ಎಲ್ಲಿ ಹೋದಿರಿ ತಳ್ಳು ಗಾಡಿಗಳೆ.. ?

Share Button
Hema6

ಹೇಮಮಾಲಾ.ಬಿ

ಎರಡು ದಶಕಗಳ ಹಿಂದೆ,  ಮೈಸೂರಿಗೆ ಬಂದ ಹೊಸದರಲ್ಲಿ ವಾಸವಿದ್ದ ಗೋಕುಲಂ ಬಡಾವಣೆಯಲ್ಲಿ ವಾಸವಾಗಿದ್ದೆವು. ಅದುವರೆಗೆ ದೂರದೂರದಲ್ಲಿ ಅಡಿಕೆ ತೋಟಗಳ ಮಧ್ಯೆ ಇರುತ್ತಿದ್ದ ಹೆಂಚಿನ ಒಂಟಿ ಮನೆಗಳನ್ನು ಮಾತ್ರ ನೋಡಿ ಗೊತ್ತಿದ್ದ ನನಗೆ ಬಡಾವಣೆ ಬದುಕು ಹೊಸ ಅನುಭವಗಳನ್ನು ಮೊಗೆಮೊಗೆದು ಕೊಟ್ಟಿತ್ತು.

ಶಾಂತವಾಗಿದ್ದು ಲವಲವಿಕೆಯಿಂದಿದ್ದ ಬಡಾವಣೆಯಲ್ಲಿ ಸಹೃದಯ  ನೆರೆಹೊರೆಯವರೂ ಇದ್ದು ಆರಾಮವಾಗಿದ್ದೆವು. ಬೆಳಗಾಗುತ್ತಿದ್ದಂತೆ ಹಿಂದಿನ ಮನೆ ಬೀದಿಯಲ್ಲಿ ಸೈಕಲ್ ಟ್ರಿಣ್ ಗುಟ್ಟಿದರೆ ಹಾಲಿನವನು ಬಂದ ಎಂದು ಅರ್ಥ. ಪಾತ್ರೆ ರೆಡಿ ಮಾಡಿಕೊಳ್ಳುವಷ್ಟರಲ್ಲಿ ಮನೆ ಮುಂದೆ ಆತ ಬರುತ್ತಿದ್ದ. ಇನ್ನು ಸ್ವಲ್ಪ ಹೊತ್ತಿನಲ್ಲಿ ‘ಮೊಲ್ಲೆ …ಮರ್ಲೇ…ಜಾಜಿ ಹೂವೇ…‘ ಎಂದು ಕೂಗುತ್ತಾ ತನ್ನ ತಲೆಯಲ್ಲಿ ಬಿದಿರಿನ ದೊಡ್ಡ ತಟ್ಟೆಯನ್ನು ಇರಿಸಿಕೊಂಡು ಹೂ ಮಾರುವ ಅಜ್ಜಿಯ ಸರದಿ. ಸೈಕಲ್ ನಲ್ಲಿ ಬರುವ ಪೇಪರ್ ಹಾಕುವ ಹುಡುಗನು  ಪೇಪರ್ ಅನ್ನು ಸುರುಟಿ ಕೊಳವೆಯಂತೆ ಮಾಡಿ, ಕೆಳಗಡೆಯಿಂದಲೇ ನಮ್ಮ ಬಾಲ್ಕನಿಗೆ ಎಸೆಯುತ್ತಿದ್ದ.

Green veg soppu cartಇನ್ನೂ7 ಗಂಟೆ ಆಗುವಷ್ಟರಲ್ಲಿ ‘ ದಂಟೀನ್ ಸೊಪ್ಪ್….ಪಾಲಾಕ್ ಸೊಪ್ಪ್…ಮೆಂತ್ಯ ಸೊಪ್ಪ್ … ” ಎಂದು ರಾಗವಾಗಿ ಹಾಡುತ್ತ ತರಕಾರಿ ಗಾಡಿಯನ್ನು ತಳ್ಳುತ್ತಾ ಬರುವ ಹೆಂಗಸೊಬ್ಬರು. ಹಿಂದಿನ ಬೀದಿಯಲ್ಲಿ ಅವರ ದನಿ ಕೇಳಿಸಿದೊಡನೆ, ನಮ್ಮ ಎರಡು ವರ್ಷದ ಮಗ ಅದನ್ನು ಅನುಕರಿಸಿ ತಾನೂ ‘ಸೊಪ್ಪಿನ  ಹಾಡು’ ಹಾಡುತ್ತಿದ್ದ. ಇದಾದ ಮೇಲೆ ‘ಹಳೆ ಪಾತ್ರೇ….ಹಳೇ ಪೇಪರ್….’ ಎನ್ನುವ ವ್ಯಾಪಾರಿ, ರಂಗೋಲಿ ಪುಡಿ ಮಾರುವವಳು,, ಆಯಾ ಸೀಸನ್ ನಲ್ಲಿ ಕರಬೂಜ, ಸೀಬೆ ಹಣ್ಣು, ಮಾವಿನಹಣ್ಣು, ಕಡಲೇಕಾಯಿ ಮಾರುವವರು  …. ಇವರೂ ತಮ್ಮ ತಳ್ಳು ಗಾಡಿಗಳ ಸಮೇತ  ಪ್ರತ್ಯಕ್ಷವಾಗುತ್ತಿದ್ದರು.  ..

ಆಮೇಲೆ ಬರುವ ತರಕಾರಿಯಣ್ಣ (ಅವರ  ಹೆಸರು ನೆನಪಿಲ್ಲ) ವಿವಿಧ  ತರಕಾರಿಗಳನ್ನು ಹೇರಿದ ತಳ್ಳುಗಾಡಿಯನ್ನು  ರಸ್ತೆಯ ಇಳಿಜಾರಿನಲ್ಲಿ ಜಾರದಂತೆ, ಚಕ್ರಕ್ಕೆ ಕಲ್ಲು ಕೊಟ್ಟು ನಿಲ್ಲಿಸಿ  ‘ ಬದನೇಕಾಯ್ . ..ಬೆಂಡೇಕಾಯ್  ..  ಹೀರೇಕಾಯ್ .. ಅವರೇಕಾಯ್… ಸೌತೆಕಾಯ್…”  ಎನ್ನುವಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಚಿಕ್ಕ ಬುಟ್ಟಿಯನ್ನೋ, ಚೀಲವನ್ನೋ  ಕುಕ್ಕರ್ ಪಾತ್ರೆಯನ್ನೋ ಹಿಡಿದು ಗಾಡಿಯ ಸುತ್ತ ಮುತ್ತ ಜಮಾಯಿಸುತ್ತಿದ್ದರು.

“ಏನಣ್ಣ ನಿನ್ನೆ ಬಂದಿಲ್ಲ… ಮೊನ್ನೆ ಕೊಟ್ಟಿದ್ದ ಅವರೇಕಾಯಿ ಬರೀ ಹುಳ…ಮೂಲಂಗಿ ಚೆನ್ನಾಗಿದೆ…ಸೌತೆಕಾಯಿ ಕಹಿ ಇತ್ತಪ್ಪಾ…ಮಗಳ ಸೀಮಂತ ಆಯ್ತಾ… “ಇತ್ಯಾದಿ ಪ್ರಶಂಸೆ, ನಿಂದನೆ, ಕುಶಲೋಪರಿಗಳ ಜತೆಗೆ ವ್ಯಾಪಾರ ನಡೆಯುತ್ತಿತ್ತು. ಬಾಲ್ಕನಿ  ಮೇಲೆ ಬಟ್ಟೆ ಹರವುತ್ತಿದ್ದ ನನ್ನನ್ನು ನೋಡಿ ‘ಆಂಟಿ ತರಕಾರಿ ಬೇಡ್ವಾ… ಕಾಫಿ ಆಯ್ತಾ….ಪಾಪು ಉಷಾರಾ…..’ಎಂದು ಮಾತಿಗೆಳೆಯುತಿದ್ದ. ನನಗಿಂತ ವಯಸ್ಸಿನಲ್ಲಿ ಬಹಳಷ್ಟು ದೊಡ್ಡವರಾದರಾದ ಆತನಿಗೆ ನಾನು ಹೇಗೆ ‘ಆಂಟಿ’ ಆಗಬಲ್ಲೆ ಅನಿಸುತಿತ್ತು.

VEgetable vendorಈತನಿಗೆ ಊರ ಸಮಾಚಾರ ಎಲ್ಲಾ ಬೇಕು. ಯೋಗಕ್ಷೇಮ ವಿಚಾರಿಸುತ್ತಾ, ನಗುತ್ತಾ ತರಕಾರಿ ವ್ಯಾಪಾರ ನಡೆಯುತಿತ್ತು. “ಬೀನ್ಸ್ ತುಂಬಾ  ಬೆಲೆ……ಟೊಮಾಟೊ ಚೆನ್ನಾಗಿಲ್ಲ… ”  ಅಂತ ಯಾರಾದರೂ ಅಕ್ಷೇಪಿಸಿದರೆ  ಇದು ನಾಟಿ ಬೀನ್ಸ್ ಚೆನಾಗಿರುತ್ತೆ ಅಕ್ಕಾ… ಇದು ನಮ್ ತ್ವಾಟದ್ದೇಯಾ ….ನಾ  ಊಟಿ ಬೀನ್ಸ್ ತರಲ್ಲಾ ಬೇರೆಯವರ ತರಾ…… ಹುಳಿ ಟೊಮಾಟೊ ಬೇರೆ ಇದೆ, ಇದು ಜಾಮೂನ್ ಟೊಮೆಟೊ ..ನಿಮಗ್ಯಾವುದು ಬೇಕು ….ಈರೆಂಗೆರೆ ಬದನೆಕಾಯ್ ನೋಡಿ..ಭಾತ್ ಮಾಡಿದ್ರೆ ಏನು ಚೆನ್ನಾಗಿರ್ತೆ ಅಂತೀರಾ… “ ಎಂದು  ಮಾರುತ್ತರಿಸುತ್ತಿದ್ದ. ತಮಾಷೆ ಏನೆಂದರೆ , ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ವ್ಯಾಪಾರಕ್ಕೆ  ವಿಪರೀತ ಚೌಕಾಶಿ ಮಾಡಿ ನಾಲ್ಕಾಣೆ ಉಳಿಸಿದ ಅಜ್ಜಿಯೊಬ್ಬರು, ಒಳಗಿನಿಂದ ಲೋಟದಲ್ಲಿ ಕಾಫಿ ತಂದು ತರಕಾರಿಯಣ್ಣನಿಗೆ ಕೊಟ್ಟು ‘ಕಾಫಿ ಕುಡಿಯಪ್ಪ…ಬಿಸಿ ಆರೋಗುತ್ತೆ’  ಅಂದು ಧಾರಾಳತನ ಪ್ರದರ್ಶಿಸುತ್ತಾರೆ!

‘ಗಡ್ಡೆ ಕೋಸು ಇದ್ಯಾ’ ಎಂದು ವಿಚಾರಿಸುತ್ತಾರೆ ಇನ್ನೊಬ್ಬರು. ‘ನಿನ್ನೆ ಇತ್ತು ಅಕ್ಕ…….ಈವತ್ತಿಲ್ಲ, ನಾಳೆ ತರ್ತೇನೆ……ಈ ನಡುವೆ ನೀವು ತರಕಾರಿಗೆ ಬರೋದೇ ಇಲ್ಲ್ಲಾ……ಬೀಟ್ ರೂಟ್ ತೊಗೊತೀರಾ…..ಈವತ್ತೇ ಕಿತ್ತಿದ್ದು……ತ್ವಾಟದಿಂದ್ಲೇ ಬಂದೆ……ಹೂಕೋಸು ಹಾಕಿವ್ನಿ…….ಮುಂದಿನ್ವಾರ ತರ್ತೀನಿ..” ಇತ್ಯಾದಿ ಮಾತು ಸಾಗುತ್ತದೆ. ಗಡ್ಡೆ ಕೋಸು  ಕೇಳಿದವರು, ಬೀಟ್ ರೂಟ್ ಕೊಂಡು ವಾಪಸ್ಸಾಗುತ್ತಾರೆ. ಅವರು ತಂದಿರೋ ದುಡ್ಡು  ಸ್ವಲ್ಪ  ಕಡಿಮೆಯಿರುತ್ತದೆ. ‘ಅಯ್ಯೊ ನಾಳೆ ಕೊಡುವಿರಂತೆ……’ ಎಂದು ಇವನೇ ಸಮಜಾಯಿಶಿ ಹೇಳುತ್ತಾನೆ.

ನಮ್ಮ ಮಗ ಚಿಕ್ಕವನಿದ್ದಾಗ ಅವನಿಗೆ ಬೇಯಿಸಿದ ನೇಂದ್ರಬಾಳೆ ಹಣ್ಣನ್ನು ಹೆಚ್ಚಿ ಕೊಟ್ಟರೆ ಇಷ್ಟಪಟ್ಟು ತಿನ್ನುತಿದ್ದ. ಮೈಸೂರಿನಲ್ಲಿ ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ ಕೇರಳದ ‘ನೇಂದ್ರ ಬಾಳೆ’ ಹಣ್ಣು ಸಿಗುತ್ತಿರಲಿಲ್ಲವಾದುದರಿಂದ  ಬೀದಿಯಲ್ಲಿ  ಬಾಳೆ ಹಣ್ಣು ಮಾರುತ್ತಿದ್ದ ಅಜ್ಜ ಒಬ್ಬರನ್ನು ಪರಿಚಯಿಸಿಕೊಂಡು ನಮಗೆ ವಾರಕ್ಕೆ ಒಂದು ಚಿಪ್ಪು ‘ನೇಂದ್ರ ಬಾಳೆ’ ಹಣ್ಣು ತಂದುಕೊಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದೆವು. ಆ ಅಜ್ಜ ತಪ್ಪದೇ ಹಣ್ಣು ತರುತಿದ್ದರು. ಇವನೂ ತನಗೆ ಅ ತಾತ ಬಹಳ ಪರಿಚಯದವರೇನೋ ಎಂಬಂತೆ ಅವರ ಬಳಿ  ನಗುನಗುತ್ತಾ  ತೊದಲು ಮಾತನಾಡುತ್ತಿದ್ದ. ಅಷ್ಟರಲ್ಲಿ ನಾನು ಚಹಾ ಕೊಡುತ್ತಿದ್ದೆ. ಅದನ್ನು ಕುಡಿದು  ‘ಟೀ ಚನ್ನಾಗೈತೆ…ಮೊಗಾ..’ ಎಂದು ಹೇಳಿ ಅಜ್ಜ ಹೊರಡುತ್ತಿದ್ದರು.

veg cart

ಮೈಸೂರಿನ ಕೆಲವು ಬಡಾವಣೆಗಳಲ್ಲಿ ಈ ರೀತಿಯ ವ್ಯಾಪಾರ-ಸಂಸ್ಕೃತಿ ಈಗಲೂ ಇದೆ. ಆದರೆ ಮಾಲ್ ಗಳಲ್ಲಿ, ಗ್ರಾಹಕರಾದ ನಾವೇ ‘ಗಾಡಿ’ಯನ್ನು ತಳ್ಳುತ್ತಾ ನಮಗೆ ಬೇಕಾದುದನ್ನು ಗಾಡಿಗೆ ಹಾಕಿಕೊಳ್ಳುತ್ತೇವೆ.  ಗೃಹಿಣಿಯರ ಶ್ರಮ ಕಡಿಮೆ ಮಾಡಲು ಕತ್ತರಿಸಿದ ಬೀನ್ಸ್, ಸುಲಿದ ಬೆಳ್ಳುಳ್ಳಿ, ಹೆಚ್ಚಿದ ಕ್ಯಾಬೇಜ್ …ಕೂಡಾ ಸಿಗುತ್ತವೆ. ಬೇಕಿದ್ದನ್ನು ಕೊಂಡು ಮಾತಿಲ್ಲದೆ ನಿಗದಿತ ದುಡ್ಡನ್ನು  ಕಾರ್ಡ್ ಸ್ವೈಪ್ ಮಾಡಿ ಅಥವಾ ಕ್ಯಾಷ್ ಕೊಟ್ಟು  ಬಂದರೆ ಕೌಂಟರ್ ನಲ್ಲಿ ಕುಳಿತವನು/ಳು ನಿರ್ಭಾವುಕತೆಯಿಂದ ಥ್ಯಾಂಕ್ಸ್ ಅನ್ನುತ್ತಾರೆ. ಅಲ್ಲಿಗೆ ಮುಗಿಯಿತು ಶಾಪಿಂಗ್.

ಹೊಸ ಪದ್ಧತಿಗಳಿಗೆ ಕೆಲವು ಅನುಕೂಲತೆಗಳು ಇವೆ.   ಆದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ ಅಲ್ಲವೇ? ಎಲ್ಲಿ ಹೋದುವು ತಳ್ಳು ಗಾಡಿಗಳು , ಅವುಗಳ ಒಡೆಯರು, ಅವರ ಮಾತುಗಳು ಮತ್ತು ಗಾರ್ಡನ್ ಫ್ರೆಷ್ ತರಕಾರಿಗಳು ??

 

– ಹೇಮಮಾಲಾ.ಬಿ


(ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬರಹ)

9 Responses

  1. Venu Gopal says:

    nostalgic and they were thr days we enjoyed much

  2. Pushpa Nagathihalli says:

    ಈಗಲೂ ನಮ್ಮಅಪಾರ್ಟಮೆಂಟ್ ಹತ್ತಿರಅದೇ ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ತಂದು ಕೂಗುತ್ತಾನೆ
    ಸೊಪ್ಪಿನ ಮಂಕರಿಯ ಅಜ್ಜಿಯೂ ಕೂಗುಹಾಕುತ್ತಾಳೆ ಭಾನುವಾರವಂತೂ ಹತ್ತುಗಂಟೆಯವರೆಗೂ ಏಳುವುದಿಲ್ಲ ಎಂದು ಶಪತಮಾಡಿ ಮಲಗಿದವರೆಲ್ಲ ಗಾಡಿಯವನ ಕೂಗಿಗೆ ಅಲ್ಲಾಡಿ ಎದ್ದು ಶಪಿಸುತ್ತಾರೆ.ನಾನುವಾಕ್ ಹೋಗುವಾಗ ದೊರೆಕೆರೆಯ ಹತ್ತಿರ ಸೊಪ್ಪಿನ ಗಾಡಿಯವನೊಬ್ಬ ಬೆಂಗೂರಿನ ಎಲ್ಲರೂ ತೊಳೆದ ರಸಭರಿತ ಕೊಳೆಯಲ್ಲಿ ಬೆಳೆದ ನಳನಳಿಸವ ಹಸಿರುಸೊಪ್ಪನ್ನು ಇಟ್ಟ್ಕೊಂಡು ಬನ್ನಿ ಅಕ್ಕಾ ಸೊಪ್ಪು ತೂಂಬಾ ಚೆನ್ನಾಗಿದೆ ಎಂದುವರ್ಣಿಸುತ್ತಾನ ೆಸೊಪ್ಪುೆ ಮುಖ್ಯವೇಹೊರತು ಹಾಕಿದ ಗೊಬ್ಬರ ಮುಖ್ಯವಲ್ಲ ಎಂದು ನಾವೂತೆಗೆದುಕೊಂಡು ಬರುತ್ತೇವೆ. ಒಂದೆರಡು ದಿನಗಳು ಕಾಣದಿದ್ದಲ್ಲಿಏನಕ್ಕಾ ಒಂದು ವಾರದಿಂದ ಕಾಣ್ತಾನೆ ಇಲ್ಲ!ಮತ್ತೆ ವ್ಯಾಪಾರಕ್ಕೆ ಸೆಳೆದು ಕೊಳ್ಳುತ್ತಾನೆ .ಈಗಲೂ ಕುಶಲೋರಿ ಸಂಭಾಷಣೆ ನಡೆಯುತ್ತದೆ.ಇದೆಲ್ಲಕ್ಕಿಂತಲು ಹೇಮಮಾಲಾರವರ ಗಾಡಿ ವ್ಯಾಪಾರ ವರ್ಣನೆ ಚೆನ್ನಾಗಿದೆ.

  3. Shruthi Sharma says:

    Wah…! Too good write up.. Loved reading it.. ಓದಿ ಮತ್ತೆ ರಿವೈಸ್ ಮಾಡಿದೆ.. ತುಂಬಾ ಇಷ್ಟವಾದ ನಿಮ್ಮ ಲೇಖನಗಳಲ್ಲಿ ಒಂದು.. 🙂 🙂

  4. Singappa Kumar Sai says:

    ಇನ್ನು ಸ್ವಲ್ಪ ದಿನ
    ಎಲ್ಲಾ ಮಾಯಾ
    ಮಾಲ್
    ಸಂಸ್ಕೃತಿಯ ಗೀಳಿಗೆ
    ಜನರ ಆದುನಿಕತೆಗೆ
    ಎಲ್ಲಾ ಮಾಯಾ

  5. Sathishms Praya says:

    Thank u madam.By sending these kinds of subjects you keep me Alive & positive.

  6. reshma umesh says:

    ಆಧುನಿಕತೆಯ ಭರಾಟೆಯಲ್ಲಿ, ಹಳೆಯ ದಿನಗಳ ನೆನೆಪು ಮಾತ್ರ ಸೊಗಸು.

  7. Pallavi Bhat says:

    ತರಕಾರಿಗಳೊಂದಿಗೆ ಒಂದಿಷ್ಟು ಸ್ನೇಹ ಸಂಬಂಧಗಳನ್ನು ಹಂಚುತಿತ್ತು ಆ ಗಾಡಿಗಳು. Awesome write up mam 🙂

  8. Shankari Sharma says:

    ನೈಜ ಬರಹ…ತುಂಬಾ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: