ರಾಮೇಶ್ವರ….ಮಧುರೈ- ಭಾಗ 2
ಗಂಧ ಮಾದನ ಪರ್ವತ 1.5 ಮೈಲಿ ದೂರದಲ್ಲಿದೆ. ಇಲ್ಲಿ ರಾಮನ ಪಾದವನ್ನು ಕಾಣಬಹುದು. ಎತ್ತರವಾದ ಮರಳು ಗುಡ್ಡೆಯ ಮೇಲೆ ಈ ಗುಡಿಯಿರುವುದರಿಂದ ದೂರದಿಂದ ಶ್ರೀ ರಾಮೇಶ್ವರ ಪಟ್ಟಣ ಮತ್ತು ದ್ವೀಪಗಳನ್ನು ಕಾಣಬಹುದು.
ಶ್ರೀ ಕೋದಂಡಸ್ವಾಮಿ ದೇವಾಲಯವು ರಾಮೇಶ್ವರದಿಂದ 5 ಮೈಲಿ ದೂರದಲ್ಲಿ ರಾಮನ ಹೆಸರಿನಲ್ಲಿ ಕಟ್ಟಿಸಿದ ದೇವಾಲಯವಿದು. ವಿಭೀಷಣನು ಶರಣಾಗತಿಯನ್ನು ಸ್ವೀಕರಿಸಿದ ನಂತರ ತಾತ್ಕಾಲಿಕವಾಗಿ ಪಟ್ಟಾಭಿಷೇಕವು ಕೂಡ ಇಲ್ಲಿಯೆ ಲಕ್ಷ್ಮಣನಿಂದ ನೆರವೇರಿಸಲ್ಪಟ್ಟಿತು. ರಾಮೇಶ್ವರದಿಂದ ರಾಮಲಿಂಗ ಪ್ರತಿಷ್ಟಾಪನ ಉತ್ಸವದ ದಿನ ಉತ್ಸವ ವಿಗ್ರಹಗಳು ಇಲ್ಲಿಗೆ ಬಂದು ಹಿಂತಿರುಗಿದ ನಂತರ ವಿಭೀಷಣನ ಪಟ್ಟಾಭಿಷೇಕ ನೆನಪಿನ ಸಂಭ್ರಮ. ಮರುದಿನ ರಾಮಲಿಂಗ ಪ್ರತಿಷ್ಟಾಪನಾ ಮಹೋತ್ಸವ ರಾಮೇಶ್ವರದಲ್ಲಿ.
ಜಟಾ ತೀರ್ಥ ರಾಮೇಶ್ವರದಿಂದ ಧನುಷ್ಕೋಟಿಗೆ ಹೋಗುವ ರಸ್ತೆಯಲ್ಲಿ 2.5 ಮೈಲಿ ದೂರದಲ್ಲಿ ಇದೆ. ರಾವಣನ ವಧೆಯ ನಂತರ ಅಯೋಧ್ಯೆಗೆ ಹಿಂತಿರುಗುವಾಗ ರಾಮನು ತನ್ನ ಜಟೆಯನ್ನು ಈ ತೀರ್ಥದಲ್ಲಿ ಒದ್ದೆ ಮಾಡಿದಂದಿನಿಂದ ಜಟಾ ತೀರ್ಥವೆಂದು ಹೆಸರು ಬಂದಿತು. ಸಮುದ್ರ ತೀರದಲ್ಲಿ ಕಲ್ಲಿನಲ್ಲಿ ಮಾಡಲ್ಪಟ್ಟ ವಿಜ್ಞೇಶ್ವರ ವಿಗ್ರಹ. 300 ಚ.ಅಡಿ ವಿಸ್ತೀರ್ಣವಿರುವ ಇದರಲ್ಲಿ ಸ್ನಾನ ಮಾಡಿದರೆ ಸುಃಖ ಮತ್ತು ಆರೋಗ್ಯ ಹೊಂದುವರಂತೆ.
ಧನುಷ್ಕೋಟಿ ರಾಮೇಶ್ವರದಿಂದ 7 ಕೀ ಮೀ. ದೂರದಲ್ಲಿದೆ. ನದಿಯಂತಿರುವ ಸಮುದ್ರದ ಅಂಚಿನ ಮರಳಲ್ಲಿ ವಾಹನದ ಚಕ್ರ ಉರುಳಿಕೊಂಡು ಸಾಗುವಾಗ ಒಂದರೆಗಳಿಗೆ ಕೂಡಾ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಎಲ್ಲಿ ವಾಹನವೇ ಉರುಳಿಬಿಡುತ್ತೊ ಅನ್ನುವಷ್ಟು ಆತಂಕ ಸೃಷ್ಟಿಸುತ್ತದೆ. ಒಂದು ಕಡೆ ನೀರು ಇನ್ನೊಂದು ಕಡೆ ಮರಳು ದಿಣ್ಣೆ ಕುರುಚಲು ಬಳ್ಳಿ ಗಿಡಗಂಟೆ. ತುಂಬಾ ಸುಂದರವಾದ ಸೃಷ್ಟಿಯ ಸೊಬಗು ವಿಶಾಲ ಸಮತಟ್ಟಾದ ಪ್ರದೇಶ. ಅನೇಕರು ಕಾಲ್ನಡಿಗೆಯಲ್ಲೆ ಸಾಗುವುದೂ ಉಂಟು.
ಧನಸ್ಸು ಅಂದರೆ ಬಿಲ್ಲು, ಕೋಟಿ ಅಂದರೆ ತುದಿ. ಶ್ರೀ ರಾಮನು ಲಂಕೆಗೆ ಹೋಗಲು ಸೇತುವೆ ಕಟ್ಟಲು ಒಂದು ಬಿಲ್ಲಿನಿಂದ ಭೂಮಿಯನ್ನು ಛೇದಿಸಿದನು. ಬಿಲ್ಲಿನ ಗುರ್ತಿನಿಂದ ಸೇತುವೆ ಬಂದಿಸಲ್ಪಟ್ಟ ಈ ಪವಿತ್ರವಾದ ಎರಡು ಸಮುದ್ರಗಳ ಸಂಗಮದಲ್ಲಿ ಸ್ನಾನ ಮಾಡಿ ನಂತರ ರಾಮೇಶ್ವರದಿಂದ ಮರಳುವಾಗ ಪುನಃ ಸೇತು ಸ್ನಾನ ಮಾಡುತ್ತಾರೆ.
1964 ಡಿಸೆಂಬರ್ 22-23 ರಂದು ಭೀಕರ ಸೈಕ್ಲಾನ್ ನಿಂದಾಗಿ ಇಲ್ಲಿಯ ಪಾಂಬನ್ ಮತ್ತು ಧನುಷ್ಕೋಟಿ ರೈಲು ಮಾರ್ಗ , ಈ ಊರು ಎಲ್ಲವೂ ನಿರ್ನಾಮವಾಗಿದೆ. ಈಗ ಕಾಲ್ನಡಿಗೆಯಲ್ಲಿ ,ಬಸ್ಸಿನಲ್ಲಿ, ಜೀಪಿನಲ್ಲಿ ಅಥವಾ ದೋಣಿಯಲ್ಲಿ ಪಾಂಬನ್ನಿಂದ ಧನುಷ್ಕೋಟಿ ಸೇರಬಹುದು. ಸುಮಾರು 1800 ಜನ ಹತರಾಗಿದ್ದು ಈಗ ಆ ಊರಿನ ಕುರುಹಾಗಿ ಶಿಥಿಲವಾದ ಸೇತುವೆ, ಬಂಡೆಗಳು ಗತ ವೈಭವವನ್ನು ಸೂಚಿಸುತ್ತವೆ. ಇಲ್ಲಿ ಶಿವನ ಸಣ್ಣ ದೇವಸ್ಥಾನವಿದೆ.
ರಾಮ ಸೇತು ನೀರಿನಲ್ಲಿ ಮುಳುಗಿದೆ. ಕಣ್ಣಿಗೆ ಕಾಣುವುದಿಲ್ಲ. ಆದರೆ ಸೇತುವೆ ಕಟ್ಟಲು ಉಪಯೋಗಿಸಿದಂತ ಎತ್ತಲಸಾಧ್ಯವಾದ ದೊಡ್ಡ ಭಾರವಾದ ಕಲ್ಲೊಂದನ್ನು ಸಂಗ್ರಹಿಸಿಟ್ಟಿದ್ದು ನೀರಿನಲ್ಲಿ ತೇಲುವುದು ಕಾಣಬಹುದು. ಇಲ್ಲಿಯ ಸಮುದ್ರದಲ್ಲಿ ಜೋರಾಗಿ ಅಲೆಗಳು ಬರುವುದಿಲ್ಲ. ಶಾಂತವಾದ ಸರೋವರದಂತೆ ತಿಳಿ ನೀಲವಾದ ಸ್ವಚ್ಛ ನೀರು . ಈ ಸಂಗಮದಲ್ಲಿ ಪಿತೃಗಳ ಅಸ್ಥಿಗಳನ್ನು ಬಿಡುತ್ತಾರೆ. ಸಣ್ಣ ಸಣ್ಣ ಗುಡಿಸಲುಗಳನ್ನು ಅಲ್ಲೊಂದು ಇಲ್ಲೊಂದು ಕಾಣಬಹುದು.
ಇಲ್ಲಿಂದ 11 ಕೀ.ಮೀ.ಸಾಗಿದರೆ ಶ್ರೀಲಂಕಾ ಬಾರ್ಡರ್ ತಲುಪಬಹುದು. ನೋಡುವ ಆಸೆಯಿರುವವರು ಕಾಲ್ನಡಿಗೆಯಲ್ಲೆ ಸಾಗಬೇಕು. ಇದು ರಾಮೇಶ್ವರದ ತುತ್ತ ತುದಿ. ರಾಮೇಶ್ವರದಿಂದ ಶ್ರೀಲಂಕೆಗೆ ಕೇವಲ 50 ಕೀ.ಮೀ. ದೂರವಿದ್ದರೂ ಈ ಮಾರ್ಗದಲ್ಲಿ ಸಾಗುವಂತಿಲ್ಲ. ಮಿಲಿಟರಿ ಕಾವಲಿದೆಯಂತೆ.
ಶ್ರೀ ರಾಮೇಶ್ವರ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳ ವೀಕ್ಷಣೆಯ ನಂತರ ಮಧ್ಯಾಹ್ನ ಊಟ ಮಾಡಿ ಮುಂದಿನ ಕ್ಷೇತ್ರ ಕನ್ಯಾಕುಮಾರಿಯತ್ತ ಹೊರಟಿತು ನಮ್ಮ ಪಯಣ.

ರಾಮೇಶ್ವರ….ಮಧುರೈ- ಭಾಗ 1 : http://surahonne.com/?p=15512
(ಮುಂದುವರಿಯುವುದು)
– ಗೀತಾ ಜಿ. ಹೆಗಡೆ
ವಿವರಣೆ ಚೆನ್ನಾಗಿದೆ. ನಾವು ಕೆಲವು ವರ್ಷಗಳ ಹಿಂದೆ ರಾಮೇಶ್ವರಕ್ಕೆ ಹೋಗಿ ಬಂದಿದ್ದು ನೆನಪಾಯಿತು.