(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸೀ ವಾಕ್ ಮಜಾ…
ಜಾಗತಿಕ ಮಹಾಯುದ್ಧದಲ್ಲಿ ಜಪಾನೀಯರಿಂದ ನಾಶ ಹೊಂದಿ ಶಿಥಿಲಗೊಂಡ ಇಲ್ಲಿರುವ ಹಲವಾರು ಕಟ್ಟಡಗಳ ಗೋಡೆಗಳಲ್ಲಿ ಮರದ ದಪ್ಪನೆಯ ಬೇರುಗಳು ಚಿತ್ರ ವಿಚಿತ್ರ ರೀತಿಯಲ್ಲಿ ಹಬ್ಬಿ, ಅದರ ಮೇಲೆ ಮರಗಳು ಬೆಳೆದು, ಸಿನಿಮಾ ಚಿತ್ರೀಕರಣಕ್ಕೆ ರಚಿಸಲಾದ ದೆವ್ವದ ಮನೆಯ ಗೋಡೆಗಳಂತೆ ಕಾಣುತ್ತಿದ್ದವು! ಪ್ರಸ್ತುತ ಉಪಯೋಗಕ್ಕಾಗಿ ಒಂದೆರಡು ಹೊಸ ಕಟ್ಟಡಗಳನ್ನು ಕಟ್ಟಿದ್ದರೂ, ಹಳೆಯ ಕಟ್ಟಡಗಳನ್ನು ಇದ್ದಂತೆಯೇ ಕಾಪಿಡಲಾಗಿದೆ. ಇವುಗಳು ಪ್ರವಾಸಿಗರ ಮುಖ್ಯ ಆಕರ್ಷಣೆಯೂ ಹೌದು. ಒಂದರ್ಧ ಗಂಟೆ ಅಲ್ಲೇ ಸುತ್ತಾಡುತ್ತಾ, ವಿಚಿತ್ರ ಗೋಡೆಗಳ ಪಕ್ಕ ನಿಂತು ಫೊಟೋ ಕ್ಲಿಕ್ಕಿಸುತ್ತಿದ್ದಾಗಲೇ ನಮಗೆ ಕರೆ ಬಂತು… ದೋಣಿ ನಮಗಾಗಿ ಕಾಯುತ್ತಿತ್ತು. ಮಧ್ಯಾಹ್ನ 12ಗಂಟೆ… ದೋಣಿಯು ನಮ್ಮನ್ನು ಕರೆದೊಯ್ದ ತಾಣದಲ್ಲಿ ಬಿಟ್ಟಿತು. ನೀರಿನಲ್ಲಿ ಸಾಹಸಕ್ರೀಡೆಗಳನ್ನು ಆಯೋಜಿಸಲು ಈ ಸ್ಥಳವು ಬಹಳ ಸೂಕ್ತವಾದ ಕರಾವಳಿಯಾಗಿದೆ. ಆದ್ದರಿಂದ ಇಲ್ಲಿ ಬಹಳಷ್ಟು ಪ್ರವಾಸಿಗರು ಅದಕ್ಕಾಗಿಯೇ ನೆರೆದಿದ್ದರು. ಕ್ರೀಡೆಗಳಲ್ಲಿ ಭಾಗವಹಿಸಲು ಹೆಸರು ನೋಂದಾಯಿಸುವಲ್ಲಿ ಬಹಳ ಜನ ದಟ್ಟಣೆ ಇದ್ದುದರಿಂದ ಮಧ್ಯವರ್ತಿಗಳ ಸಹಾಯ ಪಡೆಯಬೇಕಾಯಿತು. ನಮ್ಮ ಗುರುತಿನ ಚೀಟಿಯನ್ನು ನೀಡಿ ಸಾಹಸ ಕ್ರೀಡೆಗೆ ಹೊರಡಲು ಸಜ್ಜಾದೆವು. ಇಲ್ಲಿರುವ ಸಾಹಸ ಕ್ರೀಡೆಗಳಲ್ಲಿ ಸೀ ವಾಕ್(Sea Walk) ಕೂಡಾ ಒಂದು.
ಈ ಕ್ರೀಡೆಯು ನಿಜಕ್ಕೂ ಸಾಹಸಮಯ! ಸಮುದ್ರದಾಳಕ್ಕಿಳಿದು ತಳದಲ್ಲಿರುವ ಸುಂದರ ಪ್ರಕೃತಿ ಸೋಜಿಗವನ್ನು ವೀಕ್ಷಿಸುವ ಅವಕಾಶ. ಈ ಸಮಯದಲ್ಲಿ ಮೂಗಿನ ಮೂಲಕ ಉಸಿರಾಡದೆ, ಬಾಯಿಯಲ್ಲಿ ಸಿಕ್ಕಿಸಿರುವ ಕೊಳವೆಯ ಮೂಲಕ ಉಸಿರಾಡಬೇಕಾಗುತ್ತದೆ. ಇದಕ್ಕಾಗಿ ಈ ಕ್ರೀಡಾಸಕ್ತರಿಗೆ ಅರ್ಧತಾಸಿನ ತರಬೇತಿಯನ್ನು ನೀಡುವರು. ಇದರ ಶುಲ್ಕ ರೂ. 3800/- . ಸಮುದ್ರದಾಳದ ಸೊಬಗನ್ನು ಸೂರೆಗೈಯಲು ನನಗೆ ಬಹಳಷ್ಟು ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ. ಏಕೆಂದರೆ, ಅರುವತ್ತು ವಯಸ್ಸಿನ ಮೇಲ್ಪಟ್ಟವರಿಗೆ ಈ ಕ್ರೀಡೆಗೆ ಅವಕಾಶ ನೀಡುವುದಿಲ್ಲ. ಪಾರಾ ಸೈಲಿಂಗ್ (Para Sailing)ಗೆ ನನಗೆ ಅವಕಾಶವಿತ್ತು. ಅದಕ್ಕೆ ಹೆಸರು ನೋಂದಾಯಿಸಲಾಯಿತು. ಒಳಗೊಳಗೇ ಭಯವಿದ್ದರೂ ತೋರಿಸಿಕೊಳ್ಳಲಿಲ್ಲವೆನ್ನಿ. ಇದರ ಶುಲ್ಕ ಒಬ್ಬರಿಗೆ ರೂ. 3200/- ನನಗೆ ಧೈರ್ಯ ನೀಡಲು ಮಗಳು ಜೊತೆಗೆ ಬರುವೆನೆಂದಳು.. ಕ್ರೀಡೆಯಲ್ಲಿ ಭಾಗವಹಿಸದೆ ಇರುವ ಕಾರಣ ಅವಳಿಗೆ ರೂ. 500/- ಮಾತ್ರ. ಸ್ವಲ್ಪ ಹೊತ್ತಿನಲ್ಲಿ, ಹತ್ತು ಮಂದಿ ಕುಳಿತುಕೊಳ್ಳಬಹುದಾದಂತಹ ಯಾಂತ್ರಿಕ ದೋಣಿಯಲ್ಲಿ ಸಮುದ್ರ ಮಧ್ಯಕ್ಕೆ ಸಾಗುತ್ತಿರುವಾಗ, ತೆರೆಯ ಏರಿಳಿತದ ನಡುವೆ, ದೋಣಿಯು ಚಲಿಸುವ ರಭಸಕ್ಕೆ ನೀರು ಆಳೆತ್ತರಕ್ಕೆ ಚಿಮ್ಮಿ ನಮ್ಮನ್ನೆಲ್ಲಾ ತೋಯಿಸಿ ತೊಪ್ಪೆಯಾಗಿಸಿತು. ಎಲ್ಲರ ಚರವಾಣಿಗಳೂ ಸಮುದ್ರ ಸ್ನಾನದಿಂದ ಪಾವನಗೊಂಡವು! ದೋಣಿಯ ಹೊಯ್ದಾಟವು ಹೆಚ್ಚಾದಾಗ ಭಯವಾದರೂ, ಸುರಕ್ಷತೆಗಾಗಿ ತೊಟ್ಟ ಕವಚಗಳು ಹಾಗೂ ದೋಣಿಯ ಸಿಬ್ಬಂದಿಗಳ ಮೇಲೆ ಭರವಸೆ ಇರಿಸದೆ ಬೇರೆ ಮಾರ್ಗವಿರಲಿಲ್ಲ. ಐದು ನಿಮಿಷಗಳಲ್ಲಿ ದೋಣಿಯು ಅಲೆಗಳಿಲ್ಲದ ಆಳ ಸಮುದ್ರದ ಮಧ್ಯೆ ನಿಂತಿತು.
ನಮ್ಮ ದೋಣಿಯಲ್ಲಿ ಇರುವವರೆಲ್ಲರೂ ಪಾರಾ ಸೈಲಿಂಗ್ ಕ್ರೀಡೆಗೆ ಸಜ್ಜಾಗಿ ಬಂದವರಾಗಿದ್ದರು. ದಪ್ಪಗಿನ ಬಲವಾದ ಹಗ್ಗದ ತುದಿಯಲ್ಲಿರುವ ಬೃಹದಾಕಾರದ ಕೊಡೆಯಂತಿರುವ ಸಾಧನದ ಮಧ್ಯಭಾಗದಲ್ಲಿ ಇಳಿಬಿಟ್ಟ ಬೆಲ್ಟಿನಲ್ಲಿ ನಮ್ಮನ್ನು ಸರಿಯಾಗಿ ಬಂಧಿಸಿ, ಸುರಕ್ಷಿತವಾಗಿ ಕುಳ್ಳಿರಿಸಿ, ದೋಣಿಯನ್ನು ಅತ್ಯಂತ ವೇಗವಾಗಿ ಓಡಿಸುವರು. ಆ ರಭಸಕ್ಕೆ ಕೊಡೆಯಾಕಾರದ ಭಾಗವು ಪ್ಯಾರಾಚೂಟಿನಂತೆ ತೆರೆದುಕೊಂಡು ಗಾಳಿಯ ಒತ್ತಡಕ್ಕೆ ಮೇಲಕ್ಕೇರಿದಾಗ; ಅದಕ್ಕೆ ಕಟ್ಟಿದ್ದ, ದೋಣಿಯಲ್ಲಿ ಸುತ್ತಿಟ್ಟ ಹಗ್ಗವನ್ನು ನಿಧಾನವಾಗಿ ಸಡಿಲಗೊಳಿಸುತ್ತಾ ಸಾಗುವರು…ನಾವು ಅವರ ಗಾಳಿಪಟವಾಗಿ ಬಿಡುವೆವು!! ವ್ಯಕ್ತಿಯೂ ಆಕಾಶದೆತ್ತರ ಸಾಗುತ್ತಾ… ಸಾಗುತ್ತಾ…ಸುಮಾರು ನೂರು ಅಡಿಗಳಷ್ಟು ಎತ್ತರಕ್ಕೆ ಗಾಳಿಯಲ್ಲಿ ತೇಲುತ್ತಾ ನಿಂತು ಬಿಡುವನು.
ನನ್ನ ಸರದಿ ಬಂತು…ಮೇಲ್ಗಡೆ ಅನಂತ ನೀಲಿಯಾಗಸ… ಕೆಳಗಡೆ ವಿಶಾಲವಾದ ನೀಲಿಸಾಗರ! ಇವೆರಡರ ನಡುವೆ ನಾನು ಹಕ್ಕಿಯಂತೆ ತೇಲಾಡುತ್ತಾ.. ತೂಗಾಡುತ್ತಾ ಕಳೆದ ಸಮಯ ಅತ್ಯದ್ಭುತ ಅನುಭವವನ್ನು ನೀಡಿತು! ನಮ್ಮ ದೋಣಿಯು ಕೆಳಗಡೆ ನೀರಿನಲ್ಲಿ ತೇಲುವ ಪುಟ್ಟ ಕಾಗದದ ದೋಣಿಯಂತೆ ಗೋಚರಿಸಿತು. ಎತ್ತರವೆಂದರೆ ವಿಪರೀತ ಭಯ ಪಡುವ ನನಗೆ, ಮೇಲೇರಿದಾಗ, ಗಾಳಿಯಲ್ಲಿ ತೇಲುವಾಗ ಸ್ವಲ್ಪವೂ ಭಯವಾಗದಿರುವುದು ಆಶ್ಚರ್ಯವೆನಿಸಿತು..! ಸ್ವರ್ಗದ ಸಮೀಪವೇ ಇರುವಂತೆ ಭಾಸವಾಗಿ ಅತ್ಯಂತ ಖುಷಿಯಿಂದ ಆ ಸಮಯವನ್ನು ಅಸ್ವಾದಿಸಿದೆ….ಸಮಯ ಸರಿದುದೇ ತಿಳಿಯಲಿಲ್ಲ! ಸುಮಾರು ಆರೇಳು ನಿಮಿಷಗಳ ಕಾಲ ಗಾಳಿಯಲ್ಲಿ ತೇಲಾಡಿ…ಓಲಾಡಿ ಖುಷಿಪಟ್ಟೆ. ಇನ್ನಷ್ಟು ಸಮಯ ಹಾಗೆಯೇ ಇದ್ದರೆ ಒಳ್ಳೆಯದಿತ್ತು ಎಂದು ಆಸೆಪಟ್ಟರೂ ಅದು ಸಾಧ್ಯವಿಲ್ಲ ಅಲ್ಲವೇ..?. ನಿಧಾನವಾಗಿ ಕೆಳಗಿನಿಂದ ಹಗ್ಗವನ್ನು ಎಳೆಯಲಾರಂಭಿಸಿದರು. ಇಳಿಯುವಾಗ ಮಾತ್ರ ನಮ್ಮ ಸಮತೋಲನ ತಪ್ಪಿ ಬಿಡುತ್ತದೆ. ಅದಕ್ಕಾಗಿ ಕೆಳಗಿನಿಂದ ನಮಗೆ ಶರೀರವನ್ನು , ಕೈಕಾಲುಗಳನ್ನು ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ನಿರಂತರ ಸೂಚನೆಯನ್ನು ನೀಡುತ್ತಾ ಇರುತ್ತಾರೆ. ಅಂತೂ ಈ ಪಾರಾ ಸೈಲಿಂಗ್ ನನಗೆ ಎಂದಿಗೂ ಮರೆಲಾಗದ ಅದ್ಭುತ ಅನುಭವವನ್ನು ನೀಡಿದ್ದಂತೂ ನಿಜ!
ಸಮುದ್ರದಾಳದತ್ತ ಇಣುಕಿ….
ಮಧ್ಯಾಹ್ನ ಒಂದು ಗಂಟೆಯ ಸಮಯ… “ಅಂಡಮಾನ್ ಡಾಲ್ಫಿನ್” ಎನ್ನುವ ವಿಶೇಷ ರೀತಿಯ ನೌಕೆ ಸಿದ್ಧವಾಗಿತ್ತು. ಹೊರಗಿನಿಂದ ನೋಡಲು ಡಾಲ್ಫಿನ್ ನಂತೆ ಕಾಣುವ ಈ ನೌಕೆಯ ಒಳಗಡೆ ವೃತ್ತಾಕಾರದಲ್ಲಿ ಆಸನಗಳನ್ನು ಹಾಕಲಾಗಿದೆ. ತಳದ ಮಧ್ಯಭಾಗದಲ್ಲಿ ದೊಡ್ಡದಾದ ಗಾಜಿನ ಪೀನ ಮಸೂರವನ್ನು ಅಳವಡಿಸಲಾಗಿದೆ. ಪ್ರವೇಶ ಶುಲ್ಕವನ್ನು ನೀಡಿ ಒಳಗೆ ಪ್ರವೇಶಿಸಿ, ಆಸನಗಳೆಲ್ಲ ಭರ್ತಿಯಾದ ಬಳಿಕ ನೌಕೆ ವೇಗವಾಗಿ ಹೊರಟಿತು. ಒಳಗಡೆ ಮಂದಬೆಳಕು ಮಾತ್ರವಿತ್ತು…ಹೊರಗಡೆಯ ಯಾವ ದೃಶ್ಯವೂ ಗೋಚರಿಸುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ, ನೈಸರ್ಗಿಕವಾಗಿ ಹವಳ ಬೆಳೆಯುವ ಸಮುದ್ರ ಭಾಗದಲ್ಲಿ ನಮ್ಮ ನೌಕೆ ನಿಧಾನವಾಗಿ ಸಾಗಲಾರಂಭಿಸಿತು. ನಮ್ಮೊಡನಿದ್ದ ಮಾರ್ಗದರ್ಶಿಯು ಮಸೂರ ಮೂಲಕ ಸಮುದ್ರ ತಳವನ್ನು ತೋರಿಸುತ್ತ ಸಾಗಿದಾಗ ನಮ್ಮೆಲ್ಲರ ಸಂತೋಷಕ್ಕೆ ಎಣೆಯಿಲ್ಲ! ಸುಮಾರು ಹತ್ತು ಮೀಟರ್ ಆಳದಲ್ಲಿರುವ ಜಲಚರಗಳು, ಹವಳದ ದಿಬ್ಬಗಳು ಅತೀ ಸಮೀಪದಲ್ಲಿರುವಂತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಆಹಾ… ವಿವಿಧ ಬಣ್ಣಗಳ ಮೀನುಗಳ ಹಿಂಡುಗಳು, ದೊಡ್ಡದಾದ ಹವಳದ ದಿಬ್ಬಗಳ ರಚನೆಗಳು, ಕಲ್ಲಿನೆಡೆಯಲ್ಲಿ ತೆಪ್ಪಗೆ ಮಲಗಿರುವ; ಅಳಿವಿನಂಚಿನಲ್ಲಿರುವ, ಮಾನವನಿಗೆ ಅತೀ ಪ್ರಿಯ ಆಹಾರವಾದ ಸಮುದ್ರ ಸೌತೆ(Sea Cucumber) ಎನ್ನುವ ಜಲಚರ ಇತ್ಯಾದಿಗಳನ್ನು ನೋಡುತ್ತಾ ಸಮಯ ಸರಿದುದೇ ತಿಳಿಯಲಿಲ್ಲ! ಸುಮಾರು ಅರ್ಧ ಗಂಟೆ ಸುತ್ತಾಡಿಸಿ ನಮ್ಮನ್ನು ಹಿಂದಕ್ಕೆ ಕರೆತರಲಾಯಿತು. ಸಾಹಸಕ್ರೀಡೆಗಳ ಅನುಭವವನ್ನು ಮೆಲುಕು ಹಾಕುತ್ತಾ ಉದರ ತುಂಬಿಸುವತ್ತ ಗಮನಹರಿಸಿದೆವು.
ಅಂಡಮಾನಿನಲ್ಲಿ ಪೂರ್ಣ ಸಸ್ಯಾಹಾರದ ಹೋಟೆಲ್ ಸಿಗುವುದು ಬಹಳ ಕಷ್ಟ! ಅಪರೂಪಕ್ಕೆ ಸಿಕ್ಕಿದ, ಪೂರ್ತಿ ಸಸ್ಯಾಹಾರವಿರುವ ಹೋಟೆಲ್ ಅನ್ನಪೂರ್ಣವನ್ನು ಹೊಕ್ಕು ಹೊರಬಂದಾಗ ಬಿಲ್ಲು ನೋಡಿ ಗಾಬರಿಯಾಗದಿರದು! ಈಗ ನಾನು ಕೊಡಲಿರುವ ಊಟ ತಿಂಡಿಯ ದರವನ್ನು ನೋಡಿ ಬೆಚ್ಚಿಬೀಳುವ ಸರದಿ ನಿಮ್ಮದು..!!
ಗುಲಾಬ್ ಜಾಮೂನ್: 300/-, ಐಸ್ ಕ್ರೀಂ: 275/-ಒಂದು ಪ್ಲೇಟ್ ಅನ್ನ ಮಾತ್ರ: 300/-, ಪಲಾವ್: 375/, -ಉಪ್ಪಿಟ್ಟು: 275/-, ಕಾಫಿ/ಟೀ: 110/-, ಜ್ಯೂಸ್: 190/-ಟೊಮೆಟೊ ಸೂಪ್: 250/-,ಮೊಸರು : 275/-….??!! (ಅಮೆರಿಕದಲ್ಲಿ ಎರಡು ಡಾಲರ್ ಗೆ ನಾಲ್ಕು ಕರಿಬೇವಿನ ಎಲೆ ಕೊಂಡುಕೊಂಡು ಹೊಟ್ಟೆ ಉರಿಸಿಕೊಂಡದ್ದು ನೆನಪಾಯ್ತು!) ಎಲ್ಲಾ ಸರಕುಗಳೂ ಸಮುದ್ರದ ಮೂಲಕ ಬರಬೇಕಾಗಿದ್ದು, ಸಾಗಾಣಿಕೆ ವೆಚ್ಚವು ಬಹಳ ದುಬಾರಿಯಾಗಿರುವುದರಿಂದ ಸಹಜವಾಗಿಯೇ ಇಲ್ಲಿ ಎಲ್ಲವೂ ತುಟ್ಟಿಯೇ. ಇಲ್ಲಿಯ ಜನರ ಜೀವನಕ್ಕೂ ದಾರಿಯಾಗಬೇಕಲ್ಲ ಎನ್ನುವ ಉದಾರ ಭಾವದೊಂದಿಗೆ ನಮ್ಮ ವಸತಿ ಗೃಹಕ್ಕೆ ಹಿಂತಿರುಗಿದೆವು.
(ಮುಂದುವರಿಯುವುದು…)

-ಶಂಕರಿ ಶರ್ಮ, ಪುತ್ತೂರು.


