ಪರಾಗ

ಗೋಸುಂಬೆ.

Share Button

ಬೆಳಗಿನ ತಿಂಡಿ ತಯಾರಿಸುವುದರಲ್ಲಿ ನಿರತಳಾಗಿದ್ದ ಅರುಣಾಳಿಗೆ ಕೆಲಸದ ರಂಗಮ್ಮನ ಕೂಗು ಕೇಳಿಸಿತು. “ಅವ್ವಾ, ನನ್ನ ಕೆಲಸಗಳೆಲ್ಲ ಮುಗಿಯಿತು. ತಿಂಡಿ ಆಗಿದ್ರೆ ಕೊಡಿ, ಇಲ್ಲದಿದ್ದರೆ ಬ್ಯಾಡ” ಎಂದಳು.
“ಬಂದೆ ತಾಳೇ ಒಂದೇ ನಿಮಿಷ ರಂಗೀ, ಆಗೇ ಹೋಯ್ತು. ಅಕ್ಕಿತರಿ ಅವರೇಕಾಳು ಉಪ್ಪಿಟ್ಟು ಇವತ್ತು, ನಿನ್ನ ಮಗಳು ಬೇರೆ ಊರಿನಿಂದ ಬರುತ್ತಾಳೆ ಅಂದಿದ್ದೆ. ಅವಳಿಗೂ ಸೇರಿಸಿ ಮಾಡಿದ್ದೇನೆ ಕೊಡುತ್ತೇನೆ” ಎಂದಳು ಅರುಣಾ ಅಡುಗೆ ಮನೆಯಿಂದ.

“ಓ ! ಅವರೇಕಾಳು ಉಪ್ಪಿಟ್ಟಾ ಆಯಿತು ಒಂದು ಡಬ್ಬಿಗೆ ಹಾಕಿಕೊಟ್ಟುಬಿಡಿ. ಅಂದಹಾಗೆ ನಿಮ್ಮ ಮಗಳೂ ಅಮ್ಮು ಬರುತ್ತಾಳೆ ಅಂದಿದ್ದಿರಿ. ಯಾವಾಗ ಏಟೊತ್ತಿಗೆ ಬರ‍್ತಾರೆ?” ಎಂದು ಕೇಳಿದಳು ರಂಗಿ.
“ಹೂಂ ಬರುತ್ತಾಳೆ, ಇಷ್ಟೊತ್ತಿಗೇಂತ ಏನೂ ಹೇಳಿಲ್ಲ. ಅವರುಗಳ ಕೆಲಸ ನೀನು ನೋಡಿದ್ದೀಯಲ್ಲಾ, ಹೊತ್ತಿಲ್ಲ ಗೊತ್ತಿಲ್ಲ. ಬೆಂಗಳೂರಿನಿಂದ ಲಗುಬಿಗಿ ನೋಡಿಕೊಂಡು ಬರ‍್ತೀನಿ ಎಂದಿದ್ದಳು. ತೊಗೋ” ಎಂದು ತಿಂಡಿ ತುಂಬಿದ ಡಬ್ಬಿಯನ್ನು ರಂಗಿಯ ಕೈಗೆ ಕೊಟ್ಟಳು ಅರುಣಾ.
“ಸರಿ ಅವ್ವಾ ನಾ ಬತ್ತೀನಿ. ಹಿಂದುಗಡೆ ಬಾಗಿಲು ಕೊಂಡಿ ಹಾಕಿದ್ದೀನಿ. ಹಿಂಗೇ ಹೋಗ್ತೀನಿ. ಮುಂಬಾಗಿಲು ಹಾಕ್ಕೊಳಿ” ಎಂದು ಹೇಳಿ ಹೊರಟಳು ರಂಗಿ.

ಅವಳನ್ನು ಕಳುಹಿಸಿ ತಟ್ಟೆಗೆ ತನಗೂ ಉಪ್ಪಿಟ್ಟು ಹಾಕಿಕೊಂಡು ಕೈಯಲ್ಲಿಡಿದು ಹೊರಬಂದು ಅರುಣಾ ಹಾಲಿನಲ್ಲಿದ್ದ ಸೋಫಾದ ಮೇಲೆ ಕುಳಿತಳು. ತಿಂಡಿ ತಿಂದು ಮುಗಿಸಿ ಕಾಫಿ ಬೆರೆಸಿಕೊಂಡು ಬಂದು ಹಾಗೇ ಗುಟುಕರಿಸುತ್ತಾ ಅಂದಿನ ಪತ್ರಿಕೆಯನ್ನು ಕೈಗೆತ್ತಿಕೊಂಡಳು.
ಛೇ.. ಬರೀ ಅಡ್ವರ್ಟೈಸ್‌ಮೆಂಟೇ ಪೇಪರ್ ತುಂಬ. ಗುಂಡಿಗಳ ಮಧ್ಯದಲ್ಲಿ ರಸ್ತೆ ಇದ್ದಹಾಗೆ ಈ ಅಡ್ವರ್ಟೈಸ್‌ಮೆಂಟುಗಳ ಮಧ್ಯೆ ಸುದ್ಧಿ ಸಮಾಚಾರಗಳನ್ನು ಹುಡುಕಿಕೊಂಡು ಓದಬೇಕಾಗಿದೆ ಅಂದುಕೊಂಡು ಅಸಹನೆಯಿಂದ ಕಣ್ಣಾಡಿಸಿದಳು.

ಜಾತ್ಯಾತೀತ ಪಂಥದ ಅನುಯಾಯಿ ಎಂಬೆಲ್ಲ ಅಭಿದಾನಗಳಿಗೆ ಅನ್ವರ್ಥರಾಗಿದ್ದ, ಸಮಾಜಮುಖೀ ಕೆಲಸಗಳ ಧುರೀಣ, ಅಸಹಾಯಕರ ಕಣ್ಣೀರನ್ನು ಒರೆಸುತ್ತಿದ್ದ ದಯಾಮಯಿ, ದಿವಂಗತ ಕಮಲಾಕರ್ ಅವರ ವಾರ್ಷಿಕ ಸಂಸ್ಮರಣಾ ದಿನಾಚರಣೆ ಅಸಂಖ್ಯಾತ ಅಭಿಮಾನಿಗಳಿಂದ, ಧಾರವಾಡದ ಪುರಭವನದಲ್ಲಿ ..ಭಾವಚಿತ್ರ ನೋಡಿದ ಕೂಡಲೇ ಅರುಣಾಳಿಗೆ ನಖಶಿಖಾಂತ ಕೋಪ ಉಕ್ಕಿಬಂದು ಏನು ಮಾಡುತ್ತಿದ್ದೇನೆಂಬ ಪರಿವೇ ಇಲ್ಲದೆ ಪತ್ರಿಕೆಯನ್ನು ಚೂರುಚೂರಾಗಿ ಹರಿದು ಹಾಕಿದಳು.

ಹೂಂ..ಇವನು ಸತ್ತರೂ ನನ್ನನ್ನು ನೆರಳಿನಂತೆ ಇನ್ನೂ ಕಾಡುತ್ತಿದ್ದಾನೆ. ಥೂ..ಇವನ. ಬಿರುದು ಬಾವಲಿಗಳ ಸರದಾರ. ಇವನ ಅಸಲಿ ಮುಖವನ್ನು ಎಲ್ಲಿಯೂ ಯಾರಿಗೂ ತೋರಿಸದಂತೆ ಮುಚ್ಚಿಟ್ಟಿದ್ದನಲ್ಲ. ಅದನ್ನು ಈಗಲಾದರೂ ಎಲ್ಲರಿಗೂ ಗೊತ್ತು ಮಾಡಿಸಲೇ? ಹೂಂ. ಹೇಳಿದರೂ ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಾರೆ. ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ನನ್ನ ಬಳಿ ಸಾಕ್ಷಿ ಏನಿದೆ? ಏನು ಕುರುಹು ಬಿಟ್ಟು ಹೋಗಿದ್ದಾನೆ? ಅವನು ಅವನ್ನೆಲ್ಲ ಮಾಡುತ್ತಿರುವಾಗಲೇ ತೋರಿಸಲಾಗಲಿಲ್ಲ. ನನ್ನ ಬಾಯಿಗೆ ಬೀಗಹಾಕಿಬಿಟ್ಟಿದ್ದ. ಆಗ ನಾನೇಕೆ ಸುಡುವ ಕೆಂಡವನ್ನು ಮಡಿಲಿನಲ್ಲಿ ಇಟ್ಟುಕೊಂಡು ಬದುಕು ಸವೆಸಿದೆ. ಅವನನ್ನು ತೊರೆಯಬಹುದಿತ್ತಲ್ಲವಾ? ಈಗಂತೂ ಅದೇನು ಹೊಸ ವಿಷಯವಲ್ಲ. ಸಮಾಜ ಬಹಳ ಬದಲಾವಣೆಯಾಗಿದೆ. ಹೌದು ಆದರೆ ನನ್ನ ಮನಸ್ಥಿತಿಗತಿ ಗತಕಾಲದಲ್ಲೇ ನಿಂತುಬಿಟ್ಟಿತಾ ಅಥವಾ….. .. .. ಅವಳಿಗರಿವಿಲ್ಲದೆ ಮನದಲ್ಲಿ ಅಡಗಿಕೊಂಡಿದ್ದ ಬಾಳಿನ ಪುಟಗಳು ತೆರೆದುಕೊಳ್ಳತೊಡಗಿದವು.

ಕೊಡಗಿನ ಸಮೀಪದ ಸಣ್ಣಹಳ್ಳಿಯಲ್ಲಿ ಸ್ವಲ್ಪ ಶ್ರೀಮಂತರೆನ್ನಿಸಿಕೊಂಡಿದ್ದ ಕುಟುಂಬ ಕಾಫಿ ಪ್ಲಾಂಟರ್ ಚಿನ್ನಪ್ಪ, ಕಾವೇರಮ್ಮನವರದ್ದು. ಅವರಿಗಿದ್ದ ಒಬ್ಬನೇ ಮಗ ಕಾಳಪ್ಪ. ಆತನ ಧರ್ಮಪತ್ನಿ ಮಲ್ಲಿಗೆ. ಅವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು. ಒಟ್ಟು ಮೂರು ಮಂದಿಯಲ್ಲಿ ದೊಡ್ಡವರಿಬ್ಬರು ಆದಿತ್ಯ, ಅಭಿಷೇಕ್ ಗಂಡು ಮಕ್ಕಳು. ಕೊನೆಯವಳು ಮಗಳು ಅರುಣಾ. ಮೂಲತಃ ಇವರು ಕೊಡಗಿನವರಲ್ಲ. ಯಾವುದೋ ತಲೆಮಾರಿನಲ್ಲಿ ಇಲ್ಲಿಗೆ ಬಂದು ಭೂಮಿ ಖರೀದಿಸಿ ಅದನ್ನು ಅಭಿವೃದ್ಧಿಪಡಿಸಿಕೊಂಡು ಬದುಕು ಕಟ್ಟಿಕೊಂಡು ಬಾಳಿದ್ದರು. ಅಂತಹ ಕುಟುಂಬದ ಮುಂದುವರಿದ ಮನೆತನವೇ ಅರುಣಾಳ ಹೆತ್ತವರದ್ದು. ಆಗ ಖರೀದಿಸಿದ ನೆಲ ಕಾಲಕಾಲಕ್ಕೆ ಸಾಗುವಳಿಯಲ್ಲಿ ಬದಲಾಗುತ್ತಾ ಈಗ ಕಾಫಿತೋಟವಾಗಿ ಮಾರ್ಪಟ್ಟಿತ್ತು. ಅಕ್ಕಪಕ್ಕದವರಿಗೆಲ್ಲ ಮಾದರಿ ಕುಟುಂಬವಾಗಿತ್ತು.

ಶ್ರೀಮಂತರ ಮನೆ, ಉಣ್ಣಲು ತೊಡಲು ಕೊರತೆಯಿರಲಿಲ್ಲ. ಕೆಲಸಕ್ಕೆ ಆಳುಕಾಳುಗಳಿದ್ದರು. ಅಕ್ಕರೆ ತೋರುವ ಅಜ್ಜ, ಅಜ್ಜಿ ಜೊತೆಗಿದ್ದರು. ಬೇಡಿದ್ದನ್ನು ಪೂರೈಸುವ ತಂದೆತಾಯಿಗಳು. ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿದ್ದ ಸೋದರರು ಅರುಣಾಳಿಗೆ. ಇಂತಹ ವಾತಾವರಣದಲ್ಲಿ ಬೆಳೆದ ಅರುಣಾ ಎಸ.ಎಸ್.ಎಲ್.ಸಿ. ಪಾಸಾದ ತಕ್ಷಣ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಂದುವರೆಸಲು ಇಚ್ಛಿಸಿದಳು. ಇದು ಮನೆಯವರಿಗೆ ಅಂತಹ ಪಥ್ಯವಾಗದ ವಿಚಾರ. ಅದರೂ ಮುದ್ದಿನ ಮಗಳನ್ನು ನೋಯಿಸಲಾರದೆ ಮೈಸೂರಿನಲ್ಲಿ ಒಂದು ಪುಟ್ಟ ಮನೆಯನ್ನು ಮಾಡಿ ಅವಳ ಯೊಗಕ್ಷೇಮ ನೋಡಿಕೊಳ್ಳಲು ಮತ್ತು ಯಾವ ತಾಪತ್ರಯವೂ ಇಲ್ಲದೆ ಅಭ್ಯಾಸ ಮಾಡಲು ಅನುಕೂಲವಾಗುವಂತೆ ತಮ್ಮಲ್ಲೇ ಕೆಲಸ ಮಾಡಿಕೊಂಡಿದ್ದ ಬೋರಪ್ಪ, ಭಾಗ್ಯ ದಂಪತಿಗಳನ್ನು ಅವಳ ಜೊತೆಮಾಡಿ ಇರುವಂತೆ ವ್ಯವಸ್ಥೆ ಮಾಡಿದರು. ಆಗಿಂದಾಗ್ಗೆ ತಾವುಗಳೂ ಬಂದು ಹೋಗುತ್ತಿದ್ದರು.

ಹೆಚ್ಚಿನ ಗೌಜುಗದ್ದಲ ಮಾಡಿಕೊಳ್ಳದೆ ವಿಜ್ಞಾನ ವಿಷಯದಲ್ಲಿ ಪದವಿ ಪರೀಕ್ಷೆಯನ್ನು ಹೆಚ್ಚಿನ ಅಂಕಗಳೊಂದಿಗೆ ಯಶಸ್ವಿಯಾಗಿ ಪೂರೈಸಿದಳು. ಮನೆಯಲ್ಲಿ ಅವಳಿಗೆ ವಿವಾಹ ಮಾಡಲು ಹೆತ್ತವರು ಸಿದ್ಧವಾದರು. ಅವರನ್ನು ಉಪಾಯವಾಗಿ ಒಪ್ಪಿಸಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡಳು. ಅವಳ ಅದೃಷ್ಟಕ್ಕೆ ಮೊದಲ ಪ್ರಯತ್ನದಲ್ಲಿಯೇ ಧಾರವಾಡದಲ್ಲಿ ಕಾಲೇಜಿನ ಉಪನ್ಯಾಸಕಿಯಾಗಿ ನೌಕರಿಯೂ ಸಿಕ್ಕಿಬಿಟ್ಟಿತು. ಅಗ ಮನೆಯಲ್ಲಿ ಪ್ರಸಂಗವೊಂದು ನಡೆಯಿತು.

ಅವಳ ತಾಯಿ “ನೋಡಿ ಅತ್ತೆ ಮಾವ, ನೀವು ನಮ್ಮಿಬ್ಬರಿಗಿಂತ ಹೆಚ್ಚು ಅವಳನ್ನು ಮುದ್ದುಮಾಡಿ ನಮ್ಮ ಮಾತು ಕೇಳದಂತೆ ಮಾಡಿಬಿಟ್ಟಿದ್ದೀರಿ. ಈಗ ನೋಡಿ ಪರ ಊರಿನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಹೊರಟು ನಿಂತಿದ್ದಾಳೆ. ಹೋಗಲಿ. ಓದಲಿ ಎಂದು ಬಿಟ್ಟದ್ದೇ ತಪ್ಪಾಯಿತು. ಬೇರೆಲ್ಲೋ ಹೋಗಿ ಕೆಲಸ ಮಾಡಿ ಸಂಪಾದಿಸುವ ಕಷ್ಟ ಇವಳಿಗೇಕೆ? ನಮ್ಮ ಅಂತಸ್ಥಿಗೆ ತಕ್ಕಂತೆ ಒಬ್ಬ ಹುಡುಗನನ್ನು ಹುಡುಕಿ ಮದುವೆ ಮಾಡುತ್ತೇವೆ. ಮದುವೆ ಮಾಡಿಕೊಂಡೇ ಹೋಗಲಿ, ಕಟ್ಟಿಕೊಂಡವನು ಒಪ್ಪಿದರೆ ಕೆಲಸವನ್ನು ಮಾಡಲಿ. ನಮಗೇನು ಅಭ್ಯಂತರವಿಲ್ಲ. ಅದು ಬಿಟ್ಟು ಕಾಣದ ಊರಿಗೆ ಒಂಟಿಯಾಗಿ ಹೊರಟು ಕಡಿದು ಕಟ್ಟೆ ಹಾಕುವುದು ಬೇಡ” ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.

ಸೊಸೆಯನ್ನು ನೋಡಿದ ಇವಳ ಅಜ್ಜಿ ಕಾವೇರಮ್ಮನವರು, ಅಜ್ಜ ಕಾಳಪ್ಪ ಸ್ವಲ್ಪ ಹೊತ್ತು ಸುಮ್ಮನಿದ್ದುಬಿಟ್ಟರು. ನಂತರ “ಅಲ್ಲಮ್ಮಾ ನಾವು ಓದುವ ಹುಮ್ಮಸ್ಸಿನ ಹುಡುಗಿ ಓದಲಿ, ಮುಂದೆ ಮದುವೆ ಮಕ್ಕಳು, ಸಂಸಾರ ಇದ್ದದ್ದೇ ಎಂದು ಹೇಳಿದ್ದೆವು. ಅದರಂತೆ ಆಕೆಯೂ ಚೆನ್ನಾಗಿ ಓದು ಮುಗಿಸಿದ್ದಾಳೆ ತಾನು ಓದಿದ್ದನ್ನು ಸಾರ್ಥಕಪಡಿಸಿಕೊಳ್ಳಲು ಹೊರಟಿದ್ದಾಳೆ. ಸ್ವಸಾಮರ್ಥ್ಯದಿಂದ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಎಲ್ಲರಿಗೂ ಇದು ಸಾಧ್ಯವೇ? ಅದೂ ಸರ್ಕಾರಿ ಕೆಲಸ. ಮುಂದೆ ಅವಳಿಗೆ ಎಂಥಹ ಮನೆ ಸಿಗುತ್ತೋ ಏನೋ, ಆರ್ಥಿಕವಾಗಿ ಭದ್ರತೆ ಇದ್ದರೆ ಹೇಗೂ ಬದುಕು ಕಟ್ಟಿಕೊಳ್ಳಬಹುದು” ಎಂದು ಅರುಣಾಳ ಪರವಾಗಿ ಮಾತನಾಡಿ ಅಜ್ಜಿ ತಾತ ನನ್ನಮ್ಮನ ಬಾಯಿ ಮುಚ್ಚಿಸಿದರು. ಇದರಿಂದ ಅಪ್ಪ, ಮತ್ತು ಅಣ್ಣಂದಿರೂ ಅಸಮಾಧಾನ ಪಟ್ಟಿದ್ದಂತೂ ಸತ್ಯ.

ಆವತ್ತು ಹಿರಿಯರು ಪ್ರತಿರೋಧ ತೋರಿದ್ದರೆ ಹೆತ್ತವರ ಅಭಿಲಾಷೆಯಂತೆ ಮದುವೆಯಾಗಿ ಬದುಕು ಹೂಡಿದ್ದರೆ.. ಎಲ್ಲವೂ “ರೆ” ..ರಾಜ್ಯವೇ. ನನ್ನ ಕರ್ಮ ಇಲ್ಲಿಗೆ ಎಳೆದುಕೊಂಡು ಬಂದಿತು. ನಿಟ್ಟುಸಿರು ಬಿಟ್ಟಳು. ಕೆಲಸಕ್ಕೆ ಸೇರಿಕೊಂಡ ದಿನವನ್ನು ನೆನಪು ಮಾಡಿಕೊಂಡಳು. ಕಾಲೇಜಿನಲ್ಲಿ ಸಹೋದ್ಯೋಗಿಗಳನ್ನು ಪರಿಚಯ ಮಾಡಿಕೊಡುವಾಗ “ಮೇಡಂ ನೋಡಿ ಇವರು ಕಮಲಾಕರ ಅಂತ ಕನ್ನಡ ಉಪನ್ಯಾಸಕರು. ಬಹಳ ವಿಶೇಷವ್ಯಕ್ತಿ. ಪಾಠ ಮಾಡುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈ ಕಾಲೇಜಿಗೆ ಕೀರ್ತಿಕಳಶ ಇದ್ದಹಾಗೆ” ಎಂದಿದ್ದರು. ಅರುಣಾ ತಲೆಯೆತ್ತಿ ನೋಡಿದಳು. ಅಬ್ಬಾ ! ಎಂತಹ ಅಂಗಸೌಷ್ಠವ, ಆರು ಅಡಿ ಎತ್ತರದ ನಿಲುವು, ಕಣ್ಣು ಕುಕ್ಕಿಸುವಂತಹ ರೂಪಿನ ತರುಣ. ಜೊತೆಗಾರನಾದರೆ ಹೀಗಿರಬೇಕು ಎಂದುಕೊಂಡಳು.

ಅದೇ ಪರಿಸ್ಥಿತಿ ಕಮಲಾಕರನಿಗೂ ಎದುರಾಯಿತು. ಹೌದು ನೆನ್ನೆಯ ಲಂಚ್ ಟೈಮಿನಲ್ಲಿ ಹರೀಶ್‌ಸರ್ ಅವರು “ನಾಳೆ ಕೊಡಗಿನ ಬೆಡಗಿಯೊಬ್ಬಳು ನಮ್ಮ ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ಬರುತ್ತಿದ್ದಾರೆ.” ಎಂದಿದ್ದರು. ಕೊಡಗಿನವರಾದ ಅವರಿಗೆ ತಮ್ಮೂರಿನವರೆಂದರೆ ಏನೋ ಅಭಿಮಾನ. ಅದು ನೆನಪಿಗೆ ಬಂತು. ಹೌದು ಮಧ್ಯಮ ಎತ್ತರದ ಸಪೂರ ಮೈಕಟ್ಟಿನ ಕೇದಗೆಯ ಬಣ್ಣದ ಲಕ್ಷಣವಾಗಿದ್ದ, ನೀಳಕೇಶದ, ಗುಳಿಕೆನ್ನೆಯ ಚೆಲುವೆಯನ್ನು ನೋಡಿದಾಗ “ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಸರ್ ಕೊಡಗಿನ ಬೆಡಗೀನೆ” ಎಂದು ಕಣ್ಣು ಕೀಳದಂತೆ ನೋಡಿದ್ದ. ಹೀಗೇ ಒಂದೈದು ನಿಮಿಷವಾಗಿರಬಹುದು. ನಗುವಿನ ಸದ್ದು ಇಬ್ಬರನ್ನೂ ಎಚ್ಚರಿಸಿತು. ಪರಿಸ್ಥಿತಿ ಅರಿತ ಇಬ್ಬರೂ ಪರಸ್ಪರ ನಮಸ್ಕಾರಗಳನ್ನು ವಿನಿಮಯ ಮಾಡಿಕೊಂಡರು. ಅಷ್ಟರಲ್ಲಿ ಬೆಲ್ಲಿನ ಸದ್ದು ಕೇಳಿಸಿ ತಮ್ಮತಮ್ಮ ತರಗತಿಗಳ ಕಡೆಗೆ ನಡೆದರು. ದಿನಕಳೆದಂತೆ ಒಂದಲ್ಲ ಒಂದು ಸಾರಿ ಯಾವುದಾದರೂ ಸಮಯದಲ್ಲಿ ಪರಸ್ಪರ ಭೇಟಿಯಾಗುತ್ತಿತ್ತು. ಆಗ ಹಲೋ..ಹಲೋ..ಬೈ.. ಎಂಬ ಮಾತುಗಳಲ್ಲಿ ಮುಕ್ತಾಯವಾಗುತ್ತಿತ್ತು.

ಕಾಲಕ್ರಮೇಣ ಅರುಣಾಳಿಗೆ ಕಮಲಾಕರನ ಚಟುವಟಿಕೆಗಳ ಪರಿಚಯವಾಗತೊಡಗಿತು. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ವಿದ್ಯಾಭ್ಯಾಸ ಮಾಡುತ್ತಿರುವ ಬಡವಿದ್ಯಾರ್ಥಿಗಳಿಗೆ ಧನಸಹಾಯ ಮಾಡುವುದು, ಕಾಲೇಜಿಗೆ ಬರುವ ಮೊದಲು ಕೆಲವು ಹಿರಿಯ ಕುಟುಂಬಗಳಿಗೆ ಭೇಟಿಕೊಟ್ಟು ಅವರುಗಳ ಬೇಕುಬೇಡಗಳನ್ನು ಕೇಳಿ ಪೂರೈಸುವುದು, ಆಗಾಗ್ಗೆ ಸ್ವಚ್ಛತಾ ಆಂದೋಲನ ಕೈಗೊಳ್ಳುವುದು, ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ದುರ್ಬಲರಿಗೆ ಇವುಗಳ ನೆರವು ತಲುಪುವಂತೆ ಮಾಡುವುದು, ಶಿಸ್ತು, ಸಂಯಮ, ಎಲ್ಲೆ ಮೀರದಂತೆ ನಡವಳಿಕೆ, ಎಲ್ಲವನ್ನು ನೋಡುತ್ತಾ ನೋಡುತ್ತಾ ಅದರಿಂದ ಪ್ರೇರಿತಳಾಗಿ ಬಿಡುವು ದೊರೆತಾಗಲೆಲ್ಲ ತಾನೂ ಅವುಗಳಲ್ಲಿ ಭಾಗಿಯಾಗುತ್ತಾ ತನಗರಿವಿಲ್ಲದಂತೆಯೇ ಕಮಲಾಕರನನ್ನು ಮನದ ಮೂಲೆಯಲ್ಲಿ ಅರಾಧಿಸತೊಡಗಿದಳು. ಅದನ್ನು ಹೇಳಲು ಏಕೋ ಹಿಂಜರಿಕೆ. ಹೀಗೇ ದಿನಗಳು ಉರುಳತೊಡಗಿದವು.

ಇತ್ತ ಅವಳ ಮನೆಯಲ್ಲಿ ವರಾನ್ವೇಷಣೆಯ ಕಾರ್ಯ ನಡೆಯುತ್ತಿತ್ತು. ಊರಿಗೆ ಅವಳು ಹೋದಾಗಲೆಲ್ಲ ಹಿರಿಯರ ಒತ್ತಾಯ, ಯಾವ ಹುಡುಗನನ್ನು ತೋರಿಸಿದರೂ ನಿರಾಕರಿಸುತ್ತಿದ್ದಳು ಅರುಣಾ. ಅವಳ ಈ ವರ್ತನೆ ಅವರಿಗೆ ಬಿಡಿಸಲಾಗದ ಕಗ್ಗಂಟಾಗಿ ಕಾಣತೊಡಗಿತು. ತಮ್ಮ ಮಗಳು ಯಾರನ್ನಾದರೂ ಇಷ್ಟಪಟ್ಟಿದ್ದಾಳೆಯೇ ಎಂಬ ಸಂದೇಹ, ಕೇಳಲು ಸ್ವಾಭಿಮಾನ. ಮಗಳ ಮೊಂಡುತನದ ಧೋರಣೆಗಳಿಂದ ಬೇಸತ್ತ ಹೆತ್ತವರು ಗಂಡುಮಕ್ಕಳ ವಿವಾಹಗಳನ್ನು ಮಾಡಿ ಮುಗಿಸಿದರು. ಮನೆಗೆ ಅತ್ತಿಗೆಯರು ಆಗಮಿಸಿದರೂ ಅರುಣಾ ಮದುವೆಯ ಕಡೆ ಒಲವು ತೋರಿಸಲಿಲ್ಲ. ಅದಕ್ಕಿಂತ ಯಾವುದೇ ಆಕಾಂಕ್ಷಿಯನ್ನು ನೋಡಲಿ ಅವನ ಸ್ಥಳದಲ್ಲಿ ಕಮಲಾಕರನನ್ನು ಇಟ್ಟು ಹೋಲಿಕೆ ಮಾಡತೊಡಗಿದಳು.

ಕಮಲಾಕರನ ಬಗ್ಗೆ ವಿಚಾರಿಸತೊಡಗಿದಾಗ ತಿಳಿದು ಬಂದದ್ದಿಷ್ಟು. ಆತನು ಯಾರು? ಎಲ್ಲಿಂದ ಬಂದ? ಅವನ ಹೆತ್ತವರು ಯಾರು? ಯಾವ ಮತಸ್ಥ? ಯಾರಿಗೂ ಗೊತ್ತಿಲ್ಲ. ಕೆಲವರು ಆತ ಅನಾಥಾಶ್ರಮದಲ್ಲಿಂದ ಬಂದವ ಎಂದರೆ ಮತ್ತೆ ಕೆಲವರು ಯಾರೋ ತಿರುಪೆಯವನಿಗೆ ಸಿಕ್ಕಿ ಸಾಕಿದ್ದಂತೆ, ಈಗ ಅವನನ್ನು ಸಾಕಿದವನಿಲ್ಲವಂತೆ, ಹೀಗೆ ಹಿಂದೆಮುಂದೆ ಇಲ್ಲದ. ಯಾವ ಆಸ್ತಿ, ಅಂತಸ್ತಿಲ್ಲದವನಿಗೆ ಯಾರು ಹೆಣ್ಣು ಕೊಟ್ಟಾರು? ಅದಕ್ಕೇ ಹೀಗೆ ಎಂಬ ಮಾತುಗಳು ಹರಿದಾಡುತ್ತಿದ್ದವು. ಇದನ್ನೆಲ್ಲ ಕೇಳಿದರೆ ಅರುಣಾಳ ಮನೆಯವರು ಅವನೊಡನೆ ಮದುವೆ ಮಾಡಿಕೊಡುವುದು ಅಸಂಭವ. ಅಲ್ಲದೆ ಕಮಲಾಕರ ತನ್ನನ್ನು ಯಾವತ್ತೂ ಅಂತಹ ದೃಷ್ಟಿಯಲ್ಲಿ ನೋಡಿದ್ದು ಗಮನಕ್ಕೆ ಬಂದಿಲ್ಲ. ಪ್ರೀತಿ ಏಕಮುಖವಾಗಿದ್ದು ಬೇರೆ ಗಂಡುಗಳನ್ನು ಒಪ್ಪಲು ಮನಸ್ಸಾಗುತ್ತಿಲ್ಲ. ಆತನ ಮನಸ್ಸಿನಲ್ಲಿ ಏನಿದೆಯೋ ತಿಳಿಯದು. ಇದೇ ತೊಳಲಾಟದಲ್ಲಿ ಮತ್ತಷ್ಟು ಸಮಯ ಕಳೆಯಿತು.

ತಮ್ಮೂರಿನಿಂದ ಬರುತ್ತಿದ್ದ ಒತ್ತಡಗಳಿಂದ ಬೇಸತ್ತು ಹೋದ ಅರಣಾ ದೈರ್ಯಮಾಡಿ ಕಮಲಾಕರನನ್ನು ಕೇಳಿಯೇ ಬಿಟ್ಟಳು. “ಕಮಲಾಕರ್ ನನಗೆ ಸುತ್ತಿಬಳಸಿ ಮಾತನಾಡಲು ಬರುವುದಿಲ್ಲ. ನಿಮ್ಮನ್ನು ನೋಡಿದ ದಿನದಿಂದಲೂ ನಾನು ನಿಮಗೆ ಮನಸೋತಿದ್ದೇನೆ. ಮಿಗಿಲಾಗಿ ನಿಮ್ಮ ನಿಸ್ವಾರ್ಥ ಸೇವಾ ಮನೋಭಾವ ನನ್ನನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಮದುವೆ ಅಂತ ಆದರೆ ನಿಮ್ಮನ್ನೇ ಎಂದು ನಿರ್ಧರಿಸಿಬಿಟ್ಟಿದ್ದೇನೆ. ಈ ಬಗ್ಗೆ ನಿಮ್ಮ ಬಿಚ್ಚುಮನಸ್ಸಿನ ಅಭಿಪ್ರಾಯ ತಿಳಿಯಲು ಕಾತುರಳಾಗಿದ್ದೇನೆ. ಯಾವುದೇ ಒತ್ತಾಯವಿಲ್ಲ. ಯೋಚಿಸಿ ಹೇಳಿ” ಎಂದು ಬಡಬಡನೆ ಹೇಳಿ ತನ್ನ ಮನೆಯವರಿಂದ ಮದುವೆಗೆ ಆಗುತ್ತಿರುವ ಒತ್ತಡದ ಬಗ್ಗೆ ಮರೆಯದೆ ತಿಳಿಸಿ ಅವನ ಪ್ರತಿಕ್ರಿಯೆಗಾಗಿ ಕಾದಳು.

ಅರುಣಾಳನ್ನು ಕಂಡ ಮೊದಲನೆಯ ದಿನದಿಂದಲೇ ಕರುಣಾಕರನೂ ಅವಳಿಗೆ ಮನಸೋತಿದ್ದ. ಆಕೆಯ ಸಾಂಸಾರಿಕ ಹಿನ್ನೆಲೆಯನ್ನು ತಿಳಿದು ತನ್ನ ಕೈಗೆಟುಕದ್ದೆಂದು ಸುಮ್ಮನಾಗಿದ್ದ. ಆದರೆ ಇತ್ತೀಚೆಗೆ ಅರುಣಾಳ ನಡವಳಿಕೆಗಳಿಂದ ಅವಳಿಗೂ ನನ್ನ ಬಗ್ಗೆ ಆಸಕ್ತಿಯಿದೆ, ಹೇಳಲಾರದೆ ತೊಳಲಾಡುತ್ತಿದ್ದಾಳೆ ಎಂದು ತಿಳಿದಿದ್ದ. ಆದರೂ ತನ್ನಿಚ್ಛೆಯನ್ನು ಹೊರಗೆ ತೋರ್ಪಡಿಸಿಕೊಳ್ಳದೆ ಇದ್ದವನಿಗೆ ಅರುಣಾಳಿಂದಲೇ ಆಹ್ವಾನ ಬಂದದ್ದು ಅಮೃತ ಕುಡಿದಷ್ಟು ಸಂತಸ ತಂದಿತು. “ಅರುಣಾ ನಿಮ್ಮಂಥಹ ಜೊತೆಗಾತಿ ದೊರಕಬೇಕಾದರೆ ಪುಣ್ಯ ಮಾಡಿರಬೇಕು. ನಿರಾಕರಿಸುವಂತಹ ಯಾವ ಕಾರಣಗಳೂ ಇಲ್ಲ. ನೀವು ಮತ್ತೊಮ್ಮೆ ಆಲೋಚಿಸಿ ನಿರ್ಧಾರಕ್ಕೆ ಬನ್ನಿ. ಏಕೆಂದರೆ ಹಿಂದೆಮುಂದಿಲ್ಲದ ಒಂಟಿಬಡುಕ ನಾನು, ನನಗೆ ನನ್ನವರೂಂತ ಯಾರೂ ಇಲ್ಲ. ನಿಮ್ಮ ಕುಟುಂಬದವರು ಇದಕ್ಕೆ ಒಪ್ಪಿಕೊಳ್ಳಲಾರರು. ನನ್ನ ಕಡೆಯಿಂದ ಅಭ್ಯಂತರವಿಲ್ಲ” ಎಂದು ಹೇಳಿದನು.

ಕಮಲಾಕರನ ಮಾತುಗಳನ್ನು ಕೇಳಿದ ಅರುಣಾನ ಮನ ಹರ್ಷದಿಂದ ಬೀಗಿತು. “ಅಬ್ಬಾ ! ನೀವೊಪ್ಪಿದಿರಲ್ಲಾ ನನಗಷ್ಟೇ ಸಾಕು. ಯಾರು ಒಪ್ಪಲಿ ಬಿಡಲಿ ಅದರ ಬಗ್ಗೆ ನನಗೆ ಚಿಂತೆಯಿಲ್ಲ.” ಎಂದಳು. ತಮ್ಮ ಮನೆಯವರನ್ನು ಒಪ್ಪಿಸುವುದು ಅಸಾಧ್ಯವೆಂದರಿತ ಅರುಣಾ ಅವರಿಗೆ ವಿಷಯ ತಿಳಿಸದೆಯೇ ಕೆಲವೇ ಕೆಲವು ಸಹೋದ್ಯೋಗಿಗಳ ಸಮ್ಮುಖದಲ್ಲಿ ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆಯಾಗಿ ಸಂಸಾರ ಹೂಡಿಯೇ ಬಿಟ್ಟಳು.

ನಂತರ ವಿಷಯ ತಿಳಿದ ಅವಳ ಮನೆಯ ಹಿರಿಯರೆಲ್ಲರೂ ಕೆಂಡಾಮಂಡಲರಾಗಿ “ಇನ್ನೆಂದೂ ನಮ್ಮ ಮನೆಗೆ ನೀನು ಕಾಲಿಡಬೇಡ. ನಾವೂ ನೀನಿರುವ ದಿಕ್ಕಿಗೂ ತಲೆಹಾಕುವುದಿಲ್ಲ” ಎಂದು ಫೋನಿನಲ್ಲೇ ಅವಳನ್ನು ಬಹಿಷ್ಕರಿಸಿದರು. ಅವಳಿಗೆ ಮಾತಿನಲ್ಲೇ ಮಂಗಳಾರತಿ ಮಾಡಿದರು.
ಪ್ರೀತಿಯ ಅಮಲಿನಲ್ಲಿದ್ದ ನವದಂಪತಿಗಳಿಗೆ ಯಾರ ಮಾತುಗಳೂ ಪರಿಣಾಮ ಮಾಡಲಿಲ್ಲ. ಜೊತೆಗೆ ಅವರಿಗೆ ಯಾರ ಹಂಗೂ ಬೇಕಾಗಿರಲಿಲ್ಲ. ನಾವು ಸರ್ವಸ್ವತಂತ್ರರು, ಸ್ವಪ್ರಯತ್ನದಿಂದ ಕಾಲಮೇಲೆ ನಿಂತಿರುವವರು ಎಂದು ತಮಗೆತಾವೇ ಸಮಾಧಾನ ಮಾಡಿಕೊಂಡರು.
ಇಬ್ಬರೂ ಒಂದೇ ಕಾಲೇಜಿನಲ್ಲಿ ಉದ್ಯೋಗಸ್ಥರಾಗಿದ್ದರಿಂದ ಒಟ್ಟಿಗೆ ಹೋಗುವುದು ಬರುವುದು ಮೊದಲಿನಂತೆ ಇತ್ತು. ಇತರ ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುವುದನ್ನು ಮಾಡುತ್ತಾ ಬದುಕಿನ ಬಂಡಿಯನ್ನು ಎಳೆಯಲಾರಂಭಿಸಿದರು.

ಅರುಣಾಳು ಅಂದುಕೊಂಡಂತೆ ಯಾವ ಜಂಝಾಟವಿಲ್ಲದೆ ನಡೆದುಕೊಂಡು ಬರುತ್ತಿದ್ದ ಸಂಸಾರ ಮಗಳು ಹುಟ್ಟಿದ ಮೇಲೆ ಸ್ವಲ್ಪ ಬದಲಾವಣೆಗಳು ಕಾಣಿಸಿದವು. ಅಷ್ಟರಲ್ಲಿ ಕಮಲಾಕರನಿಗೆ ಗುಲ್ಬರ್ಗಾ ಕಾಲೇಜಿಗೆ ವರ್ಗವಾಯಿತು. ಯಾರನ್ನು ಹಿಡಿದು ಏನು ವಶೀಲಿ ಹಚ್ಚಿದನೋ ಅರುಣಾಳನ್ನೂ ಅದೇ ಕಾಲೇಜಿಗೆ ವರ್ಗಮಾಡಿಸಿಕೊಂಡು ಇಬ್ಬರೂ ಒಟ್ಟಿಗೆ ಅಲ್ಲಿಗೆ ಹೋಗುವಂತೆ ಮಾಡಿದನು ಕಮಲಾಕರ.


ಮಗಳು ಅಮೃತಾಳೊಂದಿಗೆ ಗುಲ್ಬರ್ಗಾ ನಗರದಲ್ಲಿ ವಾಸ್ತವ್ಯ ಹೂಡಿದರು. ಆಗಿನಿಂದ ಅರುಣಾಳಿಗೆ ಜವಾಬ್ದಾರಿ ಹೆಚ್ಚಾಗಿತ್ತು. ಕರುಣಾಕರನೊಟ್ಟಿಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ. ಕಾಲೇಜಿನ ಡ್ಯೂಟಿ, ಮನೆಗೆಲಸ, ಮಗಳನ್ನು ಸಂಭಾಳಿಸುವುದು ಇದರಲ್ಲಿಯೇ ದಿನಪೂರ್ತಿ ಕಳೆದುಹೋಗುತ್ತಿತ್ತು.
ಕಾಲೇಜಿನ ಕೆಲಸದ ಮಧ್ಯೆ ಬಿಡುವು ದೊರೆತಾಗಲೆಲ್ಲ ಕಮಲಾಕರ ಧಾರವಾಡಕ್ಕೆ ದೌಡಾಯಿಸುತ್ತಿದ್ದ. ಜೊತೆಗೆ ಗುಲ್ಬರ್ಗಾದಲ್ಲಿಯೂ ಅವನ ಸೇವಾಕಾರ್ಯಗಳನ್ನು ವಿಸ್ತರಿಸಿಕೊಂಡಿದ್ದ. ಸ್ವಲ್ಪ ದಿನಗಳಲ್ಲೇ ಸುತಮುತ್ತೆಲ್ಲ ಜನರು ಅವನಿಗೆ ಪರಿಚಿತರಾಗಿಬಿಟ್ಟರು.

ಹಲವು ವರ್ಷಗಳುರುಳಿದಂತೆ ಕಮಲಾಕರನ ಮತ್ತೊಂದು ಮುಖದ ಪರಿಚಯವಾಗತೊಡಗಿತು. ಸೇವಾಕಾರ್ಯಗಳಿಗಾಗಿ ಅನುಕೂಲಸ್ಥ ದಾನಿಗಳಿಂದ ಧಾರಾಳವಾಗಿ ವಂತಿಕೆಗಳನ್ನು ವಸೂಲಿಮಾಡುತ್ತಿದ್ದ. ಅದಕ್ಕೆ ತನ್ನ ಒಂದು ಬಿಡಿಕಾಸನ್ನೂ ಸೇರಿಸುತ್ತಿರಲಿಲ್ಲ. ರಕ್ತದಾನ, ನೇತ್ರದಾನ, ಉಚಿತ ತಪಾಸಣೆ ಚಿಕಿತ್ಸೆ ಗಳಿಗಾಗಿ ಕ್ಯಾಂಪುಗಳನ್ನು ಆಯೋಜಿಸುತ್ತಿದ್ದ. ವೈದ್ಯರುಗಳನ್ನು ಸಂಪರ್ಕಿಸಿ ಅವರನ್ನು ಮಾತುಗಳಿಂದ ಮೋಡಿಮಾಡಿ ಅವರ ಸೇವೆಯನ್ನು ಕ್ಯಾಂಪುಗಳಿಗೆ ಬಳಸಿಕೊಳ್ಳುತ್ತಿದ್ದ. ಇವೆಲ್ಲದರ ಖರ್ಚುವೆಚ್ಚಗಳನ್ನು ಉದಾರ ದೇಣಿಗೆದಾರರ ಹಣದಲ್ಲಿ ನಿರ್ವಹಿಸಿ ಇದರ ಶ್ರೇಯವನ್ನು ಮಾತ್ರ ತಾನು ಗಿಟ್ಟಿಸುತ್ತಿದ್ದ. ಸಂಗ್ರಹಿಸಿದ ದೇಣಿಗೆಯ ಲೆಕ್ಕವನ್ನು ಯಾರಿಗೂ ಒಪ್ಪಿಸಬೇಕಾಗಿರಲಿಲ್ಲ. ಜನರೆಲ್ಲ ಇವನ ಸೇವಾಕಾರ್ಯವನ್ನು ಹೊಗಳಿದ್ದೇ ಹೊಗಳಿದ್ದು. ಆದರೆ ಇದರಿಂದ ಅವನು ಒಳಗಂಟೊಂದನ್ನು ಮಾಡಿಕೊಂಡದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ದೊಡ್ಡ ದೊಡ್ಡ ಕುಳಗಳಿಂದ ಓದುವ ವಿದ್ಯಾರ್ಥಿಗಳಿಗೆ ಧನಸಹಾಯ, ಶಾಲಾ ಸಂಸ್ಥೆಗಳಿಗೆ ನೆರವು, ವೃದ್ಧಾಶ್ರಮದಂತಹ ಸಂಸ್ಥೆಗಳಿಗೆ ಅಗತ್ಯ ಸಹಾಯ ನೀಡುವುದು ಎಲ್ಲವೂ ಧರ್ಮಾರ್ಥವೇ. ಆದರೆ ಇವೆಲ್ಲವುಗಳ ಹಿಂದೆ ಕಮಲಾಕರನ ಪುಟ್ಟ ಗಂಟು ಹಿಗ್ಗುತ್ತಲೇ ಇತ್ತು. ಇದು ಹೊರಗಿನವರಿಗ್ಯಾರಿಗೂ ತಿಳಿಯದಂತೆ ಸರಳವಾಗಿದ್ದ. ಇದರಿಂದ ಅವನ ಬಗ್ಗೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಅವನಿಗೆ ಯಾವುದೇ ದುರಭ್ಯಾಸವಾಗಲೀ, ದುಶ್ಚಟಗಳಾಗಲೀ ಇರಲಿಲ್ಲ. ಅವನ ಮೃದು ಭಾಷೆ, ವಿನಯತನ, ಸರಳ ನಡೆನುಡಿಗಳು, ಎಲ್ಲರನ್ನು ಮರುಳುಮಾಡಿದ್ದವು.

ಈ ಎಲ್ಲ ಅವತಾರಗಳ ನಿಜರೂಪು ಈಗ ಅರುಣಾಳಿಗೆ ತಿಳಿಯತೊಡಗಿತ್ತು. ಈ ವಿಷಯವಾಗಿ ಆಗೀಗ ಗಂಡಹೆಂಡತಿಯ ನಡುವೆ ಮಾತ್ರ ಮಾತುಕತೆ ನಡೆಯುತ್ತಿತ್ತು. ಆಗೆಲ್ಲ ಅವನು ಮೃಗೀಯ ವರ್ತನೆಯಿಂದ ಅವಳನ್ನು ಹಿಂಸಿಸಿ ಬಾಯಿ ಮುಚ್ಚಿಸುತ್ತಿದ್ದ. ಅವನ ಕುಡಿತದ, ಅವಾಚ್ಯ ಶಬ್ಧಗಳ ಪ್ರಯೋಗ ಮನೆಯೊಳಗೇ ಸೀಮಿತವಾಗಿತ್ತು. ಹೊರಗಿನವರಿಗೆ ಅವನ ಬಣ್ಣವೇ ಬೇರೆಯಾಗಿತ್ತು. ಅವಳು ಒಮ್ಮೆ ಅವನಿಗೆ ಕಾಣದಂತೆ ಈ ವ್ಯವಹಾರಗಳ ಒಂದು ಪುಟ್ಟ ವೀಡಿಯೋ ಮಾಡಿಟ್ಟಿದ್ದನ್ನು ಯಾವುದೋ ಮಾಯದಲ್ಲಿ ಎಗರಿಸಿಬಿಟ್ಟಿದ್ದ. ಅದಕ್ಕಾಗಿ ಸಾಕಷ್ಟು ಪೆಟ್ಟುಗಳನ್ನು ಅವಳು ತಿನ್ನಬೇಕಾಯಿತು. ಅಲ್ಲದೆ ಅಂದಿನಿಂದ ಇವಳ ಮೇಲೆ ಒಂದು ಹದ್ದಿನ ಕಣ್ಣಿಟ್ಟಿದ್ದ. ಹೊರಗಡೆ ಅದೇನು ಬಿಗಿಹಿಡಿತವಿಟ್ಟಿದ್ದನೋ ದೇವರೇ ಬಲ್ಲ, ಎಲ್ಲರೂ ಈತನನ್ನು ಮಹಾತ್ಮನಂತೆ ಕಾಣುತ್ತಿದ್ದರು. ಈ ಗೋಮುಖ ವ್ಯಾಘ್ರನ ಅಸಲಿಯತ್ತನ್ನು ಅರಣಾ ತೋರಿಸಲು ಸಾಧ್ಯವಿಲ್ಲದೆ ಮತ್ತು ಅವನನ್ನು ಬಿಟ್ಟು ಹೋಗಲಾರದೆ ಒಳಗೇ ನೊಂದುಕೊಂ ಸಹಿಸುತ್ತಾ ದಿನಗಳೆಯುತ್ತಿದ್ದಳು. ಜೀವ ಕಳೆದುಕೊಂಡು ಮುಕ್ತಿ ಪಡೆಯೋಣವೆಂದರೆ ಪುಟ್ಟ ಮಗಳು ಕಣ್ಮುಂದೆ ಬರುತ್ತಿದ್ದಳು. ತಾನೇ ತೋಡಿಕೊಂಡ ಹಳ್ಳಕ್ಕೆ ತಾನಾಗಿಯೇ ಬಿದ್ದು ಒದ್ದಾಡುವಂತಾಗಿತ್ತು. ಇಂತಹ ವಾತಾವರಣದಲ್ಲಿ ತನ್ನ ಮಗಳು ಬೆಳೆಯುವುದು ಬೇಡವೆಂದು ಹಠಹಿಡಿದು ಕಮಲಾಕರನ ವಿರೋಧದ ನಡುವೆಯೇ ಮಗಳನ್ನು ರೆಸಿಡೆನ್ಷಿಯಲ್ ಶಾಲೆಯೊಂದಕ್ಕೆ ಸೇರಿಸಿ ಓದಿಸುವುದರಲ್ಲಿ ಸಫಲಳಾದಳು. ಮಗಳು ಉತ್ತಮವಾದ ಪದವಿ ಪಡೆದು ಉದ್ಯೋಗ ಗಿಟ್ಟಿಕೊಂಡು ಕೆಲಸ ಮಾಡುತ್ತಿದ್ದಳು.

ಸುತ್ತುವರೆದಿದ್ದ ಅವನ ಅಭಿಮಾನಿ ಬಳಗದ ಪ್ರಪಂಚದಿಂದ ಹೊರಬರಲಾಗದೆ ಒಳಗೊಳಗೇ ದಾವಾಗ್ನಿ ಇಟ್ಟುಕೊಂಡು ಸಮಯ ಕಳೆಯುತ್ತಿದ್ದಳು. ಶುದ್ಧ ಹಸ್ತನೆಂದು ತೋರುತ್ತಾ ಹೊರಗಿನವರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ತಾನಿರಲು ಸಾಧಾರಣ ಬಾಡಿಗೆ ಮನೆ, ಹಳೆಯದೊಂದು ಕಾರು, ತೊಡುತ್ತಿದ್ದದ್ದು ಸಾಧಾರಣವಾದ ಉಡುಪುಗಳು, ಮಾತುಮಾತಿನಲ್ಲೂ ವಿನಯ ತುಳುಕುವಂತೆ ಮೃದುನುಡಿಗಳು, ಸಮಾಜದಲ್ಲಿ ದೊಡ್ಡವರ ಕೆಲವು ಗುಪ್ತವಾದ ಹಳವಂಡಗಳನ್ನು ಹೇಗೋ ಪತ್ತೆಮಾಡಿ ಅದನ್ನೇ ಚಲಾಯಿಸುತ್ತ ಅವರನ್ನು ಬ್ಲಾಕ್‌ಮೇಲ್ ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಚಾಣಾಕ್ಷತೆ ಅವನಿಗಿತ್ತು. ಇದನ್ನೆಲ್ಲ ಕಂಡು ಅಸಹ್ಯಪಟ್ಟು ಅವನ ದುಡಿಮೆಯ ಯಾವ ಹಣವನ್ನೂ ತಾನು ಉಪಯೋಗಿಸುವುದನ್ನು ನಿಲ್ಲಿಸಿದಳು. ಮನೆಯಲ್ಲಿ ಅಡುಗೆಯವಳನ್ನು ಇಟ್ಟು ಊಟೋಪಚಾರ ಮಾಡುತ್ತಿದ್ದುದು ಬಿಟ್ಟರೆ ಅರುಣಾಳೊಡನೆ ಮಾತುಕತೆ ನಿಲ್ಲಿಸಿ ಎಷ್ಟೋ ಕಾಲವಾಯಿತು. ನೋಡುವವರಿಗೆ ಅವರದ್ದು ಅನುಕೂಲ ದಾಂಪತ್ಯ, ಮನೆಯೊಳಗಡೆ ಅವನ ಇರುವಿಕೆಯೇ ಅಪಥ್ಯ ಎನ್ನುವ ಹಂತ ತಲುಪಿತ್ತು.

ಹೂಂ ದೇವರಿಗೇ ಇದೆಲ್ಲ ಕಾಣಲು ಸಾಕಾಯಿತೇನೋ ಎಂಬಂತೆ ಯಾವುದೋ ಒಂದು ಸಮಾರಂಭಕ್ಕೆ ಹೋದವನು ಅಲ್ಲಿಯೇ ವೇದಿಕೆಯ ಮೇಲೇ ಕುಸಿದು ಅಸುನೀಗಿದ. ಜೊತೆಗೆ ಅವನು ಬರೆದಿಟ್ಟಿದ್ದ ದೇಹ ಮತ್ತು ಅಂಗಾಂಗದಾನದ ಪತ್ರವೂ ಯಾರಬಳಿಯಲ್ಲಿತ್ತೋ ಸಿಕ್ಕಿತು. ಅದನ್ನು ಚಾಚೂ ತಪ್ಪದೆ ಅವನ ಪಟಾಲಮ್ಮಿನ ಜನ ಅದು ಅವನ ಅಂತಿಮ ಇಚ್ಛೆಯೆಂದು ಹಾಡಿಹೊಗಳುತ್ತಾ ನೆರವೇರಿಸಿದರು. ಅವನನ್ನು ಮಹಾತ್ಮನ ಮಟ್ಟಕ್ಕೆ ಕೊಂಡೊಯ್ದರು. ಅದರಲ್ಲಿ ಅರುಣಾ ಮತ್ತು ಮಗಳು ನಿಮಿತ್ತ ಮಾತ್ರವೆಂಬಂತೆ ಪಾಲ್ಗೊಳ್ಳಬೇಕಾಯಿತು. ಯಾವುದೋ ಜನ್ಮದ ಕರ್ಮವೆಂದು ಅಲ್ಲಿ ಕಲ್ಲಿನಂತೆ ನಿಶ್ಚಲವಾಗಿ ಕುಳಿತಿದ್ದರು.

ಅಲ್ಲಿ ಸೇರಿದ್ದವರೆಲ್ಲರ ಬಾಯಲ್ಲಿ ಒಂದೇ ಮಾತು. “ಕಮಲಾಕರರ ಸಾವು ಆಕಸ್ಮಿಕವಾಗಿದ್ದು ಅಭಿಮಾನಿಗಳಾದ ನಮಗೇ ಭರಿಸಲಾಗುತ್ತಿಲ್ಲ ಇನ್ನು ಜೀವನಪೂರ್ತಿ ಜೋಡಿ ಹಕ್ಕಿಗಳಂತಿದ್ದ ಅವರ ಪತ್ನಿಗೆ ಏನಾಗಿರಬೇಡ, ಅದಕ್ಕೇ ಅವರು ದುಃಖ ತಡೆಯಲಾರದೆ ಮೌನಕ್ಕೆ ಶರಣಾಗಿದ್ದಾರೆ” ಎಂದು ಸಾಕಷ್ಟು ಅನುಕಂಪ ತೋರಿದ್ದರು. ಎಲ್ಲವೂ ಮುಗಿದ ನಂತರ ಬ್ಯಾಂಕಿನ ಕೆಲಸ, ಮನೆಯ ವ್ಯವಸ್ಥೆ, ಅನಿವಾರ್ಯ ಕೆಲಸಗಳೆಲ್ಲ ಮುಗಿದವು. ಆಗ ಬಿಚ್ಚಿಬೀಳುವ ಸರದಿ ಅರುಣಾಳಿಗಾಯಿತು. ಕಾಲೇಜಿನಲ್ಲಿ ಕೆಲಸ ಮಾಡಿದ ಉಪನ್ಯಾಸಕ ಭಡ್ತಿ ಪಡೆದು ಪ್ರೊಫೆಸರನಾಗಿ ಸಂಬಳ ಪಡೆದವನ ಅಕೌಂಟಿನಲ್ಲಿ ಕೋಟಿಗಟ್ಟಲೆ ಹಣ, ಅಲ್ಲದೆ ಮನೆಯಲ್ಲಿ ಅವನ ಖಾಸಗಿ ಕ್ಯಾಷ್‌ಬಾಕ್ಸಿನಲ್ಲಿ ಕಟ್ಟು ಕಟ್ಟು ಹಣದ ನೋಟುಗಳು. ಅವ್ವಯ್ಯಾ ಅರುಣಾ ತನ್ನ ಮನಸ್ಸಿನಲ್ಲಿಯೇ ತಡಮಾಡದೆ ಯೋಜನೆಯೊಂದನ್ನು ಸಿದ್ಧಪಡಿಸಿದಳು. ಅದನ್ನು ಮಗಳಿಗೆ ಫೋನ್ ಮಾಡಿ ತಿಳಿಸಿದಳು. “ಇವತ್ತು ಮಗಳು ಬರುತ್ತಾಳೆ, ಅವಳ ಚಿಂತೆಯೇನೂ ಇಲ್ಲ. ಆದರೆ ಈ ಮನುಷ್ಯನ ವಾರ್ಷಿಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡದೇ ಇರಲಾರರು. ನನಗೆ ಅದರಲ್ಲಿ ಭಾಗವಹಿಸಲು ಇಷ್ಟವಿಲ್ಲ. ಅದಕ್ಕೆ ಏನಾದರೂ ಉಪಾಯ ಮಾಡಿ ತಪ್ಪಿಸಿಕೊಳ್ಳಬೇಕು. ಇಲ್ಲವಾದರೆ ವೇದಿಕೆಯ ಮೇಲೆ ನನ್ನಿಂದಲೂ ಆ ಮನುಷ್ಯನ ಗುಣಗಾನ ಮಾಡಲು ಒತ್ತಾಯಿಸುವುದು ಖಂಡಿತ. ಅವರೆಲ್ಲ ಇತಿಮಿತಿಮೀರಿ ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಾರೆ. ಅವನ ನಿಜರೂಪ ಕಂಡಿದ್ದ ನನಗೆ ಅವನ್ನು ಕೇಳಿಸಿಕೊಳ್ಳಲೂ ಸಾಧ್ಯವಿಲ್ಲ. ಮಗಳು ಅಮೃತಾಳಿಂದಲೇ ಯೋಜನೆ ರೂಪಿಸಬೇಕು ಹೌದು” ಎಂದು ಆಲೋಚನೆಯಲ್ಲಿರುವಾಗಲೇ
“ಅಮ್ಮಾ ಇದೇನು ಮುಂದಿನ ಬಾಗಿಲು ಹಾರುಹೊಡೆದು ಏನು ಮಾಡುತ್ತಿದ್ದೀಯೆ?” ಅಮೃತಾಳ ಧ್ವನಿ ಅರುಣಾಳನ್ನು ಹೊರ ಪ್ರಪಂಚಕ್ಕೆ ಎಳೆದು ತಂದಿತು.

“ ಮಗಳೇ ಬಂದೆಯಾ, ಅದೇ ಹಳೆಯ ನೆನಪಿನ ಹಾಳೆಗಳನ್ನು ತಿರುವಿ ಹಾಕುತ್ತಿದ್ದೆ.” ಎನ್ನುತ್ತಾ ಮಗಳನ್ನು ಬರಮಾಡಿಕೊಂಡಳು.
“ತಿಂಡಿ ಕಾಫಿ ಎಲ್ಲವನ್ನೂ ಮುಗಿಸಿಕೊಂಡೇ ಬಂದಿದ್ದೇನೆ. ಮತ್ತೇನೂ ಬೇಡ. ಮಧ್ಯಾಹ್ನ ಊಟ ಮಾಡಿದರಾಯಿತು. ಅದೇನು ಅರ್ಜೆಂಟಾಗಿ ಬರಲು ಹೇಳಿದೆ?” ಎಂದು ಪ್ರಶ್ನಿಸಿದಳು ಅಮೃತಾ.
“ಒಂದು ನಿಮಿಷ ಬಂದೆ” ಎಂದು ರೂಮಿನಿಂದ ಒಂದು ಫೈಲ್ ತಂದು ಮಗಳ ಮುಂದಿಟ್ಟಳು ಅರುಣಾ. ಎಲ್ಲವನ್ನೂ ಸಾವಕಾಶವಾಗಿ ಓದಿಮುಗಿಸಿದ ಅಮೃತಾಳಿಗೆ ತನ್ನಮ್ಮನ ನಿರ್ಧಾರ ಸರಿಯೆನ್ನಿಸಿತು. ಮೊದಲೇ ಇದರ ಅಲ್ಪ ಸುಳುಹು ತಿಳಿದಿತ್ತು. ಈಗ ಎಲ್ಲವೂ ವಿಷದವಾಗಿ ವೇದ್ಯವಾಯಿತು.

“ಅಮ್ಮಾ ..ಎಲ್ಲಾ ಸರಿ, ಅಪ್ಪನ ಹಣವೆಲ್ಲವನ್ನು ಯಾವುದೋ ಪೂನಾದಲ್ಲಿರುವ ಆಶ್ರಮಕ್ಕೆ ದಾನಮಾಡಲು ಬರೆದಿದ್ದೀರಿ. ಅಲ್ಲಿಯೇ ನಿಮ್ಮ ವಾಸ್ತವ್ಯ ಹೂಡುವ ಸಿದ್ಧತೆ ಮಾಡಿಕೊಂಡಿದ್ದೀರಾ? ಮತ್ತೆ ಅದೂ ಅಪ್ಪನ ದುಡಿಮೆಯಲ್ಲೇ”
“ಇಲ್ಲಾ ಮಗಳೇ, ಅವರ ದುಡಿಮೆಯ ಚಿಕ್ಕಾಸನ್ನೂ ನಾನು ಮುಟ್ಟುವುದಿಲ್ಲ. ನಾನಿರುವವರೆಗೂ ಅವರ ಪಾಲಿನ ಕುಟುಂಬ ಪೆನ್ಷನ್ನೂ ಬರುತ್ತದೆ. ನಾನದನ್ನೂ ಆಶ್ರಮದ ಉಪಯೋಗಕ್ಕೆ ಕೊಡುತ್ತೇನೆ. ನನಗೆ ಸ್ವಯಂನಿವೃತ್ತಿಯಿಂದ ಬರುವ ಪೆನ್ಷನ್ನಿನಿಂದ ನನ್ನ ಜೀವನ ನಡೆಯುತ್ತೆ. ಸ್ವಯಂ ನಿವೃತ್ತಿಗೆ ಅರ್ಜಿ ಪಡೆದುಕೊಂಡಿದ್ದೇನೆ.” ಎಂದಳು ಅರುಣಾ.

“ಹಾಗಾದರೆ ನೀವು ನನ್ನೊಡನೆ ಇರಲು ಬರುವುದಿಲ್ಲ” “ಇಲ್ಲಾ ಮಗಳೇ ನಿನಗೆ ಬದುಕನ್ನು ರೂಪಿಸಿಕೊಳ್ಳುವ ತಿಳಿವಳಿಕೆಯಿದೆ. ಇಷ್ಟವಾದರೆ ಯೋಗ್ಯನೊಬ್ಬನನ್ನು ಮದುವೆಯಾಗು. ಇಲ್ಲವೆಂದರೆ ಬೇಡಬಿಡು. ನಿರ್ಧಾರ ನಿನ್ನದು. ನನ್ನ ಶೇಷ ಬದುಕು ನನ್ನದು. ಹಿಂದಿನದ್ದನ್ನು ಮರೆಯಬೇಕಿದೆ. ನನ್ನದಾಗಿದ್ದ ಒಡವೆ, ಉಳಿತಾಯದ ಹಣವೆಲ್ಲವೂ ನಿನ್ನದೇ. ನನ್ನ ಉಡುಪುಗಳನ್ನು ಬಿಟ್ಟು ಬೇರೆ ಏನನ್ನೂ ನಾನು ಕೊಂಡೊಯ್ಯುವುದಿಲ್ಲ. ಅದೆಲ್ಲ ನಿರ್ಧಾರವಾಗಿದೆ. ಈಗ ಸದ್ಯ ನಿನ್ನಿಂದ ನನಗೊಂದು ಸಲಹೆ ಅಗತ್ಯವಿದೆ. ಇವತ್ತಿನ ಪೇಪರ್ ನೋಡಿದೆಯಾ? ವಿಷಯವೂ ನಿನಗೆ ಗೊತ್ತಾಗಿರಬೇಕು. ಧಾರವಾಡದಿಂದ ನಿನ್ನಪ್ಪನ ಹಿಂಬಾಲಕರು, ಅಭಿಮಾನಿಗಳು ಮನೆಗೆ ಬರಬಹುದು. ನನ್ನನ್ನು ಆಹ್ವಾನಿಸುತ್ತಾರೆ. ನಾನಂತೂ ಅವರ ಫೋನ್ ಕರೆಗಳಿಗೆ ಉತ್ತರಿಸಲಿಲ್ಲ. ನನ್ನ ಮೊಬೈಲ್ ನಂಬರನ್ನು ಯಾರಿಗೂ ನೀಡಬೇಡಿರೆಂದು ಕಾಲೇಜಿನ ಸಿಬ್ಬಂದಿಯವರೆಲ್ಲರಿಗೂ ತಿಳಿಸಿದ್ದೇನೆ. ಅವರೆಲ್ಲರೂ ಸಹಕರಿಸುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಅವರು ಬಂದಾಗ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಆ ಪುಣ್ಯಾತ್ಮನ ಬಿರುದು ಬಾವಲಿಗಳನ್ನು ಮತ್ತೊಮ್ಮೆ ಕೇಳಲು ನನಗೆ ಸಾಧ್ಯವಿಲ್ಲ. ಹೇಳು ನಾನೇನು ಮಾಡಬಹುದು.”

ತಾಯಿಯ ಭಾವನೆಗಳನ್ನು ಅರ್ಥಮಾಡಿಕೊಂಡ ಅಮೃತಾ ಒಂದು ನಿಮಿಷ ಆಲೋಚಿಸಿ ಅಮ್ಮನ ಕಿವಿಯಲ್ಲಿ ಏನೋ ಉಪಾಯವನ್ನು ಸೂಚಿದಳು. “ಹಾಗೇ ಮಾಡುತ್ತೇನೆ” ಎಂದು ಒಪ್ಪಿಕೊಂಡಳು ಅರುಣಾ.
ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹೊರಗಡೆ ಗೇಟಿನ ಸದ್ದಾಯಿತು. “ಅಮ್ಮಾ ಅಭಿಮಾನಿಗಳ ಸಂಘದವರು ಬರುತ್ತಿದ್ದಾರೆ. ನೀನು ರೂಮಿಗೆ ಹೋಗಿ ನಾನು ಹೇಳಿದಂತೆ ಮಾಡು” ಎಂದಳು. ಅದರಂತೆ ಅರುಣಾ ತನ್ನ ರೂಮಿನೊಳಕ್ಕೆ ಹೋದಳು.

ಬಾಗಿಲು ತೆರೆದ ಅಮೃತಾಳನ್ನು ಕಂಡವರೇ “ನೀನೂ ಬಂದಿದ್ದೀಯಾಮ್ಮ, ನಮ್ಮ ಕೆಲಸ ಹಗೂರಾಯಿತು. ಮೇಡಂಗೆ ಕೇಳಿ ನಿನ್ನನ್ನು ಆಹ್ವಾನಿಸಬೇಕೆಂದಿದ್ದೆವು.” ಎಂದು ಹೇಳುತ್ತ ಒಳಬಂದು ಹಾಲಿನಲ್ಲಿ ಕುಳಿತರು.
ಸ್ವಲ್ಪ ಹೊತ್ತು ಲೋಕಾಭಿರಾಮವಾದ ಮಾತುಕತೆ ನಡೆಯಿತು. ಯಥಾಪ್ರಕಾರ ಕಮಲಾಕರರ ಗುಣಗಾನ. “ನಿಮ್ಮ ತಂದೆಯವರು ಗುಲ್ಬರ್ಗಾಕ್ಕೆ ಬಂದವರು ಇಲ್ಲಿಯೇ ಠಿಕಾಣಿ ಹೂಡಿಬಿಟ್ಟರೆನ್ನುವಷ್ಟರಲ್ಲಿ ಪ್ರಮೋಷನ್ ಬಂದಾಗ ಮತ್ತೆ ಧಾರವಾಡಕ್ಕೆ ಬರಬಹುದಿತ್ತು. ಅದುಬಿಟ್ಟು ಮೈಸೂರಿಗೆ ಇಬ್ಬರೂ ಬಂದು ನೆಲೆಸಿದರು. ಆ ನಂತರ ಎಲ್ಲಿಗೂ ಹೋಗಲಿಲ್ಲ. ಈಗ ಎಲ್ಲವೂ ಮುಗಿದುಹೋದ ಕಥೆ. ಅದು ಸರಿ ಮೇಡಂ ಎಲ್ಲಿಯೂ ಕಾಣಿಸಲಿಲ್ಲ ಮಲಗಿದ್ದಾರೇನು?” ಎಂದು ಕೇಳಿದರು.

“ಅಯ್ಯೋ ಆ ವಿಷಯ ನಿಮಗೆ ಹೆಂಗೆ ಹೇಳಲಿ ಸಾರ್, ನಿಮ್ಮ ಹೆಸರೇನೋ ಮರೆತಿದ್ದೇನೆ” ಎಂದಳು.
“ಗಣೇಶಾಂತ, ಇವರು ವೀರೇಶ್, ಅವರು ಗಂಗಣ್ಣ”
“ಹಾ ! ಈಗ ನೆನಪಿಗೆ ಬಂತು. ದಯವಿಟ್ಟು ಬನ್ನಿ ಅಮ್ಮನನ್ನು ತೋರಿಸುತ್ತೇನೆ” ಎಂದು ಅರುಣಾಳ ರೂಮಿನೊಳಕ್ಕೆ ಕರೆದುಕೊಂಡು ಹೋದಳು. ಒಳಗೆ ದೀವಾನದ ಮೇಲೆ ಒಂದು ಬ್ಲಾಂಕೆಟ್ ಹೊದ್ದು ಕುಳಿತಿದ್ದ ಅರುಣಾ ಕಾಣಿಸಿದರು.
“ನಮಸ್ತೆ ಮೇಡಂ, ಏಕೆ ಹುಷಾರಿಲ್ಲವೇ? ಬಹಳಷ್ಟು ಸಾರಿ ತಮಗೆ ಫೋನ್ ಮಾಡಿದ್ದೆವು. ಯಾಕೋ ಸಿಗಲೇ ಇಲ್ಲ. ಇಲ್ಲಿಗೂ ಬಂದಿದ್ದೆವು. ಭೇಟಿಯಾಗಲು ಸಾಧ್ಯವಾಗಲಿಲಲ್ಲ, ಪಕ್ಕದವರು ಊರಿಗೆ ಹೋಗಿದ್ದಾರೆ ಎಂದು ಹೇಳಿದರು. ಬಹಳಷ್ಟು ವೀಕ್ ಆಗಿದ್ದೀರಂತ ಕಾಣುತ್ತದೆ. ಕಾಲೇಜಿನಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿರೆಂದು ತಿಳಿಯಿತು ನಿಜವೇ?” ಎಂದೆಲ್ಲ ಪ್ರಶ್ನಿಸಿದರು.
ಊಹುಂ. ಒಂದೇ ಒಂದು ಸೊಲ್ಲೂ ಅರುಣಾಳ ಬಾಯಿಂದ ಹೊರಬರಲಿಲ್ಲ. ಕುಳಿತಿದ್ದ ಭಂಗಿಯೂ ಬದಲಾಗಲಿಲ್ಲ. ಬಿಟ್ಟಕಣ್ಣು ಬಿಟ್ಟಹಾಗೆ ನೆಟ್ಟ ನೋಟದಿಂದ ಕದಲಲಿಲ್ಲ. ಅವಳಿಂದ ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ.
“ಇದೇನಮ್ಮಾ ಹೀಗೆ? ನಮಗೆ ನಂಬಲಾಗುತ್ತಿಲ್ಲ. ಏನಾಗಿದೆ ಮೇಡಂಗೆ?” ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳಿದರು.

‘ಹೂಂ ಸರ್, ಏನೂಂತ ಹೇಳಲಿ..ನಮ್ಮ ತಂದೆಯವರು ಅದೇ ನಿಮ್ಮ ಅಭಿಮಾನಿ ದೇವರು ಸ್ವರ್ಗಸ್ಥರಾದ ಮೇಲೆ ಸ್ವಲ್ಪ ದಿನ ಇವರು ಚೆನ್ನಾಗಿದ್ದರು. ಕ್ರಮೇಣ ನಿಧಾನವಾಗಿ ಮೌನಕ್ಕೆ ಜಾರುತ್ತಾ ಹೋದರು. ದೈಹಿಕವಾಗಿ ಯಾವ ತೊಂದರೆಯೂ ಕಾಣಲಿಲ್ಲ. ಆದರೆ ಮಾನಸಿಕವಾಗಿ ತುಂಬ ಕುಗ್ಗಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ಸ್ಪೆಷಲಿಸ್ಟ್ ಬಳಿ ಕೌನ್ಸಿಲಿಂಗ್ ಮಾಡಿಸುತ್ತಿದ್ದೇನೆ. ಇಲ್ಲಿ ಕೆಲವು ಮನೆಗೆ ಸಂಬಂಧಪಟ್ಟ ಕೆಲಸಗಳಿದ್ದವು ಒಬ್ಬಳನ್ನೇ ಅಲ್ಲೇ ಬಿಟ್ಟು ಬರಲಾಗದೇ ಅವರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದೇನೆ. ಅಪ್ಪ ಅಂತೂ ಹೋಗಿಬಿಟ್ಟರು, ಅಮ್ಮ ಇದ್ದೂ ಇಲ್ಲದಂತೆ ಆಗಿದ್ದಾರೆ” ಎಂದು ಹೇಳುತ್ತಾ ಕೈಲಿದ್ದ ಕರ್ಚೀಫಿನಿಂದ ಮುಖ ಮುಚ್ಚಿಕೊಂಡು ಬಿಕ್ಕಿದಳು.

“ಛೇ..ಛೇ..ಎಂತಹ ಕೆಲಸವಾಯಿತು. ಸರ್ ಅವರ ಅಗಲಿಕೆಯಿಂದ ಇವರಿಗೆ ಷಾಕ್ ಆಗಿರಬೇಕು. ಅಷ್ಟೊಂದು ವರ್ಷ ಒಟ್ಟಿಗೆ ಬಾಳ್ವೆ ನಡೆಸಿದವರಲ್ಲವೇ, ಹೀಗಾಗಬಾರದಿತ್ತು. ಅವರು ಖಾಯಿಲೆ ಕಸಾಲೆ ಆಗಿ ತೀರಿಹೋಗಿದ್ದರೆ ಇಷ್ಟೊಂದು ನೋವಾಗುತ್ತಿರಲಿಲ್ಲ. ಏನು ಮಾಡುವುದು” ಎಂದು ಒಬ್ಬರಿಗೊಬ್ಬರು ಮುಖ ನೋಡಿಕೊಂಡರು. ಏನೋ ನಿರ್ಧರಿಸಿಕೊಂಡವರಂತೆ “ಆಯಿತಮ್ಮಾ, ಮೇಡಂರವರ ಅನುಪಸ್ಥಿತಿಯಲ್ಲೇ ಸರ್‌ಗೆ ಶ್ರದ್ಧಾಂಜಲಿ ಅರ್ಪಣೆ ಮಾಡುತ್ತೇವೆ. ಇವರನ್ನು ಈ ಸ್ಥಿತಿಯಲ್ಲಿ ತೊಂದರೆ ಮಾಡಲಾಗದು. ಏನಾದರೂ ಹೆಚ್ಚು ಕಡಿಮೆಯಾದರೆ ಕಷ್ಟ. ಆದಷ್ಟು ಬೇಗ ಹುಷಾರಾಗಲಿ ಎಚ್ಚರಿಕೆಯಿಂದ ನೋಡಿಕೊಳ್ಳಮ್ಮ, ಇಲ್ಲಿ ತೆಗೆದುಕೊಳ್ಳಿ ಇದು ನನ್ನ ಕಾರ್ಡ್, ಏನಾದರೂ ಸಹಾಯ ಬೇಕಿದ್ದರೆ ನಿಸ್ಸಂಕೋಚವಾಗಿ ಫೋನ್ ಮಾಡಿ. ನಾವಿನ್ನು ಬರುತ್ತೇವೆ” ಎಂದು ಅವರೆಲ್ಲ ಹೊರನಡೆದರು.

ಬಂದವರೆಲ್ಲರೂ ಹೋದರೆಂದು ಖಚಿತವಾದ ಮೇಲೆ ಅರುಣಾ ರೂಮಿನಿಂದ ಹೊರಬಂದವಳೇ “ನನಗೆ ಇವರನ್ನು ನಿವಾರಿಸಿಕೊಳ್ಳಲು ನೀನು ಕೊಟ್ಟ ಸಲಹೆ ಬಹಳ ಚೆನ್ನಾಗಿ ಕೆಲಸಕ್ಕೆ ಬಂದಿತು ಮಗಳೇ. ನಿನಗೆಷ್ಟು ದನ್ಯವಾದ ಹೇಳಿದರೂ ಸಾಲದು” ಎಂದು ಮಗಳನ್ನು ಅಪ್ಪಿಕೊಂಡರು.

ಹುಟ್ಟಿದಂದಿನಿಂದ ಅಮ್ಮನ ಸ್ಥಿತಿ, ಮನೆಯ ಪರಿಸ್ಥಿತಿಯನ್ನರಿತಿದ್ದ ಅಮೃತಾ ತಾಯಿಯನ್ನು ಸಮಾಧಾನಪಡಿಸುವಂತೆ ಅವಳನ್ನು ತಾನೂ ಬಿಗಿದಪ್ಪಿಕೊಂಡಳು.

ಅಂತೂ ಇಂದಿಗೆ ತಾವು ನಿರ್ಧಾರ ಮಾಡಿಕೊಂಡಂತೆ ಮುಂದಿನ ಕ್ರಮದತ್ತ ಹೆಜ್ಜೆ ಹಾಕಲು ಸಿದ್ಧರಾದರು. ‘ಗೋಸುಂಬೆ’ ಯಂತೆ ತೋರಿಕೆಯ ಬದುಕು ನಡೆಸಿ ಜನರಿಗೆ ಮಹಾತ್ಮನಂತೆ ಪೋಸು ಕೊಡುತ್ತಿದ್ದ ಪತಿ ಕರುಣಾಕರನ ಪ್ರಭಾವದಿಂದ ಪೂರ್ತಿಯಾಗಿ ಹೊರಬಂದು ತನ್ನ ಮುಂದಿನ ಜೀವನದತ್ತ ಮುಖಮಾಡಿದಳು ಅರುಣಾ. ಅವಳ ಮನಸ್ಸಿನಲ್ಲಿ ಇಂಥಹ ಎಷ್ಟೋ ಜನ ಸಮಾಜಸೇವಕರು ಗೋಸುಂಬೆಗಳಾಗಿ ಲೂಟಿಕೋರರಾಗಿ ಮೆರೆಯುತ್ತಿದ್ದಾರೋ ಅವರಿಗೆಲ್ಲ ಇತಿಶ್ರೀ ಹಾಡುವವರು ಯಾರು ಎಂಬ ಆಲೋಚನೆ ಸುಳಿದಾಡಿತು.

ಬಿ.ಆರ್. ನಾಗರತ್ನ,ಮೈಸೂರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *