ಬಸವನಹುಳದ ನೆನಪಿನ ನಂ(ಅಂ)ಟು ..
“ಬಸವನ ಹುಳ“ ಯಾರಿಗೆ ಗೊತ್ತಿಲ್ಲ ಹೇಳಿ!
ನನಗೂ ಬಸವನ ಹುಳ(ನಮ್ಮ ಮನೆಭಾಷೆಯಲ್ಲಿ ‘ಹಿಸ್ಕು‘)ಕ್ಕೂ ಅದೇನೋ ಒಂದು ನಂಟು. ಸಣ್ಣವಳಿದ್ದಾಗ ಹೊರಗೆ ಜಡಿಗುಟ್ಟಿ ಮಳೆ ಸುರಿಯುವಾಗ ನಾನು ಓದಲು ಉಪಯೋಗಿಸುತ್ತಿದ್ದ ಕೋಣೆಯ ಗೋಡೆಯಲ್ಲಿ ಅಲ್ಲಲ್ಲಿ ಬಹು ಮೆಲ್ಲನೆ ಸರಿದಾಡುತ್ತಿದ್ದ ಬಸವನ ಹುಳಗಳನ್ನು ಪೊರಕೆ ಕಡ್ಡಿ ಉಪಯೋಗಿಸಿ ಅದಕ್ಕೆ ನೋವಾಗದಂತೆ ಗೋಡೆಯಿಂದ ಬೇರ್ಪಡಿಸಿ ಹೊರಕ್ಕೆ ಸಾಗಿಸುವುದೊಂದು ಮುಗಿಯದ ಕಥೆಯಂತಾಗಿತ್ತು. ಈ ಪ್ರಕ್ರಿಯೆಯಲ್ಲಿ ಹಿಸ್ಕಿಗೆ ಹಿಂಸೆಯಾಗಬಾರದು, ಜೊತೆಗೆ ಅಪ್ಪಿತಪ್ಪಿ ಅದು ನನ್ನ ಚರ್ಮಕ್ಕೆ ತಗುಲದಂತೆ ಕಾಯಬೇಕಿತ್ತು. ಏನಾದರೂ ಅದು ನನ್ನ ಕೈಗೊ ಮೈಗೋ ತಗುಲಿದರೆ ಅದರ ಅಂಟು ವಾಕರಿಕೆ ತರಿಸುವುದಲ್ಲದೆ ಅದನ್ನು ತೊಳೆದು ನಿವಾರಿಸುವುದು ಮಹಾ ಕಷ್ಟದ ಕೆಲಸವಾಗಿ ಪರಿಗಣಿಸಲ್ಪಟ್ಟಿತ್ತು. ತೆಂಗಿನ ಎಣ್ಣೆ ಹಚ್ಚಿದರೂ ಹೋಗದ ಹಿಸ್ಕಿನ ಅಂಟು ಕಡೆಗೆ ತೆಂಗಿನಕಾಯಿಯ ಮೇಲಿನ ಸ್ಕ್ರಬ್ ನಂತಹ ಸಿಪ್ಪೆಯಲ್ಲಿ ಉಜ್ಜಿದಾಗ ಮಾತ್ರ ಹೋಗುತ್ತಿತ್ತು.
ಬಾಳೆಲೆಯಲ್ಲಿ ಉಣ್ಣಲು ಇಷ್ಟಪಡುತ್ತಿದ್ದ ನನಗೆ ಮಳೆಗಾಲದಲ್ಲಿ ಬಾಳೆಲೆಗಳಲ್ಲಿ ಊಟ ಮಾಡಲು ಅದೇನೋ ಹಿಂಜರಿಕೆ. ಬಾಳೆಲೆಯ ಮೇಲೆ ಉದ್ದವಾಗಿ ಒಂದು ಗೆರೆಯಂತೆ ಬಸವನಹುಳ ಹರಿದು ಹೋದ ಹಾದಿ ಗ್ಲಾಸೀ ಆಗಿ ಕಂಡು ಬರುತ್ತಿದ್ದುದೇ ಇದಕ್ಕೆ ಕಾರಣ. ಅದರ ವಾಕರಿಕೆ ತರಿಸುತ್ತಿದ್ದ ಅದರ ಅಂಟು ಊಟದ ಹೊತ್ತಿಗೆ ನೆನಪಾದರಂತೂ ಸಂಕಟವೇ!
ಇನ್ನು, ನಮ್ಮ ಮನೆಯು ಅಡಿಕೆ ತೋಟದ ಮಧ್ಯೆ ಇದ್ದುದಲ್ಲದೆ ಕರಾವಳಿ ಶೈಲಿಯಲ್ಲಿ ಬಹಳವೇ ಗಾಳಿ ಬೆಳಕು ಅಡ್ಡಾಡಲು ಸಾಧ್ಯವಾಗುವಂತಿದ್ದ ದೊಡ್ಡ ಕಿಟಕಿ, ಚಾವಡಿಗಳಿಂದ ಕೂಡಿದ್ದು ಮಳೆಗಾಲದಲ್ಲಂತೂ ಗಾಳಿ ಬೆಳಕುಗಳ ಜೊತೆ ಧಾರಾಳವಾಗಿ ಬಸವನಹುಳಗಳೂ, ಕೆಲಬಾರಿ ದಾರಿತಪ್ಪಿ ಪಾಪದ ಒಂದು ಕಪ್ಪೆಯೂ ಬರುತ್ತಿದ್ದುದುಂಟು.
ಅದೊಂದು ಬಾರಿ ನೆಂಟರ ಮನೆಯಲ್ಲಿ ತಂಗಿದ್ದೆ. ನಮ್ಮೂರಿನ ಸೆಖೆಗೂ, ಬೆಳಗಿನ ಜಾವ ಅದೇಕೋ ಪವರ್ ಆಫ್ ಆಗಿದ್ದಕ್ಕೂ ಸರಿಹೋಗಿ ಮೈಯಿಡೀ ಬೆವೆತು ಮುದ್ದೆಯಾಗಿತ್ತು. ನಿದ್ದೆಗಣ್ಣು, ತಡೆಯಲಾರದ ಸೆಖೆ ಇವೆಲ್ಲದರ ಮಧ್ಯೆ ತಲೆದಿಂಬಿನಾಚೆಗೆ ಕೈ ಚಾಚಿದ್ದೆ. ಕೈಗದೇನೋ ತಂಪಾದ ವಸ್ತು ಸಿಕ್ಕಿದಂತಾಗಿತ್ತು. ನಿದ್ದೆಯ ಅಮಲಿನಲ್ಲಿ ಬೇರೇನೂ ಯೋಚಿಸದೆ ತಂಪಿನ ‘ಅದೇನನ್ನೋ‘ ಕೈಯ್ಯಲ್ಲಿ ತೆಗೆದು ಮುಖಕ್ಕೆಲ್ಲಾ ಸವರಿದ್ದೆ. ಕಣ್ಣಿಗೂ ತಂಪಾದರೆ ಒಳ್ಳೆ ನಿದ್ದೆ ಹತ್ತೀತು ಎಂದು ಭಾವಿಸಿ ಕಣ್ಣು ರೆಪ್ಪೆಗೂ ಹಚ್ಚಿದೆ. ಅರೆ ನಿದ್ದೆ ಕನಸಿನಲ್ಲಿ ತಡೆಯದ ಸೆಖೆಗೆ ಬೇರೆ ಯಾರಾದರೂ ಅಂತಹ ಸಂದರ್ಭದಲ್ಲಿ ಹಾಗೆ ಯೋಚಿಸುವರೋ ತಿಳಿಯದು. ಆದರೆ ನಾನಂತೂ ಈ ವಿಚಿತ್ರ ಕೆಲಸ ಮಾಡಿದ್ದೆ. ಮುಖ, ಕೈಯೆಲ್ಲಾ ಅಂಟತೊಡಗಿದಾಗ ಎಚ್ಚರವಾಗಿತ್ತು! ಬೇರೇನೂ ಅಲ್ಲ, ಅದೂ ಒಂದು ಬಸವನಹುಳವೆಂದು ತಿಳಿದು ಎದ್ದೆನೋ ಬಿದ್ದೆನೋ ಎಂದು ಬಚ್ಚಲುಮನೆಗೆ ಓಡಿದ್ದೆ!
ಇಂತಿರ್ಪ ನಾನು ಬೇರೆಲ್ಲಾದರೂ ಬಸವನಹುಳ ಕಾಣಸಿಕ್ಕಿದರೆ ಒಂದು ಅಂತರ ಕಾಯ್ದುಕೊಳ್ಳುವುದು ಅಭ್ಯಾಸ ಮಾಡಿದ್ದೇನೆ. ಕೆಲ ದಿನಗಳ ಹಿಂದೆ ಮೌರಿಷಿಯಸ್ ಪ್ರಯಾಣ ಹೋಗಿದ್ದಾಗ ಅಲ್ಲಿನ ತೋಟವೊಂದರ ನೆಲದಲ್ಲಿ ಚಿಪ್ಪಿನೊಳಗೆ ಮಲಗಿದ್ದ ಬಸವನ ಹುಳವನ್ನು ನೋಡಿ ಪ್ರತಿಬಾರಿಯಂತೆ ನನ್ನ ಮತ್ತು ಬಸವನ ಹುಳಗಳ ಫ್ಲಾಷ್ ಬ್ಯಾಕ್ ತೆರೆದುಕೊಂಡಿತು. ತಕ್ಷಣ ಈ ಚಿತ್ರ ಕ್ಲಿಕ್ಕಿಸಿದೆ. ಜೊತೆಗೆ, ಯಾರೋ ತಿಳಿಯದೆ ಮೆಟ್ಟಿ ನಿರುಪದ್ರವಿ ಜೀವಿ ಒದ್ದಾಡದಿರಲಿ ಎಂದು ಕಡ್ಡಿಯೊಂದರಲ್ಲಿ ಅದಕ್ಕೆ ನೋವಾಗದಂತೆ ರಸ್ತೆಯಿಂದ ಪಕ್ಕದ ಹುಲ್ಲಿನ ಮೇಲಿನ ಎಲೆಯೊಂದರಲ್ಲಿ ಇಟ್ಟು ಮುಂದಕ್ಕೆ ನಡೆದೆ.
– ಶ್ರುತಿ ಶರ್ಮಾ, ಬೆಂಗಳೂರು
ಹಳ್ಳಿಗಳಲ್ಲಿ ಬಾಲ್ಯ ಕಳೆದವರಿಗೆ ಬಸವನ ಹುಳದ ಕುರಿತ ಕೆಲವು ಕತೆಗಳು ಇದ್ದೇ ಇರುತ್ತವೆ. ಚೆಂದದ ನೆನಪು. ಬರಹವೂ ಚೆನ್ನಾಗಿದೆ.
ನಿಜ. ತುಂಬಾ ಧನ್ಯವಾದಗಳು
ನಿಮ್ಮ ಅನುಭವ ನನಗಂತೂ ಹೊಸದೆನಿಸಿತು. ಬಯಲು ಸೀಮೆಯ ಕಡೆ ಬಸವನ ಹುಳು ಕಡಿಮೆ. ಆದರೆ ನೀವು ಈ ಹುಳು ನಿರುಪದ್ರವಿ ಎಂದಿದ್ದೀರಿ. ರೈತರಿಗೆ ಇದರಿಂದ ತುಂಬಾ ತೊಂದರೆ ಎಂದು ಓದಿದ ನೆನಪಿದೆ..
Nice write up. Keep writing more such articles
Thank you!
I have experienced this too. Very nice article
Thank you
ಒಳ್ಳೆಯ ನೆನಪಿನ ಮೆಲುಕು
ಬಸವನ ಹುಳ ಯಾವುದೋ ಔಷಧಿಗೆ ಹಿಂದಿನವರು ಬಳಸುತ್ತಿದ್ದರು ಎಂದು ಕೇಳಿದ್ದೆ.
Thank you
ಇವು ತೋಟಕ್ಕೆ ಲಗ್ಗೆ ಹಾಕಿ ತೋಟ ಹಾಳು ಮಾಡತ್ತೆ ಅಂತಾರೆ.
ಬಹಳ ಚೆನ್ನಾಗಿದೆ ಬರಹ. ಬಸವನ ಹುಳುವಿನಿಂದ ಅಡಿಕೆ ಬೆಳೆಗಾರರಿಗೆ ಬಹಳಷ್ಟು ತೊಂದರೆಯೂ ಇದೆ . ಅದು ಅಡಿಕೆ ಮರವನ್ನೇರಿ ಅದರ ಹೂವನ್ನೆಲ್ಲ ಅಂದರೆ ಹಿಂಗಾರ ವನ್ನೆಲ್ಲ ತಿಂದು ಮುಗಿಸುತ್ತದೆ . ಈ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚು. ಈ ಸಮಸ್ಯೆಗೆ ನನಗೆ ಗೊತ್ತಿರುವ ಹಾಗೆ ಸರಿಯಾದ ಪರಿಹಾರ ಅಂತ ಇನ್ನೂ ಸಿಕ್ಕಿಲ್ಲ .
ಅಹಾ..ಬಸವನಹುಳ/ಹಿಸ್ಕು ಖಂಡಾಂತರಗಳಲ್ಲಿಯೂ ಇದೆ ಎಂದು ಈಗ ಗೊತ್ತಾಯಿತು….ಚೆಂದದ ಬರಹ..
ಧನ್ಯವಾದ 🙂
“ಅಮ್ಮಾ ಹಿಸ್ಕು” ಎಂದು ಕಿರುಚುತ್ತಿದ್ದ ಬಾಲ್ಯದ ನೆನಪಾಯಿತು. 🙂
haha!! 🙂