ಲಹರಿ

ವಯಸ್ಸೆಂಬ ಅಚ್ಚರಿಯು ಕಲಿಸಿದ ಸತ್ಯ

Share Button

ಜೀವನ ನಿಜಕ್ಕೂ ವಿಚಿತ್ರ. ಬಾಲ್ಯ, ಯೌವ್ವನ, ಮಧ್ಯ ವಯಸ್ಸು ಎಲ್ಲಾ ಕಳೆದು ಇದ್ದಕ್ಕಿದಂತೆ ಬದುಕು ಬದಲಾಗುತ್ತದೆ. ಬದುಕಿನ ಕೊನೆಯ ಹಂತವಾದ ವೃದ್ಧಾಪ್ಯವು ಯಾವುದೇ ಮುನ್ಸೂಚನೆ ನೀಡದೆ, ನಿಧಾನವಾಗಿ ಜೀವನಕ್ಕೆ ಕಾಲಿಡುತ್ತದೆ. ಒಂದು ದಿನ ಕನ್ನಡಿಯ ಮುಂದೆ ನಿಂತಾಗ ಮುಖ, ಕುತ್ತಿಗೆ, ಕಣ್ಣಿನ ಸುತ್ತ ಸುಕ್ಕುಗಳು ಮೂಡಿದ್ದು ಅರಿವಾಗುತ್ತದೆ. ಮೆಟ್ಟಲು ಹತ್ತಿ, ಇಳಿಯುವಾಗ ಉಸಿರಾಟದಲ್ಲಿ ಏರುಪೇರಾದಾಗ, ಕುಳಿತು, ಏಳಲು ಕಷ್ಟವೆನಿಸಿದಾಗ, ಕೆಲಸ ಮಾಡಲು ಸುಸ್ತಾದಾಗ, ಹಿಂದಿನಂತೆ ದೇಹ ಸಹಕರಿಸದಿದ್ದಾಗ ವಯಸ್ಸಾಗುತ್ತಿದೆ ಎಂಬ ಕಟು ಸತ್ಯದ ಅರಿವಾಗುತ್ತದೆ. ಕಾಲ ಎಂದೂ ಯಾರಿಗೂ ಕಾಯುವುದಿಲ್ಲ. ಅದು ತನ್ನ ಪಯಣವನ್ನು ಮುಂದುವರಿಸುತ್ತಲೇ ಇರುತ್ತದೆ. ಬಾಲ್ಯದಲ್ಲಿ ದೊಡ್ಡವರಾಗಬೇಕೆನ್ನುವ ಹಂಬಲ, ಹರೆಯದಲ್ಲಿ ಕನಸುಗಳ ಬೆನ್ನಟ್ಟುವ ಆತುರ, ಉತ್ಸಾಹ, ಮಧ್ಯ ವಯಸ್ಸಿನಲ್ಲಿ ಜವಾಬ್ದಾರಿಗಳ ಜಂಜಾಟ- ಇವುಗಳೆಲ್ಲದರ ನಡುವೆ ಸಮಯ ಜಾರಿದ್ದೇ ನಮ್ಮ ಗಮನಕ್ಕೆ ಬರುವುದಿಲ್ಲ. ಕನಸುಗಳು, ಆತ್ಮ ವಿಶ್ವಾಸ, ಹುರುಪು ಹಾಗೂ ಹುಮ್ಮಸ್ಸಿನಿಂದ ಕೂಡಿದ ಹರೆಯದಲ್ಲಿ ಮುಂದೆ ಬರುವ ವೃದ್ಧಾಪ್ಯದ ಬಗ್ಗೆ ನಮಗೆ ಕಿಂಚಿತ್ತೂ ಯೋಚನೆ ಇರುವುದಿಲ್ಲ.

ಚಿಕ್ಕವರಿರುವಾಗ ನಾವು ಹಿರಿಯವರನ್ನು ಕೇವಲ ಹಿರಿಯರು ಎಂಬ ಗೌರವದಿಂದ ನೋಡುತ್ತೇವೆ. ಅವರ ದುರ್ಬಲತೆ, ಕೆಲಸ ಮಾಡಲು ಕಷ್ಟಪಡುವುದು, ಸಾಮರ್ಥ್ಯ ಕುಂದುವುದು, – ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳುವಷ್ಟು ಪ್ರೌಢತೆ ಇರುವುದಿಲ್ಲ. ಈ ವಯಸ್ಸಾಗುವ ಪ್ರಕ್ರಿಯೆಯನ್ನು ನಾನು ಹತ್ತಿರದಿಂದ ಕಂಡದ್ದೇ ನನ್ನ ಹೆತ್ತವರಲ್ಲಿ. ನಾನು ಬಾಲ್ಯದಿಂದಲೇ ವಿಭಕ್ತ ಕುಟುಂಬದಲ್ಲಿ ಬೆಳೆದ ಕಾರಣ ಅಜ್ಜ-ಅಜ್ಜಿಯೊಂದಿಗೆ ಕಾಲ ಕಳೆಯುವ ಅವಕಾಶ ಸಿಗಲಿಲ್ಲ. ವರ್ಷಕೊಮ್ಮೆ ಬೇಸಿಗೆ ರಜೆಯಲ್ಲಿ ತಂದೆಯ ಊರಿಗೆ ಹೋದಾಗ ಅಜ್ಜಿಯವರನ್ನು ಭೇಟಿಯಾಗುತ್ತಿದ್ದೆ. ಹೆಚ್ಚಿನ ಒಡನಾಟ ಇರದ ಕಾರಣ, ಅವರನ್ನು ಅರಿಯಲು ಸಾಧ್ಯವಾಗಲಿಲ್ಲ. ಆದರೆ ನನ್ನ ಹೆತ್ತವರ ನಿವೃತ್ತಿಯ ಬಳಿಕ ಅವರು ದೈಹಿಕವಾಗಿಯೂ, ಮಾನಸಿಕವಾಗಿಯೂ ಬದಲಾಗುವುದನ್ನು ಹತ್ತಿರದಿಂದ ಕಂಡಿದ್ದೆ. ಪ್ರತಿದಿನವೂ ನಿರ್ದಿಷ್ಟ ಸಮಯಕ್ಕೆ ಎದ್ದು, ಕೆಲಸಕ್ಕೆ ಹೋಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಅವರು, ದಿನನಿತ್ಯದ ಸಣ್ಣ ಪುಟ್ಟ ಕೆಲಸಗಳಿಗೂ ನಮ್ಮನ್ನು ಅವಲಂಬಿಸಿದಾಗ ಅವರಿಗೆ ವಯಸ್ಸಾಗಿದೆ ಎಂಬುದರ ಅರಿವಾಗಿತ್ತು. ಆದರೆ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋತಿದ್ದೆ.

ನನ್ನ ಅಮ್ಮನವರು ಯಾವಾಗಲೂ ಉಡುಗೆ-ತೊಡುಗೆಯಲ್ಲಿ ಶಿಸ್ತು ಹಾಗೂ ಅಚ್ಚುಕಟ್ಟು. ವಯಸ್ಸಾದ ಬಳಿಕವೂ ಅವರಿಗೆ ಅಚ್ಚುಕಟ್ಟಾಗಿ ಸೀರೆ ಉಡುವುದೆಂದರೆ ತುಂಬಾ ಇಷ್ಟ. ಕೆಲವೊಮ್ಮೆ ನನ್ನನ್ನು ಕರೆದು, “ಒಮ್ಮೆ ಸೀರೆಗೆ ಇಸ್ತ್ರಿ ಹಾಕು, ಒಮ್ಮೆ ಪಿನ್ ಹಾಕಿ ಕೊಡು” ಎಂದೆಲ್ಲಾ ಹೇಳುತ್ತಿದ್ದರು. ಆಗೆಲ್ಲಾ ನಾನು ಕೆಲಸದ ಗಡಿಬಿಡಿಯಲ್ಲಿ ಅವರ ಕೋರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತಿರಲ್ಲಿಲ್ಲ. ಇವರಿಗೆ ವಯಸ್ಸಾಗಿದೆ. ಸುಮ್ಮನೆ ಸೆರಗನ್ನು ಹೊದ್ದರೆ ಸಾಕು ಎಂದುಕೊಂಡು, “ಹಾಗೆಯೇ ಉಡಿಯಮ್ಮ, ಪಿನ್ ಯಾಕೆ?, ಸೀರೆಗೆ ಇಸ್ತ್ರಿ ಬೇಡ” ಎಂದು ಹೇಳುತ್ತಿದ್ದೆ. ಆಗ ನನಗೆ ಒಂದು ಬಹಳ ಮುಖ್ಯವಾದ ಸತ್ಯ ಅರ್ಥವಾಗಿರಲಿಲ್ಲ. ಈಗ ನನಗೆ ವಯಸ್ಸಾಗುವಾಗ ಅರ್ಥವಾದ ಸತ್ಯ ಸಂಗತಿ ಏನೆಂದರೆ, ನಮ್ಮ ದೇಹಕ್ಕೆ ವಯಸ್ಸಾದರೂ, ಮನಸ್ಸಿಗೆ ವಯಸ್ಸಾಗಿರುವುದಿಲ್ಲ. ನಮಗೆ ಪ್ರಾಯವಾದರೂ, ನಮ್ಮೊಳಗಿರುವ ಮನಸ್ಸು ತಾನು ಇನ್ನೂ ಪರಿಪೂರ್ಣಳಾಗಿ ಇರಲು ಬಯಸುತ್ತದೆ. ಆದರೆ ಅಮ್ಮನ ಮನಸ್ಸಿನ ಆಸೆ, ನಿವೃತ್ತಿಯ ಬಳಿಕವೂ ಅಚ್ಚುಕಟ್ಟಾಗಿ, ಶಿಸ್ತಿನಿಂದ ಬದುಕುವ ಹಂಬಲ- ಇವೆಲ್ಲವುಗಳನ್ನೂ ಗಮನಿಸದೆ ಹೋದೆನಲ್ಲಾ ಎಂದು ನನ್ನ ಹೃದಯ ಕೊರಗುತ್ತದೆ. ನನ್ನ ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿಗಳಿಂದ ಅವರ ಮನಸ್ಸಿನ ಸಣ್ಣ ಪುಟ್ಟ ಬಯಕೆಗಳನ್ನು ಅರ್ಥ ಮಾಡಿಕೊಳ್ಳಲಾರದೆ ಹೋದೆ. ವಯಸ್ಸಾದ ಮೇಲೆ ಆಸೆಗಳೆಲ್ಲವೂ ಕಮರಿ ಹೋಗುತ್ತದೆ ಎಂದೇ ನಾನು ಭಾವಿಸಿದ್ದೆ. ಕೆಲಸಕ್ಕೆ ಹೋಗುವಾಗ ಯಾವ ರೀತಿಯಲ್ಲಿ ಉಡುಪಿನ ಬಗ್ಗೆ ಶಿಸ್ತು ಕಾಪಾಡಿಕೊಂಡಿದ್ದರೋ, ಅದನ್ನೇ ಅವರ ಮನಸ್ಸು ಬಯಸಿತ್ತು. ನೀಟಾಗಿ ಹೊರಡುವುದು ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಇಂದು ಜೀವನದ ಈ ಘಟ್ಟವನ್ನು ತಲುಪಿದಾಗ ನನಗೆ ಸ್ಪಷ್ಟವಾಗಿ ಮನದಟ್ಟಾದ ವಿಷಯವೆಂದರೆ, ದೇಹ ದುರ್ಬಲವಾದರೂ, ಮನಸ್ಸು ಮಾತ್ರ ಇಂದಿಗೂ ತಾನು ಚೆನ್ನಾಗಿ ಕಾಣಬೇಕು, ಜನರ ನಡುವೆ ಆತ್ಮ ವಿಶ್ವಾಸದಿಂದ ಇರಬೇಕು ಎಂದೇ ಬಯಸುತ್ತದೆ. ಇದನ್ನೆಲ್ಲಾ ಅರಿಯಲು ತಾನು ವಯಸ್ಕಳಾಗಬೇಕಾಯಿತಲ್ಲಾ, ಅಂದು ನಾನು ಅದೊಂದು ಕೆಲಸ ಎಂದು ಭಾವಿಸದೆ, ಅಮ್ಮನ ಇಚ್ಛೆಯಂತೆ ನಡೆದಿದ್ದರೆ, ಅವರೆಷ್ಟು ಸಂತೋಷ ಪಡುತ್ತಿದ್ದರು ಎಂಬ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತದೆ.

ವೃದ್ಧಾಪ್ಯವು ಜೀವನದ ಸಹಜ ಹಂತ. ಅದು ನಮ್ಮನ್ನು ನಿಧಾನಕ್ಕೆ ಆವರಿಸಿದಾಗ, ದೇಹದಲ್ಲಿ ಏರುಪೇರಾದಾಗ ಒಮ್ಮೆಲೆ ಅಚ್ಚರಿಯಿಂದ ಪ್ರತಿಕ್ರಿಯಿಸುತ್ತೇವೆ. ಮನಸ್ಸಿನಲ್ಲಿ ನಾವು ಇನ್ನೂ ಹಿಂದಿನAತೆಯೇ ಇದ್ದೇವೆ ಎಂಬ ಭಾವನೆ ಇರುತ್ತದೆ. ಆದರೆ ದೇಹ ಮಾತ್ರ ಬದಲಾಗುತ್ತಲೇ ಇರುತ್ತದೆ. ವಯಸ್ಸು ಬರೀ ಶರೀರಕ್ಕೆ ಆಗುತ್ತದೆಯೇ ವಿನ: ಮನಸ್ಸಿನೊಳಗಿರುವ ವ್ಯಕ್ತಿಗೆ, ತಾನು ಇನ್ನೂ ಯೌವ್ವನದಿಂದ ಇದ್ದೇನೆ ಎಂದು ಭಾಸವಾಗುತ್ತದೆ. ತನಗೆ ವಯಸ್ಸಾಗಿದೆ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಕನಸುಗಳು, ಆಸೆಗಳು, ಉತ್ಸಾಹ ಇನ್ನೂ ಜೀವಂತವಾಗಿದ್ದು, ದೇಹ ಸಹಕರಿಸದೇ ಇದ್ದಾಗ, ವಯಸ್ಸಾಗಿದೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತೇವೆ. ಚಲನೆ, ದೃಷ್ಟಿ. ಶ್ರವಣ, ನೆನಪಿನ ಶಕ್ತಿ ಇವುಗಳಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಒಂದು ಕಾಲದಲ್ಲಿ ನಮ್ಮ ಸ್ನೇಹಿತ, ನಂಬಿಕೆ ಮತ್ತು ನಮ್ಮ ಶಕ್ತಿಯಾಗಿದ್ದ ದೇಹವು, ದಿನ ಕಳೆದಂತೆ ನಮ್ಮ ವಿರುದ್ಧ ತಿರುಗಿ ಬಿದ್ದಂತೆ ಅನಿಸುತ್ತದೆ. ನಾವು ನಂಬಿದ್ದ ಸಾಮರ್ಥ್ಯ, ಸ್ಮರಣೆ ಶಕ್ತಿ, ತಾಳ್ಮೆ ಎಲ್ಲವೂ ಕುಸಿದಂತಾಗಿ ಭರವಸೆಯೇ ಉಡುಗಿ ಹೋಗುತ್ತದೆ. ಮನಸ್ಸು ಚುರುಕಾಗಿ ಕನಸುಗಳಿಂದ ತುಂಬಿದ್ದರೂ, ದೇಹ ಅದನ್ನು ತಡೆಯುತ್ತದೆ.

ಇಂದು ವಯಸ್ಸಾಗುವಿಕೆಯನ್ನು ನಾನು ನನ್ನದೇ ಜೀವನದ ಒಂದು ಭಾಗವಾಗಿ ನೋಡುತ್ತಿದ್ದೇನೆ. ಹಿಂದೆ ಹೆತ್ತವರನ್ನು, ಹಿರಿಯರನ್ನು ನೋಡುವಾಗ ದೈಹಿಕ ಬದಲಾವಣೆಗಳನ್ನು ಮಾತ್ರ ಗಮನಿಸುತ್ತಿದ್ದೆ. ಆದರೆ ವೃದ್ಧಾಪ್ಯವೆನ್ನುವುದು ದೇಹದಲ್ಲಾಗುವ ಬದಲಾವಣೆಯ ಜೊತೆಗೆ ಬರುವ ಭಾವನೆಗಳು, ನಿರೀಕ್ಷೆಗಳು ಮತ್ತು ಮನಸ್ಸಿನೊಳಗಿರುವ ಆಸೆ, ಆಕಾಂಕ್ಷೆಗಳನ್ನೂ ಒಳಗೊಂಡಿರುವ ಒಂದು ಸಹಜ ಪ್ರಕ್ರಿಯೆ ಎಂಬುದು ನನಗೆ ಮನದಟ್ಟಾಗಿದೆ. ನಮ್ಮ ಮನಸ್ಸಿನಲ್ಲಿ ನಾವು ಅದೇ ವ್ಯಕ್ತಿಯಾಗಿರುತ್ತೇವೆ. ನಮ್ಮ ಆಸೆಗಳು, ಕನಸುಗಳು ಮತ್ತು ಜೀವನ ಪ್ರೀತಿ ವಯಸ್ಸಿನೊಂದಿಗೆ ಬದಲಾಗುವುದಿಲ್ಲ. ಈ ದೇಹ ಮತ್ತು ಮನಸ್ಸಿನ ನಡುವಿನ ವ್ಯತ್ಯಾಸವನ್ನು ನಾನು ಈಗ ಅನುಭವಿಸುತ್ತಿದ್ದೇನೆ. ಬಹುಶ: ಜೀವನದ ಕೆಲವು ಸತ್ಯಗಳನ್ನು ನಾವು ಇತರರನ್ನು ನೋಡಿ ಕಲಿಯುವುದಿಲ್ಲ. ಅದೇ ಅನುಭವ ನಮ್ಮನ್ನು ತಟ್ಟಿದಾಗಲೇ, ಅದರ ಆಳ ನಮಗೆ ಅರ್ಥವಾಗುತ್ತದೆ. ನಾನು ವಯಸ್ಸಾದಾಗಲೇ ವೃದ್ಧಾಪ್ಯದ ವಾಸ್ತವಿಕತೆಯನ್ನು ಅರಿತುಕೊಂಡೆ.

ಪ್ರಸ್ತುತ ನನ್ನ ಬದುಕಿನಲ್ಲಿ ವಯಸ್ಸಾಗುವಿಕೆಯ ನಿಜವಾದ ಅರ್ಥ ಮತ್ತು ಅದರ ಕಠಿಣತೆಯನ್ನು ಅನುಭವಿಸುತ್ತಿದ್ದೇನೆ. ಹಿಂದೆ ಅಪ್ಪ, ಅಮ್ಮ ಯಾವುದಾದರೂ ವಿಷಯಗಳಿಗೆ ಬೇಜಾರು ಪಟ್ಟಾಗ, “ಇಷ್ಟು ಚಿಕ್ಕ ವಿಷಯಕ್ಕೆ ಯಾಕೆ ಬೇಸರ ಮಾಡುತ್ತೀರಿ?” ಎಂದು ಪ್ರಶ್ನಿಸಿದ್ದೂ ಉಂಟು. ಇಂದು ಅದೇ ಪರಿಸ್ಥಿತಿಯಲ್ಲಿ ನಾನಿದ್ದೇನೆ. ವಯಸ್ಸಾಗುತ್ತಿದ್ದಂತೆ ಚಿಕ್ಕ ವಿಷಯಗಳಿಗೂ ನೊಂದು ಕೊಳ್ಳುವುದೂ ಇದೆ. ಇಳಿ ವಯಸ್ಸಿನಲ್ಲಿ ಆಸೆಗಳನ್ನು ಪೂರೈಸುವ ಸಾಮರ್ಥ್ಯ ಕಡಿಮೆಯಾಗಬಹುದೇ ಹೊರತು, ಆಸೆಗಳು ಕಡಿಮೆಯಾಗುವುದಿಲ್ಲ ಎಂದು ನನಗೆ ಅನಿಸಿದೆ. ಜೀವನ ಪ್ರೀತಿ, ತಿರುಗಾಡುವ ಹಂಬಲ, ಪ್ರವಾಸ, ಹೊಸ ಬಟ್ಟೆ ಧರಿಸುವ ಖುಷಿ ಇವೆಲ್ಲವೂ ಹಿಂದಿನಂತೆಯೇ ಇದೆ. ನನ್ನ ಜೀವನದ ಈ ಹಂತದಲ್ಲಿ ನನಗಿಂತಲೂ ಹಿರಿಯವರನ್ನು ಪ್ರೀತಿಯಿಂದ ಮಾತನಾಡಿಸುತ್ತೇನೆ. ಅವರ ಮೌನದ ಹಿಂದಿರುವ ಏಕಾಂತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಅವರ ಭಾವನೆಗಳಿಗೆ ಹೆಚ್ಚಿನ ಗೌರವ ಕೊಡುವುದನ್ನು ಕಲಿತ್ತಿದ್ದೇನೆ. ಒಮ್ಮೆ ದೂರದಿಂದ ನೋಡುತ್ತಿದ್ದ ವಯಸ್ಸಿನ ಹಂತಕ್ಕೆ, ನಾನೇ ಬಂದಿದ್ದೇನೆ. ವೃದ್ಧಾಪ್ಯದಲ್ಲಿ ಅನುಭವಿಸುವ ನೋವು, ಸೂಕ್ಷ÷್ಮತೆ, ನಿರೀಕ್ಷೆಗಳ ಅರಿವು ಕಂಡುಕೊಳ್ಳಲು ಸಾಧ್ಯವಾಗಿದೆ.

ಕೆಲವರು ಇಳಿವಯಸ್ಸಿನಲ್ಲೂ ಚುರುಕಾಗಿ, ಲವಲವಿಕೆಯಿಂದ ಇರುವುದನ್ನು ಕಾಣಬಹುದು. ಇದು ಅವರವರ ಜೀವನ ಶೈಲಿ, ಧನಾತ್ಮಕ ಚಿಂತನೆಗಳು ಮತ್ತು ದೇಹ ಪ್ರಕೃತಿಯನ್ನು ಹೊಂದಿಕೊಂಡು ಇರುತ್ತದೆ. ಒಟ್ಟಿನಲ್ಲಿ ವಯಸ್ಸೆಂಬ ಅಚ್ಚರಿಯ ಪ್ರಕ್ರಿಯೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಯೊಂದೂ ನಿಧಾನವಾದ ಹೆಜ್ಜೆ, ನಿಟ್ಟುಸಿರು, ದೇಹದಲ್ಲಾಗುವ ಬದಲಾವಣೆ, ಬಿಳಿ ಕೂದಲು ಇವೆಲ್ಲವುಗಳೂ ನಮಗೆ ಕಾಲಕಾಲಕ್ಕೆ ಉಂಟಾಗುವ ಜೀವನದ ಸತ್ಯಗಳನ್ನು ನೆನಪಿಸುತ್ತವೆ. ವೃದ್ಧಾಪ್ಯವು ಜೀವನದ ಒಂದು ಸುಂದರ ಅಧ್ಯಾಯ. ಈ ಹಂತದಲ್ಲಿ ಮನಸ್ಸು ಪ್ರೀತಿ, ಗೌರವ, ಕಾಳಜಿಯನ್ನು ಬಯಸುತ್ತದೆ. ದೇಹ ಕುಂದಿದರೂ, ಬದುಕಿನ ಉತ್ಸಾಹವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಅವಶ್ಯ. ಆದ್ದರಿಂದ ವೃದ್ಧಾಪ್ಯವನ್ನು ಗೌರವಿಸೋಣ. ಈ ಕೊನೆಯ ಹಂತವನ್ನು ಪ್ರೀತಿ ಹಾಗೂ ಮಾನವೀಯತೆಯಿಂದ ಸುಂದರವಾಗಿಸೋಣ. ಆದಷ್ಟೂ ಬೇರೆಯವರಿಗೆ ಹೊರೆಯಾಗದೆ, ಸಾಧ್ಯವಾದಷ್ಟೂ ಚಿಕ್ಕಪುಟ್ಟ ಕೆಲಸಗಳಿಗೆ ನೆರವಾಗುತ್ತಾ, ಕುಟುಂಬದವರೊಡನೆ ಅನಗತ್ಯ ಅಭಿಪ್ರಾಯ ಹೇರದೆ, ಸಮತೋಲನದಿಂದ ಆರೋಗ್ಯವಾಗಿ ಬದುಕಲು ಪ್ರಯತ್ನಿಸೋಣ. ನಮ್ಮ ಜೀವನದ ಅನುಭವ, ಪ್ರಬುದ್ಧತೆ, ಸ್ವಾಭಿಮಾನ, ಸಂತೋಷ ಹಾಗೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಂಡು ಗೌರವಯುತವಾದ ಬದುಕನ್ನು ಸಾಗಿಸಿದಲ್ಲಿ ಅದುವೇ ನಮ್ಮ ಜೀವನದ ನಿಜವಾದ ಗೆಲುವು. “ಮುಗುಳ್ನಗೆಗೆ ಮುಪ್ಪಿಲ್ಲ”, ಎಂಬ ನಾಡಕವಿ ಕುವೆಂಪುರವರ ಪ್ರಸಿದ್ಧ ಸಾಲುಗಳನ್ನು ನೆನಪಿಸುತ್ತಾ, ವಯಸ್ಸಾದರೂ ಮನಸ್ಸನ್ನು ಸದಾ ಉತ್ಸಾಹದಿಂದ ಇಡಬೇಕು. ಮನಸ್ಸಿನಲ್ಲಿ ಸಂತೋಷವಿದ್ದರೆ, ಮುಖದಲ್ಲಿ ಮೂಡುವ ಮುಗುಳ್ನಗೆ ಎಂದಿಗೂ ಮುಪ್ಪಾಗುವುದಿಲ್ಲ. ಬಹುಶ: ವೃದ್ಧಾಪ್ಯದ ನಿಜವಾದ ಸೌಂದರ್ಯ ಇದೇ ಅಲ್ಲವೆ?

ಶೈಲಾರಾಣಿ ಬೋಳಾರ್, ಮಂಗಳೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *