“ಪುಟ್ಟಮರಿ ಪುಟ್ಟಮರಿ ಏನು ಮಾಡುವೆ?
ಹಾಲು ಕುಡಿದು ಗಟ್ಟಿಯಾಗಿ ನಾನು ಆಡುವೆ”
ಹಾಡಿನ ಈ ಸಾಲುಗಳನ್ನು ಕೇಳಿದಾಗ ನಿಮ್ಮ ಕಣ್ಣು ಮುಂದೆ ಏನು ಬರುತ್ತದೆ? ಕೃಷ್ಣನ ಬಾಲರೂಪದಲ್ಲಿ ನಾವು ಅನೇಕ ಚಿತ್ರಗಳಲ್ಲಿ, ಕ್ಯಾಲೆಂಡರ್‌ಗಳಲ್ಲಿ, ಹಾಲು ಕುಡಿಯುತ್ತಾ, ಕೈಯಲ್ಲಿ ಬೆಣ್ಣೆ ಹಿಡಿದುಕೊಂಡಿರುವ ಮುದ್ದು ಬಾಲಕೃಷ್ಣನ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹುಟ್ಟಿದ ನಂತರ ತಾಯಿಯ ಹಾಲು, ನಂತರ ಮೇಲಿನ(ಹಸುವಿನ) ಹಾಲು ಹಾಗೂ ಮೂರರಿಂದ ಐದು ವರ್ಷವಾಗುವವರೆಗೆ ಪ್ರತಿನಿತ್ಯ ಹಸಿವಿನ ಹಾಲನ್ನು ಕೊಡುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ಕೊಡುವ ತಾಯಂದಿರ ಜೊತೆಗೆ ಈ ಹಾಲು ಉತ್ಪಾದಿಸುವ ಹೈನುಗಾರಿಕೆಯ ಕ್ಷೇತ್ರದಲ್ಲಿ ಅನೇಕ ಭಾರತೀಯ ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣ ಎಂದು ಗಮನಿಸಿದಾಗ ಭಾರತದ ಸಾವಿರಾರು ಹಳ್ಳಿಗಳಲ್ಲಿ ಮಹಿಳೆಯರು ಹೈನುಗಾರಿಕೆ ಕ್ಷೇತ್ರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಸಹಕಾರ ತತ್ವದ ಡೈರಿಗಳ ಮೂಲಕ ತಾವು, ತಮ್ಮ ಕುಟುಂಬ, ತಮ್ಮ ಹಳ್ಳಿ ಇವುಗಳನ್ನು ಅಭಿವೃದ್ಧಿಪಡಿಸಿರುವುದಲ್ಲದೇ ರಾಷ್ಟ್ರೀಯ ಅಭಿವೃದ್ಧಿಗೂ ಸತತ ತಮ್ಮ ಹಾಲು ಕೊಡುತ್ತಾ, ಪುರುಷರೊಂದಿಗೆ ಸರಿಸಮಾನವಾಗಿ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಅರಿಕಾರರಾಗಿದ್ದಾರೆ.
ಈಗಲೂ ಎಷ್ಟೋ ಜನ ಬೆಳಗ್ಗೆ ಒಂದು ಗ್ಲಾಸ್ ಹಾಲು ಕುಡಿಯುತ್ತಾರೆ. ಹಾಗೂ ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿಹಾಲನ್ನು ಕುಡಿದು ಮಲಗುವ ಪದ್ಧತಿ ಬಹಳ ಜನರಲ್ಲಿದೆ. ಸ್ವಲ್ಪ ನೆಗಡಿ, ಕೆಮ್ಮು, ಮೈಕೈನೋವಿದ್ದರೆ, ರಾತ್ರಿ ಮಲಗುವ ಮೊದಲು ಕುಡಿಯುವ ಒಂದು ಗ್ಲಾಸ್ ಹಾಲಿಗೆ ಕೊಂಚ ಅರಿಶಿನ, ಒಂದೆರಡು ಜಜ್ಜಿದ ಮೆಣಸು ಹಾಕಿ ಕುಡಿದರೆ, ಚೆನ್ನಾಗಿ ರಾತ್ರಿ ನಿದ್ದೆ ಬರುವುದಲ್ಲದೇ ಬೆಳಗ್ಗಿನ ಹೊತ್ತಿಗೆ ಆರೋಗ್ಯ ಸುಧಾರಿಸಿಕೊಳ್ಳುತ್ತದೆ ಎಂಬ ಅನುಭವ ನನ್ನಂತಹವರದು. ಆರೋಗ್ಯ ರಕ್ಷಣೆಗೆ ಹಾಲು ಪರಿಪೂರ್ಣ ಆಹಾರ ಎಂದು ತಜ್ಞರು ಹೇಳುತ್ತಾರೆ. ನಂತರದ ಕಾಲದಲ್ಲಿ ಹಸು/ಎಮ್ಮೆ ಹಾಲಿಗೆ ಪರ್ಯಾಯವಾಗಿ ಅನೇಕ ಕೃತಕ ಹಾಲಿನ ಪುಡಿಗಳು, ಸುವಾಸನೆ ಬೀರುವ ಹಾಲು, ಇವೆಲ್ಲಾ ಮಾರುಕಟ್ಟೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಡೀ ವಿಶ್ವದಲ್ಲಿ ಜೂನ್ ಒಂದರಂದು “ವಿಶ್ವ ಹಾಲಿನ ದಿನ”ವನ್ನು ಆಚರಿಸುತ್ತಾರೆ. ಹೀಗಾಗಿ ಈ ದಿನದ ಮಹತ್ವವನ್ನು ಸಂಕ್ಷಿಪ್ತವಾಗಿ ಈಗ ತಿಳಿಯೋಣ.
ಜೂನ್ ಒಂದರಂದು ವಿಶ್ವದಾದ್ಯಂತ ಆಚರಿಸುವ ವಿಶ್ವ ಹಾಲು ದಿನಾಚರಣೆ ಯಂದು ಹಾಲು ಹಾಗೂ ಅದಕ್ಕೆ ಸಂಬಂಧಪಟ್ಟ ಹೈನುಗಾರಿಕೆ ವಿಭಾಗದ ಬಗ್ಗೆ ಕೊಂಚ ಗಮನಿಸೋಣ.
ಈ ದಿನಾಚರಣೆಯ ಕೇಂದ್ರೀಕೃತ ಗಮನವು ಜನರ ಪಥ್ಯ-ಆಹಾರದಲ್ಲಿಯ ಹಾಲಿನ ಮಹತ್ವದ ಅರಿವಿನ ಬಗ್ಗೆ ಇದೆ. ಒಂದೆಡೆ ನಮ್ಮ ಆಹಾರ ಉತ್ಪಾದನೆಯ ಮೇಲೆ ಹಾಲಿನ ಪರಿಣಾಮ ಗಮನಿಸಿದರೇ ಇನ್ನೊಂದೆಡೆ ಹೈನುಗಾರಿಕೆಯಲ್ಲಿ ಇರುವವರ ಜೀವನ ಮಟ್ಟದ ಬಗ್ಗೆ ಇದೆ. ಹಾಲಿನ ಉತ್ಪನ್ನಗಳಾದ, ಮೊಸರು, ಬೆಣ್ಣೆ, ಚೀಸ್, ಪನ್ನೀರ್ ಇವೆಲ್ಲಾ ನಮ್ಮ ದೇಹಕ್ಕೆ ಅವಶ್ಯಕವಾದ ಜೀವಸತ್ವಗಳು, ಖನಿಜಗಳು, ಇವುಗಳನ್ನು ಪೂರೈಸಿ ನಮ್ಮ ಜೀವನಶೈಲಿಯನ್ನು ಆರೋಗ್ಯವಂತ ಜೀವನಕ್ಕೆ ಕೊಂಡೊಯ್ಯುವುದು. ಹಾಲು ನಮ್ಮ ಮೂಳೆಗಳ ರಕ್ಷಣೆಗೆ ಬೇಕಾದ ಕ್ಯಾಲ್ಸಿಯಂನ್ನು ಕೊಡುತ್ತದೆ. ಅಲ್ಲದೇ ನಮಗೆ ಬೇಕಾದ ಉತ್ತಮ ಗುಣಮಟ್ಟದ ಸಸಾರಜನಕ, ಅತ್ಯಾವಶ್ಯಕವಾದ ಬಿ-12 ಹಾಗೂ ಡಿ ಜೀವಸತ್ವಗಳನ್ನು ಪೂರೈಸುತ್ತದೆ. ಅಲ್ಲದೇ ಇದು ಹೃದಯ ರೋಗ, ಮಂಡಿಯ ಮೂಳೆ ಸವೆಯುವುದು, ಹಾಗೂ ಮಧುಮೇಹ-2 ಇವುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಹಾಲು ಪೋಟ್ಯಾಸಿಯಂದ ಉತ್ತಮ ಮೂಲವಾಗಿದ್ದು, ಇದು ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.
2025ರಲ್ಲಿ ಚಿಲಿ ದೇಶದ ಸಾಂಟಿಯಾಗೋದಲ್ಲಿ ನಡೆದ ಐ.ಡಿ.ಎಫ್. ವಿಶ್ವ ಹೈನುಗಾರಿಕೆ ಸಮಾವೇಶದಲ್ಲಿ, ಭಾರತದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಮೀನೇಶ್ ಷಾ ಅವರು ತಮ್ಮ ಉಪನ್ಯಾಸದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿಯ ಮಹಿಳೆಯರ ಸಬಲೀಕರಣಕ್ಕಾಗಿ ಭಾರತ ದೇಶದ ಮುಖ್ಯ ಘಟ್ಟಗಳ ಬಗ್ಗೆ ಒತ್ತಿ ಹೇಳಿದರು. ಭಾರತ ದೇಶದಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದನೆಯನ್ನು ಸಾಧಿಸಿರುವುದರ ಜೊತೆಗೆ ದೇಶದಾದ್ಯಂತ ಗ್ರಾಮೀಣ ಸಮುದಾಯಗಳಲ್ಲಿಯ ಮಹಿಳೆಯರ ಸಾಮಾಜಿಕ ಪರಿವರ್ತನೆಗೆ ವೇಗ ದೊರತಿರುವುದರ ಬಗ್ಗೆ ಇವರು ವಿವರಿಸಿದರು. ನಮ್ಮ ದೇಶದಲ್ಲಿ ಸಣ್ಣ ಪ್ರಮಾಣದ ಕೃಷಿ ವ್ಯವಸ್ಥೆ ಇರುವುದರಿಂದ, ದೇಶದಲ್ಲಿಯ 2,30000 ಗ್ರಾಮೀಣ ಹಾಲು ಸಹಕಾರ ಸಂಸ್ಥೆಗಳು ಹದಿನೆಂಟು ದಶಲಕ್ಷಕ್ಕಿಂತ ಹೆಚ್ಚು ಕುಟುಂಬಗಳಿಗೆ ಜೀವನ ನೀಡಿವೆ. ಸಹಕಾರಿ ಕ್ಷೇತ್ರದ ಸದಸ್ಯರಲ್ಲಿ ಮೊದಲು 35% ಜನ ಮಹಿಳೆಯರಿದ್ದರು. ಇದು ಸತತವಾಗಿ ಬೆಳೆಯುತ್ತಾ ಒಟ್ಟೂ ಸದಸ್ಯತ್ವದಲ್ಲಿ 50%ರಷ್ಟು ಈಗ ಮಹಿಳೆಯರಿದ್ದಾರೆ. ನಮ್ಮ ಪ್ರತಿನಿತ್ಯದ ಡೈರಿ ವ್ಯವಸ್ಥೆ ಬೇರೆ ದೇಶಗಳಿಗಿಂತ ಭಿನ್ನವಾಗಿದೆ. ಇದು ಸಣ್ಣ ಪ್ರಮಾಣದ ಹೈನುಗಾರಿಕೆ ಕೃಷಿ ವ್ಯವಸ್ಥೆ. ಇಲ್ಲಿ ಉತ್ಪಾದನೆ ಮಾಡುವವರು ಸಹಸ್ರಾರು ಜನ 92% ಪ್ರಮಾಣ ಹೈನುಗಾರಿಕೆ ಕೃಷಿ ಮಾಡುವವರಲ್ಲಿ 92% ಜನ ಒಂದರಿಂದ ನಾಲ್ಕು ಹಸು ಅಥವಾ ಎಮ್ಮೆ ಹೊಂದಿದ್ದಾರೆ. ಇದು 80 ದಶಲಕ್ಷ ಗ್ರಾಮೀಣ ಮನೆಗಳ ಜೀವನಕ್ಕೆ ಅನುಕೂಲ ಒದಗಿಸಿ ಕೊಟ್ಟಿದ್ದು, ಹಾಲಿನಿಂದ ಕುಟುಂಬದ ಸದಸ್ಯರಿಗೆ ಪೌಷ್ಠಿಕತೆ ದೊರೆಯುತ್ತಿದೆ. ಸಹಕಾರ ತತ್ವದ ಈ ಮಾದರಿ ಸದ್ಯದಲ್ಲಿ ಮಹಿಳಾ ಸಬಲೀಕರಣದ ಒಂದು ದಾರಿಯಾಗಿದೆ. ಇದು ಅವರವರ ಮನೆಗಳಲ್ಲೇ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಅಧಿಕಾರ ಕೊಡಿಸಿದೆ. ಅಲ್ಲದೇ ಡಿಜಿಟಲೀಕರಣ ಇವರಿಗೆ ಬ್ಯಾಂಕ್ ಖಾತೆ ಸಂಪರ್ಕ, ಅನನ್ಯತೆಯ ದೃಢೀಕರಣ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಸಹಕಾರಿ ಸಂಸ್ಥೆಗಳ ಸದಸ್ಯರಾಗುತ್ತಿದ್ದಾರೆ. ಒಟ್ಟೂ ಸಹಕಾರಿ ಸಂಸ್ಥೆಗಳು ಪ್ರತಿದಿನ 68 ದಶಲಕ್ಷ ಲೀಟರ್ ಹಾಲು ಸಂಗ್ರಹಿಸಿದರೆ ಮಹಿಳೆಯರು 24 ದಶಲಕ್ಷ ಲೀಟರ್ ಹಾಲಿನ ತಮ್ಮ ಸಂಗ್ರಹದ ಪಾಲನ್ನು ಕೊಡುತ್ತಿದ್ದಾರೆ.
ಮಹಿಳೆಯರಿಗೆ ಇದರಿಂದ ಸಂಪಾದನೆಗೆ ನೇರ ಮಾರ್ಗ ಸಿಕ್ಕಿದ್ದು, ಕುಟುಂಬದ ಕಲ್ಯಾಣಕ್ಕಾಗಿ, ಶಿಕ್ಷಣ, ಆರೋಗ್ಯ, ಉತ್ತಮ ಜೀವನ ಮಟ್ಟಗಳಿಗಾಗಿ ಅವರು ಈ ಹಣವನ್ನು ತೊಡಗಿಸಲು ಅವಕಾಶ ಸೃಷ್ಟಿಸಲಾಗಿದೆ. ಇದು ಮಹಿಳೆಯರ ವಿಶ್ವಾಸ ಹೆಚ್ಚು ಮಾಡಿ ಅವರು ಕುಟುಂಬ ಹಾಗೂ ಸಮುದಾಯಗಳ ವಿಷಯಗಳಲ್ಲಿ ನಿರ್ಧಾರ ಮಾಡುವ ಮುಖ್ಯ ಪಾತ್ರವನ್ನು ಕೊಟ್ಟಿದೆ. ಗಮನಿಸಿ ನೋಡಿದರೆ, ಹೈನುಗಾರಿಕೆಗೆ ಸಂಬಂಧಪಟ್ಟ ಕೆಲಸಗಳಲ್ಲಿ ಶೇಕಡಾ 60 ರಿಂದ ಶೇಕಡಾ 95 ರವರೆಗೆ ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಶೇಕಡಾ 50 ರಷ್ಟು ನಿರ್ಧಾರ ತೆಗೆದುಕೊಳ್ಳುವಲ್ಲಿ ಇವರು ಸಫಲರಾಗಿದ್ದಾರೆ.
ಇಡೀ ಜಗತ್ತಿನಲ್ಲಿ ವಿಶ್ವ ಹಾಲು ದಿನಗಳಂದು ಹಾಲು ಕರೆಯುವ ಪ್ರದರ್ಶನಗಳು, ಕೃಷಿ ಭೂಮಿಗೆ ಭೇಟಿ, ಆಟಗಳು, ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮಗಳು, ಹಾಲಿನ ಉತ್ಪನ್ನಗಳ ಹಂಚಿಕೆ, ನಡೆಯುತ್ತವೆ. ಇದೇ ದಿನ ಹೆಚ್ಚಿನದನ್ನು ತಿಳಿದು ಕಲಿಯಲು ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಸಮಾವೇಶಗಳು ಹಾಗೂ ವಿಚಾರ ಸಂಕೀರ್ಣಗಳು ನಡೆಯುತ್ತವೆ.
ನಮ್ಮ ದೇಶದಲ್ಲಿಯ ಹೈನುಗಾರಿಕೆ ವಿಭಾಗದಲ್ಲಿ ಮಹಿಳೆಯರ ಸಬಲೀಕರಣದ ಪ್ರಭಾವಕ್ಕೆ ಅಂತರ್ ರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಐ.ಡಿ.ಎಫ್. ಸಂಶೋಧನಾ ಪ್ರಶಸ್ತಿ ಸಹ ಸಿಕ್ಕಿದೆ. ಸೃಜಾ ಉತ್ಪಾದನಾ ಸಂಘದ ಅಧ್ಯಕ್ಷರಾದ ಶ್ರೀದೇವಿ ಅವರನ್ನು ಗಮನಿಸಿದರೆ ಒಬ್ಬ ಸಾಮಾನ್ಯ ಹಾಲು ಉತ್ಪಾದಕರ ಸ್ಥಾನದಿಂದ ನಾಯಕರಾಗಿ ಮುಂದೆ ಬಂದಿರುವ ಇವರ ಪರಿವರ್ತನಾ ಪ್ರಯಾಣವನ್ನು ಗಮನಿಸಬಹುದು. ಇವರ ಮಗಳು ಈಗ ಅಮೆರಿಕಾದಲ್ಲಿ ಉಚ್ಛ ಶಿಕ್ಷಣ ಪಡೆಯುತ್ತಿದ್ದಾಳೆ. ಇಂತಹ ಹಲವಾರು ಉದಾಹರಣೆಗಳಿಂದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಪಾತ್ರಗಳಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಗ್ರಾಮೀಣ ಉತ್ಪಾದನಾ ಕಾರ್ಯದ ಬೇರಿನಿಂದ ಹೊರಟು ವಿಶ್ವದ ಮಾನ್ಯತೆಯನ್ನು ಪಡೆದಿದ್ದಾರೆ. ಇವರ ಅನುಭವಗಳಿಂದ ತಿಳಿಯುವುದೇನೆಂದರೆ, ಆರ್ಥಿಕ ಸಬಲೀಕರಣದ ಪ್ರಭಾವದಿಂದ ವಿಶಾಲ ಸಾಮಾಜಿಕ ಪರಿಣಾಮವನ್ನು ಹೊಂದಿ ಮುಖ್ಯ ಕ್ಷೇತ್ರಗಳಲ್ಲಿ ಮಹಿಳಾ ಭಾಗವಹಿಸುವಿಕೆಗೆ ಸತತ ಬೆಂಬಲ ದೊರೆಯಲು ಇವು ಕಾರಣೀಭೂತವಾಗಿವೆ.

ಎನ್.ವ್ಹಿ. ರಮೇಶ್ , ಮೈಸೂರು

