ಬೆಳಕು-ಬಳ್ಳಿ

ಕಾವ್ಯ ಭಾಗವತ 58 :  ಪರಶುರಾಮ – 1

Share Button

ನವಮ ಸ್ಕಂದ – ಅಧ್ಯಾಯ – 4
ಪರಶುರಾಮ – 1

ಜಮದಗ್ನಿ, ರೇಣುಕರ ಕಿರಿಯಪುತ್ರ ಪರಶುರಾಮ
ರಜಸ್ತಮೋ ಗುಣವಿಶಿಷ್ಟರೂ ಅಧಾರ್ಮಿಕರೂ ಆಗಿದ್ದ
ದುಷ್ಟಕ್ಷತ್ರಿಯರ ನಾಶಗೊಳಿಸಿದ

ಲೋಕಭೀಕರ ಪರಶುಧಾರೀ ಬ್ರಾಹ್ಮಣ
ಪರಶುರಾಮನ ಕ್ಷತ್ರಿಯ ಕ್ರೋಧಕೆ
ಮೂಲಕಾರಣ ಕಾರ್ತವೀರ್ಯಾರ್ಜುನ

ದತ್ತಾತ್ರೇಯ ಸ್ವಾಮಿಯನ್ನಾರಾಧಿಸಿ
ಸಾವಿರ ತೋಳುಗಳು, ಅತಿಶಯ ಬುದ್ಧಿಬಲ
ಅಷ್ಟೈಶ್ವರ್ಯ ಪಡೆದು ಕೊಬ್ಬಿದ ಕಾರ್ತವೀರ್ಯಾರ್ಜುನ
ರಾಕ್ಷಸರಾಜ, ಮಾಹಾಪರಾಕ್ರಮಿ ರಾವಣನ ಸೆರೆಹಿಡಿದು
ಮತ್ತಷ್ಟು ಕೊಬ್ಬಿದನು

ಇಂತಹ ವೀರ ಒಮ್ಮೆ ಮಾರ್ಗಾಂತರವಾಗಿ
ಪರಿವಾರದೊಡಗೂಡಿ ಜಮದಗ್ನಿ ಆಶ್ರಮಕೆ ಬಂದಾಗ
ರಾಜನಾಗಮನಕೆ ಸಂತಸದಿ ಸತ್ಕರಿಸಲು
ಸ್ವರ್ಗಲೋಕದ ಕಾಮಧೇನುವ ತರಿಸಿ
ಅದರ ಫಲದಿಂ ರಾಜಪರಿವಾರವನ್ನೆಲ್ಲ
ಮನದಣಿಯ ಸತ್ಕರಿಸೆ
ತನಗಿಂತಲೂ ಐಶ್ವರ್ಯ, ಸಾಮರ್ಥ್ಯಗಳ
ಪಡೆದ ಜಮದಗ್ನಿಯ ಬಗ್ಗೆ ಅಸೂಯೆ ಪಟ್ಟು
ಸ್ವರ್ಗದಿಂ ಆಶ್ರಮಕೆ ಬಂದಿರ್ಪ ಕಾಮಧೇನುವ
ತನಗರ್ಪಿಸಬೇಕೆಂಬ ಕೋರಿಕೆಯ ಒಪ್ಪದಿರೆ
ದುಷ್ಟ ಕಾರ್ತವೀರ್ಯಾರ್ಜುನ,
ಕಾಮಧೇನು ಮತ್ತದರ ಕರುವನ್ನು
ಬಲವಂತದಿಂ ತನ್ನ ಮಾಹಿಷ್ಮತಿ ರಾಜಧಾನಿಗೆ
ಎಳೆದೊಯ್ದ ಕ್ರಿಯೆಯಿಂ ಸಿಟ್ಟಿಗೆದ್ದ
ಜಮದಗ್ನಿ ಪುತ್ರ ಪರಶುರಾಮ
ಮಾಹಾಕ್ರೋಧದಿಂ
ಗಜರಾಜನ ಬೆನ್ನೆಟ್ಟಿದ ಸಿಂಹದಂತೆ
ಏಕಾಂಗಿಯಾಗಿ ತನ್ನ ಗಂಡುಗೊಡಲಿಯ ಪ್ರಹಾರದಿಂ
ಐನೂರು ಬಾಹುಗಳ ಕಾರ್ತವೀರ್ಯಾಜುನಂ
ಮತ್ತವನ ಸೈನ್ಯವ ಸೋಲಿಸಿ
ಕಾರ್ತವೀರ್ಯಾಜುನನ ರುಂಡವ ಉರುಳಿಸಿ
ಕಾಮಧೇನುವ ಕರೆತಂದ ಕಾರ್ಯಕೆ
ಮಗನ ಮೆಚ್ಚಿದರೂ, ಬ್ರಾಹ್ಮಣಗೆ
ಮಾರ್ದಾಭಿಷಕ್ತನಾದ ರಾಜನ ವಧೆ ಯುಕ್ತವಲ್ಲವೆಂದೂ
ಪಟ್ಟಾಭಿಷಕ್ತ ರಾಜ ದೇವತಾಸ್ವರೂಪನೂ
ಅವನ ವಧೆ ಮಹಾಪಾಪ ಸಾಧಕವೆಂದೂ
ಪರಿಹಾರಾರ್ಥದಿಂ ತೀರ್ಥಯಾತ್ರೆಗೆ
ಆಜ್ಞಾಪಿಸಿದ ಪಿತನ ನುಡಿಯಂತೆ
ತೀರ್ಥಕ್ಷೇತ್ರ ಯಾತ್ರಗೈದ ಪರಶುರಾಮ

(ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : ಕಾವ್ಯ ಭಾಗವತ 57 : ಶ್ರೀರಾಮ ಕಥಾ – 3

-ಎಂ. ಆರ್.‌ ಆನಂದ, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *