ಕೇದಾರದಲ್ಲಿ ಒಂದು ದಿನ

Share Button

ಆಸ್ತಿಕರಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂಬ ಭಾವ ಹುಟ್ಟಿಸುವ ಸ್ಥಳ ಕೇದಾರನಾಥ. ಚಾರ್ ಧಾಮ್ ಯಾತ್ರೆಯ ಅಂಗವಾಗಿ, 17 ಸೆಪ್ಟೆಂಬರ್ 2016 ರಂದು ಹಿಮಾಲಯದ ಮಡಿಲಿನಲ್ಲಿರುವ ಕೇದಾರನಾಥಕ್ಕೆ ಭೇಟಿ ಕೊಟ್ಟಿದ್ದೆವು. ಸಂಜೆ ಐದು ಗಂಟೆಗೆ ಒಳಗೆ ಹೋಗಿ ದೇವರ ದರ್ಶನ ಮಾಡಿ, ಪ್ರದಕ್ಷಿಣೆ ಹಾಕಿ, ಫೊಟೋ ಕ್ಲಿಕ್ಕಿಸಿ ಸಂಭ್ರಮಿಸಿದೆವು.ಮೊದಲ ಬಾರಿಗೆ  ಬಂದ ನಮ್ಮಂತಹ ಕೆಲವರಿಗೆ ಕೇದಾರದ ನೆಲವನ್ನು ತಲಪಿದಾಗ ಧನ್ಯತಾ ಭಾವ ಸಿದ್ದಿಸಿತು.

ನಮ್ಮ ತಂಡದಲ್ಲಿ ಕೆಲವರು ಈ ಮೊದಲೇ ಕೇದಾರಕ್ಕೆ ಬಂದವರಿದ್ದರು. ಅವರು ತಮ್ಮ ಹಿಂದಿನ ಭೇಟಿಯ ಸಂದರ್ಭದಲ್ಲಿ ‘ದೇವಾಲಯದ  ಹಿಂದಿನ  ಬೆಟ್ಟ ಎತ್ತರವಾಗಿತ್ತು,   ಪಕ್ಕದಲ್ಲಿ  ಶಂಕರಗುಡಿಯಿತ್ತು,  ದೇವಾಲಯದ ಎದುರು ಭಾಗದಲ್ಲಿ ಸುಮಾರು ಕಟ್ಟಡಗಳು ಇದ್ದುವು, ದೇವಾಲಯದ ಒಳಗೂ ನೀರು ತೊಟ್ಟಿಕ್ಕುತಿತ್ತು. ಮೊದಲಿನ ಕೇದಾರದ ಮುಂದೆ ಇದೇನೂ ಅಲ್ಲ, ಈಗ ಬಹಳಷ್ಟು ಬದಲಾಗಿದೆ’  ಅನ್ನುತ್ತಿದ್ದರು. ಜೂನ್ 17,2013 ರಂದು  ಕೇದಾರದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಹಾನಿಗೊಳಗಾದ ಕಾಲುದಾರಿ, ಕಟ್ಟಡಗಳು ಅಲ್ಲಲ್ಲಿ ಇವೆಯಾದರೂ, ಸಾಕಷ್ಟು ಹೊಸ ಕಟ್ಟಡಗಳನ್ನೂ, ಟೆಂಟ್ ಗಳನ್ನೂ ನಿರ್ಮಿಸಿ ಮಾಡಿ ಯಾತ್ರಿಕರಿಗೆ ಅನುಕೂಲತೆಗಳನ್ನು ಕಲ್ಪಿಸಿದ್ದಾರೆ.

ನಮ್ಮ ವಾಸ್ತವ್ಯಕ್ಕೆ ಅಲ್ಲಿಯೇ ಪಕ್ಕದ ವಸತಿಗೃಹವನ್ನು ಕಾಯ್ದಿರಿಸಿದ್ದರು. ರಾತ್ರಿಯ ಪೂಜೆಗೆ ಇನ್ನೂ ಸಮಯವಿದ್ದುದರಿಂದ ಮಹಿಳಾಮಣಿಯರೆಲ್ಲರೂ ಒಟ್ಟಾಗಿ ಭಜನೆ, ಶಿವಸ್ತುತಿ ಹಾಡಲಾರಂಭಿಸಿದರು.  ಹಾಡು ಬಾರದವರೂ, ತಾಳ ಹಾಕುತ್ತಾ, ಭಜನೆಯಲ್ಲಿ ಪಾಲುದಾರರಾದರು.  ಸಂಜೆ ಏಳುಗಂಟೆಯಿಂದ ಆರಂಭವಾಗುವ ಪೂಜಾ ಕಾರ್ಯಕ್ರಮಗಳನ್ನು ನೋಡಲೆಂದು ದೇವಾಲಯದ ಬಳಿ ಬಂದಾಗ ಆಗಲೇ ಬಹಳಷ್ಟು ಜನ ಸೇರಿದ್ದರು. ಕೆಲವು ಸಾಧು-ಸಂತರು ವಿವಿಧ ಬಣ್ಣದ  ನಾಮ ಧರಿಸಿಕೊಂಡು ಬಂದಿದ್ದರು.

ಮಂದಿರದಲ್ಲಿ ಸಾಕಷ್ಟು ಜನರಿದ್ದುದರಿಂದ ನಾವು  ಹೊರಗಡೆಯೇ ನಿಂತಿದ್ದೆವು. ಒಳಗಡೆ ಪೂಜೆ ಮುಗಿಸಿ ಬಂದ ಅರ್ಚಕರು ದೇವಸ್ಥಾನದ ಹೊರಗೆ ಬಂದು ಒಂದು ದಿಕ್ಕಿನತ್ತ ಕೈ ಎತ್ತಿ ಆರತಿ ಮಾಡಿದರು. ಆ ಕಡೆಯಲ್ಲಿ  ಕೇದಾರವನ್ನು ರಕ್ಷಿಸುವ ದೈವವಾದ  ‘ಭೈರವನ’ ಗುಡಿಯಿದೆ. ಹಾಗಾಗಿ, ಅದು ಭೈರವನಿಗೆ ಸಲ್ಲಿಸುವ ಪೂಜೆ.

ಕೇದಾರನಾಥದ ಹವಾಗುಣಕ್ಕೆ ತಕ್ಕಂತೆ ಕೇಸರಿ-ಕೆಂಪು ಬಣ್ಣದ ನಿಲುವಂಗಿ, ಜಗಮಗಿಸುವ ಶಾಲು ಧರಿಸಿ, ನೊಸಲಲ್ಲಿ ವಿಭೂತಿ ನಾಮ ಬಳಿದು, ಘನಗಾಂಭೀರ್ಯ ಮುಖಭಾವ ಹೊಂದಿದ್ದ ಪ್ರಧಾನ ಅರ್ಚಕರ ರೂಪವು ಭಯ-ಭಕ್ತಿ ಹುಟ್ಟಿಸುವಂತಿತ್ತು.  ಪೂಜೆಯ ನಂತರ ನಮ್ಮ ಸರದಿ ಬಂದಾಗ ದೇವಾಲಯದ ಒಳ ಹೊಕ್ಕು ದರ್ಶನ ಪಡೆದು ಇನ್ನೊಂದು ಬಾಗಿಲಿನಲ್ಲಿ ಹೊರಬಂದೆವು. ಅಷ್ಟರಲ್ಲಿ, ಜನದಟ್ಟಣೆ ಕಡಿಮೆಯಾದುದರಿಂದ, ಇನ್ನೊಮ್ಮೆ ಸರದಿ ಸಾಲಿಗೆ ಸೇರಿ ನೋಡೋಣ ಎಂದು ಪುನ: ದರ್ಶನ ಮಾಡಿದೆವು! ಹೊರಗೆ ಬಂದಾಗ   ನಮಗೆ ತಿಳಿದುದೇನೆಂದರೆ, ಅರ್ಚಕರು ಗರ್ಭಗುಡಿಯಿಂದ ಹೊರಬಂದ ಮೇಲೆ, ಆ ಸಮಯದಲ್ಲಿ  ದೇವಾಲಯದ ಪ್ರಾಂಗಣದಲ್ಲಿ ಇರುವವರ ಹಣೆಗೆ ತಮ್ಮ ಕೈಯಾರೆ ವಿಭೂತಿ  ಹಚ್ಚುತ್ತಾರೆ ಎಂದು.  ಪುನ: ದೇವಾಲಯದ ಒಳ ಹೊಕ್ಕು ದರ್ಶನ ಮಾಡಿ, ಅರ್ಚಕರ ಕೈಯಿಂದ ಹಣೆಗೆ  ವಿಭೂತಿ ಹಚ್ಚಿಸಿಕೊಂಡು ಬಂದೆವು. ಹೀಗೆ,  3-4 ಬಾರಿ ದರ್ಶನ ಮಾಡಿ ಸಡಗರ ಪಟ್ಟೆವು. ಪ್ರತಿದಿನ ಕೇದಾರದಲ್ಲಿ ಮುಂಜಾನೆ ದೇವರಿಗೆ ಅಭಿಷೇಕ, ಪೂಜೆ ನಡೆಯುತ್ತದೆ.ಅರ್ಚಕರಿಗೆ ಮುಂಚಿತವಾಗಿ ತಿಳಿಸಿ, ಅನುಮತಿ ಪಡೆದರೆ, ಆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸುತ್ತದೆ.

ಕೇದಾರನಾಥದ ಸ್ಥಳಪುರಾಣದ ಪ್ರಕಾರ, ಕುರುಕ್ಷೇತ್ರದ ಯುದ್ಧಾನಂತರ  ಭ್ರಾತೃಹತ್ಯೆ  ಮತ್ತು ಗುರುಹತ್ಯೆ ಮಾಡಿದ ದೋಷಪರಿಹಾರಕ್ಕಾಗಿ ಪಾಂಡವರು ಕಾಶಿಗೆ ಹೋಗಿ ಶಿವನನ್ನು ಆರಾಧಿಸಲು ಬಯಸುತ್ತಾರೆ. ಆದರೆ ಪಾಂಡವರ ಪಾತಕ ಕೃತ್ಯದ ವಿರುದ್ಧ  ಕೋಪಗೊಂಡಿದ್ದ ಶಿವನು ಅವರಿಗೆ ಸಿಗದೆ, ಕೇದಾರದಲ್ಲಿ ನಂದಿ ರೂಪಧಾರಿಯಾಗಿ ಜಾನುವಾರು ಮಂದೆಯಲ್ಲಿ ಅಡಗಿರುತ್ತಾನೆ.  ಶಿವನ ಆಶೀರ್ವಾದ ಪಡೆಯಲೇಬೇಕು ಎಂದು ದೃಢನಿಶ್ಚಯ ಮಾಡಿದ್ದ ಪಾಂಡವರು ಶಿವನ ಸುಳಿವರಿತು ಕೇದಾರಕ್ಕೆ ಬರುತ್ತಾರೆ. ಭೀಮನು ಉಪಾಯ ಮಾಡಿ ಬೃಹದಾಕಾರ ತಾಳಿ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ.

ಸಾಮಾನ್ಯ  ಜಾನುವಾರುಗಳು ಬೆಟ್ಟಗಳ ನಡುವೆ ಅಂದರೆ ಭೀಮನ ಕಾಲುಗಳ ನಡುವೆ ತಮ್ಮ ಅರಿವಿಗೆ ಬಾರದೆ ನುಸುಳುತ್ತವೆ. ನಂದಿರೂಪದಲ್ಲಿದ್ದ ಶಿವನು ಇದನ್ನು ಗಮನಿಸಿ ಗುಂಪಿನಲ್ಲಿ ಬಾರದೆ,  ಭೀಮನಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಾನೆ. ನಂದಿಯನ್ನು ಹಿಂಬಾಲಿಸುತ್ತಾ  ಭೀಮನು ಅದನ್ನು  ಹಿಡಿಯಲು ಹೋಗುತ್ತಾನೆ. ಆ ಸಂದರ್ಭದಲ್ಲಿ ಶಿವನು ಭೂಮಿಯಲ್ಲಿ ಅಂತರ್ಗತನಾಗಬಯಸುತ್ತಾನೆ.  ಭೀಮನು  ನಂದಿಯ  ಬೆನ್ನಿನ ಮೇಲಿರುವ ತ್ರಿಭುಜಾಕೃತಿಯನ್ನು  ಹಿಡಿದುಬಿಡುತ್ತಾನೆ. ಕೊನೆಗೂ ಶಿವನಿಗೆ ಪಾಂಡವರ ಮೇಲಿನ ಅಸಹನೆ ಕಡಿಮೆಯಾಗಿ, ಅವರ ಪಾಪಗಳಿಗೆ ಮುಕ್ತಿ ಕರುಣಿಸಲು ನಿಜ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ.  ಪಾಂಡವರು, ತ್ರಿಭುಜಾಕೃತಿಯ ಬೆನ್ನುಹೊತ್ತ ನಂದಿ ರೂಪದ ಶಿವಲಿಂಗವನ್ನು ಕೇದಾರದಲ್ಲಿ ಪ್ರತಿಷ್ಠಾಪಿಸುತ್ತಾರೆ.

PC: ಅಂತರ್ಜಾಲ

ನಂದಿಯ ಶರೀರದ ಇತರ ಭಾಗಗಳು  ಪೂಜಿಸಲ್ಪಡುವ ಜಾಗಗಳು ‘ಪಂಚಕೇದಾರ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರಗಳು.   ಪಂಚಕೇದಾರಗಳಾದ ಪಶುಪತಿನಾಥನಲ್ಲಿ ಶಿರಭಾಗ, ಕೇದಾರನಾಥದಲ್ಲಿ ಬೆನ್ನು, ತುಂಗಾನಾಥದಲ್ಲಿ ಕೈ, ಭುಜ, ರುದ್ರನಾಥದಲ್ಲಿ ಮುಖದ ಭಾಗ, ಕಲ್ಪನಾಥದಲ್ಲಿ ಜಟೆಭಾಗವು ಪೂಜಿಸಲ್ಪಡುತ್ತವೆ. ಇವುಗಳಲ್ಲಿ ಪಶುಪತಿನಾಥ ಮಾತ್ರ ನೇಪಾಳದಲ್ಲಿದ್ದು, ಉಳಿದ ದೇವಾಲಯಗಳು ಭಾರತದ  ಉತ್ತರಾಖಂಡ ರಾಜ್ಯದಲ್ಲಿವೆ.

ಮಹಾಶಿವರಾತ್ರಿಯ ಈ ದಿನದಂದು  ಆ ಕೇದಾರನಾಥನು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸೋಣ.

ಓಂ ನಮ: ಶಿವಾಯ.

-ಹೇಮಮಾಲಾ.ಬಿ. ಮೈಸೂರು

4 Responses

  1. Krishnaveni Kidoor says:

    ಇಂಥ ಮಾಹಿತಿಗಳು ದರ್ಶನ ಮಾಡುವ ಹಂಬಲವಿದ್ದೂ ನಾನಾ ಕಾರಣಗಳಿಂದ ಅಸಾಧ್ಯ ಆದವರಿಗೆ ತಾವೇ ಕೇದಾರ ನಾಥನ ಸನ್ನಿಧಿಯಲ್ಲಿರುವ ಭಾವ, ಭಕ್ತಿ ಉಕ್ಕಿಸುತ್ತದೆ.

  2. Nayana Bajakudlu says:

    ಬ್ಯೂಟಿಫುಲ್ . ಒಂದು ಸಲ ಸಾಕಾಗಲಿಲ್ಲ ಅಂತ ಮತ್ತೆ ಮತ್ತೆ ಹೋಗಿ ದರ್ಶನ ಮಾಡಿ ಬಂದ್ರಲ್ಲ ಆ ತುಂಟತನದ ಮನಸ್ಥಿತಿ ಚೆನ್ನಾಗಿದೆ ಹೇಮಕ್ಕ . ಕೆಲವೊಂದು ಸ್ಥಳಗಳೇ ಹಾಗೆ ಮತ್ತೆ ಮತ್ತೆ ನೋಡ್ಬೇಕು ಅಂತ ಅನ್ನಿಸುವ ಹಾಗಿರ್ತದೆ. ನೈಸ್ one

  3. Narayana Bhat says:

    ಸಕಾಲಿಕ ಲೇಖನ .

  4. Shankari Sharma says:

    ಉತ್ತಮ ಮಾಹಿತಿಯುಕ್ತ ಅನುಭವ ಕಥನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: