ಲಹರಿ

ಚಾಲನೆಯೆಂಬ ಕಲೆ: ಕೇವಲ ಆಕ್ಸಿಲರೇಟರ್, ಕ್ಲಚ್, ಬ್ರೇಕ್ ಅಷ್ಟೇ ಅಲ್ಲ !

Share Button

ನನಗೆ ಹದಿನೆಂಟು ತುಂಬಿದ ದಿನದ ಮೊದಲ ಕೆಲಸ ವಾಹನ ಚಾಲನೆಯ ಎಲ್‌ಎಲ್‌ಆರ್ ಪಡೆಯುವುದಾಗಿತ್ತು. ಮನೆಯ ಸ್ಕೂಟರ್, ಕಾರ್ ಚಾಲನೆ ಮೊದಲಿಂದಲೂ ಬರುತ್ತಿದ್ದ ಸಂಗತಿಯಾಗಿದ್ದರೂ ಪೊಲೀಸಪ್ಪರ ಭಯದಿಂದ ಮತ್ತು ಕಾನೂನು ಪಾಲನೆ ಮಾಡಬೇಂಬ ಮನಸ್ಥಿತಿಯಿಂದ ಅಪ್ಪ ನನಗೆ ಗಾಡಿ ಓಡಿಸಲು ಬಿಡುತ್ತಿರಲಿಲ್ಲ. ‘ಒಬ್ಬ ವ್ಯಕ್ತಿ ಒಂದು ವಾಹನವನ್ನು ಚಲಾಯಿಸಬಲ್ಲನೇ’ ಎಂದು ನಿರ್ಧರಿಸಲು ವಯಸ್ಸೂ ಒಂದು ಮಾನದಂಡವಾಗುವ ಬಗ್ಗೆ ನನಗೆ ವೈಯಕ್ತಿಕವಾದ ತಕರಾರುಗಳಿದ್ದರೂ, ಕಾನೂನನ್ನು ಪ್ರಶ್ನಿಸಬಾರದೆಂಬ ಕಾರಣಕ್ಕೆ ಸುಮ್ಮನಿದ್ದುದುಂಟು. ಪೆಡಲ್ ತುಳಿವ ದೈಹಿಕ ಶ್ರಮವಿಲ್ಲದೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಪ್ರಯಾಣಿಸಬಹುದೆಂಬ ಪರಿಕಲ್ಪನೆಯೇ ನನಗೆ ಅಂದು ಆಕರ್ಷಕವಾಗಿ ಕಂಡಿತ್ತು.

ಹದಿನೆಂಟಾಗುವುದನ್ನೇ ಕಾಯುತ್ತಿದ್ದ ನನಗೆ ಎಲ್‌ಎಲ್‌ಆರ್‌ ಹಾಗೂ ಡಿಎಲ್‌ ಗಳು ಅತಿ ಸುಲಭವಾಗೇ ದೊರಕಿದ್ದವು. ನನಗಾಗಲೇ ಕಾರು ಚಲಾಯಿಸುವುದು ನೀರು ಕುಡಿದಷ್ಟು ಸುಲಭವಾಗಿದ್ದರೂ, ‘ಕೇವಲ ಆಕ್ಸಿಲೇಟರ್ ಒತ್ತಿ ಸಾಕು, ಕ್ಲಚ್ ಮತ್ತು ಬ್ರೇಕುಗಳನ್ನು ನಾನು ನೋಡಿಕೊಳ್ತೇನೆ’ ಎಂದು ಬಲವಂತವಾಗಿ ಸಹಾಯ ಮಾಡಿ ಏಜೆಂಟ್ ಒಬ್ಬ ಡಿಎಲ್‌ ಕೊಡಿಸಿದ್ದ. ‘ವೀಲ್ಹಿಂಗ್ ಮಾಡಬಾರದು’ ಎಂಬ ಏಕೈಕ ಐಚ್ಛಿಕ ಸಲಹೆಯೊಂದಿಗೆ ಆಗಿನ ಹುಣಸೂರಿನ ಆರ್‌ಟಿಒ ಇನ್ಸ್‌ಸ್ಪೆಕ್ಟರ್ ನನಗೆ ಲೈಸೆನ್ಸ್‌ ಮಂಜೂರು ಮಾಡಿದರು.

ವಾಹನ ಚಾಲನೆ ಎಂಬುದು ನನಗೆಂದಿಗೂ ಬೇಜಾರಾಗದ ಇಷ್ಟದ ಕೆಲಸ. ಹದಿನೆಂಟನೇ ವಯಸ್ಸಿನಿಂದ ಇಲ್ಲಿಯವರೆಗೂ ಹೆಚ್ಚು ಕಡಿಮೆ ಪ್ರತಿದಿನ ಯಾವುದಾದರೊಂದು ವಾಹನ ಚಲಾಯಿಸುತ್ತಲೇ ಇದ್ದೇನೆ. ಇಂದಿಗೂ ನನಗೆ ರಸ್ತೆ ಬೇಜಾರಾಗಿಲ್ಲ. ಪ್ರತಿದಿನ ಸವೆಸುವ ದಾರಿಯಾದರೂ ಅದೇ ಹುರುಪಿನಿಂದ ಡ್ರೈವ್ ಮಾಡುವೆ. ‘ಬೆಂಗಳೂರಲ್ಲಿ ಗಾಡಿ ಓಡಿಸಿದವರಿಗೆ ಪ್ರಪಂಚದಲ್ಲಿ ಎಲ್ಲಿ ಬಿಟ್ಟರೂ ಗಾಡಿ ಓಡಿಸುವರೆಂಬ’ ಮಾತನ್ನು ಬಹಳ ಜನರಿಂದ ಕೇಳುತ್ತಿದ್ದ ನಾನು ಅದೇ ನಿಜವೆಂದು ನಂಬಿದ್ದೆ. ಬೆಂಗಳೂರಿನ ರಸ್ತೆಗಳ ವೈಭವ ಕಳಚಿ ಬಿದ್ದದ್ದು ನಾನು ಲಂಡನ್ ನಲ್ಲಿರುವ ರಸ್ತೆಗಳ ಮೇಲೆ ಕಣ್ಣು ಹಾಯಿಸಲು ಶುರು ಮಾಡಿದ ಮೇಲೆ! ವಾಹನ ನಿರ್ವಹಣೆ ಬೇರೆ, ಅದರ ಚಾಲನೆ ಬೇರೆ ಎಂಬ ವಿಷಯ ನನಗೆ ತಡವಾಗಿಯಾದರೂ ಸಾಕ್ಷಾತ್ಕಾರವಾಯಿತು. ವಾಹನದ ನಿರ್ವಹಣೆಯನ್ನು ಯಾರು ಬೇಕಾದರೂ ಮಾಡಬಹುದು. ಒಂದು ಕಾರಿನ ಸ್ಟೀರಿಂಗ್ ವೀಲ್, ಗೇರ್, ಕ್ಲಚ್ ಮುಂತಾದವುಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲುದಾದರೆ, ಅದನ್ನು ಉತ್ತಮ ನಿರ್ವಹಣೆ ಎನ್ನಬಹುದು. ಇದರ ಅರ್ಥ ನೀವು ವಾಹನವನ್ನು ಚಲಾಯಿಸ ಬಲ್ಲಿರಿ ಎಂದಲ್ಲ. ಇದು ನನಗೆ ತಡವಾಗಿ ಅರ್ಥವಾಯಿತು. ವಾಹನದ ನಿರ್ವಹಣೆ ಎಂಬುದು ವಾಹನ ಚಾಲನೆಯ ಒಂದು ಭಾಗ ಅಷ್ಟೇ. ಉದಾಹರಣೆಗೆ ಬ್ಯಾಟ್ ಅನ್ನು ಹಿಡಿದ ಮಾತ್ರಕ್ಕೆ ಬ್ಯಾಟಿಂಗ್ ಮಾಡಲು ಬರುತ್ತದೆ ಎಂದಲ್ಲ.

ವಾಹನದ ಚಾಲನೆ ಎಂಬುದು ರಸ್ತೆ, ಸೂಚನೆಗಳು, ನಿಯಮ, ಭೌತಶಾಸ್ತ್ರ, ಹವಾಮಾನ, ಮಾನವೀಯತೆ, ಶಿಸ್ತು ಮುಂತಾದವುಗಳನ್ನು ಒಳಗೊಂಡಿರುವಂಥದ್ದು. ಯುನೈಟೆಡ್‌ ಕಿಂಗ್‌ಡಮ್‌ ನಲ್ಲಿ 2025 ರ ವೇಳೆಗೆ ವಾಹನ ಚಾಲನೆಯ ಬರವಣಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಕೇವಲ 44.9%. ಪ್ರಾಯೋಗಿಕವಾಗಿ ಉತ್ತೀರ್ಣರಾದವರು ಕೇವಲ 48%. ಯು.ಕೆ, ಯುರೋಪಿಯನ್ ರಾಷ್ಟ್ರಗಳು, ಜಪಾನ್, ಚೀನಾದಂತಹ ಏಷ್ಯಾದ ದೇಶಗಳು ಅವುಗಳ ವಾಹನ ಚಾಲನಾ ಪರೀಕ್ಷೆಗಳನ್ನು ಆತ್ಯಂತ ಸೂಕ್ಷ್ಮ ಮತ್ತು ಕ್ಲಿಷ್ಟಕರವಾಗಿಸಿವೆ. ವಾಹನ ಚಾಲನಾ ಲೈಸೆನ್ಸ್‌ ದೊರಕುವುದು ಅತ್ಯಂತ ಕಠಿಣ. ಇದರಿಂದಾಗಿಯೇ ಇಲ್ಲಿನ ದೇಶಗಳ ರಸ್ತೆಗಳು ಅತ್ಯಂತ ಸುರಕ್ಷಿತವಾಗಿವೆ. ನಾನು ಕಳೆದ ನಾಲ್ಕು ವರ್ಷಗಳಲ್ಲಿ ಒಂದೇ ಒಂದು ದೊಡ್ಡ ಅಪಘಾತವನ್ನು ಕಣ್ಣಾರೆ ನೋಡಿಲ್ಲ.

ಇಲ್ಲಿನ ವಾಹನಾ ಚಾಲನಾ ಪರೀಕ್ಷೆಗಳಲ್ಲಿ ಅತ್ಯಂತ ಸೂಕ್ಷ್ಮ ಅಂಶಗಳೂ ಪರಿಗಣನೆಗೆ ಅರ್ಹ! ಆ ರೀತಿಯಲ್ಲಿ ಸಂರಚಿಸಲಾಗಿದೆ. ಒಂದು ನಿದರ್ಶನಕ್ಕೆ: ರಸ್ತೆಯ ಅಕ್ಕ ಪಕ್ಕ ಕಾರುಗಳು ನಿಂತಿವೆಯಾದರೆ, ನೀವು ಅವುಗಳಿಂದ ಒಂದು ಕಾರ್ ಬಾಗಿಲಿನ ಅಳತೆಯಷ್ಟು ಅಗಲ ಜಾಗ ಬಿಟ್ಟು ಚಲಾಯಿಸಬೇಕು, ಇಲ್ಲವಾದರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಖಚಿತ. ಯಾರಾದರೂ ನಿಂತ ಕಾರಿನಿಂದ ದಿಢೀರನೇ ಬಾಗಿಲು ತೆಗೆದು ರಸ್ತೆಗೆ ಕಾಲಿಟ್ಟರೂ ಅಪಾಯವಾಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಈ ನಿಯಮವನ್ನು ಮಾಡಲಾಗಿದೆ. ಇಂಥ ಸಂಕೀರ್ಣ ನಿಯಮಗಳು ಇರುವುದರಿಂದ ಡ್ರೈವಿಂಗ್‌ ಟೆಸ್ಟ್‌ನಲ್ಲಿ ಮೊದಲ ಬಾರಿಗೇ ಉತ್ತೀರ್ಣರಾಗುವುದು ಬಹಳ ದೊಡ್ಡ ವಿಷಯ. ಈ ವಿಚಾರದಲ್ಲಿ ನನಗೆ ನನ್ನ ಬಗ್ಗೆ ಹೆಮ್ಮೆಯಂತೂ ಇದೆ!

ಭಾರತದಿಂದ ಬೇರೆ ದೇಶಕ್ಕೆ ವಲಸೆ ಬಂದ ಪ್ರಜೆಗಳಿಗೆ ಆರು ತಿಂಗಳು ಅಥವಾ ಒಂದು ವರ್ಷ ಭಾರತೀಯ ಪರವಾನಗಿಯನ್ನು ಉಪಯೋಗಿಸಿಕೊಂಡು ವಾಹನ ಚಲಾಯಿಸಲು ಸಾಮಾನ್ಯವಾಗಿ ಇಲ್ಲಿನ ದೇಶಗಳಲ್ಲಿ ಅನುಮತಿ ಇರುತ್ತದೆ. ಕೆಲವರು ಬೇರೆ ದೇಶದ ಪರವಾನಗಿಯ ಮುಖೇನ ಇಲ್ಲಿನ ನಿಯಮಗಳ ಅರಿವಿಲ್ಲದೇ ವಾಹನ ಚಲಾಯಿಸಿ ಅವಾಂತರಕ್ಕೆ ಕಾರಣರಾಗುವುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಈ ರೀತಿಯ ಐಡಿಯಾ ಉಳ್ಳವರು ನನ್ನ ಬಳಿ ಸಲಹೆ ಕೇಳಿದಾಗ ನಾನು ಅವರನ್ನು ಡಿಸ್‌ಕರೇಜ್‌ ಮಾಡುವುದುಂಟು. ಕಷ್ಟವಾದರೂ, ತಡವಾದರೂ ಇಲ್ಲಿನ ಪರವಾನಗಿ ಪಡೆಯುವುದು ಒಳಿತು ಎಂದು. ಅದಕ್ಕೆ ಕಾರಣಗಳಿವೆ. ನನ್ನ ಯು.ಕೆ. ಡ್ರೈವಿಂಗ್ ಪರವಾನಗಿಯು ಪ್ರಪಂಚದ ಹೆಚ್ಚು ಕಡಿಮೆ ಎಲ್ಲ ದೇಶಗಳಲ್ಲೂ ಮಾನ್ಯವಿದೆ. ನಾನೇನಾದರೂ ಮುಂದೆ ಅರಬ್ ದೇಶಗಳಿಗೋ, ಅಮೆರಿಕಾಗೋ ಅಥವಾ ಸಿಂಗಾಪುರ ಮುಂತಾದ ಏಷ್ಯಾ ದೇಶಗಳಿಗೋ ವಲಸೆ ಅಥವಾ ಪ್ರವಾಸ ಹೋದರೆ, ಯು.ಕೆ ಪರವಾನಗಿಯನ್ನು ಆ ದೇಶದ ಪರವಾನಗಿಗೆ ಪರಿವರ್ತಿಸಬಹುದು. ಬೇರೆ ದೇಶಗಳಲ್ಲಿ ಕಾರ್ ರೆಂಟ್ ಮಾಡಿದಾಗ ದುಬಾರಿಯಲ್ಲದ ದರದಲ್ಲಿ ವಿಮೆ ಲಭ್ಯ.

ಇನ್ನೊಂದು ಪ್ರಮುಖ ಅಂಶವೆಂದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ವಾಹನಕ್ಕೆ ವಿಮೆ ಇರುವುದಿಲ್ಲ, ವಾಹನ ಚಾಲಕರಿಗೆ ವಿಮೆ ಇರುತ್ತದೆ. ‘ನೀವು ಚಾಲನೆ ಮಾಡುವಾಗ ಎಷ್ಟು ತಪ್ಪು ಮಾಡಿದ್ದೀರಿ’ ಎನ್ನುವುದಕ್ಕೆ ಪೂರಕವಾಗಿ ಪಾಯಿಂಟ್‌ ಸಿಸ್ಟಮ್ ಇದೆ. ವೇಗದ ಮಿತಿ ಮೀರಿ ಚಾಲನೆ ಮಾಡಿ ರಾಡಾರ್ ಕ್ಯಾಮರಾ ಕಣ್ಣಿಗೆ ಬಿದ್ದರೋ ಅಥವಾ ಪೋಲೀಸರ ಕೈಗೆ ಸಿಕ್ಕರೋ, 3 ರಿಂದ 6 ನೆಗಟೀವ್‌ ಪಾಯಿಂಟುಗಳು ಅವರ ಲೈಸನ್ಸಿಗೆ ಸೇರ್ಪಡೆ ಆಗುತ್ತದೆ. ಟ್ರಾಫಿಕ್ ಲೈಟ್ ಜಂಪ್ ಮಾಡಿ ಸಿಕ್ಕಿ ಬಿದ್ದರೆ 3 ಪಾಯಿಂಟ್. ಹೀಗೇ ಡ್ರೈವಿಂಗ್‌ನಲ್ಲಿನ ವಿಫಲತೆ ಅಷ್ಟೆ ಅಲ್ಲದೇ ಕಾನೂನಿನ ಮಿತಿ ಮೀರಿ, ಸವೆದ ಟೈರ್ ಉಳ್ಳ ವಾಹನ ಚಲಾಯಿಸಿದರೆ, ಮಂಜಿನಿಂದ ಕವಿದ ವಿಂಡ್‌ಷೀಲ್ಡ್ ಇದ್ದಾಗ ವಾಹನ ಚಲಾಯಿಸಿದರೆ, ಹೀಗೇ ಹತ್ತಾರು ಕಾರಣಗಳಿಗಾಗಿ ಪಾಯಿಂಟುಗಳು ಸೇರ್ಪಡೆಯಾಗುತ್ತಿರುತ್ತವೆ. ಅದರಿಂದ ಆಯಾಚಿತವಾಗಿ ವಿಮಾ ಮೊತ್ತವೂ ಹೆಚ್ಚಾಗುತ್ತದೆ.

ನಾನು ಲೈಸೆನ್ಸ್ ಪಡೆದ ಮೊದಲ ವರ್ಷದಲ್ಲಿ ಶಕ್ತಿಯುತ ಕಾರು ಹೊಂದಿದ್ದ ಕಾರಣಕ್ಕೆ, ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ ಎರಡೂವರೆ ಲಕ್ಷದಷ್ಟು ವಿಮೆ ಪಾವತಿಸಿದ್ದೇನೆ. ಚಾಲನೆಯಲ್ಲಿ ಯಾವುದೇ ತಪ್ಪು ಎಸಗದೇ ನೆಗಟೀವ್‌ ಪಾಯಿಂಟುಗಳು ಇಲ್ಲದಿದ್ದುದರಿಂದ ಅದರ ಮುಂದಿನ ವರ್ಷದಲ್ಲಿ ವಿಮಾ ಮೊತ್ತವು ಶೇಕಡ 50 ರಷ್ಟು ಕಡಿಮೆಯಾಯಿತು! ಲೈಸೆನ್ಸ್ ಹೊಂದಿದ ಮೊದಲ ಎರಡು ವರ್ಷಗಳಲ್ಲೇ 6 ಪಾಯಿಂಟುಗಳು ಲಗತ್ತಾದರೆ ಪರವಾನಗಿ ರದ್ದಾಗುತ್ತದೆ. ಎರಡು ವರ್ಷದ ನಂತರ ಅದು 12 ಪಾಯಿಂಟ್ ಆಗುತ್ತದೆ.

ನಾನು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾರು ಚಲಾಯಿಸಿದ ಅನುಭವ ಉಳ್ಳವನಾಗಿದ್ದೇನೆ. ಅಮೇರಿಕಾದ ಗ್ರಾಂಡ್ ಕ್ಯಾನ್ಯಂನ್, ಲಾಸ್ ವೆಗಾಸ್, ಮಿಷಿಗನ್, ನ್ಯೂಯಾರ್ಕ್ ಮುಂತಾದ ಜಾಗಗಳಲ್ಲಿ, ಯೂರೋಪಿನ ರಾಷ್ಟ್ರಗಳಂತೂ ಆಗಾಗ್ಗೆ ವಾಹನ ಚಲಾಯಿಸುವ ಅವಕಾಶ ಸಿಕ್ಕುತ್ತಿರುತ್ತದೆ. ಮೊನ್ನೆ ಓರ್ವ ಮಿತ್ರನ ಜೊತೆಗೂಡಿ ಯೂರೋಪಿನ ಐದು ರಾಷ್ಟ್ರಗಳ ರೋಡ್‌ ಟ್ರಿಪ್‌ ಮಾಡಿ ಯುನೈಟೆಡ್‌ ಕಿಂಗ್‌ಡಮ್‌ಗೆ ಹಡಗಿನ ಮುಖೇನ ಹಿಂದಿರುಗಿದೆ. ಕಾರು ಚಾಲನೆ ಮಾಡುವಾಗ ಸಮುದ್ರ ಎದುರಾದರೆ ಹಡಗಿನ ಮೂಲಕ ಕಾರನ್ನು ಸಾಗಿಸುವುದಷ್ಟೇ!

ಜರ್ಮನಿಯಲ್ಲಿ ಹಿಟ್ಲರ್ ಕನಸಿನ ಅಟೋಬನ್ ಎಂಬ ರಸ್ತೆಗಳ ಜಾಲ ಇದೆ. ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳಿದ್ದಂತೆ. ಜರ್ಮನ್ನರಿಗೆ ತಮ್ಮ ಎಂಜಿನಿಯರಿಂಗ್‌ನ ವಿಶ್ವಾಸ ಹೇಗಿದೆ ಎಂದರೆ, ಕೆಲವು ಅಟೋಬನ್ ಸ್ಟ್ರೆಚ್‌ಗಳಲ್ಲಿ ವೇಗದ ಮಿತಿಯೇ ಇಲ್ಲ! ಕೆಲವರಂತೂ ಅಪಾಯದ ಮಿತಿ ಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ನಾನು ಜರ್ಮನಿ ಯಲ್ಲಿ ಇದೇ ಕಾರಣದಿಂದ ಬಹಳ ಬಾರಿ ಕಾರು ಚಲಾಯಿಸಿದ್ದೇನೆ. ಜರ್ಮನಿಯ ಹ್ಯಾಂಬರ್ಗ್ ನಗರದಿಂದ ಆಸ್ಟ್ರಿಯಾದ ಇನ್ಸ್ ಬ್ರುಕ್ ನಗರಕ್ಕೆ ಹೋಗುವಾಗ BMW M5 V10 ನಲ್ಲಿ ಮುಟ್ಟಿದ 282 Km/H ನನ್ನ ಇದುವರೆಗಿನ ಅತ್ಯಂತ ವೇಗದ ಚಾಲನೆ. ವಿಪರ್ಯಾಸ ಎಂದರೆ, ಆ ಪರಿಯ ವೇಗದಲ್ಲೂ ನನ್ನನ್ನು ಒಂದು ಬ್ಯುಗಾಟಿ ಚಿರೋನ್ ಕಾರು ಓವರ್ ಟೇಕ್ ಮಾಡಿ ಮಿಂಚಿನಂತೆ ಮಾಯವಾಯಿತು!

ಪ್ರತೀ ಬಾರಿ ಭಾರತಕ್ಕೆ ಬಂದಾಗ ಅಲ್ಲಿನ ಟ್ರಾಫಿಕ್‌ಗೆ ಹೊಂದಿಕೊಳ್ಳಲು ನನಗೆ ದಿನಗಳೇ ಬೇಕಾಗುತ್ತವೆ. ಯುರೋಪಿನ ಶಿಸ್ತುಬದ್ಧ ವಾಹನ ಚಾಲನೆಗೂ ಭಾರತದ ಗಮ್ಯ ಮುಟ್ಟಿದರೆ ಸಾಕೆಂಬ ಏಕೈಕ ಧ್ಯೇಯೋದ್ದೇಶದ ವಾಹನ ನಿರ್ವಹಣೆಗೂ ಇರುವ ವ್ಯತ್ಯಾಸ ಕಂಗೆಡಿಸುವಷ್ಟು. ನನ್ನ ಯುರೋಪಿಯನ್ ಮಿತ್ರರು ಹಾಗೂ ಸಹೋದ್ಯೋಗಿಗಳು ನಮ್ಮ ಭಾರತವನ್ನು ಕುರಿತು ಏನೇ ಕೆಟ್ಟದಾಗಿ ನುಡಿದರೂ ನನ್ನ ದೇಶವನ್ನು ವಹಿಸಿಕೊಂಡು ಮಾತನಾಡುವ ಸಾಮರ್ಥ್ಯ ಮತ್ತು ವಿಚಾರಧಾರೆ ನನ್ನಲ್ಲಿದ್ದರೂ ಮಹಾನ್‌ ಅವ್ಯವಸ್ಥೆಯ ಟ್ರಾಫಿಕ್‌ ಅನ್ನು ಮಾತ್ರ ವಹಿಸಿಕೊಂಡು ಮಾತನಾಡಲಾಗದು!

ಲೇಖಕರು : ಚಾರು ಮಂಜುರಾಜ್‌, ಲಂಡನ್‌

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *