(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅಂದು ರಾತ್ರಿ ಶ್ರೀನಿವಾಸ್‌ರಾವ್ ಕುಟುಂಬ ದುಬೈಗೆ ಪ್ರಯಾಣ ಬೆಳೆಸಿತು.
ಮೊದಲನೆಯ ವಿಮಾನ ಪ್ರಯಾಣ ಎಲ್ಲರಿಗೂ ಒಂದು ತರಹ ರೋಮಾಂಚನ! ವಿಮಾನದ ಒಳಗಿನ ಸೀಟುಗಳು, ಗಗನಸಖಿಯರ ಓಡಾಟ ಅವರ ಮಾತು-ಕತೆ ಎಲ್ಲವನ್ನೂ ಬೆರಗಿನಿಂದ ನೋಡಿದರು. ನೀಲಾ ಮೊದಲೇ ಯಾವ ರೀತಿ ಲಗೇಜ್ ಪ್ಯಾಕ್ ಮಾಡಬೇಕೆಂದು ತಿಳಿಸಿದ್ದಳು. ಮಧುಕರ್ ಜೊತೆಯಲ್ಲಿದ್ದುದರಿಂದ ಯಾವ ತೊಂದರೆಯೂ ಆಗಲಿಲ್ಲ.
ನೀಲಾ-ಶ್ರೀಪತಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅವರ ಮನೆ ತುಂಬಾ ದೊಡ್ಡದಿತ್ತು. ಮನೆಯಲ್ಲಿ ಅಡಿಗೆಯವರು, ಆಳುಕಾಳುಗಳಿದ್ದರು. ಮಹಡಿಗೆ ಹೋಗಲು ಲಿಫ್ಟ್ ಇತ್ತು. ಎರಡು ದೊಡ್ಡ ರೂಮುಗಳು ಅವರಿಗಾಗಿ ಕಾಯುತ್ತಿದ್ದವು. ನೀಲಾಳ ಮಗಳು ತುಂಬಾ ಮುದ್ದಾಗಿದ್ದಳು. ತುಂಬಾ ಸರಳವಾದ ವ್ಯಕ್ತಿ. ಮದುವೆಗೆ ನಾಲ್ಕು ದಿನಗಳಿದ್ದವು.
“ಆಂಟಿ ಈ ದಿನ ನಾವು ಶಾಪಿಂಗ್ ಮಾಡ್ತಿದ್ದೇವೆ. ನೀವು ನನ್ನ ಜೊತೆ ಬರಬೇಕು….”
“ಶಾಪಿಂಗ್‌ಗಾ?”
“ಹೌದು. ಅಮ್ಮ ನಿಮಗೇನೂ ತೆಗೆದುಕೊಂಡಿಲ್ಲ. ಅವರು ತುಂಬಾ ಬ್ಯುಸಿ. ಅದಕ್ಕೆ ನಾನೇ ಕರೆದುಕೊಂಡು ಹೋಗ್ತೀನಿ.”
ದೊಡ್ಡ ಬಟ್ಟೆ ಅಂಗಡಿಗೆ ಕರೆದೊಯ್ದು ಶಕುಂತಲಾಗೆ 4 ರೇಷ್ಮೆ ಸೀರೆಗಳು, ರಾವ್‌ಗೆ ಪಂಚೆ-ಶರ್ಟು, ಒಂದು ಜೊತೆ ಪ್ಯಾಂಟ್-ಶರ್ಟು, ಮಕ್ಕಳಿಗೆ ಡ್ರೆಸ್‌ಗಳನ್ನು ತೆಗೆದಳು.
“ಇದೆಲ್ಲಾ ಯಾಕಮ್ಮ?”
“ನೀವು ನಮ್ಮಮ್ಮನ ಅಣ್ಣ-ಅತ್ತಿಗೆ. ನಿಮಗೆ ಕೊಡಿಸದೆ ಇನ್ಯಾರಿಗೆ ಕೊಡಿಸಲಿ?”
ರಾವ್ ದಂಪತಿಗಳಿಗೆ ಅವಳ ಮಾತು ಕೇಳಿ ಹೃದಯ ತುಂಬಿ ಬಂತು.
ಮರುದಿನ ಬೆಳಿಗ್ಗೆ ಅವರು ತಿಂಡಿ ತಿನ್ನುತ್ತಿದ್ದಾಗ ನೀಲಾಳ ಆತ್ಮೀಯ ಗೆಳತಿ ರಜನಿ ಅವಳ ಗಂಡ ದಿನಕರ್ ಬಂದರು.
“ನೀವಿಬ್ಬರು ಇವತ್ತು ಇವರ ಜೊತೆ ಮಿರಾಕಲ್ ಪಾರ್ಕ್ಗೆ ಹೋಗಿಬನ್ನಿ. ದುಬೈಗೆ ಬಂದಿದ್ದಕ್ಕೆ ಒಂದೆರಡು ಜಾಗಗಳನ್ನಾದರೂ ನೀವು ನೋಡಬೇಕು. ಇನ್ನೊಂದು ಸಲ ನಾನು ಫ್ರೀಯಾಗಿದ್ದಾಗ ಬನ್ನಿ. ಎಲ್ಲಾ ತೋರಿಸ್ತೀನಿ.”
“ನಿನ್ನ ಪ್ರೀತಿ, ವಿಶ್ವಾಸಾನೇ ಸಾಕು ನೀಲ. ಮದುವೆ ಗಲಾಟೇಲಿ ಇದನ್ನೆಲ್ಲಾ ಯಾಕೆ ಹಚ್ಚಿಕೊಳ್ತಾ ಇದ್ದೀಯ?” ರಾವ್ ಕೇಳಿದರು.
“ನಾನು ಈ ದಿನ ಇಷ್ಟು ಸುಖವಾಗಿರುವುದಕ್ಕೆ ನೀವೇ ಕಾರಣ. ನಿಮಗೆ ಎಷ್ಟು ಮಾಡಿದರೂ ಕಡಿಮೆ ಅನ್ನಿಸತ್ತೆ.”
ತಿಂಡಿ ತಿಂದು ರಾವ್ ಕುಟುಂಬ ಕಾರು ಹತ್ತಿದರು. ಅಷ್ಟು ದೊಡ್ಡ ಕಾರನ್ನು ಅವರು ನೋಡೇ ಇರಲಿಲ್ಲ. ಕಾರು ಹೋಗುವಾಗ ಅಕ್ಕಪಕ್ಕದ ದೃಶ್ಯಗಳತ್ತ ಬೆರಗಿನಿಂದ ಕಣ್ಣು ಹಾಯಿಸಿದರು. ರಜನಿಯಿಂದ ಅವರಿಗೆ ಸಾಕಷ್ಟು ವಿಷಯಗಳು ತಿಳಿದವು. ರಜನಿ ಅವಳ ಗಂಡ ಇಬ್ಬರೂ ನೀಲಾಳ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದರು. ನೀಲಾ ಮದುವೆಯ ನಂತರ ಕಂಪನಿಯನ್ನು ಮಗಳು ಅಳಿಯನಿಗೆ ಕೊಟ್ಟು, ಬೆಂಗಳೂರಿನಲ್ಲಿ ಮಗನಿಗೆ ಹೊಸ ಕಂಪನಿ ಆರಂಭಿಸಬೇಕೆಂದಿದ್ದಳು. ಅನಿಕೇತ್ ತಾಯಿಗೆ ಸ್ಪಷ್ಟವಾಗಿ ಹೇಳಿದ್ದ. “ನಾನು, ಅಂಜಲಿ ಗಂಡನ ಜೊತೆ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಅಮ್ಮ. ನಾನು ಬೆಂಗಳೂರಿನಲ್ಲಿ ಸೆಟ್ಲ್ ಆಗ್ತೀನಿ. ನೀವು ನನಗೇಂತ ಬೇರೆ ಕಂಪನಿ ಆರಂಭಿಸುವ ಅವಶ್ಯಕತೆಯಿಲ್ಲ. ನಾನು ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಳ್ತೀನಿ.
“ಹಾಗೆ ಮಾಡು. ನಾವೂ ಇಂಡಿಯಾದಲ್ಲೇ ಸೆಟ್ಲ್ ಆಗಬೇಕೂಂತ ಇದ್ದೀನಿ. ನಮಗೂ ನಮ್ಮ ಜನ, ನಮ್ಮ ಊರೇ ಹೆಚ್ಚು ಪ್ರಿಯ.”
“ನೀಲಾನ ತಂದೆ-ತಾಯಿ, ಅತ್ತೆ-ಮಾವ ಎಲ್ಲರೂ ಬರ‍್ತಿರ‍್ತಾರಾ?”
“ಹುಂ. ವರ್ಷಕ್ಕೆ ಎರಡುಸಲವಾದರೂ ಬರ‍್ತಾರೆ. ನೀಲಾಳ ಅಣ್ಣ ಅವರ ಕೊನೇ ಮಗಳನ್ನು ಅನಿಕೇತ್‌ಗೆ ಕೊಡಲು ಸಿದ್ಧರಿದ್ದಾರೆ. ಆದರೆ ಅನಿಕೇತ್ ಒಪ್ಪುತ್ತಿಲ್ಲ.”
ಮಿರಾಕಲ್ ಗಾರ್ಡನ್ ನೋಡಿ ರಾವ್ ಕುಟುಂಬ ಬೆರಗಾಗಿತು. ಎಷ್ಟು ವಿಶಾಲವಾದ ತೋಟ! ಎಷ್ಟು ರೀತಿಯ ಸಸ್ಯಗಳು, ಹೂವುಗಳು! ನಡೆದಷ್ಟು ಸವೆಯದ ಹಾದಿ………
“ಶಕ್ಕು, ನಮ್ಮ ವರು ನೋಡಿದ್ದಿದ್ರೆ ಎಷ್ಟು ಸಂತೋಷಪಡ್ತಿದ್ದಳೋ ಏನೋ? ನಾವು ಇದನ್ನೆಲ್ಲಾ ನೋಡಲು ಅರ್ಹರಾ ಅನ್ನಿಸ್ತಿದೆ. ನೀಲಾ-ಶ್ರೀಪತಿ ಋಣ ತೀರಿಸಕ್ಕಾಗಲ್ಲ.”
“ಹೌದೂರಿ. ಅವರು ನಮಗೋಸ್ಕರ ತುಂಬಾ ತೊಂದರೆ ತೆಗೆದುಕೊಳ್ತಿದ್ದಾರೆ…..”
ಗಾರ್ಡನ್ ನೋಡಿದ ನಂತರ ಹತ್ತಿರದ ಉಡುಪಿಯ ಹೋಟೆಲ್ ಒಂದರಲ್ಲಿ ಊಟ ಮಾಡಿದರು.
“ಇಲ್ಲಿ ಒಬ್ಬರು ಬೆಂಗಳೂರಿನವರಿದ್ದಾರೆ. ಅವರ ಮನೆಯವರು ನಮಗೆಲ್ಲಾ ತುಂಬಾ ಪರಿಚಿತರು. ಅವರ ಮನೆ ಕಾಂಪೌಂಡ್ನಲ್ಲಿ ಗಣಪತಿ ದೇವಾಲಯವಿದೆ ಹೋಗೋಣವಾ?”
“ಹೋಗೋಣ. ಆದರೆ ಮನೆ ಒಳಗೆ ಹೋಗಿ ಅವರಿಗೆ ತೊಂದರೆ ಕೊಡೋದು ಬೇಡ……”
“ಇಲ್ಲ, ಅಲ್ಲೇ ಅರ್ಚಕರಿದ್ದಾರೆ. ಅವರು ಪೂಜೆ ಮಾಡಿಕೊಡ್ತಾರೆ.”
ಅವರು ದೇವಸ್ಥಾನಕ್ಕೆ ಹೋಗಿ ಮನೆಗೆ ಬಂದಾಗ ಆರು ಗಂಟೆಯಾಗಿತ್ತು. ನೀಲಾ ಕೆಲವು ಹೆಂಗಸರ ಜೊತೆ ಮಾತನಾಡುತ್ತಾ ಕುಳಿತಿದ್ದಳು.
“ಇವರೆಲ್ಲಾ ನನ್ನ ಫ್ರೆಂಡ್ಸ್. ನಿಮಗೆ ಪರಿಚಯ ಮಾಡಿಕೊಡಲು ಕಾದಿದ್ದೆ.”
ಅಷ್ಟರಲ್ಲಿ ಅಂಜಲಿ ಬಂದು ಶಕುಂತಲಳನ್ನು ತಬ್ಬಿಕೊಂಡು ಹೇಳಿದಳು.
“ಅಮ್ಮ, ಆಂಟಿ ಅಂಕಲ್ಗೆ ಆಯಾಸವಾಗಿರಲ್ವಾ? ಪರಿಚಯ ಮಾಡಿ ಕಳಿಸಿಬಿಡು………”
“ನಂಗೊತ್ತಿಲ್ಲವೇನೆ? ನಿನಗೆ ಮಾತ್ರ ನಿಮ್ಮ ಆಂಟಿ, ಅಂಕಲ್ ಮೇಲೆ ಪ್ರೀತಿ ಇರೋದಾ?”
ಶಕುಂತಲಾ ಅವರ ಜೊತೆ ಅಲ್ಲೇ ಮಾತನಾಡುತ್ತಾ ಕುಳಿತರು. ಅವರೆಲ್ಲರಿಗೂ ಕನ್ನಡ ಗೊತ್ತಿದ್ದರಿಂದ ಅವರಿಗೆ ಬೇಜಾರಾಗಲಿಲ್ಲ.
ಮರುದಿನ ಅವರು ದುಬೈ ಬುಜ್ ಖಲೀಫಾ, ದುಬೈ ವಾಲ್, ಮ್ಯೂಸಿಕಲ್ ಫೌಂಟನ್ ನೋಡಿ ಬಂದರು. ಅವರು ಮನೆಗೆ ಬರುವ ವೇಳೆಗೆ ಅನಿಕೇತ್ ಬಂದಿದ್ದ. ತುಂಬಾ ಆತ್ಮೀಯತೆಯಿಂದ ಮಾತನಾಡಿಸಿದ.
“ಆಂಟಿ, ನೀವು ಮಾಡಿಕೊಡ್ತಿದ್ದ ರೊಟ್ಟೀನ್ನ ಈಗಲೂ ನೆನಪುಮಾಡಿಕೊಳ್ತೀನಿ. ವರು ಬರಲಿಲ್ವಾ?”
“ನಿನಗೆ ವರು ನೆನಪಿದ್ದಾಳಾ?”
“ನೆನಪಿಲ್ಲದೆ ಏನು? ಜಗಳವಾಡಿದ್ರೆ ಕೈಕಚ್ಚಿ ಓಡಿ ಹೋಗ್ತಿದ್ದಳು. ಅದೆಷ್ಟು ಸಲ ಕೈಕಚ್ಚಿದ್ದಾಳೋ ಏನೋ? ಈಗಲೂ ಜಗಳ ಆಡ್ತಾಳಾ?”
“ಇಲ್ಲಪ್ಪ. ನಮ್ಮನೆಯಲ್ಲಿ ಅವಳಿಗೆ ತುಂಬಾ ತಾಳ್ಮೆ. ಆದರೆ ನ್ಯಾಯಕ್ಕೆ ಸಪೋರ್ಟ್ ಮಾಡುವಾಗ ಜಗಳವಾಡ್ತಾಳೆ.”
“ವೆರಿಗುಡ್. ಅವಳು ಮದುವೆಗೆ ಬರ‍್ತಾಳೆ ತಾನೆ?”
“ಇಲ್ಲಪ್ಪ. ಅವಳೀಗ ಗಂಗೋತ್ರಿಯಲ್ಲಿ ಇಂಗ್ಲೀಷ್ ಎಂ.ಎ. ಮಾಡ್ತಿದ್ದಾಳೆ. ರಜ ಸಿಗೋದು ಕಷ್ಟ.”
“ಹೋಗಲಿ ಬಿಡಿ. ನಾನೇ ಬೆಂಗಳೂರಿಗೆ ಬಂದಾಗ ಯಾವಾಗಲಾದರೂ ಅವಳನ್ನು ಭೇಟಿ ಮಾಡ್ತೀನಿ.”
ಮರುದಿನ ನೀಲಾಳ ತವರಿನವರು, ಶ್ರೀಪತಿ ಕಡೆಯವರು ಆಗಮಿಸಿದರು. ಮದುವೆ ತಯಾರಿಗೆ ತಮ್ಮನ್ನು ಕರೆಯಲಿಲ್ಲವೆಂದು ಮುಖ ಊದಿಸಿಕೊಂಡಿದ್ದರು.
ಆದರೆ ನೀಲಾಳಾಗಲಿ, ಶ್ರೀಪತಿಯಾಗಲಿ ಅದನ್ನು ಗಮನಿಸಿದರೂ ಗಮನಿಸದವರಂತಿದ್ದರು. ಪ್ರತಿಯೊಂದು ಶಾಸ್ತ್ರವೂ ರಾವ್ ಹಾಗೂ ಶಕುಂತಲಾ ದಂಪತಿಗಳ ನೇತೃತ್ವದಲ್ಲಿ ನಡೆಯಿತು. ಮದುವೆಗೆ ಜನವೋ ಜನ! ಶಕುಂತಲಾ ಕುಟುಂಬಕ್ಕೆ ತುಂಬಾ ಖುಷಿಯಾಗಿತ್ತು. ಮದುವೆಯ ದಿನ ವರು ಅಂಜಲಿಗೆ ಮೆಸೇಜ್ ಮಾಡಿ ವಿಷ್ ಮಾಡಿದಳು.
“ಆಂಟಿ, ವರೂಗೆ ಫೋಟೋ ಕಳಿಸಕ್ಕೆ ಹೇಳಿ. ನಮಗೆಲ್ಲಾ ಅವಳನ್ನು ನೋಡಲು ತುಂಬಾ ಕುತೂಹಲವಿದೆ.”
ಅಮ್ಮನ ಬಲವಂತಕ್ಕೆ ವರು ಫೋಟೋ ಕಳುಹಿಸಿದಳು. ನಸು ಗುಲಾಬಿ ಬಣ್ಣದ ಪ್ರಿಂಟೆಡ್ ಚೂಡಿದಾರ್ ಹಾಕಿ ಅವಳು ತನ್ನ ಕೂದಲು ಹಾರಾಡಲು ಬಿಟ್ಟಿದ್ದಳು. ಹಣೆಯಲ್ಲಿ ಕೆಂಪು ಬಿಂದಿ ಕಂಗೊಳಿಸುತ್ತಿತ್ತು. ಅರೆ ಬಿರಿದಿದ್ದ ತುಟಿಗಳು ಅವಳ ಅಂದ ಹೆಚ್ಚಿಸಿತ್ತು.
“ಬ್ಯೂಟಿಫುಲ್ ಆಂಟಿ. ವರು ತುಂಬಾ… ಮುದ್ದಾಗಿದ್ದಾಳೆ” ಎನ್ನುತ್ತಾ ತಾಯಿಗೆ, ತಮ್ಮನಿಗೆ ವರು ಫೋಟೋ ತೋರಿಸಿದಳು.
“ಆಂಟಿ ಇದೇನು ಇಷ್ಟು ಕಾಮ್ ಆಗಿದ್ದಾಳೆ? ನಿಜವಾಗಲೂ ಜಗಳವಾಡುವುದನ್ನು ಬಿಟ್ಟುಬಿಟ್ಟಿದ್ದಾಳಾ?”
“ಅವಳು ಕರಾಟೆಕಿಂಗ್ ಅಂದ್ಕೊಂಡಿದ್ದೀಯಾ? ಜಗಳವಾಡುವ ಫೋಸ್ನಲ್ಲಿ ಫೋಟೋ ತೆಗೆಸಿಕೊಳ್ಳಕ್ಕೆ?” ಅಂಜಲಿ ಹಾಸ್ಯ ಮಾಡಿದಳು.
ಧಾರೆ ಸಮಯದಲ್ಲಿ ಶಕುಂತಲಾಗೆ ತಾವು ತಂದ ಉಡುಗೊರೆ ಕೊಡಲಾಗಲಿಲ್ಲ. ಸಾಯಂಕಾಲ ರಿಸೆಪ್ಷನ್ ಇತ್ತು. ಊಟ ಮಾಡಿ ರೆಸ್ಟ್ ತೆಗೆದುಕೊಳ್ಳುತ್ತಿರುವಾಗ ಶಕುಂತಲಾ ಗಂಡನಿಗೆ ಹೇಳಿದರು. “ನಾನು ನೀಲಾಗೆ ಸೀರೆ, ಶ್ರೀಪತಿಗೆ ಜರಿಪಂಚೆ, ಅಂಜಲಿಗೆ ಅರಿಶಿಣ-ಕುಂಕುಮದ ಬಟ್ಟಲು ತಂದಿದ್ದೆ. ಈಗ ಈ ಉಡುಗೊರೆ ಕೊಡಲು ನಾಚಿಕೆಯಾಗತ್ತೆ……..”
“ಈ ಉಡುಗೊರೆ ತರಲು ನಿನ್ನ ಹತ್ತಿರ ದುಡ್ಡೆಲ್ಲಿತ್ತು?”
“ನಮ್ಮಮ್ಮ ಮದುವೇಲಿ ಕೊಟ್ಟಿದ್ರಲ್ಲಾ ಬೆಳ್ಳಿತಟ್ಟೆ ಅದನ್ನು ಮಾರಿ ಈ ಉಡುಗೊರೆ ತಂದಿದ್ದೆ……”
ಅಷ್ಟರಲ್ಲಿ ನೀಲಾ ಅಲ್ಲಿಗೆ ಬಂದರು.
“ಅತ್ತಿಗೆ, ಅಂಜಲಿ ರಿಸೆಪ್ಷನ್‌ಗೆ ಘಾಘ್ರ ಹಾಕಿಕೊಳ್ಳುತ್ತಾಳಂತೆ. ಅವರತ್ತೆ ಸೀರೆ ಉಡು ಅಂತಿದ್ದಾರೆ. ಏನು ಮಾಡಲಿ? ನೀವು ಅಂಜಲಿಗೆ ಹೇಳ್ತೀರಾ?”
“ಆಗಲಿ, ನಾನು ಅಂಜಲಿ ಹತ್ರ ಮಾತಾಡ್ತೀನಿ. ನೀನು ಟೆನ್ಷನ್ ಮಾಡಿಕೊಳ್ಳಬೇಡ.”
ಅವರು ಅಂಜಲಿಯಿದ್ದ ರೂಮ್‌ಗೆ ಹೋದರು.
“ಅಂಜಲಿ……”
“ಆಂಟಿ ನಾನು……..”
“ಬಾ ಇಲ್ಲಿ. ಇದುವರೆಗೂ ಯಾವ ಅಡೆತಡೆಯೂ ಇಲ್ಲದೆ ಮದುವೆ ನಡೆದಿದೆ. ಎಲ್ಲರೂ ಖುಷಿಖುಷಿಯಾಗಿದ್ದಾರೆ. ಈಗ ಯಾಕಮ್ಮ ಬೇಜಾರು ಮಾಡಬೇಕು?”
“ನನಗೆ ಘಾಘ್ರಾ ಹಾಕಿಕೊಳ್ಳಕ್ಕೆ ಇಷ್ಟ ಆಂಟಿ.”
“ವಿಜಯ್ ಏನಂತಾರೆ?”
“ಸೀರೆ ಉಡು. ಬೆಂಗಳೂರಿನಲ್ಲಿ ನಡೆಯುವ ರಿಸೆಪ್ಷನ್‌ಗೆ ಘಾಘ್ರಾ ಹಾಕಿಕೋ ಅಂತಿದ್ದಾರೆ.”
“ಸರಿಯಾಗಿ ಹೇಳ್ತಿದ್ದಾರೆ. ‘ಅಮ್ಮನ್ನ ಒಪ್ಪಿಸುವ ಜವಾಬ್ದಾರಿ ನಿಮ್ಮದು’ ಅಂತ ನಿನ್ನ ಗಂಡನಿಗೆ ಹೇಳು. ಅಷ್ಟರಲ್ಲಿ ವಿಜಯೇಂದ್ರ ಅಲ್ಲಿಗೆ ಬಂದ.
“ಆಂಟಿ………”
“ನೋಡಪ್ಪ ನಮ್ಮ ಹುಡುಗಿ ಸೀರೆ ಉಡಲು ಒಪ್ಪಿದ್ದಾಳೆ. ಆದರೆ ಒಂದು ಕಂಡಿಷನ್………”
“ಏನು ಆಂಟಿ?”
“ಬೆಂಗಳೂರಿನಲ್ಲಿ ರಿಸೆಪ್ಷನ್‌ಗೆ ಘಾಘ್ರಾ ಹಾಕ್ತಾಳೆ. ನೀವು ನಿಮ್ಮ ತಾಯಿಯನ್ನು ಒಪ್ಪಿಸಬೇಕು.”
“ಷೂರ್ ಆಂಟಿ………” ಅವನು ಉತ್ಸಾಹದಿಂದ ಹೇಳಿದ.
ನೀಲಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ಶಕುಂತಲಳನ್ನು ತಬ್ಬಿಕೊಂಡಳು.
ಶಕುಂತಲಾ ನಗುತ್ತಾ ಹೇಳಿದಳು. “ನೀಲಾ ಮಕ್ಕಳು ಹಠ ಮಾಡುವುದು ಸಹಜ. ನೀನೇ ಇಷ್ಟು ಅಪ್‌ಸೆಟ್ ಆದರೆ ಹೇಗೆ?”
“ಆದಷ್ಟು ಶಾಂತವಾಗರ‍್ತೇನೆ. ಆದರೂ ಒಂದೊಂದು ಸಲ…………”
“ಬಾ ಕೂತ್ಕೋ. ನಾನು ಉಡುಗೊರೆ ಕೊಡಬೇಕು.”
“ಅತ್ತಿಗೆ, ನೀವು ಏನೂ ಕೊಡಕೂಡದು. ನಿಮ್ಮ ಪ್ರೀತಿ, ವಿಶ್ವಾಸ ಸಾಕು….”
“ಅದು ನಿರಂತರವಾಗಿರತ್ತೆ. ನಾನೇನು ಭಾರೀ ಉಡುಗೊರೆ ಕೊಡ್ತಿಲ್ಲ. ಏನೋ ಸಣ್ಣ ಉಡುಗೊರೆ.”
“ಆಯ್ತು ಅತ್ತಿಗೆ ಕೊಡಿ.”
ಶಕುಂತಲಾ ಖುಷಿಯಿಂದ ಕೊಟ್ಟರು. ಗಂಡ-ಹೆಂಡತಿ ರಾವ್ ದಂಪತಿಗಳಿಗೆ ನಮಸ್ಕಾರ ಮಾಡಿದರು.
“ನನ್ನ ಕೆಲವು ಕನಸುಗಳು ಇನ್ನೂ ನನಸಾಗಿಲ್ಲ. ಆ ಕನಸುಗಳು ಬೇಗ ನನಸಾಗಲೀಂತ ಆಶೀರ್ವಾದ ಮಾಡಿ.”
“ನಮ್ಮ ಆಶೀರ್ವಾದ ಇದ್ದೇ ಇರತ್ತೆ. ಇಷ್ಟು ಮಾಡಿರುವ ದೇವರು ಇನ್ನಷ್ಟು ಮಾಡಲಾರನಾ?”
“ಅಣ್ಣ-ಅತ್ತಿಗೆ ಬೆಂಗಳೂರಿನ ರಿಸೆಪ್ಷನ್‌ಗೆ ನಿಮ್ಮನೆಯವರೆಲ್ಲಾ ಬರಬೇಕು.”
“ಖಂಡಿತಾ ಕರೆಯಬೇಡ ನೀಲಾ. ನಮ್ಮನೆ ಜನಗಳ ಸ್ವಭಾವ ನಿನಗೆ ಗೊತ್ತಿಲ್ಲ…..”
“ನೀವು ಬರಲ್ವಾ?”
“ಬೆಂಗಳೂರಿನಲ್ಲಿ ರಿಸೆಪಕ್ಷನ್ ಇರುವ ವಿಚಾರಾನ್ನೇ ನಾವು ಮನೆಯಲ್ಲಿ ಹೇಳಿಲ್ಲ. ನಿನ್ನಿಂದ ನಾವು ಹತ್ತು ದಿನಗಳ ಕಾಲ ಆರಾಮವಾಗಿ ಸಂಸಾರದ ಜಂಜಾಟ ಮರೆತು ಇರುವಂತಾಯ್ತು. ಅದಕ್ಕೆ ಥ್ಯಾಂಕ್ಸ್.”
“ಆಗಲಿ ರಿಸೆಪ್ಷನ್ ಕರಿಯಲ್ಲ. ಆದರೆ ಮನೆಗೆ ಬಂದು ಹೋಗ್ತೀನಿ.”
‘ಖಂಡಿತಾ ಬಾ’ ಎಂದರು ಶಕುಂತಲ.
ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ: ಕನಸೊಂದು-ಶುರುವಾಗಿದೆ-ಪುಟ-4
(ಮುಂದುವರಿಯುವುದು)

ಸಿ.ಎನ್. ಮುಕ್ತಾ