ನಾನು ಕಂಡುಂಡ ಕಾಶೀಯಾತ್ರೆ
ನಾಲ್ಕಾರು ದಶಕಗಳ ಹಿಂದೆ ತೀರ್ಥಯಾತ್ರಾಟನೆ ಮಾಡುವವರು 65-70 ವರ್ಷಗಳ ಮೇಲ್ಪಟ್ಟವರು ಎಂಬ ಮಾತು ಬಳಕೆಯಲ್ಲಿತ್ತು.ಯಾಕೆಂದರೆ ಆಗ ಪ್ರಯಾಣ ಸೌಲಭ್ಯ ಈಗಿನಂತೆ ಸುಲಭವಾಗಿರಲಿಲ್ಲ.ಅದಕ್ಕೂ ಹಿಂದೆ ಎಷ್ಟೇ ದೂರವಾದರೂ ನಡೆದೇ ಹೋಗಬೇಕಾದ ಅನಿವಾರ್ಯತೆ ಇತ್ತು. ಹೋದವರು ವಾಪಾಸು ಮನೆಸೇರುವರೆಂಬ ಭರವಸೆ ಇಲ. ನನ್ನ ಜೀವನದ ಸಂಜೆಯಾಯ್ತು.ಇನ್ನು ಕಾಶಿಯೋ ರಾಮೇಶ್ವರವೋ ತೆರಳುವುದು. ಎನ್ನುವ ಮಾತು ಹಿರಿಯರ ಬಾಯಲ್ಲಿ ಬರುತ್ತಿದ್ದುದು ಸಹಜ. ಆದರೀಗ… ಪ್ರಯಾಣ ಸುಲಭವೋ ಕೇಳಿದರೆ ಸುಲಭ. ಕಷ್ಟವೋ ಎನ್ನುವಿರಾದರೆ ಕಷ್ಟ!. ವಾಹನ ಸೌಲಭ್ಯದಲ್ಲಿ, ಪ್ರಸಿದ್ಧ ಕ್ಷೇತ್ರಗಳಿಗೆ ಹೋಗಿ ತಲಪುವುದು ಸುಲಭವಾಗಿರಬಹುದು ಆದರೆ..ಯಾವುದೇ ಪುಣ್ಯಕ್ಷೇತ್ರದಲ್ಲಿ ದೇವರ ದರ್ಶನ ಮಾಡಿ ಹಿಂತಿರುಗುವುದು ಸುಲಭ ಅಲ್ಲವೇ ಅಲ್ಲ!.ಆವರಣದ ಒಳಗಡೆ ಪ್ರವೇಶ ಆಗಬೇಕಿದ್ದರೆ; ನಾಲ್ಕಾರು ಕಡೆ ತಪಾಸಣೆ!, ಬಾಹ್ಯಪರೀಕ್ಷೆಗಳು,ನಿಮ್ಮ ಕೈಯಲ್ಲಿದ್ದ ಹಣ ಹಾಗೂ ನೀವು ಉಟ್ಟ ಬಟ್ಟೆ ಅಷ್ಟೇ ಕೊಂಡೊಯ್ಯುವ ಹಕ್ಕು!!. ಕಾಲಾಯ ತಸ್ಮ್ಯೆ ನಮಃ. ಆ ಕಾಲ ಹಾಗಿತ್ತು. ಈ ಕಾಲ ಹೀಗೆ!. ಎನ್ನೋಣವೇ?.
ತಯಾರಿಃ-ದಕ್ಷಿಣ ಭಾರತದಲ್ಲಿ ಕೆಲವಾರು ಪುಣ್ಯಕ್ಷೇತ್ರಗಳಿಗೆ ಹೋಗಿದ್ದೆ.ಆದರೆ ಉತ್ತರಭಾರತಕ್ಕೆ ಎಲ್ಲೂ ಹೋಗಿಲ್ಲ; ಅವಕಾಶ ಬಂದಿಲ್ಲ ಎಂಬ ಕೊರತೆ ಮನದೊಳಗೆ ಕೂತಿತ್ತು. ಹೀಗಿದ್ದ ದಿನಗಳಲ್ಲಿ; ಕಾಸರಗೋಡು ಶ್ರೀವಿನಾಯಕ ಟೂರ್ & ಟ್ರಾವೆಲ್ಸ್ ನವರ ಒಂದು ಯಾತ್ರಾ ಆಹ್ವಾನ ಇತ್ತಾಗಿ ನಾಲ್ಕಾರು ಜನ ಪರಿಚಯದವರೂ ಸೇರಿಗೊಂಡು ಟಕೆಟ್ ಬುಕ್ ಮಾಡಿದೆವು.
ದಿನನಿಗದಿಃ-ವಿನಾಯಕ ಟೂರ್& ಟ್ರಾವೆಲ್ಸನ ಎಡ್ಮಿನ್ ಶ್ರೀಯುತ ಚಂದ್ರಮಾಸ್ಟ್ರು ಬರುವವರಿಗಾಗಿ ಯಾತ್ರೆಯ ಪೂರ್ವಬಾವಿಯಾಗಿ ಮಲ್ಲ ದೇವಸ್ಥಾನದಲ್ಲಿ ಒಂದು ಸಬೆ ಕರೆದರು. ಟೂರಿನ ಖರ್ಚು ತಲಾ ಹನ್ನೊಂದು ಸಾವಿರ ಹಾಗೂ ಅಡ್ವಾನ್ಸಾಗಿ ನಾಲ್ಕು ಸಾವಿರ ರೂ ಪಾವತಿಸಬೇಕೆಂದು ನಿರ್ಣಯವಾಯಿತು.ಯಾತ್ರೆಗೆ ಹೆಸರು ನೋಂದಾಯಿಸಿದವರು ೬೮ ಮಂದಿ ಇದ್ದರು. ನೋಟೀಸಿನಲ್ಲಿ ಉಲ್ಲೇಖಿಸಿದಂತೆ ಕಾಶಿ-ಅಯೋಧ್ಯಾ-ಹೃಷಿಕೇಶ-ಹರಿದ್ವಾರ-ಡೆಲ್ಲಿ ಸ್ಥಳಗಳಿಗೆ ಯಾತ್ರೆ. ಇದಕ್ಕಾಗಿ 6-10-2017ಕ್ಕೆ ಕಾಸರಗೋಡು ರೈಲ್ವೇ ಸ್ಟೇಶನಿಗೆ 4-30 ಅಪರಾಹ್ನ ಎಲ್ಲರೂ ಸೇರಬೇಕೆಂದೂ ಪೂರ್ವಯೋಜಿತದಂತೆ 13 ದಿನಗಳ ಯಾತ್ರೆ ಊಟ+ವಸತಿ ಸಹಿತ ಎಂದು ಎಡ್ಮಿನ್ ತಿಳಿಸಿದರು. ಲಗೇಜ್ ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಿ ದೊಡ್ಡ ಟೂರಿಸ್ಟ್ ಬ್ಯಾಗ್ ಬೇಡ, ಒಂದು ಊಟದತಟ್ಟೆ,ಮಗ್,ಲೋಟ ಮೂರ್‍ನಾಲ್ಕು ಡ್ರೆಸ್‌ಸಹಿತ ಸಣ್ಣ ಬ್ಯಾಗ್ ಸಾಕು.ಡ್ರೆಸ್ ತೊಳೆದುಕೊಳ್ಳಲು ಕೆಲವು ಕಡೆ ಅವಕಾಶ ಇದೆಎಂದರು.
ಹೊಸಹುರುಪುಃ-ದಿನ ನಿಗದಿಯಾದಂತೆ 6-10-2017 ರಂದು ನಾವೆಲ್ಲಾ ಹೊಸ ಉತ್ಸಾಹದಲ್ಲಿ ತೀರ್ಥಯಾತ್ರೆಗೆ ಹೊರಟೆವು.ನನ್ನ ಸ್ನೇಹಿತರೂ ಬಂಧುಗಳೂ ಆದ ಎಡನಾಡು ದೊಡ್ಡಮಾಣಿ ಕೃಷ್ಣಭಟ್+ಸಾವಿತ್ರಿ ದಂಪತಿಗಳ ಜೊತೆ ಅವರ ಕಾರಿನಲ್ಲಿ ದೊಡ್ಡ ಬ್ಯಾಗ್ ಸಹಿತ ನಾನು ಹೊರಟೆ.ಏನಿಲ್ಲೆಂದರೂ ಒಂದು ಹೊದಿಕೆ, 13 ದಿನಕ್ಕೆ ಆರು ಪ್ರತಿಯಾದರೂ ಡ್ರೆಸ್,ಚಳಿಗೆ ಸ್ವೆಟರ್, ತಗೊಳದೇ ಹೋದರೆ..,ಎಲ್ಲಾ ಕಡೆ ಬಟ್ಟೆ ತೊಳೆಯಲು ಅವಕಾಶ ಸಿಗದೇ ಹೋದರೆ..?,ಅಷ್ಟು ತುಂಬಿಸಲು ಬ್ಯಾಗ್ ದೊಡ್ಡದೇ ಆಗಿತ್ತು.
ಯೋಚಿಸಿದಂತೆ ಅಪರಾಹ್ನ 4-30 ಕ್ಕೆ ಕಾಸರಗೋಡು ರೈಲ್ವೇ ಸ್ಟೇಶನಲ್ಲಿ ನಮ್ಮ ತಂಡದ ಪ್ರಯಾಣಿಕರೆಲ್ಲರೂ ಸೇರಿದೆವು. 5-30 ಕ್ಕೆ ನಮ್ಮ ಗಾಡಿ ಬಂತು. ಲಗುಬಗೆಯಿಂದ ಗಾಡಿ ಹತ್ತಿದೆವು. ನಮಗೆ ಎಲ್ಲರಿಗೂ ಒಂದೇ ಬೋಗಿಯಲ್ಲ. ನಮ್ಮ ಯಾತ್ರಾ ಯಜಮಾನ ಚಂದ್ರಮಾಸ್ಟರ್ ಟಿಕೆಟ್ ಲಿಸ್ಟ್ ನೋಡಿಕೊಂಡು ಸೀಟು ಹುಡುಕಿಕೊಡುವಲ್ಲಿ ಸಹಕರಿಸಿ ಅಂತೂ ಒಂದರ್ಧ ತಾಸಿನಲ್ಲಿ ಎಲ್ಲರೂ ನಿಶ್ಚಿಂತೆಯಿಂದ ಅವರವರ ಆಸನದಲ್ಲಿ ಕೂರುವಂತಾಯಿತು. ರಾತ್ರಿಯಿಡೀ ಪ್ರಯಾಣಮಾಡಿದ ಬಂಡಿ ಮಾರಣೆದಿನ ಬೆಳಗ್ಗೆ 8-30 ಕ್ಕೆ ಚೆನ್ನೈ ಸ್ಟೇಶನ್ ತಲುಪಿದೆವು. ಅಲ್ಲಿ ನಮಗೆ ಒಂದಷ್ಟು ಹೊತ್ತು ಉಳಕೊಳ್ಳಲು ಒಂದು ದೊಡ್ಡ ಹಾಲ್ ಹಾಗೂ ಎರಡು ಬಾತ್ ರೂಮು,ಟಾಯಿಲೆಟ್ ಬುಕ್ ಮಾಡಿದ್ದರು. ಅಲ್ಲಿ ನಮ್ಮ ಸ್ನಾನ ಉಪಹಾರ+ಊಟಾದಿಗಳನ್ನು ಮುಗಿಸಿ ಅಲ್ಲಿಂದ ಅಪರಾಹ್ನ ಗಂಗಾಕಾವೇರಿ ಎಕ್ಸ್‌ಪ್ರೆಸ್‌ಲ್ಲಿ ಎರಡುದಿನಗಳ ಪ್ರಯಾಣ ವಾರಣಾಸಿಗೆ.ಎರಡುದಿನ ರೈಲು ಪ್ರಯಾಣ ಸುಖಕರವಾಗಿತ್ತು. ಊಟ, ಟಿಫಿನ್ ವಗೈರೆ, ಬಂಡಿಯಲ್ಲೇ ತರಿಸಿಕೊಂಡು ತಿಂದೆವು. ಒಂದೇ ಮನೆಯವರಂತೆ ಸುಖ-ದು:ಖಗಳ ವಿನಿಮಯ, ಇನ್ನಿತರಕಡೆ ಪ್ರಯಾಣ ಮಾಡಿದ ಅನುಭವಗಳು ಪರಸ್ಪರ ವಿನಿಮಯವಾಯ್ತು. 9 ನೇ ತಾರೀಕು ಬೆಳಗ್ಗೆ 10 ಗಂಟೆಗೆ ವಾರಣಾಸಿ ತಲುಪಿ ಅಲ್ಲಿ ಮೊದಲೇ ಬುಕ್ ಮಾಡಿದ ಕೊಠಡಿಗೆ ಕರೆದೊಯ್ದರು. ಅಲ್ಲಿ ಒಂದು ರೂಮಿನಲ್ಲಿ ನಾಲ್ಕು ಮಂದಿಯಂತೆ ಉಳಕೊಳ್ಳಲು ಏರ್ಪಾಡು ಮಾಡಿದರು. ಅಲ್ಲಿ ತಿಂಡಿ-ಕಾಫಿ ಮುಗಿಸಿದಾಗ 11-30 . ಕಾಶಿಯ ಗಂಗಾತೀರದಲ್ಲಿ ಮೊದಲೇ ನಿಯೋಜಿಸಿದ ಪುರೋಹಿತರಲ್ಲಿ ವಿಚಾರಿಸಿದಾಗ ನಮಗೆ ಪಿತೃಕಾರ್ಯಕ್ಕೆ ಮಾರಣೆದಿನ(10-10-2017) ಬೆಳಗ್ಗೆ ಬರುವಂತೆ ಹೇಳಿದರು.ನಮಗೆ ಅಡಿಗೆ ಮಾಡಿಹಾಕುವುದಕ್ಕಾಗಿ ಇಬ್ಬರು ಅಡುಗೆಯವರನ್ನು ನಮ್ಮ ಚಂದ್ರಮಾಸ್ತರ್ ಜೊತೆಯಲ್ಲೆ ಕರೆದೊಯ್ದಿದ್ದರು. ಎಲ್ಲರೂ ಸ್ನಾನ ಮುಗಿಸಿ ಬಂದಾಗ ಊಟ ತಯಾರಾಗಿತ್ತು.ಊಟ ತೀರಿಸಿ ತುಸು ವಿಶ್ರಾಂತಿ ಮಾಡಿ ಎದ್ದಾಗ ಚಾ ರೆಡಿಯಾಗಿತ್ತು. ಚಾ ಕುಡಿದು ಅಲ್ಲೇ ಆಸುಪಾಸಿನಲ್ಲಿರುವ ದೇವಸ್ಥಾನ ಸುತ್ತಿದೆವು.
ಕಾಶಿಯಲ್ಲಿ ಪಿತೃಕಾರ್ಯ- ಮೊದಲೇ ಮಾತನಾಡಿದಂತೆ ವೇದಮೂರ್ತಿ ವಿಶ್ವೇಶ್ವರ ಶಾಸ್ತ್ರಿಗಳೊಡನೆ ದೂರವಾಣಿಯಲ್ಲಿ ಸಂಪರ್ಕ ಮಾಡಲಾಯಿತು. ಅವರು ಸೋಮೇಶ್ವರ ಶಾಸ್ತ್ರಿಗಳ ಮಗ.ಆಂದ್ರದ ಮೂಲದವರಾದರೂ ಅವರು ಕನ್ನಡದಲ್ಲಿ ಮಾತನಾಡಿ ಸರಿಯಾಗಿ ವ್ಯವಹರಿಸುವುದರಲ್ಲಿ ನಿಪುಣರು. ಅವರಲ್ಲಿಗೆ ನಿಗದಿ ಮಾಡಿದ ಸಮಯಕ್ಕೆ ಹೋದೆವು.ನಾವು ನಮ್ಮ ಬಳಗದ ಸಂಬಂಧಿಕರಾಗಿ;ನಾನು+ದೊಡ್ಡಮಾಣಿ ಕೃಷ್ಣಭಟ್+ಅವರ ಸಹಧರ್ಮಿಣಿ, ಸಾವಿತ್ರಿಅಕ್ಕ, ಒಡಂಕ್ಕಲ್ಲು ಶ್ಯಾಂಭಟ್+ಅವರ ಪತ್ನಿ ಜಯಕುಮಾರಿ ಅತ್ತಿಗೆ ಹೀಗೆ ಐದು ಮಂದಿ ಇದ್ದೆವು. ಟೂರಿನ ಸೆಟ್‌ನಲ್ಲಿದ್ದ 68 ಮಂದಿ ಸಹಿತ ಪುರೋಹಿತರಲ್ಲಿಗೆ ಹೋಗಿ ಅವರು ಹೇಳಿದ ನಗದುಹಣ ಹಾಗೂ ನಮ್ಮ ನಮ್ಮ ಹೆಸರು, ವಿಳಾಸ ಕೊಟ್ಟೆವು. ಇದಕ್ಕಾಗಿ ಎರಡು ಗಂಟೆ ಸಮಯ ಹಿಡಿಯಿತು.ಅವರು ಸೂಚಿಸಿದಂತೆ ಕೆಳಗೆ ಗಂಗಾನದಿಗಿಳಿದು ಮುಳುಗುಹಾಕಿ ಮಿಂದು ಬಟ್ಟೆಬದಲಾಯಿಸಿ ಬಂದೆವು.ತೀರ್ಥಸ್ನಾನ ಒಂದು ಹಿತವಾದ ಅನುಭವ. ಅಕ್ಟೋಬರ ತಿಂಗಳಾದರೂ ಅಲ್ಲಿ ಚಳಿಯ ಸುಳಿವಿಲ್ಲ. ಮಿಂದು ಬಂದವರನ್ನು ಮೇಲೆ ಶೀಟ್ ಹಾಕಿದ ಚಪ್ಪರದಡಿ ಸಾಲಾಗಿ ಕುಳ್ಳಿರಿಸಿದರು.ಅದು ಮಣಿಕರ್ಣಿಕಾ ಘಾಟ್. ನಮಗೆಲ್ಲಾ ಒಂದೊಂದು ಪತ್ರಾವಳಿ ನೀಡಿ, ಅದರಲ್ಲಿ ಗೋದಿಹಿಟ್ಟಿನ ಒಂದು ದೊಡ್ಡ ಉಂಡೆ, ಎಳ್ಳಿನಕಾಳು, ದರ್ಬೆ,ಅಕ್ಕಿಕಾಳು,ಅರಿಶಿನ,ಕುಂಕುಮ, ಬಾಳೆಹಣ್ಣು. ಲೋಟದಲ್ಲಿ ನೀರು.ಇವಿಷ್ಟು ಎಲ್ಲರಿಗೂ ಬಂದಮೇಲೆ ಪುರೋಹಿತರು;ಎಲ್ಲರನ್ನೂ ಲೈನಿನಲ್ಲಿ ಕುಳಿತುಗೊಳ್ಳಿಸಿ ಸಮಷ್ಟಿಯಲ್ಲಿ ಮಾಡಿಸುವುದಕ್ಕೆ ತೊಡಗಿದರು.ದರ್ಬೆಯನ್ನು ಬೆರಳಿಗೆ ಹಾಕುವಂತೆ ಸೂಚಿಸಿ,ಪವಿತ್ರ ಬೆರಳಿಗೆ ಹಾಕಿಕೊಳ್ಳಲು ತಿಳಿಸಿದರು.
ಇನ್ನೀಗ ಪಿತೃಕಾರ್ಯ ಆರಂಭ. ಗೋದಿಹಿಟ್ಟಿನ ದೊಡ್ಡ ಉಂಡೆಯಲ್ಲಿ ಇಪ್ಪತ್ತೊಂದು ಚಿಕ್ಕ ಚಿಕ್ಕ ಉಂಡೆ ಹಾಗೂ ಒಂದು ಸ್ವಲ್ಪ ದೊಡ್ಡ ಆಕೃತಿಯ ಉಂಡೆ ಮಾಡಲು ಸೂಚಿಸಿದರು.ಇದುವೇ ಪಿಂಡ. ಮುಂದೆ ದರ್ಬೆಕಡ್ಡಿಗಳನ್ನು ಮೂರು ವಿಭಾಗ ಮಾಡಿ ಪತ್ರಾವಳಿಯ ಹೊರಗೆ ನೆಲದಮೇಲೀಟ್ಟು ಸಂಸ್ಕೃತದಲ್ಲಿ ಕ್ರಿಯಾಭಾಗವನ್ನು ನಮೂದಿಸುತ್ತಾ ಪ್ರತಿಯೊಂದು ಗೋದಿ ಉಂಡೆಯನ್ನು ದರ್ಬೆಯ ಪದರದ ಮೇಲಿಡುವುದು.ಪ್ರತಿಯೊಬ್ಬರ ಮುಂದೆ ಬಂದು ಅವರವರ ಸಂಬಂಧದಲ್ಲಿ ಹಿರಿಯರಾದಿಯಾಗಿ ಗತಿಸಿದವರ ಗೋತ್ರ, ಸಂಬಂಧ,ಹೆಸರು ಹೇಳುತ್ತಿದ್ದಂತೆ ಎಳ್ಳು+ ಅಕ್ಕಿಕಾಳಿನ ಜೊತೆಗೆ ಗಂಗೋದಕದಿಂದ ತರ್ಪಣ ಬಿಡುವುದು.ಆ ಮೇಲೆ ಪಿಂಡ ನೈವೇದ್ಯ ಬಾಳೆಹಣ್ಣಿನಿಂದ. ಸಾದಾರಣ ಒಂದೂವರೆ,ಎರಡುತಾಸುಗಳಷ್ಟು ಕ್ರಿಯಾಭಾಗ ಮುಗಿದಮೇಲೆ; ಮುಂದೆ ಸೇರಿದವರೆಲ್ಲರಿಗೂ ಶುಭಮಂತ್ರಾಕ್ಷತೆ. ಆ ಮೇಲೆ ಪಿಂಡವನ್ನು ಗಂಗೆಯಲ್ಲಿ ಬಿಡುವುದು. ದರ್ಬೆ,ಇತರ ಕಸಕಡ್ಡಿಗಳನ್ನು ನೀರಿಗೆ ಹಾಕದೆ ಬದಿಯಲ್ಲಿ ಪ್ರತ್ಯೇಕ ಇರಿಸುವುದಕ್ಕೆ ಸೂಚಿಸಿದರು.ಇದೀಗ ಮೋದಿಯ ಆಳ್ವಿಕೆಯಲ್ಲಿ ಗಂಗೆಯ ಸ್ವಚ್ಛತೆಗಾಗಿ ಎಂದರು ಪುರೋಹಿತರು. ಗಂಗಾನದಿಯಲ್ಲಿಯಾಗಲೀ ದಡದಲ್ಲಾಗಲೀ ಯಾವುದೇ ಶವವೋ ಅಸ್ತಿಪಂಜರವಾಗಲೀ ನಮಗೆ ಕಾಣಸಿಗಲಿಲ್ಲ.ಗಂಗಾಜಲ ಸ್ವಚ್ಛ, ಶುಭ್ರವಾಗಿತ್ತು.
ಕಾಶಿವಿಶ್ವನಾಥನ ದರ್ಶನಃ-ಗಂಗಾತೀರದಲ್ಲಿ ಪಿತೃಕಾರ್ಯ ಮಾಡಿದಮೇಲೆ ಒಂದು ಕಿಲೋಮೀಟರ್‍ನಷ್ಟು ದೂರದ ದೇವಸನ್ನಿಧಿಗೆ ನಡೆದು ಹೋದೆವು. ಕಾಶಿ ವಿಶ್ವನಾಥನ ದರ್ಶನಕ್ಕೆ ಮೊದಲು ನಮ್ಮ ಟೂರ್ ಕಂಡೆಕ್ಟರ್ ಶ್ರೀಯುತ ಚಂದ್ರಮಾಸ್ಟ್ರು ದೇವಸನ್ನಿಧಿಗೆ ಹೋಗುವ ಎರಡನೇ ದ್ವಾರದಲ್ಲಿ ಎಲ್ಲರನ್ನು ಕುಳ್ಳಿರಿಸಿ ಸಭೆಮಾಡಿ ಗುಂಪಿನಿಂದ ಯಾರಾದರೂ ತಪ್ಪಿಹೋದಲ್ಲಿ ಇದೇ ದ್ವಾರದೊಳಗೆ ಬಂದು ನಿಲ್ಲಬೇಕೆಂದೂ ಊಟಕ್ಕೆ ನಮ್ಮ ರೂಮಿಗೇ ವಾಪಾಸಾಗುವುದೆಂದೂ ಸೂಚನೆ ಕೊಟ್ಟು; ನಮ್ಮ ನಮ್ಮ ಬ್ಯಾಗುಗಳನ್ನು ಮೊಬೈಲು ಸಮೇತ ಅಲ್ಲಿರಿಸಲು ಹೇಳಿದರು.
ದೇವದರ್ಶನಃ-ದೇವಳದೊಳಗೆ ನಾವು ನಮ್ಮ ನಮ್ಮ ಗುಂಪಿನಲ್ಲಿ ಹೋದೆವು. ಸರಿಯಾಗಿ ವಿಶ್ವನಾಥನ, ಅನ್ನಪೂರ್ಣೇಶ್ವರಿಯ ಇತರ ಉಪ ದೇವರ್ಕಳ ದರ್ಶನ ಮಾಡಿದೆವು. ವಿಶ್ವನಾಥನಿಗೆ ಯಾತ್ರಾರ್ಥಿಗಳೇ ಪೂಜೆ ಸಲ್ಲಿಸುವ ಏರ್ಪಾಟು!.ಅದೊಂದು ಮನಸ್ಸಿಗೆ;ಕೃತಾರ್ಥಭಾವ ಮುದನೀಡುವ ಉಪಾಸನೆ!!.ದಕ್ಷಿಣದ ಗೋಕರ್ಣದಲ್ಲಿ ಬಿಟ್ಟರೆ ನಾನು ಇಲ್ಲಿಯೇ ದೇವೋಪಾಸನೆ ಮಾಡಿದ್ದು!!!.
ಅನ್ನಪೂರ್ಣೇಶ್ವರಿ ಕೃಪೆಃ- ನಾವು ಐವರು ಜೊತೆಯಲ್ಲಿ ಅನ್ನಪೂರ್ಣೆ ದೇವಿಯೆಡೆಗೆ ಮುಂದೆ ಸಾಗುತ್ತಿದ್ದಂತೆ ಅಲ್ಲಿಯವರು ಊಟದ ಕೂಪನ್ ಕೊಟ್ಟು; ಊಟಮಾಡಿಯೇ ಹೋಗಿ ಊಟಕ್ಕೆ ದುಡ್ಡು-ಕಾಸು ಕೊಡಬೇಕಾಗಿಲ್ಲ ಎಂದರು. ನಮ್ಮೊಳಗೆ ಸಮಾಲೋಚನೆ ಮಾಡಿ ಬೇಡ, ನಮ್ಮನ್ನು ಇತರರು ಕಾಯುತ್ತಾರೆ ಎಂದು ಹೊರಡಲನುವಾದಾಗ ಇದು ಅನ್ನಪೂರ್ಣೇಶ್ವರಿಯ ಕೃಪೆ, ಇದನ್ನು ತಿರಸ್ಕರಿಸಿ ಊಟಮಾಡದೆ ಹೋಗಬೇಡಿ.ಬನ್ನಿ, ಬನ್ನಿ ಬಲವಂತದಿಂದ ಒತ್ತಾಯಿಸುವಾಗ;ಅದೂ ಈ ಪುಣ್ಯಕ್ಷೇತ್ರಕ್ಕೆ ಬಂದಾಗ ಅಲ್ಲಗಳೆದು ಹೋಗಬಹುದೇ! ಏನು ಮಾಡುವುದು? ಪಿತೃಕಾರ್ಯ ಮಾಡಿದಮೇಲೆ ಸಾನ್ನಿಧ್ಯದಲ್ಲಿ ಊಟ ತೀರಿಸದೆ ಹೋದರೂ ಒಳ್ಳೆಯದಲ, ಎಂಬ ಹಿರಿಯರ ನುಡಿಯೂ ಇದೆ. ಮಧ್ಯಾಹ್ನ ಎರಡು ಗಂಟೆಯ ಹೊತ್ತು.ನಮಗೂ ಹೊಟ್ಟೆಚುರುಗುಟ್ಟುತ್ತಿತ್ತು.ಎಲ್ಲಾ ಯೋಚನೆಗಳು ಊಟದತ್ತ ಪಾದಬೆಳೆಸುವಲ್ಲಿ ಶರಣಾಯಿತು, ಹೋದೆವು. ನೋಡಿದರೆ ನಮ್ಮ ಪಂಗಡದ ನಾಲ್ಕಾರು ಮಂದಿಯೂ ಊಟ ಮಾಡುತ್ತಿದ್ದರು.
ಪುಷ್ಕಳ ಭೋಜನಃ-ಊಟದ ಕೊಠಡಿಯನ್ನು ನೋಡಿದಾಗಲೇ ಮೆಚ್ಚಿಗೆಯಾಯ್ತು. ಟೇಬಲ್ ಸಿಸ್ಟಮ್,ನಿಯಮಬದ್ಧ ಬಡಿಸುವಿಕೆ.ಊಟಕ್ಕೆ ಎರಡುಬಗೆ ಪಲ್ಯ, ಹಪ್ಪಳ(ವಿಶೇಷರೀತಿ, ನೋಡಿದರೆ ಹಲಸಿನ ಹಪ್ಪಳದಂತೆ). ಸಾರು, ಸಾಂಬಾರು, ಚಿತ್ರಾನ್ನ, ಗಸಿ,ಪಾಯಸ,ಸ್ವೀಟು[ರಸಗುಲ್ಲ],ಜೊತೆಗೆಮೊಸರು,ಉಪ್ಪಿನಕಾಯಿ.ಭರ್ಜರಿ ಮದುವೆಊಟದಂತಿತ್ತು.ಊಟ ತೀರಿಸಿ ಅನ್ನಪೂರ್ಣೇಶ್ವರಿಯ ಕೃಪೆ ಎಂಬ ತೃಪ್ತಿಯಿಂದ ಹೊರಬಂದೆವು.
ಊಟದ ಪೇಚಾಟಃ-ನಾವು ಐದುಮಂದಿ ಹೊರತಾಗಿ ನಮ್ಮ ಪ್ರವಾಸಗುಂಪಿನ ಇತರರನ್ನು ಹೊರಗೆಲ್ಲೂ ಕಾಣದಾದಾಗ ನಮ್ಮ ಕಂಡೆಕ್ಟರ್ ಹೇಳಿದಂತೆ ಎರಡನೇ ಗೇಟಿಗೆ ಬಂದು ನೋಡಿದೆವು. ಊಹೂಂ..,ಇಲ್ಲ ಅಲ್ಲೂ ಕಾಣದಾದರು!. ನಮ್ಮ ಬ್ಯಾಗ್ ಚಪ್ಪಲಿಗಳೂ ಇಲ್ಲ!!.ಈಗ ನಾನಂತೂ ಕಕ್ಕಾಬಿಕ್ಕಿಯಾದೆ!!!. ಪರ್ಸ್ ಹೋದರೂ ಅಡ್ಡಿ ಇಲ್ಲ. ಆದರೇ..ಮೊಬೈಲು ಇಲ್ಲದೆ ಯಾವುದೂ ಕಾರ್ಯವಿಲ್ಲ. ವಿಶ್ವನಾಥಾ ಮೊಬೈಲು ದಕ್ಕುವಂತೆ ಮಾಡಪ್ಪಾ ಎಂದು ಮತ್ತೊಮ್ಮೆ ಮಗದೊಮ್ಮೆ ಕೈಮುಗಿದೆ. ದೇವರಿಗೆ ಮೊರೆಯಿಟ್ಟೆ.ಚಿಂತಾಕ್ರಾಂತರಾಗಿ ನಮ್ಮ ರೂಮಿಗೆ ಹೊರಟೆವು. ತುಸು ದೂರ ಸಾಗಿದಾಗ ನಮ್ಮ ಬಳಗದವರೊಬ್ಬರು ಸಿಕ್ಕಿ ನಮ್ಮ ಚಂದ್ರಮಾಸ್ಟ್ರು ಸಹಿತ ಎಲ್ಲರೂ ರೂಮಿಗೆ ಹೋಗಿದ್ದಾರೆ ಎಂದರು. ನಾವು ಬೇಗಬೇಗನೆ ಹೆಜ್ಜೆಹಾಕುತ್ತಾ ರೂಮಿಗೆ ಹೋದಾಗ ಅವರೆಲ್ಲ ಅಲ್ಲಿ ಊಟಮಾಡುತ್ತಿದ್ದರು.ಲಗುಬಗೆಯಿಂದ ನಮ್ಮ ರೂಮಿಗೆ ನುಗ್ಗಿದ ನಾನು ನನ್ನ ಬ್ಯಾಗು,ಅದರೊಳಗೆ ಮೊಬೈಲು ಕಂಡು; ತಪ್ಪಿಸಿಕೊಂಡ ಮಗುವನ್ನು ಹುಡುಕುತ್ತಿದ್ದ ಅಮ್ಮನ ಮಡಿಲಿಗೆ ಮಗು ಬಂದು ಸೇರಿದಂತೆ ಸಂತೋಷ ಪಟ್ಟೆ!!.
ಚಂದ್ರಮಾಸ್ಟ್ರ ಮುಖದಲ್ಲಿ ಅಸಮಾಧಾನದ ಚಿಹ್ನೆ.ಅಲ್ಲಿಯ ಭಟ್ಟರ ಒತ್ತಾಯ,ಪಿತೃಕಾರ್ಯ ಮಾಡಿದ ಸಾನ್ನಿಧ್ಯದಲ್ಲಿ ನಮಗೆ ಊಟ ತೀರಿಸದೆ ಹೋಗಬಾರದು ಎಂಬ ಶಾಸ್ತ್ರ, ಇದೆಲ್ಲ ತಿಳಿಸಿದಾಗ ಸ್ವಲ್ಪ ಸಮಾಧಾನ ತಾಳಿ ಮೊದಲಿನಂತಾದರು.
ಗಂಗಾರತಿಃ-ಸ್ವಲ್ಪ ವಿಶ್ರಾಂತಿ ಮಾಡಿ, ಟೀ ಕುಡಿದು ಸಂಜೆ ಗಂಗಾರತಿಗೆ ಹೋಗುವುದೆಂದು ತೀರ್ಮಾನವಾಯ್ತು. ಹಾಗೆ ನಾವೆಲ್ಲ ಒಂದಿನಿತು ಬೆಡ್ಡಿನಲ್ಲಿ ಅಡ್ಡಾದೆವು. ಹೊರಗಿನಿಂದ ಟೀ..ಟೀ ಎಂದು ಕೂಗುವುದು ಕೇಳಿದೊಡನೆ ಲಗುಬಗೆಯಿಂದ ಎದ್ದೆವು.ಟೀ ಕುಡಿಯಲು ಹೋದಾಗ ನಮ್ಮ ನಾಲ್ಕೈದು ಮಂದಿ ಬಿಟ್ಟು ಉಳಿದವರೆಲ್ಲರೂ ಗಂಗಾರತಿಗೆ ರೆಡಿಯಾಗಿಯಾಗಿದ್ದರು. ನಾವು ಆದಷ್ಟು ಬೇಗನೆ ರೆಡಿಯಾಗಿ ಹೊರಗಿಳಿದಾಗ ಎಲ್ಲರೂ ಹೋಗಿಯಾಗಿತ್ತು. ನಾವು ಐವರು ಹೊರಗೆ ರಸ್ತೆ ಬದಿಗೆ ಬಂದು ಸ್ವಲ್ಪ ದೂರ ಸಾಗಿದರೂ ನಮ್ಮ ತಂಡದವರಾರೂ ನಮ್ಮ ಕಣ್ಣಿಗೆ ಗೋಚರಿಸದಿದ್ದಾಗ ಯಾವ ತಿರುವಿನಲ್ಲಿ ಹೋಗಬೇಕೆಂದು ಅರಿಯದಾದಾಗ ತಳಮಳಗೊಂಡೆವು. ಅಟೋರಿಕ್ಷಾದವರಲ್ಲಿ ಬಿಡಲು ಕೇಳಿದಾಗ ಗಂಗಾರತಿ ತೀರಕ್ಕೆ ಅಟೋ ಹೋಗುವುದಕ್ಕೆ ಪರ್‍ಮಿಷನ್ ಇಲ್ಲವೆಂದೂ ಅದು ನಡೆದು ಹೋಗಬಹುದಾದ ದೂರವೆಂದೂ ತಿಳಿಸಿದರು. ಈ ಪೇಚಾಟದಲ್ಲಿ ನಮ್ಮ ಐವರ ಪೈಕಿ ಮೂವರೂ ರೂಮಿಗೆ ವಾಪಾಸು ಹೋಗೋಣವೆಂಬ ಸಲಹೆ ವ್ಯಕ್ತಪಡಿಸಿದರು. ಇಲ್ಲ ನಾವಿಷ್ಟು ದೂರಬಂದು ಗಂಗಾರತಿ ತಪ್ಪಿಸಿಕೊಂಡರೆ ಹೇಗೆ..? ನನ್ನ ಇಂಗಿತ ಸೂಚಿಸಿದಾಗ ಒಡಂಕಲ್ಲು ಶ್ಯಾಮಭಟ್ಟರು ಸಹಮತವಿತ್ತರು. ದಾರಿ ಕೇಳಿಕೊಂಡು ಹೋಗಿ ಅಂತೂ ಗಂಗಾತೀರಕ್ಕೆ ತಲುಪಿ ಗಂಗಾರತಿ ಕಣ್ತುಂಬ ನೋಡಿದೆವು.ಎರಡು ಗಂಟೆಯ ಹೊತ್ತು ನಡೆದ ಈ ಧಾರ್ಮಿಕ ವಿಧಿ ನಿಜಕ್ಕೂ ಅದ್ಭುತ ವೀಕ್ಷಣೆ!.ಗಂಗಾನದೀ ದಡದಲ್ಲಿ ಸಾದಾರಣ ಹತ್ತು ಮೀಟರು ಅಂತರದಲ್ಲಿ ಸಾಲಾಗಿ ಕಟ್ಟಿದ ಹಲವಾರು ಕಟ್ಟೆಗಳಲ್ಲಿ ಸಮವಸ್ತ್ರಧಾರಿಗಳಾದ ಪುರೋಹಿತರು ಮಂತ್ರಘೋಷದೊಂದಿಗೆ ಗಂಗಾಮಾತೆಗೆ ಮಾಡುವ ವಿಶೇಷ ಆರತಿ!! ಈ ಪೂಜೆ ನಮ್ಮೆಲ್ಲರ ಕಣ್ಮನ ತಣಿಸಿತು. ಇದು ನೋಡಲೇಬೇಕಾದ ಮನಕ್ಕೆ ಸಂತೋಷ, ತಂಪೀವ ಗಂಗಾಪೂಜೆ!.
ಅಯೋಧ್ಯೆ-ಮುಂದಿನ ನಮ್ಮ ಕ್ಷೇತ್ರ ಅಯೋಧ್ಯೆ. ಇಲ್ಲಿ ಸರಯೂ ನದೀತೀರಕ್ಕೆ ಹೋಗಿ ಸ್ನಾನಮಾಡಿದೆವು. ಸ್ನಾನ ಮಾಡದವರು ತೀರ್ಥಪ್ರೋಕ್ಷಣೆ ಮಾಡಿದರು.ಈ ನದೀ ತೀರದಲ್ಲಿ ಗೋವುಗಳು ವಿಶೇಷವಾಗಿ ಓಡಾಡುವುದನ್ನು ಕಂಡೆವು!.ನನ್ನ ಬಳಿ ಒಂದು ಕಪಿಲೆಹಸು ಬಂದು ನನ್ನ ಕೈಯನ್ನು ನೆಕ್ಕಿದಾಗ; ಅಲ್ಲಿಯೇ ಮಾರಾಟಕ್ಕಿಟ್ಟಿದ್ದ ಹಣ್ಣನ್ನು ಖರೀದಿಸಿ ಆ ಗೋವಿಗೆ ತಿನಿಸಿದೆ. ಕೆಲವು ಯಾತ್ರಾರ್ಥಿಗಳು ಗೋಪೂಜೆಯನ್ನು ಮಾಡುವುದನ್ನು ಕಂಡೆವು. ಈ ಪ್ರದೇಶದಲ್ಲಿ ಬಾಲಭಿಕ್ಷುಕರು ಅಧಿಕ.ದಾರಿ ನಡೆಯುವುದಕ್ಕೂ ಬಿಡದೆ ಬೆನ್ನುಹತ್ತುವುದನ್ನು ಕಂಡೆ!.
ಅಲ್ಲಿಂದ ಮುಂದೆ ಅಯೋಧ್ಯೆ ಮಂದಿರವಿರುವ ತಾಣಕ್ಕೆ ಹೋದೆವು. ಅಲ್ಲಿ ಒಂದು ಕಡೆ ರಾಮದಾಸ ಸ್ವಾಮೀಜಿ ಆಶ್ರಮಕ್ಕೆ ಹೋದೆವು. ಈ ಸಂತರು ರಾಮಮಂದಿರ ನಿರ್ಮಾಣವಾಗುವ ತನಕ 15 ವರ್ಷಗಳಿಂದ ಕೇವಲ ಹಣ್ಣು ಮಾತ್ರಸೇವನೆಯ ನಿಷ್ಟೆಯನ್ನ ಕೈಕೊಂಡಿದ್ದಾರೆ ಎಂದು ತಿಳಿದೆವು. ಅವರ ಆಶ್ರಮದಲ್ಲಿ ಒಂದಷ್ಟು ಹೊತ್ತು ಇದ್ದು ಸ್ವಾಮೀಜಿಯವರ ಮಾತನ್ನಾಲಿಸಿ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಶಕ್ತಿಯಾನುಸಾರ ದೇಣಿಗೆ ನೀಡಿದೆವು. ಮುಂದೆ ಬಡೇಹನುಮಾನ್ ಗುಡಿಗೆ ಹೋದೆವು.ಹನುಮನ ಗುಡಿ ಒಳಗೆಲ್ಲ ಸುತ್ತಾಡಿದೆವು.ಅಲ್ಲಿ ವೀಕ್ಷಿಸಿ ರೂಮಿಗೆ ವಾಪಾಸಾದೆವು.
ಹರಿದ್ವಾರ+ಹೃಷಿಕೇಶ : 13-10-2017 ಈ ಕ್ಷೇತ್ರಗಳಿಗೆ ನಮ್ಮ ಪಯಣ. ಇವೆರಡು ಕ್ಷೇತ್ರಗಳೂ ಹತ್ತಿರ ಹತ್ತಿರವಾದ್ದರಿಂದ ಯಾತ್ರಿಕರಿಗೆ ಅನುಕೂಲ. ಆ ಪ್ರಕೃತಿ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು!.ಹರಿದ್ವಾರದಲ್ಲಿ ಶಂಕರಾಚಾರ್ಯಪೀಠ ಕಂಚಿಕಾಮಕೋಟಿ ಮಠದಲ್ಲಿ ನಮ್ಮ ತಂಡಕ್ಕೆ ತಂಗಲು ನಿಗದಿಯಾಗಿತ್ತು. ಈ ಜಾಗ ನದೀದಡ. ಕೂಲ್ ಆಗಿ ಶಾಂತಿಧಾಮದ ಅನುಬವ!.ಮಾರಣೆದಿನ ಹರಿದ್ವಾರ ತ್ರಿವೇಣಿ {ಗಂಗಾ,ಯಮುನಾ,ಸರಸ್ವತಿ ನದಿಗಳು} ಸಂಗಮದಲ್ಲಿ ತೀರ್ಥಸ್ನಾನ.ತ್ರಿವೇಣಿಸಂಗಮಕ್ಕೆ ಮಿಶನಿನ ನಾವೆಯಲ್ಲಿ ಕರೆದೊಯ್ಯಲು ನಾವಿಕರು ತಯಾರಾಗಿ ನಿಂತಿರುತ್ತಾರೆ. ಸಂಗಮದಲ್ಲಿ ಅಭಿಷೇಕಕ್ಕಾಗಿ ತೆಂಗಿನಕಾಯಿ, ಹಾಲು ಯಾತ್ರಾರ್ಥಿಗಳಿಗೆ ಮಾರಾಟಮಾಡಲು ಅದೆಷ್ಟೋಮಂದಿ ಸುತ್ತುವರಿಯುತ್ತಾರೆ. ನಾವಿಕರು ಒಂದು ದೋಣಿಯಲ್ಲಿ ಇಪ್ಪತ್ತೈದು ಮಂದಿಯನ್ನು ಕುಳ್ಳಿರಿಸಿ ಕರೆದೊಯ್ಯುತ್ತಾರೆ.ಸಂಗಮಕ್ಕೆ ಹೋಗಿ ಅಲ್ಲಿ ಮುಳುಗುಹಾಕಿ ನೀರಿಗೆ ಹಾಲಿನ ಅಭಿಶೇಕದ ಜೊತೆ ಪೂಜೆಮಾಡಿ ನಮ್ಮ ಬಾಟ್ಳಿಗಳಲ್ಲಿ ತೀರ್ಥ ತುಂಬಿಸಿಗೊಂಡೆವು.ಪರಿಶುದ್ಧವಾದ ಜಲ!. ಆ ತೀರ್ಥ ಜಲವು ಎಷ್ಟು ಸಮಯ ಮನೆಯೊಳಗೆ ಇಟ್ಟರೂ ಹಾಳಾಗದೆ ಇರುವ ಸ್ಪಟಿಕದಂತಹ ಶುದ್ಧ ನೀರು!!.( ಇದುವೇ ಕಾಶಿತೀರ್ಥ,ಸಂಗಮ ತೀರ್ಥ ).
ಪಿತೃಕಾರ್ಯ-ಆ ಮೇಲೆ ನದೀ ದಡಕ್ಕೆ ಬಂದು ಪಿತೃಕಾರ್ಯಕ್ಕೆ ಅಣಿಯಾದೆವು. ಕಾಶಿಕ್ಷೇತ್ರದಂತೆ ಪೂರ್ವ ನಿಯೋಜಿತ ಪುರೋಹಿತರು ಪಿತೃಕಾರ್ಯ ಮಾಡುವ ಟೆಂಟ್ನಲ್ಲಿ ಸಾಲಾಗಿ ಕುಳಿತೆವು. ಕಾಶಿಯಲ್ಲಿ ಮಾಡಿದ ಅದೇಪ್ರಕಾರ ಇಲ್ಲಿಯೂ ಪಿತಾ, ಪಿತಾಮಹ, ಪ್ರಪಿತಾಮಹ ಎಂದು ಗತಿಸಿದ ಮೂರುತಲೆಮಾರಿನ ಹಿರಿಯರ ಹೆಸರನ್ನು ಉಲ್ಲೇಖಿಸಿ ತರ್ಪಣ ಬಿಡಲು ಸಹಕರಿಸಿದರು ಪುರೋಹತರು. ಅಲ್ಲಿಯ ಬೆಟ್ಟದ ಮೇಲೆ ಶಿವಾನಂದಮಂದಿರ.ಮೆದುಸ್ವರದಲ್ಲಿ ಹಾರ್ಮೋನಿಯಂ ಸಹಿತ ತಂಪು-ಇಂಪಾದ ಮೆಲುದನಿಯಲ್ಲಿ ಭಜನೆ ಸೇವೆಯನ್ನು ಅಲ್ಲಿ ಕುಳಿತು ವೀಕ್ಷಿಸಿದೆವು.ಮತ್ತೆ ಅಲ್ಲಿಂದ ಆ ಆಸುಪಾಸಿನ ಪುಟ್ಟ ಪುಟ್ಟ ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿದೆವು.ಎದುರು ಬಾಗದ ಬೆಟ್ಟದಲ್ಲಿರುವ ಮಾನಸದೇವಿ ದೇವಾಲಯಕ್ಕೆ ಟ್ರೋಲಿಯಲ್ಲಿ ಹೋದೆವು. ಟ್ರೋಲಿಯ ಯಾನ ಬಹಳಖುಶಿಯಾಯ್ತು. ಇಲ್ಲಿಯೂ ಯಾತ್ರಿಕರ ತಪಾಸಣೆ ಇತ್ತು.ಅಲ್ಲಿ ಅಷ್ಟಲಕ್ಷ್ಮಿಯರ ಗುಡಿ, ದಶಾವತಾರದ ಗುಡಿಗಳೂ ಇದ್ದವು. ಆ ಗುಡಿಯೊಳಗೆ ಒಂದ್ನಾಲ್ಕು ಮೀಟರು ದೂರಕ್ಕೆ ಸುರಂಗದಲ್ಲಿ ಹೋಗಬೇಕಾಗಿತ್ತು.ಇದೆಲ್ಲಾ ಅಪ್ಯಾಯಮಾನ ಆಯಿತು.ನಿಸರ್ಗ ದೈವದತ್ತವಾದ ನೋಟ. ಹೃಷಿಕೇಶದಲ್ಲಿ ರಾಮಝೂಲ,ಲಕ್ಷ್ಮಣಝೂಲ ಎಂಬ ಎರಡು ಸೇತುವೆ ಇತ್ತು.ಅಂತೆಯೇ ಲಕ್ಷ್ಮಣಝೂಲ ಸೇತುವೆಯಲ್ಲಿ ಪ್ರಯಾಣ ಮಾಡಿದೆವು.ಸೇತುವೆಯ ಮೇಲೆ ದಪ್ಪಸರಿಗೆಯಲ್ಲಿ ಓಡುವ ತೊಟ್ಟಿಲಿನ ಈ ಪ್ರಯಾಣ ನಿಜಕ್ಕೂ ಆಹ್ಲಾದಕರ!.ಮುಂದೆ ಪಾತಾಳಾಂಜನೇಯಗುಡಿ,ದೇವಿ ದೇವಸ್ಥಾನಕ್ಕೆ ಹೋದೆವು.ಸಪ್ತಋಷಿ ಆಶ್ರಮ ದೂರದಿಂದ ವೀಕ್ಷಿಸಿದೆವು.
ಡೆಲ್ಲಿ-ತೀರ್ಥಕ್ಷೇತ್ರ ಮುಗಿಯಿತು.ಮುಂದಿನ ಪ್ರಯಾಣ ಪ್ರವಾಸ ಎಂದು ಉಲ್ಲೇಖಿಸಬಹುದು. ಕೊನೆಗೆ ಡೆಲ್ಲಿಗೆ ನಮ್ಮ ಯಾತ್ರೆ. ಇಲ್ಲಿ ಒಂದು ಕಡೆ ರೂಮು ಮಾಡಿದ ಜಾಗ ಐದನೇ ಮಾಳಿಗೆ.ಲಿಫ್ಟ್ ಇರಲಿಲ್ಲ. ಹತ್ತಿ-ಇಳಿದು ಮಾಡುವುದು ಪ್ರಯಾಸವಾದರೂ ಪ್ರವಾಸದ ಕುಶಿಯಲ್ಲಿ ಅದು ತೊಂದರೆಯಂತೆ ಕಾಣಿಸಲಿಲ್ಲ.ಒಂದೊಂದು ರೂಮಲ್ಲಿ ಐದೈದುಮಂದಿ ಇರಬೇಕಾಗಿ ಬಂದರೂ ಅದು ಗಣನೆಗೆ ಬರಲಿಲ್ಲ. ಇಲ್ಲಿ ಒಂದು ರಾತ್ರಿ,ಒಂದು ಹಗಲು ಉಳಿದೆವು. ಸುತ್ತಾಡಲು ಎರಡು ಮಿನಿಬಸ್ಸು ಮಾಡಿದ್ದರು.ಅವರವರ ಬಸ್ಸಿನ ನಂಬರು ನೆನಪಿಟ್ಟು ಅಲ್ಲಲ್ಲಿ ಸುತ್ತಾಡಿ ಮತ್ತದಲ್ಲೇ ಹತ್ತಬೇಕಿತ್ತು.ಕೆಲವು ಸರ್ತಿ ಅವೆರಡೂ ಬೇರೆ ಬೇರೆ ಕಡೆಇದ್ದು ಒಂದಿನಿತು ಗೊಂದಲ ಆದ್ದೂ ಇದೆ!.ತೀನ್ ಮೂರ್ತಿಭವನ,ಇಂದಿರಾಗಾಂಧಿ ಮೆಮೋರಿಯಲ್,ಇಂದಿರಾಬಲಿದಾನ ಸ್ಥಳ,ಕುತುಬ್ ಮಿನಾರ್,ಇವುಗಳನ್ನು ಸರಿಯಾಗಿ ನೋಡಿದೆವು. ರಾಷ್ಟ್ರಪತಿಭವನ., ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಮಾಡಿದ ಮೆಮೊರಿಯಲ್ ಮೊದಲಾದ ಜಾಗಗಳನ್ನು ಬಸ್ಸಲ್ಲೇ ಸುತ್ತಾಡಿ ನೋಡಬೇಕಾಗಿ ಬಂತು.
ಮರಳಿ ಮನೆಗೆ-ಯಾತ್ರೆಯ ಪಟ್ಟಿಯಲ್ಲಿದ್ದ ಜಾಗಗಳನ್ನೆಲ್ಲ ವೀಕ್ಷಿಸಿಯಾದ ಮೇಲೆ ಮುಂದೆ ಮನೆಗೆ ಹಿಂತಿರುಗುವ ತವಕ!.ಆ ದಿನ ರೂಮು ಬಿಡುವುದಾದಲ್ಲಿ ಬೆಳಿಗ್ಗೆ ೭ಗಂಟೆಗೆ ರೂಮುಬಿಡಬೇಕಾದ್ದರಿಂದ ೧೬-೧೦-೨೦೧೭ರಂದು ಪ್ರಾತಃಕ್ಕಾಲ ನಾಲ್ಕು ಗಂಟೆಗೇ ಎದ್ದು ಖಾಲಿ ಟೀ ಕುಡಿದು ೬ಗಂಟೆಗೆ ರೂಮು ಬಿಟ್ಟು ೭-೩೦ಕ್ಕೆ ರೈಲ್ವೇಸ್ಟೇಶನ್ ತಲುಪಿ ೯ಗಂಟೆವರೆಗೆ ಸ್ಟೇಶನಿನಲ್ಲೇ ಸಮಯದೂಡಬೇಕಾಗಿ ಬಂತು.ಅಂತೂ ೯-೧೫ಕ್ಕೆ ರೈಲು ಏರಿದೆವು. ಈಗ ನಮ್ಮ ಬಂಡಿ ಡೆಲ್ಲಿಯಿಂದ ಎರ್ನಾಕುಲಮ್ಗೆ ಹೋಗುವ ರೈಲು. ಇದಲ್ಲಿ ಎರಡು ದಿವಸ ಪ್ರಯಾಣಿಸಿ ೧೮-೧೦-೨೦೧೭ ರಂದು ೫-೩೦ ಎ.ಎಮ್ ಗೆ ಕಾಸರಗೋಡು ಸ್ಟೇಶನ್‌ನಲ್ಲಿಳಿದು. ಅಲ್ಲಿಂದ ಬೇರೆ ಟ್ಯಾಕ್ಸಿಯಲ್ಲಿ ಕುಳಿತರೂ ಸಾರ್ಥಕ ಭಾವದಿಂದ ಅವರವರ ಮನೆ ತಲುಪಿದೆವು.
– ವಿಜಯಾಸುಬ್ರಹ್ಮಣ್ಯ,ಕುಂಬಳೆ
ಬಹಳ ಚೆಂದದ, ಮಾಹಿತಿಪೂರ್ಣ ಲೇಖನ… ಧನ್ಯವಾದಗಳು ವಿಜಯಕ್ಕ… ಓದಿ ಖುಷಿಯಾತು! ಸುರಕ್ಷಿತವಾಗಿ ಹೋಗಿ ಬಂದ್ರಲಿ!!
ಎರಡು ವರ್ಷಗಳ ಹಿಂದಿನ ನೆನಪನ್ನೆಲ್ಲಾ ನಮ್ಮೊಡನೆ ಹಂಚಿಕೊಂಡಿದ್ದೀರಿ…. ಚೆಂದ ಬರೆದಿದ್ದೀರಿ ಧನ್ಯವಾದಗಳು…
ವಸುಂಧರಾ…ಧನ್ಯವಾದಗಳು.
.ಹೇಮಮಾಲಾ, ಹಾಗು ಶಂಕರಿ ಮೇಡಂ ಅವರ ಬರಹಗಳಂತೆಯೇ ಸೊಗಸಾಗಿದೆ . ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆವತ್ತು ದೇಣಿಗೆ ನೀಡಿ ಬಂದದ್ದು ಇವತ್ತು ಸಾರ್ಥಕ ಅನ್ನಿಸಿರಬಹುದು ನಿಮಗೆ ಅಲ್ವಾ ಮೇಡಂ ?
ಪ್ರವಾಸದ ಅನುಭವಗಳನ್ನು ಬಹಳ ಸುಂದರವಾಗಿ ನಮ್ಮ ಮುಂದಿರಿಸಿದ್ದೀರಿ…ಅಭಿನಂದನೆಗಳು ಮೇಡಮ್
ನಮಗೂ ಕಾಶಿಯಾತ್ರೆ ಮಾಡಿಸಿದ್ರಿ ವಿಜಯಕ್ಕ…ಚಂದದ ಮಾಹಿತಿಯುಕ್ತ ಬರಹ.
ನಯನಾಬಜಕ್ಕೂಡ್ಳು ,ಹರ್ಷಿತಾ , ಶಂಕರಿಶರ್ಮ ಹಾಗು ಬರಹ ಮೆಚ್ಚಿದ ಎಲ್ಲರಿಗೂ ನಮಿಸುವೆ.