ಬೊಗಸೆಬಿಂಬ

ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?

Share Button

ಬದುಕಿನಲ್ಲಿ ಹಲವಾರು ಸಂದರ್ಭಗಳಲ್ಲಿ ನಾವು ಇತರರನ್ನೇ ಅವಲಂಬಿಸಿರುತ್ತೇವೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾ ಇನ್ನೊಬ್ಬರ ಬಳಿ ಹೇಳಿಕೊಳ್ಳಲು ಕಾತರರಾಗುತ್ತೇವೆ. ಸಮಸ್ಯೆಯನ್ನು ಹಂಚಿಕೊಂಡರೆ ಮನಸ್ಸು ಹಗುರಾಗಬಹುದೆಂಬ ಭ್ರಮೆಯಲ್ಲಿ ಇದ್ದು ಬಿಡುತ್ತೇವೆ. ನಮ್ಮ ಮನಸ್ಸಿನ ಅಭದ್ರತೆ, ಮಾನಸಿಕ ಅಸ್ಥಿರತೆಯನ್ನೇ ಬಂಡವಾಳವಾಗಿರಿಸಿ, ಅದರಿಂದ ಲಾಭ ಪಡೆಯಲು ಕಾದು ಕುಳಿತ ಜನರನ್ನು ನಾವು ಗುರುತಿಸಲು ಅಸಫಲರಾಗುತ್ತೇವೆ. ಆದರೆ ಎಷ್ಟೋ ಸಮಸ್ಯೆಗಳಿಗೆ ನಿಜಕ್ಕೂ ನಮ್ಮಲ್ಲೇ ಪರಿಹಾರಗಳಿವೆ ಎಂಬ ಸತ್ಯವನ್ನು ಅರಿಯದೇ ತೊಳಲಾಡುತ್ತೇವೆ. ಮುಖ್ಯವಾಗಿ ‘ಮನಸ್ಸಿದ್ದರೇ ಮಾರ್ಗವಿದೆ’ ಎಂಬ ನುಡಿಗಟ್ಟಿನಂತೆ ಯಾವುದೇ ಸಮಸ್ಯೆಯನ್ನು ಎದುರಿಸಲು ಅಥವಾ ಬೇಕಾದುದ್ದನ್ನು ಪಡೆಯಲು ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ. ನಮ್ಮ ಆತ್ಮ ಶಕ್ತಿಯು ನಮ್ಮನ್ನು ಕೈ ಹಿಡಿದು ಮುನ್ನಡೆಸಲು ಸಾಧ್ಯ. ನಾವು ಅನೇಕ ಬಾರಿ ಅಂದು ಕೊಳ್ಳುತ್ತೇವೆ, ನಮ್ಮಿಂದ ಏನೂ ಸಾಧ್ಯವಾಗುವುದಿಲ್ಲ.

ಸಣ್ಣ ಸಣ್ಣ ಸಮಸ್ಯೆಗಳು ಎದುರಾದಾಗ ಉಪಾಯ ಕಾಣದೆ ಆಕಾಶವೇ ಕಳಚಿ ಬಿದ್ದಂತೆ ಭಾಸವಾಗುತ್ತದೆ. ಯಾರಾದರೂ ನಮ್ಮ ಯಾತನೆಗೆ ಕಿವಿಯಾಗಲೇಂದೋ, ನೋವು, ನಿರಾಸೆಗಳನ್ನು ಹಂಚಿಕೊಳ್ಳಲು ಒಂದು ಜೀವ ಲಭಿಸುತ್ತದೆಯೋ ಎಂದು ಹಪಹಪಿಸುತ್ತೇವೆ. ತಮ್ಮ ಗೋಳನ್ನು ಇತರರೊಡನೆ ಹಂಚಿಕೊಂಡಾಗ ಏನೋ ಸಮಾಧಾನ, ಹಗುರ, ಶಾಂತಿ ದೊರೆತಂತೆ ಅನಿಸುತ್ತದೆಯಾದರೂ, ಇವೆಲ್ಲಾ ಕ್ಷಣಿಕ ಶಮನವೆಂಬ ಅರಿವಾಗದಿರಬಹುದು. ಒಂದೆಡೆ ಮನಸ್ಸು ತಹಬಂದಿಗೆ ಬಂದಿತ್ತಾದರೂ, ಅವುಗಳ ವಾಸ್ತವಿಕ ಪರಿಣಾಮಗಳು ನಮ್ಮ ದುರಂತಕ್ಕೆ ಕಾರಣವಾಗಬಹುದು. ನಾವು ನಂಬಿಕೆಯಿಟ್ಟು ಸಮಸ್ಯೆಗಳನ್ನು ಹೇಳಿಕೊಂಡರೂ, ಅದು ಮೂರನೆಯವರ ಕಿವಿಗೆ ಬಿದ್ದಾಗ ಹೊಸರೂಪವನ್ನು ಪಡೆದುಕೊಳ್ಳಬಹುದು. ಹಾಗೆ ನೋಡಿದರೆ ಒಂದು ರೀತಿಯ ಅಭದ್ರತೆಯಿಂದ ನಾವು ಬಳಲುವುದು ಸರ್ವೇ ಸಾಮಾನ್ಯ. ದೌಡಾಯಿಸುವ ಮಾನಸಿಕ ತುಮುಲಗಳು, ತಾಕಲಾಟಗಳು, ಭಾವಾನಾತ್ಮಕ ಗೊಂದಲಗಳಿಂದ ಮನಸ್ಸು ಮುಕ್ತಿ ಪಡೆಯಲು ಬಯಸಿದಾಗ ಸಿಕ್ಕ ಗೆಳತಿಯೋ, ನೆರೆಕೆರೆಯ ಪರಿಚಿತರೋ ಎನ್ನುವುದನ್ನು ಲೆಕ್ಕಿಸದೆ, ಖಾಸಗಿ, ವೈಯಕ್ತಿಕ ಬದುಕಿನ ವಿಷಯಗಳನ್ನು ಚರ್ಚಿಸಿ ನಮ್ಮ ಅವನತಿಗೆ ನಾವೇ ಕಾರಣಕರ್ತರಾಗುತ್ತೇವೆ.

ನನ್ನ ಬದುಕಿನಲ್ಲೂ ಬಹಳಷ್ಟು ಸಂಕಷ್ಟಗಳು ನಡೆದು ಹೋಗಿದ್ದವು. ಅನೇಕ ಬಾರಿ ಅಸಮರ್ಪಕ ನಿರ್ಧಾರಗಳಿಂದ ಸೋತು ಹೋಗಿ ಹೈರಾಣಾದ ಸಂದರ್ಭಗಳನ್ನು ಅನುಭವಿಸಿದ್ದೆ. ಅದೆಷ್ಟೋ ಸಲ ಗತಿಸಿ ಹೋದ ಕಹಿ ಘಟನೆಗಳನ್ನು ನೆನೆದು ಪರಿತಪಿಸಿದ್ದೆ. ತಪ್ಪು ಹೆಜ್ಜೆಗಳನ್ನು ಇಟ್ಟಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಎಡವಿದಾಗ, ನಾನು ನಂಬಿದ ಮೌಲ್ಯಗಳೇ ಮುಳುವಾದಾಗ ಬಹಳಷ್ಟು ಪಶ್ಚಾತ್ತಾಪ ಪಟ್ಟಿದ್ದೆ. ದಿನಾಲೂ ನಕರಾತ್ಮಕ ಚಿಂತನೆಗಳಿಂದ ಮನಸ್ಸು ಘಾಸಿಗೊಳಗಾಗಿತ್ತು. ಶಾಂತ ಮನಸ್ಥಿತಿಯನ್ನು ಬಯಸಿ ಧ್ಯಾನ, ಪ್ರಾಣಾಯಾಮ, ಸತ್ಸಂಗದ ಮೊರೆ ಹೋಗಿ ಖಿನ್ನತೆಯಿಂದ ಹೊರಬರಲು ಪ್ರಯತ್ನಿಸಿದ್ದೆ. ನನ್ನ ಬದುಕಿನ ಉದ್ವಿಗ್ನತೆ ನನ್ನನ್ನು ಕುಗ್ಗಿಸುವ ಪರಿಸ್ಥಿತಿಯಲ್ಲಿರುವಾಗ ಆಪತ್ಪಾಂಧವರಂತೆ ನನ್ನ ನೆರವಿಗೆ ಬಂದದ್ದೇ ಕೆಲವೊಂದು ಸ್ವ_ಸಹಾಯ ಪುಸ್ತಕಗಳು. ಅವುಗಳಲ್ಲಿ, “ಪ್ರತಿಯೊಂದು ಅನುಭವವೂ ಹೊಸ ಕಲಿಕೆಯ ದಾರಿ. ಅಸ್ಥಿರ ಮನಸ್ಸನ್ನು ನಿಯಂತ್ರಿಸಲು ಧನಾತ್ಮಕ ದೃಷ್ಟಿಕೋನವೇ ಮುಖ್ಯ” ಎಂದು ಸಾರಿದ ಮಹಾನ್ ಲೇಖಕ ವಿನ್ಸೆಂಟ್ ನಾರ್ಮನ್‌ರವರ “ ದ ಪವರ್ ಓಫ್ ಪೊಸಿಟಿವ್ ಥಿಂಕಿಂಗ್” ಎಂಬ ಪುಸ್ತಕವು ನನ್ನಲ್ಲಿ ಅಗಾಧ ಪರಿಣಾಮವನ್ನು ಬೀರಿತು. ಹಾಗೂ ಸ್ವಾಮಿ ಜಗದಾತ್ಮಾನಂದರು ಬರೆದ “ಬದುಕಲು ಕಲಿಯಿರಿ” ಪುಸ್ತಕವೂ ನನ್ನ ಹೃದಯವನ್ನು ಮುಟ್ಟಿ, ಮುಗಿಲೆತ್ತರದ ಆತ್ಮ ವಿಶ್ವಾಸ ಹಾಗೂ ಅದಮ್ಯ ಉತ್ಸಾಹದಿಂದ ಹಳೆಯದೆನೆಲ್ಲಾ ಮರೆತು ಹೊಸದಾಗಿ ಬದಕು ಮುಂದುವರಿಸಲು ಪ್ರೇರೇಪಿಸಿತು. ನಿಜಕ್ಕೂ ಪುಸ್ತಕಗಳು ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಮೌನ ಸಂಗಾತಿಗಳು. ಇಲ್ಲಿ ಡಾ. ಅಬ್ದುಲ್ ಕಲಾಂರ “ಪುಸ್ತಕಗಳು ಮನುಷ್ಯನ ಜೀವನವನ್ನು ಬದಲಿಸುವ ಅದ್ಭುತ ಸ್ನೇಹಿತರು” ಎಂಬ ನುಡಿಯನ್ನು ನೆನಪಿಸಬೇಕಾಗಿದೆ.

ಒಟ್ಟಿನಲ್ಲಿ, ನಮ್ಮ ಒಡ ಹುಟ್ಟಿದವರು ಅಥವಾ ಕೆಲವೇ ಕೆಲವು ಆತ್ಮೀಯ ಗೆಳೆಯರು ನಮ್ಮ ಸ್ಥಿತಿಯನ್ನು ಕಂಡು ಮರುಕ ಪಟ್ಟರೂ, ಅಥವಾ ಉತ್ತಮ ಸಲಹೆಯನ್ನು ನೀಡಿದರೂ, ಹೆಚ್ಚಿನವರು ಖುಶಿ ಪಡುವವರೇ ಇರುತ್ತಾರೆ. ಈ ನಿಟ್ಟಿನಲ್ಲಿ ಸ್ವ-ಸಹಾಯ ಪುಸ್ತಕಗಳು ಕೌನ್ಸೆಲರ್‌ಗಳಂತೆ ಅನಿಸಿತ್ತು. ಕೆಲವೊಂದು ಕಠಿಣ ಪರಿಸ್ಥಿತಿಯು ಜೀವನದಲ್ಲಿ ಅಧ್ಭುತ ಪಾಠವನ್ನು ಕಲಿಸಿತ್ತು. ನಾನು ಕಂಡುಕೊಂಡ ಪ್ರಮುಖ ಅಂಶವೇನೆಂದರೆ, ನಮ್ಮ ನೋವಿಗೆ ನಾವೇ ಮುಲಾಮು ಆಗುತ್ತಾ, ಗಟ್ಟಿಯಾಗಿದ್ದು, ದೃಢವಾಗಿ ಮುನ್ನಡೆಯುವುದು ಬಹು ಮುಖ್ಯ. ಮಾನಸಿಕವಾಗಿಯೂ, ಭಾವನಾತ್ಮಕವಾಗಿಯೂ ಸ್ವತಂತ್ರರಾಗುವುದು ಅತಿ ಅವಶ್ಯಕ. ಗಾಸಿಪ್ ಎನ್ನುವುದು ಮನುಷ್ಯನ ಮೂಲಭೂತ ಪ್ರವೃತ್ತಿ. ಸಮಾಜದ ಈ ವಾಸ್ತವ ಸತ್ಯವನ್ನು ಅರಿತು ಎಚ್ಚರದಲ್ಲಿರಬೇಕಾದ ಅಗತ್ಯತೆ ಇದೆ. ನಮ್ಮ ದು:ಖಗಳಿಗೆ ಮಿಡಿಯುವ ಮನಸ್ಸನ್ನು ಹುಡುಕುವ ಬದಲು ನಮ್ಮಲ್ಲೇ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆಯನ್ನು ತಿಳಿಯಬೇಕಾಗಿದೆ. ಅದಲ್ಲದೆ ಮಾನಸಿಕ ತಜ್ಞರು ಅಥವಾ ಥೆರಪಿಸ್ಟ್ ಗಳು ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ಮನೋವೈದ್ಯರನ್ನು ಭೇಟಿಯಗುವ ಜನರಿಗೇನೂ ಕೊರತೆಯಿಲ್ಲ. ಹಾಗೂ ಅದು ನಾಚಿಕೆಯ ವಿಷಯವಾಗಿ ಉಳಿದಿಲ್ಲ. ದಾಂಪತ್ಯ ಕಲಹ, ಕೌಟುಂಬಿಕ ಬಿರುಕು, ವೃತ್ತಿಪರ ಒತ್ತಡದ ಬದುಕಿನಲ್ಲಿ ಹೆಚ್ಚೆಚ್ಚು ಜನರು ಇದರ ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಸೌಲಭ್ಯವು ಮಹಾನಗರಗಳಿಗೆ ಸೀಮಿತವಾಗಿರುವುದು ಖೇದಕರ. ಚಿಕ್ಕ ಪಟ್ಟಣಗಳಲ್ಲಿ ಮನೋವೈದ್ಯರನ್ನು ಭೇಟಿಯಾಗಲು ಹಿಂಜರಿಯುತ್ತಾರೆ. ಹೀಗಾಗಿಯೇ ನಮ್ಮ ಸಾಮರ್ಥ್ಯದ ಅರಿವನ್ನು ತಿಳಿದುಕೊಂಡು, ನಮ್ಮ ಚಿಂತನ ಕ್ರಮವನ್ನು ಧನಾತ್ಮಕದೆಡೆಗೆ ಕೊಂಡೊಯ್ಯುವ ಅವಶ್ಯಕತೆ ನಮಗಿದೆ. ಸ್ವಯಂ ಪ್ರೇರಣೆಯಿಂದ, ಸಹಜ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ವಿಷಮ ಪರಿಸ್ಥಿತಿಗಳಲ್ಲಿ ಕುಗ್ಗದೆ, ಖಿನ್ನತೆಗೆ ಜಾರದೆ, ದಿಢೀರ್ ಪರಿಹಾರಕ್ಕಾಗಿ ಇನ್ಯಾರನ್ನೋ ನೆಚ್ಚಿಕೊಳ್ಳುವ ಅನಿವಾರ್ಯತೆಯಿಂದ ಹೊರಬರಬೇಕಾಗಿದೆ. ನಮ್ಮ ಬದುಕಿನ ಸಮಸ್ಯೆಗಳಿಗೆ ಹೊರಗೆಲ್ಲೋ ಪರಿಹಾರ ಹುಡುಕುವ ಬದಲು ಆಂತರಿಕ ಸ್ಥೈರ್ಯವನ್ನು ಹೆಚ್ಚಿಸಿ, ಸಮನ್ವಯ ಪ್ರಜ್ಞೆಯೊಂದಿಗೆ ಬದುಕು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ಯಾತನೆ, ನೋವು, ದು:ಖ, ದುಮ್ಮಾನಗಳಿಗೆ ನಾವೇ ಕಿವಿಯಾಗುವುದು ಸೂಕ್ತವಲ್ಲವೇ?

ಶೈಲಾರಾಣಿ. ಬಿ. ಮಂಗಳೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *