(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಸ್ವರಾಜ್ ದ್ವೀಪದತ್ತ…
ಮರುದಿನ 15.2.2023ನೇ ಬುಧವಾರ… ಬೆಳ್ಳಂಬೆಳಗ್ಗೆ 6:45ಕ್ಕೆ ಹೊರಟು ಸಮುದ್ರತೀರ ತಲಪಿದೆವು. ಈ ದಿನ ಹೆವ್ಲಾಕ್(Havelock) ದ್ವೀಪದತ್ತ ನಮ್ಮ ಪಯಣ. ಈಗ ಈ ದ್ವೀಪಕ್ಕೆ “ಸ್ವರಾಜ್ ದ್ವೀಪ” ಎಂಬುದಾಗಿ ಮರುನಾಮಕರಣ ಮಾಡಲಾಗಿದೆ. ಇದರ ಬಂದರು(Jetty) ಪ್ರದೇಶಕ್ಕೆ ಬಂದಾಗ ‘NAUTIKA` ನಾವೆಯು ಸಿದ್ಧವಾಗಿತ್ತು. ವಿಮಾನ ಪ್ರಯಾಣದಲ್ಲಿರುವಂತೆ ಇಲ್ಲಿಯೂ ಎಲ್ಲಾ ಬ್ಯಾಗುಗಳನ್ನು ಮತ್ತು ಪ್ರಯಾಣಿಕರನ್ನು ಕೂಲಂಕಷವಾಗಿ ತಪಾಸಣೆ ನಡೆಸಿ ಒಳಗೆ ಬಿಡುತ್ತಾರೆ. ಈ ಸುಂದರ ನೌಕೆಯು 33ಮೀ ಉದ್ದವಿದ್ದು, ಒಮ್ಮೆಗೆ ಸುಮಾರು 285ಮಂದಿ ಪ್ರಯಾಣಿಕರನ್ನು ಒಯ್ಯಬಲ್ಲುದು. ಪೂರ್ತಿ ಹವಾನಿಯಂತ್ರಣವಿದ್ದು, ರಾಯಲ್ ಮತ್ತು ಲಕ್ಷುರಿ ಕ್ಲಾಸ್ ಗಳುಳ್ಳ ಎರಡು ಅಂತಸ್ತುಗಳುಳ್ಳ ಈ ನೌಕೆಯು 2022ರಲ್ಲಿ ಪ್ರಥಮ ಬಾರಿಗೆ ಸಮುದ್ರಕ್ಕಿಳಿದಿದ್ದು, ಉತ್ತಮ ಆಧುನಿಕ ಸವಲತ್ತುಗಳನ್ನು ಹೊಂದಿದೆ. ರಾಯಲ್ ವಿಭಾಗದಲ್ಲಿ C, D, E, F…ಹೀಗೆ ಆರು ವಿಭಾಗಗಳಿವೆ.
7:30ಕ್ಕೆ ನೀಲಿ ಸಾಗರದ ನೀರನ್ನು ಸೀಳುತ್ತಾ ತನ್ನ ಗಮ್ಯದತ್ತ ನಾವೆಯು ಹೊರಟಿತು. ಸಾಗರ ಮಧ್ಯೆ ಬಹುದೂರದ ದ್ವೀಪಗಳಲ್ಲಿರುವ ಗುಡ್ಡ ಬೆಟ್ಟಗಳು, ತೆಳು ಹಸಿರು ಕಾಡು, ಮರಗಳು, ಕಂಡು ಮರೆಯಾಗುತ್ತಿದ್ದವು. ಸಮುದ್ರದಲ್ಲಿ ಪಯಣಿಸುವ ಇತರ ನಾವೆಗಳು ಅಲ್ಲಲ್ಲಿ ಕಾಣಸಿಗುತ್ತಿದ್ದವು. 9:30ಕ್ಕೆ ಸ್ವರಾಜ್ ದ್ವೀಪಕ್ಕೆ ತಲಪಿತು, ನಮ್ಮ ನಾವೆ.
ಪೋರ್ಟ್ ಬ್ಲೈರ್ ನಲ್ಲಿ ಉಳಕೊಂಡಿದ್ದ TSG ಗುಂಪಿನವರ ಮಾಲಕತ್ವದ ಹೋಟೆಲ್ ಬ್ಲೂ ರೆಸಾರ್ಟ್ ನಲ್ಲಿ ಎರಡು ಕೋಣೆಗಳನ್ನು ನಮಗಾಗಿ ಕಾದಿರಿಸಲಾಗಿತ್ತು. ಹಸಿರು ಮರಗಿಡಗಳು ತುಂಬಿರುವ ವಿಶಾಲವಾದ ತೋಟದೊಳಗೆ, ಬಹುತೇಕ ಮರದಲ್ಲಿ ನಿರ್ಮಿಸಿದ ಹಳ್ಳಿ ಮನೆಗಳಂತಿರುವ ಸಣ್ಣ ದೊಡ್ಡ ವಸತಿಗೃಹಗಳು ಅಲ್ಲಲ್ಲಿ ಕಂಡುಬಂದವು. ಈ ಸಮುಚ್ಚಯದ ಮಧ್ಯಭಾಗದಲ್ಲಿರುವ ವಿಶಾಲವಾದ ಸುಂದರ ಈಜುಕೊಳ ಅಲ್ಲಿಯ ಸೊಬಗನ್ನು ಹೆಚ್ಚಿಸಿದೆ. ಅಲ್ಲಲ್ಲಿ ಪ್ರವಾಸಿಗರ ಉಪಯೋಗಕ್ಕಾಗಿ ಮರದಿಂದ ಮರಕ್ಕೆ ಜೋಕಾಲಿಗಳನ್ನು ಕಟ್ಟಲಾಗಿದೆ. ಈ ವಸತಿ ಸಂಕೀರ್ಣದಿಂದ ಸ್ವಲ್ಪ ದೂರದಲ್ಲಿ ಅಂಡಮಾನಿನ ಪ್ರಸಿದ್ಧ ರಾಧಾನಗರ್ ಸಮುದ್ರತೀರ ಇರುವುದರಿಂದ, ಸಂಜೆ ಹೊತ್ತಿನಲ್ಲಿ ಅಲ್ಲಿಗೆ ಹೋಗಲು ಸಿದ್ಧರಾದೆವು.
ರಾಧಾನಗರ್ ಬೀಚ್
ಸಂಜೆ ಮೂರು ಗಂಟೆ… ಜಗತ್ತಿನಲ್ಲಿಯೇ ಅತ್ಯಂತ ಸುಂದರ, ಸುರಕ್ಷಿತ, ಸ್ವಚ್ಛ ಸಮುದ್ರ ತೀರಗಳಲ್ಲಿ ಒಂದಾದ ರಾಧಾನಗರ್ ಬೀಚ್ ಪ್ರವಾಸಿಗರಿಂದ ತುಂಬಿತ್ತು. ತೀರದಲ್ಲಿ ಹರಡಿದ್ದ ಸ್ವಚ್ಛ ಮರಳು, ಅದರಾಚೆ ಹಬ್ಬಿ ನಿಂತಿರುವ ದಟ್ಟ ಹಸಿರು ಮರಗಳು, ಸಾಗರದ ಸೊಬಗನ್ನು, ಸೂರ್ಯಾಸ್ತವನ್ನು ಮನಸೋಯಿಚ್ಛೆ ನೋಡಿ ಆನಂದಿಸಲು ಪ್ರವಾಸಿಗರಿಗಾಗಿ ನಿರ್ಮಿಸಿದ ಆರಾಮಾಸನಗಳು ಮುದನೀಡುವಂತಿದ್ದವು. ತೀರದಿಂದ ಸಮುದ್ರದ ಒಳಗಡೆಗೆ ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಪ್ರವಾಸಿಗರಿಗೆ ಸುರಕ್ಷಿತವಾಗಿ ಈಜಲು ಸಾಧ್ಯವಾಗುವಂತೆ ಸಮುದ್ರದೊಳಗೆ ಬಲೆಯ ಬೇಲಿಯನ್ನು ನಿರ್ಮಿಸಲಾಗಿತ್ತು. ಇಲ್ಲಿಯ ಮೇಲ್ವಿಚಾರಣೆಯನ್ನು ಅಂಡಮಾನ್ ಮತ್ತು ನಿಕೋಬಾರ್ ಸಾಗರಿಕ ಸಂಸ್ಥೆಯವರು (Andaman and Nicobar Sagarika Department) ವಹಿಸಿರುವರು.
ಸಮುದ್ರ ತೀರದಲ್ಲಿ ಪಾದ ತೋಯಿಸಿ ತೃಪ್ತಳಾಗುತ್ತಿದ್ದ ನನ್ನನ್ನು, ಒತ್ತಾಯದಿಂದ ನೀರಿಗೆ ಒಯ್ದಳು, ಮಗಳು. ಸ್ವಲ್ಪ ಹೊತ್ತಿನಲ್ಲಿ ಪಾದದ ಕೆಳಗಿನ ಮರಳು ಜಾರತೊಡಗಿತು. ಡಿ.ವಿ. ಜಿಯವರು ಹೇಳಿದಂತೆ…’ಪದ ಕುಸಿಯೆ ನೆಲವಿಹುದು…` ಏನೂ ಆಗಲಿಲ್ಲ!.. ನೀರಿನೊಳಗೆ ಮುಳುಗಿಯೇ ಬಿಟ್ಟೆ! ಈಜು ಬಾರದ ನಾನು ಉಸುರುಕಟ್ಟಿ, ಅಂಡಮಾನಿನಲ್ಲೇ ಜಲಸಮಾಧಿಯಾಗುವೆನೋ ಏನೋ ಎಂಬ ಯೋಚನೆ ಸುಳಿಯಿತು! ಆದರೂ ತಡಬಡಿಸಿ ಎದ್ದು ಸುಧಾರಿಸಿದವಳಿಗೆ ಭಯ ದೂರವಾಗಿ ನೀರಿನಲ್ಲಿ ಮತ್ತಷ್ಟು ಹೊತ್ತು ಕಳೆಯುವಂತಾಯಿತು ಬಿಡಿ. ಈ ಸಮುದ್ರ ತೀರವು ಅಪಾಯ ರಹಿತವಾಗಿದ್ದು, ಮಕ್ಕಳಿಗೆ ಕೂಡಾ ಆರಾಮವಾಗಿ ನೀರಿನಲ್ಲಿ ಈಜುತ್ತಾ ಆನಂದಿಸಬಹುದಾಗಿದೆ. ಇಳಿಸಂಜೆ ವರೆಗೆ ಅಲ್ಲಿ ಇರಲು ಅನುಮತಿ ಇದೆ. ನಾವು ಉಳಕೊಂಡಿದ್ದ ವಸತಿಗೃಹದಿಂದ ಕೇವಲ 300ಮೀಟರ್ ದೂರದಲ್ಲಿರುವ ಈ ರಾಧಾ ಬೀಚ್, ಅಲ್ಲಿದ್ದ ಎರಡು ದಿನಗಳಲ್ಲಿ ನಮ್ಮ ಇಷ್ಟದ ತಾಣವಾಗಿ, ಅತ್ಯಂತ ಸುಂದರ ಸೂರ್ಯಾಸ್ತದ ವಿವಿಧ ಹಂತಗಳ ಚಿತ್ರಗಳನ್ನು ಮನ:ಪೂರ್ತಿ ತೆಗೆಯಲು ಅನುಕೂಲವಾಯಿತು. ಬೀಚ್ ಪಕ್ಕದಲ್ಲಿ ಸಾಕಷ್ಟು ಉಪಾಹಾರದ ಅಂಗಡಿಗಳಿದ್ದರೂ ನಮಗೆ ಸಸ್ಯಾಹಾರಿ ತಿನಿಸಿಗಾಗಿ ಹುಡುಕುತ್ತಾ ಅಲೆದು, ಕೊನೆಯ ದಿನ ಕಣ್ಣಿಗೆ ಬಿದ್ದ The veg corner ಎಂಬ ಉಪಾಹಾರ ಗೃಹದಲ್ಲಿ ಒಳ್ಳೆಯ ತಿಂಡಿ, ಪಾನೀಯ ಸೇವಿಸಿ ಧನ್ಯರಾದೆವು!
ಅಲ್ಲೇ ಹತ್ತಿರವಿರುವ ಇನ್ನೊಂದು ಅತ್ಯಂತ ಸುಂದರ ಬೀಚ್ ಗೋವಿಂದ್ ನಗರ. ಇದು ಸ್ಕೂಬಾ ಡೈವಿಂಗ್ ಸಾಹಸ ಕ್ರೀಡೆಗೆ ಸೂಕ್ತ ಸ್ಥಳವಾಗಿದೆ. ಅದಕ್ಕಾಗಿ ಮಕ್ಕಳಿಬ್ಬರೂ ಕಾದಿರಿಸಿದ್ದರಿಂದ. ಮರುದಿನ ಬೆಳಗ್ಗೆ 9ಗಂಟೆಗೆ ಅದರಲ್ಲಿ ಪಾಲ್ಗೊಂಡು, ಬಣ್ಣ ಬಣ್ಣದ ಮೀನುಗಳು ಕಣ್ಣೆದುರಿಗೇ ಓಡಾಡುವುದನ್ನು ನೋಡುತ್ತಾ, ಅವುಗಳನ್ನು ಹಿಡಿಯಲು ಪ್ರಯತ್ನಪಡುತ್ತಾ ಒಂದು ತಾಸು ಆಳ ಸಮುದ್ರದಲ್ಲಿ ಖುಷಿಪಟ್ಟರು.
ಸಣ್ಣ ಬಂದರನ್ನು ಜೆಟ್ಟಿ ಎನ್ನುವರು. ಅಂತಹ ಒಂದು ಜೆಟ್ಟಿಯಿಂದ, ನಾವು ಮುಂದೆ ಹೋಗಬೇಕಿದ್ದ ನೀಲ್ ದ್ವೀಪಕ್ಕೆ(Neil Island) 2ಗಂಟೆಗೆ ಕ್ರೂಜ್ ಹೊರಡುವುದಿತ್ತು. ಅಲ್ಲಿಗೆ ತಲಪಿದಾಗ ನಮಗಾಗಿ ಮಾಕೃಜ಼್ ಫೆರ್ರಿ (Makruzz Ferry) ಹೆಸರಿನ ದೊಡ್ಡದಾದ ಕ್ರೂಜ್ ತಯಾರಾಗಿ ನಿಂತಿತ್ತು. ಎರಡು ಅಂತಸ್ತಿನ ಈ ಜಲವಾಹನವು ಕೆಳಗಿನ ಅಂತಸ್ತಿನಲ್ಲಿ 208 ಆಸನಗಳನ್ನು ಹಾಗೂ ಮೇಲಿನ ಅಂತಸ್ತಿನಲ್ಲಿ 72ಆಸನಗಳನ್ನು ಹೊಂದಿದ್ದು ಎಲ್ಲಾ ಆಧುನಿಕ ಸವಲತ್ತುಗಳನ್ನು ಒಳಗೊಂಡಿದೆ. ಸುಮಾರು 20ಕಿ.ಮೀ ದೂರವಿರುವ ದ್ವೀಪಕ್ಕೆ ನಮ್ಮ ಪಯಣ ಸಾಗಿತು…
ಶಹೀದ್ ದ್ವೀಪದತ್ತ….
ಪ್ರಸ್ತುತ ನೀಲ್ ದ್ವೀಪವು ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ. ಸುಮಾರು ಒಂದೂವರೆ ಗಂಟೆ ಪ್ರಯಾಣವು ಅತ್ಯಂತ ಚೇತೋಹಾರಿಯಾಗಿತ್ತು. ಜಲವಾಹನವು ಆಳ ನೀಲಿ ಸಮುದ್ರದಲ್ಲಿ ನೀರನ್ನು ಸೀಳುತ್ತಾ, ಬಿಳಿ ನೊರೆಯನ್ನು ಆಳೆತ್ತರ ಚಿಮ್ಮಿಸುತ್ತಾ ಸಾಗುವುದನ್ನು ಮನದುಂಬಿ ಆನಂದಿಸುತ್ತಾ, ಅನತಿ ದೂರದಲ್ಲಿ ಅಲ್ಲಲ್ಲಿ ಗೋಚರಿಸುವ ಹಸಿರು ಹೊತ್ತ ಚಿಕ್ಕಪುಟ್ಟ ದ್ವೀಪಗಳ ಅಂದವನ್ನು ಕಣ್ತುಂಬಿಕೊಳ್ಳುತ್ತಾ ಸಾಗಿದ ಪಯಣ ಅವಿಸ್ಮರಣೀಯ!
ಸುಮಾರು 13.7ಚ.ಕಿ.ಮೀ ವಿಸ್ತೀರ್ಣ ಹೊಂದಿದ ಈ ದ್ವೀಪವು ಇಲ್ಲಿಯ ದ್ವೀಪ ಸಮೂಹಗಳಲ್ಲೇ ಅತ್ಯಂತ ಸುಂದರ ಎಂಬ ಹೆಗ್ಗಳಿಕೆ ಪಡೆದಿದೆ. ನಿಸರ್ಗದತ್ತ ಹವಳದ ದಿಬ್ಬಗಳು, ಹವಳದ ಕಮಾನು ಇತ್ಯಾದಿಗಳು ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿವೆ. ಶಹೀದ್ ದ್ವೀಪದ ಲಕ್ಷ್ಮಣ ನಗರ ಎಂಬಲ್ಲಿ Pearl Park Beach Resort ಎಂಬ ವಸತಿಗೃಹವನ್ನು ಕಾದಿರಿಸಲಾಗಿತ್ತು. ಇದು ನಾಲ್ಕು ಮಂದಿ ಉಳಕೊಳ್ಳಲು ಅನುಕೂಲಕರವಾಗಿರುವ, ಎರಡು ಕೋಣೆಗಳಿದ್ದು ಚಂದದ ಸ್ನಾನಗೃಹವನ್ನು ಹೊಂದಿದೆ. ಮುಂಭಾಗದಲ್ಲಿ ದೊಡ್ದ ಈಜುಕೊಳ, ಸುತ್ತಲೂ ದೊಡ್ದದಾಗಿ ಬೆಳೆದ ಮರಗಿಡಗಳು, ಅನತಿ ದೂರದಲ್ಲಿರುವ ಸಮುದ್ರದಿಂದ ಕೇಳುವ ಕಡಲ ಮೊರೆತ ಎಲ್ಲವೂ ಅಹ್ಲಾದಕರ! ಸಾಮಾನುಗಳನ್ನು ಕೊಠಡಿಯಲ್ಲಿರಿಸಿ ಹೊರಡುವಾಗ ಸಂಜೆ 3:30… ಅಲ್ಲಿ ಆ ದಿನ 4:30ಕ್ಕೆ ಸೂರ್ಯಾಸ್ತವೆಂದು ತಿಳಿದು ಪಕ್ಕದಲ್ಲಿರುವ ಸಮುದ್ರ ತೀರದಿಂದ ಸೂರ್ಯಾಸ್ತ ನೋಡಲು ಹೊರಟೆವು. ಸಮುದ್ರ ತೀರವನ್ನು ತಲಪಲು ಒಂದೈದು ನಿಮಿಷದ ಕಾಲ್ನಡಿಗೆ. ಅಲ್ಲಿ ಸೂರ್ಯಸ್ತ ವೀಕ್ಷಿಸಲು ಅನುಕೂಲವಾಗುವಂತೆ ಆಸನಗಳನ್ನು ಅಳವಡಿಸಿದ್ದರೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ಸ್ವಲ್ಪ ತಗ್ಗು ಪ್ರದೇಶದಲ್ಲಿರುವ ಸಮುದ್ರ ಕಿನಾರೆಗೆ ಇಳಿಯಲು ಸರಿಯಾದ ಕಾಲುದಾರಿ ಇರಲಿಲ್ಲ. ಮಾತ್ರವಲ್ಲದೆ, ಅಲ್ಲಿ ಸ್ವಲ್ಪವೇ ಜಾಗದಲ್ಲಿ ಸುರಕ್ಷಿತವಾದ ಮರಳು ದಿಬ್ಬವಿರುವ ಕಿನಾರೆಯಿದ್ದು, ಉಳಿದಂತೆ ಪೂರ್ತಿ ಕಡಲು ಆವರಿಸಿತ್ತು. ಹಳೆಯ ಮರಗಳು ಅಡ್ಡಾದಿಡ್ಡಿ ಬಿದ್ದು ಅಲೆಗಳಿಂದ ತೋಯಿಸಿಕೊಳ್ಳುತ್ತಿದ್ದವು. ಇನ್ನೂ ಸ್ವಲ್ಪ ದೂರ ಮುಂದಕ್ಕೆ ಹೋದರೆ ಸಿಗುವ ವಿಶಾಲವಾದ ಸ್ವಚ್ಛ ಕಿನಾರೆಯತ್ತ ಸಾಕಷ್ಟು ಪ್ರವಾಸಿಗರು ಸೂರ್ಯಾಸ್ತ ನೋಡಲು ನಡೆದರು. ನಾವು ಇದ್ದಲ್ಲೇ ನೋಡಿ ತೃಪ್ತರಾದೆವು.
(ಮುಂದುವರಿಯುವುದು…)
ಈ ಪ್ರವಾಸಕಥನದ ಹಿಂದಿನ ಕಂತು ಇಲ್ಲಿದೆ: https://surahonne.com/?p=45744

-ಶಂಕರಿ ಶರ್ಮ, ಪುತ್ತೂರು.

