ರಾಮೇಶ್ವರ, ಕನ್ಯಾಕುಮಾರಿ, ಮಧುರೈ- ಭಾಗ 3
ಈ ಕ್ಷೇತ್ರ ತಲುಪಿದಾಗ ಸೂರ್ಯಾಸ್ತಮಾನದ ಸಮಯ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತಾಷರಾದೆವು. ಸಮುದ್ರದಲ್ಲಿ ತೃಪ್ತಿಯಾಗುವವರೆಗೂ ಆಟವಾಡಿ ಕುದುರೆಯೇರಿ ಒಂದು ರೌಂಡ ಸುತ್ತಾಡಿ ಸಿಗುವ ಕುರುಕುಲು ಕಾಫಿ ಹೀರಿ ವ್ಯವಸ್ಥೆಗೊಂಡ ರೂಮು ಸೇರಿಕೊಂಡು ಪವಡಿಸಿದ್ದೇ ಗೊತ್ತಾಗಲಿಲ್ಲ.
ಎಲ್ಲಿ ಹೋದರೂ ನಡಿಗೆ ಅನಿವಾರ್ಯ. ಬೆಳಗಿನ ಸೂರ್ಯೋದಯ ವೀಕ್ಷಿಸಲು ಕಡಲ ತೀರಕ್ಕೆ ಬೇಗನೆ ಬಂದರೂ ಆಗಲೂ ಮೋಡ ಮರೆಯಾಗಿರಲಿಲ್ಲ. ಅಲ್ಲೂ ನಿರಾಸೆಯೆ ಕಾದಿತ್ತು.
ಈ ಊರು ಹಳೆಯ ತಿರುವಾಂಕೂರ್ ರಾಜ್ಯದ ದಕ್ಷಿಣದಲ್ಲಿರುವ ಚಿಕ್ಕ ಹಳ್ಳಿ. ಶ್ರೀ ಮಹಾವಿಷ್ಣುವಿಗೂ ಆರನೆಯ ಅವತಾರವಾದ ಪರಶುರಾಮನಿಗೂ ಈ ಪುಣ್ಯ ಕ್ಷೇತ್ರಕ್ಕೂ ಬಹಳ ಹತ್ತಿರ ಸಂಬಂಧವಿದೆ. ಇತಿಹಾಸದಲ್ಲಿ ಪುರಾಣ ಕಥೆಯಿದೆ. ಈಗ ಕನ್ಯಾಕುಮಾರಿ ಕ್ಷೇತ್ರ ತಮಿಳುನಾಡಿನ ಒಂದು ಭಾಗವಾಗಿದೆ. ಪಾಂಡ್ಯ ರಾಜರ ಕಾಲದಲ್ಲಿ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಳೆಂದೂ ಇತಿಹಾಸ ಹೇಳುತ್ತದೆ. ಭೂಗಭ೯ ಶಾಸ್ತ್ರಜ್ಞರು ಲಮೂರಿಯಾ ಎಂಬ ಖಂಡವಿತ್ತೆಂದೂ ಅಲ್ಲಿ ಪರಲಿ ನದಿ ಹರಿಯುತ್ತಿತ್ತೆಂದು ಅಭಿಪ್ರಾಯ ಪಟ್ಟಿದ್ದಾರೆ.
ಹೊಸ ಜಿಲ್ಲೆಯಾಗಿ ರೂಪುಗೊಂಡಿರುವ ಈ ಸ್ಥಳವು ಮೂರು ಸಮುದ್ರಗಳಿಂದ ಕೂಡಿದ್ದು ಪೂರ್ವಕ್ಕೆ ಬಂಗಾಳ ಕೊಲ್ಲಿ, ಪಶ್ಚಿಮಕ್ಕೆ ಹಿಂದೂ ಮಹಾ ಸಾಗರ, ಉತ್ತರಕ್ಕೆ ಅರೇಬಿಯಾ ಸಮುದ್ರ ಆವರಿಸಿದ್ದು ದೇವಿ ಪರಾಶಕ್ತಿಯ ಪುಣ್ಯ ಕ್ಷೇತ್ರವಾಗಿದೆ. ದೇಶದ ದಕ್ಷಿಣ ಭಾಗದ ತುದಿಯಲ್ಲಿದ್ದು ಪವಿತ್ರ ಯಾತ್ರಾ ಸ್ಥಳವಾಗಿದೆ.
ಸೂರ್ಯಾಸ್ತಮಾನ, ಸೂರ್ಯೋದಯದ ಅದ್ಭುತ ದೃಶ್ಯ ಸವಿಯಲು ಎಲ್ಲಾ ಜಾತಿ ಧರ್ಮದವರು ಬಂದು ಸಮುದ್ರ ಸ್ನಾನ ಮಾಡಿ ದೇವಿಯ ದಶ೯ನ ಮಾಡುತ್ತಾರೆ. ದೇವಿ ಕನ್ಯಾಕುಮಾರಿಯ ತಪಸ್ಸು ಮತ್ತು ಪ್ರತಿಷ್ಠೆಯ ಕುರಿತು ಒಂದು ಕಥೆಯಿದೆ.
ಭರತನೆಂಬ ರಾಜರ್ಷಿಗೆ ಒಬ್ಬಳೇ ಮಗಳು ಎಂಟು ಜನ ಗಂಡು ಮಕ್ಕಳು. ರಾಜ್ಯವನ್ನು ಸಮಪಾಲಾಗಿ ಹಂಚಲಾಗಿ ಒಂದು ಭೂ ಭಾಗವು ಕುಮಾರಿಗೆ ಬಂದು ಅದೇ ಈಗ ಕನ್ಯಾಕುಮಾರಿ ಕ್ಷೇತ್ರವೆಂದು ಹೆಸರಾಗಿದೆ. ರಾಕ್ಷಸ ರಾಜನಾದ ಬಾಣಾಸುರನ ಅತ್ಯಾಚಾರ ಅಧರ್ಮ ಸಹಿಸಲಾರದೆ ಭೂಮಾತೆಯು ಶ್ರೀ ಮಹಾವಿಷ್ಣುವಿನ ಮೊರೆ ಹೊಕ್ಕಲಾಗಿ ದೇವ ಪರಾಶಕ್ತಿಯೇ ಬರಬೇಕೆಂದು ಹೇಳಲಾಗಿ ಯಾಗದ ಮಹಿಮೆಯಿಂದ ಪ್ರತ್ಯಕ್ಷಳಾದ ದೇವಿ ಕನ್ಯೆಯಾಗಿ ಕನ್ಯಾಕುಮಾರಿಯನ್ನು ತಲುಪಿ ಘೋರ ತಪಸ್ಸು ಮಾಡತೊಡಗಿದಳು. ದಿನ ಕಳೆದಂತೆ ಆಕೆಯಲ್ಲಿ ಉಂಟಾದ ಯೌವ್ವನ ಕಂಡು ಪರಶಿವನು ವಿವಾಹವಾಗಲು ನಿಧ೯ರಿಸಿದನು. ಮದುವೆ ಸುದ್ದಿ ತಿಳಿದ ದೇವರ್ಶಿ ನಾರದರು ಒಂದು ಕೋಳಿಯ ರೂಪ ತಾಳಿ ಮುಹೂತ೯ಕ್ಕೂ ಮೊದಲೆ ಬೆಳಗಿನ ಕೂಗೂ ಕೂಗಿ ವಿವಾಹದ ಮುಹೂರ್ತ ತಪ್ಪಿಸಲಾಗಿ ದೇವಿ ಕನ್ಯಾಕುಮಾರಿಯಾಗಿಯೆ ಇರಲು ನಿಶ್ಚಯಿಸಿದಳು. ಮಾಡಿದ ಅಡಿಗೆ ಮರಳಾಗಿ ಇಂದಿಗೂ ಅಲ್ಲಿಯ ಮರಳು ವಿವಿಧ ವರ್ಣಗಲ್ಲಿರುವುದು ಕಾಣಬಹುದು.
ಇತ್ತ ಬಾಣಾಸುರನು ಮದುವೆಯಾಗಲು ಬಂದಾಗ ದೇವಿ ತಿರಸ್ಕರಿಸಲಾಗಿ ಕುಪಿತಗೊಂಡು ಕತ್ತಿಯನ್ನು ತೆಗೆಯಲಾಗಿ ಈ ಸಮಯಕ್ಕೆ ಕಾಯುತ್ತಿದ್ದ ದೇವಿಯು ತನ್ನ ಚಕ್ರಾಯುಧದಿಂದ ಸಂಹರಿಸಿ ದೇವತೆಗಳನ್ನು ಸಂತೋಷಗೊಳಿಸಿದಳು. ಪ್ರತಿ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ಉತ್ಸವ, ವೈಶಾಖ ಮಾಸದಲ್ಲಿ ರಥೋತ್ಸವಗಳು ಹತ್ತು ದಿನಗಳು ನಡೆಯುತ್ತವೆ. ಈ ದೇವಾಲಯವು ಸಾವಿರಾರು ವಷ೯ಗಳ ಇತಿಹಾಸ ಹೊಂದಿದ್ದು ಪೂರ್ವ ದಿಕ್ಕಿನ ದ್ವಾರ ಮುಚ್ಚಿರುವುದರಿಂದ ಭಕ್ತರು ಉತ್ತರದ ದ್ವಾರದಿಂದ ಪ್ರವೇಶಿಸಬೇಕು. ಎಲ್ಲಾ ಪೂಜೆಗೂ ಕಛೇರಿಯಲ್ಲಿ ಚೀಟಿ ಪಡೆದು ಮಾಡಿಸಲು ಅನುಕೂಲವಿದೆ.
ಪೂರ್ವಾಭಿಮುಖವಾಗಿ ನಿಂತ ದೇವಿ ಎಡಗಯ್ಯಲ್ಲಿ ಮಾಲೆ ಹಿಡಿದು ಚಂದನದ ಲೇಪನದಿಂದ ಅಮೂಲ್ಯ ವಜ್ರಾಭರಣಗಳಿಂದ ವಿಧ ವಿಧವಾದ ಹೂಗಳಿಂದ ಶೃಂಗಾರಗೊಂಡ ದೇವಿಯ ಮೂಗುತಿಯು ಅಮೂಲ್ಯವಾದ ವಜ್ರದ ಕಾಂತಿಯಿಂದ ಮಿಂಚುತ್ತಿರುತ್ತದೆ.
ಹತ್ತಿರವಿರುವ ಸ್ನಾನ ಘಟ್ಟಗಳು – ಸಾವಿತ್ರಿ, ಗಾಯತ್ರಿ, ಸರಸ್ವತಿ, ಕನ್ಯಾ, ಸ್ಥಾಣು, ಮಾತೃ,ಪಿತೃ ಮುಂತಾದವುಗಳಿದ್ದು ಮೂರು ಸಮುದ್ರಗಳು ಕೂಡುವ ಘಟ್ಟದಲ್ಲಿ ಸ್ನಾನ ಮಾಡಿದರೆ ಆತ್ಮ ಪರಿಶುದ್ಧತೆ, ಯಾರು ತಮ್ಮ ಪಾಪಗಳನ್ನು ಕಳೆದು ಕೊಳ್ಳಬೇಕೊ ಅವರು ಕನ್ಯಾ ಘಟ್ಟದಲ್ಲಿ ಸ್ನಾನ ಮಾಡಬೇಕು, ಪರಶುದ್ಧವಾದ ಮನಸ್ಸಿನಿಂದ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ಸೃಷ್ಟಿ ಕರ್ತನಾದ ಮನುವಿನ ಲೋಕ ಸೇರಬಹುದೆಂಬ ಪ್ರತೀತಿ ಇದೆ.
ಇಲ್ಲಿ ಭೇಟಿ ಕೊಡಬೇಕಾದ ಇನ್ನೊಂದು ಸ್ಥಳ ಗಾಂಧೀಜಿ ಮಂಟಪ. 12 ಫೆಬ್ರವರ 1948 ರಂದು ಗಾಂಧೀಜಿ ಅಸ್ಥಿ ಸಿಂಚನ ಇಲ್ಲಿ ನಡೆದಿದೆ. ಈ ಜಾಗದ ಕುರುಹಾಗಿ ಅವರ ಅನುಯಾಯಿಗಳಲ್ಲೊಬ್ಬರಾದ ಶ್ರೀ ಆಚಾರ್ಯ ಕೃಪಲಾನಿಯವರಿಂದ 20-6-1954 ರಲ್ಲಿ ಶಂಖುಸ್ಥಾಪನೆಗೊಂಡ ಕಾರ್ಯ 1956ರಲ್ಲಿ ಪೂರ್ಣಗೊಂಡಿದೆ. ಅಕ್ಟೋಬರ್ 2 ಗಾಂಧಿ ಜಯಂತಿಯಂದು ಮಧ್ಯಾಹ್ನ 12 ಗಂಟೆಗೆ ಮಂಟಪದ ಮೇಲ್ಮಟ್ಟದಲ್ಲಿ ಮಾಡಿರುವ ಒಂದು ರಂದ್ರದ ಮೂಲಕ ಸ್ಥಾಪಿಸಲ್ಪಟ್ಟ ಗಾಂಧೀ ಪ್ರತಿಮೆಗೆ ಸೂರ್ಯನ ಕಿರಣ ಬೀಳುತ್ತದೆ.
ಈ ಊರಿನಲ್ಲಿ ಊಟ, ವಸತಿ ಸೌಕರ್ಯ ತುಂಬಾ ಚೆನ್ನಾಗಿದೆ. ಅಂಗಡಿ ಮುಂಗಟ್ಟುಗಳು ಹೇರಳವಾಗಿದೆ. ಪ್ರಕೃತಿ ಮಾತೆಯ ತವರು, ಎತ್ತ ನೋಡಿದರತ್ತತ್ತ ರುದ್ರರಮಣೀಯ ಸಮುದ್ರ ತಾಣ. ಸಾರಿಗೆ ಸೌಕರ್ಯ ಕೂಡಾ ಚೆನ್ನಾಗಿದೆ. ಮನಕೊಪ್ಪುವ ಮನದಣಿಯೆ ಕಾಲಾಡಿಸುತ್ತ ಕಾಲ ಕಳೆಯುವ ನವೋಲ್ಲಾಸದ ಜನರಿಗೆ ಹೇಳಿ ಮಾಡಿಸಿದ ಊರಿದು.
ಪೂರ್ತಿ ಕನ್ಯಾಕುಮಾರಿ ವೀಕ್ಷಣಾ ನಂತರ ಮುಂದಿನ ಭೇಟಿಯತ್ತ ಹೊರಟೆವು.
ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ :
ಕನ್ಯಾಕುಮಾರಿಯಿಂದ ಅರ್ಧ ಕೀ.ಮೀ.ಸಮುದ್ರದ ಮಧ್ಯೆ ಮೂರು ಸಮುದ್ರಗಳ ಸಂಗಮ ಜಾಗದಲ್ಲಿ ಎರಡು ಶಿಲೆಗಳಿವೆ. ಅದರಲ್ಲಿ ಒಂದು ಶಿಲೆ 3 ಎಕರೆಯಷ್ಟು ವಿಶಾಲ ಜಾಗ ಸಮುದ್ರ ಮಟ್ಟದಿಂದ 55 ಅಡಿ ಎತ್ತರವಿದ್ದು “ಶ್ರೀ ಪಾದ ಪಾರೈ” ಎಂದು ಕರೆಯುತ್ತಾರೆ. ಇಲ್ಲಿಗೆ ತಲುಪಲು ಬೋಟಲ್ಲಿ ತೆರಳಬೇಕು.
ಈ ಜಾಗಕ್ಕೆ ಕಾಲಿಟ್ಟ ತಕ್ಷಣ “ವಾವ್!” ಎಂದು ಉಧ್ಗರಿಸದ ಜನರಿಲ್ಲ. ಎತ್ತ ನೋಡಿದರೂ ನೀರೆ ನೀರು. ದ್ವೀಪವಲ್ಲವೆ? ಛಾಯಾ ಗ್ರಾಹಕರು ಹಿಡಿದ ಕ್ಯಾಮರಾ ಬಿಡಲೊಲ್ಲರು. ಸ್ವಾಮಿ ವಿವೇಕಾನಂದರು ಉತ್ತರ ಅಂಚಿನಲ್ಲಿರುವ ತಮ್ಮ ತೀರ್ಥ ಯಾತ್ರೆಯನ್ನು ಆರಂಭಿಸಿ ಮಾರ್ಗದಲ್ಲಿ ಸಿಗುವ ಪುಣ್ಯ ಕ್ಷೇತ್ರ ಸಂದರ್ಶಿಸುತ್ತ ಕೊನೆಗೆ ಕನ್ಯಾಕುಮಾರಿ ತಲುಪಿದರು. ದೇವಿ ದರ್ಶನ ಮಾಡಿ ಈಜುತ್ತ ಈ ಜಾಗಕ್ಕೆ ಬಂದು ಧ್ಯಾನಾಸಕ್ತರಾಗಿ ಕುಳಿತರು.
ನಂತರ 1962ರಲ್ಲಿ ಸ್ವಾಮೀಜಿಯವರ ವಧ೯೦ತಿ ಶತಮಾನೋತ್ಸವ ಇಲ್ಲಿ ನಡೆದು ಅವರ ಹೆಸರಿನಲ್ಲಿ ಸ್ಥಾಯೀಸ್ಮಾರಕವನ್ನು ನಿರ್ಮಿಸಲು ತೀರ್ಮಾನಿಸಿ, ಅಖಿಲ ಭಾರತ ಸಮಿತಿಯನ್ನು ಸ್ಥಾಪಿಸಿ ಕಾರ್ಯದರ್ಶಿಯಾದ ಶ್ರೀ ಏಕನಾಥ ರಾನಡೇ ಮತ್ತು ಪ್ರಸಿದ್ಧ ವಾಸ್ತು ಶಿಲ್ಪಿಯಾದ ಶ್ರೀ ಎಸ್. ಕೆ.ಆಚಾರ್ಯರಿಂದ ರೂಪರೇಶೆ ಚಿತ್ರಿಸಿ 85×38ಅಡಿಗಳ 85ಲಕ್ಷ ರೂ.ಗಳಲ್ಲಿ ನುಣುಪಾದ ಕಪ್ಪು ಕಲ್ಲಿನಲ್ಲಿ ಭವ್ಯ ಮಂಟಪ ನಿರ್ಮಾಣವಾಗಿದೆ. ಪ್ರಧಾನ ಗೋಪುರ 66 ಅಡಿ ಎತ್ತರವಿದೆ. ಪ್ರಧಾನ ದ್ವಾರದಲ್ಲಿ ಅಜಂತಾ ಎಲ್ಲೋರಾದ ಕೆತ್ತನೆಗಳಿವೆ. ದೊಡ್ಡ ಹಾಲಿನ ಮಧ್ಯದಲ್ಲಿ ಸರಿಯಾಗಿ ಗೋಪುರದ ಕೆಳಗೆ ವಿವೇಕಾನಂದರ ಕಂಚಿನ ವಿಗ್ರಹ ನಿಂತ ನಿಲುವು ನೋಡುತ್ತ ನಿಂತರೆ ಮೈ ಮರೆಯುವಂತಿದೆ. ತದೇಕ ಚಿತ್ತದಿಂದ ದಿಟ್ಟ ನಿಲುವಿನ ಮುಖದ ತೇಜಸ್ಸು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. 8.6 ಅಡಿ ಎತ್ತರ 4.6ಅಡಿ ಎತ್ತರದ ವೇದಿಕೆಯ ಮೇಲಿರುವ ಮೂರ್ತಿಯನ್ನು 2-9-1970 ರಂದು ಆಗಿನ ರಾಷ್ಟ್ರಪತಿಗಳಾದ ಶ್ರೀ ವಿ.ವಿ.ಗಿರಿಯವರಿಂದ ಉಧ್ಗಾಟನೆ ನೆರವೇರಿತು.
ಇಲ್ಲಿರುವ ನಿಶ್ಯಬ್ಧವಾದ ಧ್ಯಾನ ಮಂದಿರದಲ್ಲಿ ಪ್ರತಿ ದಿನ ಎರಡೂ ಹೊತ್ತು ಭಜನೆ ನಡೆಯುತ್ತದೆ. ಪುಸ್ತಕ ಮಳಿಗೆಗಳೂ ಇವೆ.
ಇಲ್ಲಿ ನಿರ್ಮಾಣಗೊಂಡ ತಮಿಳು ಕವಿ ಶ್ರೀ ತಿರುವಾಲ್ಲೂರವರ ಅತ್ಯಂತ ದೊಡ್ಡ ಪ್ರತಿಮೆ ಕನ್ಯಾಕುಮಾರಿಯಿಂದಲೆ ಗೋಚರಿಸುತ್ತದೆ.
ಈ ಊರಿನ ಉತ್ತರ ದಿಕ್ಕಿನಲ್ಲಿ ವಿಶ್ವನಾಥ ಸ್ವಾಮಿಯ ಚಿಕ್ಕ ಗುಡಿ, ಚಕ್ರ ತೀರ್ಥವೆಂಬ ಕೆರೆ ಸ್ಮಶಾನ, ಊರಿನ ಮಧ್ಯದಲ್ಲಿ ಸಂತ್ ಫ್ರಾಂಸಿಸ್ ಚರ್ಚ ಕೂಡಾ ಇದೆ. ಕನ್ಯಾಕುಮಾರಿ ಯಾತ್ರಿಕರನ್ನು ಸೆಳೆಯುವುದು ಅಲ್ಲಿಯ ಸುತ್ತುವರಿದ ನೀಲ ಸಮುದ್ರ, ದೇವಾಲಯಗಳು, ಮಹನೀಯರ ಪ್ರತಿಮೆ, ಧ್ಯಾನ ಮಂದಿರ, ಅಲ್ಲಿರುವ ವ್ಯವಸ್ಥೆ, ಸೂರ್ಯಾಸ್ತ, ಸೂರ್ಯೋದಯ ಹೀಗೆ ಅನೇಕ ಕಾರಣಗಳು ಮತ್ತೆ ಮತ್ತೆ ಹೋಗಬೇಕೆನ್ನುವ ಅಸೆ ಹುಟ್ಟಿಸುವುದು ಖಂಡಿತ.
ಮಧ್ಯಾಹ್ನದ ಭೋಜನದ ಸಮಯವಾಗಿತ್ತು ಎಲ್ಲ ಪ್ರದೇಶ ವೀಕ್ಷಿಸಿ ವಾಪಸ್ ಕನ್ಯಾಕುಮಾರಿಗೆ ಬಂದಾಗ. ನಂತರದ ಮುಂದಿನ ಕ್ಷೇತ್ರದತ್ತ ನಮ್ಮ ಪಯಣ ಶುರುವಾಗಿದ್ದು ಮದುರೈನತ್ತ.
ಈ ಬರಹದ ಹಿಂದಿನ ಕಂತು ಇಲ್ಲಿದೆ :
ರಾಮೇಶ್ವರ, ಕನ್ಯಾಕುಮಾರಿ, ಮಧುರೈ- ಭಾಗ 2: http://surahonne.com/?p=15675
(ಮುಂದುವರಿಯುವುದು)
– ಗೀತಾ ಜಿ. ಹೆಗಡೆ
ಕನ್ಯಾಕುಮಾರಿ ಯಾತ್ರೆಯ ಸುಂದರ ಚಿತ್ರಣ ಇದು. ನಾನು ಬಹಳ ಹಿಂದೆ ಕನ್ಯಾಕುಮಾರಿಗೆ ಹೋದ ನೆನಪುಗಳು ಮರುಕಳಿಸಿದುವು 🙂
ಪ್ರವಾಸ ಲೇಖನ ಬಹಳ ಸೊಗಸಾಗಿದೆ