“ರೀ… ನಂಗೆ ಈ ಕಲರ್ ಇಷ್ಟ ಇಲ್ಲ ಅಂತ ಗೊತ್ತಿಲ್ವ ನಿಮಗೆ? ಯಾಕ್ರಿ ತಂದ್ರಿ ಈ ಸೀರೆ?”
“ಅಯ್ಯೋ… ನನ್ನ ಸ್ನೇಹಿತನ ಜೊತೆ ಅಂಗಡಿಗೆ ಹೋಗಿದ್ದೆ, ಚೆನ್ನಾಗಿ ಕಾಣ್ತು ತಂದೆ. ನಿನ್ನ ಕೇಳೋಕ್ಕೆ ನೀನೆಲ್ಲಿದ್ದೆ? ಊರಿಗೆ ಹೋಗಿದ್ಯಲ್ಲ…”
“ನಾನು ಬಂದ್ಮೇಲೆ ಹೋಗಿ ತರಬಹುದಿತ್ತಲ್ಲ…?”
“ನೋಡು… ಇಷ್ಟವಾದರೆ ಉಟ್ಕೋ… ಇಲ್ಲವಾದ್ರೆ ಬಿಸಾಕು…”
ಸಿಡುಕಿದ ಅರ್ಜುನ್ ಹೊರಟುಹೋದ.
ದೀಪ್ತಿ ಸೀರೆಯನ್ನು ಮೂಲೆಗೆಸೆದಳು.
ಮೂರು ದಿನವಾಯ್ತು… ಗಂಡ ಹೆಂಡತಿಯರ ನಡುವೆ ಮೌನಗೀತೆ, ಇವಳು ಅಡಿಗೆ ಮಾಡುತ್ತಿದ್ದಳು. ಅವನು ಊಟ ಮಾಡುತ್ತಿದ್ದ. ಆಗೀಗ ಕೇಳುತ್ತಿದ್ದದ್ದು ಟಿವಿ ಸದ್ದು ಮಾತ್ರ.
ಮತ್ತೆರಡು ದಿನಗಳು ಕಳೆದರೂ ಯಾವುದೇ ಬದಲಾವಣೆಯಾಗಲಿಲ್ಲ. ಯಾರೂ ಸೋಲಲಿಲ್ಲ.
ಅಂದು ಬೆಳಿಗ್ಗೆ ಕೊಂಚ ಬೇಗ ಆಫೀಸಿಗೆ ಹೊರಟುಹೋದ ಅರ್ಜುನ್. ತಿಂಡಿ ತಿನ್ನಲು ಬೇಜಾರಾಗಿ ಕೂತಿದ್ದಳು ದೀಪ್ತಿ.
“ಅಮ್ಮಾ…” ಹೊರಗೆ ಯಾರದೋ ಕೂಗು ಕೇಳಿಸಿತು.
ದೀಪ್ತಿ ಎದ್ದು ಹೋಗಲು ಬೇಸರವಾಗಿ ಕೂತೇ ಇದ್ದಳು.
“ಅಮ್ಮ… ಸ್ವಲ್ಪ ಬಾಗಿಲು ತೆಗೀತೀರಾ…?”
ಮತ್ತೆ ಕೇಳಿದ ಧ್ವನಿಯಿಂದಾಗಿ ಬೇಸರದಿಂದಲೇ ಎದ್ದು ಹೋಗಿ ಬಾಗಿಲು ತೆಗೆದಳು.
“ಏನಮ್ಮ? ಏನ್ಬೇಕು ನಿಂಗೆ?”
“ಅಕ್ಕ… ಬೇಜಾರು ಮಾಡ್ಕೊಬೇಡಿ. ತುಂಬ ಕಷ್ಟದ ಬದುಕು ನಮ್ಮದು. ನನ್ನ ಗಂಡ ಸೊಪ್ಪು ಮಾರ‍್ತಾ ಇದ್ದ. ಈಗ ಕಾಲು ಮರ‍್ಕೊಂಡು ಮನೇಲಿ ಕೂತವ್ನೆ…”
“ಅದಕ್ಕೆ ನಾನೇನಮ್ಮ ಮಾಡ್ಬೇಕು…?”
“ಏನಿಲ್ಲಕ್ಕ… ನಾನೇ ಸೊಪ್ಪು ತರ‍್ತಿದ್ದೆ ಮಾರೋಕೆ ಅಂತ. ಒಂದು ಹಸು ನನ್ನ ಅಟ್ಟಿಸಿಕೊಂಡು ಬಂತು. ನಾನು ಗಾಬರಿಯಿಂದ ಓಡಿದೆ… ನಿಮ್ಮನೆ ಮುಂದಿನ ಆ ಖಾಲಿ ಜಾಗದಲ್ಲಿ ಒಂದು ಮುಳ್ಳುಗಿಡದ ಪೊದೆ ಇದೆ ನೋಡಿ ಅದಕ್ಕೆ ಸಿಕ್ಕಿ ಹಾಕಿಕೊಂಡು ಈ ಸೀರೆ ಹರಿದು ಹೋಯ್ತಕ್ಕ, ಪಾಪ, ನನ್ನ ಗಂಡ ಈ ಸೀರೇನ ಯಾರ ಮನೆಯಿಂದ್ಲೋ ಬೇಡಿ ತನ್ಕೊಟ್ಟಿದ್ದ ಅಕ್ಕ, ಯಾವ್ದಾದ್ರೂ ಹಳೇ ಸೀರೆ ಇದ್ರೆ ಕೊಡ್ತೀರಾ? ನಾನು ಪಕ್ಕದೂರಿಗೆ ಬಸ್ಸಿನಲ್ಲಿ ಹೋಗ್ಬೇಕು…”
ದೀಪ್ತಿ ಮರು ಮಾತಾಡದೇ ಒಳಗೆ ಬಂದಳು. ಕೈಲಿ ಒಂದು ಸೀರೆ, ಜೊತೇಲಿ ಹತ್ತು ರೂಪಾಯಿಯ ಎರಡು ನೋಟುಗಳನ್ನು ಹಿಡಿದು ಬಂದು ಆ ಹೆಂಗಸಿನ ಕೈಗಿತ್ತು ಒಳಗೆ ಬಂದಳು.
ಮೂಲೆಯಲ್ಲಿ ಬಿದ್ದಿದ್ದ ಆ ರೇಷ್ಮೆ ಸೀರೆಯನ್ನು ದೀಪ್ತಿಯ ಕೈಗಳು ಪ್ರೀತಿಯಿಂದ ನೇವರಿಸಿದವು.
ಸಂಜೆ ಅರ್ಜುನ್ ಆಫೀಸಿನಿಂದ ಬಂದಾಗ ದೀಪ್ತಿ ಆ ರೇಷ್ಮೆ ಸೀರೆಯುಟ್ಟು ಗೇಟಿನ ಬಳಿ ನಿಂತಿದ್ದಳು.
ಅವಳ ನಗುಮುಖವನ್ನು ಕಂಡ ಅರ್ಜುನನ ಮುಖವೂ ಅರಳಿತು.

ಸವಿತಾ ಪ್ರಭಾಕರ್, ಮೈಸೂರು