(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕೈತುಂಬ ವರಮಾನ ಬರುತ್ತಿದ್ದಂತೆ ಅವನ ಗೆಳೆಯರ ಸಂಖ್ಯೆಯೂ ಹೆಚ್ಚಿತು. ಅಂಗಡಿಯಲ್ಲಿ ಕುಳಿತು ನೋಡಿಕೊಳ್ಳುವ ವ್ಯಕ್ತಿ ಬೇರೆ ಬೇರೆಯಾದ್ದರಿಂದ ಅವನ ಜೇಬು ತುಂಬತೊಡಗಿತು. ಗಲ್ಲಾಪೆಟ್ಟಿಗೆ ಸೊರಗತೊಡಗಿತು. ಜೊತೆಗೆ ಯರ‍್ಯಾರದ್ದೋ ಸಲಹೆಯ ಮಾತುಗಳನ್ನು ಕೇಳಿ ಹಣವನ್ನು ಬೇರೆ ಕಡೆಗಳಲ್ಲಿ ತೊಡಗಿಸಿದರೆ ಹೆಚ್ಚು ಲಾಭ ಬರುವುದೆಂಬ ಆಸೆಯಿಂದ ಹಾಕಿದ ಹಣದ ಗಂಟು ಮುಳುಗಿತು. ಕೊನೆಗೆ ಮಳಿಗೆಯ ಬಾಡಿಗೆಯನ್ನೂ ಕಟ್ಟಲಾಗದಂತಹ ದುಸ್ಥಿತಿ ಬಂದಿತು. ಈ ಸಂಕಟದ ಸ್ಥಿತಿಯಿಂದ ಹೇಗೆ ಪಾರಾಗಬಹುದೆಂದು ಆಲೋಚಿಸದೆ ಥಟ್ಟನೆ ಅಂಗಡಿಯನ್ನೇ ಬಾಗಿಲು ಹಾಕಿ ವ್ಯಾಪಾರ ವಹಿವಾಟಿಗೆ ಶರಣು ಹೊಡೆದನು.
ಬ್ಯಾಂಕಿನ ಸಾಲದ ಕಂತುಗಳಿನ್ನೂ ಮುಗಿಯದ್ದರಿಂದ ಅವುಗಳನ್ನು ಭಾರ್ಗವಿಯ ಸಂಬಳದಿಂದಲೇ ಕಟ್ಟಬೇಕಾಯಿತು. ಅದನ್ನು ಪೂರ್ತಿ ತೀರಿಸುವಷ್ಟರಲ್ಲಿ ಅವಳಿಗೆ ಸಾಕುಬೇಕಾಯಿತು. ದಿನೇದಿನೇ ಬೆಳೆಯುತ್ತಿರುವ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಇವುಗಳ ಜೊತೆಗೆ ಆಕೆಗೆ ಹುದ್ದೆಯ ಕಾರ್ಯಭಾರದ ನಿಮಿತ್ತ ಬೇರೆ ಊರಿಗಳಿಗೂ ಬೇಟಿಕೊಡಬೇಕಾದ ಅನಿವಾರ್ಯತೆ, ಇವೆಲ್ಲದರಿಂದ ಭಾರ್ಗವಿ ತತ್ತರಿಸಿ ಹೋದಳು. ಅನ್ನುವ ಹಾಗಿಲ್ಲ , ಬಿಡುವ ಹಾಗಿಲ್ಲ. ಅಣ್ಣ ಬಾಲಕೃಷ್ಣ ಹೇಳಿದ ಸಂಗತಿ ಇನ್ನೂ ಗಾಭರಿ ಹುಟ್ಟಿಸುವಂತಿತ್ತು. “ಭಾರ್ಗವಿ ನನ್ನ ಗೆಳೆಯ ದಾರಿಬಿಟ್ಟು ಹಿಡಿತಕ್ಕೆ ಸಿಕ್ಕುತ್ತಿಲ್ಲ. ಊರಿಗೆ ಬರುವುದು ಹೆಚ್ಚಾಗಿದೆ. ಜಮೀನನ್ನು ಬೇರೆಯವರಿಗೆ ಗೇಣಿಗೆ ಕೊಟ್ಟಿದ್ದರೂ ಅದರ ಉಸ್ತುವಾರಿಕೆ ನೋಡಲು ಬರುತ್ತಿದ್ದಾನೆ ಅಂದುಕೊಂಡೆ. ನನ್ನ ಊಹೆ ತಪ್ಪಾಯ್ತು. ಅವನ ಜಮೀನನ್ನು ಮಾಡುತ್ತಿರುವ ರೈತರಿಂದ ತಿಳಿದ ವಿಷಯವೇನೆಂದರೆ ಅದರಲ್ಲಿ ಬೆಳೆದಿರುವ ಫಲಬಿಡುವ ಮರಗಳನ್ನು ಗುತ್ತಿಗೆದಾರರಿಗೆ ಫಲಬಿಡುವ ಮೊದಲೇ ಕೊಟ್ಟು ಅವರಿಂದ ಮುಂಗಡವಾಗಿ ಹಣ ಪಡೆಯುತ್ತಿದ್ದಾನಂತೆ. ರೈತರೇ ನಿಮ್ಮ ಅತ್ತೆ ನಾದಿನಿಯರ ಮುಖ ನೋಡಿ ಏನೋ ಚಕಮಕಿ ಮಾಡಿ ಅದರಲ್ಲಿ ಸ್ವಲ್ಪ ಉಳಿಯುವಂತೆ ಮಾಡಿ ಅದನ್ನು ಅವರಿಬ್ಬರಿಗೆ ತಲುಪಿಸುತ್ತಿದ್ದಾರಂತೆ. ಇದರಿಂದ ಬದುಕು ನಡೆಸಲು ಅವರಿಗೆ ಸಹಾಯಕವಾಗುವುದಾಗಿ ತಿಳಿದು ಅವರೇ ಇವರಿಗೆ ಒತ್ತಾಸೆಯಾಗಿ ನಿಂತಿದ್ದಾರಂತೆ. ನಿನ್ನ ನಾದಿನಿಯ ಮದುವೆ ಮಾಡುವ ಯೋಚನೆಯನ್ನೇ ಕೈಬಿಟ್ಟಂತೆ ಕಾಣುತ್ತದೆ. ನೀನು ಸ್ವಲ್ಪ ಆ ಕಡೆಗೆ ಪ್ರಯತ್ನಪಟ್ಟರೆ ಒಳಿತಾಗಬಹುದು. ಅದಕ್ಕೇ ಹೇಳಿದೆ” ಎಂದು ಸೂಕ್ಷ್ಮವಾಗಿ ತಿಳಿಸಿದ ಅಣ್ಣ.
ಸೋದರನ ಎಚ್ಚರಿಕೆಯ ಮಾತುಗಳಲ್ಲಿನ ಕಳಕಳಿಯನ್ನು ಗಮನಿಸಿದ ಭಾರ್ಗವಿ “ನೀನು ಹೇಳಿದಂತೆ ನಾನೂ ಗಮನಿಸುತ್ತಿದ್ದೇನೆ. ಆದರೆ ಸಿದ್ಧಾರ್ಥ ನನ್ನ ನಾದಿನಿಯ ಮದುವೆಯ ವಿಚಾರವಾಗಿ ಉದಾಸೀನ ಮಾಡಿರಬಹುದು, ನಾನು ಮಾಡಿಲ್ಲ. ವಿಚಾರಣೆ, ಹುಡುಕಾಟ, ಮಾತುಕತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಏಕೋ ಏನೊ ಯಾವುದೂ ಫಲಕಾರಿಯಾಗುವ ಸೂಚನೆ ಕಂಡುಬರುತ್ತಿಲ್ಲ. ಹೋಗಲಿ ಆಕೆ ಕಲಿಯುವುದರಲ್ಲೂ ಆಸಕ್ತಿ ತೋರುತ್ತಿಲ್ಲ. ಹೋಗಲಿ ಕಲಿತಿರುವಷ್ಟನ್ನಾದರೂ ಉಪಯೋಗ ಮಾಡಿಕೊಳ್ಳುವತ್ತ ಗಮನ ಹರಿಸಿ ಎಂದು ಪ್ರತ್ಯಕ್ಷವಾಗಿ ಹೇಳಿದ್ದಾಯಿತು. ಅದೂ ಉಪಯೋಗ ಆಗದಂತಾಯಿತು. ನನಗಂತೂ ಏನೂ ತೋಚುತ್ತಿಲ್ಲ. ಹೋಗಲಿ ಎಲ್ಲವನ್ನು ಬಿಟ್ಟು ವಾಪಸ್ಸು ಬಂದುಬಿಡಲೇ ಎಂದರೆ ಹಿಂತಿರುಗಲಾರದಷ್ಟು ಮುಂದೆ ಬಂದುಬಿಟ್ಟಿದ್ದೇನೆ. ಮಕ್ಕಳ ಭವಿಷ್ಯದ ಕಡೆಗೆ ಗಮನ ಕೊಡಬೇಕಲ್ಲಾ. ನಿನ್ನ ಗೆಳೆಯನಿಂದ ನಾನೇನನ್ನೂ ನಿರೀಕ್ಷಿಸುವಂತಿಲ್ಲ. ಊಹೆಗೂ ಮೀರಿದ ಬದಲಾವಣೆ ಕಂಡು ಬರುತ್ತಿದೆ. ನನ್ನನ್ನು ಈ ಮಟ್ಟಕ್ಕೆ ತರಲು ತಮ್ಮ ಅಪ್ಪನೇ ಕಾರಣವೆಂದು ನನ್ನ ಮಕ್ಕಳಿಗೂ ಬಲವಾದ ನಂಬಿಕೆ. ಇವರುಗಳಿಗೆ ಹೇಗೆ ನಾನು ತಿಳಿಸಿ ಹೇಳಲಿ. ಈತ ಅವರಿವರ ಕೆಲಸವೆಂದು ಪೂಟ್‌ಲಾಯರ್ ಥರ ಅವರನ್ನು ಹಿಂದಿಕ್ಕಿಕೊಂಡು ತಿರುಗುತ್ತಿರುತ್ತಾನೆ.” ಎಂದು ತನ್ನ ಮನದಾಳದ ನೋವನ್ನು ಅಣ್ಣನೊಡನೆ ತೋಡಿಕೊಂಡಳು.
ಇಂತಹ ಬೇಜವಾಬ್ದಾರಿ, ಮೈಗಳ್ಳ ಪತಿಯನ್ನು ಬಿಡಲಿಕ್ಕಾಗದೆ ಏಗುತ್ತಲೇ ಮಕ್ಕಳನ್ನು ಒಂದು ಹಂತಕ್ಕೆ ದಡ ಮುಟ್ಟಿಸುವಲ್ಲಿ ತಕ್ಕಮಟ್ಟಿಗೆ ಸಫಲಳಾದಳೆಂದೇ ಭಾರ್ಗವಿ ಭಾವಿಸಿದ್ದಳು. ಈಗ ತನ್ನ ಮಕ್ಕಳ ಆಶಯದಂತೆ ಅವರ ಅಪ್ಪನ ಜೊತೆಗೂಡಿ ಮಗಳ ಪದವಿಪ್ರದಾನ ಸಮಾರಂಭಕ್ಕೆ ವಿದೇಶಕ್ಕೆ ಹೋಗಬೇಕಾಗಿ ಒತ್ತಾಯ ಬಂದಿದೆ. ಅವರ ಜನ್ಮಕ್ಕೆ ಈತ ಕಾರಣವಷ್ಟೇ ಮತ್ಯಾವುದೇ ಕರ್ತವ್ಯವನ್ನು ನಿಭಾಯಿಸಿಲ್ಲ. ಆದರೂ ಈ ಹಂತ ಮುಟ್ಟಲು ನಾನೇ ನಾನೇ ಕಾರಣ ಎಂದು ಹೇಳುತ್ತ ಎಲ್ಲವನ್ನು ನೀನೇ ಮಾಡಬೇಕೆಂಬ ದೋರಣೆ ಆತನದ್ದು. ಊಹುಂ ನಾನು ನನ್ನ ಓದಬೇಕೆಂಬ ಆಸೆಯನ್ನು ಪೂರೈಸಿಕೊಳ್ಳುವ ಭರದಲ್ಲಿ ಆಯ್ಕೆ ಮಾಡಿಕೊಳ್ಳುವಲ್ಲಿ ಸೋತುಹೋದೆನೋ ಅಥವಾ..
“ಏ ಭಾರ್ಗವಿ ಬಾಗಿಲು ಹಾರು ಹೊಡೆದು ಗರ ಬಡಿದವಳಂತೆ ಕುಳಿತಿದ್ದೀಯಲ್ಲಾ ಏನಾಯಿತು? ನೆನ್ನೆ ನೋಡಿದರೆ ಮನೆಯ ಮುಂದೆ ಇದೇ ರೀತಿ ಮೈಮರೆತು ಕುಳಿತಿದ್ದೆ. ಈವತ್ತು ಒಳಗೆ ಕುಳಿತಿರುವ ಭಂಗಿಯೂ ಅದೇ. ಎಷ್ಟೇ ಆಲೋಚಿಸಿದರೂ ಬದಲಾವಣೆ ಏನಾದರೂ ಸಾಧ್ಯವೋ ಅಥವಾ ಅದನ್ನು ಮಾಡಲಾಗುತ್ತದೋ?” ಎಂದು ಹೇಳುತ್ತ ಭಾರ್ಗವಿಯ ಎದುರುಗಡೆಯಿದ್ದ ಕುರ್ಚಿಯ ಮೇಲೆ ಕುಳಿತಳು ಸುಮನಾ.
ತನ್ನಾಲೋಚನೆಗೆ ಬ್ರೇಕ್ ಹಾಕಿದವಳ ಕಡೆ ನೋಡಿ ಭಾರ್ಗವಿ “ಸರಿಪಡಿಸಲಾಗದ ಹಂತ ಮುಟ್ಟಿದ್ದೇನೆ ನಿಜ, ಆದರೆ ಪಕ್ಕಕ್ಕೆ ಸರಿಸಿ ಹೋಗೋಣವೆಂದರೆ ಪದೇ ಪದೇ ಹಿಂದಕ್ಕೆಳೆಯುತ್ತವಲ್ಲ ಒದಗಿ ಬರುವ ಪ್ರಸಂಗಗಳು.” ಎಂದಳು.
“ಅದೇನಮ್ಮಾ ಅಂಥ ವಿಷಯ?” ಪ್ರಶ್ನಿಸಿದಳು ಸುಮನಾ.
ಬೆಳಗಿನಿಂದ ತನ್ನ ಮಕ್ಕಳೊಡನೆ ದೂರವಾಣಿಯಲ್ಲಿ ನಡೆಸಿದ ಮಾತುಕತೆಗಳನ್ನು ಚುಟುಕಾಗಿ ತಿಳಿಸಿದ ಭಾರ್ಗವಿ “ ಈ ಮನುಷ್ಯನೊಡನೆ ನಾನು ವಿದೇಶಕ್ಕೆ ಹೋಗಬೇಕಂತೆ. ಮಗಳ ಕೋರಿಕೆ.”
“ಹ್ಹ ಹ್ಹಾ.. ಮಕ್ಕಳು ಹೇಳಿರುವುದರಲ್ಲಿ ತಪ್ಪೇನಿದೆ ಭಾರ್ಗವಿ. ಅವನನ್ನೇನಾದರೂ ನೀನು ಬಿಟ್ಟಿದ್ದೀಯಾ? ಇಲ್ಲವಲ್ಲ, ಕದನ, ವ್ಯಸನ ಏನಿದ್ದರೂ ಮನೆಯೊಳಗೇ ಇಟ್ಟುಕೊಂಡು ನಿಭಾಯಿಸುತ್ತೀಯೆ. ಕೇವಲ ಕೆಲವರು ನನ್ನಂಥವರು ಮೊದಲಿನಿಂದ ಒಡನಾಟವಿದ್ದವರನ್ನು ಬಿಟ್ಟರೆ ಬೇರೆಯವರಿಗೆ ಏನೂ ಗೊತ್ತಾಗದಂತೆ ಪಾಲಿಸಿಕೊಂಡು ಬಂದಿದ್ದೀಯೆ. ಬೇರೆಯವರು ಊಹೆ ಮಾಡಿರಬಹುದು, ಹಿಂದುಗಡೆ ಮಾತನಾಡಿಕೊಳ್ಳಬಹುದು ಅಷ್ಟೇ. ಈಗ ಏಕೆ ಇಲ್ಲದ ಯೋಚನೆ. ಈಗ ಧಿಕ್ಕರಿಸಿ ಹೊರಟರೆ ಇಲ್ಲಿಯವರೆಗೆ ನೀನು ಹೊರಗಡೆ ಗಳಿಸಿಕೊಂಡಿರುವ ಗೌರವಾದರಗಳು ಮಣ್ಣುಪಾಲಾಗಿ ಆಡಿಕೊಳ್ಳುವವರ ಬಾಯಿಗೆ ಆಹಾರವಾಗುತ್ತೀಯೆ. ಹೇಗಿದ್ದರೂ ನೀನು ನನ್ನಂತೆ ನಿವೃತ್ತಿ ಅಂಚಿನಲ್ಲಿ ಇದ್ದೀಯೆ. ಇನ್ನು ಕೆಲವೇ ತಿಂಗಳುಗಳ ಎಣಿಕೆಯಲ್ಲಿದ್ದೀ. ಒಂದಷ್ಟು ದಿನ ರಜೆ ಜಡಿದು ಮಗಳ ಬಳಿಗೆ ಹೋಗಿಬಾ. ಅಲ್ಲಿ ಸುತ್ತಮುತ್ತ ನೋಡಿಕೊಂಡು ಬನ್ನಿ.ನಾನು ಹೇಳಿದ್ದು ತಲೆಗೆ ಹೋಯಿತೇ ಏನು? ಹೊಟ್ಟೆಗೆ ಏನಾದರೂ ತಿಂದೆಯಾ? ಇಲ್ಲಾ ಸುಮ್ಮನೆ ಕುಳಿತಿದ್ದೆಯಾ?” ಎಂದಳು ಸುಮನಾ.
ಸುಮನಾಳ ಮಾತನ್ನು ಅರ್ಧದಲ್ಲೇ ತಡೆಯುತ್ತ “ನೀವುಗಳು ಕೇಳಬೇಕಲ್ಲಮ್ಮಾ, ಮೇಲಾಗಿ ಆ ಡಾಕ್ಟರ್ ಮಹಾರಾಯಿತಿ ಬೇರೆ. ಆ ಮನೆಗೆಲಸದ ಗಿರಿಜಾ ಕೂಡ ಉಪದೇಶ ಕೊಟ್ಟಿದ್ದಾಳೆ. ಅದೆಲ್ಲ ಕೇಳಿ ಸುಮ್ಮನಿದ್ದು ಏನಾದರೂ ಆದರೆ ಮಕ್ಕಳ ಪಾಡು? ಅದಕ್ಕಾಗಿಯಾದರೂ ತಿನ್ನುವುದಲ್ಲ-ಹೊಟ್ಟೆ ತುಂಬಿಸಿಕೊಂಡಿದ್ದೇನೆ. ಈಗ ನಿನಗೇನು ಬೇಕು? ಅಮ್ಮ ಹೇಗಿದ್ದಾರೆ? ಆಸ್ಪತ್ರೆಯಲ್ಲಿ ಯಾರಿದ್ದಾರೆ? ಇನ್ನೂ ಟೆಸ್ಟ್ಗಳನ್ನೇನಾದರೂ ಮಾಡಿಸಬೇಕಿದೆಯಾ? ಅಥವಾ ಎಲ್ಲವೂ ಆಯಿತೇ?” ಎಂದು ಕೇಳಿದಳು ಭಾರ್ಗವಿ.
“ಅಬ್ಬಾ ! ಒಂದೇ ಸಾರಿ ಇಷ್ಟೊಂದು ಪ್ರಶ್ನೆಗಳು. ಅಮ್ಮಾ ಅವೇನೋ ಟೆಸ್ಟ್ಗಳು ಪ್ರಾರಂಭವಾಗಿವೆ. ವೈದ್ಯೆ ತಂಗಿ ಬಂದಳು. ನನಗೆ ಬಿಡುಗಡೆಯಾಯಿತು. ಇನ್ನು ಅವಳ ಫೋನ್ ಬರುವವರೆಗೆ ನಿನ್ನ ಮನೆಯಲ್ಲಿ ಠಿಕಾಣಿ. ನಿಂದೇನಾದರೂ ಕೆಲಸವಿದ್ದರೆ ಹೇಳು ನಾನು ಬ್ಯಾಕ್ ಟು ದಿ ಪೆವಿಲಿಯನ್” ಎಂದಳು ಸುಮನಾ.
“ನನಗೇನೂ ಅಂಥಾ ತಲೆಹೋಗುವಂತಹ ಕೆಲಸಗಳಿಲ್ಲ. ಆರಾಮವಾಗಿರು.” ಅಷ್ಟರಲ್ಲಿ ಬಾಡಿಗೆದಾರರ ಕರೆ ಭಾರ್ಗವಿಯನ್ನು ಎಚ್ಚರಿಸಿತು. ಬಾಗಿಲ್ಲಿ ಪದ್ಮಮ್ಮನವರು ನಿಂತಿದ್ದರು. ಅವರನ್ನು “ಬನ್ನೀಮ್ಮಾ” ಎಂದು ಆಹ್ವಾನಿಸಿದಳು ಭಾರ್ಗವಿ. “ಬೇಡ ನೀವೇ ಇಲ್ಲಿ ಬನ್ನಿ ಒಂದೇ ನಿಮಿಷ ವಿಷಯ ತಿಳಿಸಬೇಕಿತ್ತು. ಅದಕ್ಕೆ ಬಂದೆ” ಎಂದರು ಕಮಲಮ್ಮ.
“ಒಳಗೇ ಬನ್ನಿ, ಬಂದಿರುವವಳು ಅಪರಿಚಿತರೇನಲ್ಲ, ನಿಮಗೂ ಗೊತ್ತು ನನ್ನ ಗೆಳತಿ ಸುಮನಾ” ಎಂದಕೂಡಲೇ “ಅವರೇನಾ ಬಂದೆ” ಎಂದು ಚಪ್ಪಲಿ ಹೊರಗೆ ಬಿಟ್ಟು ಒಳಬಂದರು.
ಪರಿಚಯವಿದ್ದುದರಿಂದ ಇಬ್ಬರ ನಡುವೆ ಉಭಯ ಕುಶಲೋಪರಿ ನಡೆಯಿತು. “ನಮ್ಮಲ್ಲಿ ಕೆಲಸ ಮಾಡುವ ಗಿರಿಜಾಳೇ ಅಲ್ಲವೇ ನಿಮ್ಮ ಮನೆಯಲ್ಲೂ ಮಾಡೋದು” ಎಂದು ಕೇಳಿದರು ಪದ್ಮಮ್ಮ.
“ಅಯ್ಯೋ ರೆಗ್ಯುಲರ್ ಆಗಿ ಇಲ್ಲಮ್ಮಾ, ಹಬ್ಬಹರಿದಿನಗಳಲ್ಲಿ ಮಾತ್ರ ಬರುತ್ತಾಳೆ. ನಮ್ಮ ತಾಯಿ ಯಾರನ್ನೂ ನಂಬುವುದಿಲ್ಲ. ಅದು ಸರಿ ಈಗೇಕೆ ಆಕೆಯ ಸುದ್ಧಿ” ಎಂದಳು ಸುಮನಾ.
“ಹೂ ಇದು ನಾನು ನನ್ನ ಸೊಸೆಯ ಜೊತೆಯಲ್ಲಿ ಹೊರಗೆ ಹೋಗಿದ್ದೆ ಮನೆಗೆ ಹಿಂತಿರುಗಿ ಬರುತಿರುವಾಗ ದಾರಿ ಮಧ್ಯದಲ್ಲಿಯೇ ಗಿರಿಜಾಳ ಮನೆಯಿದೆ. ಅಲ್ಲಿ ಏನೋ ಕೂಗಾಟ ಕಿರುಚಾಟ ಗದ್ದಲ ನಡೆಯುತ್ತಿತ್ತು. ಜನಗಳ ಸ್ವಭಾವ ಗೊತ್ತಲ್ಲ, ಸುತ್ತ ಕುತೂಹಲದಿಂದ ಕೂಡಿದ್ದರು. ನಾವುಗಳೂ ಆ ಗುಂಪಿನಲ್ಲಿ ನುಸುಳಿ ನೋಡಿದೆವು. ಅವಳ ಎರಡನೆಯ ಗಂಡನಿಂದ ಬೈಗಳು, ಇವಳು ಬೇರೊಬ್ಬನೊಡನೆ ತಿರುಗಾಡುತ್ತಿದ್ದಾಳೆಂಬ ದೋಷಾರೋಪಣೆ ಮಾಡುತ್ತಿದ್ದ. ಈಕೆ ಅವನ ಅನುಮಾನ ಸುಳ್ಳೆಂದು ವಾದ ಮಾಡುತ್ತಿದ್ದಳು. ಕೆಲವರು ಇವಳ ಕಡೆ ಇನ್ನು ಕೆಲವರು ಅವನ ಕಡೆ. ಅವನು ಮನೆಯ ಸಾಮಾನುಗಳನ್ನು ಎತ್ತಿ ಎತ್ತಿ ಹೊರಕ್ಕೆ ಬಿಸಾಡುತ್ತಿದ್ದ. ಮಕ್ಕಳು ಕಾಣಿಸಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡು ನನ್ನ ಸೊಸೆ ನನ್ನನ್ನು ಕರೆದುಕೊಂಡು ಮನೆಗೆ ಬಂದುಬಿಟ್ಟಳು. ನಿಮಗೆ ಅವಳ ಮೊಬೈಲ್ ನಂಬರ್ ಗೊತ್ತಲ್ಲವಾ, ಏನು ಎತ್ತ ಅಂತ ಕೇಳೀಂತ ಹೇಳಲು ಬಂದೆ. ಅವಳು ಪಾಪದ ಹೆಣ್ಣು, ಮೊದಲನೆಯ ಗಂಡ ಅಪಾಟಿ ಕುಡುಕ. ಈಗ ಈ ಪುಣ್ಯಾತ್ಮ ಏನು ಮಾಡ್ತಾನೋ. ನಾಲ್ಕುಮನೆ ಕೆಲಸ ಮಾಡ್ಕೊಂಡು ಬದುಕು ನಡೆಸುತ್ತಿದ್ದಳು. ಎರಡು ಮಕ್ಕಳು ಬೇರೆ.” ಎಂದು ಅನುಕಂಪ ತೋರಿ ಪೇಚಾಡಿಕೊಂಡರು.
ಅವರ ಮಾತುಗಳನ್ನು ಕೇಳಿದ ಭಾರ್ಗವಿ ಸುಮನಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಂತಹ ಗುದ್ದಾಟಗಳನ್ನು ಬಹಳ ಸಲ ನೋಡಿ, ಕೇಳಿ ಅಭ್ಯಾಸವಾಗಿತ್ತು. ಇದರಲ್ಲಿ ಹೊಸದೇನೂ ಕಾಣಿಸಲಿಲ್ಲ. “ಅಮ್ಮಾ ನೀವೇನೂ ಆತಂಕಪಟ್ಟುಕೊಳ್ಳಬೇಡಿ, ಇವೆಲ್ಲ ಅವರುಗಳಲ್ಲಿ ಸರ್ವೇಸಾಮಾನ್ಯ. ಈಗ ಕಿತ್ತಾಟ ಸ್ವಲ್ಪ ಹೊತ್ತಿನಲ್ಲಿ ಸರಿ ಹೋಗುತ್ತಾರೆ ಬಿಡಿ. ಇದರಲ್ಲಿ ಮಧ್ಯೆ ನಾವು ಹೋಗುವುದು ತರವಲ್ಲ. ನೀವು ತೋರಿದ ಕಾಳಜಿಗೆ ಥ್ಯಾಂಕ್ಸ್” ಎಂದರು. ಆ ಹಿರಿಯರು ಹೇಳಿದ ವಿಚಾರವನ್ನು ಇವರಿಬ್ಬರೂ ಹಗುರವಾಗಿ ತೆಗೆದುಕೊಂಡರೆಂದು ಗೊತ್ತಾದ ಮೇಲೆ “ಏಕೋ ನಿಮಗೆ ತಿಳಿಸಬೇಕೆನ್ನಿಸಿತು ಬಂದೆ. ನಾನಿನ್ನು ಬರುತ್ತೇನೆ” ಎಂದು ತಮ್ಮ ಮನೆಗೆ ಹೋದರು.
ಅವರು ಹೋದಮೇಲೆ ಬಾಗಿಲು ಹಾಕಿ ಬಂದ ಭಾರ್ಗವಿ “ಸುಮನಾ ಈ ಗಿರಿಜಾಳಿಗೆ ಎಷ್ಟು ಸಾರಿ ಹೇಳಿದರೂ ಬುದ್ಧಿ ಬರಲ್ಲಾಂತ ಕಾಣುತ್ತೆ. ಇವರುಗಳಿಗೇನು ಗಂಡನನ್ನು ಬದಲಾಯಿಸುವುದೇ ಕೆಲಸವಾಂತ. ಇಂಥಹವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಇನ್ನು ಹೇಗೆ ಆಗುತ್ತಾರೋ ದೇವರೇ ಬಲ್ಲ.” ಎಂದಳು.
“ಭಾರ್ಗವಿ ಪದ್ಮಮ್ಮನವರು ಹೇಳಿದ್ದರಲ್ಲಿ ಅರ್ಧ ಸತ್ಯ ಅರ್ಧ ಸುಳ್ಳಿದೆ. ಗಿರಿಜೆಯ ಗಂಡ ಇನ್ನೊಂದನ್ನು ಜಂಟಿ ಮಾಡಿಕೊಂಡು ತಿರುಗುತ್ತಿದ್ದಾನೆ. ಅದನ್ನು ಮುಚ್ಚಿಕೊಳ್ಳಲು ಇವಳಿಗೆ ಬಾಯಿಗೆ ಬಂದಂತೆ ಬೈಗುಳ, ಪೌರುಷ ತೋರಿಸುತ್ತಾನೆ. ಇವಳು ಗಟ್ಟಿಗಿತ್ತಿ ಎಷ್ಟು ಊರಿನ ನೀರು ಕುಡಿದು ಬಂದವಳೋ ನಿಭಾಯಿಸುತ್ತಾಳೆ ಬಿಡು. ನಾಳೆ ನಿನಗೊಂದಿಷ್ಟು ಮನರಂಜನೆಯ ಹೊಸಕಥೆ ಅವಳಿಂದ ಸಿಗುತ್ತದೆ” ಎಂದು ನಗೆಚಾಟಿಕೆ ಮಾಡಿದಳು ಸುಮನಾ.
“ಹೂಂ ಇರಲಿಬಿಡು ಸುಮನಾ ನಮ್ಮದೇ ಹಾಸಿಹೊದಿಯುವಷ್ಟು ಇದೆ” ಎಂದು ವಿಷಯಾಂತರ ಮಾಡಿದಳು ಬಾರ್ಗವಿ. ಬೇರೆ ವಿಷಯಗಳ ಮಾತುಕತೆಯಾಯಿತು. ಗೆಳತಿಯ ಬೇಡಿಕೆಯಂತೆ ರಾಗಿರೊಟ್ಟಿ ಉಚ್ಚೆಳ್ಳು ಚಟ್ಣಿ, ಸ್ವಲ್ಪ ಅನ್ನ ಮಾಡಿ ಅವಳ ಜೊತೆಗೂಡಿ ಊಟ ಮುಗಿಸಿದಳು. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಸುಮನಾಳ ಜೊತೆ ನರ್ಸಿಂಗ್‌ಹೋಮಿಗೆ ಹೋಗಿ ಅವರ ತಾಯಿಯನ್ನು ನೋಡಿಕೊಂಡು ಹಿಂತಿರುಗಿ ಬಂದಾಗ ರಾತ್ರಿ ಎಂಟುಗಂಟೆಯ ಮೇಲಾಗಿತ್ತು.. ಮತ್ತೇನನ್ನೂ ಹೊಸದಾಗಿ ಮಾಡಲು ಹೋಗದೆ ಮಿಕ್ಕಿದ್ದ ರೊಟ್ಟಿಯನ್ನೇ ತಿಂದು ಹಾಲು ಹಣ್ಣಿನೊಂದಿಗೆ ಊಟ ಮುಗಿಸಿದ ಭಾರ್ಗವಿ ಸ್ವಲ್ಪ ಹೊತ್ತು ಅಡ್ಡಾಡಿ ಹಾಸಿಗೆಗೆ ಮೈಚೆಲ್ಲಿದಳು.
ಗೆಳತಿ ಸುಮನಾ ಹೇಳಿದ ಮಾತುಗಳನ್ನೇ ಮೆಲುಕು ಹಾಕುವಂತಾಯಿತು. ಹೌದು ಎಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ಧೈರ್ಯಗೆಡದೆ ಹೊರಗಿನವರ ವ್ಯಂಗ್ಯ ನುಡಿಗಳಿಗೆ ಸೊಪ್ಪು ಹಾಕದೆ ಬಹಳ ಸಂಯಮದಿಂದ ನಡೆದುಕೊಂಡಿದ್ದೇನೆ. ಕಟ್ಟುನಿಟ್ಟಿನ ಅಧಿಕಾರಿ ಎಂದೇ ಹೆಸರು ಮಾಡಿರುವಾಗ ಈಗ..ಬೇಡ ಅವರ ಜೊತೆಯಲ್ಲೇ ಹೋಗಿ ಬಂದುಬಿಡೋಣ. ನಾಳೆ ಈ ಸಂಗತಿಯನ್ನು ಸಿದ್ಧಾರ್ಥ ಹೇಳಿದರೂ ಸರಿ ಇಲ್ಲದಿದ್ದರೆ ನಾನೇ ವಿಷಯ ತೆಗೆದು ಹೋಗಿಬರಲು ತಯಾರಿಕೆ ಏನೇನು ಮಾಡಬೇಕೆಂದು ಕೇಳಬೇಕೆಂದುಕೊಂಡಳು ಭಾರ್ಗವಿ. ಹಾಗೇ ಬೆಂಗಳೂರಿನಲ್ಲಿರುವ ಮಾನಿನಿಯ ಸಲಹೆ ಕೇಳಬೇಕು. ಗ್ರಾಜುಯೇಷನ್ ಫಕ್ಷನ್ ಮುಗಿದ ಕೂಡಲೇ ಹಿಂದಕ್ಕೆ ಬರುವ ಹಾಗೆ ವ್ಯವಸ್ಥೆ ಮಾಡಿಕೊಂಡೇ ಹೋಗಬೇಕು. ಎಲ್ಲವೂ ಸರಿಯೇ ಈ ಮಕ್ಕಳು ತಮ್ಮ ಓದನ್ನು ಎಲ್ಲಿಗೆ ನಿಲ್ಲಿಸುತ್ತಾರೆಂಬುದೇ ಅರ್ಥವಾಗುತ್ತಿಲ್ಲವಲ್ಲ. ನಾನು ನಿವೃತ್ತಿಯ ಮೆಟ್ಟಿಲು ಹತ್ತುತ್ತಿದ್ದೇನೆ. ಇನ್ಯಾವಾಗ ಇವರುಗಳಿಗೆ ಬದುಕು ಕಟ್ಟಿ ಕೊಡುವುದು. ಕೆಲಸಕ್ಕೆ ಸೇರುತ್ತಾರೆ ಗಳಿಸುತ್ತಾರೆ. ಮತ್ತೆ ತಮ್ಮ ಸ್ವಸಾಮರ್ಥ್ಯದಿಂದ ಹೊರದೇಶದ ವಿಶ್ವವಿದ್ಯಾನಿಲಯಗಳಲ್ಲಿ ಸೀಟು ದೊರಕಿಸಿಕೊಂಡು ಓದನ್ನು ಮುಂದುವರಿಸುತ್ತಾರೆ. ದೊಡ್ಡ ಮಗಳೇನೊ ಒಂದು ಘಟ್ಟ ಮುಟ್ಟಿದಂತೆ ಕಾಣುತ್ತದೆ. ಅವಳೆದುರಿಗೆ ಮದುವೆಯ ಪ್ರಸ್ತಾಪ ಮಾಡಿ ವರನನ್ನು ಹುಡುಕಬೇಕು. ಒಂದುವೇಳೆ ಅವಳೇ ಯಾರನ್ನಾದರೂ ಇಷ್ಟಪಟ್ಟಿದ್ದರೆ ವಿಚಾರಿಸಿ ವಿವಾಹ ಮಾಡಿಬಿಡಬೇಕು. ಈ ಸಮಾರಂಭಕ್ಕೆ ಹೋದಾಗ ಚಿಕ್ಕ ಮಗಳ ಕಿವಿಗೂ ಈ ವಿಷಯವನ್ನು ಹಾಕಬೇಕು. ಹೀಗೇ ಆಲೋಚಿಸುತ್ತಿದ್ದ ಭಾರ್ಗವಿಗೆ ಹಿಂದಿನ ದಿನದ ನಿದ್ರಾಹೀನತೆ ಮುಂದಿನ ಆಲೋಚನೆಗೆ ಅವಕಾಶ ನೀಡದೆ ನಿದ್ರೆಗೆ ಸೆಳೆದುಕೊಂಡು ಹೋಯಿತು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45699

-ಬಿ.ಆರ್.ನಾಗರತ್ನ, ಮೈಸೂರು
