ಬೊಗಸೆಬಿಂಬ

ಕ್ಷಮಿಸೋಣ ಹಾಗೂ ಸಂಬಂಧಗಳನ್ನು ಉಳಿಸೋಣ

Share Button

ಜೀವನದ ಪಯಣದಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ. ಕೆಲವರು ನಮ್ಮ ಹೃದಯದಲ್ಲಿ ಶಾಶ್ವತವಾದ ನೆನಪುಗಳನ್ನು ಬಿಟ್ಟು ಹೋದರೆ, ಇನ್ನು ಕೆಲವರು ನೋವು, ದು:ಖ, ಕಹಿ ಅನುಭವಗಳನ್ನು ಕೊಡುತ್ತಾರೆ. ಪ್ರತಿಯೊಬ್ಬರ ಭೇಟಿಯೂ ಬದುಕಿನಲ್ಲಿ ಒಂದು ಪಾಠವಾಗಿ ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಹೀಗಾಗಿ ಪ್ರತಿಯೊಂದೂ ಅನುಭವವನ್ನು ಸ್ವೀಕರಿಸಿ, ಜೀವನವನ್ನು ಸುಗಮಗೊಳಿಸಬೇಕು. ಎಷ್ಟೋ ಬಾರಿ ಅಂದುಕೊಳ್ಳುತ್ತೇನೆ. ದೇವರು ನಮಗೆಷ್ಟು ಸುಂದರ ಬದುಕನ್ನು ಕರುಣಿಸಿದ್ದಾನೆ. ಪ್ರೀತಿಸುವ ಕುಟುಂಬಸ್ಥರು, ಒಳ್ಳೆಯ ಸ್ನೇಹಿತರು, ಬಂಧುಮಿತ್ರರು ನನ್ನ ಜೀವನದಲ್ಲಿ ಉಂಟಾದ ಶೂನ್ಯತೆಯನ್ನು ತಮ್ಮ ಪ್ರೀತಿ, ಕಾಳಜಿ ಮತ್ತು ಒಡನಾಟದಿಂದ ತುಂಬಿದ್ದಾರೆ. ಒಳ್ಳೆಯ ನೆನಪುಗಳು, ಅನುಭವಗಳು, ಬೇಕಾದುದ್ದನ್ನು ಪಡೆಯಲು, ಬದುಕು ಹಲವಾರು ಅವಕಾಶಗಳನ್ನು ವರವಾಗಿ ದಯಪಾಲಿಸಿದೆ. ಎಲ್ಲಾ ಇದ್ದರೂ ಮನಸ್ಸಿನ ಮೂಲೆಯಲ್ಲಿ ಏನೋ ಒಂದು ಕೊರತೆ, ನೋವು ಕಾಡುತ್ತಲೇ ಇರುತ್ತದೆ. ಉತ್ತಮ ಪುಸ್ತಕಗಳನ್ನು ಓದುತ್ತೇನೆ, ದೇವಸ್ಥಾನ, ಪೂಜೆ, ಧ್ಯಾನ, ಆಧ್ಯಾತ್ಮ, ಪ್ರವಾಸ…… ಹೀಗೆ ಬದುಕಿನಲ್ಲಿ ಸಂತೋಷ ಪಡಲು ಬೇಕಾದಷ್ಟು ಒಳ್ಳೆಯ ಸಂಗತಿಗಳು ಇದ್ದರೂ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗೆ? ನನ್ನನ್ನೇ ನಾನು ಪ್ರಶ್ನೆ ಮಾಡಿಕೊಂಡಾಗ ನನಗೆ ಗೊತ್ತಾದ ಸತ್ಯ ಸಂಗತಿ ಏನೆಂದರೆ, ಎಂದೋ ಸಂಭವಿಸಿದ ಕಹಿ ಘಟನೆಗಳನ್ನು ಮನಸ್ಸಿನಲ್ಲಿಟ್ಟು ಕೊರಗುವುದು ಮತ್ತು ಕ್ಷಮಿಸದೇ ಇರುವ ಮನೋಭಾವ. ನಾವು ಹೊರಗೆ ನಗುತ್ತಾ ಬದುಕಿದರೂ, ಒಳಗೆ ಆ ನೋವು ಉಳಿದು ಮನಸ್ಸಿನ ಶಾಂತಿಯನ್ನು ಕದಡುತ್ತದೆ.

ನಮ್ಮಲ್ಲಿ ಬಹುತೇಕ ಪ್ರತಿಯೊಬ್ಬರೂ ಜೀವನದಲ್ಲಿ ಯಾವುದಾದರೂ ಒಂದು ಸಂದರ್ಭದಲ್ಲಿ ಅವಮಾನ, ನೋವು ಮತ್ತು ಮುಜುಗರವನ್ನು ಎದುರಿಸಿರುತ್ತೇವೆ. ಸಹೋದ್ಯೋಗಿಗಳಿಂದ, ಸ್ನೇಹಿತರಿಂದ, ಅಪರಿಚಿತರಿಂದ, ಬಂಧು ಮಿತ್ರರಿಂದ, ಕೆಲವೊಮ್ಮೆ ಮನೆಯವರಿಂದಲೂ ಹೀಗೆ ಹಲವಾರು ಜನರು ನಮ್ಮ ಮನನೋಯಿಸಿರುತ್ತಾರೆ. ಆದರೆ ನಮ್ಮವರೇ, ನಾವು ನಂಬಿದವರು, ನಾವು ಅತಿಯಾಗಿ ಪ್ರೀತಿಸುವವರು ಅಥವಾ ಗೌರವಿಸಿದವರು ಹೇಳಿದ ಒಂದು ಮಾತು ನಮ್ಮ ಮನಸ್ಸಿನಲ್ಲಿ ಆಳವಾದ ಗಾಯವನ್ನು ಉಂಟು ಮಾಡಿ, ವರ್ಷಗಳು ಕಳೆದರೂ ನಮ್ಮನ್ನು ಕಾಡುತ್ತಲೇ ಇರುತ್ತವೆ. ನಾವು ಪ್ರೀತಿಸಿದವರಿಂದ ಸಿಕ್ಕ ನೋವು, ಅಪರಿಚಿತರಿಂದ ಉಂಟಾದ ನೋವಿಗಿಂತಲೂ ಅಧಿಕವಾಗಿರುತ್ತದೆ. ನಮ್ಮ ಪ್ರೀತಿಗೆ ಪ್ರತಿಯಾಗಿ ನೋವು ಸಿಕ್ಕಾಗ ಮನಸ್ಸು ಮುರಿದು ಹೋಗುತ್ತದೆ. ಸಂಬಂಧಗಳೇ ದುರ್ಬಲವಾಗುತ್ತದೆ. ಮನಸ್ಸಿನಲ್ಲಿ ಇಂಥಹಾ ಕಹಿ ಅನುಭವಗಳು ಶಾಶ್ವತವಾಗಿ ಉಳಿದು ಬಿಡುತ್ತವೆ. ಆಗ ನಮಗಿರುವುದು ಎರಡೇ ಆಯ್ಕೆಗಳು. ಒಂದು, ಮನಸ್ಸಿಗಾದ ನೋವನ್ನು ನೆನಪಿಸಿಕೊಂಡು, ಈ ಜನ್ಮದಲ್ಲಿ ಅವರನ್ನು ಕ್ಷಮಿಸಲಾರೆ ಎಂದು ಶಪಥ ಹಾಕುತ್ತಾ, ಹಗೆ ಸಾಧಿಸುವುದು, ಇನ್ನೊಂದು ನಮ್ಮ ಮನ ಶಾಂತಿಗಾಗಿ ಕಾಲಕ್ರಮೇಣ ಕ್ಷಮಿಸುವುದು. ಇಂಥಹಾ ಸಂದರ್ಭಗಳಲ್ಲಿ ಮನಸ್ಸಲ್ಲಿ ಆ ನೋವನ್ನು ಇಟ್ಟುಕೊಂಡು ಮರುಗುವುದಕ್ಕಿಂತ, ಅಂಥವರನ್ನು ಕ್ಷಮಿಸುವುದು ಉತ್ತಮ ಎಂದು ಜ್ಞಾನಿಗಳು ಹೇಳುತ್ತಾರೆ.

ಆದರೂ ಮನಸ್ಸಿಗಾದ ಕಹಿಯನ್ನು ಮರೆಯಲು ಅಸಾಧ್ಯ. ನಾವು ಕಂಡುಕೊಂಡಂತೆ, ಕ್ಷಮಿಸುವುದು ಸುಲಭದ ಮಾತಲ್ಲ. ಮನಸ್ಸಿಗೆ ಆದ ಗಾಯ ಕಣ್ಣಿಗೆ ಕಾಣಲಾರದು ಎಂಬಂತೆ ಕೆಲವೊಂದು ಸಂದರ್ಭದಲ್ಲಿ ಆಡಿದ ಒಂದು ಮಾತು, ಒಂದು ಅವಮಾನ ಜೀವನಪೂರ್ತಿ ನೆನಪಿನಲ್ಲಿ ಉಳಿಯಬಹುದು. ಆದ್ದರಿಂದ ಕ್ಷಮಿಸುವುದು ಸ್ವಲ್ಪ ಕಷ್ಟ. ನಮ್ಮನ್ನು ನೋಯಿಸಿದವರು ಜೀವನದಲ್ಲಿ ಮುಂದೆ ಸಾಗಿ ಪ್ರಗತಿ ಹೊಂದಿದರೂ, ಕೋಪ, ದ್ವೇಷ ಮತ್ತು ಪ್ರತೀಕಾರದ ಭಾವನೆಯಿಂದ ನಾವು ನರಳಿಕೊಂಡು ನೆಮ್ಮದಿಯನ್ನೇ ಕಳೆದುಕೊಂಡಿರುತ್ತೇವೆ. ಈ ದ್ವೇಷವು ನಮ್ಮನ್ನು ಸುಡುವುದಲ್ಲದೆ, ಶಾಂತಿ, ನೆಮ್ಮದಿಯ ಬದುಕನ್ನು ನಡೆಸಲು ಖಂಡಿತಾ ಬಿಡುವುದಿಲ್ಲ. ಅವರಿಗೆ ನಮ್ಮ ಮನಸ್ಸಿನಲ್ಲಿ ಅನಗತ್ಯ ಜಾಗ ಕೊಟ್ಟು ನಾವೇ ನರಳುವುದಕ್ಕಿಂತ, ಕ್ಷಮಿಸಿ ಬಿಡಬೇಕು. ಕ್ಷಮಿಸುವುದು ಎಂದರೆ ನಡೆದ ತಪ್ಪನ್ನು ಮರೆತುಬಿಡುವುದು ಅಲ್ಲ. ತಪ್ಪನ್ನು ಸರಿ ಎಂದು ಒಪ್ಪಿಕೊಳ್ಳುವುದೂ ಅಲ್ಲ. ನೋವಿನ ಬಾರವನ್ನು ಸದಾ ಕಾಲ ಹೊತ್ತು ಬದುಕುವುದಕ್ಕಿಂತ, ಕೆಟ್ಟ ಅನುಭವಗಳಿಂದ ಮುಕ್ತಿ ಹೊಂದಿ, ನೋವಿನ ನೆನಪುಗಳಿಂದ ಬಿಡುಗಡೆ ಹೊಂದುವ ಪ್ರಕ್ರಿಯೆಯೇ ಕ್ಷಮೆ. ಕ್ಷಮೆಯ ಅನುಭವ ನಮಗೆ ಮುಂದೆ ವಿವೇಕದಿಂದ ಇರಲು ಪ್ರೇರೇಪಿಸುವುದಲ್ಲದೆ, ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತದೆ.

ನನಗೂ ಅದೆಷ್ಟು ಬಾರಿ ಈ ರೀತಿಯ ಅನುಭವಗಳು ಸಂಭವಿಸಿದ್ದು ಉಂಟು. ನಾನು ತುಂಬಾ ಗೌರವಿಸಿದ, ಪ್ರೀತಿಸಿದ, ಆತ್ಮೀಯರೆಂದು ಭಾವಿಸಿದ ನನ್ನ ಸ್ನೇಹಿತರು, ಕುಟುಂಬಸ್ಥರು ಹಲವು ಸಂದರ್ಭಗಳಲ್ಲಿ ನನ್ನ ಮನಸ್ಸನ್ನು ನೋಯಿಸಿದಾಗ, ಅತೀವವಾಗಿ ಮನಸ್ಸಿಗೆ ಹಚ್ಚಿಕೊಂಡು ಬೇಸರ ಪಡುತ್ತಿದ್ದೆ. ನನ್ನಿಂದ ತಪ್ಪಾಯಿತೇನೋ ಎಂದು ನನ್ನ ಮನಸ್ಸಲ್ಲಿ ಪ್ರಶ್ನಿಸಿಕೊಂಡದ್ದೂ ಇದೆ. “ನನ್ನ ಮಾತಲ್ಲಿ ಏನಾದರೂ ಬೇಸರ ತರಿಸುವ ಸಂಗತಿ ಇತ್ತೇ?. ನಾನು ದುಡುಕಿ ಮಾತಾನಾಡಿದ್ದೇನಾ? ನನ್ನ ವರ್ತನೆ ಅವರಿಗೆ ಇಷ್ಟವಾಗಲಿಲ್ಲವೋ? ಹೀಗೆಲ್ಲಾ ನಾನು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ. ನನ್ನಿಂದ ತಪ್ಪಾಗಿದೆ ಎಂದು ಅನಿಸಿದ ಕೂಡಲೇ ಕ್ಷಮೆ ಕೇಳುತ್ತಿದ್ದೆ. ಕೆಲವೊಬ್ಬರು ನನ್ನಿಂದ ದೂರವಾದರೂ, ಮಾತನಾಡುವುದನ್ನು ನಿಲ್ಲಿಸಿದರೂ ಅವಕಾಶ ಸಿಕ್ಕಾಗಲೆಲ್ಲಾ ಅವರ ಬಳಿ ಕ್ಷಮೆ ಕೇಳಿದ್ದೆ. ನಾನೂ ಬೇರೆಯವರ ಮನ ನೋಯಿಸಿದಾಗಲೂ ಅಪರಾಧಿ ಭಾವನೆಯಿಂದ ಹಾಗೂ ಪಶ್ಚಾತ್ತಾಪದಿಂದ ಬಹಳವಾಗಿ ನೊಂದಿದ್ದೆ. ಇಂಥಾ ಸಂದರ್ಭಗಳಲ್ಲಿ ಮನಸ್ಸಿಗಾದ ಗಾಯಗಳನ್ನು ನೆನಪಿಸಿಕೊಂಡು ಕೊರಗುತ್ತಾ, ಮರುಗುತ್ತಾ, ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ನಶಿಸಿಕೊಳ್ಳುವುದಕ್ಕಿಂತ ಕ್ಷಮಿಸುವುದು ಉತ್ತಮ ಎಂದೇ ನನ್ನ ಅನಿಸಿಕೆ. ಜೀವನದ ಎಲ್ಲಾ ನೋವುಗಳಿಗೂ ನಾವು ಕಾರಣರಾಗಿರುವುದಿಲ್ಲ. ನಮ್ಮ ಒಳ್ಳೆಯತನವನ್ನು ದುರ್ಬಲತೆ ಎಂದು ಭಾವಿಸಿ, ಆಗಾಗ್ಗೆ ಮನಸ್ಸಿಗೆ ನೋವು ಮಾಡುವವರೂ ಇರುತ್ತಾರೆ. ಯಾರಾದರೂ ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ನೋಯಿಸುತ್ತಿದ್ದರೆ, ಅವರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ. ಆತ್ಮಗೌರವವನ್ನು ಉಳಿಸಿಕೊಳ್ಳುವುದೂ ಜೀವನದ ಮೌಲ್ಯಗಳಲ್ಲೊಂದು.

ನಮ್ಮ ಪುರಾತನ ಸಂಸ್ಕೃತಿ ಮತ್ತು ಧರ್ಮಗಳು ಕೂಡಾ ಕ್ಷಮೆಯ ಮಹತ್ವವನ್ನು ಎತ್ತಿ ಹಿಡಿದಿವೆ. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತವೂ ಕ್ಷಮೆಯು ಮಾನವನ ಶ್ರೇಷ್ಠ ಗುಣವೆಂದು ಸಾರುತ್ತದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಲ್ಲಿ ಕ್ಷಮಾಗುಣದ ಅನೇಕ ಉಲ್ಲೇಖಗಳನ್ನು ಕಾಣಬಹುದು. ಉದಾಹರಣೆಗೆ, ಗೌತಮ ಬುದ್ಧ, ಅಶೋಕ, ಮಹಾವೀರ, ಇತ್ಯಾದಿ ಮಹಾಪುರುಷರನ್ನು ಹೆಸರಿಸಬಹುದು. ಅಲ್ಲದೆ, ಭಗವಂತ ಕೂಡ ನಮ್ಮ ತಪ್ಪನ್ನು ಕ್ಷಮಿಸುವುವಂತೆ, ನಾವೂ ಈ ಗುಣವನ್ನು ಬೆಳೆಸಿಕೊಳ್ಳಬೇಕು. ಕ್ಷಮೆಗೆ ಇರುವ ಶಕ್ತಿ ಅಗಾಧ. ಕ್ಷಮೆಯು ಒಂದು ದೈವೀ ಗುಣವೆನ್ನುತ್ತಾರೆ. ಈ ಕ್ಷಮೆಯೆನ್ನುವುದು ಒಂದು ಕ್ಷಣದ ನಿರ್ಧಾರವಲ್ಲ. ಅದು ಒಂದು ನಿಧಾನವಾಗಿ ನಡೆಯುವ ಮನಸ್ಸಿನ ಪಯಣವೆಂದೇ ಹೇಳಬಹುದು. ಕೆಲವರಿಗೆ ಸ್ವಲ್ಪ ದಿನಗಳು ಬೇಕಾದರೆ, ಇನ್ನು ಕೆಲವರಿಗೆ ಹಲವು ವರ್ಷಗಳೇ ಬೇಕಾಗಬಹುದು. ಒಟ್ಟಿನಲ್ಲಿ ಕ್ಷಮಿಸುವುದು ನಮಗೆ ನಾವೇ ಮಾಡಿಕೊಳ್ಳುವ ಒಂದು ಅದ್ಭುತ ಪ್ರಕ್ರಿಯೆ. ಇಲ್ಲಿ ನಮಗೆ ಉಂಟಾದ ಕೋಪ ಮತ್ತು ಕಹಿಯನ್ನು ಹೃದಯದಿಂದ ಪ್ರಜ್ಞಾಪೂರ್ವಕವಾಗಿ ದೂರಮಾಡುವುದು. ನಾವು ಅನುಭವಿಸಿದ ನೋವನ್ನು ಅಳಿಸುವುದಕ್ಕಿಂತಲೂ ಮುಖ್ಯವಾಗಿ ಆ ನೋವು ನಮ್ಮ ಜೀವನವನ್ನು ನಿಯಂತ್ರಿಸಿದಂತೆ ನೋಡಿಕೊಳ್ಳುವುದು ಕ್ಷಮೆಯ ಶಕ್ತಿ.

ಒಟ್ಟಿನಲ್ಲಿ ಕ್ಷಮಿಸುವುದು ಎಂದರೆ ಅನ್ಯಾಯವನ್ನು ಒಪ್ಪಿಕೊಳ್ಳುವುದು ಅಲ್ಲ. ಬದಲಿಗೆ ಮನಸ್ಸನ್ನು ದ್ವೇಷದ ಭಾರದಿಂದ ಮುಕ್ತಗೊಳಿಸುವುದು. ಇಲ್ಲಿ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ “ದುರ್ಬಲರು ಎಂದಿಗೂ ಕ್ಷಮಿಸಲಾರರು. ಕ್ಷಮಿಸುವುದು ಬಲಿಷ್ಠರ ಗುಣ” ಎಂಬ ನುಡಿಯನ್ನು ನೆನಪಿಸುವುದು ಅಗತ್ಯ. ಆದ್ದರಿಂದ ಕ್ಷಮಾಗುಣವು ಮಾನಸಿಕ ಪ್ರಬುದ್ಧತೆಯ ಸಂಕೇತ. ಕ್ಷಮಿಸುವ ವ್ಯಕ್ತಿಗೆ ತನ್ನ ಭಾವನೆಗಳ ಮೇಲೆ ಹಿಡಿತವಿರುತ್ತದೆ. ಇತ್ತೀಚಿಗೆ ನಾನು ಲೂಯಿಸ್ ಸ್ಮೀಡ್ಸ್, ಅವರ ಕೃತಿ ‘Forget and Forgive’ ಓದುತ್ತಿದ್ದೆ. ಅವರು ಹೀಗೆ ಹೇಳುತ್ತಾರೆ, “ಕ್ಷಮಿಸುವುದು ಎಂದರೆ ಒಬ್ಬ ಕೈದಿಯನ್ನು ಬಿಡುಗಡೆ ಮಾಡುವುದು. ನಂತರ ಆ ಕೈದಿ ನೀವೇ ಆಗಿದ್ದೀರಿ ಎಂಬುದನ್ನು ಅರಿಯುವುದು.” ಎಷ್ಟು ಅರ್ಥಪೂರ್ಣ ಅಂತ ಅನಿಸಿತು. ಇತರರನ್ನು ಕ್ಷಮಿಸುವುದು ನಮ್ಮ ಮನಸ್ಸಿಗೆ ಸ್ವಾತಂತ್ರ್ಯ ನೀಡುತ್ತದೆ. ನಿಜವಾದ ಸಂತೋಷ ವಸ್ತುಗಳನ್ನು ಹೊಂದುವುದರಲ್ಲಿ ಇಲ್ಲ. ಮನಸ್ಸಿನಲ್ಲಿ ಹುದುಗಿರುವ ಕೋಪ, ದ್ವೇಷವನ್ನು ಮರೆತು, ಕ್ಷಮಿಸುವುದರಲ್ಲಿ ಇದೆ. ಅಂತೆಯೇ ನಾವು ತಪ್ಪು ಮಾಡಿದಾಗ, ಒಪ್ಪಿಕೊಂಡು, ಅದರಿಂದ ಪಾಠ ಕಲಿತು, ನಮ್ಮನ್ನು ನಾವು ಕ್ಷಮಿಸುವುದೂ ನೆಮ್ಮದಿಯ ಬದುಕಿಗೆ ಅಗತ್ಯ. ಹೀಗಾಗಿ, ಅವಮಾನ ಅಥವಾ ನೋವುಂಟಾದಾಗ ಅದನ್ನು ಸಹನೆಯಿಂದ ಎದುರಿಸಿ, ಕ್ಷಮಿಸುವ ಮೂಲಕ ಸಂಬಂಧಗಳನ್ನು ಉಳಿಸೋಣ ಹಾಗೂ ಸುಂದರ ಬದುಕನ್ನು ನಮ್ಮದಾಗಿಸೋಣ ಅಲ್ಲವೇ?

ಶೈಲಾರಾಣಿ ಬಿ. ಮಂಗಳೂರು.

9 Comments on “ಕ್ಷಮಿಸೋಣ ಹಾಗೂ ಸಂಬಂಧಗಳನ್ನು ಉಳಿಸೋಣ

  1. ಯಾವಾಗಲೂ ನಿಮ್ಮ ಬರಹಗಳು ತುಂಬಾ ಚೆನ್ನಾಗಿ ರತ್ತೆ,,,
    ನನ್ನ ಅನಿಸಿಕೆಗಳನ್ನೆ ನಿಮ್ಮ ಬರಹಗಳಲ್ಲಿ ಕಾಣುತ್ತೇನೆ

    1. ಧನ್ಯವಾದಗಳು ಮೇಡಂ . ಇನ್ನೂ ಪ್ರೋತ್ಸಾಹಿಸುತ್ತಿರಿ Thank you

  2. ನಿಮ್ಮ ಈ ಲೇಖನವನ್ನು ಓದಿದ ಪ್ರತಿಯೊಬ್ಬ ತನ್ನ ತಪ್ಪಿನ ಅರಿವನ್ನು ಅರಿತು ಮುಂದೆ ಕ್ಷಮಾಶೀಲನಗಬಲ್ಲ. ಇಂತಹ ಪ್ರಸಂಗಗಳು ಮಾನವ ಜೀವನದಲ್ಲಿ ಬರುವುದು ಸರ್ವಸಧಾರಣ. ಮತ್ತು ಬರಲೇಬೇಕು. ಯಾಕಂದ್ರೆ ನಮ್ಮನ್ನು ಹೀಯಾಳಿಸದ ಪ್ರಸಂಗದಿಂದ ಮುಂದೆ ನಾವು ಒಂದು ಒಳ್ಳೆಯ ಪಾಠ ಕಲಿತಂತಾಗುವುದು. ಯಾರು ನಮಗೆ ಕೆಟ್ಟದನ್ನು ಬಯಸಿ ಇನ್ನೊಬ್ಬರ ಮುಂದೆ ಹೀಯಾಳಿಸುವುದು ಮಾನವ ಸ್ವಭಾವ.ಹೇಳದವರ ಬಗ್ಗೆ ಚಿಂತಿಸಿ ನಮ್ಮ ಜನ್ಮವನ್ನು ಪೂರ್ಣವಾಗಿ ಕದಡಿಸುತ್ತೇವೆ. ಮುಂದೊಂದು ದಿನ ನಮ್ಮ ಆರೋಗ್ಯದಮೇಲೂ ಪರಿಣಾಮ ಬೀಳಬಹುದು. ನಮ್ಮ ಈ ಪರಿಸ್ತಿಯನ್ನು ನೋಡುವವರು ತಾವು ಬಲು ದೊಡ್ಡ ಕಂಕರ್ಯ ಮಾಡಿದವರಂತೆ ನಮ್ಮಾಮೂಂಧೆ ಹಲ್ಲುಕಿರಿಯಬಹುದುದು.ಇದಕ್ಕಿರುವ ಒಂದೇ ಒಂದು ಉಪಾಯವೆಂದರೆ ಅವರು ಎದುರಾದಾಗ ಮುಗುಳುನಗೆ ನಕ್ಕು ಅವರನ್ನು ಕ್ಷಮಿಸುವುದೇ ಒಳ್ಳೆಯದು.
    ಈ ಪರಿಸ್ಥಿತಿ ಬರುವುದು ನಮ್ಮಲ್ಲಿರುವ ಬಿಸಿರಕ್ತದ ಪ್ರಭಾವ. ನಾವು ಯಾವಾಗಲೂ ಪ್ರತೀಕಾರ .ಬಯಸುವವರಾಗಿರುತ್ತೇವೆ ಯೌವನದ ಹೊಸ್ತಿನಲ್ಲಿರುವಾಗ. ನಾವು ಬೆಳೆದುಬಂದು ಪ್ರಬುದ್ಧರಾದಾಗ ನಮಗೆ ಯಾವುದೇ ವಿಷಯದಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುತ್ತೇವೆ. ಎಲ್ಲರನ್ನೂ ಒಂದೇ ತರದ ತುಲನಾತ್ಮಕವಾಗಿ ಅವಲೋಕಿಸುವುದು ನಮಗೆ ಶ್ರೇಯಸ್ಸನ್ನು ತರಬಹುದು.
    ನಿಮ್ಮಿಂದ ಪ್ರೇರಿತರಾದ ಯುವಜನಾಂಗ ತಮ್ಮಲ್ಲಿರುವ ದ್ವೇಷಭಾವ ಬಿಟ್ಟು ಸುಪ್ರಜೆಗಳಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ನಿಮಗೆ ಇನ್ನೂ ಮುಂದೆ ಕೂಡ ಒಳ್ಳೆಯ ಲೇಖನಾಭಿಲಾಶಿ ನೆಚ್ಚಿನ ಆನಂದ.

    1. ಹೌದು ಸರ್. ಖಂಡಿತವಾಗಿಯೂ ಸತ್ಯ. ಇಂಥವರನ್ನು ಕ್ಷಮಿಸಿ ಬಿಟ್ಟರೆ ನಮಗೂ ಶಾಂತಿ . ನೆಮ್ಮದಿಯ ಜೀವನಕ್ಕೆ ಮನಃಶಾಂತಿ ಮುಖ್ಯ .

      ಧನ್ಯವಾದಗಳು . Thank you for your opinion and suggestions.

  3. ವಾವ್.. ಹೌದು.. ಪಶ್ಚಾತಾಪ.. ಕ್ಷಮೆ.. ಇವೆರಡು.. ಬದುಕಿನುದ್ದಕ್ಕೂ ಬೇಕು.. ಹಾಗೇ ಹಳೆಯ ನೆನಪುಗಳು ಅದರಲ್ಲೂ.. ಕಹಿ.. ಕಳೇಬರವನ್ನು ಹೆಗಲಮೆಲೆ ಹೊತ್ತು ನೆಡೆದಂತೆ.. ಎಂದು ಅನುಭವಿಗಳ ಮಾತು.. ಅದು ನಮ್ಮ ವ್ಯಕ್ತಿತ್ವ ಕ್ಕ ಕುಂದು.. ಲೇಖನ ಮನಕೆ ಮುದ ತಂದಿತು.. ವಂದನೆಗಳು.. ಮೇಡಂ

    1. ನಿಮ್ಮ ಮನದಾಳದ ಮಾತುಗಳು ನನ್ನ ಲೇಖನಕ್ಕೆ ಇನ್ನಷ್ಟು ಅರ್ಥ ತುಂಬಿವೆ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು. ”

  4. ಮನಸ್ಸನ್ನು ಚಿಂತನೆಗೆ ಹಚ್ಚುವ ಚಂದದ ನಿರೂಪಣೆಯ ಆಪ್ತ ಬರಹ. ಬಹಳ ಇಷ್ಟವಾಯಿತು

  5. ಬಹಳ ಸೊಗಸಾದ ಲೇಖನ. ಕ್ಷಮೆ ಹೇಗೆ ನೆಮ್ಮದಿ ನೀಡುತ್ತದೆ ಅನ್ನುವುದನ್ನು ಚೆನ್ನಾಗಿ ಹೇಳಿದ್ದೀರಿ.

  6. ಸೂಕ್ಷ್ಮ ಸಂವೇದನೆಯ ಸಂಗತಿಯಾದ ಕ್ಷಮೆ ಎಂಬುದು ಅದೆಷ್ಟು ಬದಲಾವಣೆಗಳನ್ನು ಮಾಡಬಹುದು, ನೆಮ್ಮದಿಯನ್ನು ನೀಡಬಹುದು ಎಂಬುದು ಸರ್ವವಿದಿತ! ಆಪ್ತತೆಯಿಂದ ಕೂಡಿದ ಲೇಖನ ಮನಮುಟ್ಟುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *