ಲಹರಿ

ಗ್ರಾಮೀಣಾಭಿವೃದ್ಧಿ!

Share Button

“ಊಡೇವು” ಕಂದಾಯ ಇಲಾಖೆ ಲೆಕ್ಕದಲ್ಲಿ “ಹೂಡೇಂ”. ಇಂದಿನ ವಿಜಯನಗರ ಜಿಲ್ಲೆಯ (ಹಿಂದಿನ ಬಳ್ಳಾರಿ ಜಿಲ್ಲೆಯ) ಕೂಡ್ಲಿಗಿ ತಾಲೂಕಿನ ಕಟ್ಟ ಕಡೆಯ ಗ್ರಾಮ. ಸುಮಾರು 250 ಮನೆಗಳಿರುವ ಈ ಕುಗ್ರಾಮ, ಬರಗಾಲದ ಬೆಂಗಾಡೆಂದೇ ಗುರುತಿಸಲ್ಪಟ್ಟಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಗಡಿಗಳನ್ನು ಹಂಚಿಕೊಂಡಿದೆ. ಶಬ್ದಕೋಶದ ಪ್ರಕಾರ “ಊಡೇವು” ಎಂದರೆ ಅರ್ಥ “ಕುರುಚಲು ಗಿಡಗಳ ಪೊದೆಗಳ ಪ್ರದೇಶ”.

ಅರವತ್ತರ ದಶಕದಲ್ಲಿ, ಚಿಕ್ಕ ಸುಂದರ, ಗಾಂಧೀಜಿಯವರ ಕನಸಿನ, ಸ್ವಾವಲಂಬೀ, ಸಂತೃಪ್ತ ಜೀವನ, ನಡೆಸುವ ಗ್ರಾಮೀಣ ಭಾರತದ ಮಾದರೀ ಗ್ರಾಮದಂತಿತ್ತು. ಉತ್ತರದಿಂದ ದಕ್ಷಿಣಕ್ಕೆ ಚಾಚಿಕೊಂಡಿರುವ ಮಣ್ಣಿನ ಬಂಡಿ ದಾರಿಯೇ ಈ ಗ್ರಾಮ ಪ್ರವೇಶಕ್ಕೆ ಹೆದ್ದಾರಿ. ಊರನ್ನು ಉತ್ತರದಿಂದ ಪ್ರವೇಶ ಮಾಡಿದರೆ ಬಲಗಡೆ ಎದುರು ಬಸವಣ್ಣನ ಗುಡಿ ಎಡಗಡೆ ಹುಣಸೆ ಮರದ ತೋಪು. ಈ ದಾರಿಯ ಪಶ್ಚಿಮಕ್ಕೆ ಹರಡಿಕೊಂಡಿರುವುದೇ ಮುಖ್ಯ ಗ್ರಾಮ. ಪೂರ್ವಕ್ಕೆ ಕಣಗಳು, ಹೊಲಗಳು ಹಾಗೂ ಊರಿನ ಜೀವನಾಡಿ ಹಾಗೂ ಹೆಮ್ಮೆಯ ಜಲಮೂಲ ಚಿನ್ನ ಹಗರಿ ಹಳ್ಳ. ವರ್ಷದ 12 ತಿಂಗಳೂ ಹರಿಯುವ ಈ ಹಳ್ಳ, ಊರಿನ ಜನರಿಗೆ ಕುಡಿಯುವ ನೀರು, ಅಷ್ಟೇ ಅಲ್ಲ ದನ ಕರುಗಳಿಗೂ ಕುಡಿಯಲು ನೀರೊದಗಿಸುವ ಜೀವನದಿ. ಈ ಹಳ್ಳದ ದಡದಲ್ಲಿ ನಾಗರಕಟ್ಟೆ. ಹೆದ್ದಾರಿಯ ಪಕ್ಕದಲ್ಲೇ ಪೂರ್ವ ದಿಕ್ಕಿಗೆ ಒಂದು ಗುಡಿಸಲು. ಅದೇ ಆ ಊರಿನ ಏಕೈಕ ರೆಸ್ಟೋರೆಂಟ್, ಕರಿಮಂಟಪ್ಪನವರ ಚಹಾ ಅಂಗಡಿ . ಮಂಡಕ್ಕಿ ಒಗ್ಗರಣೆ ಮೆಣಸಿನಕಾಯಿ, ಚಾ ಯಾವಾಗಲೂ ದೊರೆಯುತ್ತಿತ್ತು. ಹಾದಿಗೆ ಹೊಂದಿಕೊಂಡೆ ದೊಡ್ಡ ಅರಳೀಮರದ ಕಟ್ಟೆ. ಕೆಲಸವಿಲ್ಲದವರು, ಕೆಲಸ ಮಾಡಿ ಸುಸ್ತಾದವರು, ವಿರಮಿಸಿಕೊಳ್ಳುವ ಜಾಗ. ಬೇಕಾದರೆ ಸೊಮಾರಿ ಕಟ್ಟೆ ಎಂದರೂ ಅಡ್ಡಿಯಿಲ್ಲ. ಬಲಕ್ಕೆ ಇರುವ ಗ್ರಾಮ ಪ್ರವೇಶ ದ್ವಾರದಲ್ಲೇ ಎರಡೂ ಬದಿಗೆ ಕಟ್ಟೆಗಳು, ಅದಕ್ಕೆ ಹೊಂದಿಕೊಂಡ ಚಾವಡಿ. ಅಲ್ಲೊಂದು ಬುಡ್ಡೇಕಲ್ಲು. ಗ್ರಾಮಸ್ಥರ ಅತ್ಯಂತ ಪವಿತ್ರ ಕಲ್ಲು. ಅದನ್ನು ದಾಟುವುದಾಗಲಿ, ತುಳಿಯುವುದಾಗಲಿ, ನಿಷಿದ್ಧ. ಆಗಾಗ ಅಲ್ಲಿ ಅರಿಶಿನ ಕುಂಕುಮದಿಂದ ಪೂಜೆ ಮಾಡಿದ ಗುರುತುಗಳು ಇರುತ್ತದೆ. ಇದು ಗ್ರಾಮವನ್ನು ಕಾಪಾಡುವ ದೇವರೆಂದು ಗ್ರಾಮಸ್ಥರ ನಂಬಿಕೆ. ಆ ಕಲ್ಲನ್ನು ಯಾರೂ ತುಳಿದುಕೊಂಡು,ದಾಟಿಕೊಂಡು ಓಡಾಡುವುದಿಲ್ಲ. ಆ ಪ್ರವೇಶ ದ್ವಾರದಲ್ಲೇ ಅಗಲವಾದ ಮುಖ್ಯ ಬೀದಿ ಪ್ರಾರಂಭ ವಾಗುವುದು. ಅಕ್ಕ ಪಕ್ಕ, ಒಂದು ಕಡೆ ಗ್ರಾಮದ ಪ್ರತಿಷ್ಠಿತ ಮನೆತನವಾದ ಕೋಣನವರ ಮನೆಗಳು, ಇನ್ನೊಂದು ಪಕ್ಕದಲ್ಲಿ ಊರಿನ ಏಕೈಕ ಅಂಗಡಿ ಬೆನಕಶೆಟ್ಟರ ಅಂಗಡಿ,ರಸ್ತೆಯ ಕೊನೆಯಲ್ಲಿ ಗ್ರಾಮದ ಏಕಮಾತ್ರ ದೇವಸ್ಥಾನ ಈಶ್ವರನ ಗುಡಿ. ಇಲ್ಲಿ ಎಡಕ್ಕೊಂದು ಬಲಕ್ಕೊಂದು ಕವಲಾಗಿ ರಸ್ತೆ ಮುಂದೆ ಸಾಗುತ್ತದೆ. ಬಲಗಡೆಯ ರಸ್ತೆಯಲ್ಲಿ ಗ್ರಾಮದ ಏಕೈಕ ಕ್ಷೌರಿಕ ಕೆಲಸೇರ ರುದ್ರಣ್ಣ, ಎದುರುಗಡೆ ಕಡ್ಡಿಪುಡಿ ವ್ಯಾಪಾರ ಮಾಡುವ ಕಡ್ಡಿಪುಡಿ ಬಸಮ್ಮಜ್ಜಿ, , ಹಿಂದುಗಡೆ ಪಾಲಂಕೋಟೆ ಅವರ ಮನೆ, ಅವರ ಮನೆ ಎದುರಿಗೆ ಗೌಡರ ಮನೆ ಕಂ ಊರಿನ ಅಂಚೆ ಕಚೇರಿ ಅವರ ಮನೆಯ ಮುಂದೆ ಒಂದು ಹೊಸದಾಗಿ ಪ್ರಾರಂಭ ವಾದ ಕುಡಿಯುವ ನೀರಿನ ಸೇದೋ ಭಾವಿ, ಮುಂದೆ ಸಾಗಿದರೆ ಗ್ರಾಮದ ಏಕೈಕ ಕನ್ನಡ ಪ್ರಾಥಮಿಕ ಪಾಠಶಾಲೆ, ನಂತರ ಬಟ್ಟೆಗಳ ಬೇಡಿಕೆ ಪೂರೈಸುತ್ತಿದ್ದ ನೇವಾರ ರುದ್ರಣ್ಣನವರ ಮನೆ ಕಮ್ ಅಂಗಡಿ. ಅದೇ ರಸ್ತೆ ಕೊನೆಯಾಗಿ ಊರ ಗಡಿ ಮುಟ್ಟುತ್ತದೆ. ಎಡಗಡೆಯ ರಸ್ತೆಯಲ್ಲಿ ರಾಟೆ ಬಸಣ್ಣನವರು ತಮ್ಮ ಮನೆಯ ಪ್ರಾಂಗಣದಲ್ಲಿ ಬಟ್ಟೆ ಹೊಲಿಯುತ್ತಿರುತ್ತಾರೆ. ಮುಂದೆ ಗ್ರಾಮದ ಏಕೈಕ ವೈದ್ಯರಾದ ಡಾಕ್ಟರ್ ನಾಗೇಶ್ವರ್ ರಾವ್, .,ಪಕ್ಕದಲ್ಲಿ ಕಮ್ಮಾರ ಭೀಮಣ್ಣ , ಅಲ್ಲೇ ಅಗಸರ ಮನೆ.

ಈ ಮುಖ್ಯ ರಸ್ತೆಯ ಇನ್ನೊಂದು ಬದಿಯಲ್ಲಿ ಹರಿಜನಕೇರಿ. ಊರಿಗೆ ಕೃಷಿ ಕೆಲಸಕ್ಕಾಗಲೀ ಇನ್ನಾವುದೇ ಕೆಲಸಕ್ಕೆ, ಕೂಲಿಗಳನ್ನು / ಕಾರ್ಮಿಕರನ್ನು ಒದಗಿಸುವ ಜನರ ಕಾಲೋನಿ. ಗಂಡಾಳಾಗಲಿ ಹೆಣ್ಣಾಳಾಗಲಿ ದಿನಗೂಲಿಯಂತೆ ಅಥವಾ ವರ್ಷಾನುಗಟ್ಟಳೆ ಊಳಿಗದವರಂತೆ ದುಡಿಯುವ ಜನ. ಊರ ಮುಂದಿನ ಕಟ್ಟೆಯನ್ನು ದಾಟಿ ಹಳ್ಳದ ಕಡೆ ಹೋದರೆ ದಾರಿಯಲ್ಲಿ ಊರಿನ ಧನ್ವಂತರಿ ಮಷ್ಟಲಗುಮ್ಮಿ ಬೋರಣ್ಣ, ರೈತರು ತಮ್ಮ ಬಿಡುವಿನ ವೇಳೆಯಲ್ಲಿ ತಮಗೆ ಬೇಕಾಗುವ ಕತ್ತಾಳೆ ನಾರಿನ ಹಗ್ಗ , ತೆಂಗಿನ ನಾರಿನ ಹಗ್ಗ ತಾವೇ ಮಾಡಿಕೊಳ್ಳುತ್ತಿದ್ದರು. ತಿಂಗಳಿಗೊಂದೆರಡು ಬಾರಿ ಲಾಳ ಕಟ್ಟುವ ಸಾಬಣ್ಣ ಬರುತ್ತಿದ್ದ. ಅವನು ಬಂದಾಗ ಊರ ಮುಂದೆ ಎತ್ತನ್ನು ಕೆಳಗೆ ಬೀಳಿಸಿ ನಾಲ್ಕೂಕಾಲುಗಳನ್ನೂ ಒಟ್ಟಾಗಿ ಹಗ್ಗದಿಂದ ಕಟ್ಟಿ, ಹಳೆಯ ಲಾಳವನ್ನು ಕಿತ್ತು ಹೊಸದನ್ನು ಹಾಕುವ ರೀತಿಯನ್ನು ಕಣ್ಣರಳಿಸಿ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆವು.

ಆಗಿನ ಕಾಲಕ್ಕೆ ಊರಿಗೆ ಬೇಕಾದ ಎಲ್ಲಾ ಕಸುಬಿನ ಜನರೂ ಇರುತ್ತಿದ್ದರು. ಅವರೆಲ್ಲಾಊರಿನ ಜನಕ್ಕೆ ಅತ್ಯವಶ್ಯಕವಾಗಿ ಬೇಕಾದವರಾಗಿದ್ದು, ಜಾತಿ, ಮತ ಭೇಧ ಭಾವವಿಲ್ಲದೆ ಊರಿನ ಅವಿಭಾಜ್ಯ ಅಂಗವಾಗಿದ್ದರು. ಯಾವುದೇ ಬಸ್ ಸೌಕರ್ಯವಿಲ್ಲದ ಈ ಊರಿನಿಂದ ಆಚೆಗೆ ಹೋಗಬೇಕೆಂದರೆ ಸುಮಾರು 2 ಕಿಮೀ ನಡೆದೇ ಹೋಗಬೇಕು ಇಲ್ಲದಿದ್ದರೆ, ಎತ್ತಿನ ಬಂಡಿಯಲ್ಲಿ ಪ್ರಯಾಣಿಸಬೇಕಾಗಿತ್ತು. ಇದಕ್ಕಾಗಿ ಗ್ರಾಮದ ಹೊರಭಾಗದಲ್ಲಿ ಹಳ್ಳವನ್ನು ದಾಟಬೇಕಾಗಿತ್ತು. ಅಥವಾ ಅದೇ ಹಳ್ಳವನ್ನು ಮುಷ್ಟಲ ಗುಮ್ಮಿ ಅಥವಾ ಚಿಕ್ಕೋಬನಹಳ್ಳಿ ಬಳಿಯಲ್ಲಿ ದಾಟಬೇಕಾಗುತ್ತಿತ್ತು. ಕಾಲ್ನಡಿಗೆಯಲ್ಲಿ ದಾಟಲು ಅಷ್ಟೇನೂ ಕಷ್ಟವಾಗದಿದ್ದರೂ, ಎತ್ತಿನ ಬಂಡಿಯಲ್ಲಿ ಕುಳಿತು, ಕಡಿದಾದ ಏರುಪೇರು ಮತ್ತು ಏರುದಾರಿಯಲ್ಲಿ ಎತ್ತಿನ ಬಂಡಿಯನ್ನು ಇಳಿಸಿ ದಾಟಿಸುವುದೇ ಒಂದು ಸಾಹಸ. ಬಂಡಿ ವಾಲಿದಾಗಲೆಲ್ಲ, ನಡೆದು ಬರುವ ಗಂಡಸರು ಬಂಡಿ ಬೀಳದಂತೆ ಹೆಗಲು ಕೊಟ್ಟು ಹಿಡಿಯುತ್ತಿದ್ದರೆ, ಬಂಡಿಯೊಳಗೆ ಕುಳಿತ ಹೆಂಗಸರು, ಬಸವ,ಬಸವಾ ಎಂದು ದೇವರನ್ನು ನೆನೆಯುತ್ತಿದ್ದರು.

ದಿನದ ಕೆಲಸಗಳನ್ನು ಮುಗಿಸಿ ಬಂದವರು ಅಥವಾ ಕೆಲಸವಿಲ್ಲದೆ ಇರುವವರು ಊರ ಮುಂದಿನ ಅರಳಿ ಮರದ ಕಟ್ಟೆಗಳಲ್ಲಿ, ಚಾವಡಿಯ ಕಟ್ಟೆ ಮೇಲೆ, ಊಟದ ಸಮಯವಾಗುವವರೆಗೂ ಕುಳಿತು ಊಟದ ಸಮಯಕ್ಕೆ ಮನೆಗೆ ಹೋಗಿ ಊಟ ಮಾಡಿ ಮಲಗುತ್ತಿದ್ದರು. ಕೆಲವರು ಊಟದ ನಂತರ ಬಂದು ನಿದ್ದೆ ಬರುವವರೆಗೂ ಕುಳಿತು ನಿದ್ದೆ ಬಂದಾಗ ಮನೆಗೆ ಹೋಗಿ ಮಲಗುತ್ತಿದ್ದರು. ಊರ ಮುಂದಿನ ಕಟ್ಟೆ ಮೇಲೆ ಕುಳಿತವರಿಗೆ ಆ ದಿನ ಊರಿಗೆ ಯಾರು ಬಂದರು, ಯಾರು ಹೋದರು, ಯಾರ ಮನೆಗೆ ನೆಂಟರು ಬಂದರು, ಎನ್ನುವುದೆಲ್ಲಾ ತಿಳಿಯುತ್ತಿತ್ತು. ಬಹಳಷ್ಟು ಜನರಿಗೆ ಊರು ಬಿಟ್ಟು ಬೇರೆ ಊರಿಗೆ ಹೋಗುವ ಪ್ರಮೇಯವೇ ಇರುತ್ತಿರಲಿಲ್ಲ. ವರ್ಷಕ್ಕೆ ಒಂದೆರಡು ಬಾರಿ ಹೊರ ಊರುಗಳಿಗೆ ಹೋಗುತ್ತಿದ್ದರು. ಪೇಟೆ ಊರುಗಳಿಂದ ತರುವುದೇನಾದರೂ ಇದ್ದರೆ ಯಾರಾದರೂ ಹೋಗುವವರ ಕೈಯಲ್ಲಿ ಹೇಳಿ ತರಿಸಿಕೊಳ್ಳುತ್ತಿದ್ದರು ಅಥವಾ ಚಳ್ಳಕೆರೆ ಸಂತೆಗೆ ಹೋಗುವವರ ಕೈಯಲ್ಲಿ ತರಿಸಿಕೊಳ್ಳುತ್ತಿದ್ದರು. ಹೆಣ್ಣು ಮಕ್ಕಳು ಬಿಡುವಿನ ವೇಳೆಯಲ್ಲಿ ಹಪ್ಪಳ ಸಂಡಿಗೆ ಮಾಡುವುದು, ಗೌಲಿ, ಶಾವಿಗೆ ಮಾಡುವುದು, ಇಲ್ಲದಿದ್ದರೆ ಚೌಕ ಬಾರ ಆಡುವುದು, ಕತ್ತಲಾಗುತ್ತಿದ್ದಂತೆ ಆದಷ್ಟು ಬೇಗ ಊಟ ಮಾಡಿ ಮಲಗುತ್ತಿದ್ದರು. ಯಾರೂ ಸಮಯ ಘಂಟೆ ನೋಡುವ ಗೋಜಿಗೆ ಹೋಗುತ್ತಿರಲಿಲ್ಲ. ರಾತ್ರಿಯ ಹೊತ್ತು ಸಮಯ ನೋಡುವ ಪ್ರಮೇಯವೇ ಇರುತ್ತಿರಲಿಲ್ಲ, ಹಗಲು ಹೊತ್ತು, ಚಪ್ಪರದ ನೆರಳಿನ ಆಧಾರದ ಮೇಲೆ, ಆಗಲೇ ಮಧ್ಯಾನ ಆತು ಅನ್ನುತ್ತಿದ್ದರು.

ಹೀಗೆ ಇರುವುದರಲ್ಲಿ ಸಂತೃಪ್ತ ಜೀವನ ನಡೆಸುತ್ತಾ ಕನಿಷ್ಠ ಆಸೆ, ನಿರೀಕ್ಷೆಗಳನ್ನು ಇಟ್ಟುಕೊಂಡು, ಅವುಗಳನ್ನು ಪೂರೈಸುವ ಕನಿಷ್ಠ ಮೂಲ ಸೌಲಭ್ಯಗಳೊಂದಿಗೆ ಒಬ್ಬರಿಗೊಬ್ಬರು ಸಹಕರಿಸಿಕೊಂಡು, ಸಹಬಾಳ್ವೆ ಮಾಡಿಕೊಂಡು, ಇರುವುದರಲ್ಲೇ ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಇದು 60ರ ದಶಕದ ಚಿತ್ರಣ.

ದಿನ ಕಳೆದಂತೆ ಅಭಿವೃದ್ಧಿಯ ಗಾಳಿ ಬೀಸತೊಡಗಿತು.

ಊರಿಗೆ, ಬೆಳಗ್ಗೆ ಒಂದು, , ಮಧ್ಯಾಹ್ನಕ್ಕೆ ಒಂದು ಸರ್ಕಾರಿ ಬಸ್ಸು ತಾಲೂಕ ಕೇಂದ್ರವಾದ ಕೂಡ್ಲಿಗಿಗೆ ಪ್ರಾರಂಭವಾಯಿತು. ಆದರೆ ಕಂದಾಯ ಇಲಾಖೆಯ ಕೆಲಸಗಳಲ್ಲದೆ ಬೇರೆ ಎಲ್ಲಾ ಕೆಲಸಗಳಿಗೂ, ನೆಂಟರಿಷ್ಟರ ಕಾಣಲು, ಸಮಾರಂಭಗಳಿಗೆ ಹೋಗಲು, ಸಂತೆ ವ್ಯಾಪಾರಕ್ಕೆ ಹೋಗಲು, ಆಸ್ಪತ್ರೆ ಸೌಲಭ್ಯಕ್ಕೆ, ಮಕ್ಕಳ ಓದು ವಿದ್ಯಾಭ್ಯಾಸಕ್ಕೆ, ಎಲ್ಲದಕ್ಕೂ ಚಳ್ಳಕೆರೆ, ಚಿತ್ರದುರ್ಗದಂತಹ ನಗರಗಳಿಗೆ ಹೋಗುತ್ತಿದ್ದರು. ಒಂದೆರಡು ವರ್ಷಗಳಲ್ಲಿ ಮೊಳಕಾಲ್ಮೂರು ಚಳ್ಳಕೆರೆ ಚಿತ್ರದುರ್ಗಗಳಿಗೆ ಖಾಸಗಿ ಬಸ್ಸೊಂದು ಪ್ರಾರಂಭವಾಯಿತು. ಒಂದು ಊರಿನಿಂದ ಇನ್ನೊಂದು ಊರಿಗೆ ಎರಡು ಮೂರು ಕಿಲೋಮೀಟರ್ ದೂರ ಇದ್ದದ್ದರಿಂದ, ಮತ್ತು ಬಸ್‌ಗಳ ಹಾರನ್ ಸದ್ದು ಬಹಳ ಬಲವಾಗಿದ್ದದ್ದರಿಂದ, ಹಿಂದಿನ ಊರಿನಲ್ಲಿ ಇರುವಾಗಲೇ ಬಸ್‌ ಹಾರನ್ ಮಾಡಿದರೆ, ಊರಿಗೆ ಹೋಗುವರು ಮನೆಯವರಿಗೆಲ್ಲ ನಮಸ್ಕಾರ ಮಾಡಿ ಊರ ಮುಂದಗಡೆ ಬರುವಷ್ಟು ಹೊತ್ತಿಗೆ, ಬಸ್ಸು ಬಂದಿರುತ್ತಿತ್ತು. ಬರ ಬರುತ್ತಾ ಬಸ್ಸುಗಳ ಸಂಖ್ಯೆ ಜಾಸ್ತಿಯಾಗತೊಡಗಿ, ಓಡಾಡುವವರ ಸಂಖ್ಯೆಯೂ ಜಾಸ್ತಿಯಾಗತೊಡಗಿತು.

ಕೇವಲ ಖುಷ್ಕಿ ಜಮೀನಿನಲ್ಲಿ ಸಜ್ಜೆ, ನವಣೆ, ಜೋಳ ಬೆಳೆಯುತ್ತಿದ್ದು, ನೀರಿನ ಅನುಕೂಲವಿದ್ದವರು, ವಾಣಿಜ್ಯ ಬೆಳೆಗಳಿಗೆ ಬದಲಾಯಿಸಿಕೊಂಡು, ಆಗತಾನೆ ಹೊಸದಾಗಿ ಮೆಕ್ಕೆಜೋಳ ಬೆಳೆಯಲು ಪ್ರಾರಂಭಿಸಿದರು. ಇದಾದ ನಂತರ ರೇಷ್ಮೆ ಕೃಷಿ ಪ್ರಾರಂಭವಾದ ನಂತರ ಗ್ರಾಮಸ್ಥರ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆ ಆಯಿತು. ವರ್ಷದ ಆರು ಬೆಳೆಗಳಲ್ಲಿ ಎರಡು ಬೆಳೆ ಕೈ ಹಿಡಿದರೂ, ರಾಗಿ ಜೋಳ ಬೆಳೆಯುತ್ತಿದ್ದಕ್ಕಿಂತಲೂ ಹೆಚ್ಚಿನ ಆದಾಯ ಗಳಿಸಿ ಹಣದ ಮುಖ ನೋಡಲು ಪ್ರಾರಂಭಿಸಿದರು. ಊರಿನಲ್ಲಿ ಮೊಟ್ಟ ಮೊದಲ ಬಾರಿಗೆ ಊರ ಹೊರಗಿದ್ದ ಕೋಣನ ತಿಪ್ಪಣ್ಣನವರ ಜಮೀನಿನಲ್ಲಿ ಹಿಟ್ಟಿನ ಗಿರಣಿ ಪ್ರಾರಂಭವಾಗಿ ಬೀಸುವ ಕಲ್ಲಿಗೆ ನಿವೃತ್ತಿ ದೊರೆಯಿತು.

ಅಷ್ಟರಲ್ಲಿ ನಮ್ಮ ಅಜ್ಜಿಯವರ ದೇಹಾಂತ್ಯವಾಗಿ ನಂತರ ಊರಿಗೆ ಹೋಗಿ ಬರುವುದು ಕಡಿಮೆ ಆಯಿತು. ನಂತರ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು, ಬ್ಯಾಂಕ್ ನೌಕರಿಗೆ ಸೇರಿ, ದೇಶದಾದ್ಯಂತ ಸೇವೆ ಸಲ್ಲಿಸಿ ,ನಿವೃತ್ತಿಯಾಗುವವರೆಗೂ, ಅಂದರೆ ಸುಮಾರು 40 ವರ್ಷಗಳ ಕಾಲ ಮತ್ತೆ ಈ ಊರಿಗೆ ಹೋಗುವ ಅವಕಾಶ ಸಿಗಲಿಲ್ಲ. ಯಾವುದಾದರು ಕಾರಣಕ್ಕೆ, ಮದುವೆ ಸಮಾರಂಭಗಳಿಗೆ ಆಹ್ವಾನ ಪತ್ರಿಕೆ ಕೊಡಲು ಹೋದಾಗ, ಊರ ಹೊರಗಡೆ ಮನೆ ಮಾಡಿದ್ದ ಸಹೋದರನ ಮನೆಗೆ ಹೋಗಿ ಹಾಗೇ ಬಂದುಬಿಡುತ್ತಿದ್ದೆವು.

ನೌಕರಿಯಿಂದ ನಿವೃತ್ತಿಯಾದ ನಂತರ ಯಾಕೋ ಏನೋ, ಆ ಊರಿಗೆ ಹೋದ ಹಾಗೆ, ಅಜ್ಜಿ ಮನೆಯ ಒಳಗಡೆ ಹೋದ ಹಾಗೆ, ಪದೇ ಪದೇ ಕನಸು ಬೀಳುತ್ತಿತ್ತು. ನಾವು ಹುಟ್ಟಿ ಬೆಳೆದ ಮನೆ, ಊರನ್ನು ನೋಡಬೇಕೆಂಬ ಹಂಬಲ, ತುಡಿತ ಜಾಸ್ತಿಯಾಯಿತು. . ಆದರೆ ಕಾರಣಾಂತರಗಳಿಂದ ಹೋಗಲಾಗುತ್ತಿರಲಿಲ್ಲ. ಒಂದು ದಿನ ಏನಾದರೂ ಆಗಲಿ ಹೋಗೇ ಬರಬೇಕೆಂದು ತೀರ್ಮಾನ ಮಾಡಿ, ಸಹೋದರಿಯೊಂದಿಗೆ ಚರ್ಚಿಸಿ, ಒಂದು ದಿನ ಹೊರಟೆವು. (ಈಗ ಕಾರಿನಲ್ಲಿ) .

ಹೋಗುವಾಗಲೇ ಬದಲಾವಣೆ ಗಾಳಿ ಬೀಸಿರುವುದನ್ನು ನೋಡಿ ಆಶ್ಚರ್ಯ ಆನಂದ. ಗತಕಾಲದ ನೆನಪುಗಳೊಂದಿಗೆ ಊರಿನ ಪ್ರವೇಶ ಮಾಡಿದೆವು. ಕಡಿದಾದ ಕೊರಕಲ್ಲು ರಸ್ತೆ ಈಗ ಸೊಗಸಾದ ತಾರು ರಸ್ತೆಯಾಗಿರುವುದಲ್ಲದೆ ಹಳ್ಳ ದಾಟಲು ಸುಸಜ್ಜಿತ ಸೇತುವೆ ಅಗಿದೆ. ದುರಂತವೆಂದರೆ ಹಳ್ಳ ನೀರಿಲ್ಲದೆ ಪೂರ್ತಿ ಒಣಗಿಹೋಗಿ, ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು, ಪೊದೆಗಳಿಂದ ತುಂಬಿ ಹೋಗಿತ್ತು. ಹಾಗೆ ಮುಂದೆ ಬಂದಂತೆ ಬಲಗಡೆ ಒಂದೆರಡು ಎಕರೆಯಲ್ಲಿ ಟೊಮೇಟೊ ಬೆಳೆ ಇತ್ತು. ಆಗ ಕೆಜಿಗೆ 180 ರಿಂದ 200 ರೂ ಇದ್ದುದರಿಂದ ಅದಕ್ಕೆ ಸುತ್ತಲೂ ವಿದ್ಯುತ್ ಬೇಲಿ ಹಾಕಿ, ಹೊನಲು ಬೆಳಕಿನ ವ್ಯವಸ್ಥೆ ಮಾಡಿ, ಸಿಸಿ ಕ್ಯಾಮರಗಳ ವ್ಯವಸ್ಥೆ ನೋಡಿ, ನಮ್ಮ ದೇಶ ನಿಜವಾಗಲೂ ಅಭಿವೃದ್ಧಿ ಹೊಂದಿದೆ ಎನ್ನಿಸಿತು. ಮೊದಲಿದ್ದ ಹರಿಜನರ ಗುಡಿಸಿಲುಗಳ ಜಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ಕಟ್ಟಿಸಿ ಕೊಟ್ಟ ಚಿಕ್ಕ ಚಿಕ್ಕ ಆರ್ ಸಿ ಸಿ ಮನೆಗಳು ಕಂಡವು. ದಾಟಿ ಮುಂದೆ ಬಂದಾಗ ಊರಿಗೊಬ್ಬನೇ ಇದ್ದ ಕ್ಷೌರಿಕನ ಬದಲು ಮರದ ಪೆಟ್ಟಿಗೆಯ ಸಲೂನು ಕಂಡಿತು, ಕರಿಮಂಟೆಪ್ಪನವರ ಚಾ ಅಂಗಡಿಯ ಜಾಗದಲ್ಲಿ ನೂಡ್ಲ್‌ಸೆಂಟರ್ ನೋಡಿ ನಿಜಕ್ಕೂ ಸಖೇದಾಶ್ಚರ್ಯ ವಾಯಿತು. ಪ್ರವೇಶ ದ್ವಾರ, ಬುಡ್ಡೇಕಲ್ಲು, ಚಾವಡಿ, ಚಾವಡಿಯ ಕಟ್ಟೆ, ದೊಡ್ಡ ಅರಳೀ ಮರದ ಕಟ್ಟೆ (ಪುಣ್ಯಕ್ಕೆ ನಲವತ್ತು ವರ್ಷಗಳ ನಂತರವೂ ಇವು ಇನ್ನೂ ಹಾಗೇ ಇವೆ.) ಎಲ್ಲಾ ನೋಡಿ ಬಾಲ್ಯದ ನೆನಪಾಗಿ ಭಾವಪರವಶರಾದೆವು. ಪ್ರವೇಶದ್ವಾರದ ಮುಖಾಂತರ ಊರ ಪ್ರವೇಶ ಮಾಡಿದರೆ, ಮೊದಲು ಭವ್ಯವಾಗಿದ್ದ ಮನೆಗಳು ಈಗ ಮನುಷ್ಯರ ವಾಸವಿಲ್ಲದೆ ಪಾಳು ಬಿದ್ದಿದ್ದವು. ಆದರೆ ಎದುರಿಗೆ ಇದ್ದ ಈಶ್ವರನ ಗುಡಿ ಮಾತ್ರ, ನವೀಕರಣಗೊಂಡು ಆಧುನಿಕ ರೀತಿಯಲ್ಲಿ ಸುಣ್ಣ ಬಣ್ಣದಿಂದ ಅಲಂಕೃತಗೊಂಡು ಮೆಟ್ಟಿಲು ಹತ್ತಿ ಹೋಗಲು ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿತ್ತು. ಅದರ ಪಕ್ಕದಲ್ಲಿದ್ದ, ನಾವು ಹುಟ್ಟಿ ಬೆಳೆದ, ನಮ್ಮ ಅಜ್ಜಿಯ ಮನೆಯನ್ನು ನೋಡುವ ತವಕದಲ್ಲಿ ಪಕ್ಕಕ್ಕೆ ತಿರುಗಿದರೆ ನೆಲಸಮ ಮಾಡಿದ ಮನೆಯ ಅವಶೇಷಗಳನ್ನು ನೋಡಿ ಹೃದಯ ಹಿಂಡಿದಂತಾಯಿತು, ಅಣ್ಣನನ್ನು ವಿಚಾರಿಸಿದಾಗ, ಆ ಜಾಗವನ್ನು ಊರವರೇ ಒಬ್ಬರು ಖರೀದಿಸಿ, ಮನೆ ಹಳೆಯದಾದ್ದರಿಂದ ಅದನ್ನು ಕೆಡವಿಸಿ, ಬೇರೆ ಕೃಷಿ ಉದ್ದೇಶಕ್ಕಾಗಿ ಉಪಯೋಗಿಸುತ್ತಿರುವುದಾಗಿ ತಿಳಿಯಿತು. ನಾವು ನಮ್ಮ ಬಾಲ್ಯವನ್ನೆಲ್ಲಾ ಕಳೆದ ಮನೆಯ ಸ್ಥಿತಿ ನೋಡಿ ಬಾಲ್ಯದ ದಿನಗಳೆಲ್ಲಾ ಮರುಕಳಿಸಿ, ದುಃಖ ಉಮ್ಮಳಿಸಿ ಬಂತು. ನೀರು ತುಂಬಿದ ಕಣ್ಣುಗಳನ್ನು ಯಾರಾದರೂ ನೋಡಿಯಾರು ಎಂದು ಅಂಜಿ ಬೇರೆ ಕಡೆ ಮುಖ ತಿರುಗಿಸಿ, ಅಲ್ಲಿ ನಿಲ್ಲಲಾರದೆ, ಮೊಬೈಲ್ ನಲ್ಲಿ ಅದರ ಫೋಟೋ ತೆಗೆದು ಅಲ್ಲಿಂದ ಹೊರಟೆವು. ಪಕ್ಕಕ್ಕೆ ಹೋದರೆ ನೀರಿಲ್ಲದೆ ಹಾಳು ಬಿದ್ದ ಬಾವಿ, ಅದರ ಹಿಂದಿನ ಕೋಟೆ, ಎಲ್ಲಾ ಗತಕಾಲದ ವೈಭವವನ್ನು ನೆನಪಿಸಿತು. ಊರ ತುಂಬಾ ಅಡ್ಡಾಡಿದರೂ ಶೇಕಡ 25 ರಷ್ಟು ಮನೆಗಳಲ್ಲಿ ಮಾತ್ರ ಜನ ವಾಸವಾಗಿದ್ದು, ಶೇಕಡ 75ರಷ್ಟು ಭಾಗದ ಮನೆಗಳು ಪಾಳು ಬಿದ್ದು ಈ ಹಿಂದೆ ನಾವು ನೋಡಿದ ದೊಡ್ಡ ದೊಡ್ಡ ವಾಸದ ಮನೆಗಳೆಲ್ಲ ಅರ್ಧಂಬರ್ಧ ಬಿದ್ದು ಹೋಗಿದ್ದವು. ಊರಿಗೆ ಊರೇ ಪಾಳು ಬಿದ್ದು ಹಾಳು ಹಂಪಿ ಯಾಗಿತ್ತು.

ಹಾಗೇ ನಡೆದು ಅಜ್ಜಿಯವರ ಕಟ್ಟೆ ಜಮೀನಿಗೆ ಹೊರಟೆವು. ಮೊದಲು ಚಿಕ್ಕ ಕಾಲು ದಾರಿಯಂತಿದ್ದ ರಸ್ತೆ ಈಗ ಜಮೀನಿಗೆ ಟ್ರ್ಯಾಕ್ಟರ್ ಕಾರುಗಳು ಓಡಾಡಿ ಅಗಲವಾಗಿತ್ತು. ದೂರದಿಂದ ಕಾಣುತ್ತಿದ್ದ ಮಾವಿನ ಮರಗಳು ಹುಣಿಸೇ ಮರಗಳು ಕಾಣೆ ಯಾಗಿ, ಒಂದಿಷ್ಟು ತೆಂಗಿನ ಮರಗಳು ಕಂಡವು. ಜೋಳ ಸಜ್ಜೇ ನವಣೆ, ರಾಗಿ ಬೆಳೆಯುತ್ತಿದ್ದ ಜಮೀನಿನಲ್ಲಿ ರೇಷ್ಮೆಯ ಹಿಪ್ಪು ನೇರಳೆ , ಮೆಕ್ಕೆಜೋಳದ ಬೆಳೆಗಳು ಕಂಡವು. ಹತ್ತಿರ ಹೋಗಿ ನಾವು ಈಜಾಡಿದ ಬಾವಿಯನ್ನು ನೋಡಿದರೆ ಬಾವಿ ಮುಚ್ಚಿ ಹೋಗಿ ದೊಡ್ಡ ಗುಂಡಿಯಂತಿತ್ತು. ಅದರ ಒಳಗಿನಿಂದ ವಿವಿಧ ಜಾತಿಯ ವಿವಿಧ ಗಾತ್ರದ ಮರ ಗಿಡಗಳು ಬೆಳೆದಿದ್ದು ನೋಡಿ, ನಾವು ಈಜು ಕಲಿತದ್ದು, ಈಜಾಡಿದ್ದು, ಮೇಲಿಂದ ಹಾರಿದ್ದು, ಇದೇ ಭಾವಿಯೇ ಅಂತ ಆಶ್ಚರ್ಯವಾಯಿತು. ವಾಪಾಸು ಬರುವಾಗ ನಮ್ಮ ಅಜ್ಜಿಯವರು ದಾನ ಮಾಡಿದ ಜಾಗದಲ್ಲಿ ಸುಸಜ್ಜಿತವಾದ ದೊಡ್ಡ ಆಸ್ಪತ್ರೆಯನ್ನು ನೋಡಿ ಅಲ್ಲಿಯ ಶಿಲಾನ್ಯಾಸದ ಶಿಲೆಯಲ್ಲಿ, ನಮ್ಮ ತಾಯಿ ಮತ್ತು ನಮ್ಮ ದೊಡ್ಡಮ್ಮನವರ ಹೆಸರು, ಭೂಮಿ ದಾನ ಮಾಡಿದವರೆಂದು ಬರೆದದ್ದು ನೋಡಿ ಆನಂದ ದಿಂದ ಆನಂದ ಭಾಷ್ಪ ಉದುರಿದವು. ಒಬ್ಬ ಡಾಕ್ಟರ್‌ನಾಗೇಶ್ವರ ರಾವ್ ಇದ್ದ ಊರಿನಲ್ಲಿ ಸುತ್ತ ಮುತ್ತಲ ಊರಿನವರಿಗೂ ಉಪಯೋಗವಾಗುವ ಸುಸಜ್ಜಿತ ಆಸ್ಪತ್ರೆ. ಇದು ನಿಜವಾದ ಅಭಿವೃಧ್ಧಿ ಎಂದು ತೃಪ್ತಿ ಯಿಂದ ಹಿಂದಿರುಗಿದೆವು.

ಆದರೆ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತ್ತು. ಊರಲ್ಲಿದ್ದವರೆಲ್ಲಾ ಎಲ್ಲಿ ಹೋದರು? ನಮ್ಮಣ್ಣನಿಗೆ ಈ ಪ್ರಶ್ನೆ ಕೇಳಿದಾಗ ಸ್ವಲ್ಪ ತಡಿ. ಊಟ ಮಾಡೋಣ. ಆಮೇಲೆ ನಿನ್ನ ಪ್ರಶ್ನೆಗೆ ಉತ್ತರ ತನಗೆ ತಾನೇ ಸಿಗುತ್ತದೆ ಎಂದಾಗ ನನಗೆ ಕುತೂಹಲ ಇನ್ನೂ ಜಾಸ್ತಿಯಾಯಿತು.

ಊಟವಾದ ನಂತರ ಹಳ್ಳದ ಕಡೆ ಹೊರಟೆವು. ಮೊದಲು ಹಾದಿಯ ಅಕ್ಕಪಕ್ಕ ಬಳ್ಳಾರಿ ಜಾಲಿ, ಕಣಗಳು, . ಎತ್ತು ಎತ್ತಿನ ಬಂಡಿ, ಹುಲ್ಲಿನ ಬಣವೆಗಳು, ದನ ಕರುಗಳಿರುತ್ತಿದ್ದವು. ಈಗ ಅವುಗಳ ಜೊತೆ ಸುಸಜ್ಜಿತವಾದ ಮನೆಗಳಿದ್ದವು. ಆಗ ನಮ್ಮ ಅಣ್ಣ ಹೇಳಿದ ಈಗ ಊರಿನ ಒಳಗಡೆ ಯಾರೂ ಇಲ್ಲ. ಎಲ್ಲರೂ ಊರ ಹೊರಗಡೆ ಕಣಗಳಲ್ಲಿ ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ ಎಂದನು. ಅಂದರೆ ಮೊದಲು ಇದ್ದ ಹಾಗೆ ಅಕ್ಕ ಪಕ್ಕ ಒತ್ತೊತ್ತಾಗಿ ಇಲ್ಲ. ಮಲೆನಾಡುಗಳಲ್ಲಿ ಇದ್ದಂತೆ ದೂರ ದೂರ ಮನೆಗಳು. ಹಾಗೆ ಮುಂದೆ ಹೋದರೆ, ದಾರಿಯ ಅಕ್ಕಪಕ್ಕ ಹತ್ತಾರು ಮೋಟಾರ್ ಸೈಕಲ್ ಗಳು ನಿಂತಿದ್ದು, ಸ್ವಲ್ಪ ದೂರದಲ್ಲಿ ಮರದ ಕೆಳಗೆ ಜನರು ಗುಂಪು ಕೂಡಿರುವುದು ಕಂಡಿತು. ಅದೇನೆಂದು ಕೇಳಿದರೆ , ಜನಗಳಿಗೆ ಕೆಲಸವಿಲ್ಲದಾಗ ಅಥವಾ ಕೆಲಸವಿಲ್ಲದವರು ಕುಳಿತು ಇಸ್ಪೀಟಾಟದಲ್ಲಿ ತಲ್ಲೀನರಾಗಿರುತ್ತಾರೆ ಎಂದು ತಿಳಿಸಿದರು. ಮುಂದೆ ಹೋದಾಗ ಆಗಲೇ ಶಿಥಿಲಾವಸ್ಥವಸ್ಥೆಯಲ್ಲಿದ್ದ ನಾಗರಕಟ್ಟೆ, ಆಧುನಿಕತೆಯ ಲೇಪನದೊಂದಿಗೆ ಸುವ್ಯವಸ್ಥಿತವಾಗಿ ಸುತ್ತಲು ಕಟ್ಟೆ, ಕಟ್ಟೆ ಹತ್ತಿ ಹೋಗಲು ಮೆಟ್ಟಿಲುಗಳು, ವಿವಿಧ ಬಣ್ಣಗಳೊಂದಿಗೆ ಕಂಗೊಳಿಸುತ್ತಿತ್ತು. ಇದನ್ನು ನೋಡಿ ಅತ್ಯಂತ ಸಂತೋಷದಿಂದ, ನಾವೂ ಹತ್ತಿರ ಹೋಗಿ ಕೈಮುಗಿದು, ಹಾಗೇ ಮುಂದುವರೆದು ಬಂದಾಗ, ಹಳ್ಳ ಪೂರ್ತಿ ಕಣ್ಮರೆಯಾಗಿ, ಒಂದು ಹನಿ ನೀರಿಲ್ಲದೆ, ಬರೀ ಕಲ್ಲು, ಬಂಡೆ, ಕುರುಚಲು, ಗಿಡ ಪೊದೆ ಗಳಿಂದ ಕೂಡಿತ್ತು. ವರ್ಷದ 12 ತಿಂಗಳೂ ಹರಿಯುತ್ತಿದ್ದ, ಹಳ್ಳದಲ್ಲಿ, ನಾವುಗಳು, ಬಟ್ಟೆ ಒಗೆದು, ಈಜಾಡಿ, ಮರಳ ಮೇಲೆ ಸಂಜೆಯ ಹೊತ್ತು ಗಂಟೆಗಟ್ಟಳೆ ಹರಟೆ ಹೊಡೆಯುತ್ತಿದ್ದ ಜಾಗ ಎಲ್ಲಿ ಕಳೆದು ಹೋಯಿತು ಎಂದು ದುರ್ಬೀನು ಹಾಕಿಕೊಂಡು ಹುಡುಕಿದರೂ, ಒಂದು ಹನಿ ನೀರಿರಲಿಲ್ಲ. ಆದರೆ ಅತ್ಯಂತ ಸುಸಜ್ಜಿತವಾದ ಸೇತುವೆ ಇತ್ತು. ಇದನ್ನು ನೋಡಿ ಕರುಳು ಹಿಚುಕಿದಂತಾಗಿ ದುಃಖ ಒತ್ತರಿಸಿ ಬಂದಂತಾಯಿತು. ಆದರೆ ಆ ಕ್ಷಣದಲ್ಲಿ ಆ ವಿಪರ್ಯಾಸ ನೋಡಿ ನಗು ಬಂತು. ನೀರಿದ್ದಾಗ ಹಳ್ಳ ದಾಟಲು ಬೇಕಾದ ಸೇತುವೆ ಇರಲಿಲ್ಲ, ಆದರೆ ಈಗ ಸೇತುವೆ ಇದೆ, ಈಗ ಅದರ ಅವಶ್ಯಕತೆ ಇಲ್ಲ ಏಕೆಂದರೆ ಹಳ್ಳದಲ್ಲಿ ನೀರೇ ಇಲ್ಲ. ಭಾವ ಪರವಶರಾಗಿ ಭಾರವಾದ ಹೃದಯದಿಂದ ಹಿಂದಕ್ಕೆ ಬಂದೆವು. ಅಚ್ಚುಕಟ್ಟಾದ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ, ಅಂಗಡಿ ಮುಂಗಟ್ಟುಗಳು, ಕಾರು ಬೈಕುಗಳು ಓಡಾಟ ನೋಡಿ ಆಶ್ಚರ್ಯ ಉಂಟಾಯಿತು.

ದಿನಕ್ಕೊಮ್ಮೆ ಬರುತ್ತಿದ್ದ ಬಸ್ಸನ್ನು ಕಾಯುವ ಬದಲು, ಈಗ ಎಲ್ಲರ ಬಳಿಯೂ ಬೈಕು, ಕಾರುಗಳು, ಬಾಡಿಗೆಗೂ ಸಿಗುವ ಕಾರುಗಳು, ಬೇಕೆಂದಾಗ, ಬೇಕಾದ ಕಡೆಗೆ, ತಕ್ಷಣ ಹೋಗಿ ಬರುವ ಅನುಕೂಲ, ಎಲ್ಲರ ಬಳಿಯೂ ಮೊಬೈಲ್ ಫೋನ್ ಗಳು, ಮನೆಗೊಂದು ಟೀವಿ, ಫ್ರಿಡ್ಜ್, ಭಾವಿಗೆ ಹೋಗಿ ನೀರು ಸೇದುವ ಬದಲು, ಮನೆಯ ಬಳಿಯೇ ನಲ್ಲಿಯಲ್ಲಿ ಬರುವ ನೀರು, ಊರಿನಲ್ಲಿ ಈಗ ಎಲ್ಲಾ ಬಗೆಯ ಅಂಗಡಿ ಮುಂಗಟ್ಟುಗಳು, ಬೀದಿ ದೀಪಗಳು, ಹಿಟ್ಟಿನ ಗಿರಣಿಗಳು, ಬಟ್ಟೆ ಅಂಗಡಿಗಳು, ಫೋನ್‌ಮಾಡಿ, ನಗರಗಳಿಂದ ಬೇಕಾದ ಸಾಮಾನುಗಳನ್ನು ತರಿಸಿಕೊಳ್ಳುವುದು, ಎತ್ತು,ಎಮ್ಮೆಗಳ ಬದಲು, ಟ್ರ್ಯಾಕ್ಟರ್‌ಗಳು, ನಂದಿನಿ ಹಾಲಿನ ಪೂರೈಕೆಯ ಕೇಂದ್ರಗಳು, ನಗರಗಳಲ್ಲಿರುವ ಮಕ್ಕಳು ಮತ್ತು ಅವರ ಕುಟುಂಬಗಳು, ಊರಲ್ಲಿರುವ ವಯಸ್ಸಾದ ತಂದೆ,ತಾಯಿಗಳು, ಎಲ್ಲದಕ್ಕೂ ಮಿಗಿಲಾಗಿ ಎಲ್ಲರ ಕೈಯಲ್ಲೂ ಯಥೇಚ್ಚವಾಗಿ ಇರುವ ಹಣ, ಜಮೀನುಗಳಿಗೆ ಬಂದಿರುವ, ದುಬಾರಿ ಬೆಲೆ, ಜೀವನದ ಅವಿಭಾಜ್ಯ ಅಂಗವಾಗಿದ್ದ ಕೃಷಿ ಚಟುವಟಿಕೆ, ಕೃಷಿ ಕಾರ್ಮಿಕರ ಕೊರತೆಯಿಂದ, ಅನಿಶ್ಚಿತ ಮಳೆಯಿಂದ, ಬೆಳೆದ ಬೆಳೆಗೆ, ಪಟ್ಟ ಪರಿಶ್ರಮಕ್ಕೆ ಸರಿಯಾದ ಸಿಗದ ಬೆಲೆ, ಇವುಗಳಿಂದ ಕೆಲವರು ಮಾತ್ರ ಕೃಷಿಯನ್ನು ಒಂದು ಉದ್ಯಮ ರೀತಿಯಲ್ಲಿ ಮಾಡಿಕೊಂಡು ಹೋಗುತ್ತಿದ್ದಾರೆ. ಉಳಿದವರು, ಮಕ್ಕಳು ಕಳುಹಿಸುವ ಹಣದಿಂದ ಜೀವನ ಮಾಡುತ್ತಾ, ಪಿತ್ರಾರ್ಜಿತ ಆಸ್ತಿ ಗಳನ್ನು ನೋಡಿಕೊಳ್ಳುತ್ತಾ, ಅನಿವಾರ್ಯವಾಗಿ ಊರಿನಲ್ಲಿ ವಾಸವಾಗಿದ್ದಾರೆ. ಅಥವಾ ಇರುವ ಜಮೀನಿನ ಸ್ವಲ್ಪ ಭಾಗವನ್ನು ಮಾರಿ ಬಂದ ಹಣದಲ್ಲಿ ಜೀವನ ಮಾಡುತ್ತಇದ್ದಾರೆ.

ಬೆಳಗಿನಿಂದ ನೋಡಿದ ಊರನ್ನು ನಮ್ಮ ಬಾಲ್ಯದ ಊರಿಗೆ ಹೋಲಿಕೆ ಮಾಡಿ, ಅಭಿವೃದ್ಧಿ ಎಂದರೆ ಇದೇನಾ, ಗ್ರಾಮೀಣ ಭಾರತದ ಅಭಿವೃದ್ಧಿ ಎಂದರೆ ಆಧುನಿಕ ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಎಲ್ಲಾ ಸರಿ, ಆದರೆ ಮನುಷ್ಯ ಮನುಷ್ಯರ ನಡುವೆ ಇರಬೇಕಾದ ಸಂಬಂಧ, ಸಹಕಾರ, ಆತ್ಮೀಯತೆ, ಆರ್ದ್ರತೆ, ಎಲ್ಲೋ ಕಳೆದು ಹೋಗಿದೆ ಎನಿಸಿ, ಭಾರವಾದ ಹೃದಯದಿಂದ , ಮಿಶ್ರ ಭಾವನೆಗಳೊಂದಿಗೆ ಅಂತೂ ಇಂತೂ ನಮ್ಮ ಅಜ್ಜಿಯ ಊರಿಗೆ ಹೋಗುವ ಕನಸನ್ನು ನನಸಾಗಿಸಿಕೊಂಡು ಆಸೆ ಪೂರೈಸಿಕೊಂಡು ಸಂಜೆ ಹಿಂದಿರುಗಿದೆವು.

ಟಿ.ವಿ.ಬಿ.ರಾಜನ್ , ಬೆಂಗಳೂರು

14 Comments on “ಗ್ರಾಮೀಣಾಭಿವೃದ್ಧಿ!

  1. ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  2. ಅತ್ಯುತ್ತಮ ಲೇಖನ ಹಾಗೆ ಓದಿಸಿಕೊಂಡು ಹೋಗುತ್ತೆ. ಹಿಂದಿನ ಕಾಲದ ಗ್ರಾಮದ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಲೇಖಕರು

  3. The article reflects on simple contented self susufficient living to modern sophisticated living with no real life and enjoyment.

  4. ಲೇಖನ ವಾಸ್ತವಿಕಬದುಕಿನ ಚಿತ್ರ ಣ.. ತುಂಬಾ ಆಪ್ತವಾಗಿ… ಸಾರ್ ನಿರೂಪಣೆ ಸೊಗಸಾಗಿ ಬಂದಿದೆ… ವಂದನೆಗಳು

  5. If you visit most of the Malnad villages in
    Shimoga , chikkamagalur , Soraba ,Sagar
    North kanara … You will find at least 2-3
    80+ year old ಹಂಚಿನ‌ಮನೆಗಳನ್ನು‌… Which have become ಭೂತ್ Bunblows ….
    …. Because … The children & grand children
    have migrated to B lore , Mysore
    Mangalore Hubli , even USA , Canada
    Germany , Russia , Singapore , Austrralia & so many other foreign countries .

    In the remaining 80 + year old
    ಹಂಚಿನ‌ಮನೆ ಗಳಲ್ಲಿ , you will find mostly
    A couple who are , most likely in.their
    Seventies , Eighties & in a few cases
    90 s also

  6. Changes observed is narrated nicely with lucid details. Your article reminds us our village life in childhood days. Superb Article Rajan

  7. ಲೇಖಕರ ಲೇಖನವೂ ಉತ್ತಮವಾಗಿ ಮೂಡಿಬಂದಿದೆ ಅವರ ಬರವಣಿಗೆಯನ್ನು ನೋಡಿದರೆ ನಮ್ಮ ಹಳ್ಳಿಗಳು ಅಭಿವೃದ್ಧಿ ಹೊಂದಿದವೇ ಅಭಿವೃದ್ಧಿ ಎಂದರೆ ಇದೇನಾ ಎನ್ನುವಷ್ಟರ ಮಟ್ಟಿಗೆ ಆಶ್ಚರ್ಯ ಉಂಟು ಮಾಡುತ್ತದೆ ನೀರಿಲ್ಲದ್ದಾಗ ಬ್ರಿಜ್ ನೀರಿದ್ದಾಗ ಇಲ್ಲದೆ ಇರುವುದು ಆದ್ದರಿಂದ ನೀರು ಇರುವುದು ಸಮೃದ್ಧಿಗೆ ಅಥವಾ ಬ್ರಿಜ್ ಇರುವುದು ಸಮೃದ್ಧಿ ಎನ್ನುವುದನ್ನು ಯೋಚನೆ ಮಾಡಬೇಕಾಗಿದೆ.

    1. ರಂಗ ಕರ್ಮಿ ಪ್ರಸನ್ನ ಇದನ್ನು ಹೆದ್ದಾರಿ ಅಭಿವೃದ್ಧಿ ಎಂದು ಕರೆಯುತ್ತಾರೆ. ಇದರಲ್ಲಿ ಒಳ್ಳೆಯದೆಲ್ಲಾ ಬರಡಾಗಿ, ಕೆಟ್ಟದ್ದೆಲ್ಲಾ ನಳನಳಿಸುತ್ತದೆ.

      ಪ್ರತಿಕ್ರಿಯೆಗೆ ಧನ್ಯವಾದಗಳು.

  8. ಹೌದು… ಅಭಿವೃದ್ಧಿ ಎಂಬ ಹೆಸರಿನಲ್ಲಿ ಮಾನವನ ಸಹಜ ಬಾಂಧವ್ಯಗಳು ಮಾಯವಾಗುತ್ತಿವೆ. ಎಲ್ಲದರ ಜೊತೆಗೆ ಆಸ್ಪತ್ರೆ, ಪೋಲೀಸ್ ಸ್ಟೇಷನ್ ಇತ್ಯಾದಿಗಳು ಹೆಚ್ಚಾದಂತೆ ಖುಷಿ ಪಡುವುದೋ, ಬೇಸರಿಸುವುದೋ ತಿಳಿಯುತ್ತಿಲ್ಲ! ಸಾರ್ವಕಾಲಿಕ ಲೇಖನ ಚೆನ್ನಾಗಿದೆ.

  9. ಪ್ರೋತ್ಸಾಹಕ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

  10. ಗತ ಹೋದ ವೈಭವದ ಹಳ್ಳಿ ಹಾಗು ಹಳ್ಳಿ ಜೀವನವನ್ನು ರಾಜನ್ ತುಂಬಾ ಚೆನ್ನಾಗಿ, ನಮ್ಮ ಕಣ್ಣಿನ ಮುಂದೆ ಬರುವಂತೆ, ತಮ್ಮಬಾಲ್ಯ, ಯುವ ಶಾಲಾ ಜೀವನ ಕಳೆದ ಊಡೇವು ಹಳ್ಳಿಯನ್ನು ೫೦ ವರ್ಷದ ಬಳಿಕ, ತಮ್ಮ ೭೦ ನೇ, ಎರಡನೇ ಬಾಲ್ಯದ ವಯಸ್ಸಿನಲ್ಲಿ, ಪುನಃ ಸಂದರ್ಸಿದಾಗ ಆದ ತಮ್ಮ ಮನಸ್ಸಿನ, ಭಾವನೆಗಳ, ಕಹಿ – ಸಿಹಿ ದ್ವಂದ, ನೆನಪು, ಅನುಭವ, ಹಾಗೂ ಅಭಿಪ್ರಾಯಗಳನ್ನು ನಮ್ಮ ಮುಂದೆ ನಮ್ಮೆಲ್ಲರ ಮನ, ಹೃದಯಸ್ಪರ್ಶಿಯಾಗುವಂತೆ ಹಂಚಿಕೊಂಡಿದ್ದಾರೆ.
    ಜೀವನದಲ್ಲಿ ಬದಲಾವಣೆಯೊಂದೇ ಸ್ಥಿರ ಎಂಬ ಸತ್ಯವನ್ನು ನಿರೂಪಿಸಿದ್ದಾರೆ!
    ಇಂತಾ ಅನುಭವದ ಅರಿವು ನಮ್ಮೆಲ್ಲರೊಂದಿಗೆ ಮುಂದಿನ ದಿನಗಳಲ್ಲಿ ಹಂಚಲಿ ಅಂತ ನಮ್ಮ ಆಶಯ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *