ಲಹರಿ

 ತಲೆಮಾರು : ಭಾಗ -2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಕೆಲಸ ಗಿಟ್ಟಿಸಿದ ಸುಪ್ರಿಯಾ ಬೆಂಗಳೂರಿಗೆ ಬಂದು ಪೇಯಿಂಗ್ ಗೆಸ್ಟ್ ಆಗಿ ಒಂದು ಮನೆಯಲ್ಲಿ ವಾಸ ಮಾಡಲಿಕ್ಕೆ ಶುರು ಮಾಡಿದಳು. ತನ್ನ ಆಫೀಸಿನಲ್ಲಿ ಸಹೋದ್ಯೋಗಿಗಳೊಡನೆ ಸ್ನೇಹ ಬೆಳೆಸಿ, ಕೆಲಸದ ಒತ್ತಡದಿಂದ ಹೊರ ಬರಲು ವಾರಾಂತ್ಯದಲ್ಲಿ ಪ್ರವಾಸ ಹೋಗುವುದು, ಸಿನಿಮಾಕ್ಕೆ ಹೋಗುವುದು, ಹೀಗೆ ಅವಳು ಸಾಮಾಜಿಕವಾಗಿ ಬೆರೆಯ ತೊಡಗಿದಳು.  ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಸಂಕೋಚವಿಲ್ಲದ ಪರಿಸರದಲ್ಲಿ ವೃತ್ತಿ ಮಾಡುವ ಅವಳಿಗೆ ಸ್ನೇಹಿತರ ಜೊತೆ ಪ್ರೀತಿ, ಮದುವೆ, ಸಂಬಂಧಗಳ ಬಗ್ಗೆ ಬಗೆ ಬಗೆಯ ಅಭಿಪ್ರಾಯಗಳು ಚರ್ಚಿತವಾದವು.ಅಲ್ಲಿಯೇ ಅವಳಿಗೆ ಪ್ರೀತಿ ಮತ್ತು ಮದುವೆಯ ಬಗ್ಗೆ ಒಂದು ಹೊಸ ರೀತಿಯ ಆಲೋಚನೆ ಮೂಡತೊಡಗಿತು. ಮದುವೆಯಾಗುವುದಕ್ಕೂ ಮುಂಚೆ ಒಬ್ಬರನ್ನು ಪ್ರೀತಿಸುವುದರಲ್ಲಿ ತಪ್ಪೇನಿದೆ? ಎಂಬ ಪ್ರಶ್ನೆ ಅವಳ ಮನಸ್ಸಿನಲ್ಲಿ ಸಹಜವಾಗಿ ಮೂಡಿತು. ಹುಡುಗ–ಹುಡುಗಿ ಎಂಬ ಭೇದವಿಲ್ಲದೆ ಸ್ನೇಹ ಬೆಳೆಸಿಕೊಳ್ಳುವುದು ಸಹಜ; ಒಬ್ಬ ಹುಡುಗ ತನ್ನ ಸ್ನೇಹಿತನಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಉದಾತ್ತ ಮನೋಭಾವ ಅವಳಲ್ಲಿ ಬೆಳೆದಿತ್ತು. ಹಾಗಾಗಿ ಅವಳು ಹುಡುಗರೊಂದಿಗೂ ಮುಕ್ತವಾಗಿ ಸ್ನೇಹ ಬೆಳೆಸಿಕೊಂಡಳು.

ಆದರೆ ಮದುವೆಯ ವಿಚಾರ ಬಂದಾಗ ಮಾತ್ರ ಅವಳ ಮನೋಭಾವ ಸಂಪೂರ್ಣವಾಗಿ ಭಿನ್ನವಾಗಿತ್ತು. ಮದುವೆ ಎಂಬ ಕಲ್ಪನೆ ಅವಳನ್ನು ಅಷ್ಟಾಗಿ ಆಕರ್ಷಿಸುತ್ತಿರಲಿಲ್ಲ. ಅವಳ ದೃಷ್ಟಿಯಲ್ಲಿ ಮದುವೆ ಎಂದರೆ ತನ್ನ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಒಂದು ಬಂಧನದಂತೆ ಕಾಣತೊಡಗಿತ್ತು.

ತನ್ನ ವಿದ್ಯಾಭ್ಯಾಸ, ವೃತ್ತಿ, ಪ್ರತಿಭೆ, ಸ್ನೇಹ, ವೈಯಕ್ತಿಕ ಸ್ವಾತಂತ್ರ್ಯ—ಇವೆಲ್ಲವನ್ನೂ ತನ್ನದೇ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಎಂಬುದು ಅವಳ ಆಸೆಯಾಗಿತ್ತು. ಮದುವೆಯಾದರೆ ಈ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗಬಹುದು, ತನ್ನ ಬದುಕಿನ ಮೇಲೆ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಕಡಿಮೆಯಾಗಬಹುದು ಎಂಬ ಭಾವನೆ ಅವಳಲ್ಲಿ ಗಟ್ಟಿಯಾಗತೊಡಗಿತು.

ಹಿಂದೂ ಸಂಸ್ಕೃತಿಯ ಆಚರಣೆಯಲ್ಲಿ ಇರುವ ಕನ್ಯಾದಾನ ಹಾಗೂ ಗಂಡನ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಹಾಗೂ ಇನ್ನಿತರ ಸಂಪ್ರದಾಯಗಳಲ್ಲೂ  ಅವಳಿಗೆ ಸಹಮತಿ ಇರಲಿಲ್ಲ. ಆ ಪದ್ಧತಿಯ ಹಿನ್ನೆಲೆ ಅವಳಿಗೆ ಅರ್ಥಹೀನ ಅನಿಸಿತ್ತು. ಹೀಗೆ ಆಚರಣೆ, ಸಂಪ್ರದಾಯಗಳನ್ನು  ಅವಳ ಸೂಕ್ಷ್ಮ ಮನಸು ಒಪ್ಪಿಕೊಳ್ಳುವುದು ಸಾಧ್ಯಕ್ಕೆ ದೂರವಾಗಿತ್ತು.

ಶಾರದಾಳ ಮಗ ಸುಹಾಸ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾವಂತನಾಗಿದ್ದ ಅವನಿಗೆ ತನ್ನದೇ ಆದ ಆಲೋಚನೆಗಳು ಮತ್ತು ಬದುಕಿನ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವಿತ್ತು. ಅವನಿಗೂ ಸ್ನೇಹಿತರ ಬಳಗವಿತ್ತು. ಅದರಲ್ಲೂ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದರಲ್ಲಿ ಅವನಿಗೆ ಯಾವುದೇ ತಪ್ಪು ಕಾಣುತ್ತಿರಲಿಲ್ಲ. ಅವರನ್ನು ಅವನು ಯಾವುದೇ ಕೆಟ್ಟ ದೃಷ್ಟಿಯಿಂದ ನೋಡುತ್ತಿರಲಿಲ್ಲ; ಹೆಣ್ಣು–ಗಂಡು ಎಂಬ ಭೇದವಿಲ್ಲದೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸ್ನೇಹ ಸಹಜವಾದದ್ದು ಎಂಬುದು ಅವನ ನಂಬಿಕೆಯಾಗಿತ್ತು.

ಆದರೆ ಮದುವೆಯ ವಿಚಾರ ಬಂದಾಗ ಮಾತ್ರ ಅವನ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳಿದ್ದವು. ಮದುವೆ ಅವನ ಜೀವನದ ಆದ್ಯತೆಯಾಗಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ, “ನನಗೆ ನಿಜವಾಗಿಯೂ ಹೊಂದಿಕೊಳ್ಳುವ ಹುಡುಗಿ ಸಿಗುತ್ತಾಳೆಯೇ?” ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ತನ್ನ ಅಭಿರುಚಿಗಳು, ಆಲೋಚನೆಗಳು ಮತ್ತು ಜೀವನದ ದೃಷ್ಟಿಕೋನಕ್ಕೆ ಹೊಂದಿಕೊಳ್ಳದ ಹುಡುಗಿಯನ್ನು ಮದುವೆಯಾದರೆ, ಮುಂದೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೊಡ್ಡ ಸಮಸ್ಯೆಗಳಾಗಿ ಬೆಳೆಯಬಹುದು. ಅವು ಕೊನೆಗೆ ದಾಂಪತ್ಯದಲ್ಲಿ ಬಿರುಕು ಮೂಡಿಸಿ, ವಿಚ್ಛೇದನದವರೆಗೂ ಹೋಗಬಹುದೆಂಬ ಭಯ ಅವನಲ್ಲಿತ್ತು. ಅವನಿಗೆ ಮದುವೆ ಎಂಬ ಬಂಧನದ ಮೇಲೆಯೇ ಒಂದು ರೀತಿಯ ಆತ್ಮವಿಶ್ವಾಸದ ಕೊರತೆ ಇತ್ತು. “ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಮಾತ್ರ ಸಾಕೇ? ಜೀವನಪೂರ್ತಿ ಒಟ್ಟಿಗೆ ಬದುಕಲು ಬೇಕಾದಷ್ಟು ಹೊಂದಾಣಿಕೆ ಇರಬೇಕಲ್ಲವೇ?” ಎಂಬ ಪ್ರಶ್ನೆ ಅವನ ಮನಸ್ಸಿನಲ್ಲಿ ಪದೇಪದೇ ಮೂಡುತ್ತಿತ್ತು.  ತನ್ನ ತಂದೆ–ತಾಯಿಗೆ ತನ್ನ ಈ ನಿರ್ಧಾರದಿಂದ ಬೇಸರವಾಗಬಹುದು ಎಂಬುದು ಅವನಿಗೆ ಗೊತ್ತಿತ್ತು. ಆದರೂ, ಕೇವಲ ತಂದೆ–ತಾಯಿಯ ಸಂತೋಷಕ್ಕಾಗಿ ಮದುವೆಯಾಗಿ, ಮುಂದೆ ದಾಂಪತ್ಯ ಜೀವನದಲ್ಲಿ ತಾನು ಮತ್ತು ತನ್ನ ಸಂಗಾತಿ ಇಬ್ಬರೂ ನರಳುವುದಕ್ಕಿಂತ, ಮದುವೆಯಾಗದೇ ಇರುವುದೇ ಉತ್ತಮ ಎಂಬ ಭಾವನೆ ಅವನ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತ್ತು. ಅವನ ಸುತ್ತಮುತ್ತಲಿನ ಸ್ನೇಹಿತರ ದಾಂಪತ್ಯ ಜೀವನವೂ ಅವನ ಈ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಹೊರಗಿನಿಂದ ನೋಡಿದಾಗ ಸಂಸಾರ ಚೆನ್ನಾಗಿಯೇ ನಡೆಯುತ್ತಿರುವಂತೆ ಕಾಣಿಸಿದರೂ, ಒಳಗೆ ಎಷ್ಟೋ ಭಿನ್ನಾಭಿಪ್ರಾಯಗಳು, ಮನಸ್ತಾಪಗಳು, ಅಸಮಾಧಾನಗಳು ಇದ್ದವು. ಪರಸ್ಪರ ಸಂತೋಷವಾಗಿರದಿದ್ದರೂ, ಕೇವಲ ಮದುವೆ ಎಂಬ ಬಂಧನದ ಕಾರಣಕ್ಕೆ ಒಟ್ಟಿಗೆ ಬದುಕುತ್ತಾ ಒದ್ದಾಡುತ್ತಿದ್ದ ಹಲವರನ್ನು ಅವನು ನೋಡಿದ್ದ.

ಅದರಿಂದ ಅವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಗಟ್ಟಿಯಾಗಿ ಬೇರೂರಿತ್ತು: “ಒಟ್ಟಿಗೆ ಬದುಕುವುದರಿಂದ ಇಬ್ಬರಿಗೂ ನೆಮ್ಮದಿ ಇಲ್ಲದಿದ್ದರೆ, ಕೇವಲ ಮದುವೆಯಾಗಿದೆ ಎಂಬ ಕಾರಣಕ್ಕಾಗಿ ಆ ಬಂಧನದಲ್ಲಿ ಸಿಲುಕಿಕೊಂಡೇ ಇರಬೇಕೇ?”

ಈ ಆಲೋಚನೆಗಳೇ ಅವನನ್ನು ನಿಧಾನವಾಗಿ ಆಧ್ಯಾತ್ಮಿಕತೆಯ ಕಡೆಗೆ ಸೆಳೆದವು. ಸೇವಾ ಆಶ್ರಮಗಳು, ಸತ್ಸಂಗಗಳು ಮುಂತಾದವುಗಳ ಕಡೆಗೆ ಅವನ ಆಸಕ್ತಿ ಹೆಚ್ಚಾಯಿತು. ತನ್ನ ನೆಚ್ಚಿನ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದು ಅನಿಸುತ್ತಿತ್ತು. ಮದುವೆ ಮತ್ತು ಕುಟುಂಬ ಜೀವನಕ್ಕಿಂತ ಭಿನ್ನವಾದ ಒಂದು ಅರ್ಥಪೂರ್ಣ ಜೀವನವನ್ನು ಆಯ್ಕೆ ಮಾಡಿಕೊಂಡು, ತನ್ನ ಮುಂದಿನ ಬದುಕನ್ನು ಆ ದಿಕ್ಕಿನಲ್ಲಿ ನಡೆಸಬೇಕು ಎಂಬ ಆಲೋಚನೆ ಅವನ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತು.  ಸುಹಾಸನಿಗೆ ಮದುವೆ ಎನ್ನುವುದು ಪ್ರೀತಿ ಅಥವಾ ಸಂತೋಷದ ಭರವಸೆಯಾಗಿ ಕಾಣಲಿಲ್ಲ; ಸರಿಯಾದ ಹೊಂದಾಣಿಕೆ ಇಲ್ಲದಿದ್ದರೆ ಅದು ಇಬ್ಬರನ್ನೂ ಬಂಧಿಸುವ ಒಂದು ವ್ಯವಸ್ಥೆಯಾಗಬಹುದು ಎಂಬ ಭಯದ ದೃಷ್ಟಿಯಿಂದ ಅದು ಕಾಣತೊಡಗಿತ್ತು.

ಹೀಗೆ ಒಂದೇ ಕುಟುಂಬದಲ್ಲಿ ಬೆಳೆದರೂ, ಮೂರು ತಲೆಮಾರುಗಳಿಗೆ ಮದುವೆಯ ಅರ್ಥವೇ ಮೂರು ರೀತಿಯಾಯಿತು—ಸಾವಿತ್ರಮ್ಮನಿಗೆ ಅದು ಕರ್ತವ್ಯ ಮತ್ತು ವಾಗ್ದಾನ; ಶಾರದಾಳಿಗೆ ಅದು ಸಮಾನತೆ ಮತ್ತು ಹೊಂದಾಣಿಕೆಯ ಸಹಯಾನ; ಸುಪ್ರಿಯಾಳಿಗೆ ಅದು ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದಾದ ಒಂದು ಬಂಧನ. ಸುಹಾಸನಿಗೆ ಮದುವೆ ಅನ್ನೋದು ಎರಡು ಅಪರಿಚಿತ ಬದುಕುಗಳನ್ನು ಒಂದೇ ದಾರಿಯಲ್ಲಿ ಕಟ್ಟಿಹಾಕುವ, ಕೆಲವೊಮ್ಮೆ ಭಯ ಹುಟ್ಟಿಸುವ ವ್ಯವಸ್ಥೆ.  ಸಾವಿತ್ರಮ್ಮ, ಶಾರದಾ ಮತ್ತು ಸುಪ್ರಿಯಾ-ಸುಹಾಸ ಮೂವರನ್ನೂ ಅವರವರ ಕಾಲಘಟ್ಟದಲ್ಲಿ ತಪ್ಪು ಅಥವಾ ಸರಿ ಎಂದು ಅಳೆಯಲಾಗದು. ಅವರ ಆಲೋಚನೆಗಳು ಆಯಾ ಕಾಲಕ್ಕೆ ಊರ್ಜಿತವೇ. ಅವರ ಕಾಲ, ಪರಿಸರ, ಶಿಕ್ಷಣ, ಅನುಭವ ಮತ್ತು ಸಮಾಜದ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತವೆ.

“ಹಾಗಾದರೆ, ತಲೆಮಾರಿನಿಂದ ತಲೆಮಾರಿಗೆ ಮದುವೆ ಎಂಬ ಸಂಸ್ಥೆಯ ಬಗ್ಗೆ ಇರುವ ಈ ನಂಬಿಕೆ ಏಕೆ ಬದಲಾಗುತ್ತಿದೆ?” ಎಂಬ ಪ್ರಶ್ನೆ ನನ್ನನ್ನು ಬಹಳ ದಿನಗಳಿಂದ ಕಾಡುತ್ತಲೇ ಇತ್ತು.

ಸಾವಿತ್ರಮ್ಮನಿಗೆ ಮದುವೆ ಎಂದರೆ ಒಂದು ವಾಗ್ದಾನ. ತಾಯಿಯ ಮನೆಯಿಂದ ಗಂಡನ ಮನೆಗೆ ಬಂದ ಮೇಲೆ, ಆ ಮನೆಯ ಜವಾಬ್ದಾರಿಯನ್ನು ತನ್ನ ಜವಾಬ್ದಾರಿಯೆಂದು ಸ್ವೀಕರಿಸಿ, ಗಂಡ, ಮಕ್ಕಳು, ಅತ್ತೆ–ಮಾವಂದಿರನ್ನು ನೋಡಿಕೊಳ್ಳುವುದೇ ತನ್ನ ಕರ್ತವ್ಯ, ಅದೇ ಮದುವೆಯ ಅರ್ಥ ಎಂದು ಭಾವಿಸಿದ ತಲೆಮಾರು ಅದು.

ಶಾರದಾಳ ತಲೆಮಾರಿಗೆ ಬಂದಾಗ ಮದುವೆಯ ಅರ್ಥ ಸ್ವಲ್ಪ ಬದಲಾಯಿತು. ಮದುವೆ ಎಂದರೆ ಕೇವಲ ಹೆಂಡತಿ ಗಂಡನನ್ನು ಅನುಸರಿಸುವ ಸಂಬಂಧವಲ್ಲ; ಇಬ್ಬರೂ ಪರಸ್ಪರ ಗೌರವದಿಂದ, ಸಮಾನತೆಯಿಂದ ಬದುಕಬೇಕಾದ ಒಂದು ಸಹಯಾನ ಎಂಬ ಆಲೋಚನೆ ಬೆಳೆಯಿತು. ಸಂಸಾರವನ್ನು ಉಳಿಸಿಕೊಂಡೇ ತನ್ನ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಅವಳಿಗಿತ್ತು.

ಸುಪ್ರಿಯಾಳ ತಲೆಮಾರಿಗೆ ಬಂದಾಗ ಪ್ರಶ್ನೆಯೇ ಇನ್ನಷ್ಟು ಬದಲಾಗಿದೆ. “ಮದುವೆ ನನಗೆ ಏನು ಕೊಡುತ್ತದೆ?” ಎನ್ನುವುದಕ್ಕಿಂತ, “ಮದುವೆ ನನ್ನಿಂದ ಏನನ್ನು ತೆಗೆದುಕೊಳ್ಳುತ್ತದೆ?” ಎಂಬ ಪ್ರಶ್ನೆ ಅವಳ ಮನಸ್ಸಿನಲ್ಲಿ ಮೂಡಿದೆ. ತನ್ನ ಸ್ವಾತಂತ್ರ್ಯ, ವೃತ್ತಿ, ವೈಯಕ್ತಿಕ ಬೆಳವಣಿಗೆ ಮತ್ತು ತನ್ನದೇ ಆದ ಬದುಕಿನ ನಿರ್ಧಾರಗಳನ್ನು ಕಳೆದುಕೊಳ್ಳಬೇಕಾಗಬಹುದೆಂಬ ಆತಂಕ ಅವಳಲ್ಲಿ ಮೂಡಿದೆ.

ಹಾಗಾದರೆ ಬದಲಾಗಿರುವುದು ಮದುವೆಯೇ? ಅಥವಾ ಮದುವೆಯನ್ನು ನೋಡುವ ಮನುಷ್ಯನ ದೃಷ್ಟಿಕೋನವೇ? ಬಹುಶಃ ಎರಡನೆಯದೇ ಹೆಚ್ಚು ಸತ್ಯ.

ಒಂದು ಕಾಲದಲ್ಲಿ ಬದುಕಿನ ಬಹುತೇಕ ಅಗತ್ಯಗಳಿಗಾಗಿ ಕುಟುಂಬವೇ ವ್ಯಕ್ತಿಯ ಆಧಾರವಾಗಿತ್ತು. ಆರ್ಥಿಕ ಭದ್ರತೆ, ಸಾಮಾಜಿಕ ಗೌರವ, ಮಕ್ಕಳ ಭವಿಷ್ಯ, ವೃದ್ಧಾಪ್ಯದ ಆಸರೆ—ಇವೆಲ್ಲವೂ ಕುಟುಂಬ ಮತ್ತು ಮದುವೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದ್ದವು. ಆದ್ದರಿಂದ ಮದುವೆ ಒಂದು ಅನಿವಾರ್ಯ ಸಾಮಾಜಿಕ ವ್ಯವಸ್ಥೆಯಾಗಿತ್ತು. ಆದರೆ ಕಾಲ ಬದಲಾಯಿತು. ಶಿಕ್ಷಣ ಹೆಚ್ಚಾಯಿತು. ಮಹಿಳೆಯರು ವಿದ್ಯಾವಂತರಾದರು. ಉದ್ಯೋಗದ ಅವಕಾಶಗಳು ಹೆಚ್ಚಾದವು. ಆರ್ಥಿಕ ಸ್ವಾವಲಂಬನೆ ಬಂತು. ಹೊರಗಿನ ಪ್ರಪಂಚದ ಪರಿಚಯ ಹೆಚ್ಚಾಯಿತು. ವೈಯಕ್ತಿಕ ಸ್ವಾತಂತ್ರ್ಯ, ಸ್ವಂತ ಆಯ್ಕೆ, ವೈಯಕ್ತಿಕ ಸಂತೋಷ, ವೃತ್ತಿಜೀವನ—ಇವುಗಳಿಗೂ ಬದುಕಿನಲ್ಲಿ ಮಹತ್ವ ಸಿಕ್ಕಿತು.ಇದರ ಜೊತೆಗೆ ಮತ್ತೊಂದು ದೊಡ್ಡ ಬದಲಾವಣೆಯೂ ಆಯಿತು. ಹಿಂದಿನ ತಲೆಮಾರುಗಳು “ಸಂಸಾರ ಉಳಿಯಬೇಕು” ಎಂಬುದನ್ನು ಮುಖ್ಯವೆಂದು ಭಾವಿಸಿದರೆ, ಇಂದಿನ ತಲೆಮಾರು “ಸಂಸಾರದಲ್ಲಿ ನಾನು ಸಂತೋಷವಾಗಿಯೂ ಗೌರವದಿಂದಲೂ ಇರಬೇಕು” ಎನ್ನುವುದನ್ನು ಮುಖ್ಯವೆಂದು ಭಾವಿಸುತ್ತದೆ.

ಇದು ತಪ್ಪೇ?  ಖಂಡಿತ ಇಲ್ಲ.

ಹಾಗೆಯೇ ಸಾವಿತ್ರಮ್ಮನ ನಂಬಿಕೆಯೂ ತಪ್ಪಲ್ಲ. ಶಾರದಾಳ ನಂಬಿಕೆಯೂ ತಪ್ಪಲ್ಲ. ಸುಪ್ರಿಯಾಳ ಪ್ರಶ್ನೆಗಳೂ ತಪ್ಪಲ್ಲ. ಬದಲಾಗುತ್ತಿರುವುದು ಮೌಲ್ಯಗಳಲ್ಲ; ಮೌಲ್ಯಗಳಿಗೆ ನಾವು ಕೊಡುವ ಆದ್ಯತೆ. ಬಹುಶಃ ಇದೇ ಕಾರಣಕ್ಕೆ ಒಂದೇ ಮನೆಯಲ್ಲಿ, ಒಂದೇ ಕುಟುಂಬದ ಮೂರು ತಲೆಮಾರುಗಳಲ್ಲಿ, ಮದುವೆ ಎಂಬ ಸಂಸ್ಥೆಗೆ ಮೂರು ವಿಭಿನ್ನ ಅರ್ಥಗಳು ಹುಟ್ಟಿಕೊಂಡಿವೆ. ಮತ್ತು ಇದೇ ಪ್ರಶ್ನೆ ನಮ್ಮನ್ನು ಇನ್ನೊಂದು ದೊಡ್ಡ ಪ್ರಶ್ನೆಯ ಕಡೆಗೆ ಕರೆದೊಯ್ಯುತ್ತದೆ: “ಹಾಗಾದರೆ ಮುಂದಿನ ತಲೆಮಾರಿಗೆ ಮದುವೆ ಎಂದರೆ ಏನಾಗಬಹುದು?”

ಬಹುಶಃ ಮದುವೆ ಉಳಿಯುವುದೋ, ಬದಲಾಗುವುದೋ ಎನ್ನುವುದಕ್ಕಿಂತ, ಮನುಷ್ಯರು ಒಬ್ಬರನ್ನೊಬ್ಬರು ಯಾವ ರೀತಿಯಲ್ಲಿ ಗೌರವಿಸಿ, ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ಜೊತೆಯಾಗಿ ಬದುಕಲು ಕಲಿಯುತ್ತಾರೆ ಎನ್ನುವುದೇ ಮುಖ್ಯವಾಗಬಹುದು.  ಮದುವೆ ಎನ್ನುವುದು ಕೇವಲ ಒಂದು ಸಾಮಾಜಿಕ ಒಪ್ಪಂದವಲ್ಲ; ಅದು ಗಂಡು ಮತ್ತು ಹೆಣ್ಣಿನ ಬದುಕಿನ ಮೌಲ್ಯಗಳನ್ನು ಒಂದುಗೂಡಿಸುವ ಒಂದು ಪವಿತ್ರ ಬಂಧನ. ಕಾಲ ಬದಲಾಗಬಹುದು, ತಲೆಮಾರುಗಳು ಬದಲಾಗಬಹುದು, ಮದುವೆಯ ಬಗ್ಗೆ ಇರುವ ವ್ಯಾಖ್ಯಾನಗಳು ಬದಲಾಗಬಹುದು. ಆದರೆ ಮದುವೆಯ ಮೂಲ ಆಶಯವಾದ ಪರಸ್ಪರ ಪ್ರೀತಿ, ಗೌರವ, ನಂಬಿಕೆ, ಜವಾಬ್ದಾರಿ ಮತ್ತು ಹೊಂದಾಣಿಕೆಗಳು ಮಾತ್ರ ಕಳೆದುಹೋಗಬಾರದು ಎಂಬುದು ನನ್ನ ನಂಬಿಕೆ. ಸಫಲ ದಾಂಪತ್ಯಕ್ಕೆ ವೈಚಾರಿಕತೆ ಹಾಗೂ ಪ್ರೌಢಿಮೆ ತುಂಬಾ ಮುಖ್ಯ.

ನನ್ನ ದೃಷ್ಟಿಯಲ್ಲಿ ಮದುವೆ ಅಂದರೆ, ಅದು ಕೇವಲ ಇಬ್ಬರು ವ್ಯಕ್ತಿಗಳನ್ನು ಒಂದುಗೂಡಿಸುವ ಸಂಬಂಧವಾಗಿರದೆ, ಮುಂದಿನ ಪೀಳಿಗೆಯನ್ನು ರೂಪಿಸುವ ಒಂದು ಮಹತ್ವದ ಸಾಮಾಜಿಕ ಮತ್ತು ಮಾನವೀಯ ಸಂಸ್ಥೆಯಾಗಬೇಕು. ಮನುಕುಲದ ಮುಂದುವರಿಕೆಗೆ, ಮಕ್ಕಳನ್ನು ಮೌಲ್ಯಗಳೊಂದಿಗೆ ಬೆಳೆಸುವುದಕ್ಕೆ, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಸ್ಕಾರ ಮತ್ತು ಮಾನವೀಯತೆಯನ್ನು ಕೊಂಡೊಯ್ಯುವುದಕ್ಕೆ ಮೌಲ್ಯಯುತವಾದ ಮದುವೆಯ ಪಾತ್ರ ಬಹಳ ದೊಡ್ಡದು.  ಮದುವೆ ಎಂಬ ಪವಿತ್ರ ಬಂಧನವನ್ನು ನಾವು ಮುಂದಿನ ಪೀಳಿಗೆಗೆ ಕೇವಲ ಒಂದು ಪರಂಪರೆಯಾಗಿ ಕೊಡುವುದಕ್ಕಿಂತ, ಅದರ ಹಿಂದಿರುವ ಪ್ರೀತಿ, ನಂಬಿಕೆ, ಗೌರವ, ಜವಾಬ್ದಾರಿ ಮತ್ತು ಮೌಲ್ಯಗಳನ್ನು ಅರ್ಥಮಾಡಿಕೊಂಡು ಮುಂದಕ್ಕೆ ಕೊಂಡೊಯ್ಯಬೇಕು ಎಂಬುದು ನನ್ನ ಆಶಯ. ಅದನ್ನು ಸಾಕಾರಗೊಳಿಸಲು ಮನೋವೇದಿಕೆ ಸಜ್ಜಾಗಬೇಕಷ್ಟೇ.

ಅದಕ್ಕೆ ಹೇಳಿದ್ದು ಕಣ್ರಿ, ನಾನು ಸತ್ಯವನ್ನೇ ಹೇಳುತ್ತೇನೆ,. ಧರ್ಮವನ್ನೇ ಪಾಲಿಸುತ್ತೇನೆ, ಸ್ವಾಧ್ಯಾಯ ಮುಂದುವರಿಸುತ್ತೇನೆ ಎಂದು. ಇದೆ ಅಲ್ವಾ ಜೀವನದ ಸತ್ಯ ದರ್ಶನ?
ಕಾಲಾಯ ತಸ್ಮೈ ನಮ:!

ಈ ಲೇಖನದ ಹಿಂದಿನ ಭಾಗ ಇಲ್ಲಿದೆ : https://surahonne.com/?p=45753
(ಮುಗಿಯಿತು)

ಹೆಬ್ಬಾಲೆ ವತ್ಸಲಾ ಸುರೇಶ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *