ಪುಸ್ತಕ-ನೋಟ

ಪುಸ್ತಕ ಪರಿಚಯ: ಮಲಯಾಳದ ಆಧುನಿಕ ಸಣ್ಣ ಕಥೆಗಳು

Share Button

ಪುಸ್ತಕ: ಮಲಯಾಳದ ಆಧುನಿಕ ಸಣ್ಣ ಕಥೆಗಳು
ಅನುವಾದ :ಡಾ.ಪಾರ್ವತಿ ಜಿ‌ ಐತಾಳ್
ಬೆಲೆ: 140
ಪುಟ: 128 + 8
ಪ್ರಕಾಶನ: ಶ್ರೀರಾಮ ಪ್ರಕಾಶನ

ಇದುವರೆಗೂ ಮಲಯಾಳದಿಂದ ಸಣ್ಣಕಥೆ,ಕಾದಂಬರಿ,ನಾಟಕ,ಕಾವ್ಯ,ವೈಚಾರಿಕ ಹೀಗೆ 54 ವಿವಿಧ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಸಾಹಿತ್ಯಕ್ಷೇತ್ರಕ್ಕೆ ಕೊಡುಗೆ ನೀಡಿರುವ ಡಾ.ಪಾರ್ವತಿ ಜಿ ಐತಾಳ್‌ ಅವರು ʼಮಲಯಾಳದ ಆಧುನಿಕ ಸಣ್ಣ ಕಥೆಗಳುʼ ಕೃತಿಯಲ್ಲಿ 11 ವಿವಿಧ ಮಲಯಾಳಿ ಲೇಖಕರ 17 ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ʼಕುತ್ತೇ ಕಮೀನೇʼನಾಯಕನು ಖಳನಾಯಕನನ್ನು ಕರೆಯುವುದು ಹಲವಾರು ಚಿತ್ರಗಳಲ್ಲಿ ಕಂಡಿರುತ್ತೇವೆ.ಎಲ್ಲರೂ ಚಿತ್ರಗಳಲ್ಲಿ ನಾಯಕನನ್ನು ಹೊಗಳುವವರೇ. ಆದರೆ ಖಳನಾಯಕನ ಪಾಡೇನು. ಕೆಸರು ನೆಲದ ಮೇಲೆ, ಎಲ್ಲೆಂದರಲ್ಲಿ ಮಲಗಿ ನಾಯಕನಿಂದ ಹೊಡೆಸಿಕೊಂಡು,ಒಂದು ಐನೂರು ಬಾರಿ ಕೆಸರಲ್ಲಿ ತಳ್ಳಲ್ಪಟ್ಟು ,ನಾಲ್ಕೈದು ಬಾರಿ ನಾಯಕನಿಗೆ ಗುದ್ದುವ ಅವಕಾಶ ಸಿಕ್ಕಿದಾಗ ಎಂದು ವಿಲನ್‌ ಒಬ್ಬನ ಸ್ವಗತ ನಮ್ಮನ್ನು ಮನಕುಲುಕುವಂತೆ ಮಾಡುತ್ತದೆ. ವಿಲನ್‌ ಜೈಲಿನಿಂದ ಹೊರಬಂದ ನಂತರ ವಿಧವೆಯೊಬ್ಬಳಿಗೆ, ಅವರ ಮಕ್ಕಳಿಗೆ ಆಶ್ರಯ ಕೊಟ್ಟರೆ, ಮುಂದೆ ಮಗಳ ಮದುವೆಯ ಸಂದರ್ಭದಲ್ಲಿ ಅವನ ಕುರಿತು ಕೇಳಬೇಕಾದ ಹೀನಾಯ ಮಾತುಗಳು, ಅವರನ್ನು ತಾನು ಕೊಲ್ಲಬೇಕಾದ ಸಂದರ್ಭವೆಂದು ಕಥೆಯ ಏರುಪೇರುಗಳು ಚೆನ್ನಾಗಿ ಸಾಗುತ್ತಾ ವಿಲನ್‌ ನ ಬದುಕಿನಲ್ಲಿ ಹಲವಾರು ಚಲನಚಿತ್ರಗಳಲ್ಲಿ ಕೊಲ್ಲಲ್ಪಟ್ಟರೂ,ಯಾರಿಗೂ ತನ್ನ ಮೇಲೆ ಅನುಕಂಪವೇ ಇಲ್ಲ ಎಂಬಂತೆ ಅವನ ಅಳಲು. ನಾನೇನು ವಿಲ್ಲನ್‌ ಅಲ್ಲ,ನನ್ನನ್ನು ವಿಲ್ಲನ್‌ ಮಾಡಿದ್ದು ಎಂಬ ಅವನ ಮಾತುಗಳು ನಮ್ಮನ್ನು ಕಾಡುತ್ತವೆ.

ಮೈಥಿಲಿ ಕಥೆಯಲ್ಲಿ ಮೈಥಿಲಿ, ಊರ್ಮಿಳೆ ಪಾತ್ರಗಳ ಹೆಸರೇ ಆಕರ್ಷಣೀಯವಾಗಿದ್ದು, ಮೈಥಿಲಿಯ ಪಾತ್ರ ನಮ್ಮನ್ನು ತುಂಬಾ ಸೆಳೆಯುತ್ತದೆ. ಅಪ್ಪ-ಅಮ್ಮ ಒಂದೇ ಮನೆಯಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದರೂ, ಒಂದೇ ಕೋಣೆಯಲ್ಲಿ ಊಟ ಮಾಡುವುದು. ಮುಂದೆ ಮೈಥಿಲಿ ತಂದೆತಾಯಿಯರ ಸಂಬಂಧ ಅರ್ಥ ಮಾಡಿಕೊಂಡು ಅವಳೇ ಅವರ ಅಪ್ಪ-ಅಮ್ಮನೋ ಎಂಬಂತೆ ಅಮ್ಮ ಇನ್ನೊಬ್ಬನನ್ನು ಪ್ರೀತಿಸುವುದ ಗಮನಿಸಿ, ಅವಳ ಮದುವೆ ಮಾಡಿಸಿದರೆ, ಅಪ್ಪನಿಗೂ ಒಂದು ಹೆಣ್ಣು ನೋಡು ಎಂದು ಕಾಳಜಿವಹಿಸುವ ರೀತಿ, ಮತ್ತೆ ಈ ಮನೆಯನ್ನು ನನ್ನ ಹೆಸರಿಗೆ ಬರೆದು ಬಿಡಿ ಎಂದು ಪ್ರೌಢಳಾಗಿ ನೀಡುವ ಹುಸಿ ಆಜ್ಞೆ, ಹೀಗೆ ಕಥೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಇಲ್ಲಿಯ ಪ್ರತಿ ೧೭ ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿ,ವಿಶಿಷ್ಟವಾಗಿ ಮೂಡಿ ಬಂದಿದ್ದು,ಓದುಗರ ಮನಸೂರೆಗೊಳ್ಲೂವುದರಲ್ಲಿ ಎರಡು ಮಾತಿಲ್ಲ.ಇವೆಲ್ಲ ಕನ್ನಡದ ಕಥೆಗಳೇ ಏನೋ ಎಂಬಷ್ಟು ಆತ್ಮೀಯವಾಗಿ ಕನ್ನಡೀಕರಿಸಿರುವ ಅನುವಾದಕಿಯ ಪಾತ್ರ ಮಹತ್ವಪೂರ್ಣವಾದುದು.

ಸಾವಿತ್ರಿ ಶ್ಯಾನುಭಾಗ, ಕುಂದಾಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *