ಕಾದಂಬರಿ

ಕಾದಂಬರಿ : ಬದುಕು ಭ್ರಮೆ , ಭಾಗ 1

Share Button

ಬೆಳಗಿನ ವಾರ್ತಾಪತ್ರಿಕೆಯನ್ನು ಓದುತ್ತಿದ್ದ ಭಾರ್ಗವಿಗೆ ಮೊಬೈಲ್ ರಿಂಗಣಿಸಿದ ಸದ್ದು ಕೇಳಿಸಿತು. ಕೈಯಲ್ಲಿದ್ದ ಪೇಪರನ್ನು ಟೀಪಾಯಿಯ ಮೇಲೆ ಮಡಿಸಿಟ್ಟು ಯಾರಿರಬಹುದೆಂದು ಮೊಬೈಲಿನತ್ತ ಕಣ್ಣಾಡಿಸಿದಳು. ಮಗಳು ಮಾನಸಾಳ ಕರೆ. ಲಗುಬಗೆಯಿಂದ ಕೈಗೆತ್ತಿಕೊಂಡು ಹಲೋ ಎಂದಳು.

“ಹಲೋ ಅಮ್ಮಾ ನಾನು ಮಾನಸಾ, ಹೇಗಿದ್ದೀರಾ? ಅಲ್ಲಿ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದು ಭಾವಿಸುತ್ತೇನೆ”
“ಹಾ..ಪುಟ್ಟೀ, ಫೈನ್. ನೀನು ಹೇಗಿದ್ದೀ? ಕಾಲೇಜಿನ ಸುದ್ಧಿ ಏನು?” ಕೇಳಿದಳು ಭಾರ್ಗವಿ.
“ಎಲ್ಲಾ ಓ.ಕೆ. ಕಾಲೇಜಿನ ವಿಷಯವಾಗಿ ಹೇಳುವುದಕ್ಕಾಗಿಯೇ ನಾನೀಗ ಫೋನ್ ಮಾಡಿದ್ದು. ಮುಂದಿನ ತಿಂಗಳು ನಮ್ಮಲ್ಲಿ ‘ಗ್ರಾಜುಯೇಷನ್ ಡೇ’ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಎಲ್ಲ ಏರ್ಪಾಡುಗಳೂ ನಡೆಯುತ್ತಿವೆ.” ಎಂದಳು ಮಾನಸಾ.

“ವಾವ್ ! ಇಟೀಸ್ ಗುಡ್‌ನ್ಯೂಸ್. ಇನ್ನು ನೆನ್ನೆಮೊನ್ನೆ ತಾನೇ ಬೋಸ್ಟನ್ನಿಗೆ ಹೋದಹಾಗಿದೆ. ಆಡಾಡುತ್ತಾ ಮೂರುವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ ಅಲ್ಲವಾ? ಈ ಅಂತರದಲ್ಲಿ ನೀನು ಒಂದೆರಡು ಸಲ ಬಂದು ಹೋಗಿದ್ದೀಯೆ. ನಾನೂ ನಿಮ್ಮಕ್ಕನೂ ಒಂದೆರಡು ಸಾರಿ ಬಂದಿದ್ದೆವು. ಖುಷಿಯಾಯಿತು ಮಗಳೇ” ಎಂದಳು ಭಾರ್ಗವಿ.
“ಹಾ..ಅಮ್ಮಾ ಗ್ರಾಜುಯೇಷನ್ ಡೇಗೆ ಪಪ್ಪನನ್ನೂ ಕರೆದುಕೊಂಡು ಇಲ್ಲಿಗೆ ಬರಬೇಕು. ನೀನು ಹೂ ಅಂದರೆ ನಾನು ಟಿಕೆಟ್ ಬುಕ್ ಮಾಡಿಸಲು ಅನುಕೂಲವಾಗುತ್ತದೆ. ಹಾಗೇ ಅಕ್ಕನೂ ಬಂದಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು. ಅವಳು ಇತ್ತೀಚೆಗಷ್ಟೇ ಹೊಸ ಕಂಪನಿಗೆ ಜಾಯಿನ್ ಆಗಿದ್ದಾಳೆ. ಆದ್ದರಿಂದ ರಜೆ ಸಿಗುವುದು ಕಷ್ಟವಾಗಬಹುದು. ಆದ್ದರಿಂದ ಮಾನಸಾ ಇಲ್ಲಿಂದಲೇ ಬೆಸ್ಟ್ವಿಷ್ ಮಾಡ್ತೀನಿ ಡೋಂಟ್ ಮಿಸ್ಟೇಕ್ ಮಿ ಎಂದು ಹೇಳಿದಳು. ಅದಕ್ಕೇ ನೀವಿಬ್ಬರೇ ಬರಬಹುದಲ್ಲವಾ..ಪ್ಲೀಸ್ ಅಮ್ಮಾ” ಎಂದು ಆಹ್ವಾನಿಸಿದಳು ಮಾನಸಾ.
“ನಿನ್ನಕ್ಕ ಹೇಳಿದ್ದು ಸರಿಯಾಗಿದೆ. ಆದರೆ ನೀನು ಹೇಳಿದ್ದು ಏನು? ಪಪ್ಪಾ.. ಐ ಮೀನ್ ನಿಮ್ಮಪ್ಪ ಅವರನ್ನು ಕರೆದುಕೊಂಡು ಬಾ ಎಂದು. ಎಲ್ಲಾ ತಿಳಿದಿದ್ದು ಅದ್ಹೇಗೆ ನಿನ್ನ ಮನಸ್ಸಿಗೆ ಬಂತು? ಛೇ..” ಎಂದು ಕೋಪದಿಂದ ಕಾಲ್ ಕಟ್ ಮಾಡಿಬಿಟ್ಟಳು ಭಾರ್ಗವಿ. ಅ ಕಡೆಯಿಂದ ಮತ್ತೆ ಕರೆ ಬಂದರೂ ರಿಸೀವ್ ಮಾಡದೆ ಫೋನ್ ಸ್ವಿಚ್ ಆಫ್ ಮಾಡಿಬಿಟ್ಟರು. ಅಷ್ಟಕ್ಕೇ ಸಮಾಧಾನವಾಗದೇ ಮೊಬೈಲನ್ನು ಒಂದುಕಡೆ ಕುಕ್ಕಿ ತಮ್ಮ ಅಸಮಾಧಾನವನ್ನು ತೋರಿಸಿಕೊಂಡರು. ಅವರಿಗರಿವಿಲ್ಲದೆಯೇ ಕಣ್ಣು ತುಂಬಿ ಬಂತು. ಸುಸ್ತಾದವರಂತೆ ಸೋಫಾದಮೇಲೆ ಒರಗಿಕೊಂಡರು. ಅವರ ಹಿಂದಿನ ಬಾಳಿನ ಬುತ್ತಿ ಮನದಂಗಳದಿಂದ ಹೊರಗೆ ಹಣಿಕಿತು.

ಮೈಸೂರಿನ ಸಮೀಪದ ಸುತ್ತೂರಿಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ಸಣ್ಣ ಗ್ರಾಮದ ರೈತಾಪಿ ಕುಟುಂಬದ ಮಲ್ಲಪ್ಪ ಮತು ಶಾಂತಮ್ಮ ದಂಪತಿಗಳಿಗಿದ್ದ ನಾಲ್ಕು ಜನ ಮಕ್ಕಳಲ್ಲಿ ಭಾರ್ಗವಿ ಎರಡನೆಯವಳು. ಅಣ್ಣ ಬಾಲಕೃಷ್ಣ, ತಂಗಿಯರಾದ ಭಾಗ್ಯ ಮತ್ತು ಭುವನ. ಅತ್ಯಂತ ಸಿರಿವಂತಿಕೆ ಇಲ್ಲದಿದ್ದರೂ ಉಣ್ಣಲು, ಉಡಲು ಕೊರತೆಯಿಲ್ಲದ ಕುಟುಂಬ. ತಕ್ಕಮಟ್ಟಿಗೆ ಅಕ್ಷರಜ್ಞಾನವೂ ದಂಪತಿಗಳಿಗಿತ್ತು. ಆದ್ದರಿಂದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಒತ್ತಾಸೆಯಾಗಿ ನಿಂತು ಪ್ರೊತ್ಸಾಹ ಕೊಟ್ಟರು.

ಭಾರ್ಗವಿಯ ಅಣ್ಣ ಬಾಲಕೃಷ್ಣನಿಗೆ ಓದಿಗಿಂತ ಮನೆಯ ಕುಲಕಸುಬಿನತ್ತ ಒಲವು ಹೆಚ್ಚು. ಹೆತ್ತವರ ಬಲವಂತಕ್ಕೆ ಊರಿನಿಂದ ಮೈಸೂರಿಗೆ ಎಡತಾಕುತ್ತ ಪಿ.ಯು.ಸಿ.ಮುಗಿಸಿದ. ನಂತರ ವಿದ್ಯೆಗೆ ಶರಣುಹೊಡೆದು ಕೃಷಿಯತ್ತ ಮುಖಮಾಡಿದ. ಇದರಿಂದ ತಂದೆ ಮಲ್ಲಪ್ಪನವರಿಗೆ ಖುಷಿಯಾಗಿತ್ತು. ತಮ್ಮೊಡನೆ ನೇಗಿಲಿಗೆ ಹೆಗಲು ಕೊಡುತ್ತ ಭೂಮಿತಾಯ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಾನೆಂಬ ಭರವಸೆಯಿಂದ ಅದರಲ್ಲಿಯೇ ಪ್ರಗತಿ ಸಾಧಿಸಬಹುದೆಂಬ ಅಲೋಚನೆ. ಮಗನಿಗಿಂತ ಮಗಳು ಓದಿನಲ್ಲಿ ಚುರುಕಾಗಿದ್ದು ದಾಪುಗಾಲಾಕುತ್ತ ಪಾಸಾಗುತ್ತಿರುವಾಗ ಈ ಮೂಳ ಏಕೆ ಶರಣು ಹೊಡೆದ. ಓದಿದ್ದರೆ ಆಫೀಸರ್ ಹುದ್ದೆ ಹಿಡಿಯಬಹುದಾಗಿತ್ತು. ಆದರವನು ಅಪ್ಪ ಹಾಕಿದ ಆಲದಮರಕ್ಕೇ ನೇತು ಹಾಕಿಕೊಳ್ಳಲು ಸಿದ್ಧನೆಂದು ತೋರಿದನೆಂಬ ನಿರಾಸೆ ತಾಯಿ ಶಾಂತಮ್ಮನಿಗೆ. ಹೂಂ.. ಅವರವರ ಹಣೆಬರಹ ನಾವು ತಿದ್ದಲಾದೀತೇ? ಎಂದು ಸಮಾಧಾನ ತಂದುಕೊಂಡರು.

ಇದ್ಯಾವುದರ ಪರಿವೆಯೇ ಇಲ್ಲದೆ ಓದಿ ಭಾರ್ಗವಿ ಬಿ.ಎ., ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದಳು. ಮುಂದೆಯೂ ಓದಬೇಕೆಂಬ ಹಂಬಲ ಅವಳಿಗೆ, ತನ್ನ ಕಾಲಮೇಲೆ ತಾನು ನಿಲ್ಲಬೇಕೆಂಬ ಆಕಾಂಕ್ಷೆಯನ್ನು ಹತ್ತಿಕ್ಕಲಾರದೆ ಹೆತ್ತವರ ಮುಂದೆ ತನ್ನಾಸೆಯನ್ನು ತೋಡಿಕೊಂಡಳು.

“ಹೆಣ್ಣು ಮಗಳು ಹೆಚ್ಚು ಕಲಿತು ನೀನೇನು ಅಮಲ್ದಾರಿಕೆ ಮಾಡಬೇಕೇನು? ಈಗಾಗಲೇ ಪದವಿ ಗಳಿಸಿದ್ದೀ. ಮುಂದಕ್ಕೆ ಓದಿದರೆ ಅದಕ್ಕೆ ಸರಿಹೊಂದುವ ಗಂಡು ಸಿಗಬೇಕಲ್ಲಾ. ಸಿಕ್ಕರೂ ಅವರುಗಳ ಬೇಡಿಕೆಗಳು. ಸಂಸಾರದ ನೊಗ ಹೊತ್ತರೆ ಸಾಕು.” ಎಂದು ತಾಯಿ ಹೇಳಿದರೆ, ತಂದೆ ಮಲ್ಲಪ್ಪನವರಿಗೆ ತನ್ನ ಮಗಳ ಪ್ರಗತಿಯ ಬಗ್ಗೆ ಹೆಮ್ಮೆಯಿದ್ದರೂ ಮುಂದಿನ ಜವಾಬ್ದಾರಿಯ ಕಡೆ ಅರಿವಿತ್ತು. ಹೀಗಾಗಿ ಮಗಳಿಗೆ “ನೋಡು ಮಗಳೇ, ನಿನ್ನ ಆಸೆಯನ್ನು ನೆರವೇರಿಸಲು ನನಗೂ ಇಷ್ಟವೇ. ಆದರೆ ಮನೆಯಲ್ಲಿ ಇನ್ನೂ ಇಬ್ಬರು ತಂಗಿಯರಿದ್ದಾರೆ. ಅವರುಗಳ ಭವಿಷ್ಯದ ಕಡೆಗೂ ಗಮನ ಹರಿಸಬೇಕಲ್ಲವಾ. ವ್ಯವಸಾಯದಲ್ಲಿ ಈಗತಾನೇ ಹೊಸ ಪ್ರಯೋಗಗಳಿಗೆ ಕೈಹಾಕಿಬಿಟ್ಟಿದ್ದೇನೆ. ಅದು ಒಂದು ಹಂತ ತಲುಪುವವರೆಗೂ ಉತ್ಪನ್ನ ಕಡಿಮೆಯೇ. ಇರುವ ಅಲ್ಪಸ್ವಲ್ಪ ಹೈನುಗಾರಿಕೆಯಲ್ಲಿ ಖರ್ಚುಕಳೆದು ಎಷ್ಟು ಬಂದೀತು ಹೇಳು” ಎಂದು ತಮ್ಮ ತಾಪತ್ರಯವನ್ನು ಹೇಳಿಕೊಂಡರು.

ತಂದೆಯ ಮಾತಿನ ಹಿಂದೆ ಇದ್ದ ವಾಸ್ತವಿಕತೆಯನ್ನು ತಿಳಿದ ಭಾರ್ಗವಿ “ಅಪ್ಪಾ ಮನೆಯ ಪರಿಸ್ಥಿತಿ, ನಿಮ್ಮ ಜವಾಬ್ದಾರಿಯ ಬಗ್ಗೆ ನನಗೂ ಕಾಳಜಿಯಿದೆ. ನನ್ನನ್ನು ಮದುವೆಯ ನಂತರ ಮುಂದಕ್ಕೆ ಓದಿಸುತ್ತೇನೆಂಬ ಹುಡುಗ ಸಿಕ್ಕರೆ ಹುಡುಕಿ. ಅವರಿಗೆ ನಾನು ಹೊರೆಯಾಗುವುದಿಲ್ಲ. ನಾಲ್ಕು ಮಕ್ಕಳಿಗೆ ಪಾಠ ಹೇಳಿ ನನ್ನ ಖರ್ಚು ನಿಭಾಯಿಸಿಕೊಳ್ಳುತ್ತೇನೆ. ಆತ ಯಾವುದೇ ಕೆಲಸದಲ್ಲಿದ್ದರೂ ಪರವಾಗಿಲ್ಲ, ಪ್ಲೀಸ್ ಅಪ್ಪಾ, ಇದನ್ನಾದರೂ ನೆರವೇರಿಸಿಕೊಡಿ” ಎಂದು ಅಲವತ್ತುಕೊಂಡಳು.
ಮಗಳ ಮಾತುಗಳನ್ನು ಕೇಳಿದ ಶಾಂತಮ್ಮ ನಗುತ್ತಾ “ಏ ಹುಚ್ಚೀ, ಕನಸು ಕಾಣುವುದಕ್ಕೂ ಒಂದು ಮಿತಿ ಇರಬೇಕು ಕಣೇ. ಯಾವ ಹುಡುಗ ಈಗಿನ ಕಾಲದಲ್ಲಿ ತಾನು ಕಟ್ಟಿಕೊಂಡವಳನ್ನು ಮುಂದಕ್ಕೆ ಓದಿಸುತ್ತೇನೆ ಅನ್ನುವನು. ಹೋಗಲಿ ಅವನಿಗಿಷ್ಟವಿತ್ತೆಂದೇ ತಿಳಿಯೋಣ, ಅದರೆ ಅವನ ಅಪ್ಪ ಅಮ್ಮ ಒಪ್ಪಬೇಕಲ್ಲ. ಹ್ಹೆ..ಹ್ಹೆ.. ಇದು ಆಗಿಹೋಗುವ ಮಾತಲ್ಲ. ರೀ ಇವಳನ್ನು ಹೀಗೇ ಮಾತನಾಡಲು ಬಿಟ್ಟರೆ ಮುಗೀತು, ಅದಕ್ಕೆ ಕೊನೆಯೇ ಇಲ್ಲ. ಕೋಳಿಕೇಳಿ ಯಾರಾದರೂ ಮಸಾಲೆ ಅರೆಯುತ್ತಾರೆಯೇ? ಹೋಗಿ ಹೋಗಿ ಒಂದೆರಡು ಸಂಬಂಧಗಳು ಬಂದಿವೆಯಲ್ಲಾ ವಿಚಾರಿಸಿ.” ಎಂದರು.

ಆನಂತರವೂ ಭಾರ್ಗವಿ ತನ್ನ ಪಟ್ಟು ಬಿಡದೆ “ಅಪ್ಪಾ..ಪ್ಲೀಸ್ ನೀವು ವಿಚಾರಿಸುವ ಮೊದಲೇ ಗಂಡುಗಳ ಬಗ್ಗೆ ಹೀಗಾಗುತ್ತದೆನ್ನುವ ನಿರ್ಣಯಕ್ಕೆ ಏಕೆ ಬರುತ್ತೀರಿ. ಅಮ್ಮನಿಗೆ ಹೊರಗಿನ ಪ್ರಪಂಚದ ಸಂಗತಿಗಳು ಅಷ್ಟಾಗಿ ಗೊತ್ತಿಲ್ಲ. ಇತ್ತೀಚೆಗೆ ಹೆಂಡತಿಯನ್ನು ಓದಿಸಬೇಕೆಂಬ ಹಂಬಲ ಇರುವವರೂ ಇದ್ದಾರೆ. ವಿಚಾರಿಸಿ ನೋಡಿ. ಸಿಕ್ಕರೆ ಸರಿ ಇಲ್ಲದಿದ್ದರೆ ನನ್ನ ಹಣೆಬರಹ ಎಂದು ಸುಮ್ಮನಾಗುತ್ತೇನೆ” ಎಂದಳು ಭಾರ್ಗವಿ ನಿರಾಸೆಗೊಳಗಾದವಳಂತೆ ಕಾಲೆಳೆದುಕೊಳ್ಳುತ್ತಾ ತನ್ನ ರೂಮಿನ ಕಡೆ ನಡೆದಳು.

ಅಪ್ಪ ಮತ್ತು ಸೋದರಿಯ ಮಧ್ಯೆ ನಡೆದ ಸಂಭಾಷಣೆಯನ್ನು ಕೇಳಿಸಿಕೊಂಡ ಬಾಲಕೃಷ್ಣ ಅವರಿಬ್ಬರ ನಡುವೆ ತಾನು ಬಾಯಿ ಹಾಕಲು ಹೋಗದಿದ್ದರೂ ತನಗೆ ತಾನೇ “ನನ್ನನ್ನು ಹೆತ್ತವರು ಮುಂದಕ್ಕೆ ಓದಿಸಲು ತುದಿಗಾಲಲ್ಲಿ ನಿಂತಿದ್ದರು. ನಾನೆಷ್ಟು ಓದುತ್ತೇನೆಂದು ಹೇಳಿದರೂ ಹೀಗೇ ಮಾಡುತ್ತಿದ್ದರೇನು. ಆದರೇನು ಮಾಡಲಿ ನನಗೇ ಆ ಕಡೆಗೆ ಆಸಕ್ತಿಯಿಲ್ಲ. ಈ ತಂಗಿಗೆ ಓದಲು ಬೆಟ್ಟದಷ್ಟು ಆಸೆಯಿದೆ. ಇರಲಿ ತಪ್ಪೇನು. ಸಮಯ ನೋಡಿ ಅಪ್ಪನೊಡನೆ ಮಾತನಾಡುವೆ” ಎಂದುಕೊಂಡು ಜಮೀನಿನ ಕಡೆ ನಡೆದನು.

ಹೊಲಕ್ಕೆ ಹೋಗಿ ಅಲ್ಲಿ ಆಳುಕಾಳುಗಳಿಗೆ ಇಂತಿಂತಹ ಕೆಲಸಗಳೆಂದು ವಹಿಸಿ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರೂ ಪದೇ ಪದೇ ಅಪ್ಪನೊಡನೆ ತಂಗಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ಮಾತುಗಳೇ ಕಿವಿಯಲ್ಲಿ ಮಾರ್ದನಿಸುತ್ತಿದ್ದವು. ಏನು ಮಾಡಲಿ ನಾನು ಅವಳಿಗೆ ಬೆಂಬಲವಾಗಿ ನಿಲ್ಲೋಣವೆಂದರೆ ಹೆತ್ತವರನ್ನು ಎದುರು ಹಾಕಿಕೊಂಡಂತಾಗುವುದಿಲ್ಲವೇ, ಅವರುಗಳನ್ನು ಅನುನಯದಿಂದ ಒಪ್ಪಿಸಿ ಓದಿಸಿದೆ ಎಂದಿಟ್ಟುಕೊಂಡರೂ ಆನಂತರ ಗಂಡು ಹುಡುಕುವ ಕಷ್ಟ ಎದುರಾಗುವುದಿಲ್ಲವೇ? ಹೀಗೆ ಆಲೋಚನಾಲಹರಿಯಲ್ಲಿ ಇದ್ದವನಿಗೆ ಯಾರೋ ಭುಜವನ್ನು ಮುಟ್ಟಿದಂತಾಯಿತು. ಬೆಚ್ಚಿಬಿದ್ದು ವಾಸ್ತವಕ್ಕೆ ಬಂದವನಿಗೆ ಅವನ ಬಾಲ್ಯದ ಗೆಳೆಯ ಸಿದ್ಧಾರ್ಥ ಎದುರು ಬಂದು ನಿಂತಿದ್ದ.

“ಅರೇ ! ನೀನು ಇಲ್ಲಿ ಇದ್ದಕ್ಕಿದ್ದಂತೆ ಕೂಗಿ ಕರೆಯದೆ ಯಾವಾಗ ಬಂದೆಯೋ? ನಾನೆಲ್ಲೋ ಯೋಚನೆಯಲ್ಲಿದ್ದೆ, ಗಾಭರಿಯಾಯಿತು.” ಎಂದ ಬಾಲಕೃಷ್ಣ.
“ಅಪ್ಪಾ ಮಾರಾಯಾ, ನಾನು ಬಾಲೂ..ಬಾಲೂ ಎಂದು ಗಂಟಲು ಹರಿದುಕೊಳ್ಳುವಂತೆ ಕೂಗುತ್ತಲೇ ಬಂದೆ. ಅದ್ಯಾವ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದೆಯೋ ಪುಣ್ಯಾತ್ಮ, ಅದನ್ನು ಭಂಗಮಾಡಲಾಗಲಿಲ್ಲ. ಅದಕ್ಕೆ ಮುಟ್ಟಿತಟ್ಟಿ ಹೊರಕ್ಕೆ ತರಬೇಕಾಯಿತು. ಅಂತೂ ಕಣ್ಣುಬಿಟ್ಟು ನೋಡಿದೆಯಲ್ಲಾ” ಎಂದ ಸಿದ್ಧಾರ್ಥ.
ಗೆಳೆಯನ ಮಾತು ಕೇಳಿ ಹತ್ತಿಯನ್ನು ಬಿಡಿಸಿ ಬುಟ್ಟಿಗೆ ತುಂಬಿಸುತ್ತಿದ್ದ ಕೆಲಸವನ್ನು ಸಮೀಪದಲ್ಲಿದ್ದ ಆಳು ಮಗನೊಬ್ಬನಿಗೆ ಒಪ್ಪಿಸಿ ಸಿದ್ಧಾರ್ಥನೊಡನೆ ಹೊರಟ. “ ಬಾರೋ ಗೆಳೆಯ ಅಪರೂಪಕ್ಕೆ ಬಂದಿದ್ದೀ, ನಮ್ಮ ಮಾಮೂಲಿನ ಜಾಗಕ್ಕೆ ಹೋಗಿ ಕೂರೋಣ. ಎಲ್ಲವನ್ನೂ ಹೇಳ್ತೀನಿ.” ಎಂದು ಇಬ್ಬರೂ ಹೆಜ್ಜೆಹಾಕಿದರು.
ಪರಿಚಿತ ಹಲಸಿನ ಮರದ ನೆರಳಿಗೆ ನಡೆದು ಅಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತರು. ಗೆಳೆಯನ ಕೈಹಿಡಿದು ಪಕ್ಕಕ್ಕೆ ಕೂಡಿಸಿಕೊಂಡ.

“ಏನಾಯಿತೋ ನಿನಗೆ ಹೇಳು ಬಾಲೂ? ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿದ್ದಾರೆ ತಾನೇ? ಅಥವಾ ನೀನೇನಾದರೂ ಲವ್‌ಗಿವ್‌ನಲ್ಲಿ ಸಿಕ್ಕಿಬಿದ್ದಿದ್ದೀಯೋ ಹೆಂಗೆ? ಸುಮ್ಮನೆ ಹಾಗೇ ತಮಾಷೆಗೆ ಕೇಳಿದೆ. ಕೋಪ ಮಾಡಿಕೊಳ್ಳಬೇಡ.” ಎಂದ ಸಿದ್ಧಾರ್ಥ.
“ಹೂಂ ನೀನು ಬಾಲ್ಯದ ಗೆಳೆಯ, ನಿನಗೆ ಗೊತ್ತಿಲ್ಲದ ನನ್ನ ವಿಷಯ ಯಾವುದಿದೆ. ಅಂಥದ್ದೆಲ್ಲಾ ಸಮಸ್ಯೆ ಏನೂ ಇಲ್ಲಪ್ಪ. ಮನೆಯಲ್ಲಿ ಸೋದರಿ ಭಾರ್ಗವಿಯ ಮದುವೆಯ ಬಗ್ಗೆ ನಡೆದ ಮಾತುಕತೆಯನ್ನು ಸವಿಸ್ತಾರವಾಗಿ ಹೇಳಿಕೊಂಡ. ಇದಕ್ಕೆ ಪರಿಹಾರವೇನೆಂದು ಆಲೋಚನೆಯಲ್ಲಿದ್ದವನಿಗೆ ನೀನು ಕರೆದದ್ದು ಕೇಳಿಸಲಿಲ್ಲ. ಅವಳು ಆಸೆ ಪಡುವುದರಲ್ಲಿ ನನಗೆ ತಪ್ಪೇನೂ ಕಾಣಿಸದು. ಆದರೆ ಅಂತಹ ವ್ಯಕ್ತಿ ಎಲ್ಲಿ ದೊರಕುತ್ತಾನೆ? ಅದೇ ಸಮಸ್ಯೆ” ಎಂದು ಗೆಳೆಯನೊಡನೆ ಪೇಚಾಡಿಕೊಂಡ.
ಎಲ್ಲವನ್ನೂ ತದೇಕಚಿತ್ತದಿಂದ ಆಲಿಸಿದ ಸಿದ್ಧಾರ್ಥ “ಅಯ್ಯೋ ಇಷ್ಟೇನಾ ! ನಾನೇನೋ ತುಂಬ ಜಟಿಲವಾದ ಸಮಸ್ಯೆ ಅಂದುಕೊಂಡಿದ್ದೆ” ಎಂದ.
“ಅರೇ ನಿನಗೆ ಇದು ಚಿಕ್ಕದೇ? ನನಗೆ ನನ್ನ ನಿಸ್ಸಹಾಯಕತೆಯ ಬಗ್ಗೆ ಬೇಸರವಾಗುತ್ತಿದೆ ಕಣೋ” ಎಂದು ನೊಂದು ಹೇಳಿದ ಬಾಲಕೃಷ್ಣ.
“ನೋಡು ಮಿತ್ರಾ, ಲಕ್ಷ್ಯಕೊಟ್ಟು ಕೇಳಿಸಿಕೋ, ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರವಿದ್ದೇ ಇದೆ. ನಿನ್ನ ತಂಗಿ ಒಪ್ಪುವುದಾದರೆ ನಿನ್ನ ಸಮಸ್ಯೆ, ನೋವು ದೂರಾಗುತ್ತದೆ. ಮನಸ್ಸು ಮಾಡಬೇಕಷ್ಟೇ” ಎಂದ ಸಿದ್ಧಾರ್ಥ,
“ಹೌದಾ ಗೆಳೆಯಾ, ಅದ್ಯಾವುದಯ್ಯಾ ದಾರಿ? ಸೂಕ್ತವೆನ್ನಿಸಿದರೆ ನಾನೇ ನನ್ನ ತಂಗಿಯನ್ನು ಒತ್ತಾಯದಿಂದ ಒಪ್ಪಿಸುತ್ತೇನೆ.” ಎಂದ ಬಾಲಕೃಷ್ಣ ಅಸೆಯಿಂದ.
“ಸರಿ ಹಾಗಿದ್ದರೆ ಕೇಳು, ನನಗೆ ಸುತ್ತುಬಳಸಿ ಮಾತನಾಡುವ ಅಭ್ಯಾಸವಿಲ್ಲ. ಅದು ನಿನಗೂ ಗೊತ್ತು ತಾನೇ” ಎಂದ ಸಿದ್ಧಾರ್ಥ.
“ಅಲ್ಲೋ ಮಾರಾಯ ನಾನೇನು ನಿನ್ನನ್ನು ಇವತ್ತಿನಿಂದ ನೋಡುತ್ತಿದ್ದೇನೆಯೇ. ನಾವಿಬ್ಬರೂ ಎಂಥಹ ಸ್ನೇಹಿತರೆಂಬುದು ಸುತ್ತಮುತ್ತಲಿನ ಜನರಿಗೂ ಗೊತ್ತು. ನನ್ನ ಸಹನೆಯನ್ನು ಇನ್ನಷ್ಟು ಪರೀಕ್ಷಿಸಬೇಡ. ಬೇಗ ಹೇಳು” ಎಂದು ಅವಸರಪಡಿಸಿದ ಬಾಲಕೃಷ್ಣ.

“ಮುಖ್ಯ ವಿಷಯ ನಿನ್ನ ತಂಗಿಯನ್ನು ಕಂಡರೆ ನನಗೆ ಮೊದಲಿನಿಂದಲೂ ತುಂಬ ಇಷ್ಟ. ಆಕೆಯನ್ನು ನನ್ನ ಬಾಳಸಂಗಾತಿಯಾಗಿ ಮಾಡಿಕೊಂಡರೆ ಹೇಗೆಂದು ನನಗೆ ನಾನೇ ಅನೇಕ ಸಾರಿ ಹೇಳಿಕೊಂಡದ್ದಿದೆ. ಆದರೆ ನಾನೋ ನಿನ್ನಂತೆಯೇ ಪಿ.ಯು.ಸಿ. ಮುಗಿಸಿ ನೇಗಿಲಯೋಗಿಯಾಗಿದ್ದೀನಿ. ಆಕೆ ಈಗಾಗಲೇ ಪದವೀಧರಳು. ಆದ್ದರಿಂದ ಪ್ರಸ್ತಾಪ ಬೇಡವೆಂದು ತೆಪ್ಪಗಾಗಿದ್ದೆ. ಈಗ ನೀನು ಹೇಳುತ್ತಿರುವುದನ್ನು ಕೇಳಿದಾಗ ಮನದ ಬಯಕೆ ಚಿಗುರುವ ಲಕ್ಷಣ ಕಾಣಿಸುತ್ತಿದೆ. ನನಗೆ ಓದುವುದರಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಓದುವವರನ್ನು ಕಂಡರೆ ಬಹಳ ಇಷ್ಟ. ನಿನ್ನ ತಂಗಿಗೆ ಬೇಕಿದ್ದರೆ ಮುಂದಕ್ಕೆ ಓದಿಸುತ್ತೇನೆ. ಅದರಲ್ಲಿ ಸಂದೇಹಬೇಡ. ನನಗೆ ಮಡದಿಯಾಗಿ ಬರುತ್ತಾಳಾ ಎಂಬ ಬಗ್ಗೆ ನೀನು ಕೇಳಿ ಖಚಿತಪಡಿಸಿಕೋ. ನಾನು ಇದನ್ನು ತಮಾಷೆಗಾಗಿ ಹೇಳುತ್ತಿಲ್ಲ. ನನ್ನ ಹೃದಯದ ಮಾತುಗಳನ್ನು ನಿನ್ನ ಮುಂದಿಡುತ್ತಿದ್ದೇನೆ. ಮುಂದಿನ ಅಭಿಪ್ರಾಯ ನಿನ್ನದು” ಎಂದ ಸಿದ್ಧಾರ್ಥ.

(ಮುಂದುವರಿಯುವುದು)

-ಬಿ.ಆರ್.ನಾಗರತ್ನ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *