ಲಹರಿ

ವರ್ತನ – ಆವರ್ತನ !

Share Button

ಮನುಷ್ಯನು ಪ್ರಾಣಿಗಳಿಗಿಂತ ವಿಭಿನ್ನನಾಗಿರುವುದು ತನ್ನ ಮಾತಿನಿಂದಲೇ. ಮಾತು ಮನುಕುಲದ ಆಸ್ತಿ ಮಾತ್ರವಲ್ಲ ಪರಂಪರೆಯ ಪ್ರತಿನಿಧಿ. ಮಾತು ಬಲ್ಲವರಿಗೆ ಜಗಳವಿಲ್ಲವಷ್ಟೇ ಅಲ್ಲ; ವ್ಯವಹಾರ ವಹಿವಾಟು ನಿರ್ವಹಣೆ ತುಂಬ ಸಲೀಸು. ಇಂದು ಜಗತ್ತಿನಲ್ಲಿ ಮಾತಾಡುವ ಕಾಯ ಮತ್ತು ಕಾಯಕಕ್ಕೆ ಬಹು ಮುಖ್ಯ ಮೌಲ್ಯವಿದೆ. ಎಲ್ಲ ಮಾತಿಗೂ ಅಲ್ಲ; ಒಳ್ಳೆಯ ಮತ್ತು ಪರಿಣಾಮಕಾರೀ ಮಾತಿಗೆ. ಅದು ಶಿಕ್ಷಕತನವೇ ಇರಬಹುದು; ಪ್ರವಾಸೀ ಪ್ರೇಕ್ಷಣೀಯ ತಾಣಗಳ ಗೈಡುಗಳೇ ಇರಬಹುದು; ಸಂಪರ್ಕ ಮಾಧ್ಯಮಗಳಲ್ಲಿ ಕೆಲಸ ಮಾಡುವ ಸಹಾಯವಾಣಿಗರೇ ಇರಬಹುದು; ಆಧ್ಯಾತ್ಮಿಕ ಮತ್ತು ಧಾರ್ಮಿಕ ಪಥ ಸಂಚಾರದಲ್ಲಿ ಸಾಗುತ್ತಿರುವವರಿಗೆ ಉಪದೇಶ-ಪ್ರವಚನಗಳನ್ನು ನೀಡುತ್ತಿರುವ ಸತ್ಸಂಗವೇ ಇರಬಹುದು; ದೃಶ್ಯಮಾಧ್ಯಮಗಳಲ್ಲಿ ಬರುವ ವಾರ್ತಾವಾಚಕರು, ಸುದ್ದಿ ವಿಶ್ಲೇಷಕ-ವ್ಯಾಖ್ಯಾನಕಾರರೇ ಇರಬಹುದು; ಜನಪ್ರಿಯ ಡಿಬೇಟರುಗಳೇ ಇರಬಹುದು; ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಮೋಟಿವೇಟರುಗಳೇ ಇರಬಹುದು; ಅಷ್ಟೇಕೆ: ರಸ್ತೆ ಬದಿ ವ್ಯಾಪಾರ ಮಾಡುವ ಶ್ರೀಸಾಮಾನ್ಯನ ಮಾತಿನ ಧಾಟಿಯೇ ಇರಬಹುದು! ಎಲ್ಲಕೂ ಮಾತೇ ಬಂಡವಾಳ ಮತ್ತು ಅಂತರಾಳ. ಹಲವು ಭಾಷೆಗಳನ್ನು ಬಳಸುವವರೇ ನಿಜವಾದ ಹೀರೊ ಮತ್ತು ಹೀರೊಯಿನ್‌ಗಳಾಗಿರುವ ಕಾಲದಲ್ಲಿ ನಾವು ವಾಸಿಸುತ್ತಿದ್ದೇವೆ. ಭಾಷೆಗೂ ಜ್ಞಾನಕ್ಕೂ ಸಂಬಂಧವಿಲ್ಲ ಎಂದು ಎಷ್ಟೇ ಹೇಳಿದರೂ ತಕ್ಷಣದ ಅನಿವಾರ‍್ಯವನ್ನು ತಣಿಸುವ ಮತ್ತು ಎದುರಿನವರನ್ನು ದಣಿಸುವ ಏಕೈಕ ಮಾರ್ಗ ಅದು ಭಾಷೆ. ನಾನಿಲ್ಲಿ ಹೇಳಲು ಹೊರಟಿರುವ ವಿಚಾರವೆಂದರೆ ಇಂಥ ಭಾಷೆಯನ್ನು ಬಳಸುವಾಗ ನಾವು ಗಮನಿಸಬೇಕಾದ ಎಚ್ಚರಗಳ ಬಗ್ಗೆ:

ನಮ್ಮ ಮಾತು ಮತ್ತು ವರ್ತನೆ ಪರಸ್ಪರ ಹೊಂದಾಣಿಕೆಯಿಂದ ಕೂಡಿರಬೇಕೆಂದರೆ ನಡೆ ಮತ್ತು ನುಡಿಗಳು ಒಂದೇ ಆಗಿರಬೇಕೆಂದಲ್ಲ! ನುಡಿದಂತೆ ನಡೆಯುವುದು ಒಂದು ಮೌಲ್ಯವೇನೋ ಸರಿ. ಆದರೆ ಈಗದನ್ನು ಯಾರು ಕೇಳುತ್ತಾರೆ? ನಾವೀಗ ಸಾಮಾಜಿಕವಾಗಿ ಮಾಧ್ಯಮಗಳಲ್ಲಷ್ಟೇ ಸ್ನೇಹಿತರು ಮತ್ತು ಸಂಬಂಧಿಕರು; ವೈಯಕ್ತಿಕವಾಗಿ ನಾವಷ್ಟೇ ಪ್ರತ್ಯೇಕಿತರು! ಬದಲಾದ ಕಾಲಮಾನ ಮತ್ತು ಮನೋಮಾನಗಳಲ್ಲಿ ಜೀವಿಸುತ್ತಿರುವಾಗ ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ನನ್ನೊಳಗೆ ಹಲವು ಜಗತ್ತುಗಳು ಏಕಕಾಲಕ್ಕೆ ಅನಾವರಣಗೊಂಡು ಅನುಭವಕ್ಕೆ ಬರುತ್ತಿರುವಾಗ ನಡೆ ಮತ್ತು ನುಡಿಯ ಏಕತ್ರವನ್ನು ಕಂಡು ಹಿಡಿಯುವುದು ಕಷ್ಟ. ಹಾಗಾಗಿ ಮಾತು ಮತ್ತು ವರ್ತನೆಯನ್ನು ಬೇರೆ ರೀತಿಯಿಂದ ನೋಡಲು ಕಲಿಯಬೇಕಿದೆ. ಮಾತಾಡುವಾಗಿನ ನನ್ನ ವರ್ತನೆ ಎಂದಷ್ಟೇ ಇದನ್ನು ಅರ್ಥೈಸಿಕೊಂಡು ಮುನ್ನಡೆಯುತ್ತೇನೆ.

ನಮ್ಮ ಬಾಡಿ ಲಾಂಗ್ವೇಜು ಎಂದು ವ್ಯಕ್ತಿತ್ವ ವಿಕಸನ ಪಂಡಿತರು ಹೇಳುವಾಗ ಹಾಗೂ ಸೈಕಾಲಜಿಯ ಮೂಲಕ ಅರಿಯುವಾಗ ಹಲವು ಕುತೂಹಲಕರ ಅಂಶಗಳು ಮನವರಿಕೆಯಾಗುತ್ತವೆ. ನಾಲಗೆ ಸುಳ್ಳಾಡಬಹುದು; ಆದರೆ ಶರೀರವಲ್ಲ! ಓವರ್ ಆಕ್ಟಿಂಗ್ ಅಥವಾ ಅತಿ ವರ್ತನೆಯು ನಮ್ಮ ಮಾತು ಮತ್ತು ವರ್ತನೆಗಳ ನಡುವಿನ ವ್ಯತ್ಯಾಸವನ್ನು ಮನಗಾಣಿಸಲು ಸಾಧ್ಯ. ಅನವಶ್ಯವಾಗಿ ದನಿ ಜೋರಾಗುವುದು, ಹೇಳಿದ್ದನ್ನೇ ಹೇಳುವುದು, ಸಾಕ್ಷಿ-ಪ್ರಮಾಣ-ಭಾಷೆಗಳನ್ನು ಎಳೆದು ತರುವುದು, ಎದುರಿನವರಿಗೆ ಒಪ್ಪಿಸುತ್ತಾ ಅವರನ್ನೂ ಮಾತಿಗೆಳೆಯುವುದು, ತನ್ನನೇ ಹಳಿದುಕೊಳ್ಳುತಾ ಕೈಗೆ ಸಿಕ್ಕಿದ್ದನ್ನು ಎತ್ತಿ ಬಿಸಾಡುವುದು ಇವೆಲ್ಲ ನಮ್ಮ ವಿಪರ್ಯಾಸ – ಭಾವಾತಿರೇಕ, ವಿರೋಧಾಭಾಸಗಳನ್ನು ಮನಗಾಣಿಸುತ್ತವೆ. ಮಾತೆಂಬುದು ಮಿದುಳಿನಿಂದ ಹೊರಟಾಗ ಎಚ್ಚರ; ಹೃದಯದಿಂದ ಹೊರಟಾಗ ತನ್ಮಯ. ಅಂದರೆ ನಮ್ಮನ್ನು ನಾವು ಮರೆತು ಮಾತಾಡುವುದು ಹೃದಯಸಂವಾದದಲ್ಲಿ; ಅದು ಬಿಟ್ಟು ಬೌದ್ಧಿಕ ಚಿಂತನೆಯ ಚರ್ಚೆಗಳಲ್ಲಿ ನಮ್ಮ ಧೋರಣೆಯು ಆಂಗಿಕ ಅಭಿನಯದ ಮೂಲಕ ವ್ಯಕ್ತ. ಹಲವು ವಿಧದ ತರಬೇತಿಗಳಲ್ಲಿ ಇವನ್ನೆಲ್ಲಾ ಹೇಳಿ ಕೊಡಲು ಯತ್ನಿಸುತ್ತಾರೆ. ಅಂದರೆ ಮಾತು ಮತ್ತು ವರ್ತನೆಗಳ ನಡುವಿನ ಅಸಹಜವೂ ಅಸಮರ್ಪಕವೂ ಆದ ಕಂದರಗಳನ್ನು ಹೋಗಲಾಡಿಸಲು ಇದು ಸಹಕಾರಿ. ಆದರೆ ನಿತ್ಯದ ಹತ್ತು ಹಲವು ಸಂಭಾಷಣೆಗಳಲ್ಲೂ ಇಂಥದೇ ಆವರಣವನ್ನಿಟ್ಟುಕೊಂಡು ಸಂವಹನಿಸಲು ಆಗದು. ಹಾಗಾದಾಗ ಅದರಂಥ ಕೃತಕತೆ ಇನ್ನೊಂದಿಲ್ಲ; ಮಾತಾಡಿದ ನಂತರ ಒಂದು ಬಗೆಯ ಕೃತಕೃತ್ಯತೆ ಲಭಿಸಬೇಕು; ಪ್ಲಾಸ್ಟಿಕ್ ಹೂವಿನಿಂದ ಪಾರಿಜಾತದ ನಗುವನ್ನು ನಿರೀಕ್ಷಿಸಬಾರದು.

‘ದನಿ ನಡುಗುತ್ತಿದ್ದರೂ ಸತ್ಯವನ್ನು ಹೇಳು’ ಎಂಬ ಒಂದು ಮಾತಿದೆ. ಇದರ ಸಂದರ್ಭವೇ ಬೇರೆ. ‘ನಾನು ಹೇಳುವ ಸುಳ್ಳು ಒಬ್ಬ ಅಮಾಯಕ ವ್ಯಕ್ತಿಯ ಜೀವವನ್ನು ಉಳಿಸುತ್ತದೆ ಎಂದಾದರೆ ಅದು ಪಾಪವಲ್ಲ’ ಎಂದು ಮಹಾತ್ಮರುಗಳೇ ಹೇಳಿದ್ದಾರೆ. ಹಾಗಿರುವಲ್ಲಿ ಮುಂದಾಗುವ ಅನಾಹುತವನ್ನು ನೆನೆದು ಸತ್ಯ ಹೇಳಲೇಬೇಕಾದ ಅನಿವಾರ‍್ಯದಲ್ಲಿ ಸಿಲುಕಿಕೊಂಡವರಿಗೆ ಹೀಗೆ ತೊದಲಾಗುತ್ತದೆ. ‘ಪಿಸುಗುಟ್ಟಿದರೂ ಸತ್ಯ ಸತ್ಯವೇ!’ ಎಂದರಿವಾಗುವುದು ಪ್ರಬುದ್ಧರಲ್ಲಿ ಮಾತ್ರ. ನನ್ನ ಸುಳ್ಳು, ಮೋಸ, ತಪ್ಪು, ಕಳ್ಳತನಗಳು ಬಯಲಾದೀತು ಎಂಬ ಭಯದಲ್ಲಿ ನಮ್ಮ ಬಾಡಿ ಲಾಂಗ್ವೇಜು ಸತ್ಯವನ್ನು ಅರುಹುತ್ತಿರುತ್ತದೆ; ಆದರೆ ಎಲುಬಿಲ್ಲದ ನಾಲಗೆ ನಿರಂತರವಾಗಿ ನಗಾರಿಯಾಗಿರುತ್ತದೆ. ಮನಸನು ವಂಚಿಸಬಹುದು; ದೇಹವನ್ನಲ್ಲ! ಎಂಬ ಸಾರ್ವತ್ರಿಕ ಸತ್ಯ ನಮಗೆ ಗೊತ್ತಾಗುವುದು ತುಂಬ ತಡವಾಗಿ. ಏಕೆಂದರೆ ಜೀವಕೋಶಕೆ ವಂಚನೆ ಗೊತ್ತಾಗುವುದಿಲ್ಲ; ಆದರೆ ಭಾವಕೋಶಕೆ ಮೋಸ ಮಾಡಬಹುದು. ಇದನ್ನೇ ಆತ್ಮವಂಚನೆ ಎನ್ನುವುದು. ಇದಕ್ಕಿಂತ ಘೋರಾಪರಾಧ ಇನ್ನೊಂದಿಲ್ಲ. ಹತ್ತಾರು ಸಾಕ್ಷಿಗಳಿಗೆ ಪಾಟೀಸವಾಲು ನೀಡಿ, ನ್ಯಾಯಾಲಯದಲೇ ಎಲ್ಲರೂ ಬೆಕ್ಕಸ ಬೆರಗಾಗುವಂತೆ ವಾದಿಸಿ, ಕೇಸು ಗೆದ್ದು ಬೀಗಬಹುದು; ಆದರೆ ನಾನೊಬ್ಬನೇ ಆದಾಗ ನನ್ನೊಳಗು ಚುಚ್ಚಿ ಕೇಳುತ್ತದೆ: ಎಷ್ಟು ಚೆನ್ನಾಗಿ ಎಲ್ಲರನೂ ಮೋಸ ಮಾಡಿದೆಯಲ್ಲ ಮನವೇ ಎಂದು! ಯಾರಿಗೂ ಉತ್ತರಿಸಬಹುದು; ನನ್ನೊಳಗಿನ ಆತ್ಮಸಾಕ್ಷಿಗೆ ಹೇಳಬೇಕಾದವರು ನಾವೇ ಅಲ್ಲವೆ? ಇದನ್ನೂ ಮೀರಿದ್ದು ಭಂಡತನ. ಇಂಥ ಭಂಡರು ಯಾವ ಗೌರವವನೂ ಘನತೆಯನೂ ಉಳಿಸಿಕೊಂಡಿರುವುದಿಲ್ಲ. ಇಂಥವರ ಮಾತನು ಯಾರೂ ನಿಜವೆಂದು ಪರಿಗಣಿಸದೆ, ಹಗುರವಾಗಿ ತೆಗೆದುಕೊಳ್ಳುತಾರೆ. ಮನುಷ್ಯ ತೂಕ ಕಳೆದುಕೊಳ್ಳುವುದೆಂದರೆ ಇದೇ.

ಮನೋವಿಜ್ಞಾನ ಹೇಳುತ್ತದೆ: ‘ಮನುಷ್ಯ ಆವೇಶದಲ್ಲಿದ್ದಾಗ ತನ್ನ ನಿಜಸ್ವರೂಪವನ್ನು ಪ್ರದರ್ಶಿಸುತಾನೆ’ ಎಂದು. ಇದು ನಮ್ಮ ಮನಸಿನ ನಿಯಂತ್ರಣ ತಪ್ಪಿದ ದೇಹದ ಪರಿಣಾಮ! ಜೀವಕೋಶಕೆ ವಂಚನೆ ಗೊತ್ತಾಗುವುದಿಲ್ಲ ಎಂದೆನಲ್ಲ; ಅದೇ ಇದು. ಹಾಗಾಗಿಯೇ ನಾವು ಮಾತಾಡುವಾಗ, ಸುಳ್ಳು ಹೇಳುವಾಗ, ಆಕ್ಟಿಂಗ್ ಮಾಡುವಾಗ, ದೇಶಾವರಿ ನಗೆ ಬೀರುವಾಗ ನಮ್ಮ ಬಾಡಿ ಲಾಂಗ್ವೇಜು ಸತ್ಯವನ್ನು ಅರುಹುತ್ತಿರುತ್ತದೆ. ಇಂಥಲ್ಲಿ ಬಾಯಿಂದ ಬರುವ ಮಾತಿಗೂ ದೇಹದ ಚಲನೆಗೂ ವ್ಯತ್ಯಾಸ ಇರುತ್ತದೆ. ಸೂಕ್ಷ್ಮಜ್ಞರಿಗೆ ಇದು ಗೊತ್ತಾಗುತ್ತದೆ. ಇಲ್ಲೊಂದು ಗೊಂದಲ ಎದುರಾಗುತ್ತದೆ: ಹಾಗಾದರೆ ಅತಿ ವರ್ತನೆಯಲ್ಲೂ ವ್ಯಕ್ತಿ ಸುಳ್ಳನ್ನು ಮುಚ್ಚಿಡಲು ಆಗುವುದಿಲ್ಲ ಅಂತಾಯಿತು! ಈ ಗೊಂದಲವನ್ನು ಹೀಗೆ ಬಗೆಹರಿಸಿ ಕೊಳ್ಳಬೇಕು: ಮನಸನೂ ಶರೀರವನೂ ತಮ್ಮ ಪಾಡಿಗೆ ಬಿಟ್ಟರೆ ನಮ್ಮ ಬಾಡಿ ಲಾಂಗ್ವೇಜು ಸಹಜವಾಗಿಯೇ ಇರುತ್ತದೆ. ವಾಸ್ತವವನ್ನು ಮುಚ್ಚಿಡಲು ಪ್ರಯತ್ನಿಸಿದಷ್ಟೂ ಭಾವಕೂ ಜೀವಕೂ ತಾಳಮೇಳವಿಲ್ಲದಂತಾಗಿ ಹಳಿ ತಪ್ಪುತ್ತದೆ. ಸದಾ ಎಚ್ಚರ ಮತ್ತು ಎಚ್ಚರಿಕೆಗಳಿಂದ ನಮ್ಮನು ನಾವೇ ಗಮನಿಸಿಕೊಳ್ಳುತಾ ನಾವು ಮಾಡುವ ತಪ್ಪುಗಳನ್ನು ನೆನಪಿಸಿಕೊಳ್ಳುತಾ ಅಥವಾ ತಪ್ಪಾಗಿದ್ದನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂಬುದನು ನಾವೇ ಗುರುತಿಸಿಕೊಳ್ಳುತಾ ಜೀವಿಸುವುದೊಂದೇ ಇದಕಿರುವ ರಾಜಮಾರ್ಗ. ದಾರ್ಶನಿಕ ಪರಿಭಾಷೆಯಲ್ಲಿ ಇದನ್ನು ಸಾಕ್ಷಿತ್ವ ಮತ್ತು ವೈರಾಗ್ಯ ಎಂದು ಹೆಸರಿಸುವರು. ವ್ಯಕ್ತಿತ್ವ ವಿಕಸನ ಎಂಬುದು ಮೇಲ್ಮಟ್ಟದ ತೋರ್ಪಡಿಕೆ ಜೀವನ. ಇದನ್ನು ಪರ್ಸನಾಲಿಟಿ ಡೆವಲಪ್‌ಮೆಂಟ್‌ನಂಥ ಕೋರ್ಸು/ಶಿಬಿರಗಳಲ್ಲಿ ತರಬೇತಿಸುವರು.

ಆದರೆ ಇನ್ನೊಂದಿದೆ: ಅದೇ ವೈಯಕ್ತಿಕ ವಿಕಸನ. ಇದನ್ನು ಇಂಡುವಿಜುಯಾಲಿಟಿ ಅಂತಾರೆ. ಪರ್ಸನಾಲಿಟಿ ಎಂದು ಕರೆಯವುದಿಲ್ಲ. ಈ ವೈಯಕ್ತಿಕತ್ವವು, ಎಲ್ಲ ವ್ಯಕ್ತಿಗಳೂ ಒಂದೇ ಎಂದು ಹೇಳುವುದಿಲ್ಲ. ಪ್ರತಿಯೊಬ್ಬರೂ ವಿಭಿನ್ನ ಮತ್ತು ವಿಶಿಷ್ಟ ಎಂಬುದೇ ಇದರ ಥಿಯರಿ. ಇದನ್ನು ನಾವು ಶಿಬಿರಗಳಲ್ಲಿ ಕಲಿಯಲು ಆಗುವುದಿಲ್ಲ. ‘ಹೇಳಿಕೊಟ್ಟ ಮಾತೂ ಕಟ್ಟಿಕೊಟ್ಟ ಬುತ್ತಿ’ ಎಷ್ಟು ದಿನ ಬಂದೀತು? ನಿರಂತರ ಅರಿವು ಮತ್ತು ವಿವೇಕಗಳ ಮೂಲಕ ನಮ್ಮೊಳಗಿನ ಅಹಮನ್ನು ಗುರುತಿಸಿಕೊಂಡು ನಮ್ಮವರೊಡನೆ ಮತ್ತು ಅಪರಿಚಿತರೊಡನೆ ‘ನನ್ನ ಸಂವಾದ’ಗಳು ಹೇಗಿರುತ್ತವೆಂದು ಸ್ವಯಂ ಪರೀಕ್ಷಿಸಿಕೊಳ್ಳುತ್ತಾ ಸಾಗಬೇಕು. ಇಂಥ ಕಡೆ ಆಧ್ಯಾತ್ಮಿಕ ತತ್ತ್ವಶಾಸ್ತ್ರವು ಸಹಾಯಕ್ಕೆ ಬಂದೀತು! ಉದಾಹರಣೆಗೆ, ಸೂಫಿ ಕಾವ್ಯ, ಜೆ಼ನ್ ಕತೆಗಳು, ಬುದ್ಧ-ತಾವೋ-ಓಶೋ-ರಮಣ-ಸತ್ಯಕಾಮ-ಸದ್ಗುರು ಜಗ್ಗಿ ವಾಸುದೇವ್ ಹೀಗೆ ಸಂತರ, ದಾರ್ಶನಿಕರ, ಸಾಮಾನ್ಯರಂತೆ ಬದುಕಿದ ಅಸಾಮಾನ್ಯರ ಬರೆಹ-ಉವಾಚಗಳು ನಮಗೆ ಮಾರ್ಗದರ್ಶಿಯಾಗಬಹುದು.

ಸಾಕ್ಷಿತ್ವ ಮತ್ತು ವೈರಾಗ್ಯಗಳನ್ನು ಹೀಗೆ ಅರ್ಥೈಸಿಕೊಳ್ಳಬೇಕು: ನಮ್ಮ ಆಲೋಚನೆಗಳ ಔನ್ನತ್ಯಕ್ಕೆ ನಮ್ಮ ಶರೀರವನ್ನು ಏಕತ್ರಗೊಳಿಸಬೇಕು. ಸರಳವಾಗಿ ಮತ್ತು ಸಹಜವಾಗಿ ಇದ್ದಾಗ ಇದು ಸಾಧ್ಯವಾಗುತ್ತದೆ ಅಷ್ಟೇ. ಏನು ನಡೆಯುತ್ತಿದೆಯೋ ಅದಕ್ಕೆ ನಾನು ಸಾಕ್ಷಿಯಾಗಿದ್ದರೆ ಸಾಕು. ಎಲ್ಲವನೂ ನಿರ್ವಹಿಸಬೇಕಷ್ಟೇ; ನಿಯಂತ್ರಿಸಲು ಹೋದರೆ ದುಃಖ ಖಂಡಿತ. ‘ಜನರು ತಮಗೆ ಬೇಕಾದುದನ್ನು ಮಾಡಲಿ; ನೀನು ನಿಯಂತ್ರಿಸಲು ಹೋಗದಿರು’ ಎಂಬ ಮಾತೊಂದಿದೆ. ‘ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮ’ ಎಂದು ಬಸವಣ್ಣನವರು ಹೇಳಿದ್ದು ಈ ಅರ್ಥದಲ್ಲೇ! ತನ್ನನ್ನು ತಾನು ಸುಧಾರಿಸಿಕೊಳ್ಳದೇ ಜಗತ್ತನ್ನು ಬದಲಿಸಲು ಹೊರಡುವ ಮೂರ್ಖರು ಇದನ್ನು ಮನಗಾಣಬೇಕು. ಬದುಕಿನಲಿ ಮತ್ತು ದಿನನಿತ್ಯದ ಆಗುಹೋಗುಗಳಲಿ ನಮಗೆ ಅಪಾರ ಪ್ರಮಾಣದ ‘ಆಯ್ಕೆ’ಗಳು ಎದುರಾಗುತ್ತಿರುತ್ತವೆ. ಇಂಥ ಆಯ್ಕೆಯನ್ನು ಹೊಂದುವಾಗಿನ ನಮ್ಮ ಮನಸ್ಥಿತಿ ಎಚ್ಚರ ಮತ್ತು ಸಾಕ್ಷಿತ್ವದಿಂದ ಕೂಡಿರಬೇಕು. ಇಲ್ಲದಿದ್ದರೆ ದುಃಖ ಖಂಡಿತ. ಬೆಳಗಿನ ಕೆಲಸದ ಒತ್ತಡದಲಿರುವ ಅಮ್ಮನನ್ನು ಅವಳ ಮಗಳು ಬಂದು ಕೇಳಿದಾಗ ಹೇಳುತ್ತಾಳೆ: ‘ನಿನಗೆ ಯಾವ ಬಟ್ಟೆ ಇಷ್ಟವೋ ಅದನ್ನು ಹಾಕಿಕೊ!’ ಮಗಳು ಧರಿಸಿದ ಮೇಲೆ ಕ್ಯಾತೆ ತೆಗೆಯುತ್ತಾಳೆ: ‘ಇದನ್ನು ಬಿಚ್ಚು; ಸರಿಯಿಲ್ಲ!’ ನಮ್ಮ ಸಂವಹನದ ಸಮಸ್ಯೆ ಇರುವುದೇ ಇಲ್ಲಿ. ‘ಏನು ತಿಂಡಿ ಬೇಕು?’ ಅಂತ ಮಡದಿ ಕೇಳುತ್ತಾಳೆ. ‘ಏನಾದರೂ ಸರಿ’ ಎಂದು ಗಂಡ ಅಂದಾಗ ಅವನು ಆ ಮಾತಿಗೆ ಬದ್ಧನಾಗಿರಬೇಕು. ತಿಂಡಿ ತಿನ್ನಲು ಕುಳಿತಾಗ ಕ್ಯಾತೆ ತೆಗೆಯಬಾರದು. ಇದು ಸಂವಹನದ ಮತ್ತು ಬದುಕಿನ ಶಿಸ್ತು. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ‘ಹೇಗಿದೆ?’ ಎಂದು ಕೇಳಿದಾಗ ಅವರಿಂದ ಬರುವ ನಕಾರಾತ್ಮಕ ಮತ್ತು ಸಕಾರಾತ್ಮಕ- ಎರಡೂ ಉತ್ತರಗಳಿಗೆ ಮನಸು ತೆರೆದಿರಬೇಕು. ‘ಚೆನ್ನಾಗಿಲ್ಲ’ ಎಂದಾಗ ಬೇಸರ ಮಾಡಿಕೊಳ್ಳಬಾರದು. ಆಯ್ಕೆಯನ್ನು ಕೊಟ್ಟಾಗ ಎದುರಿನವರು ಆಯ್ದುಕೊಂಡದ್ದನ್ನು ಗೌರವಿಸುವುದೇ ನಿಜವಾದ ಔದಾರ‍್ಯ ಮತ್ತು ಸೌಜನ್ಯ.

ಆದರೆ ನಾವು ಹೀಗೆ ವರ್ತಿಸುತ್ತೇವೆಯೇ? ಪಾಸಿಟಿವ್ ರೆಸ್ಪಾನ್ಸ್ ಕೊಡುವುದು ಆರೋಗ್ಯಕರ, ಸರಿ! ಆದರೆ ನೆಗಟಿವ್ ರೆಸ್ಪಾನ್ಸ್ ಬಂದಾಗಲೂ ನಾವು ಮುನಿಸಿಕೊಳ್ಳಬಾರದು. ಇದನ್ನೇ ಸಾಕ್ಷಿತ್ವ ಎನ್ನುವುದು. ಹಾಗೆ ನಾವು ನಮ್ಮನೂ ಸುತ್ತಮುತ್ತಲ ಪರಿಸರವನೂ ಎಚ್ಚರದಿಂದ ಗಮನಿಸಿದಾಗ ಇಂಥವೆಲ್ಲ ತರಬೇತಾಗುತ್ತದೆ. ದುಃಖ ಮತ್ತು ಕೋಪಗಳನ್ನು ನಿಭಾಯಿಸುವುದಕಿಂತ ಅವು ಹುಟ್ಟದಂತೆಯೇ ನೋಡಿಕೊಳ್ಳುವ ಕಲೆಯನು ಕಲಿಯಬೇಕು. ಇದು ಕಲಿಕೆಯಿಂದ ಸಾಧ್ಯ. ಸಂತರೂ ತಾವು ಹಾಗಾಗುವ ಮೊದಲು ಹೀಗೇ ತಮ್ಮನು ತರಬೇತಿಸಿಕೊಂಡವರೇ! Being positive isn’t pretending that everything is good – it’s seeing the good in everything ಎಂಬ ಮಾತೊಂದಿದೆ. ಎಲ್ಲವೂ ಸರಿಯಾಗಿದೆ ಎಂಬ ಊಹನೆಯೋ ನಟನೆಯೋ ಸಕಾರಾತ್ಮ-ಕತೆಯಲ್ಲ; ನಡೆಯುವ ಎಲ್ಲದರಲ್ಲೂ ಒಳ್ಳೆಯದನ್ನು ಗುರುತಿಸುವುದು; ವೈಶಾಲ್ಯಕ್ಕೂ ಪೂರ್ಣದೃಷ್ಟಿಗೂ ಆದ್ಯತೆ ನೀಡುವುದು. ಸಕಾರಾತ್ಮಕ ಮನೋಭಾವ ಎಂದರೆ ಜೀವನದಲ್ಲಿ ಕಷ್ಟಗಳು, ಸಮಸ್ಯೆಗಳು ಅಥವಾ ನೋವುಗಳಿಲ್ಲ ಎಂದು ಸುಳ್ಳು ಹೇಳುವುದಲ್ಲ. ನಮ್ಮ ಜೀವನದಲ್ಲಿ ನಕಾರಾತ್ಮಕ ಅಥವಾ ಕೆಟ್ಟ ಸಂಗತಿಗಳು (ನಮ್ಮ ಪಾಲಿಗಷ್ಟೇ) ಸಂಭವಿಸಿದಾಗ ಅವುಗಳನ್ನು ನಿರ್ಲಕ್ಷಿಸುವುದು ಅಥವಾ ‘ಎಲ್ಲಾ ಸರಿ ಇದೆ’ ಎಂದು ಮೇಲ್ನೋಟಕ್ಕೆ ಹೇಳುವುದು ನಿಜವಾದ ಧನಾತ್ಮಕ ಚಿಂತನೆಯಲ್ಲ. ಬದಲಾಗಿ, ಸಕಾರಾತ್ಮಕವಾಗಿರುವುದು ಎಂದರೆ ಯಾವುದೇ ಪರಿಸ್ಥಿತಿ ಬಂದರೂ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಗುರುತಿಸಲು ಪ್ರಯತ್ನಿಸುವುದು. ಉದಾಹರಣೆಗೆ, ಒಂದು ಕಷ್ಟಕರ ಸಂದರ್ಭದಲ್ಲಿ ನಾವು ಏನನ್ನಾದರೂ ಕಲಿಯಬಹುದು, ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಅಥವಾ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ನಮ್ಮ ಜೀವನದಲ್ಲಿ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಳ್ಳುವುದು. ಹಾಗಾಗಿ, ಸಕಾರಾತ್ಮಕತೆ ಎಂಬುದು ಒಂದು ಕನ್ನಡಿ. ಅದರಲ್ಲಿ ನಾವು ನಮ್ಮ ಸುತ್ತಲಿನ ಕೆಟ್ಟದ್ದನ್ನು ನೋಡುವ ಬದಲು, ಅದರಲ್ಲಿ ಅಡಗಿರುವ ಒಳ್ಳೆಯ ಅಂಶಗಳನ್ನು ಪ್ರತಿಬಿಂಬಿಸುವಂತೆ ಮಾಡಿಕೊಳ್ಳುವುದು. ಇದು ನಮ್ಮಲ್ಲಿ ಆಶಾವಾದ ಮತ್ತು ಬದುಕನ್ನು ಎದುರಿಸುವ ಧೈರ‍್ಯವನ್ನು ತುಂಬುತ್ತದೆ.

ಡಾ. ಹೆಚ್ಎನ್ಮಂಜುರಾಜ್‌ , ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *