ಲಹರಿ

ಧ್ಯಾನ ಮನಸ್ಸಿನ ಅಧ್ವಾನ

Share Button

“ಮನಸ್ಸನ್ನು ಅತ್ತಿತ್ತ ಚಲಿಸದಂತಿಟ್ಟುಕೊಳ್ಳಬೇಕು, ಚಂಚಲತೆಯನ್ನು ಗೆಲ್ಲಬೇಕು, ಒಳಗಿನ ನಿರಮ್ಮಳ ಶಾಂತಿಯನ್ನು ಅನುಭವಿಸಬೇಕು” ಎಂಬ ದೊಡ್ಡ ದೊಡ್ಡ ಮಾತುಗಳನ್ನು ಕೇಳಿದಾಗ, ಓದಿದಾಗ ಧ್ಯಾನವೆಂದರೆ ಕಣ್ಣು ಮುಚ್ಚಿ ಸುಮ್ಮನೆ ಕುಳಿತರೆ ಸಾಕು ಎಂದು ಅನಿಸಿತ್ತು. ಆ ಮಹಾನ್ ಭ್ರಮೆಯಲ್ಲೇ ಒಂದು ದಿನ ಬೆಳಿಗ್ಗೆ, ಮನೆಯ ಕೆಲಸಗಳನ್ನೆಲ್ಲ ಮುಗಿಸಿ, “ಇಂದು ಏನೇ ಆಗಲಿ, ಕನಿಷ್ಠ ಹದಿನೈದು ನಿಮಿಷ ಧ್ಯಾನ ಮಾಡಿಯೇ ತೀರುತ್ತೇನೆ” ಎಂದು ಸಂಕಲ್ಪ ಮಾಡಿದೆ.

ಚಾಪೆ ಹಾಸಿ, ಬೆನ್ನು ನೇರವಾಗಿ ಇಟ್ಟು, ಕಣ್ಣು ಮುಚ್ಚಿ, ಮುಖಕ್ಕೆ ಗಂಭೀರತೆಯನ್ನೂ ತಂದುಕೊಂಡೆ. ಮೊದಲು ಉಸಿರಿನ ಮೇಲೆ ಗಮನ ಹರಿಸೋಣ ಎಂದುಕೊಂಡೆ.
“ಉಸಿರು ಒಳಗೆ… ಉಸಿರು ಹೊರಗೆ…”
“ಉಸಿರು ಒಳಗೆ… ಉಸಿರು ಹೊರಗೆ…”
“ಉಸಿರು ಒಳಗೆ… ಉಸಿರು ಹೊರಗೆ…”

ಮೂರು ಸಲ ಚೆನ್ನಾಗಿಯೇ ಆಯಿತು. ನಂತರ ಛಕ್ಕನೆ ಸುಳಿಯಿತೊಂದು ಜವಾಬ್ದಾರಿಯುತ ಯೋಚನೆ
—“ಗ್ಯಾಸ್ ಆಫ್ ಮಾಡಿದೀನಾ?”
“ಆಂ! ಮಾಡಿದೀನಿ.‌ ಮಾಡಿದೀನಿ”
“ಬಾಗಿಲು ಹಾಕಿದೀನಾ? ಕಾಲ ತುಂಬಾ ಕೆಟ್ಟಿದೆ. ಹಾಡು ಹಗಲಲ್ಲೂ ಮನೆಗೆ ನುಗ್ಗಿ ದರೋಡೆ ಮಾಡುವವರ ಸುದ್ದಿ ಬರ್ತಿರುತ್ತಲ್ಲಾ. ” ಎದೆ ಜಲ್ಲೆಂದಿತು.

ತಾಳ್ಮೆಯಿಂದ ಯೋಚಿಸಿದಾಗ ಬಾಗಿಲು ಖಂಡಿತಾ ಹಾಕಿದ್ದೇನೆ ಎಂದು ನೆನಪಾಯಿತು. ಸಧ್ಯ” “ಹಾಲು ಫ್ರಿಜ್‌ನಲ್ಲಿಟ್ನಾ?”
“ನಿನ್ನೆ ಬಹಳ ತುರ್ತಾಗಿ ಗೆಳತಿಗೆ ಫೋನ್ ಮಾಡಬೇಕಿತ್ತು ಅಯ್ಯೋ ಮರೆತೇ ಹೋಯ್ತಲ್ಲಾ ಛೇ”
ಧ್ಯಾನಕ್ಕೆ ಕುಳಿತ ನಾನು, ಮನೆಯ ಆಡಳಿತ ಮಂಡಳಿಯ ಸಭೆಗೆ ಅಧ್ಯಕ್ಷೆಯಾಗಿಬಿಟ್ಟಿದ್ದೆ!

ನನ್ನ ಗೆಳತಿ ಶಾಲಿನಿ ಪ್ರತೀ ದಿನ ಎದ್ದಕೂಡಲೇ ಆ ದಿನ ಮಾಡಬೇಕಾದ ಒಂದೊಂದೂ ಸಣ್ಣ ಕೆಲಸಗಳನ್ನೂ ಒಂದು ಕಡೆ ಚೆಕ್ ಲಿಸ್ಟ್ ತರಹ ಬರೆದುಕೊಂಡಿರುತ್ತಾಳೆ. ಹಾಗಾಗಿ ಮರೆಯುವುದಕ್ಕೆ
ಸಾಧ್ಯವಿಲ್ಲ. ನಾನೂ ಹಾಗೆ‌ ಮಾಡಿಕೊಂಡರೆ???? ಅಷ್ಟೊಂದು ತಾಳ್ಮೆ ನನಗೆಲ್ಲಿಂದ ಬರಬೇಕು. ಮನಸ್ಸನ್ನು ಮತ್ತೆ ಉಸಿರಿನ ಕಡೆಗೆ ಕರೆತಂದೆ. “ಈಗ ಏನೂ ಯೋಚಿಸಬಾರದು” ಎಂದು ಕಟ್ಟುನಿಟ್ಟಾಗಿ ನಿಶ್ಚಯಿಸಿದೆ. ಮನಸ್ಸು ನನ್ನ ಮಾತನ್ನು ಕೇಳಿದಂತೆ ಎರಡು ಕ್ಷಣ ಸುಮ್ಮನಿತ್ತು. ಅನಂತರ ಹಠಾತ್ತನೆ ಇಪ್ಪತ್ತು ವರ್ಷಗಳ ಹಿಂದಿನ ಒಂದು ಘಟನೆ ನೆನಪಿಸಿತು. ಒಬ್ಬಳು ಆಗ ನನಗೆ ತುಂಬಾ ಅವಮಾನಕರವಾದ ಒಂದು ಮಾತು ಹೇಳಿದ್ದಳು . ಅದಕ್ಕೆ ಸರಿಯಾಗಿ ದಬಾಯಿಸಿ ಉತ್ತರ ಕೊಡಲು ತೋಚದೆ ಹ್ಯಾಪು ಮೋರೆ ಹಾಕಿಕೊಂಡು ಅಂದದ್ದನ್ನೆಲ್ಲಾ ಅನ್ನಿಸಿಕೊಂಡು ಬಂದು ಮನೆಯಲ್ಲಿ ಅತ್ತಿದ್ದೆ.
ಆದರೆ ಈಗ—ಧ್ಯಾನದ ಮಧ್ಯದಲ್ಲಿ—ತಕ್ಕ ಉತ್ತರ ಹೊಳೆಯಿತು! “ಹೀಗೆ ಹೇಳಬೇಕಿತ್ತು. ಆಗ ಅವಳ ಮುಖ ಮುರೀತಿತ್ತು. ಎಷ್ಟು ಸೊಕ್ಕಿನಿಂದ ಮಾತಾಡಿದ್ಳು. ಅವತ್ತು ಅವಾಗ ಅದ್ಯಾಕೆ ಹೀಗೆ ಉತ್ತರಿಸ್ಬೇಕು ಅಂತ ನನಗೆ ಹೊಳೀಲಿಲ್ಲವಲ್ಲ. ಛೇ!” ಮನಸ್ಸಿಗೆ ಈಗ ಬಹಳ ಸಂತೋಷವಾಯಿತು. ಸೇಡು ತೀರಿಸಿಕೊಳ್ಳುವ ತೃಪ್ತಿ ಉಕ್ಕಿತು. ಇಪ್ಪತ್ತು ವರ್ಷಗಳಿಂದ ಬಾಕಿ ಉಳಿದಿದ್ದ ಮಾತಿನ ಲೆಕ್ಜವನ್ನು ಚುಕ್ತಾ ಮಾಡಲು, ವಾದವೊಂದನ್ನು ಮುಗಿಸಲು ನನ್ನ ಮನಸ್ಸು ಧ್ಯಾನದ ಸಮಯವನ್ನೇ ಆಯ್ಕೆ ಮಾಡಿಕೊಂಡಿತ್ತು. ಇದು ಇವತ್ತು ಧ್ಯಾನ ಪ್ರಯತ್ನದ ದಿವ್ಯ ಸಮಯದಲ್ಲೇ ಬೇಕಿತ್ತೇ? ಛೇ! ಹಾಳು ಮನಸ್ಸು.

ಮತ್ತೆ ಉಸಿರು.
ಒಳಗೆ… ಹೊರಗೆ…
ಒಳಗೆ… ಹೊರಗೆ..

ಬಾಲ್ಯದ ನೆನಪುಗಳು ಆ ನಂತರದ ಎಲ್ಲವೂ ಕುಣಿಕುಣಿದುಕೊಂಡು, ಬ್ಯಾಂಡು ಬಾಜಾಬಜಂತ್ರಿ ಸಮೇತ ಲಾಸ್ಯವಾಡುತ್ತಾ ನುಗ್ಗಿದವು. ಶಾಲೆ, ಶಿಕ್ಷಕರು, ಗೆಳತಿಯರು, ಕಾಲೇಜು, ಮದುವೆ, ಮಕ್ಕಳು—ಮನಸ್ಸಿನ ಹಳೆಯ ಆಲ್ಬಂ ಒಂದೊಂದೇ ಪುಟ ತೆರೆದುಕೊಳ್ಳತೊಡಗಿತು. ನಾನು ಕಣ್ಣು ಮುಚ್ಚಿಕೊಂಡಿದ್ದರೂ, ಮನಸ್ಸಿನ ಪರದೆಯ ಮೇಲೆ ಪೂರ್ಣಪ್ರಮಾಣದ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು.
“ಇದೆಲ್ಲ ಬೇಡ. ತೆಪ್ಪಗೆ ವರ್ತಮಾನದಲ್ಲಿದ್ದು ಉಸಿರಾಟ ಗಮನಿಸು!”

ಹಠಾತ್ತನೆ ನಾಳೆಯ ಕೆಲಸಗಳ ಪಟ್ಟಿ ಶುರುವಾಯಿತು. ತರಕಾರಿ ತರಬೇಕು. ಯಾರಿಗೋ ಫೋನ್ ಮಾಡಬೇಕು. ಒಂದು ಲೇಖನ ಬರೆಯಬೇಕು. ಯಾವುದೋ ಪುಸ್ತಕ ಹುಡುಕಬೇಕು. ಅವೇ ಅಡುಗೆ ಮಾಡಿ ಮಾಡಿ ನನಗೇ ಬೇಜಾರಾಗಿದೆ. ರುಚಿಕರವಾದ ಮತ್ತೇನು ಮಾಡಲಿ.? ಅಯ್ಯೋ ಆ ಹೊಸಾ ಸೀರೆ ತಗೊಂಡಿರೋದನ್ನೇ ಮರೆತುಬಿಟ್ಟಿದೀನಲ್ಲ ಒಂದು ವರ್ಷವೇ ಆಯ್ತೇನೋ. ಇನ್ನಾದರೂ ರವಿಕೆ ಹೊಲೆಸಿ ಫಾಲ್ ಹಾಕಲು ಕೊಡಬೇಕು ಎಂದು ಇನ್ನೊಂದು ವಿಷಯವನ್ನು ಸೇರಿಸಿತು. ನಾನು ಧ್ಯಾನ ಮಾಡುತ್ತಿದ್ದೇನೆಯೋ, ಇಲ್ಲವೇ ನನ್ನ ಮೆದುಳಿನ ಕಚೇರಿಯಲ್ಲಿ ಕಡತಗಳ ವಿಲೇವಾರಿ ಮಾಡುತ್ತಿದ್ದೇನೆಯೋ ಎಂಬ ಅನುಮಾನ ಬಂತು.

ಒಂದು ಹಂತದಲ್ಲಿ ಮನಸ್ಸಿನ ಮೇಲೆ ಸ್ವಲ್ಪ ಕೋಪ ಬಂತು.
“ನೀನು ಹೀಗೆ ಅಲೆದಾಡುತ್ತಿದ್ದರೆ ನಾನು ಧ್ಯಾನ ಮಾಡುವುದು ಹೇಗೆ?”
ಮನಸ್ಸು ಬಹಳ ಸಮಾಧಾನದಿಂದ ಉತ್ತರಿಸಿದಂತಾಯಿತು— “ನೀನು ನನ್ನನ್ನು ಅಲೆದಾಡುತ್ತಿದ್ದೀಯೆ ಎಂದು ಗಮನಿಸುತ್ತಿರುವೆಯಲ್ಲ? ಅದೇ ಧ್ಯಾನದ ಮೊದಲ ಹೆಜ್ಜೆ!”
ಆಂ! ಹೌದೇ?!?ಅದರ ಮಾತಿನಲ್ಲಿ ಅರ್ಥವಿತ್ತು. ಆದರೆ ಮನಸ್ಸಿಗೆ ಹೆಚ್ಚು ಹೊಗಳಿಕೆ ಕೊಟ್ಟರೆ ಅದು ಇನ್ನಷ್ಟು ತಲೆ ಮೇಲೆ ಕುಳಿತುಕೊಳ್ಳುತ್ತದೆ ಎಂಬ ಭಯದಿಂದ ಸುಮ್ಮನಾದೆ.

ಮತ್ತೆ ಉಸಿರಿನ ಕಡೆಗೆ ಗಮನ.
ಈಗ ಸ್ವಲ್ಪ ಶಾಂತಿ.
ಅಷ್ಟರಲ್ಲಿ ನಾಯಿಯೊಂದರ ಭೌ ಬೌ ಎಂಬ ಒಂದೇ ಸಮ ಬೊಗಳುವಿಕೆ…
ನನ್ನ ಧ್ಯಾನವೂ ಭೌ!
“ಏನು ಶಬ್ದ?” ಎಂದು ಮನಸ್ಸು ಕೇಳಿತು.
“ನಾಯಿ.”
“ಯಾರ ಮನೆಗೆ ಬಂದಿರಬಹುದು?” ನಮ್. ಅಕ್ಕ ಪಕ್ಕದ ಯಾರ ಮನೆಯಲ್ಲೂ ನಾಯಿ ಸಾಕಿಲ್ಲವಲ್ಲ. ಬೀದಿ ನಾಯಿನೇ ಇರಬೇಕು.
“ತರಕಾರಿ.. ತರಕಾರಿ… ತರಕಾರೀ… ಬೆಂಡೆಕಾಯ್, ಬದ್ನೆಕಾಯ್,ಮೂಲಂಗಿ, ಕುಂಬಳಕಾಯ್, ಕ್ಯಾರೆಟ್, ಹಣ್ಹುರಳೀಕಾಯ್…..”
“ಹಣ್ಣು ಹುರುಳಿಕಾಯಿ??!! ಇದರ ಬೀಜವೇ ರಾಜಮಾ ಇರಬಹುದೇ? ಹೌದು. ಹಣ್ಹುರಳಿಕಾಯಿಯ ಒಣಗಿದ ಬೀಜವೇ ರಾಜಮಾ ಇರಬೇಕು. ರಾಜಮಾ ಚಾವಲ್ ತುಂಬಾ ಚೆನ್ನಾಗಿರುತ್ತೆ. ಹಣ್ಣು ಹುರಳೀಕಾಯಿಯ ಬೀಜಾನೆ ಹಾಕಿ ಮಾಡಿದ್ರೇನಂತೆ. ಒಂದು ಹೊಸ ಪ್ರಯೋಗ ಆಗುತ್ತಪ್ಪ. ಉಪ್ಪು ಖಾರ ಮಸಾಲೆ ಎಲ್ಲಾ‌ ಹದವಾಗಿ ಬೆರೆಸಿದರೆ ಏನೇ ಮಾಡಿದ್ರೂ ಚೆನ್ನಾಗಿರುತ್ತೆ. ಹಣ್ಣು ಹುರುಳೀ ಕಾಯಿ ಈಗಲೇ ತಗೊಬೇಕು ಎಂದು ಚಕ್ಕನೆ ಕಣ್ಣುಬಿಟ್ಟು ಎದ್ದೆ. ಹಾಗೆಯೇ ಗಡಿಯಾರ ನೋಡಿದೆ. ಹದಿನೈದು ನಿಮಿಷ ಧ್ಯಾನ ಮಾಡಬೇಕೆಂದು ಕುಳಿತಿದ್ದೆ. ಕಳೆದಿದ್ದು ಏಳು ನಿಮಿಷ ಹನ್ನೆರಡು ಸೆಕೆಂಡ್!
ಆದರೂ ಆ ಏಳು ನಿಮಿಷಗಳಲ್ಲಿ ನಾನು ಮನೆ ನೋಡಿಕೊಂಡೆ, ಹಳೆಯ ನೆನಪುಗಳನ್ನು ತಿರುಗಿಸಿದೆ, ಭವಿಷ್ಯದ ಕಾರ್ಯಕ್ರಮ ರೂಪಿಸಿದೆ, ಬಾಕಿ ಉಳಿದ ವಾದಕ್ಕೆ ಉತ್ತರ ಕೊಟ್ಟೆ, ನೆರೆಮನೆಯ ನಾಯಿಯ
ವಿಚಾರಣೆ ನಡೆಸಿದೆ. ಹೊಸ ಅಡುಗೆಯ ಪ್ಲಾನ್ ಮಾಡಿದೆ. ಇಷ್ಟೆಲ್ಲ ಮಾಡಿದ ಮೇಲೆ ಏಳು ನಿಮಿಷವೇ ಆಗಿರುವುದು ನೋಡಿ ಮನಸ್ಸಿನ ವೇಗಕ್ಕೆ ನಾನೇ ಬೆರಗಾದೆ.

ಆ ದಿನ ಒಂದು ಸಂಗತಿ ಅರ್ಥವಾಯಿತು.ಧ್ಯಾನವೆಂದರೆ ಮನಸ್ಸಿನಲ್ಲಿ ಒಂದೇ ಒಂದು ಆಲೋಚನೆಯೂ ಬರದಂತೆ ಮಾಡುವುದು ಅಲ್ಲ. ಮನಸ್ಸುತನ್ನ ಸ್ವಭಾವದಂತೆ ಎಲ್ಲೆಲ್ಲೋ ಓಡಾಡುತ್ತಿರುವುದನ್ನು ಗಮನಿಸಿ, ಅದನ್ನು ಗದರಿಸದೆ, ನಿಧಾನವಾಗಿ ಮತ್ತೆ ಮತ್ತೆ ಹಿಂದಕ್ಕೆ ಕರೆತರುವುದು. ಮನಸ್ಸು ಓಡುತ್ತದೆ; ನಾವು ಅದರ ಹಿಂದೆ ಓಡದಿರುವುದೇ ಸಾಧನೆ. ಆದರೆ ಈ ಮಹಾಜ್ಞಾನ ನನಗೆ ಹೊಳೆದ ಕ್ಷಣವೇ ಮನಸ್ಸು ಮತ್ತೆ ತನ್ನ ಕೊನೆಯ ಪ್ರಶ್ನೆಯನ್ನುಕೇಳಿತು—
“ಸರಿ, ಧ್ಯಾನ ಮುಗಿಯಿತು. ಈಗ ಮಧ್ಯಾಹ್ನ ಊಟಕ್ಕೆ ಏನು ಮಾಡುತ್ತೀಯ?”
ನಾನು ಕಣ್ಣು ತೆರೆದೆ. ಮನಸ್ಸು ಮಾತ್ರ ತನ್ನ ಅಧ್ವಾನವನ್ನು ಯಶಸ್ವಿಯಾಗಿ ಮುಗಿಸಿ, ಬಹಳ ನೆಮ್ಮದಿಯಿಂದ ಕುಳಿತಿತ್ತು!

ಅಯ್ಯೋ! ಮನಸ್ಸನ್ನು ಎಂತು ಗೆಲ್ಲುವೆನೋ?? ಹೇಗೆ ಗೆಲ್ಲುವೆನೋ?? ನಾನು ಇನ್ನೂ ಧ್ಯಾನದ ಆರಂಭ ಮಾಡಬೇಕಿದೆ.

– ರತ್ನಾ ಮೂರ್ತಿ

10 Comments on “ಧ್ಯಾನ ಮನಸ್ಸಿನ ಅಧ್ವಾನ

  1. ಮನಸ್ಸಿನ ಓಡಾಟವನ್ನು ಹೇಳುರಿದ ರೀತಿ ತುಂಬಾ ಚೆನ್ನಾಗಿ ದೆ,,
    ನನಗು ಈ ಎಲ್ಲಾ ಅನುಭವ ಆಗಿದೆ

    1. ಜನ ಸಾಮಾನ್ಯರ ಸಮಸ್ಯೆಯನ್ನು ಚೆನ್ನಾಗಿ ವರ್ಣಿಸಿದ್ದೀರಿ. ಹೇಳುವುದು ತುಂಬಾ ಸುಲಭ. ಮಾಡುವುದು ತುಂಬಾ ಕಷ್ಟ. ಆಸನಗಳಲ್ಲೆಲ್ಲಾ ಶವಾಸನ ತುಂಬ ಸುಲಭ ಎಂದುಕೊಂಡಿದ್ದೆ. ಆದರೆ ಈಗ ಗೊತ್ತಾಯ್ತು ಅದೇ ತುಂಬ ಕಷ್ಟ ಅಂತ.

      ಲೇಖನ ತಮಾಷೆಯಾಗಿದ್ದರೂ ಒಳ್ಳೆಯ ಸಂದೇಶ ನೀಡಿದೆ.
      ಧನ್ಯವಾದಗಳು

  2. ಚಂಚಲ ಮನಸ್ಸಿನ ದಶಾವತಾರದ ವಿವರ ಸೊಗಸಾಗಿ ಮೂಡಿಬಂದಿದೆ
    ನನ್ನ ಅನುಭವವೂ ಇದೇ ಆಗಿದೆ
    ವಂದನೆಗಳು

  3. ಚೆಂದದ ಬರಹ….ನನ್ನ ಧ್ಯಾನದ ಕತೆಯೂ ಇಷ್ಟೇ ಅಧ್ವಾನವಾಗಿದೆ!

  4. ಓದುತ್ತಿರುವಾಗಲೇ ತಡೆಯಲಾಗದ ನಗು ತರಿಸುವ ಸಹಜ ಲೇಖನ ತುಂಬಾ ಚೆನ್ನಾಗಿದೆ.

  5. ನೀವು ದ್ಯಾನದ ಬಗ್ಗೆ ಬರೆದ ಲೇಖನ….. ನಮಗರಿವಿಲ್ಲದೇ ಮುಖದ ಮೇಲೆ ನಗೆ ಮೂಡಿತು… ನಮ್ಮಂತವರ ಪಾಡೆಲ್ಲಾ ಇಷ್ಟೇ… ಎಂದೆನಿಸಿತು.. ಮೇಡಂ

  6. ಹುಚ್ಚು ಮನಸ್ಸಿನ ಹರಿದಾಟದ ವೇಗ….ಅದೇ ಮನೋವೇಗ!! ನನಗೂ ಇದೇ ಯೋಚನೆ… ಈ ಋಷಿ ಮುನಿಗಳೆಲ್ಲಾ ವರ್ಷಾನುಗಟ್ಟಲೆ ಹೇಗೆ ಕುಳಿತಿರುತ್ತಿದ್ದರೋ ನಾ ಕಾಣೆ. ಆಸನಗಳಲ್ಲಿ ಕೊನೆಯ ಆಸನ ಶವಾಸನ…ಇದರದ್ದೂ ಇದೇ ಕಥೆ ಮಾರಾಯ್ರೆ. ಉಸಿರನ್ನು ಗಮನಿಸಿತ್ತಾ ಮಲಗಿದವರಿಗೆ ಅಲ್ಲೇ ಗಾಢ ನಿದ್ರೆ ಬಂದದ್ದೂ ಇದೆಯಂತೆ! ಲಘುಹಾಸ್ಯ ಬರೆಹ ಖುಷಿಕೊಟ್ಟಿತು.

    1. ರತ್ನಕ್ಕಾ, 20 ವರ್ಷಗಳ ಹಿಂದೆ ಕೊಡಬೇಕಾಗಿದ್ದ ಎದಿರೇಟು ಏನೆಂದು ಗೊತ್ತಾಯಿತಲ್ಲ, ಮತ್ತು, ಬಾಲ್ಯದ ಇತ್ಯಾದಿ ನೆನಪುಗಳು ನುಗ್ಗಿ ಬಂದವಲ್ಲ, ಅದು ನಿಮ್ಮ ಧ್ಯಾನಸಂಕಲ್ಪದ ಫಲ. ನಿಮ್ಮ ಮನಸ್ಸು ಹೇಳಿದ, ಧ್ಯಾನದ ಮೊದಲ ಹೆಜ್ಜೆಯ ವ್ಯಾಖ್ಯೆಯನ್ನು ನನ್ನ ಮನಸ್ಸೂ ಒಪ್ಪಿದೆ. ಕೊನೆಯಲ್ಲಿ ನಿಮಗೆ ಧ್ಯಾನವೆಂದರೆ ಏನೆಂದು ಅರ್ಥವಾಗಿ ಅದರ ವ್ಯಾಖ್ಯೆಯನ್ನು ಬರೆದಿದ್ದೀರಲ್ಲಾ, ಅದು ನನ್ನ ಪ್ರಕಾರ, ಧ್ಯಾನದ ಮೊದಲ ಅಧ್ಯಾಯ. ಕೊನೆಯ ಅಧ್ಯಾಯವೇ ನಿರಾಲೋಚನೆಯ ಸ್ಥಿತಿಯನ್ನು ತಲುಪುವುದು. ಇನ್ನು, ಅಧ್ವಾನದ ವಿಷಯ. ಇದು ಗ್ರಹಿಣಿಯ ಆತಂಕವೂ ಹೌದು, ಸವಾಲು ಕೂಡ. ಅದನ್ನು ನೀವು ವಿವರಿಸಿರುವ ಲಘುಬಗೆ ಮಾತ್ರ ನಗು ಹುಟ್ಟಿಸುವಂತಿದೆ. ಹೀಗೇ ವಿಪುಲವಾಗಿ ಬರೆಯುತ್ತಿರಿ.
      – ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

  7. ಧ್ಯಾನದ ಮೊದಲ ಹೆಜ್ಜೆಯ ಅನುಭವ ಕಥನದ ಸೊಗಸಾದ ನಿರೂಪಣೆ.

  8. ಮನಸಿನ ಓಟಕ್ಕೆ ಕಡಿವಾಣ ಹಾಕುವುದು ಬಹಳ ಕಷ್ಟ. ಚೆನ್ನಾಗಿದೆ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *