ಲಹರಿ

ಬದುಕಿನ ಸುತ್ತ ಒಂದು ರಾಪಿಡೋ ಸವಾರಿ

Share Button

ಅದೊಂದು ದಿನ ಸಂಜೆ ನಾನು ರಾಪಿಡೋ ಆ್ಯಪ್ ಮೂಲಕ ಬೆಂಗಳೂರಿನ ವಿಜಯನಗರದಿಂದ ರಾಜರಾಜೇಶ್ವರಿನಗರಕ್ಕೆ ಆಟೋದಲ್ಲಿ ಹೊರಟಿದ್ದೆ. ‘ಸಿ ಎನ್ ಜಿ ಸಿಲಿಂಡರ್ ಸಿಗುತ್ತಿದೆಯೇ? ಅದಕ್ಕೆ ತೊಂದರೆ ಏನಾದರೂ ಇದೆಯೇ?’ ಎಂದು ನಾನು ಕೇಳಿದ್ದೆ ತಡ, ಆಟೋ ಚಾಲಕ ಮಹಾದೇವ ನನ್ನೊಂದಿಗೆ ಮಾತಿಗೆ ಇಳಿದುಬಿಟ್ಟರು.

‘ಸಿ ಎನ್ ಜಿ ಸಿಲಿಂಡರ್ ಗೇನೂ ಕೊರತೆಯಿಲ್ಲ. ಹಾಗೊಂದು ವೇಳೆ ಕೊರತೆ ಇದ್ದರೂ, ಅದು ನಮಗೆ ಮಾತ್ರ ತೊಂದರೆ ಅಲ್ಲವಲ್ಲ? ಇದು ಇಡೀ ವಿಶ್ವದ ಸಮಸ್ಯೆ ಆಗಿದೆ’ ಎಂದು ಹೇಳುತ್ತಾ ಇಂದಿನ ಕೇಂದ್ರ ಹಾಗು ರಾಜ್ಯ ಸರ್ಕಾರದ ಕಾರ್ಯ ವೈಖರಿ, ವಿರೋಧ ಪಕ್ಷಗಳ ನಡವಳಿಕೆ, ಪಂಚರಾಜ್ಯ ಚುನಾವಣೆಗಳು, ತಮ್ಮ ರಾಜಕೀಯ ಪ್ರತಿನಿಧಿಗಳನ್ನು ಆರಿಸುವಲ್ಲಿ ಎಡವುತ್ತಿರುವ ಜನರ ಬುದ್ಧಿಮತ್ತೆ ಹೀಗೆ ರಾಜಕೀಯ ಕುರಿತು ಅನೇಕ ವಿಷಯಗಳನ್ನು ಹಂಚಿ ಕೊಂಡರು. ಆ ನಂತರ ಆಧ್ಯಾತ್ಮಿಕತೆಯ ಕಡೆಗೆ ಅವರ ವಿಷಯ ಪಲ್ಲಟವಾಯಿತು.

ಕರ್ಮಗಳ ಲೆಕ್ಕಾಚಾರ, ಧರ್ಮ ಅಧರ್ಮಗಳ ಬಗ್ಗೆ ಜನರಿಗಿರುವ ಜ್ಞಾನದ ಕೊರತೆ, ಸ್ವಾರ್ಥತೆಯ ಮಗ್ಗುಲಿಗೆ ವಾಲುತ್ತಿರುವ ಜನರ ಮನಸ್ಸು, ಸಂಬಂಧಗಳಿಗಿಂತ ಹಣಕ್ಕೆ ಮಹತ್ವ ನೀಡುವ ಕಲಿಕಾಲ ಹೀಗೆ ತಾವು ಅರಿತುಕೊಂಡದ್ದನ್ನೆಲ್ಲಾ ನನ್ನೊಂದಿಗೆ ಹಂಚಿಕೊಂಡರು. ಬಹಳ ವರ್ಷಗಳ ಹಿಂದೆ ತಮ್ಮ ೪ ವರ್ಷದ ಮಗನ ಜೊತೆ ಶಬರಿಮಲೈಗೆ ಹೋದ ಸಂದರ್ಭದಲ್ಲಿ ತಾವು ಕಷ್ಟಕ್ಕೆ ಸಿಲುಕಿ ಕೊಂಡದ್ದು,
ಅದರಿಂದ ಹೊರ ಬರುವ ದಾರಿಯನ್ನು ಆ ಭಗವಂತನೇ ತೋರಿಸಿದ್ದು ಮತ್ತು ಇಂದಿಗೂ ಆ ಭಗವಂತನ ಇರುವಿಕೆಯ ಅನುಭವ ಆಗುತ್ತಿರುವ ಬಗ್ಗೆ ಸವಿಸ್ತಾರವಾಗಿ ಹೇಳಿದರು.

ಅನೇಕರಿಂದ ಆರ್ಥಿಕವಾಗಿಯೂ, ಮಾನಸಿಕವಾಗಿಯೂ ಪೆಟ್ಟು ತಿಂದಿದ್ದರೂ ತಾವು ನಂಬಿರುವ ಧರ್ಮವನ್ನು ಬಿಟ್ಟಿಲ್ಲವೆಂದು ಹೇಳಿದರು. ಆಪ್ತರ ನಡುವೆಯೂ ನಿರ್ಲಿಪ್ತತೆಯಿಂದ ಇದ್ದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಹಾಗು ಶಾಂತಿ ಸಿಗಲು ಸಾಧ್ಯ ಇಲ್ಲದಿದ್ದರೆ ಮನುಷ್ಯ ಮಾನಸಿಕವಾಗಿ ಹೈರಾಣಾಗಿ ಬಿಡುತ್ತಾನೆ ಎಂದು ಎರಡೆರಡು ಬಾರಿ ಒತ್ತಿ ಹೇಳಿದರು.

ತಾವು ಗಳಿಸಿದ ಜ್ಞಾನ ಹಾಗು ಇಷ್ಟು ಮಾತ್ರ ತೃಪ್ತಿಯ ಜೀವನ ನಡೆಸಲು ಸಾಧ್ಯವಾಗಿದ್ದು ತಮಗೆ ಶಾಲೆಯಲ್ಲಿ ಪಾಠ ಹೇಳಿಕೊಟ್ಟ ಶಿಕ್ಷಕಿಯರು ಎಂದು ಹೇಳುವಾಗ ಅವರ ಗಂಟಲು ಉಬ್ಬಿ ಬಂದಿತು.ಅದರಲ್ಲೂ ‘ವಿದ್ಯಾ ಲಕ್ಷ್ಮೀ’ ಎನ್ನುವ ಶಿಕ್ಷಕಿಯ ಬಗ್ಗೆ ಅವರು ಅತ್ಯಂತ ಭಕ್ತಿ ಭಾವದಿಂದ ಮಾತನಾಡಿದಾಗ, ಸಮಸ್ತ ಶಿಕ್ಷಕ ವರ್ಗಕ್ಕೆ ಮನಸ್ಸಿನಲ್ಲೇ ನಮಸ್ಕರಿಸುವಂತೆ ಅವರು ಮಾಡಿಬಿಟ್ಟರು.

ತಮಗೆ ಒಂದು ಪ್ಲಸ್ ಒಂದು ಎರಡು ಎಂತಲೂ ಬರೆಯುವುದಕ್ಕೆ ಬರದಿದ್ದಾಗ, ಒತ್ತಕ್ಷರಗಳ ಕಲಿಕೆಯ ಕೊರತೆಯಿಂದಾಗಿ ಸದಾ ತರಗತಿಯಲ್ಲಿ ಹಿಂದುಳಿದಿದ್ದಾಗ, ‘ವಿದ್ಯಾ ಲಕ್ಷ್ಮೀ’ ಟೀಚರ್ ತಮ್ಮ ಬೆನ್ನೆಲುಬಾಗಿ ನಿಂತು ಹತ್ತನೇ ತರಗತಿಯನ್ನು ಯಶಸ್ವಿಯಾಗಿ ದಾಟುವಂತೆ ಶ್ರಮ ವಹಿಸಿದ್ದನ್ನು ನೆನೆಯುತ್ತಾ, ಇಂದು ತಮಗೆ ಲೆಕ್ಕ ಮಾಡಲು ಬರುತ್ತದೆಂದರೆ ಅದಕ್ಕೆ ಆ ಟೀಚರ್ ರೇ ಕಾರಣ ಎಂದು ಸ್ಮರಿಸಿಕೊಳ್ಳುತ್ತಾರೆ. ಎಲ್ಲರೂ ತಮ್ಮನ್ನು ಕೈ ಬಿಟ್ಟಾಗ, ‘ವಿದ್ಯಾ ಲಕ್ಷ್ಮೀ’ ಟೀಚರ್ ಮಾತ್ರ ತಮ್ಮ ಕೈ ಹಿಡಿದು, ಭರವಸೆ ತುಂಬಿ, ಓದಲು ಆಸಕ್ತಿ ಬರುವ ಹಾಗೆ ತಮ್ಮನ್ನು ಬದಲಿಸಿದರು. ಆ ಮಹಾ ತಾಯಿಯ ಶ್ರಮದಿಂದಲೇ ತಾವು ಪ್ರಪಂಚದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು. ಆ ಟೀಚರ್ ಈಗ ಬದುಕಿಲ್ಲ. ಆದರೆ ಮತ್ತೆ ಎಲ್ಲೇ ಹುಟ್ಟಿದ್ದರೂ ಆಕೆ ಚೆನ್ನಾಗಿರಲಿ ಎಂದು ಅವರು ಹರಸಿದಾಗ, ಇಂದಿಗೂ ಗುರು ಸ್ಥಾನ ಎಷ್ಟೊಂದು ಪವಿತ್ರ ಹಾಗು ಶ್ರೇಷ್ಠವೆಂದು ಮನವರಿಕೆಯಾಯಿತು. ಒಳ್ಳೆಯ ಶಿಕ್ಷಕರ ನಡಾವಳಿಗಳು ವಿದ್ಯಾರ್ಥಿಗಳ ಮೇಲೆ ಎಷ್ಟೊಂದು ಗಾಢವಾದ ಪ್ರಭಾವ ಬೀರುತ್ತದೆ.

ಇವರಿಗೆ ಸುಮಾರು 54-55 ವಯಸ್ಸಿರಬಹುದು. ಈಗಲೂ ತಾವು ಕಲಿತ ಶಾಲೆ, ತಮಗೆ ಕಲಿಸಿದ ಶಿಕ್ಷಕಿಯರ ಹೆಸರು, ಅವರು ಹೇಳಿಕೊಟ್ಟ ಜೀವನ ಪಾಠಗಳನ್ನು ನೆನಪಿಸಿಕೊಳ್ಳುತ್ತಾ, ಅವರನ್ನು ಗೌರವದಿಂದ ಕಾಣುವ ಮಹಾದೇವರಂಥಹವರೂ ಇದ್ದಾರೆನ್ನುವುದೇ ನಮ್ಮ ಭಾಗ್ಯ. ನಮ್ಮ ಜೀವನಕ್ಕೆ ಆಧಾರ ಸ್ತಂಭಗಳಾಗಿ ನಿಲ್ಲುವವರು ಜೀವ ಕೊಡುವ ಹೆತ್ತವರು, ಜೀವನ ರೂಪಿಸುವ ಗುರುಗಳು ಮತ್ತು ಈ ಜೀವ-ಜೀವನದ ಸೂತ್ರಧಾರಿ ಭಗವಂತ ಮಾತ್ರ ಎಂದು ಅವರು ಹೇಳಿದಾಗ ನನ್ನ ಹೃದಯ ತುಂಬಿ ಬಂದಿತು.

ನನ್ನ ಸ್ಥಳ ತಲುಪಿದಾಗ, ಆತ ನನಗೆ ಆಟೋ ಚಾಲಕ ನಂತೆ ಕಾಣದೆ ದೈವೀ ಗುಣಗಳುಳ್ಳ ಗುಣವಂತನ ಹಾಗೆ ಕಾಣಿಸಿದರು. ಅಪರೂಪದಲ್ಲಿ ಅಪರೂಪದ ಈ ವ್ಯಕ್ತಿಯ ಆಟೋ ಹತ್ತಿದರೆ, ಅವರನ್ನೊಮ್ಮೆ
ಮಾತನಾಡಿಸಿ.

ಮಾಲಿನಿ ವಾದಿರಾಜ್

    Leave a Reply

     Click this button or press Ctrl+G to toggle between Kannada and English

    Your email address will not be published. Required fields are marked *