾಗಿ ಬೆಳೆದಿದ್ದ ಕ್ರಿಸ್‌ ಮಸ್‌ ಟ್ರೀ ಸಹ ಇತ್ತು. ಇಷ್ಟೇ ನನ್ನ ಗಮನಕ್ಕೆ ಬಂದಿದ್ದರೆ ಚೆನ್ನಿತ್ತು. ಆದರೆ ನನ್ನ ಮನಸ್ಸು ಹರಿದಿದ್ದು, ಇಷ್ಟೆಲ್ಲಾ ಇದೆ, ಆದರೆ ತುಳಸಿಯ ಗಿಡ, ಬೃಂದಾವನವೇ ಇಲ್ಲವಲ್ಲಾ, ಎಂಬ ವಿಚಾರ. ಅದು ನನ್ನನ್ನು ಚಿಂತಿಸುವಂತೆ ಮಾಡಿತು.

ಚೇತನಾ ಕಾಫಿ ತಂದಳು. ಕಾಫಿ ಹೀರುತ್ತಾ ಮನಸ್ಸು ತಡೆಯದೆ ಕೇಳಿಯೇ ಬಿಟ್ಟೆ, ಏಕೆಂದರೆ ನನಗವಳಲ್ಲಿ ಅಷ್ಟು ಸಲುಗೆಯಿತ್ತು –
ಅಲ್ಲಾ ಚೇತನಾ, ಇಷ್ಟೆಲ್ಲಾ ನಿರ್ವಹಣೆ ಮಾಡುತ್ತೀಯಾ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ತುಳಸಿಯನ್ನೇಕೆ ಇಟ್ಟುಕೊಂಡಿಲ್ಲಾ?

ಥ್ಯಾಂಕ್ಸ್‌ ಆಂಟಿ, ಸಧ್ಯ ನೀವು ಹೋಗಿ ಬೇರೆಯವರ ಹತ್ತಿರ ಆಕ್ಷೇಪಣೆ ಮಾಡದೆ ನನ್ನನ್ನೇ ಕೇಳಿದಿರಿ, ಹೇಳುತ್ತೇನೆ ಕೇಳಿ. ನನಗೂ ಮನೆಯಲ್ಲಿ ಬೃಂದಾವನ, ತುಳಸೀಗಿಡ ಎಲ್ಲಾ ಇಟ್ಟುಕೊಳ್ಳುವ ಆಸೆ ಇದೆ. ಆದರೆ ಅದಕ್ಕೆ ಕಟ್ಟುಪಾಡುಗಳು ಬಹಳ. ಅಮ್ಮ, ಅತ್ತೆ ಬಂದಾಗಲೆಲ್ಲಾ, ಆಕ್ಷೇಪಣೆಗಳ ಸುರಿಮಳೆಯನ್ನೇ ಮಾಡುತ್ತಾರೆ. ಬೆಳಗ್ಗೆ ಎದ್ದು ತುಳಸೀ ಕಟ್ಟೆಗೆ ಎರಡು ಚೊಂಬು ನೀರು ಹಾಕಿ ಎರಡೆಳೆ ರಂಗೋಲಿ ಹಾಕೋಕ್ಕಾಗಲ್ವಾ?, ಬೆಳಗ್ಗೆ ಎದ್ದು ಸ್ನಾನ ಮಾಡಿ ಒಂದು ಕುಂಕುಮ ಹಚ್ಚೋಕೆ ಆಗೋಲ್ವಾ? ನಿನ್ನ ಗಂಡನಿಗೆ ಹೇಳಿ ತೆನೆ ತೆಗೆಸೋಕೆ ಆಗೋಲ್ವಾ? ಯಾಕೇಂದ್ರೆ ಹೆಂಗಸರು ತುಳಸಿ ಪೂಜೆ ಮಾಡಬೇಕು, ತುಳಸೀ ಕೀಳಬಾರದು ಅದಕ್ಕೆ, ಮತ್ತೆ ಸಂಜೆ ನೀರು ಹಾಕೋಕ್ಕೆ ಆಗೋಲ್ವಾ ಅಂತಾರೆ. ನನಗೂ, ನನ್ನ ಗಂಡನಿಗೂ ವಿಪರೀತ ಕೆಲಸಗಳು, ಕೆಲಸದ ಟೆನ್ಷನ್‌ ಗಳು ಇರುತ್ತವೆ. ಯಾವಾಗ ಆಗುತ್ತೆ, ಯಾವುದು ಆಗುತ್ತೆ ಅದನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೀವಿ. ಆಫ್‌ ಕೋರ್ಸ್‌ ಯಾವುದನ್ನೂ ಬಿಡೋಲ್ಲಾ. ಆದ್ರೆ, ಹೀಗೇ ಆಗಬೇಕು, ಹಾಗೇ ಆಗಬೇಕು ಅಂದ್ರೆ ತುಂಬಾ ಕಷ್ಟ ಆಗುತ್ತೆ ಆಂಟಿ. ಅವರುಗಳ ಮನಸ್ಸಿಗೆ ನೋವು ಮಾಡೋಕ್ಕೂ ಇಷ್ಟ ಇಲ್ಲಾ, ಅಲ್ಲದೇ ನನಗೂ ಒಮೊಮ್ಮೆ ನಾನು ತಪ್ಪು ಮಾಡ್ತಾ ಇದೀನೇನೋ ಅನ್ನೋ ಗಿಲ್ಟ್‌ ಕಾಡುತ್ತೆ. ಅದಕ್ಕೇ ಇಟ್ಟುಕೊಂಡು ತಪ್ಪು ಮಾಡುವುದು ಬೇಡ, ದೊಡ್ಡವರಿಗೆ ಹಲವಾರು ರೀತಿಯ ಕಿರಿಕಿರಿ ಮಾಡುವುದು ಬೇಡ, ʼಇಟ್ಟುಕೊಂಡಿಲ್ಲಾʼ ಎಂಬ ಒಂದೇ ಆಕ್ಷೇಪಣೆ ನನಗೇ ಇರಲಿ ಎಂದು ಬಿಟ್ಟು ಬಿಟ್ಟಿದ್ದೇನೆ.

ಅವಳ ವಾದಸರಣಿಯನ್ನು ಮೌನವಾಗಿ, ಆದರೆ ಗಮನವಿಟ್ಟು ಕೀಳಿಸಿಕೊಳ್ಳುತ್ತಿದ್ದೆ.

ಚೇತನಾ ಮುಂದುವರೆಸಿದಳು – ನನಗೂ ಮನೆಯಂಗಳದಲ್ಲಿ ತುಳಸಿ ಗಿಡ ಇರುವುದು ಇಷ್ಟ. ಎರಡು ಕಾರಣಗಳಿಗಾಗಿ, ಒಂದು ನಮ್ಮ ಸಂಪ್ರದಾಯದ ಪ್ರತೀಕ ಹಾಗೂ ವೈಜ್ಞಾನಿಕವಾಗಿ ಆರೋಗ್ಯಪೂರ್ಣ ಎಂಬ ಕಾರಣಕ್ಕಾಗಿ. ನನ್ನ ಮಗಳಿಗೆ ಶೀತವಾದಾಗ ಎದುರು ಮನೆಯಿಂದ ಎರಡು ದಳ ತುಳಸಿ ಕೇಳಿ ತಂದು ತಿನ್ನಿಸುತ್ತೇನೆ. ಹಾಗೇ ತುಳಸೀ ಹಬ್ಬ ಮಾಡುವುದೂ ನನಗೆ ಇಷ್ಟ. ಆ ಸಮಯದಲ್ಲಿ ಬೆಟ್ಟದ ನೆಲ್ಲೀಕಾಯಿಯ ಟೊಂಗೆಯೊಂದಿಗೆ ಒಂದು ತುಳಸೀ ಗಿಡವನ್ನೂ ಕೊಂಡು ತಂದು ಪೂಜೆ ಮಾಡಿ, ಹಬ್ಬ ಮಾಡಿ, ಅದು ಇರುವಷ್ಟು ದಿನ ಇಟ್ಟುಕೊಳ್ಳುತ್ತೇನೆ ಅಷ್ಟೆ.
ಆದರೆ ಕ್ರಿಸ್‌ ಮಸ್‌ ಟ್ರೀಯನ್ನು ಇಟ್ಟು ಕೊಂಡಿದ್ದೀಯಾ, ಅದು ಸೊಂಪಾಗಿ ಬೆಳೆದಿದೆ – ನಾನು ಕೇಳಿದೆ.

ಚೇತನಾ ಮುಂದೆವರೆಸಿದಳು – ಹೌದು ಆಂಟಿ, ಅದೇ ಕ್ರಿಸ್‌ ಮಸ್‌ ಟ್ರೀಗೆ ಯಾವುದೇ ಕಟ್ಟುಪಾಡುಗಳಿಲ್ಲ. ನಮ್ಮ ಕೆಲಸದವಳು ನೀರು ಹಾಕುತ್ತಾಳೆ, ಮಾಲಿ ಬಂದಾಗ ಮಣ್ಣು ಬದಲಾಯಿಸುತ್ತಾನೆ. ಕ್ರಿಸ್‌ ಮಸ್‌ ಹಬ್ಬ ಬಂದಾಗ ನಮ್ಮ ಪುಟ್ಟಿಯ ಕೇರ್‌ ಟೇಕರ್‌ ಲಕ್ಷ್ಮಿ ಇದ್ದಾಳಲ್ಲಾ, ಅವಳೇ ಅಲಂಕಾರಿಕ ಸಾಮಾನುಗಳನ್ನು ಅಟ್ಟದಿಂದ ಇಳಿಸಿ ಅವಳಿಗೆ ತೋಚಿದಂತೆ, ಪುಟ್ಟಿಯೊಡನೆ ಸೇರಿ ಅಲಂಕರಿಸುತ್ತಾಳೆ ಅಷ್ಟೇ. ನನಗೆ ಯಾವುದೇ ಜವಾಬ್ದಾರಿಗಳಿರುವುದಿಲ್ಲ. ಅದೇ ನವರಾತ್ರಿ ಹಬ್ಬವನ್ನು ಮಾಡೋಣ, ನಮ್ಮ ಸಂಸ್ಕೃತಿಯ ಗೊಂಬೆ ಕೂರಿಸುವ ಪದ್ಧತಿಯನ್ನು ಪುಟ್ಟಿಗೆ ತಿಳಿಸೋಣ ಎಂದರೆ, ಕಲಶವಿಡಬೇಕು, ಒಂಭತ್ತೂ ದಿನ ಬೆಳಗ್ಗೆ, ಸಂಜೆ ಪೂಜೆ ಮಾಡಬೇಕು, ಬೊಂಬೆ ಬಾಗಿನ ಮಾಡಬೇಕು . . . ಇವೆಲ್ಲಾ ಮಾಡಬಾರದು, ನನಗಿಷ್ಟವಿಲ್ಲ ಅಂತ ಅಲ್ಲಾ, ಆದರೆ ನನ್ನ ಆಫೀಸಿನ ಕೆಲಸಗಳ ಮಧ್ಯೆ, ಕಟ್ಟುಪಾಡುಳೊಂದಿಗೆ ಮಾಡಲು ಸಾಧ್ಯವಿಲ್ಲ. ತಪ್ಪು ತಪ್ಪು ಮಾಡುವುದಕ್ಕಿಂತ ಮಾಡದಿರುವುದೇ ನಮ್ಮ, ಈಗಿನವರ ಆಯ್ಕೆಯಾಗಿದೆ.

ನಾನು ಏನೂ ಹೇಳಲು ತೋಚನೆ ಸುಮ್ಮನೆ ಕೇಳುತ್ತಾ ಕುಳಿತಿದ್ದೆ.

ಅವಳು ಹೇಳಿದಳು – ಹಿಂದೆ ಅವಿಭಕ್ತ ಕುಟುಂಬ ಇರುತಿತ್ತು, ನಂತರದಲ್ಲೂ ಹೆಂಗಸರು ಮನೆಯಲ್ಲೇ ಇರುತ್ತಿದ್ದರು. ಈಗ ನಮಗೂ ಕೆರಿಯರ್‌ ಇದೆ, ಆರ್ಥಿಕ ಸ್ವಾತಂತ್ಯ್ರ, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ, ವಿಫುಲವಾದ ಅವಕಾಶಗಳು ಇವೆ. ನಮ್ಮ ಬುದ್ಧಿಶಕ್ತಿಯನ್ನು ಅವುಗಳಲ್ಲಿ ಉಪಯೋಗಿಸಬೇಕೆನ್ನುವ ಅಪೇಕ್ಷೆ ಇದೆ ಆಂಟಿ, ಹಾಗಾಗಿ ಸರಳವಾದ ದಾರಿಯನ್ನು ಆಯ್ದುಕೊಂಡಿದ್ದೇನೆ – ಎಂದ ಚೇತನಾ, ʼನೀವೇನನ್ನುತ್ತೀರಿ?ʼ ಎಂಬಂತೆ ನನ್ನತ್ತ ನೋಡಿದಳು.

ನನ್ನ ಮನಸ್ಸು ಚಿಂತನೆಯಲ್ಲಿ ತೊಡಗಿತ್ತು. ಅವಳು ಹೇಳುವುದೂ ಸರಿ ಎಂದಿತ್ತಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಡುವುದನ್ನು ಒಪ್ಪದಾದ ಮನ ಒಂದು ನಿರ್ಧಾರತ್ತ ವಾಲುತಿತ್ತು.

ನಾವುಗಳೂ ಸಮಯಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿಯನ್ನು ಅದರ ಮೂಲ ಉದ್ಧೇಶಕ್ಕೆ ಧಕ್ಕೆ ಬಾರದಂತೆ ಸರಳೀಕರಿಸದಿದ್ದರೆ ನಶಿಸಿಯೇ ಹೋಗಬಹುದಾದ ಸಾಧ್ಯತೆಯಿದೆ ಎನಿಸಿ, ಈ ನಿಟ್ಟಿನಲ್ಲಿ ಹಿರಿಯರು ಯೋಚಿಸಿ ಬದಲಾವಣೆಗೆ ನಮ್ಮನ್ನು ನಾವುಗಳು ಒಡ್ಡಿಕೊಳ್ಳಲೇ ಬೇಕು ಅಂದೆನಿಸಿ, ಅದನ್ನೇ ಚೇತನಾಳಿಗೂ ಹೇಳಿ ಮನೆಯ ಕಡೆ ಹೊರಟೆ.

ನಿಮ್ಮ ಯೋಚನಾಧಾಟಿಯನ್ನು ಇನ್ನಷ್ಟು ಹಿರಿಯರಿಗೆ ಹೇಳಿ ಆಂಟಿ, ನಮಗೂ ನಮ್ಮ ಸಂಸ್ಕ್ರತಿಯನ್ನು ಆಚರಿಸುವ, ಉಳಿಸುವ ಅವಕಾಶ ಮಾಡಿಕೊಟ್ಟು ಗಿಲ್ಟ್‌ ಫ್ರೀ ಮಾಡಿ ಆಂಟಿ. . . ಎಂದಳು ಚೇತನಾ.

ಪದ್ಮಾ ಆನಂದ್ , ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *