ಬೆಳಕು-ಬಳ್ಳಿ - ವಿಶೇಷ ದಿನ

ಮೋಹನದಾಸ – ಪರಮಾತ್ಮವಾಸ

Share Button
         -1-

ವಿಶ್ವಕವಿ ರವೀಂದ್ರರ ಕನಸಲಿ ಕಂಡು ಕೇಳಿದೆ :
ಮಹಾತ್ಮರೆಂದಿರಿ ನೀವು ಮೋಹನದಾಸರನು
ಈಗಲೂ ಅದನೇ ನುಡಿವಿರಾ ?
ನಕ್ಕು, ಮೈದಡವಿದರು: ‘ಅವ ಮಹಾತ್ಮನಲ್ಲ !’
ಅವಾಕ್ಕಾದೆ! ನೀಲಾಕಾಶವ ನೋಡುತ ಮಾತ ಹಿಡಿದಿಟ್ಟರು :
“ಅವ ಬರೀ ಅಷ್ಟೇ ಅಲ್ಲ, ಅದಕಿಂತಲೂ ಹೆಚ್ಚು, ಕೋಟಿತಾರೆ
ನೀಹಾರಿಕೆಗಳಷ್ಟು! ಭಗವಂತನೇ ಕಳಿಸಿದ್ದ ಭಾರತಾಂಬೆಯ ಕೆಚ್ಚು,
ತಮೋತಿಮಿರವಳಿಸಿ ಬೆಳಕನುಟ್ಟು ತೊಟ್ಟು ಕೊಟ್ಟು ಹೋದ ಸಂತವೀರ.
ಏನನೂ ಬಚ್ಚಿಡಲಿಲ್ಲ, ಕೂಡಿಡಲಿಲ್ಲ, ನಾನತ್ವದ ಕುರ್ಚಿಯೇರಲಿಲ್ಲ,
ಎಲ್ಲವನೂ ಕೊಟ್ಟ, ಕೊನೆಗೆ ಜೀವವನೂ…..
ಬರೀ ಮಹಾತ್ಮನಲ್ಲ; ಜಗದ ಪರಮಾತ್ಮ!!”
ಇಷ್ಟು ಹೇಳಿ ಗಳಗಳನೆ ಕಣ್ಣೀರಾದರು, ಮಾಯವಾದರು.

             -2-

ಎಚ್ಚರಾಯಿತು ನನಗೆ, ಬೆಚ್ಚಗಾಯಿತು ಕೊನೆಗೆ
ಮರೆತ ಮಹಾತ್ಮನ ಅಲ್ಲಲ್ಲ, ಪರಮಾತ್-ಮನ ಪದತಲದಲಿ,
ಬಾಪೂಜಿ ಬರೆದ ಬರೆಹಗಳಲಿ ಹುಡುಕತೊಡಗಿದೆ.
ಧ್ಯೇಯ ತೊರೆದ ದೇಹದಲಿ ಗಾಂಧಿ ಸಿಗಲೊಲ್ಲರು,
ಬರಿ ರಸ್ತೆ, ಪಾರ್ಕು, ಸರ್ಕಲುಗಳಲಿ ಅವರ ಹೆಸರು;
ಅರಿಷಡ್ವರ್ಗಗಳ ಬಸಿರು; ಎಲ್ಲಕೂ ರಾಜ-ಕೀಯ
ದೆರಚಾಟವದರ ಅರಚಾಟ ಕೆಸರು!
ಸ್ವಾರ್ಥವೇ ಮೈವೆತ್ತ ಹುಲುಮಾನವರೆಲ್ಲಿ?
ತ್ಯಾಗವೇ ತಾನಾಗಿ ಬದುಕಿ ಬೆಸಲಾದ ಮನಮೋಹನರೆಲ್ಲಿ?

               -3-     

ನಿಮ್ಮ ಹೆಸರುಚ್ಚರಿಸಲು ಬೇಕು ತಾಕತು;
ನಿಮ್ಮನರ್ಥವಿಸಿ ಕೊಳ್ಳಲು ಬೇಕು ನಿಯತು
ಬರೀ ಜಯಂತಿಯನಾಚರಿಸಿ ಬೂಂದಿ
ತಿಂದು ಕೈ ತೊಳೆದರೇನಾಯಿತು !?
ಗೋಡ್ಸೆಯದೊಂದೇ ಗುಂಡು !
ನಾವೋ ನಿಮ್ಮನು ದಿನವೂ ಕೊಲ್ಲುತಿರುವೆವು ;
ಭಾಷಣ ಭೀಷಣ ಕಥನಕಾರಣವಾಗಿರುವೆವು
ತ್ಯಾಗ-ಬಲಿದಾನದಿಂ ದೊರಕಿಸಿ ಜತನವಾಗಿರಿಸಿದ ಹೂವ
ಹಿಚುಕಿ ಗಾಳಿಗೆ ತೂರಿ, ತುಳಿಯುತಿರುವೆವು, ನಿಮ್ಮನರಿಯದಾದೆವು
ಮಾನವ ದೈವವಾಗುವ ಪರಿಯೇ ನೀವು
ಅದ, ಆ ಹದ ಮರೆತು ಅಹಮಿನಲಿ ಹಾರಾಡುವೆವು ನಾವು.

    -4-

ನೀವು ನಮ್ಮವರೆಂದು ಸಂಭ್ರಮಿಸಲೇ ;
ನಿಮ್ಮ ಹೆಸರುಚ್ಚರಿಸಲಾಗದ ಅಯೋಗ್ಯ ನಾನೆಂದು ವಿಷಾದಿಸಲೇ ?
“ತಟ್ಟು ಚಪ್ಪಾಳೆ ಪುಟ್ಟ ಮಗು, ಅಕೋ ಕೈ ಇಕೋ ಕೈ
ಗಾಂಧಿಗಿಂದು ಜನುಮದಿನ ”
ಇದ ಮರೆತವರೂ ಇದ್ದಾರೆಷ್ಟು ಜನ ?

–ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *