(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬೆಳಗ್ಗೆ ಎದ್ದಾಗ ಮೈಮನಗಳಲ್ಲಿ ಉಲ್ಲಾಸ ತುಂಬಿಕೊಂಡ ಭಾರ್ಗವಿ ಗಡಿಯಾರದತ್ತ ಮುಖಮಾಡಿದಳು. ಎಂಟರ ಸಮೀಪವಾಗಿತ್ತು. ಅವ್ವಯ್ಯಾ ನನ್ನ ಜೀವಮಾನದಲ್ಲಿ ಇಷ್ಟುಹೊತ್ತು ತಡವಾಗಿ ಎದ್ದೇಇಲ್ಲ. ರಜೆ ಹಾಕಿದ್ದು ಸೋಮಾರಿತನಕ್ಕೆ ಹಾದಿ ಮಾಡಿಕೊಟ್ಟಿದೆ ಎಂದುಕೊಂಡು ಮೇಲೆದ್ದು ಪ್ರಾತಃವಿಧಿಗಳನ್ನು ಪೂರೈಸಿ ರಾತ್ರಿ ಎತ್ತಿಟ್ಟಿದ್ದ ಹಾಲಿನಿಂದ ಕಾಫಿ ಮಾಡಿ ಲೋಟಕ್ಕೆ ಬಗ್ಗಿಸಿಕೊಂಡು ಕೈಯಲ್ಲಿಡಿದು ಮುಂಭಾಗಿಲು ತೆರೆದು ಹೊರಬಂದಳು. ಗಿರಿಜಾ ಕೆಲಸಕ್ಕೆ ಬಾರದಿರುವುದು ಗಮನಕ್ಕೆ ಬಂತು. ತಕ್ಷಣ ಹಿಂದಿನ ದಿನ ಮನೆಯ ಮಾಲೀಕರು ಹೇಳಿದ ಸುದ್ಧಿ ನೆನಪಿಗೆ ಬಂತು. ತಡಮಾಡದೆ ಗಿರಿಜಾಳ ಮೊಬೈಲಿಗೆ ಫೋನ್ ಮಾಡಿದಳು. ಊಹುಂ ಅಭಶುಭವಿಲ್ಲ. ತಣ್ಣಗಿನ ಪ್ರತಿಕ್ರಿಯೆ. ಸ್ವಿಚ್ಡ್ಆಫ್ ಎಂಬ ಸಂದೇಶ. ಥತ್ತೇರಿ ಏನಾಯಿತೋ ಎಂದುಕೊಂಡಳು. ಇನ್ನೂ ಸ್ವಲ್ಪ ಹೊತ್ತು ಕಾಯ್ದು ಮನೆಯ ಓನರ್ ಮನೆಗೆ ಬರುವ ಕೆಲಸದವಳಾದ ಗೌರಿಯನ್ನೇ ರಿಕ್ವೆಸ್ಟ್ ಮಾಡಿ ಕೆಲಸ ಪೂರೈಸಿಕೊಂಡಳು.
ಮಾರನೆಯ ದಿನವೂ ಅದೇ ಪುನರಾವರ್ತನೆ. ಒಂದು ಹೆಜ್ಜೆ ಅವಳ ಮನೆತನಕ ಹೋಗಿ ಬಂದರಾಯಿತೆಂದು ಗಿರಿಜಾಳ ಮನೆವರೆಗೆ ಹೋಗಿಬಂದಳು. ಪಕ್ಕದ ಮಹಡಿ ಮನೆಯವರು ಹೇಳಿದಂತೆ ಹಿಂದಿನ ದಿನ ಮಾರಾಮಾರಿಯಾಗಿ ಒಬ್ಬರಮೇಲೊಬ್ಬರು ಅಪವಾದ ಹೊರಿಸುತ್ತ ಅವಳ ಎರಡನೆಯ ಗಂಡ ಅವಳನ್ನು ಮತ್ತು ಎರಡು ಮಕ್ಕಳನ್ನು ಸಾಮಾನುಗಳ ಸಹಿತ ಮನೆಯಿಂದ ಹೊರಹಾಕಿದನೆಂದು ತಿಳಿಸಿದರು. ಅಯ್ಯೋ ಆ ಮಕ್ಕಳನ್ನು ಕಟ್ಟಿಕೊಂಡು ಎತ್ತಹೋದಳೋ ಪಾಪ ಎಂಬ ಪ್ರಶ್ನೆಗೆ ಉತ್ತರ ಸಿಗದೆ ನಿರಾಸೆಯಿಂದ ಮನೆಗೆ ಹಿಂತಿರುಗಿದಳು.
ಬೆಂಗಳೂರಿನಿಂದ ಮಗಳು ಮಾನಿನಿಯಿಂದ ಬಂದ ಫೋನ್ ಅವಳನ್ನು ಚಿಂತೆಗೀಡುಮಾಡಿತು. ತನ್ನ ಅಪ್ಪ ವಿದೇಶದ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಹೇಳಿದರೆಂದು ತಿಳಿಸಿದಳು. ನಿಮ್ಮಮ್ಮ ಹೋಗುವುದಾದರೆ ಹೋಗಿಬರಲಿ, ಇಲ್ಲಿ ನನಗೆ ಬೇಕಾದಷ್ಟು ಕೆಲಸಗಳಿವೆ. ಅಪ್ಪನ ಅಕ್ಕನ ಮಗಳ ಕೆಲಸಗಳದ್ದೂ ತೊಡಕಾಗಿದೆ. ಅದನ್ನು ಆದಷ್ಟು ಬೇಗ ಬಿಡಿಸಿಕೊಳ್ಳಬೇಕು. ಹೀಗೆಂದು ಹೇಳಿದರೆಂದು ತಿಳಿಸಿದರು ಕೊನೆಯಲ್ಲಿ ವ್ಯಂಗ್ಯವಾಗಿ ನಿಮಗೂ ಅದೇ ಬೇಕಾಗಿತ್ತಲ್ಲವಾ? ಎಂದು ಹೇಳಿದ್ದು ಭಾರ್ಗವಿಯ ಮನಸ್ಸನ್ನು ಘಾಸಿಗೊಳಿಸಿತು. ಅದಕ್ಕೆಲ್ಲ ಪ್ರತಿಕ್ರಿಯೆ ತೋರಲು ಹೋಗದೆ “ಹಾಗಾದರೆ ನಾನೂ ಹೋಗಲಾಗುತ್ತಿಲ್ಲ. ಟಿಕೆಟ್ ಮಾಡಿಸಬೇಡ. ಮಾಡಿಸಿದ್ದರೆ ಕೂಡಲೇ ಕ್ಯಾನ್ಸಲ್ ಮಾಡು. ನನಗೂ ಬೇಕಾದಷ್ಟು ಕೆಲಸಕಾರ್ಯಗಳಿವೆ. ನಿಮ್ಮ ಅಪ್ಪನಿಲ್ಲದೆ ನಾನೊಬ್ಬಳೇ ಹೋಗಲು ಈಗ ಮನಸ್ಸಿಲ್ಲ.” ಎಂದು ಹೇಳಿ ಫೋನ್ ಕಟ್ ಮಾಡಿದಳು.
“ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರೇ” ಎಂಬಂತಾಗಿದೆ ನನ್ನ ಸ್ಥಿತಿ. ಎಂದುಕೊಂಡಳು ಭಾರ್ಗವಿ. ಮತ್ತೆ ಆಕೆಯ ಚಿಂತನೆ ಹಿಂದಿನ ಕಾಲಕ್ಕೆ ಹೋಯಿತು.
ಸಿದ್ಧಾರ್ಥನ ಹಿರಿಯಕ್ಕ ಇಂದಿರಾಳ ವಿವಾಹವಾಗಿ ಅವರು ಇಬ್ಬರು ಮಕ್ಕಳು ಗಂಡ ವೀರೇಶನೊಡನೆ ಕೂಡುಸಂಸಾರದ ಭಾಗವಾಗಿದ್ದುದು ಹೊಸದೇನಾಗಿರಲಿಲ್ಲ. ಅತ್ತೆ ಮಾವನವರ ಜೊತೆಯಲ್ಲಿ ಚೆನ್ನಾಗಿ ಹೊಂದಿಕೊಂಡು ಬದುಕು ನಡೆಸುತ್ತಿದ್ದರು. ತಮ್ಮ ಮಗಳು ಮಂಗಳೆಯನ್ನು ತಮ್ಮನಿಗೇ ಮದುವೆ ಮಾಡಿಕೊಟ್ಟು ತವರಿನ ಸಂಬಂಧ ಉಳಿಸಿಕೊಳ್ಳುವ ಇರಾದೆ ಇತ್ತೆಂದು ಸಿದ್ಧಾರ್ಥನೊಡನೆ ತನ್ನ ಮದುವೆಯಾದ ನಂತರ ತಿಳಿದುಬಂದಿತ್ತು. ಅದೂ ಅವನ ಬಾಯಿಂದಲೇ ಹೊರತು ಬೇರೆ ಯಾರೂ ತಮಾಷೆಗೂ ಹೇಳಿರಲಿಲ್ಲ. ಈ ಬಗ್ಗೆ ಸಿದ್ಧಾರ್ಥನನ್ನು ಪ್ರಶ್ನೆ ಮಾಡಿದ್ದಕ್ಕೆ ಸುಮ್ಮನಾಗಿದ್ದನೇ ಹೊರತು ಬೇರೇನೂ ಪ್ರತಿಕ್ರಿಯೆ ತೋರಲಿಲ್ಲ. ಆ ನಂತರ ಆಕೆಗೆ ಬೆಂಗಳೂರಿನಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಅಕೌಂಟೆಂಟಾಗಿದ್ದ ವರ ಗಣಪತಿಯೊಂದಿಗೆ ವಿವಾಹವಾಗಿತ್ತು. ಒಂದು ಮಗುವೂ ಆಗಿತ್ತು. ಆಗಾಗ್ಗೆ ಊರಿಗೂ ಬಂದುಹೋಗುವ ಪರಿಪಾಠವಿತ್ತು.
ಭಾರ್ಗವಿ ತನ್ನ ಓದು, ಕೆಲಸಗಳ ಮಧ್ಯೆ ಊರಿಗೆ ಭೇಟಿಕೊಡುವುದೇ ಅಪರೂಪವಾಗಿರುತ್ತಿತ್ತು. ಹಬ್ಬಹರಿದಿನಗಳಲ್ಲಿ, ಮಕ್ಕಳಾದ ಮೇಲಂತೂ ಪೂಜೆಪುನಸ್ಕಾರ, ನಾಮಕರಣ ಇತ್ಯಾದಿ ಸಂದರ್ಭಗಳಲ್ಲಿ ಮಂಗಳೆಯ ಆಗಮನವಿದ್ದರೆ ಅಲ್ಲಿ ಬೇಟಿಯಾಗುತ್ತಿತ್ತು. ಅವಳು ಸೋದರಮಾವ ಸಿದ್ಧಾರ್ಥನೊಡನೆ ಅಗತ್ಯಕ್ಕಿಂತ ಹೆಚ್ಚಿನ ಸಲುಗೆಯಿಂದ ನಡೆದುಕೊಳ್ಳುತ್ತಿದ್ದಳು. ಇದು ಭಾರ್ಗವಿಗೆ ಇಷ್ಟವಿಲ್ಲವಾದ ನಡವಳಿಕೆಯಾಗಿತ್ತು.
ಆಗ ಸಿದ್ಧಾರ್ಥನ ಅಕ್ಕ ಹೇಳಿದ ಮಾತುಗಳು ನೆನಪಿಗೆ ಬರುತ್ತಿತ್ತು. ಇವೆಲ್ಲವನ್ನು ಮದುವೆಗೆ ಮೊದಲೇ ಏಕೆ ಹೇಳಲಿಲ್ಲ. ಅಲ್ಲದೆ ಸಿದ್ದಾರ್ಥನಿಂದ ಮೊದಲಿನಿಂದಲೂ ಇಷ್ಟಪಟ್ಟ ಹುಡುಗಿ ನೀನೇ ಮನಸಿನಲ್ಲಿದ್ದವಳು ನೀನೇ ಎಂಬ ಮಾತುಗಳನ್ನು ಕೇಳಿ ಅವನ ಭರವಸೆಯ ಮೇರೆಗೆ ತನ್ನ ಓದನ್ನೂ ಮುಂದುವರಿಸಿಕೊಂಡು ವಿವಾಹ ಮಾಡಿಕೊಂಡದ್ದು ಉಭಯತ್ರರ ಇಷ್ಟದ ಮೇರೆಗೇ . ಹಾಗೆ ನಡೆದುಕೊಂಡದ್ದೆಲ್ಲ ಸುಳ್ಳೇ? ಛೇ,,ನಾನೇ ಸಂಕುಚಿತ ಮನೋಭಾವನೆಯಿಂದ ನೋಡುತ್ತಿದ್ದೀನೇನೋ. ಮನೆಯರ‍್ಯಾರೂ ಏನೂ ಹೇಳುವುದಿಲ್ಲ. ಇದೇ ವಿಷಯದಲ್ಲಿ ಒಮ್ಮೆ ಸಿದ್ಧಾರ್ಥನೊಡನೆ ತಡೆಯಲಾಗದೆ ಪೇಚಾಡಿಕೊಂಡಾಗ “ಏ..ನೀನು ತಿಳಿವಳಿಕೆ ಇರುವವಳು, ಓದಿದ್ದೀಯೆ ಈ ರೀತಿ ಯೋಚಿಸುವುದಾ, ಇಷ್ಟು ಸಣ್ಣಬುದ್ಧಿ ಇದೆಯೆಂದು ಗೊತ್ತಿರಲಿಲ್ಲ.”ಎಂದುತ್ತರ ಹೇಳಿದ್ದ. ಮುಂದೆ ಹೇಳಬೇಕೆಂದಿದ್ದ ಮಾತುಗಳನ್ನು ಗಂಟಲಿನಲ್ಲೇ ನುಂಗಿ ಸುಮ್ಮನಾಗಿದ್ದಳು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಏನೋ ಒಂದು ರೀತಿಯ ಊಹಿಸಲಾರದಂತಹ ಸನ್ನಿವೇಶ ಸೃಷ್ಠಿಯಾಗಿ ನನ್ನ ಅನುಮಾನಕ್ಕೆ ಪುಷ್ಠಿ ಕೊಡುವತ್ತ ಸಾಗುತ್ತಿದೆಯಲ್ಲ ಅಂದುಕೊಂಡಳು ಭಾರ್ಗವಿ. ನನಗೆ ನಿವೃತ್ತಿಯಾದಮೇಲೆ ಊರಿಗೇ ಹೋಗಿ ನೆಲೆಸಬೇಕು. ಅಲ್ಲೇ ಮಹಿಳೆಯರಿಗೆ ಏನಾದರೂ ಉಪಯುಕ್ತವಾದ ಕೆಲಸಕಾರ್ಯಗಳನ್ನು ಹಮ್ಮಿಕೊಂಡು ಚಟುವಟಿಕೆ ಪ್ರಾರಂಭಿಸಬೇಕು. ಮಾವನವರು ಕಾಲವಾದ ಮೇಲೆ ಅತ್ತೆಯ ಜೊತೆಗೆ ನಾದಿನಿ ಇಬ್ಬರೇ ಆಗಿಬಿಟ್ಟಿದ್ದಾರೆ. ಮಗಳ ಮದುವೆಯನ್ನು ನೋಡಲಾಗಲಿಲ್ಲ ತಾಯಿಗೆ. ಮಗ ಸಿದ್ಧಾರ್ಥನ ಬೇಜವಾಬ್ದಾರಿಯೋ ಇಲ್ಲವೇ ಆಕೆಗೇ ಮನಸ್ಸು ಮುರಿಯಿತೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ಮತ್ತೆ ಚಿಕ್ಕ ಮಗಳಿಂದ ಫೋನ್ “ಅಮ್ಮಾ ನೀವಿಬ್ಬರು ಆಟವಾಡುತ್ತಿದ್ದೀರಾ? ಪಪ್ಪನಿಗೇನೋ ಕೆಲಸಗಳ ಓಡಾಟ ಪಾಪ. ಅವರಕ್ಕನ ಮಗಳು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ನಿಮಗೇನು ತೊಂದರೆ. ಪಪ್ಪನು ಇಲ್ಲದಿದ್ದರೂ ಬರುತ್ತೇನೆಂದು ಮಾತನಾಡಿದಿರಿ. ಈಗ ನೋಡಿದರೆ ಅವರಿಲ್ಲದೆ ಒಬ್ಬಳೇ ಬರುವುದಿಲ್ಲ ಎಂದಿರಂತೆ ಸಿಲ್ಲಿ ರೀಸನ್. ಪ್ಲೀಸ್ ಬನ್ನಿ. ಏನೆಂದು ಅರ್ಥವಾಗುತ್ತಿಲ್ಲ. ಇದರ ಮೇಲೆ ನಿಮ್ಮಿಷ್ಟ. ಬಲವಂತ ಮಾಡಲಾರೆ. ನನಗೆ ಇಬ್ಬರೂ ಇದ್ದರೂ ಯಾರೂ ಇಲ್ಲದಂತೆ ಸಮಾರಂಭದಲ್ಲಿ ಪಾಲ್ಗೊಳ್ಳುವೆ.” ಎಂದು ಫೋನ್ ಇಟ್ಟುಬಿಟ್ಟಳು.
ಮಗಳು ಕೊನೆಯ ಮಾತನಾಡುವಾಗ ಭಾವುಕಳಾದಂತೆನಿಸಿತು ಭಾರ್ಗವಿಗೆ. ತಕ್ಷಣ ಆಕೆ ಸಿದ್ಧಾರ್ಥನಿಗೆ ಫೋನ್ ಮಾಡಿದಳು. ಬಹಳ ಸಾರಿ ಪ್ರಯತ್ನಿಸಿದ ನಂತರ ಕನೆಕ್ಟ್ ಆಯಿತು. ಅವನಿಂದ “ನಿನಗೆ ಬಿಡುವಿದ್ದರೆ ಹೋಗಿ ಬಾ.” ಅಷ್ಟು ಚುಟುಕಾದ ಉತ್ತರ ಬಂತು. ಮುಂದೆ ಮಾತನಾಡಲು ಅವಕಾಶವೇ ಇಲ್ಲದಂತೆ ಫೋನ್ ಇಟ್ಟುಬಿಟ್ಟ. ಛೇ..ಅದಿನ್ನೆಂತ ಕೆಲಸವಿರಬಹುದು. ಅಕ್ಕನ ಅಳಿಯ ಮಂಗಳೆಯ ಗಂಡನಿಗೆ ತೀವ್ರ ಹೃದಯಾಘಾತವಾಗಿ ಆತ ತೀರಿಹೋಗಿ ಹತ್ತಿರ ಹತ್ತಿರ ಮೂರ‍್ನಾಲ್ಕು ವರ್ಷಗಳಾಯಿತು. ಅವನ ಗ್ರಾಚ್ಯೂಟಿ, ಪೆನ್ಷನ್ ಎಲ್ಲವೂ ಸೆಟ್ಲ್ ಮೆಂಟ್ ಆಗಿ ಆಕೆಗೆ ಅನುಕಂಪ ಆಧಾರದ ಮೇಲೆ ಕೆಲಸ ಕೊಡುತ್ತೇವೆಂದರೆ ಅದನ್ನು ಅವಳಿಗೆ ಬದಲಾಗಿ ಆಕೆಯ ಮಗನಿಗೆಂದು ಮೀಸಲಿರಿಸಿಕೊಂಡಿದ್ದಾಳೆ. ಅವನಿಗೆ ಹದಿನೆಂಟು ವರ್ಷಗಳಾದ ಮೇಲೆ ಮುಂದಿನ ವರ್ಷಕ್ಕೆ ಸಿಗುತ್ತದೆ. ಇನ್ನು ಮಿಕ್ಕ ಹಣಕಾಸಿನ ವ್ಯವಹಾರವೆಲ್ಲ ಅಕ್ಕ ಭಾವನವರೇ ನಿಂತು ಒಂದು ಹಂತಕ್ಕೆ ತಂದಿದ್ದಾರೆ. ಊರಿನಲ್ಲಿ ಅರ್ಧಕಟ್ಟಿದ್ದ ಮನೆಯನ್ನೂ ಪೂರ್ತಿಮಾಡಿ ಅಲ್ಲಿಯೇ ಮಗಳನ್ನು ತಮ್ಮಲ್ಲೇ ನಿಲ್ಲಿಸಿಕೊಂಡಿದ್ದಾರೆ. ಇನ್ಯಾವ ಕೆಲಸವಿದೆ. ಏನೂ ಅರ್ಥವಾಗುತ್ತಿಲ್ಲ. ಇಲ್ಲಿಯ ಮನೆಗೆ ಬರುವುದೂ ಕಡಿಮೆಯಾಗಿದೆ. ಬಂದರೂ ನೂರೆಂಟು ತಾಪತ್ರಯ ಕಟ್ಟಿಕೊಂಡೇ ಬರುತ್ತಾರೆ. ಯಾವಾಗಲೂ ಅನ್ಯಮನಸ್ಕತೆ, ಮೊಬೈಲ್ ಯಾವಾಗಲೂ ಕಿವಿಗಾನಿಸಿಕೊಂಡೇ ಇರುತ್ತಾರೆ. ಆದರೆ ದುಡ್ಡುಕಾಸು ಬೇಕಾದರೆ ಮಾತ್ರ ತನ್ನ ಹಕ್ಕು ಎಂಬಂತೆ ಕೇಳುತ್ತಾರೆ. ಇವೆಲ್ಲ ಮಕ್ಕಳಿಗೆ ಅರ್ಥ ಮಾಡಿಸುವುದಾದರೂ ಹೇಗೆ. ಏನಾದರೂ ಎದುರಿಸಿಯೇ ಬಿಡೋಣ. ಸುಮ್ಮನೆ ವಾಗ್ಯುದ್ಧವೇಕೆ ಎಂದುಕೊಂಡ ಭಾರ್ಗವಿ ಹಿರಿಯ ಮಗಳಿಗೆ ಫೋನ್ ಮಾಡಿದಳು. ಕಿರಿಯವಳ ಕಾರ್ಯಕ್ರಮಕ್ಕೆ ಬೋಸ್ಟನ್ನಿಗೆ ಹೋಗಲು ಟಿಕೆಟ್ ಬುಕ್ ಮಾಡಿಸಲು ಹೇಳಿಬಿಟ್ಟಳು ಭಾರ್ಗವಿ. ಹಾಗೇ ಅವಳನ್ನು ಸಾರೀ ಕೇಳುವುದನ್ನು ಮರೆಯಲಿಲ್ಲ.
ಈ ವಿಚಾರವನ್ನು ಸುಮನಾಳಿಗೆ ತಿಳಿಸೋಣವೆಂದು ಅವಳಿಗೆ ಫೋನ್ ಮಾಡಿದಳು. ರಿಸೀವ್ ಮಾಡಿದ ಸುಮನಾ ಗೆಳತಿಯ ತೀರ್ಮಾನವನ್ನು ಕೇಳಿ ಸಂತಸ ವ್ಯಕ್ತಪಡಿಸಿದಳು. ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಕೇಳು, ಹಾಗೇ ನಿಮ್ಮ ಮನೆಯ ಓನರ್‌ಗೆ ಅಲ್ಲಿಗೆ ಹೋಗಿ ಬರುವವರೆಗೂ ಮನೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಳಿಕೊಳ್ಳಲು ಮರೆಯಬೇಡ ಎಂದು ಸಲಹೆ ಇತ್ತಳು. ಸುಮನಾಳ ಸಲಹೆ ಭಾರ್ಗವಿಗೆ ಸಮ್ಮತವಾಗಿ “ಹೌದು ನಾನು ಈ ನಿಟ್ಟಿನಲ್ಲಿ ಯೋಚಿಸಿಯೇ ಇರಲಿಲ್ಲ. ಕೆಲಸದ ಗಿರಿಜಾ ಹೋದಲಾಗಾಯಿತು ನನಗೆ ದಿಕ್ಕೇ ತೋಚದಂತಾಗಿದೆ. ಪಾಪ ಎಲ್ಲಿಗೆ ಹೋದಳೋ? ಏನಾಯಿತೋ ಎಂಬ ಚಿಂತೆ ಅಡಿಗಡಿಗೆ ಕಾಡುತ್ತಿದೆ” ಎಂದಳು.
“ಏ ಭಾರ್ಗವಿ, ನೀನು ಅವರುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ಅವರು ನಮ್ಮಂತೆ ಸುತ್ತಲೂ ಬೇಲಿಹಾಕಿಕೊಳ್ಳುವುದಿಲ್ಲ. ಸನ್ನಿವೇಶಕ್ಕೆ ತಕ್ಕಂತೆ ನಿಭಾಯಿಸುವ ಛಲಗಾರರು. ಇನ್ನು ಅದೇ ವಾತಾವರಣದಲ್ಲಿ ಹುಟ್ಟಿ ಬೆಳೆದ ಮಕ್ಕಳು ಎಲ್ಲವನ್ನೂ ಮೀರಿ ಬೆಳೆಯುತ್ತಾರೆ. ಇರಲಿಬಿಡು ನನ್ನಮ್ಮನ ಕಥೆ ಕೇಳು” ಎಂದಳು ಸುಮನಾ.
“ಓ ನನ್ನ ಮಾತಿನ ಸಿರಿಯಲ್ಲಿ ಅಮ್ಮನ ವಿಚಾರ ಕೇಳುವುದನ್ನೇ ಮರೆತೆ. ಏನು ಡಿಸ್ಚಾರ್ಜ್ ಮಾಡಿದ್ದಾರಾ? ಹೇಗೆ, ಡಾಕ್ಟರ್ ಏನು ಹೇಳಿದರು?” ಎಂದು ಪ್ರಶ್ನಿಸಿದಳು.
“ಹುಂ ಎಲ್ಲ ರೀತಿಯ ಟೆಸ್ಟ್ಗಳೂ ಮುಗಿದು ಆಗಿರುವ ತೊಂದರೆಯೇನೂ ಇಲ್ಲ ಎಂದಾಯಿತು. ಅದನ್ನು ಮನಗಂಡ ಡಾಕ್ಟರ್ “ನೋಡಿ ನಿಮ್ಮ ತಾಯಿಯವರನ್ನು ಒಂದೇ ಕಡೆ ಕೂಡಿಹಾಕಬೇಡಿ. ದೂರಸ್ಥಳಗಳಿಗಲ್ಲದಿದ್ದರೂ ಸುತ್ತಮುತ್ತಲ ಊರುಗಳಿಗೆ, ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುತ್ತಿರಿ. ಅಲ್ಲದೆ ಅವರನ್ನು ಮನೆಯಲ್ಲಿಯೂ ಒಂಟಿಯಾಗಿ ಬಿಡಬೇಡಿ. ಜೊತೆಗೆ ಯಾರಾದರೂ ಒಬ್ಬರಿರಿ. ಇಲ್ಲವೇ ಒಬ್ಬ ಕೇರ್‌ಟೇಕರ್ ಗೊತ್ತುಮಾಡಿಕೊಳ್ಳಿ ಜೊತೆಯಲ್ಲಿರುತ್ತಾರೆ” ಎಂದು ಸಲಹೆ ನೀಡಿದರು.
“ಅಬ್ಬಾ ! ಅದನ್ನೆಲ್ಲ ಕೇಳಿಸಿಕೊಂಡ ನನ್ನಮ್ಮ ಕೊಟ್ಟ ಉತ್ತರ ಕೇಳಿಲ್ಲಿ, ಏನೆಂದ್ರೀ ಡಾಕ್ಟರೇ ಪ್ರವಾಸವೇ, ಹೂಂ ನನ್ನ ಗಂಡ ಇವರುಗಳ ದೆಸೆಯಿಂದಲೇ ಪ್ರವಾಸ ಹೊರಟಿದ್ದು. ಆತ ಎಲ್ಲಿದ್ದಾರೋ ಹೇಗಿದ್ದಾರೋ ಪರದೇಶಕ್ಕೋ ಪರಲೋಕಕ್ಕೋ ಹೋಗಿದ್ದಾರೋ ಭಗವಂತನಿಗೇ ಗೊತ್ತು. ಇನ್ನು ನನ್ನನ್ನು ಕರೆದುಕೊಂಡು ಹೋಗಿ ಯಾವುದಾದರೂ ಕಂಡೂಕಾಣದ ಜಾಗದಲ್ಲಿ ಬಿಟ್ಟು ಶನಿ ತೊಲಗಿತು ಅಂತ ಅಂದುಕೊಳ್ಳೋಕೂ ಹೇಸಲ್ಲ ಈ ನನ್ನ ಪುತ್ರಿಯರು. ಇನ್ನು ಕೇರ್ ಟೇಕರ್ ಹ್ಹ..ಹ್ಹ ಈಗಲೇ ಇವರು ಕ್ಯಾರೇ ಅನ್ನಲ್ಲ. ಅವಳನ್ನಿರಿಸಿದರೆ ಮೊಬೈಲಿನಲ್ಲಿ ವೀಡಿಯೋಕಾಲ್ ಮಾಡಿ ಇವರನ್ನು ನೋಡಬೇಕಾಗುತ್ತೋ ಏನೋ. ಅವೆಲ್ಲ ಏನೂ ಬೇಡ. ನಾನಿರೋತನಕ ನೋಡಿಕೊಳ್ಳಲು ಹೇಳಿ ಅಷ್ಟು ಸಾಕು ಎಂದು ಅವರ ಬಾಯನ್ನೇ ಮುಚ್ಚಿಸಿದರು. ಇನ್ನಿವರನ್ನು ಯಾವರೀತಿ ನೋಡಿಕೊಳ್ಳಬೇಕೊ ತಿಳಿಯದಾಗಿದೆ. ನಮಗೆಲ್ಲಾ ಅಮ್ಮಾ ಎಂದರೆ ಅವರ್ಷನ್ ಬಂದುಬಿಟ್ಟಿದೆ. ಅಕ್ಕನ ಮನೆಗಾದ್ರೂ ಸ್ವಲ್ಪ ದಿನ ಕಳಿಸೋಣವೆಂದರೆ ಅಲ್ಲಿರುವ ದಂಪತಿಗಳು ಅಪ್ಪಿತಪ್ಪಿಯೂ ಇವರ ವಿಷಯ ಎತ್ತುವುದಿಲ್ಲ. ಅಯ್ಯೋ ನಮ್ಮಮ್ಮನಿಗೆ ತಮ್ಮ ಮನೆಬಿಟ್ಟು ಎಲ್ಲಿಗೂ ಬರಲಿಕ್ಕೆ ಇಷ್ಟವಾಗುವುದಿಲ್ಲ ಅಂತ ತಾವೇ ಮುಂದಾಗಿ ಹೇಳಿ ತಪ್ಪಿಸಿಕೊಳ್ಳುತ್ತಾರೆ. ಅದು ಹೋಗಲಿ ಅವರೇ ಅಗಾಗ ಇಲ್ಲಿಗೆ ಬಂದು ಠಿಕಾಣಿ ಹೂಡಿ ಎಂದರೆ ಅಮ್ಮನ ಜೊತೆ ಅವರೂ ಸೇರಿಕೊಂಡು ಏನಾದರು ಚಿತಾವಣೆ ಮಾಡುತ್ತಾರೆ. ಸಾಕುಬೇಕಾಗಿದೆ ತಾಯಿ. ನೀನಂತೂ ನಿನ್ನ ಮಕ್ಕಳು ಅವರವರ ಕಾಲಮೇಲೆ ನಿಂತ ತಕ್ಷಣ ಯಾರನ್ನಾದರೂ ಹಿಡಿದು ಅವರ ಮದುವೆ ಮಾಡಿ ಮುಗಿಸಿ ನಂತರ ನಿನ್ನಿಚ್ಚೆಯಂತೆ ಊರಿಗೆ ಹೋಗಿ ನೆಲೆಸಿಬಿಡು. ನಿಮ್ಮತ್ತೆಯೂ ವಯೋಮಾನದಿಂದ ಮೆತ್ತಗಾಗಿದ್ದಾರೆ. ಕೊನೇಕಾಲದಲ್ಲಾದರೂ ಸೊಸೆ ಮನೆಗೆ ಬಂದಿದ್ದಾಳೆಂದು ಸಂತಸ ಪಡಬಹುದು. ತಡಮಾಡಬೇಡ ಹಿರಿಯ ಮಗಳಿಗೂ ಸಾಕಷ್ಟು ವಯಸ್ಸಾಗಿದೆ. ತನ್ನ ಕಾಲಮೇಲೆ ನಿಂತಿದ್ದಾಳೆ. ಅವಳು ನೋಡಿಕೊಂಡಿದ್ದರೆ ಪರವಾಗಿಲ್ಲ, ಇಲ್ಲವಾದರೆ ಹುಡುಕಿ ಮಾಡು. ಆನಂತರ ಕಿರಿಯವಳಿಗೂ ಬೇಗ ಹಿಂದಿರುಗಿ ಬರಲು ಹೇಳು. ಹೊರಡುವ ದಿನ ಟೈಂ ಫಿಕ್ಸ್ ಆದನಂತರ ತಿಳಿಸು. ಏರ್‌ಪೋರ್ಟಿಗೆ ಬೀಳ್ಕೊಡಲು ಬರುತ್ತೇನೆ”. ಎಂದು ಹೇಳಿ ಫೋನ್ ಇಟ್ಟಳು.
ಹೂ..ಬೇಲಿಯೇ ಎದ್ದು ಹೊಲವನ್ನು ಮೇಯ್ದಂತಾದರೆ ಕಾಯುವವರಾರು ಎನ್ನುವಂತಾಗಿದೆ. ಸುಮನಾಳ ಪರಿಸ್ಥಿತಿಯೂ ಇದೇ ರೀತಿಯಾಗಿದೆ. ಅದಕ್ಕೇ ಅವಳು ಪದೇಪದೇ ನನ್ನ ಕರ್ತವ್ಯದತ್ತ ಬೆಟ್ಟು ಮಾಡಿ ತೋರಿಸುತ್ತಿರುತ್ತಾಳೆ. ನೆನಪಿಸುತ್ತಿರುತ್ತಾಳೆ. ಮಕ್ಕಳು ಪಾಪದ ಕೂಸುಗಳು ಅವಳು ಹೇಳಿದಂತೆ ಆ ಕಡೆಗೆ ಗಮನ ಹರಿಸಬೇಕು. ಈಗ ಸದ್ಯಕ್ಕೆ ಶುಭಸಮಾರಂಭಕ್ಕೆ ಹೋಗಿಬರೋಣವೆಂದುಕೊಂಡ ಭಾರ್ಗವಿ ಗೆಳತಿಯ ಸಲಹೆಯಂತೆ ಮನೆಯ ಕೆಲಸವನ್ನು ಗೌರಿಗೆ ಒಪ್ಪಿಸಿ ಅದೂ ಮನೆಯ ಯಜಮಾನರ ಸಮ್ಮುಖದಲ್ಲಿ ಕೆಲಸ ಮಾಡಿಸಲು ಕೇಳಿಕೊಳ್ಳುತ್ತೇನೆ ಎಂದುಕೊಂಡಳು. ಅದು ಸರಿ ಊರಿಗೆ ಒಮ್ಮೆ ಹೋಗಿ ಬರಲೇ, ಹೆತ್ತಪ್ಪನಿಗೇ ಮಗಳ ಸಾಧನೆಯ ಬಗ್ಗೆ ಆಸಕ್ತಿಯಿಲ್ಲ, ಇನ್ನು ಬೇರೆಯವರಿಗೆ ಹೇಗೆ ಇರುತ್ತದೆ. ನಾನ್ಯಾಕೆ ಬಲವಂತವಾಗಿ ಹೋಗಲಿ. ಆದರೆ ನನ್ನ ತವರಿನಲ್ಲಿ ತಾಯಿಗೆ ಮೊಮ್ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಅಣ್ಣ ಬಾಲಕೃಷ್ಣನಿಂದ ವಿಷಯ ಎಲ್ಲರಿಗೂ ಈಗಲೇ ತಿಳಿದಿದೆ. ಈಗಲೇ ಬೇಡ. ಅಲ್ಲಿಗೆ ಹೋಗಿ ಕಾರ್ಯಕ್ರಮ ಮುಗಿಸಿ ಬಂದಮೇಲೆ ಮನೆಗೂ ಹೋಗಿ ಬಂದರಾಯಿತು ಎಂದು ನಿರ್ಧರಿಸಿದಳು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45749

-ಬಿ.ಆರ್.ನಾಗರತ್ನ, ಮೈಸೂರು

