ದಶಮಸ್ಕಂದ – ಉತ್ತರಾರ್ಧ – ಅಧ್ಯಾಯ ೧೩
ಶೃತಗೀತಾ
ವಿದೇಹ ದೇಶದ ಮಿಥಿಲಾ ಪಟ್ಟಣದಿ
ಕೃಷ್ಣಮಿತ್ರ ಶೃತದೇವ ವಾಸ
ಶಾಂತಚಿತ್ತ ಸಂಯಮಿ ವಿದೇಹ ದೇಶದ
ರಾಜ ಬಹುಳಾಶ್ವ ಕೃಷ್ಣಭಕ್ತ
ಈರ್ವರಿಗೂ ಅನುಗ್ರಹಿಸಲಿಚ್ಚಿಸಿದ ಕೃಷ್ಣ
ನಾರದ ವ್ಯಾಸ ಪರಶುರಾಮ ಅಗಸ್ತ್ಯಾದಿ
ಮಹರ್ಷಿಗಳೊಡನೆ ಮಿಥಿಲಾ ಪ್ರವೇಶ
ಬಹುಳಾಶ್ವ ಶೃತದೇವ
ಶ್ರೀಕೃಷ್ಣ ಭಕ್ತಾಗ್ರಣ್ಯರು ಏಕಕಾಲದಿ
ತಮ್ಮ ಮನೆಗೆ ಆತಿಥ್ಯಕೆ ಪ್ರಾರ್ಥಿಸೆ
ಕೃಷ್ಣ ದ್ವಿರೂಪವ ಪಡೆದು ಅವರೀರ್ವರ ಗೃಹಕೆ
ಏಕಕಾಲದಿ ಆಗಮಿಸೆ ಬಹುಳಾಶ್ವನು ಸಂತಸದಿ
ಕೃಷ್ಣನ ಪಾದಪೂಜೆಗೈದು ಪಾದೋದಕವ
ಪರಿವಾರದೊಡನೆ ಪ್ರೋಕ್ಷಿಸಿಗೊಂಡು
ಕೃಷ್ಣಸಾನಿಧ್ಯದಲಿ ಸುಖಿಸುತ್ತಿರೆ
ಇತ್ತ ಶೃತದೇವನ ಮನೆಯಲ್ಲೂ ಅದೇ ಕಾಲದಿ
ಪ್ರತ್ಯಕ್ಷನಾದ ಕೃಷ್ಣನು ಮಹರ್ಷಿಗಳೊಡನೆ
ಸಕಲ ವಿಧದ ಪೂಜೆ ಆತಿಥ್ಯವ ಸ್ವೀಕರಿಸಿ
ಶೃತದೇವನ ಅನುಗ್ರಹಿಸಿ, ಮಹರ್ಷಿಗಳೆಲ್ಲರನೂ
ತನ್ನ ಸ್ವರೂಪವೆಂದೇ ಭಾವಿಸಿ ಭಕ್ತಿಯಲಿ ಆರಾಧಿಸೆ
ಅದರಿಂದ ಕೇವಲ ಕೃಷ್ಣನಾರಾಧನೆಗಿಂತ
ಮಿಗಿಲಾದ ತೃಪ್ತಿ ಸಂತೋಷ ದೊರಕುವುದೆಂದೂ
ಕೃಷ್ಣನಾನುಗ್ರಹಕೆ ಪಾತ್ರರಾಗಿಹ ಭಕ್ತರ
ಹೃದಯದಲಿ ನೆಲೆಸಿರ್ಪ ಭಗವಂತನ
ತಮ್ಮ ಹೃದಯದಿ ತಿಳಿಯಬೇಕಲ್ಲದೆ
ಕರ್ಮವಶದಿ ಮುಳುಗಿರ್ಪ ಮನಸ್ಸಿಗೆ
ಗೋಚರವಾಗದೆಂಬ ಸತ್ಯವ ತಿಳಿ ಹೇಳೆ
ಶೃತದೇವ ಆಧ್ಯಾತ್ಮ ತತ್ವವ ತಿಳಿದು
ಕೃಷ್ಣನ ಪ್ರತ್ಯಕ್ಷ ದರ್ಶನದಿಂ ಸಕಲ
ವಿಘ್ನಗಳು ನಿವಾರಣೆಯಾಗಿ
ಮುಕ್ತಿಯು ಕರಗತವಾದಂತೆ
ಎಂದು ಸಂತಸದಿ ಸಂಭ್ರಮಿಸೆ
ದಯಾನಿಧಿ ಕೃಷ್ಣ ತನ್ನೆರಡು ರೂಪದಿಂ
ಏಕಕಾಲದಿ ಭಕ್ತರ ಅನುಗ್ರಹಿಸಿದ
ಪರಿ ಅನನ್ಯ
ಮುಂದುವರಿಯುವುದು)
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=45732

-ಎಂ. ಆರ್. ಆನಂದ, ಮೈಸೂರು


Nice
ಏಕಕಾಲಕ್ಕೆ ಭಕ್ತರಿಬ್ಬರ ಮನೋಭೀಷ್ಟೆಯನ್ನು ಪೂರೈಸಿದ ಶ್ರೀಕೃಷ್ಣನ ಕರುಣೆಗೆ ಪಾರವಿದೆಯೇ?… ಎಂದಿನಂತೆ ಚಂದದ ಕಾವ್ಯ ಭಾಗವತ.
ಎಂದಿನಂತೆ ಕಾವ್ಯ ಭಾಗವತ.. ಓದಿಸಿ ಕೊಂಡು ಹೋಯಿತು… ಸಾರ್
ಭಗವಂತನ ಕೃಪೆಗೆ ಈರ್ವರೂ ಏಕಕಾಲದಲ್ಲಿ ಭಾಗಿಯಾದದ್ದೂ ಭಗವದ್ ಲೀಲೆಯ ಕೌತುಕವೇ ಹೌದು.
ಪ್ರಕಟಿಸಿದ “ಸುರಹೊನ್ನೆ” ಗೆ ಮತ್ತು ವಾಚಕರಿಗೆ ವಂದನೆಗಳು.