(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಪ್ರಾಕೃತಿಕ ವಿಸ್ಮಯಗಳಿಂದ ಮಾನವ ನಿರ್ಮಿತ ವಿಸ್ಮಯಗಳತ್ತ
ನ್ಯೂಜೀಲ್ಯಾಂಡಿನ ಪ್ರಾಕೃತಿಕ ವಿಸ್ಮಯಗಳನ್ನು ಏನೆಂದು ಬಣ್ಣಿಸಲಿ – ಒಂದೆಡೆ ಬಿಸಿನೀರಬುಗ್ಗೆಗಳು, ಮಿಂಚುಹುಳಗಳ ತಾಣವಾದ ಸುಣ್ಣದ ಕಲ್ಲಿನ ಗುಹೆಗಳು, ಮತ್ತೊಂದೆಡೆ ಮಳೆಕಾಡುಗಳು, ಹಿಮಾಚ್ಛಾದಿತ ಪರ್ವತಗಳು, ಹಿಮನದಿಗಳು. ಅಬ್ಬಾ ನಿಸರ್ಗವು ತನ್ನೆಲ್ಲಾ ರಹಸ್ಯಗಳನ್ನು ಇಲ್ಲಿ ಬಯಲು ಮಾಡುತ್ತಾ ನಮ್ಮ ಕಣ್ಮನ ತುಂಬುತ್ತಾ ನಿಂತಿದ್ದಾಳೆ ಎಂಬ ಭಾವ ನಮ್ಮ ಮನದಲ್ಲಿ. ಕ್ವೀನ್ಸ್ ಟೌನ್ ನಿಂದ ಫಾಕ್ಸ್ ಗ್ಲೇಸಿಯರ್‌ನತ್ತ ಹೊರಟಿತ್ತು ನಮ್ಮ ಸವಾರಿ. ನಾವು ಸಾಗಿದ ಹಾದಿಯುದ್ದಕ್ಕೂ ಹಚ್ಚ ಹಸಿರು ಕಾಡು, ಅಲ್ಲಲ್ಲಿ ನೀಲ ಮಣಿಗಳಂತೆ ಹೊಳೆಯುತ್ತಿದ್ದ ಸರೋವರಗಳು. ಸರೋವರಗಳ ನಾಡೆಂದೇ ಹೆಸರಾಗಿರುವ ನ್ಯೂಜೀಲ್ಯಾಂಡಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ವನಾಕಾ ಸರೋವರದ ಬಳಿ ನಮ್ಮ ವಾಹನವನ್ನು ನಿಲ್ಲಿಸಿದರು. ಈ ಬೃಹತ್ತಾದ ಸರೋವರವು ಸಮುದ್ರ ಮಟ್ಟದಿಂದ 278 ಮೀಟರ್ ಎತ್ತರದಲ್ಲಿದ್ದು 192 ಕಿ.ಮೀ ವಿಸ್ತೀರ್ಣವಿದ್ದು 980 ಅಡಿ ಆಳವಿದೆ. ವನಾಕಾ ಎಂಬ ಪದವು ‘ವನಾಂಗ’ ಎಂಬ ಶಬ್ದದಿಂದ ಬಂದಿದ್ದು, ಇದರ ಅರ್ಥ ವಿದ್ಯಾ ದೇವತೆಯ ನೆಲೆ. ನಾವು ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಕಂಡು ಬರುವುದು ನದೀ ತೀರಗಳಲ್ಲಿ ಅರಳಿದ ನಾಗರೀಕತೆಗಳು. ಹಾಗೆಯೇ ಇಲ್ಲಿಯೂ ವನಾಕ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದಿರಬಹುದು, ಹಾಗಾಗಿ ಈ ಪವಿತ್ರ ಸ್ಥಳವು ಸರಸ್ವತಿಯ ನಾಮಧೇಯವನ್ನು ಹೊತ್ತು ನಿಂತಿದೆ. ಇದು ಯು ಆಕಾರದ ಕಣಿವೆಯಲ್ಲಿದ್ದು ಹತ್ತು ಸಾವಿರ ವರ್ಷಗಳ ಹಿಂದೆ ಹಿಮನದಿಯು ಕರಗಿದಾಗ ಉಂಟಾದ ಸರೋವರ. ಈ ಸರೋವರದ ಆಧಾರವಾಗಿರುವ ನದಿಗಳು ಮಾತುಕಿತುಕಿ ಹಾಗು ಮಾಕಾರೋರಾ. ಈ ಸರೋವರದಲ್ಲಿ ನಾಲ್ಕು ದ್ವೀಪಗಳಿದ್ದು, ಎಲ್ಲಿ ನೋಡಿದರೂ ಆಲ್ಪೈನ ವೃಕ್ಷಗಳದ್ದೇ ದರ್ಬಾರು. ಈ ಸರೋವರದ ಸುತ್ತಲೂ ಇರುವ ಆಲ್ಪ್ಸ್ ಪರ್ವತ ಶ್ರೇಣಿ, ಸ್ಫಟಿಕದಂತಿರುವ ನೀರು, ದೃಶ್ಯ ಕಾವ್ಯದಂತೆ ತೋರುವ ಈ ಸ್ಥಳ ಹಲವು ಬಗೆಯ ಸಾಹಸಕ್ರೀಡೆಗಳಿಗೆ ತವರೂರು. ನನ್ನ ಸಹ ಪ್ರವಾಸಿಗರ ಮೊಬೈಲುಗಳಿಗೆ ಬಿಡುವೇ ಇರಲಿಲ್ಲ. ಇಂದಿನ ಮೊಬೈಲ್ ಯುಗದಲ್ಲಿ ತಾವು ನೋಡಿ ಆನಂದ ಪಡುವುದಕ್ಕಿಂತ ಫೋಟೋಗಳನ್ನು ಕ್ಲಿಕ್ಕಿಸಿ ತಮ್ಮ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಶೇರ್ ಮಾಡುವವರೇ ಹೆಚ್ಚು.
ವನಾಕ ನದಿ ತೀರದ ಸೌಂದರ್ಯವನ್ನು ಸವಿಯುತ್ತಾ ನಾವು ಮತ್ತೊಂದು ವಿಸ್ಮಯ ಲೋಕಕ್ಕೆ ಹೆಜ್ಜೆಯಿಟ್ಟೆವು. ಚಿತ್ರ ವಿಚಿತ್ರವಾದ ಆಕಾರಗಳು, ತಲೆಕೆಳಗಾಗಿ ನಿಂತಿರುವ ವಿಗ್ರಹಗಳೂ, ಗೋಜಲು ಗೋಜಲಾಗಿರುವ ಮಾರ್ಗಗಳೂ ಪ್ರವಾಸಿಗರನ್ನು ತಬ್ಬಿಬ್ಬು ಮಾಡುವಂತಿದ್ದವು. ಈಗ ನಾವು ಭೇಟಿ ನೀಡಿದ್ದ ಪ್ರವಾಸಿ ಕೇಂದ್ರ ಯಾವುದು ಗೊತ್ತೆ? ವಿಸ್ಮಯ ಲೋಕ ಅಥವಾ ‘ಪಜ್ಲಿಂಗ್ ವರ್ಲ್ಡ್’. ಎಲ್ಲರನ್ನೂ ತಬ್ಬಿಬ್ಬು ಮಾಡುವ ಮಾಂತ್ರಿಕ ಲೋಕ. ಈ ಚಿತ್ರ ವಿಚಿತ್ರವಾದ ಲೋಕದಲ್ಲಿ ಏನೇನಿದೆ ನೋಡೋಣ ಬನ್ನಿ. 1973 ರಲ್ಲಿ ಆರಂಭವಾದ ಈ ವಿಸ್ಮಯ ಲೋಕದ ಕತೃಗಳು – ಸ್ಟುವಾರ್ಟ್ ಮತ್ತು ಜಾನ್ ಲ್ಯಾಂಡ್ಸ್ಬ್ರಾ. ಇವರು ತಮ್ಮ ಮನೆ ಮಠ ಎಲ್ಲವನ್ನೂ ಮಾರಿ ಈ ವಿಸ್ಮಯ ಲೋಕದ ಮೊದಲನೆಯ ಅಂತಸ್ತನ್ನು ರಚಿಸಿದರು. ವೈಜ್ಞಾನಿಕ ಹಾಗೂ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಯಾದ ಈ ಕಲಾತ್ಮಕವಾದ ವಿಸ್ಮಯ ಲೋಕಕ್ಕೆ ವಿಶ್ವದ ಮೊಟ್ಟಮೊದಲ ‘ಮೆಗಾ ಮೇಝ್’ ರಚಿಸಿದ ಕೀರ್ತಿ ಸಲ್ಲುವುದು. ಈ ವಿಸ್ಮಯ ಲೋಕದ ಮುಂಭಾಗದಲ್ಲಿ ನಮ್ಮನ್ನು ಸ್ವಾಗತಿಸಲು ನಿಂತಿತ್ತು ಒಂದು ವಾಲು ಗೋಪುರ. ವಾಲು ಗೋಪುರ ಎಂದಾಕ್ಷಣ ನೆನಪಿಗೆ ಬರುವುದು ವಿಶ್ವದ ಏಳು ಅದ್ಭುತಗಳಲ್ಲೊಂದಾದ ಪೀಸಾದ ವಾಲು ಗೋಪುರ ಅಲ್ವಾ. ಈ ಗೋಪುರ ಐವತ್ತೆಂಟು ಅಡಿ ಬಾಗಿದ್ದು, ಪ್ರವಾಸಿಗರು ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಧಾವಿಸಿದರು, ಆ ಗೋಪುರವನ್ನು ತಮ್ಮ ಕೈಗಳಿಂದ ಎತ್ತಿದ ಹಾಗೆ, ಅದರಡಿ ಬೀಳುವ ಹಾಗೆ, ಅದರ ಮೇಲೆ ಒರಗಿ ನಿಂತು ಇತ್ಯಾದಿ. ಪ್ರವೇಶದ್ವಾರದಲ್ಲಿ ನಾಲ್ಕು ಬಣ್ಣಗಳ – ಹಳದಿ, ಕೆಂಪು, ಹಸಿರು ಮತ್ತು ನೀಲ ವರ್ಣದ ಗೋಪುರಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಹಾಗೆ ನಿಂತಿದ್ದವು. ನಾವು ಆ ಗೋಪುರಗಳನ್ನು ನೋಡುತ್ತಾ ಅಲ್ಲಿದ್ದ ಕೆಫೆಗೆ ಕಾಲಿಟ್ಟೆವು. ನಮ್ಮ ಮುಂದಿದ್ದ ಟೇಬಲ್ ತುಂಬಾ ಹಲವು ಬಗೆಯ ಪಝಲ್ ಗೇಮ್ಸ್ಗಳು ನಮ್ಮ ದಾರಿ ಕಾಯುತ್ತಿದ್ದೆ. ಎಲ್ಲರೂ ಸಮಯದ ಪರಿವೆ ಇಲ್ಲದೆ ಆ ಪಝಲ್‌ಗಳನ್ನು ಬಿಡಿಸುವುದರಲ್ಲಿ ಮಗ್ನ. ಮಂದಬುದ್ಧಿಯವಳಾದ ನನಗೂ ಇಂತಹ ಗೇಮ್ಸ್ಗಳಿಗೂ ಗಾವುದ ದೂರ. ನಾನಂತೂ ಕಾಫಿ ಬರುವುದನ್ನೇ ಕಾಯುತ್ತಿದ್ದೆ.
ಮುಂದೆ ಸಾಗಿದರೆ ಒಂದಕ್ಕಿಂತ ಒಂದು ಕುತೂಹಲ ಹುಟ್ಟಿಸುವಂತಹ ಆರು ಕ್ರೇಝಿ ಕೊಠಡಿಗಳು. ಮೊದಲನೆಯ ಕೊಠಡಿ ‘ಹಾಲೋಗ್ರಾಮ್ಸ್’ ಗೋಡೆಗಳ ಮೇಲೆಲ್ಲಾ ಬಣ್ಣ ಬಣ್ಣದ ಚಿತ್ರಗಳ ಮೆರವಣಿಗೆ. ಈ ಚಿತ್ರಗಳು ಗೋಡೆಗಳಿಂದ ಎದ್ದು ನಮ್ಮೆಡೆಗೆ ಬರುತ್ತಿದ್ದವು. ಅಲ್ಲೊಂದು ಆನೆ, ಈ ಚಿತ್ರದಲ್ಲಿರುವ ಆನೆಯ ಕಾಲುಗಳೆಷ್ಟು ಹೇಳಬಲ್ಲಿರಾ? ನಾಲ್ಕು, ಆರು, ಎಂಟು ..ಎಣಿಸಿದಷ್ಟೂ ಗೊಂದಲು, ಎಲ್ಲವೂ ಗೋಜಲು ಗೋಜಲು. ಈ ಭ್ರಮಾಲೋಕದಲ್ಲಿ ಈಸುತ್ತಾ ಸಾಗುತ್ತಾ ಮುಮದೆ ಬಂದರೆ ಅಲ್ಲೊಂದು ‘ಟಿಲ್ಟೆಡ್ ಹೌಸ್’ ಅಂದರೆ ಹಿಂದೆ ಮುಂದೆ ಓಲಾಡುವ ಕೊಠಡಿ. ನನಗೆ ಆ ಕೊಠಡಿಯೊಳಗೆ ಕಾಲಿಡಲೇ ಭಯ, ಮೆಲ್ಲಗೆ ಗೋಡೆ ಹಿಡಿದು ಹೆಜ್ಜೆಯಿಟ್ಟೆ, ಹೆಂಡ ಕುಡಿದವಳ ಹಾಗೆ ಓಲಾಡಿದೆ. ನಾನು ಹೆಜ್ಜೆಯಿಟ್ಟದ್ದೇ ಒಂದೆಡೆಯಾದರೆ, ನಾನು ಹೋಗುತ್ತಿದ್ದುದು ಮತ್ತೊಂದೆಡೆ. ನನ್ನ ಜೊತೆಗಾರರು ನಕ್ಕು ನಲಿಯುತ್ತಾ ಉರುಳುತ್ತಾ ತೂರಾಡುತ್ತಾ ಹೋಗುತ್ತಿರುವಾಗ ನನಗೆ ನೆನಪಾಗಿದ್ದು ಶಿಶುನಾಳ ಶರೀಫರ ಗೀತೆ, ‘ಬಿದ್ದೀಯಬ್ಬೇ ಮುದುಕಿ ಬಿದ್ದೀಯಬ್ಬೇ, ನೀ ದಿನ ಹೋದಾಕಿ..” ಪಕ್ಕದಲ್ಲಿ ಇದ್ದ ಕುರ್ಚಿಯಲ್ಲಿ ಕುಳಿತೆ, ಅದು ಇದ್ದಕಿದ್ದ ಹಾಗೆ ಸುಯ್ ಎಂದು ಮೇಲೆ ಹೋಯಿತು. ಗಾಬರಿಯಿಂದ ಕಿರುಚಿದೆ. ನನ್ನ ಮುಂದೆ ಒಬ್ಬಳು ಅಪ್ಸರೆ ಗಾಳಿಯಲ್ಲಿ ತೇಲಿ ಬರುತ್ತಿದ್ದಳು. ಆಕಾಶಯಾನ ಮಾಡುವ ಗಗನಯಾತ್ರಿಗಳ ಹಾಗೆ ತೇಲುತ್ತಿದ್ದಳು. ನೋಡ ನೋಡುತ್ತಿದ್ದಂತೆ ಒಂದು ಚೆಂಡು ಪುಟಿಯುತ್ತಾ ನನ್ನೆಡೆಗೆ ಬಂತು. ಈ ಭ್ರಮಾಲೋಕದ ಸಹವಾಸವೇ ಬೇಡ ಎಂದು ಹೊರಗೆ ಬಂದೆ.
ಮುಂದಿನ ದೃಶ್ಯ ಗಾಬರಿ ಹುಟ್ಟಿಸುವಂತಿತ್ತು, ಇದರ ಹೆಸರು, ‘ಹಾಲ್ ಆಫ್ ಫಾಲೋಯಿಂಗ್ ಫೇಸಸ್’. ಗೋಡೆಯ ಮೇಲೆಲ್ಲಾ ಜಗತ್ತಿನ 168 ಪ್ರಖ್ಯಾತ ನಾಯಕರ ಮುಖಾರವಿಂದಗಳು. ಇದೊಂದು ಜೀವಂತವಾದ ಗೋಡೆ, ಎಲ್ಲಾ ಚಿತ್ರಗಳೂ ಕ್ಷಣ ಕ್ಷಣಕ್ಕೂ ತಮ್ಮ ಮುಖಭಾವ ಬದಲಿಸುತ್ತಾ ನಮ್ಮ ಹಿಂದೆ ಹಿಂದೆಯೇ ಬರುವಂತೆ ತೋರುತ್ತಿದ್ದವು. ನಾನು ಅಬ್ರಹಾಂ ಲಿಂಕನ್ ರವರ ಫೋಟೋ ನೋಡುತ್ತಾ ಬಂದೆ, ಅವರ ಮುಖ ನನ್ನ ಹಿಂದೆ ಬರುತ್ತಲೇ ಇತ್ತು. ನಾನು ಗಾಬರಿಯಿಂದ ಮುಂದೆ ಮುಂದೆ ಓಡುತ್ತಾ ಹೋದಂತೆ ಆ ಮುಖಗಳೂ ನನ್ನ ಹಿಂದೆ. ವಾಹ್ ಎಂತಹ ಅದ್ಭುತ! ರತ್ನಮಂಜರಿ ಸಿನೆಮಾದ ಗೀತೆಯೊಂದು ನೆನಪಾಗಿತ್ತು, ‘ಯಾರು ಯಾರು ನೀ ಯಾರು, ಎಲ್ಲಿಂದ ಬಂದೆ ನೀ ಯಾರು’. ಅಲ್ಲಿಂದ ಮುಂದೆ ‘ಪಬ್ಲಿಕ್ ಟಾಯ್ಲೆಟ್’ ಎಂಬ ಬರಹ ಇದ್ದ ಕೊಠಡಿ ಕಡೆ ಹೋದಾಗ ಮನದಾಳದಿಂದ ನಗು ಅಲೆ ಅಲೆಯಾಗಿ ಚಿಮ್ಮಿತ್ತು. ಒಂದು ವಿಶಾಲವಾದ ಕೊಠಡಿ, ಸಾಲು ಸಾಲು ಬೆಂಚುಗಳು, ಬೆಂಚುಗಳ ಮಧ್ಯೆ ಮಧ್ಯೆ ವೃತ್ತಾಕಾರದ ರಂಧ್ರಗಳು, ಅಲ್ಲಲ್ಲಿ ಪಾಯಿಖಾನೆ ಮಾಡಲು ಕುಳಿತಿದ್ದ ಗಂಡು ಮಕ್ಕಳ ಮೂರ್ತಿಗಳು. ನಾನೂ ಒಂದು ಬೆಂಚಿನ ಮೆಲೆ ಕುಳಿತು ಫೋಟೋ ಕ್ಲಿಕ್ಕಿಸಿ ವಾಟ್ಸ್ಅಪ್ ಸ್ಟೇಟಸ್‌ಗೆ ಹಾಕಿದೆ. ನನ್ನ ಆತ್ಮೀಯರ ಸಾಲು ಸಾಲು ಪ್ರತಿಕ್ರಿಯೆಗಳು ಥಟ್ಟನೆ ಬಂದವು. ನಾನು ಹ, ಹ, ಹಾ ಎಂದು ಕೇಕೆ ಹಾಕುತ್ತಾ ಸಾಗಿದೆ.
ಮುಂದಿನ ಕೊಠಡಿಯಲ್ಲಿ ನಮ್ಮ ಊಹೆಗೂ ನಿಲುಕದ ಮ್ಯಾಜಿಕ್ ಇತ್ತು. ಆ ಕೊಠಡಿಯ ಎರಡೂ ಬದಿಯಲ್ಲಿ ಒಂದೊಂದು ಬಾಗಿಲು, ಒಂದು ಬಾಗಿಲ ಬಳಿ ನಿಂತರೆ ಎತ್ತರವಾಗಿ ಕಂಡರೆ ಮತ್ತೊಂದು ಬಾಗಿಲ ಬಳಿ ನಿಂತರೆ ಕುಬ್ಜಾಕೃತಿ. ಎಲ್ಲರೂ ಕೂಗಾಡುತ್ತಾ ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಓಡಾಡುತ್ತಿದ್ದರು. ಆಗ ನನ್ನ ಮನದಲ್ಲಿ ಮೂಡಿದ್ದ ಭಾವ. ಹೌದಲ್ಲ, ಉತ್ತಮವಾದ ನಡವಳಿಕೆಯಿಂದ ಒಬ್ಬ ಮೇರು ವ್ಯಕ್ತಿತ್ವವುಳ್ಳ ಮನುಷ್ಯನಾದರೆ, ಕೆಟ್ಟ ನಡವಳಿಕೆಯಿಂದ ಕುಬ್ಜನಾಗಲೂಬಹುದಲ್ಲವೇ? ಮುಂದೆ ಕಂಡಿದ್ದು ವಿವಿಧ ಜಾಮಿತಿ ಆಕೃತಿಗಳು, ಲಿಫ್ಟ್ನಲ್ಲಿ ನಿಂತರೆ ಮೇಲೆ ಕಾಣುವ ರೇಖಾ ಚಿತ್ರಗಳು ಆಕಾಶದೆತ್ತರಕ್ಕೆ ಏರಿದ ಹಾಗೆ ಕಂಡರೆ, ಕೆಳಗೆ ಇಣುಕಿ ನೋಡಿದರೆ ಆಳವಾದ ತಳವಿಲ್ಲದ ಪ್ರಪಾತದಂತೆ. ಕೆಲವು ಬಾರಿ ದಿಗಿಲು ಹುಟ್ಟಿಸುವಂತೆ ಕಂಡರೆ ಮತ್ತೊಮ್ಮೆ ಕುತೂಹಲ ಮೂಡುತ್ತಿತ್ತು. ಅಲ್ಲೊಂದು ತೇಲುತ್ತಾ ಬಂತು ನೀರು ಸುರಿಸುತ್ತಿದ್ದ ನಳವೊಂದು, ಕೊಠಡಿಯ ಮಧ್ಯೆ ಬಂದು ಗಾಳಿಯಲ್ಲಿ ನರ್ತಿಸುತ್ತಾ. ಅರೇಬಿಯನ್ ನೈಟ್ಸ್ ಕಥೆಗಳಲ್ಲಿ ಕೇಳಿರಬಹುದು ಆಗಸದಲ್ಲಿ ಹಾರುವ ಕಾರ್ಪೆಟನ್ನು ಆದರೆ ಇಲ್ಲಿ ಕಂಡದ್ದು ಹಾರುವ ಬೆಂಚೊಂದನ್ನು.
ನಾವು ವಿಸ್ಮಯ ಲೋಕದ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದೆವು. ಅದೇ ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ ರಚಿಸಲ್ಪಟ್ಟ ಚಕ್ರವ್ಯೂಹವನ್ನು ಹೋಲುತ್ತಿದ್ದ ‘ಮೇಝ್’. ಇಲ್ಲಿನ ಪ್ರವೇಶ ದ್ವಾರದಲ್ಲಿಯೇ ಒಂದು ಸವಾಲಿತ್ತು, ‘ಈ ಮೇಝ್ ನಲ್ಲಿರುವ ನಾಲ್ಕು ಗೋಪುರಗಳನ್ನು ಮುಟ್ಟಿ ಬಂದವರು ವಿಜಯಿಯಾಗುವರು. ನಾವೂ ಒಂದು ಪ್ರಯತ್ನ ಮಾಡೋಣ ಎಂದು ಹೊರಟೆವು, ನಾನಂತೂ ನನ್ನ ಗೆಳತಿಯ ಕೈಯನ್ನು ಭದ್ರವಾಗಿ ಹಿಡಿದೇ ಒಳ ನಡೆದೆ. ಒಂದು ಮೂಲೆಯಲ್ಲಿದ್ದ ಹಳದಿ ಗೋಪುರ ಕಣ್ಣಿಗೆ ಬಿದ್ದಾಗ ಖುಷಿಯೋ ಖುಷಿ. ಮೊದಲನೆಯ ಹಂತದಲ್ಲಿ ಜಯಶಾಲಿಗಳಾಗಿದ್ದೆವು, ಆದರೆ ಆ ಸಂತೋಷ ಬಹಳ ಹೊತ್ತು ಇರಲಿಲ್ಲ. ಮುಂದೆ ಸಾಗಿದ ಹಾದಿಯೆಲ್ಲಾ ಹಾವಿನಂತೆ ಅಂಕುಡೊಂಕಾಗಿ ಕಂಡವು, ಎಲ್ಲಿ ಹೋದರೂ ಅಲ್ಲಿ ರಸ್ತೆ ಬಂದ್ ಆಗಿರುತ್ತಿತ್ತು. ಸುಮಾರು ಒಂದು ಗಂಟೆ ತಿರುಗಾಡಿದೆವು. ಹೊಟ್ಟೆ ಚುರುಗುಟ್ಟುತ್ತಿತ್ತು. ಕಾಲುಗಳು ಪದ ಹೇಳುತ್ತಿದ್ದವು. ಆದರೆ ಈ ಚಕ್ರವ್ಯೂಹದಿಂದ ಪಾರಾಗುವ ಮಾರ್ಗವೇ ಗೋಚರಿಸಲಿಲ್ಲ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದ ಅನುಭವ ನಮ್ಮದಾಗಿತ್ತು. ಇದೊಂದು ದಾರಿಯಲ್ಲಿ ಸಾಗೋಣ, ನಮ್ಮ ಕೊನೆಯ ಪ್ರಯತ್ನ ಎಂಬ ಭಾವ ಮನಸ್ಸಿನಲ್ಲಿ ಮೂಡಿದಾಗ ಥಟ್ಟಂತೆ ‘ಫಿನಿಷ್’ ಎಂಬ ಪದ ಕಣ್ಣಿಗೆ ಬಿತ್ತು. ಪಕ್ಕದಲ್ಲಿ ಇದ್ದ ‘ಎಕ್ಸಿಟ್’ ಎನ್ನುವ ಫಲಕ ನಮ್ಮಲ್ಲಿ ಉತ್ಸಾಹ, ಉಲ್ಲಾಸ, ಲವಲವಿಕೆ ತುಂಬಿಸಿತ್ತು.
ಈ ಮೇಝ್ ನಮ್ಮನ್ನು ತಬ್ಬಿಬ್ಬು ಮಾಡುವ ಜಟಿಲ ಮಾರ್ಗಗಳ ಜಾಲವಾಗಿತ್ತು. ಅಭಿಮನ್ಯುವಿನಂತೆ ಈ ಚಕ್ರವ್ಯೂಹದಲ್ಲಿ ಸಿಲುಕಿದ ಆತಂಕ ನಮ್ಮದಾಗಿತ್ತು. ಬದುಕೇ ಹಾಗಲ್ಲವೇ? ಒಂದೊಂದೇ ಸವಾಲುಗಳು, ಸಂಕಷ್ಟಗಳು ಎದುರಾಗುವುವು, ಇನ್ನೇನು ಈ ಸವಾಲುಗಳನ್ನು ಪರಿಹರಿಸಿ ಗೆದ್ದೆವು ಎನ್ನುವ ಹೊತ್ತಿಗೆ ಮತ್ತೊಂದು ಸವಾಲು ಪ್ರತ್ಯಕ್ಷ. ಛಲ ಬಿಡದ ತ್ರಿವಿಕ್ರಮನಂತೆ ಈ ಸವಾಲುಗಳನ್ನು ಎದುರಿಸುತ್ತಾ ಮುಂದೆ ಸಾಗುವಾಗ ಇದ್ದಕ್ಕಿದ್ದಂತೆ ಸಿಗುವುದು ಹೊರ ಹೋಗುವ ಮಾರ್ಗ. ಎಲ್ಲಿಂದಲೋ ಮೊಳಗುವುದೊಂದು ಅಮೃತವಾಣಿ, ‘ಬಾ ಮಗೂ, ನನ್ನ ಬಳಿ’. ಈ ಜೀವನವೇ ಒಂದು ಜಾತ್ರೆಯ ಹಾಗೆ, ನಾಲ್ಕು ದಿನದ ಬದುಕು, ಜಾತ್ರೆಗೆಂದು ಬಂದವರು ಮರಳಿ ಹೋಗಲೇ ಬೇಕಲ್ಲವೇ?
ನಿಸರ್ಗದ ಚಮತ್ಕಾರಗಳನ್ನು ಕಂಡವರು ಮಾನವ ನಿರ್ಮಿತ ಮಾಯಾಲೋಕವನ್ನು ಕಂಡಾಗ ಯಾರು ಮೇಲು? ಹಲವು ಆವಿಷ್ಕಾರಗಳನ್ನು ಮಾಡುತ್ತಾ ಸಾಗಿರುವ ಮಾನವನೇ ಅಥವಾ ನಿಸರ್ಗವೇ? ಯಾರು ಗೆದ್ದವರು ಎಂಬ ಸಂದೇಹ ಮನದಲ್ಲಿ ಕಾಡತೊಡಗಿತ್ತು.
(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ: ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 9
ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.